ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಏಪ್ರಿಲ್ 6, 2020

ತೋಟದ ಮನೆ : ಭಾಗ-2

ತೋಟದ ಮನೆ
ಭಾಗ-೨
ಪ್ರೇತದ ಅಟ್ಟಹಾಸ
ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದಿಕ್ಕಿನಲ್ಲಿ ಹಿಡಿದು ಎಳೆದಂತೆ ಅವರ ದೇಹ ಸೆಟೆದಿತ್ತು. ಆ ಎಳೆತಕ್ಕೆ ಅವರ ಎದೆ ಉಬ್ಬಿದೇಹ ಹಿಂದಕ್ಕೆ ಬಾಗಿಕುತ್ತಿಗೆ ಮೇಲಕ್ಕೆ ಎತ್ತಿಕೊಂಡು ಅವರ ಮುಖ ಆಕಾಶವನ್ನು ನೋಡುತ್ತಿತ್ತು. ಅವರಿಗೆ ಪ್ರಜ್ಞೆ ಇರುವ ಹಾಗೆ ಕಾಣಲಿಲ್ಲ. ಆದರೂ ಅವರ ತುಟಿಗಳು ಏನನ್ನೋ ಹೇಳಲು ಕಾತುರಪಡುತ್ತಿರುವಂತೆ ಕಾಣುತ್ತಿತ್ತು. ಆ ದೃಶ್ಯ ಎಂತಹವರ ಹೃದಯವನ್ನೂ ಕೆಲಕಾಲ ನಿಲ್ಲಿಸುವಷ್ಟು ಭಯಾನಕವಾಗಿತ್ತು. ಸೂರಿ ಮತ್ತು ಶಾಂತಮ್ಮನಿಗೆ ಅದನ್ನು ಕಂಡು ಏನು ಮಾಡಬೇಕೆನ್ನುವುದೇ ಅರ್ಥವಾಗಲಿಲ್ಲ. ಅವರೆಷ್ಟು ಹೆದರಿದ್ದರೆಂದರೆದೇವಪ್ಪನನ್ನು ಆ ಪರಿಸ್ಥಿತಿಯಿಂದ ಕಾಪಾಡಬೇಕೆಂಬ ಯೋಚನೆಯೂ ಅವರ ತಲೆಗೆ ಹೊಳೆಯಲಿಲ್ಲ. 
ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಭಯ ಹುಟ್ಟಿಸಿದ್ದು ದೇವಪ್ಪನ ಕಣ್ಣುಗಳು. ಅವರ ಕಣ್ಣುಗಳೇಕೆ ಕೆಂಪಗೆ ಹೊಳೆಯುತ್ತಿದ್ದವೆಂದು ಸೂರಿಗೆ ಅರ್ಥವಾಗಲಿಲ್ಲ. ಇಬ್ಬರೂ ಕೆಲಕಾಲ ದೇವಪ್ಪನನ್ನು ಭಯದ ಕಣ್ಣಿನಲ್ಲಿ ನೋಡಿದರು. ದೇವಪ್ಪನನ್ನು ಆ ಸ್ಥಿತಿಯಲ್ಲಿ ನೋಡಲಾಗದೆ ಶಾಂತಮ್ಮನೇ ಹೆಜ್ಜೆ ಮುಂದಿಟ್ಟು ದೇವಪ್ಪನ ಕಡೆಗೆ ನಡೆದರು. ಅವರು ಹೆಜ್ಜೆ ಇಟ್ಟ ತಕ್ಷಣವೇ ದೇವಪ್ಪನ ಮುಖ ಶಾಂತಮ್ಮನ ಕಡೆಗೆ ತಿರುಗಿತು. ದೇವಪ್ಪನ ಕೆಂಡದಂತಹ ಕಣ್ಣುಗಳು ಶಾಂತಮ್ಮನನ್ನು ಇನ್ನೊಂದು ಹೆಜ್ಜೆ ಮುಂದೆ ಇಡದಂತೆ ಮಾಡಿಬಿಟ್ಟವು.  ಶಾಂತಮ್ಮ ನಿಂತಲ್ಲಿಯೇ ನಡುಗಿಹೋದರು. ದೇವಪ್ಪನ ಕಣ್ಣುಗಳು ಶಾಂತಮ್ಮನನ್ನು ನೋಡುತ್ತಿದ್ದ ಪರಿ ಕಂಡು ಸೂರಿ ಶಾಂತಮ್ಮನನ್ನು ಹಿಂದಕ್ಕೆ ಎಳೆದುಕೊಂಡ. ಶಾಂತಮ್ಮನಿಗೆ ನಡುಗುತ್ತಲೇ ಸೂರಿಗೆ ಹೇಳಿದರು "ಸೂರಿನಿಮ್ಮಪ್ಪಂಗೆ ಏನೋ ಆಗ್ಬಿಟ್ಟಿದೆ ಕಣೋ. ಅವರನ್ನ ಕಾಪಾಡಲಿಲ್ಲ ಅಂದ್ರೆ ಹೆಚ್ಚುಕಮ್ಮಿ ಆಗ್ಬಿಡತ್ತೆ". ಶಾಂತಮ್ಮನ ಮನಸ್ಸಿನಲ್ಲಿ ಇದು ಯಾವುದೊ ಕೆಟ್ಟ ಶಕ್ತಿಯ ಕೆಲಸ ಎಂಬುದರಲ್ಲಿ ಸಂಶಯವೇ ಇರಲಿಲ್ಲ. ಆದರೆ ಆ ಸಮಯದಲ್ಲಿ ಸೂರಿಗೆ ಅದನ್ನೆಲ್ಲಾ ಹೇಳುವುದು ಒಳ್ಳೆಯದಲ್ಲ ಎಂದು ಸುಮ್ಮನಾದರು. 
ಇತ್ತ ಸೂರಿಗೂ ಇದು ಯಾವುದೊ ಕೆಟ್ಟ ಶಕ್ತಿಯ ಕೆಲಸ ಎಂದು ಮನದಟ್ಟಾಗಿತ್ತು. ಆದರೆ ಅವನೂ ತನ್ನ ತಾಯಿಯ ಹತ್ತಿರ ಅದನ್ನೆಲ್ಲಾ ಹೇಳಿದರೆ ಅವರು ಮತ್ತೂ ಹೆದರಬಹುದು ಎಂದು ಸುಮ್ಮನಾದ. ದೇವಪ್ಪನ ಕಣ್ಣುಗಳು ಇನ್ನೂ ದೇವಮ್ಮನನ್ನೇ ನೋಡುತ್ತಿದ್ದವು. ಸೂರಿಗೆ ದೇವಪ್ಪನ ಹತ್ತಿರ ಹೋಗುವಷ್ಟು ಧೈರ್ಯವಿಲ್ಲದಿದ್ದರೂ ತನ್ನ ತಂದೆಯನ್ನು ಕಾಪಾಡದಿದ್ದರೆ ಅವರಿಗೆ ಏನಾದರೂ ಆಗಿಬಿಡುತ್ತದೆ ಎನ್ನುವ ಭಯದಿಂದ ದೇವಪ್ಪನ ಕಡೆಗೆ ನಡೆದ. ಆಗ ದೇವಪ್ಪನ ಕಣ್ಣುಗಳು ಸೂರಿಯ ಕಡೆಗೆ ತಿರುಗಿದವು. ಆ ನೋಟದ ಪ್ರಖರತೆಗೆ ಸೂರಿ ಕಾಲುಗಳು ತಮಗರಿವಿಲ್ಲದಂತೆಯೇ ನಿಂತುಬಿಟ್ಟವು. ಆದರೆ ಸೂರಿಯ ಮೆದುಳಿನ್ನೂ ಕೆಲಸ ಮಾಡುತ್ತಲೇ ಇತ್ತು. ಅವನು ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ದೇವಪ್ಪನ ಕಡೆಗೆ ಆದದ್ದಾಗಲಿ ಎಂದು ನಡೆದೇ ಬಿಟ್ಟ. ಇನ್ನೇನು ಎರಡೇ ಅಡಿ ದೂರ ಅನ್ನುವಷ್ಟರಲ್ಲಿ ದೇವಪ್ಪನ ದೇಹ ಇದ್ದಕ್ಕಿದ್ದಂತೆ ಪುಟಿದೆದ್ದು ಜೋರಾಗಿ ಕರ್ಕಶ ಧ್ವನಿಯಲ್ಲಿ ಆಕಾಶ ನೋಡುತ್ತಾ ಕಿರುಚಿತು. ಸೂರಿ ಹೆದರಿ ಹಿಂದುರುಗಿ ಬರಲು ಹೋಗಿ ಮುಗ್ಗರಿಸಿ ಬಿದ್ದ. ಶಾಂತಮ್ಮನೂ ಭಯದಿಂದ ಕಿರುಚಿ ಹಿಂದಕ್ಕೆ ತಿರುಗಿದರು. ಸೂರಿ ಸಾವರಿಸಿಕೊಂಡು ಎದ್ದು ಹಿಂದಕ್ಕೆ ತಿರುಗಿ ಟಾರ್ಚು ಬಿಟ್ಟಾಗ ದೇವಪ್ಪನ ದೇಹ ನೆಲದ ಮೇಲೆ ಬಿದ್ದಿತ್ತು.
ನೆಲದ ಮೇಲೆ ಬಿದ್ದಿದ್ದ ತಂದೆಯನ್ನು ಕಂಡು ಸೂರಿಗೆ ಅದೇನನ್ನಿಸಿತೋ ಏನೋ, "ಅಪ್ಪಾ..." ಎನ್ನುತ್ತಾ ಓಡಿ ಅವರನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡ. ತನ್ನ ತಂದೆಯನ್ನು ಆ ಪರಿಸ್ಥಿತಿಯಲ್ಲಿ ನೋಡಿ ಅವನ ತಂದೆಯ ಮೇಲಿನ ಪ್ರೀತಿ ಅವನದೇ ಭಯವನ್ನು ಹತ್ತಿಕ್ಕಿತ್ತು. ಅವರನ್ನು ಎತ್ತಿಕೊಂಡು ಮನೆಯೊಳಗೆ ಬಂದ. ಹಾಲಿನಲ್ಲಿದ್ದ ದಿವಾನು ಮಂಚದ ಮೇಲೆ ಅವರನ್ನು ಮಲಗಿಸಿ ಶಾಂತಮ್ಮನಿಗೆ ಸ್ವಲ್ಪ ನೀರು ತರಲು ಹೇಳಿದ. ಶಾಂತಮ್ಮ ಅಡಿಗೆ ಮನೆಯಿಂದ ಒಂದು ಲೋಟದಲ್ಲಿ ನೀರು ತಂದರು. ಸ್ವಲ್ಪ ನೀರನ್ನು ಅವರ ಮುಖದ ಮೇಲೆ ಸಿಂಪಡಿಸಿ ಅವರನ್ನು ಏಳಿಸಲು ಪ್ರಯತ್ನಪಟ್ಟ. ದೇವಪ್ಪನಿಗೆ ಪ್ರಜ್ಞೆಯೇ ಇರಲಿಲ್ಲ.  ಇಬ್ಬರೂ ಸೇರಿ ಮತ್ತಷ್ಟು ಬಾರಿ ದೇವಪ್ಪನನ್ನು ಏಳಿಸಲು ಪ್ರಯತ್ನಿಸಿದರೂ ಏನೂ ಫಲ ಸಿಗಲಿಲ್ಲ. ತಾಯಿ-ಮಗ ಇಬ್ಬರೂ ದೇವಪ್ಪನ ಸ್ಥಿತಿ ಕಂಡು ದುಃಖಿಸಿದರು. ಶಾಂತಮ್ಮ ಒಳಗೊಳಗೇ ಇದು ಯಾರೋ ಆಗದವರು ಮಾಡಿಸಿದ ಕೆಲಸವೆನ್ನಿಸಿತು. ಸೂರಿಗೆ ಇದೆಲ್ಲ ಹೊಸತು. ಮಾಟ-ಮಂತ್ರಗಳಲ್ಲಿ ಅಷ್ಟೊಂದು  ನಂಬಿಕೆ ಇರಲಿಲ್ಲವಾದ್ದರಿಂದ ಅವನಿಗೆ ಇದಕ್ಕೆಲ್ಲ ಏನು ಕಾರಣವಿರಬಹುದು ಎಂದು ವೈಜ್ಞಾನಿಕವಾಗಿಯೇ ಉತ್ತರ ಹುಡುಕಲು ಪ್ರಯತ್ನಿಸಿದ.
ಇನ್ನು ಶಾಂತಮ್ಮನಿಗಾಗಲಿ ಸೂರಿಗಾಗಲಿ ನಿದ್ರೆ ಬರುವ ಸಾಧ್ಯತೆಯೇ ಇರಲಿಲ್ಲ. ಇಬ್ಬರೂ ದೇವಪ್ಪನ ಹತ್ತಿರವೇ ನೆಲದಲ್ಲಿ ಕುಳಿತು ಯೋಚನೆಯಲ್ಲಿ ಮುಳುಗಿಹೋದರು. ಶಾಂತಮ್ಮ ಸೂರಿಗೆ ಇನ್ನೊಮ್ಮೆ ದೇವಪ್ಪ ಹೇಳಿದ್ದೆಲ್ಲವನ್ನೂ ಸರಿಯಾಗಿ ಹೇಳುವಂತೆ ಕೇಳಿದರು. ಅದರಂತೆಯೇ ಸೂರಿ ದೇವಪ್ಪ ಅವನಿಗೆ ಹೇಳಿದ್ದೆಲ್ಲವನ್ನೂ ವಿವರಿಸಿದ. ಶಾಂತಮ್ಮನಿಗೆ ಇದೊಂದು ಕೆಟ್ಟ ಶಕ್ತಿಯ ಕೆಲಸ ಎನ್ನುವುದು ಸ್ಪಷ್ಟವಾಯ್ತು.
ಇದೆಲ್ಲ ಯಾರೋ ನಾವು ಚೆನ್ನಾಗಿರೋದನ್ನ ನೋಡಿ ಮಾಡಿರೋ ಕೆಲಸ. ಯಾರೋ ನಿಮ್ಮಪ್ಪನಿಗೆ ಏನೋ ಮಾಡಿಸಿದರೆ ಕಣೋ ಸೂರಿಎಂದು ಅಳುವುದಕ್ಕೆ ಶುರುಮಾಡಿದರು. 
ಬೇರಾವುದೇ ದಿನವಾಗಿದ್ದರೆ ಸೂರಿ ಅದನ್ನೆಲ್ಲಾ ನಂಬದೆ ಶಾಂತಮ್ಮನ ಮಾತನ್ನು ತಳ್ಳಿಹಾಕಿಬಿಡೋನು. ಆದರೆ ಅವತ್ತು ಅವನು ಕಣ್ಣಾರೆ ಕಂಡ ಕೆಲವು ದೃಶ್ಯಗಳು ಅವನು ಅಲ್ಲಿಯವರೆಗೂ ತಿಳಿದಿದ್ದದ್ದನ್ನೆಲವನ್ನೂ ತಲೆಕೆಳಗಾಗಿಸಿತ್ತು. ಅವನ ಕಲಿತಿದ್ದ ವೈಜ್ಞಾನಿಕ ವಿಚಾರಗಳುಮತ್ತು ಸಿದ್ಧಾಂತಗಳು ತನ್ನ ಕಣ್ಣುಗಳು ಕಂಡದ್ದನ್ನೇ ವಿವರಿಸದಾದವು.
ಯಾರೋ ನಮ್ಮವರೇ ಮಾಡಿರೋ ಕೆಲಸ ಇದು ಶಾಂತಮ್ಮ ಮುಂದುವರೆಸಿದರು. ಇಂತಹ ಮನೆಹಾಳು ಕೆಲಸ ಮಾಡಿರೋರಿಗೆ ಆ ದೇವರು ಒಳ್ಳೇದು ಮಾಡೋಲ್ಲ ಬಿಡು ಶಾಂತಮ್ಮ ಕಣ್ಣೀರು ಒರೆಸಿಕೊಳ್ಳುತ್ತಲೇ ಮಾತನಾಡಿದರು. ಅವರ ಮಾತಲ್ಲಿ ಎಷ್ಟು ನಿಜವಿತ್ತೋ ಸುಳ್ಳಿತ್ತೋ ಸೂರಿಗೆ ಅರ್ಥವಾಗಲಿಲ್ಲ. ಅವರ ಮಾತನ್ನು ಸುಮ್ಮನೇ ಕೇಳಿಸಿಕೊಂಡ. ಅವತ್ತಿನ ಘಟನೆಗಳು ಅವನ ತಾಯಿಯ ಮಾತಲ್ಲಿ ನಿಜವಿದ್ದರೂ ಇರಬಹುದು ಎನ್ನುವಹಾಗೆ ಮಾಡಿದ್ದವು. 
ಈ ದೆವ್ವಭೂತಮಾಟಮಂತ್ರ ಎಲ್ಲಾ ನಿಜವೇನಮ್ಮಾ??” ಸೂರಿಗೆ ಮನಸ್ಸಿಲ್ಲದಿದ್ದರೂ ಮಾತು ಮುಂದುವರೆಸಲಿಕ್ಕೆಂದು ಶಾಂತಮ್ಮನಿಗೆ ಕೇಳಿದ. ಅವನಿಗೆ ಅವನ ತಾಯಿಯ ಉತ್ತರ ಮೊದಲೇ ಗೊತ್ತಿತ್ತು.
ಮತ್ಯಾಕೆ ನಿಮ್ಮಪ್ಪ ಹಾಗಿದ್ರು ಅಂತ ನೀನೇ  ಹೇಳು ನೋಡೋಣ! ದೇವಪ್ಪನನ್ನು ಅವರಿಬ್ಬರೂ ಕಂಡ ದೃಶ್ಯವನ್ನು ನೆನಪಿಸಿ ಕೇಳಿದರು.
ಸೂರಿಗೂ ಅದರ ಉತ್ತರ ಗೊತ್ತಿರಲಿಲ್ಲ. ಹೇಳಬೇಕೆಂದರೆ ಇಂತಹ ಸನ್ನಿವೇಶವೊಂದನ್ನು ಜೀವನದಲ್ಲಿ ಅವನು ಎದುರಿಸಬೇಕಾಗಬಹುದೆಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅವನಿಗೆ ಈಗಲೂ ಅಂತಹುದೊಂದು ದೃಶ್ಯವನ್ನು ತಾನು ನಿಜವಾಗಿಯೂ ನೋಡಿದೆನೇ ಎನ್ನುವಷ್ಟು ನಿಗೂಢವಾಗಿತ್ತು ಆ ದೃಶ್ಯ.
ತುಂಬಾ ಹೊತ್ತು ತಾಯಿ ಮತ್ತು ಮಗ ಇಬ್ಬರೂ ದೇವಪ್ಪನ ಪಕ್ಕದಲ್ಲಿಯೇ ಕುಳಿತುಕೊಂಡು ಕಾಲ ಹಾಕಿದರು. ಎಷ್ಟು ಹೊತ್ತಾದರೂ ದೇವಪ್ಪನಿಗೆ ಪ್ರಜ್ಞೆಯೇ ಬರಲಿಲ್ಲ. ಸೂರಿ ಹಲವಾರು ಬಾರಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬಗ್ಗೆ ಶಾಂತಮ್ಮನಿಗೆ ಹೇಳಿದರೂ ಶಾಂತಮ್ಮ ಅದನ್ನು ನಿರಾಕರಿಸಿ ಇದೆಲ್ಲ ಆಸ್ಪತ್ರೆಯಿಂದ ವಾಸಿಯಾಗುವ ಖಾಯಿಲೆಯಲ್ಲ. ಅವರು ಏಳೋವರೆಗೂ ಸುಮ್ಮನಿರು ಎಂದು ಹೇಳಿ ಸುಮ್ಮನಾಗಿಸಿದರು. ಸೂರಿ ಒಬ್ಬನೇ ದೇವಪ್ಪನನ್ನು ಆಸ್ಪತ್ರಗೆ ಕರೆದುಕೊಂಡು ಹೋಗಲು ಸಾದ್ಯವಿರಲಿಲ್ಲ. ಮನೆಯಲ್ಲಿ ಬೈಕು ಬಿಟ್ಟರೆ ಬೇರೆ ವಾಹನವಿರಲಿಲ್ಲ. ಎರೆಡು ಕಿಲೋಮೀಟರು ದೂರವಿರುವ ಹಳ್ಳಿಯಿಂದ ಯಾರದಾದರೂ ಆಟೋ ತೆಗೆದುಕೊಂಡು ಬರಬಹುದು. ಆದರೆ ಅದೂ ಕೂಡ ಬೆಳಗಾಗುವ ಹೊರತು ಸಾದ್ಯವಿರಲಿಲ್ಲ. 
* * *  * *
ಬೆಳಗಿನ ಜಾವಾ ೬ ಗಂಟೆಗೆ ಸರಿಯಾಗಿ ಸೂರಿಯ ಮೊಬೈಲಿಗೆ ಅವನ ತಮ್ಮ ಹರೀಶನಿಂದ ಫೋನು ಬಂತು. ಇಷ್ಟು ಹೊತ್ತಿಗೆ ಇವನ್ಯಾಕೆ ಫೋನು ಮಾಡುತ್ತಿದ್ದಾನೆ ಎಂದುಕೊಂಡೇ ಫೋನು ಎತ್ತಿದ.
ಅಣ್ಣಾ... ಆ ಕಡೆಯಿಂದ ಧ್ವನಿ.
ಏನಾಯ್ತೋಏನು ಇಷ್ಟೊತ್ತಲ್ಲಿ ಫೋನು?”
ಹೇಗಿದ್ದೀಯ ಅಣ್ಣಯಾಕೆ ಉಷಾರಿಲ್ಲಂತೆ ನಿಂಗೆ...” ಹರೀಶ ಕೇಳಿದ.
ಉಷಾರಿಲ್ವಾನಿಂಗ್ಯಾರೋ ಹಾಗಂತ ಹೇಳ್ದೋರುನಾನು ಚೆನ್ನಾಗೆ ಇದೀನಿ.
ನನಗೆ ರಾತ್ರಿ ಅಪ್ಪ ಫೋನು ಮಾಡಿದ್ರು. ನಿಂಗೆ ಉಷಾರಿಲ್ಲ ಅಂತ. ಮತ್ತೇನೇನೋ ಮಾತಾಡಿದ್ರು. ನಾನು ನಿದ್ರೆ ಮೂಡಲ್ಲಿದ್ದೆ. ಸರಿಯಾಗಿ ಏನು ಅರ್ಥ ಆಗ್ಲಿಲ್ಲ.
ಸೂರಿಗೆ ಇದೆಲ್ಲಾ ಯಕ್ಷಪ್ರಶ್ನೆಯಂತೆ ಕಂಡಿತು. ರಾತ್ರಿ ದೇವಪ್ಪ ಹರೀಶನಿಗೆ ಫೋನು ಮಾಡಿದ್ದರ ಉದ್ದೇಶ ಏನೆಂದು ಸೂರಿಗೆ ಗೊತ್ತಾಗಲಿಲ್ಲ. ಅದರಲ್ಲೂ ತನಗೆ ಹುಷಾರಿಲ್ಲ ಎಂದು ಹೇಳುವುದರ ಹಿಂದಿನ ಉದ್ದೇಶವೂ ತಿಳಿಯಲಿಲ್ಲ.
ಎಷ್ಟು ಹೊತ್ತಿಗೆ ಫೋನು ಮಾಡಿದ್ರು?”
ಬೆಳಗ್ಗೆ ನಾಲ್ಕೂವರೆಗೆ...
ಸೂರಿ ಒಮ್ಮೆ ಬೆಚ್ಚಿದ. ಮೂರೂವರೆಯಿಂದ ಪ್ರಜ್ಞೆಯಿಲ್ಲದೆ ಮಲಗಿರುವ ದೇವಪ್ಪ ನಾಲ್ಕೂವರೆಗೆ ಫೋನು ಮಾಡುವುದಕ್ಕೆ ಹೇಗೆ ಸಾಧ್ಯ?!! ಸೂರಿಗೆ ತಲೆಯೇ ಕೆಟ್ಟಂತಾಯಿತು.
ಹರೀಶನಿಗೆ ಈಗ ಅವರು ಆ ಸಮಯದಲ್ಲಿ ಫೋನು ಮಾಡುವುದಕ್ಕೆ ಹೇಗೆ ಸಾಧ್ಯವಿಲ್ಲ ಎಂದು ಹೇಳುವುದು ಸೂರಿಗೆ ಬಹಳವೇ ಕಷ್ಟವಾಯ್ತು. ಅವನು ಹರೀಶನಿಗೆ ಬಿಟ್ಟದ್ದು ಬಿಟ್ಟು ಕೂಡಲೇ ಮನೆಗೆ ಬರುವಂತೆ ಹೇಳಿದ. 
ಹರೀಶನಿಗೆ ಸೂರಿ ಮನೆಗೆ ಬಂದಿರುವ ವಿಷಯವೇ ಗೊತ್ತಿರಲಿಲ್ಲ. ಅದರಲ್ಲೂ ಅವನು ಹಾಗೆ ಹೇಳಿದ್ದು ಕೇಳಿ ಗಾಬರಿಯಾಯ್ತು. ಯಾಕಣ್ಣ?? ಒಬ್ಬೊಬ್ರು ಒಂದೊಂದು ಥರ ಮಾತಾಡ್ತಾ ಇದೀರಿ. ಏನು ವಿಷಯ?”
ಏನು ಇಲ್ಲ ಹರೀಶ. ನೀನಂದುಕೊಂಡಂತೇನು ಇಲ್ಲ. ಆದರೆ ಈಗ ಎಲ್ಲವನ್ನೂ ಫೋನಿನಲ್ಲಿ ಬಿಡಿಸಿ ಹೇಳುವಷ್ಟು ಸಮಯ ಕೂಡ ಇಲ್ಲ. ಹಾಗಾಗೇ ಬಂದುಬಿಡು ಅಂದದ್ದು.
ಹರೀಶನಿಗೆ ಸೂರಿಯ ಮಾತುಗಳು ಇನ್ನೂ ಸ್ಪಷ್ಟವಾಗದಿದ್ದರೂಏನೋ ವಿಷಯವಿಲ್ಲದೆ ಸೂರಿ ಹಾಗೆಲ್ಲ ಹೇಳುವವನಲ್ಲ ಎಂದು ಒಪ್ಪಿಕೊಂಡ.
ಹರೀಶನ ಹತ್ತಿರ ನಡೆದ ಮಾತುಕಥೆಯನ್ನೆಲ್ಲಾ ಸೂರಿ ಶಾಂತಮ್ಮನಿಗೆ ಹೇಳಿದ. ಸೂರಿಯಂತೆ ಅವರಿಗೂ ನಡೆಯುತ್ತಿರುವ ಸಂಗತಿಗಳ ಅರ್ಥವಾಗಲಿಉದ್ದೇಶವಾಗಲಿ ತಿಳಿಯಲಿಲ್ಲ. ಅವರು ಎದ್ದು ಹೋಗಿ ದೇವಪ್ಪನ ಫೋನು ಹುಡುಕಿ ತಂದರು. ಸೂರಿ ಅದರಲ್ಲಿ ಅವರು ಹರೀಶನಿಗೆ ನಿಜವಾಗಿಯೂ ಫೋನು ಮಾಡಿದ್ದಾರೆಯೇ ಎಂದು ನೋಡಿದ. ಅವರ ಫೋನಿನಿಂದ ಹರೀಶನಿಗೆ ಅಂದು ಯಾವ ಫೋನೂ ಹೋಗಿರಲಿಲ್ಲ. ಹಾಗಾದರೆ ಹರೀಶನಿಗೆ ಫೋನೂ ಬಂದದ್ದು ಹೇಗೆಇದೆಲ್ಲದರ ಹಿಂದೆ ಯಾವುದೊ ಕಾಣದ ಶಕ್ತಿಗಳ ಕೈವಾಡವಿಲ್ಲದೆ  ಹೀಗೆಲ್ಲ ಆಗುವುದು ಸಾಧ್ಯವಿಲ್ಲ ಎಂದು ಸೂರಿಗೂ ಮನದಟ್ಟಾಯಿತು. ತಕ್ಷಣವೇ ಹರೀಶನಿಗೆ ಫೋನು ಮಾಡಿ ಹೇಳೋಣವೆಂದುಕೊಂಡರೆ ಅವನು ಹೆದರಿಯಾನು ಎಂದು ಸುಮ್ಮನಾದ. ಹೇಗಿದ್ದರೂ ಇನ್ನೆರೆಡು ಗಂಟೇಲಿ ಮನೆಗೆ ಬರುತ್ತಾನಲ್ಲ ಎಂದು ಸುಮ್ಮನಾದ.
*****
ಬೆಳಗಿನ ಜಾವಾ ೭ ಗಂಟೆಯಾದರೂ ದೇವಪ್ಪನ ಸ್ಥಿತಿಯಲ್ಲಿ ಯಾವುದೇ ಸುಧಾರಣೆಗಳು ಕಂಡುಬರಲಿಲ್ಲ. ತನ್ನ ತಂದೆಗೆ ಇನ್ನೂ ಪ್ರಜ್ಞೆ ಬರದಿದ್ದುದಕ್ಕೆ ಬೇಸರಗೊಂಡು ಸೂರಿ ಏನು ಮಾಡಬೇಕೆಂದು ತೋಚದೆ ಹಾಗೇ ಸೋಫಾ ಮೇಲೆ ಒರಗಿದ. ಶಾಂತಮ್ಮ ಇನ್ನೂ ತನ್ನ ಗಂಡನ ಪಕ್ಕದಲ್ಲಿಯೇ ಕುಳಿತು ಅವರಿಗೆ ಗಾಳಿ ಬಿಸುತ್ತಿದ್ದರು. ಅಷ್ಟರಲ್ಲಿ ದೇವಪ್ಪನ ಫೋನಿಗೆ ಯಾರದೋ ಫೋನು ಬಂತು. ಬರೀ ನಂಬರು ಮಾತ್ರ ಕಾಣುತ್ತಿತ್ತು. ಯಾರದ್ದೆಂದು ಗೊತ್ತಾಗದೆ ಸೂರಿಯೇ ಫೋನು ಎತ್ತಿದ.
ಹಲೋ...ಯಾರು?” ಸೂರಿ ಕೇಳಿದ.
ದೆವ್ವಪ್ಪನೋರೇಎಲ್ಲಿದಿರಾ?” ಅತ್ತ ಕಡೆಯಿಂದ ಧ್ವನಿಯೊಂದು ಬಂತು.
ಯಾರು ಮಾತಾಡೋದು?” ಈ ಕಡೆಯಿಂದ ಸೂರಿ ಕೇಳಿದ. ಅವನಿಗೆ ಧ್ವನಿ ಸ್ವಲ್ಪ ಪರಿಚಿತವೆನಿಸಿದರು ಯಾರದ್ದೆಂದು ಹೊಳೆಯಲಿಲ್ಲ.
ಯಾರು ಅವರ ಮಗನಾ ಮಾತಾಡೋದು?” ಅತ್ತ ಕಡೆಯಿಂದ ಪ್ರಶ್ನೆ. 
ಹೌದು. ಆದ್ರೆ ನೀವ್ಯಾರು ಮಾತಾಡೋದು ಗೊತ್ತಾಗ್ತಾ ಇಲ್ಲ.
ನಾನು ಕಣಪ್ಪನಿಮ್ಮ ಮನೆದೇವರ ದೇವಸ್ಥಾನದ ಪೂಜಾರಿ.
ಸೂರಿಗೆ ತಾವು ಹಿಂದಿನ ದಿನ ದೇವಸ್ಥಾನಕ್ಕೆ ಹೋಗಿದ್ದ ಸಂಗತಿ ನೆನಪಿಗೆ ಬಂತು.
ಹಾ... ಹೇಳಿ ಸ್ವಾಮಿಗಳೇ.
ಎಲ್ಲಿದಿರಾ ನೀವು?” ಪೂಜಾರಿ ಕೇಳಿದರು.
ನಾವು ಮನೇಲೆ ಇದೀವಿ ಸ್ವಾಮಿಗಳೇ. ಯಾಕೆ ಏನಾಯ್ತು?”
ಓ...ನೀವು ನಾನು ಹೇಳಿದವರನ್ನು ಕಾಣಲಿಕ್ಕೆ ಹೋಗಲಿಲ್ಲವೇ?”
ಸೂರಿಗೆ ಹೇಗೆ ಉತ್ತರ ಹೇಳಬೇಕೋ ಗೊತ್ತಾಗಲಿಲ್ಲ. ಇಲ್ಲೊಂದು ಸಮಸ್ಯೆ ಬಂದುಬಿಟ್ಟಿದೆ ಸ್ವಾಮಿಗಳೇ. ನಮಗೆ ಇವತ್ತು ಹೋಗೋದು ಸಾಧ್ಯವೋ ಇಲ್ಲವೋ ಗೊತ್ತಿಲ್ಲ.
ಆಗಲೇ ಅದು ಶುರುವಾಗಿಬಿಟ್ಟಿತೇ?” ಪೂಜಾರಿಗಳು ನಡೆದ ಅಚಾತುರ್ಯಗಳ ಬಗ್ಗೆ ತಿಳಿದವರಂತೆ ಬೇಸರದಿಂದ ಕೇಳಿದರು.
ಅವರ ಮಾತುಗಳನ್ನು ಕೇಳಿ ಸೂರಿಗೆ ಆಶ್ಚರ್ಯವಾಯ್ತು. ಅದು ಎಂದರೆ?”
ಪೂಜಾರಿಗಳು ಸಮಾಧಾನದಿಂದಲೇ ಹೇಳಿದರು ನೋಡಪ್ಪಯಾರೋ ನಿಮಗೆ ಆಗದವರು ನಿಮ್ಮ ತಂದೆಯ ಮೇಲೆ ಮಾಟ ಮಾಡಿಸಿದ್ದಾರೆ. ಅವರ ಜೀವಕ್ಕೆ ಕಂಟಕವಿದೆ. ಇದನ್ನೆಲ್ಲಾ ನಿನ್ನೆಯೇ ನಿನಗೆ ಹೇಳಬೇಕೆಂದಿದ್ದೆ. ಆದರೆ ಸಮಯ ಸಿಗಲಿಲ್ಲ. ನಿಜ ಹೇಳಬೇಕೆಂದರೆ ಇಷ್ಟು ಬೇಗ ಅವರಿಗೆ ತೊಂದರೆಯಾಗಬಹುದು ಎಂದು ನಾನು ಎಣಿಸಿರಲಿಲ್ಲ.
ದೇವಪ್ಪನಿಗೆ ತೊಂದರೆಯಾದುದು ಇವರಿಗೆ ಹೇಗೆ ಗೊತ್ತಾಯಿತು ಎಂದು ಸೂರಿಗೆ ಸಂಶಯ ಬಂತು. ಅದರಲ್ಲೂ ಹರೀಶನಿಗೆ ಬೇರೆ ದೇವಪ್ಪನ ಫೋನಿನಿಂದಲೇ ಫೋನು ಹೋಗಿದ್ದು ಸೂರಿಗೆ ಈಗ ಯಾರ ಜೊತೆ ಮಾತನಾಡುತ್ತಿದ್ದೇನೆ ಎಂದೂ ಅನ್ನಿಸಿದ್ದು ನಿಜ. ಹರೀಶನಿಗೆ ಫೋನು ಹೋದಂತೆ ನನಗೂ ಬಂದಿದ್ದರೆಯಾವುದಕ್ಕೂ ಎಚ್ಚರವಾಗಿರುವುದು ಒಳಿತು ಎಂದುಕೊಂಡ.
ನೀವು ಎಲ್ಲಿಂದ ಫೋನು ಮಾಡುತ್ತಿದ್ದೀರಿ ಸ್ವಾಮಿಗಳೇ?” ಸೂರಿಗೆ ತಾನು ನಿಜವಾಗಿಯೂ ಪೂಜಾರಿಗಳ ಜೊತೆಯೇ ಮಾತನಾಡುತ್ತಿದ್ದೇನೆಯೇ ಎಂದು ಗೊತ್ತು ಮಾಡಿಕೊಳ್ಳಲಿಕ್ಕೆ ಕೇಳಿದ. ನಿಜವಾಗಿಯೂ ಪೂಜಾರಿಗಳೇ ಮಾತನಾಡುತ್ತಿದ್ದರೆ ಅವರಿಗೆ ತನ್ನ ಪ್ರಶ್ನೆಯ ಒಳಾರ್ಥ ಗೊತ್ತಾಗಬಹುದು ಎಂಬ ಆಶಾವಾದದಿಂದ.
ನಿನ್ನ ಪ್ರಶ್ನೆಯ ಅರ್ಥ ನನಗೆ ಗೊತ್ತಾಯಿತು. ಪೂಜಾರಿಗಳು ಸೂರಿಯ ಮನಸ್ಸನ್ನು ಅರ್ಥಮಾಡಿಕೊಂಡವರಂತೆಯೇ ಉತ್ತರಿಸಿದರು.  ಹೆದರಬೇಡನಾನು ಈಗ ದೇವಸ್ಥಾನದ ಒಳಗಿಂದಲೇ ಮಾತನಾಡುತ್ತಿದ್ದೇನೆ. ಆ ಮಾದಪ್ಪನ ಸನ್ನಿದಿಯಲ್ಲಿ ಯಾರೂ ಕೆಡಕು ಮಾಡುವ ಯೋಚನೆಯನ್ನು ಮಾಡಲಾರರು.
ಸೂರಿಯ ಮನೆದೇವರ ಹೆಸರು ಮಾದಪ್ಪ. ಪೂಜಾರಿಗಳು ಆ ಹೆಸರನ್ನು ಹೇಳಿದ ನಂತರವೇ ಸೂರಿಗೆ ಅತ್ತ ಕಡೆಯಿಂದ ಮಾತನಾಡುತ್ತಿದ್ದವರ ಮೇಲೆ ನಂಬಿಕೆ ಬಂದದ್ದು.  
ನಮ್ಮ ಮನೆಯಲ್ಲಿ ಸಮಸ್ಯೆ ಶುರುವಾಗುತ್ತದೆ ಎಂದು ನಿಮಗೆ ಮೊದಲೇ ಗೊತ್ತಿತ್ತೇ?”
ಇಲ್ಲನಿನ್ನೆ ನಿಮ್ಮ ತಂದೆಯನ್ನು ನೋಡಿದ ನಂತರವೇ ಗೊತ್ತಾದದ್ದು. ಅವರನ್ನು ಯಾವುದೊ ದುಷ್ಟ ಶಕ್ತಿ ಹಿಂಬಾಲಿಸುತ್ತಿದೆ. ನನಗದು ನಿನ್ನೆಯೇ ಅನಿಸಿತ್ತು. ದೇವರ ಸನ್ನಿದಿಯಲ್ಲಿ ಅವರ ಹಾವ ಭಾವಗಳನ್ನು ನೋಡಿದ ಮೇಲೆ ನನಗದು ಸ್ಪಷ್ಟವಾಯ್ತು.
ದುಷ್ಟ ಶಕ್ತಿ ಎಂದರೆ?”
ನಿಮ್ಮ ತಂದೆಗೆ ಕೆಡುಕನ್ನು ಮಾಡಲೆತ್ನಿಸುತ್ತಿರುವ ಶಕ್ತಿ.
ಇದೆಲ್ಲ ಯಾಕಾಗುತ್ತಿದೆ ಸ್ವಾಮಿಗಳೇ?”
ಅದನ್ನೆಲ್ಲಾ ಪರಿಶೀಲಿಸುವ ಸಮಯ ಇದಲ್ಲ. ನೀವು ಮೊದಲು ನಾನು ಹೇಳಿದವರ ಹತ್ತಿರ ಹೋಗಿ ಬನ್ನಿ. ನಿಮಗೆ ಅವರೇ ಎಲ್ಲಾ ಹೇಳುತ್ತಾರೆ.
ಸೂರಿಗೆ ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಡೆದ ಘಟನೆಗಳು ತನ್ನ ಯೋಚನಾ ಶಕ್ತಿಯನ್ನೇ ಕುಂಠಿತಗೊಳಿಸಿಬಿಟ್ಟಿದ್ದವು. ನಡೆದದ್ದನ್ನೆಲ್ಲಾ ಪೂಜಾರಿಗಳಿಗೆ ಹೇಳದೆ ಅವನಿಗೆ ಬೇರೆ ವಿಧಿಯಿರಲಿಲ್ಲ. ತನ್ನ ತಂದೆಯ ಪರಿಸ್ಥಿತಿ ಅವರಿಗೆ ಗೊತ್ತಾದರೆ ಅವರು ಬೇರೇನಾದರೂ ಉಪಾಯ ಹೇಳಬಹುದು ಎಂದುಕೊಂಡು ಪೂಜಾರಿಗಳಿಗೆ ನಿನ್ನೆ ರಾತ್ರಿಯ ಘಟನೆಗಳನ್ನೆಲ್ಲಾ ಹೇಳಿದ. ಪೂಜಾರಿಗಳು ಕುತೂಹಲದಿಂದ ಕೇಳಿಸಿಕೊಂಡರು. 
ದೇವಪ್ಪ ಇನ್ನೂ ಪ್ರಜ್ಞೆಯಿಲ್ಲದೆ ಮಲಗಿರುವುದು ಕೇಳಿ ಪೂಜಾರಿಯು ಸೂರಿಗೆ ದೇವರ ಮನೆಯಿಂದ ವಿಭೂತಿ ತರಲು ಹೇಳಿದರು. ಅದರಂತೆ ಸೂರಿ ದೇವರ ಮನೆಯಿಂದ ವಿಭೂತಿ ತಂದ. ಪೂಜಾರಿಗಳು ಮೊದಲು ಅದನ್ನು ತಾನು ಹಚ್ಚಿಕೊಳ್ಳುವಂತೆ ಹೇಳಿದರು. ಇದು ಸೂರಿಯ ರಕ್ಷಣೆಗಾಗಿ. ನಂತರ ಮನೆಯಲ್ಲಿದ್ದ ಇತರರಿಗೂ ಹಚ್ಚಲು ಹೇಳಿದರು. ಸೂರಿಯೇ ಶಾಂತಮ್ಮನಿಗೂ ವಿಭೂತಿ ಹಚ್ಚಿದ. ನಂತರ ಪೂಜಾರಿಗಳು ಮನೆಯ ಎಲ್ಲಾ ಬಾಗಿಲುಗಳನ್ನು ತಗೆಯಲು ಹೇಳಿದರು. ಸೂರಿ ಹಾಗೆಯೇ ಮಾಡಿದ. ನಂತರ ದೇವಪ್ಪನ ತಲೆಯ ಹತ್ತಿರ ಹೋಗಿ ನಿಲ್ಲಲು ಹೇಳಿದರು. ಸೂರಿ ದೇವಪ್ಪನ ತಲೆಯ ಹತ್ತಿರ ಬಂದು ನಿಂತ. ವಿಭೂತಿಯನ್ನು ಬಲಗೈಯಲ್ಲಿ ಹಿಡಿದು ನಿಲ್ಲಲು ಹೇಳಿದರು. ಸೂರಿ ಹಾಗೇ ಮಾಡಿದ. 
ಈಗ ನಾನು ಹೇಳೋದನ್ನು ನೀನು ಹೇಳಬೇಕು. ಯಾಕೆ ಏನು ಎಂದು ಕೇಳಬಾರದು. ಸುಮ್ಮನೆ ನಾನು ಹೇಳೋದನ್ನು ಹೇಳಿದರೆ ಸಾಕು.
ಸೂರಿಗೆ ಅದನ್ನೆಲ್ಲಾ ಪ್ರಶ್ನಿಸುವ ಉತ್ಸಾಹವೇ ಇಂಗಿಹೋಗಿತ್ತು. ಅವನು ಎಲ್ಲದಕ್ಕೂ ಸುಮ್ಮನೆ ಹೂಗುಟ್ಟಿದ. 
ಪೂಜಾರಿಗಳು ಯಾವುದೊ ಮಂತ್ರವನ್ನು ಹೇಳಲು ಶುರುಮಾಡಿದರು. ಮಂತ್ರ ಸಂಸ್ಕೃತದಲ್ಲಿದ್ದುದರಿಂದ ಸೂರಿಗೆ ಏನೂ ಅರ್ಥವಾಗಲಿಲ್ಲ. ಕೆಲವೊಮ್ಮೆ ಸೂರಿಯ ನಾಲಿಗೆ ತಿರುಗದಷ್ಟು ಕ್ಲಿಷ್ಟವಿತ್ತು ಮಂತ್ರ. ಪೂಜಾರಿಗಳು ಇವನೆಷ್ಟು ಬಾರಿ ತಪ್ಪು ಮಾಡಿದರೂ ಸ್ವಲ್ಪವೂ ಬೇಜಾರಾಗದೆ ಮತ್ತೆ ಅದೇ ಸಾಲನ್ನು ಹೇಳುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ದೇವಪ್ಪನ ದೇಹದಲ್ಲಿ ಚಲನೆ ಕಂಡಿತು. ನಿದ್ರೆಯಿಂದ ಏಳುತ್ತಿರುವವರಂತೆ. ಅದನ್ನು ನೋಡಿ ಸೂರಿಗೆ ಎಲ್ಲಿಂದಲೋ ಶಕ್ತಿ ಬಂದಂತೆ ಮಂತ್ರವನ್ನು ಪೂಜಾರಿಗಳು ಹೇಳಿಕೊಟ್ಟಂತೆ ಪಟಪಟನೆ ಹೇಳಿಬಿಟ್ಟ. ಮಂತ್ರ ಮುಗಿಯುವುದರೊಳಗೆ ದೇವಪ್ಪನಿಗೆ ಪ್ರಜ್ಞೆ ಬರುವ ಎಲ್ಲಾ ಲಕ್ಷಣಗಳು ಕಂಡವು. ಮಂತ್ರದ ಕೊನೆಯ ಸಾಲಿನ ನಂತರ ಅವರ ದೇಹ ಒಮ್ಮೆ ಜೋರಾಗಿ ಸೆಟೆದು ಶಾಂತವಾಯಿತು.
ಈಗ ಸ್ವಲ್ಪ ಅವರ ಮುಖದ ಮೇಲೆ ನೀರು ಹಾಕಿ. ಅವರು ಏಳುತ್ತಾರೆ. ಆದರೆ ನೀವು ಇವತ್ತೇ ನಾನು ಹೇಳಿದವರನ್ನು ಕಾಣಲು ಹೋಗಬೇಕು. ಇಲ್ಲದಿದ್ದರೆ ಸಮಯ ಮೀರುತ್ತದೆ. ಸ್ವಾಮಿಗಳು ಎಚ್ಚರಿಕೆ ನೀಡಿದರು. ನಂತರ ಅವರು ಫೋನು ಕಟ್ಟು ಮಾಡಿಬಿಟ್ಟರು.
ಸೂರಿಗೆ ಇದೆಲ್ಲ ಒಗಟಂತೆ ಕಂಡರೂಅವರ ಮಾತನ್ನೆಲ್ಲಾ ಶಿರಸಾವಹಿಸಿ ಪಾಲಿಸಿದ. ಪೂಜಾರಿಗಳು ಹೇಳಿದ ಹಾಗೆ ಸ್ವಲ್ಪ ನೀರು ಚಿಮುಕಿಸುತ್ತಲೂ ದೇವಪ್ಪನಿಗೆ ಪ್ರಜ್ಞೆ ಬಂತು. ದೇವಪ್ಪನೇ ಕಷ್ಟಪಟ್ಟು ಎದ್ದು ಕುಳಿತರು. ಅವರಿಗೆ ಅಸಾಧ್ಯ ಮೈಕೈ ನೋವಿತ್ತು.
ಸೂರಿ ಮತ್ತು ಶಾಂತಮ್ಮ ಇಬ್ಬರೂ ದೇವಪ್ಪನಿಂದ ಏನಾಯಿತು ಎಂದು ಕೇಳೋದಕ್ಕೆ ಕಾತರರಾಗಿದ್ದರು. ಆದರೆ ದೇವಪ್ಪನ ಪರಿಸ್ಥಿತಿಯನ್ನು ಅರಿತು ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಸುಮ್ಮನಾದರು. ಶಾಂತಮ್ಮ ಮಾಡಿದ ಕಾಫಿಯನ್ನು ದೇವಪ್ಪ ಸುಮ್ಮನೆ ಕುಡಿದರು. ನಂತರ ಎದ್ದು ಸ್ನಾನಕ್ಕೆ ಹೊರಟರು. ಅವರಿಗೆ ನಡೆದುದಾವುದೂ ನೆನಪಿರುವಂತೆ ಕಾಣಲಿಲ್ಲ.
* * * * *
ಹಿಂದಿನ ದಿನ ರಾತ್ರಿ. ಸಮಯ ೧.೨೩. ಮನೆಯಲ್ಲಿರುವವರೆಲ್ಲರೂ ಚೆನ್ನಾಗಿಯೇ ನಿದ್ರೆ ಹೋಗಿರುವ ಸಮಯ. ದೇವಪ್ಪನ ರೂಮಿನ ಕಿಟಕಿಯ ಹತ್ತಿರ ಏನೋ ಸುಳಿದಾಟ. ತರಗಲೆಗಳ ಮೇಲೆ ಯಾರೋ ಓಡಾಡಿದಂತಹ ಶಬ್ದ. ಅದು ಯಾವುದೇ ಜೀವಂತವಿರುವ ಪ್ರಾಣಿಯಲ್ಲ. ಅದೊಂದು ನೆರಳು. ಒಂದು ಕೆಟ್ಟ ಶಕ್ತಿ. ಒಂದು ಪ್ರೇತ. ದೇವಪ್ಪನ ಮನೆಯವರಿಗೆ ಕೆಡುಕು ಮಾಡಲೆಂದೇ ಬಂದಿರುವ ಶೈತಾನನ ಪ್ರತಿರೂಪ. ಅದು ತಾನಾಗಿಯೇ ಬಂದದ್ದಲ್ಲ. ದೇವಪ್ಪನಿಗೆ ಆಗದವರಾರೋ ಬೇಕಂತಲೇ ಕಳುಹಿಸಿರುವ ಶಕ್ತಿ. ಅದನ್ನು ಆಹ್ವಾಹನೆ ಮಾಡಿ ಹೆಚ್ಚು ದಿನ ಕಳೆದಿಲ್ಲ. ಹಾಗಾಗಿಯೇ ಅದು ಇನ್ನೂ ತನ್ನ ಪೂರ್ಣ ಶಕ್ತಿ ಕಂಡುಕೊಂಡಿಲ್ಲ. ದಿನಗಳೆದಂತೆ ಅದರ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೆ ಮನೆಯೊಳಗೆ ಬರುವಷ್ಟು ಶಕ್ತಿಯಿನ್ನೂ ಬಂದಿಲ್ಲ. ಆದುದರಿಂದಲೇ ಅಲ್ಲಿಯವರೆಗೂ ಅದು ದೇವಪ್ಪನ ಕಿಟಕಿಯ ಹತ್ತಿರವೇ ನಿಂತು ತನ್ನ ಕರಾಳ ಛಾಯೆ ತೋರಿಸಿದ್ದು.
ಆ ಶಕ್ತಿಗೆ ದೇವಪ್ಪನ ಕೂದಲು ಮತ್ತು ಬಟ್ಟೆಯನ್ನು ತೋರಿಸಿ ಈ ವ್ಯಕ್ತಿಯನ್ನು ಕಾಡಬೇಕು ಎಂದು ಹೇಳಿಕಳುಹಿಸಲಾಗಿತ್ತು. ಅದರಿಂದಾಗಿಯೇ ಅದು ದೇವಪ್ಪನಿಗೆ ಮಾತ್ರವೇ ಕಾಡುತ್ತಿತ್ತು. ಅದು ಮನೆಯವರಿಗೆ ಯಾವುದೇ ತೊಂದರೆ ಕೊಡುವ ಉದ್ದೇಶವಿಟ್ಟುಕೊಳ್ಳದಿದ್ದರೂಅವರೇನಾದರೂ ಆ ಶಕ್ತಿಯ ಕಾರ್ಯಕ್ಕೆ ಅಡ್ಡ ಬಂದರೆ ಅವರಿಗೂ ಕೆಡುಕು ಮಾಡುತ್ತಿತ್ತು. ದೇವಪ್ಪನನ್ನು ಕಾಪಾಡುವ ಯಾವ ಕೆಲಸವನ್ನೂ ಮನೆಯವರು ಮಾಡುವ ಹಾಗಿರಲಿಲ್ಲ. ಮಾಡಿದ್ದೇ ಆದರೆ ಆ ಕೆಟ್ಟ ಶಕ್ತಿಯ ಅವಕೃಪೆಗೆ ಪಾತ್ರರಾಗಬೇಕಿತ್ತು. ಇಂತಹ ಸನ್ನಿವೇಶಗಳಲ್ಲಿ ಮನೆಯವರು ಕಷ್ಟದಲ್ಲಿರುವ ವ್ಯಕ್ತಿಗೆ ಸಹಾಯ ಮಾಡುವುದು ಸಾಮಾನ್ಯ. ಆದ್ದರಿಂದ ಅವರೂ ಕಷ್ಟಕ್ಕೊಳಗಾಗುವುದನ್ನು ಬೇಕಾದಷ್ಟು ಕಡೆ ನೋಡಬಹುದು. ಈ ಶಕ್ತಿಗಳಿಗೆ ಮನುಷ್ಯರಿಗಿಂತ ಹಲವು ಪಟ್ಟು ದೈಹಿಕಮತ್ತು ಮಾಂತ್ರಿಕ ಶಕ್ತಿಗಳಿರುತ್ತವೆ. ಅವುಗಳನ್ನು ಉಪಯೋಗಿಸಿಕೊಂಡು ಆ ಶಕ್ತಿಗಳು ಮನುಷ್ಯರ ಮೇಲೆ ನಿಯಂತ್ರಣ ಸಾಧಿಸುತ್ತವೆ. ಅವುಗಳು ಮನುಷ್ಯರ ಮೇಲೆ ಸಂಪೂರ್ಣ ನಿಯಂತ್ರಣ ಸಾದಿಸುವಷ್ಟರಲ್ಲಿ ತಡೆದರಷ್ಟೇ ಉಳಿಗಾಲ. ಇಲ್ಲದಿದ್ದರೆ ಕಥೆ ಮುಗಿದಂತೆಯೇ. 
ದೇವಪ್ಪನ ಕಿಟಕಿಯ ಬಳಿ ಬಂದ ಪ್ರೇತಕ್ಕೆ ದೇವಪ್ಪ ಅವರ ಎಂದಿನ ಜಾಗದಲ್ಲಿ ಕಾಣದಿರುವುದು ಕೋಪ ತರಿಸಿದೆ. ಈ ಶಕ್ತಿಗಳಿಗೆ ತಾವಂದುಕೊಂಡದ್ದು ಸುಲಭವಾಗಿ ಆಗದೆ ಇದ್ದರೆ ಅಸಾಧ್ಯ ಕೋಪ ಬರುತ್ತದೆ. ಅದು ಕೋಪದಲ್ಲಿಯೇ ಮನೆಯನ್ನು ಒಂದು ರೌಂಡು ಸುತ್ತಿ ಬಂದಿದೆ. ಸೂರಿ ಮೊದಲೇ ಹಾಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿದ್ದರಿಂದ ಅದಕ್ಕೆ ದೇವಪ್ಪ ಕಂಡಿಲ್ಲ. ಪ್ರೇತಗಳಿಗೆ ಗೋಡೆಗಳ ಮೂಲಕ ನೋಡೋದು ಕಷ್ಟವೇನಲ್ಲ. ಆದರೆ ಈ ಪ್ರೇತಕ್ಕೆ ಆ ಶಕ್ತಿ ಬರಲು ಇನ್ನೂ ಸ್ವಲ್ಪ ದಿನಗಳು ಬೇಕಿತ್ತಷ್ಟೆ. ಪ್ರೇತಗಳಿಗೆ ಅಂತಹ ಸಮಯದಲ್ಲಿ ಉಪಯೋಗಕ್ಕೆ ಬರಲೆಂದು ಅತ್ಯದ್ಭುತ ವಾಸನಾ ಶಕ್ತಿಯನ್ನೂ ಪಡೆದಿರುತ್ತವೆ. ಅದನ್ನು ಉಪಯೋಗಿಸಿ ಆ ಪ್ರೇತವು ದೇವಪ್ಪ ಹಾಲಿನಲ್ಲೇ ಮಲಗಿರುವುದನ್ನು ಕಂಡುಹಿಡಿದುಕೊಂಡಿತು. ಅದಕ್ಕಿನ್ನೂ ಮನೆಯೊಳಗೆ ಪ್ರವೇಶಿಸುವಷ್ಟು ಶಕ್ತಿಯಿರದ ಕಾರಣ ಅದು ನಿಂತಲ್ಲೇ ಚಡಪಡಿಸಿ ಕೋಪದಲ್ಲಿ ಕೆರಳಿದೆ. 
ದೇವಪ್ಪನಿಗೆ ಅಂದು ರಾತ್ರಿ ಯಾವುದಾದರೂ ರೀತಿಯಲ್ಲಿ ಕಾಡುವ ತನಕ ಪ್ರೇತಕ್ಕೆ ಶಾಂತಿಯಿಲ್ಲ. ಹಾಗೆ ಕಾಡುತ್ತಲೇ ಅದು ಆ ವ್ಯಕ್ತಿಯ ಮೇಲೆ ನಿಯಂತ್ರಣ ಸಾದಿಸೋದು. ಆ ಮೂಲಕ ಅದರ ಶಕ್ತಿಯೂ ವೃದ್ಧಿಗೊಳ್ಳುತ್ತದೆ.  ಅದು ದೇವಪ್ಪನ ಪಕ್ಕದಲ್ಲಿದ್ದ ಕಿಟಕಿಯ ಮೂಲಕ ದೇವಪ್ಪನ ಮಲಗಿರುವ ದೇಹವನ್ನು ಸೇರಲು ಪ್ರಯತ್ನಿಸಿತು. ಅದಕ್ಕೆ ಅದು ಸಾಧ್ಯವಾಗಲಿಲ್ಲ. ಕೆರಳಿ ಕೆಂಡವಾದ ಆ ಪ್ರೇತ ಕಿಟಕಿಯ ಪಕ್ಕದಲ್ಲಿಯೇ ನಿಂತು ಜೋರಗೊಮ್ಮೆ ಕರ್ಕಶ ಧ್ವನಿಯಲ್ಲಿ ಕಿರುಚಿತು. ಅದರ ಶಬ್ದಕ್ಕೆ ದೇವಪ್ಪ ನೆಟ್ಟುಬಿದ್ದು ಎದ್ದುಕೂತರು. ಮನೆಯಲ್ಲಿರುವ ಬೇರ್ಯಾರಿಗೂ ಆ ಶಬ್ದ ಕೇಳಿಸಲೇ ಇಲ್ಲ. ದೇವಪ್ಪ ಹೆದರುತ್ತಾ ಅತ್ತಿತ್ತ ನೋಡಿದರು. ಕೊನೆಗೆ ಕಿಟಕಿಯ ಕಡೆಗೆ ನೋಡುತ್ತಲೇ ಭಯದಿಂದ ನಡುಗಿ ಮಂಚದಿಂದ ಎದ್ದು ದೂರ ಬಂದರು. ಅಲ್ಲಿಯವರೆಗೂ ಬರಿ ನೆರಳಾಗಿ ಕಾಣುತ್ತಿದ್ದ ಪ್ರೇತಕ್ಕೆ ಈಗೊಂದು ರೂಪ ಬಂದಿತ್ತು. ಆದರೆ ದೇವಪ್ಪನನ್ನು ಮಂಚದಿಂದ ಎದ್ದು ದೂರ ಹೋಗುವಂತೆ ಮಾಡಿದ್ದು ಅದರ ಕಣ್ಣುಗಳು. ಕಿಟಕಿಯ ಮೂಲಕ ಆ ಕಣ್ಣುಗಳು ಕೆಂಪಗೆ ಕೆಂಡದಂತೆ ಹೊಳೆಯುತ್ತಿದ್ದವು.
ಆ ಪ್ರೇತವು ಸಂಮೋಹನ ಶಕ್ತಿಯನ್ನೂ ಉಪಯೋಗಿಸಿ ದೇವಪ್ಪನ ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸುವುದಕ್ಕೆ ಪ್ರಯತ್ನಿಸಿತು. ಮೊದಮೊದಲು ದೇವಪ್ಪ ಅದಕ್ಕೆ ಪ್ರತಿರೋಧಿಸಿದರೂ ಬರುಬರುತ್ತಾ ಆ ಪ್ರೇತದ ಶಕ್ತಿ ಹೆಚ್ಚಾಗುತ್ತಾ ಹೋಯಿತು. ಕೊನೆಗೊಮ್ಮೆ ಪ್ರೇತವು ಸಂಪೂರ್ಣವಾಗಿ ದೇವಪ್ಪನ ಮೇಲೆ ಮಾನಸಿಕವಾಗಿ ಹಿಡಿತ ಸಾದಿಸಿಬಿಟ್ಟಿತು. ಇದು ಪ್ರೇತದ ದಬ್ಬಾಳಿಕೆಯ ಎರಡನೇ ಘಟ್ಟ. ಅಲ್ಲಿಂದ ಆ ವ್ಯಕ್ತಿಯು ತನ್ನ ಯೋಚನಾ ಶಕ್ತಿಯನ್ನು ಕಳೆದುಕೊಂಡು ಪ್ರೇತದ ಆಳಾಗುತ್ತಾನೆ. ಪ್ರೇತವು ಆ ವ್ಯಕ್ತಿಯನ್ನು ಒಳಗಿಂದಲೇ ಆಕ್ರಮಿಸಿ ಅವನನ್ನು ಸರ್ವನಾಶಮಾಡಿಬಿಡುತ್ತದೆ. ಪ್ರೇತದ ಶಕ್ತಿಯನ್ನು ತಾಳಲಾರದೆ ಮನುಷ್ಯನ ದೇಹವು ಅತಿಯಾದ ಆಯಾಸದಿಂದ ತನ್ನ ಕಾರ್ಯಕ್ಷಮತೆ ಕಳೆದುಕೊಳ್ಳುತ್ತದೆ. ಕೊನೆಗೊಂದು ದಿನ ಕೆಟ್ಟ ಶಕ್ತಿಯ ನಿಯಂತ್ರಣದಲ್ಲಿರುವ ವ್ಯಕ್ತಿಯ ದೇಹದ ಒಳಗಿನ ಅಂಗಾಂಗಗಳು ಹಾಳಾಗಿ ಅವನು ರಕ್ತ ಕಾರಿಕೊಂಡು ಸಾಯುತ್ತಾನೆ. ಇದು ಕೊನೆಯ ಘಟ್ಟ. ದೇವಪ್ಪನಿಗೆ ಇದರಿಂದ ತಪ್ಪಿಸಿಕೊಳ್ಳಲು ಇದ್ದುದು ಕೆಲವೇ ಕೆಲವು ದಿನ.
ದೇವಪ್ಪನನ್ನು ನಿಯಂತ್ರಿಸುತ್ತಿರುವ ಆ ಪ್ರೇತ ಅವರಿಗೆ ಮನೆಯಿಂದ ಹೊರಬರಲು ಆದೇಶಿಸುತ್ತದೆ. ದೇವಪ್ಪ ಅದನ್ನು ಮಾತಿಲ್ಲದೆ ಪಾಲಿಸುತ್ತಾರೆ. ಭಾರವಾದ ಹೆಜ್ಜೆಗಳನ್ನಿಟ್ಟುಕೊಂಡು ದೇವಪ್ಪ ಬಾಗಿಲನ್ನು ತೆರೆದು ಮನೆಯ ಮುಂಭಾಗಕ್ಕೆ ಬರುತ್ತಾರೆ. ದೇವಪ್ಪ ಮನೆಯಿಂದ ಹೊರ ಬಂದ ತಕ್ಷಣವೇ ಪ್ರೇತವು ಅವರ ಮೈಯನ್ನು ಹೊಕ್ಕಲು ಪ್ರಯತ್ನಿಸುತ್ತದೆ. ಆದರೆ ಅದಕ್ಕೆ ಇನ್ನೂ ಆ ಶಕ್ತಿಯಿಲ್ಲ. ಅದು ಸಾಧ್ಯವಾಗದಿದ್ದಾಗ ಕೋಪಗೊಂಡ ಪ್ರೇತವು ಅವರ ತಲೆಗೆ ಜೋರಾಗಿ ಹೊಡೆಯುತ್ತದೆ. ಆ ಹೊಡೆತದ ರಭಸಕ್ಕೆ ದೇವಪ್ಪ ಮೂರ್ಛೆಬಿದ್ದವರಂತೆ ನೆಲಕ್ಕೆ ಬಿದ್ದಿದ್ದಾರೆ. ಆದರೆ ಪ್ರೇತದ ಕೋಪ ಅಲ್ಲಿಗೇ ನಿಂತಿಲ್ಲ. ಅದು ದೇವಪ್ಪನ ದೇಹವನ್ನು ಅಲ್ಲೆಲ್ಲಾ ನೆಲದಮೇಲೆ ಜೋರಾಗಿ ಎಳೆದಾಡಿದೆ. ಅದರಿಂದ ದೇವಪ್ಪನ ಮೈಯೆಲ್ಲಾ ಅಲ್ಲಲ್ಲಿ ತರಚಿ ಸಣ್ಣ ಪುಟ್ಟ ಗಾಯಗಳಾಗಿವೆ. ತನ್ನ ಕೋಪ ತಣ್ಣಗಾಗುವವರೆಗೂ ದೇವಪ್ಪನನ್ನು ಎಳೆದಾಡಿದ ಪ್ರೇತ ಕೊನೆಗೆ ದೇವಪ್ಪನ ದೇಹವನ್ನು ಅವರ ರೂಮಿನ ಕಿಟಕಿಯ ಹತ್ತಿರ ತಂದು ಹಾಕಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಮನೆಯಲ್ಲಿರುವವರಿಗೆ ಕಿಂಚಿತ್ತೂ ಸುಳಿವಿಲ್ಲ. ಸೂರಿ ಮತ್ತು ಶಾಂತಮ್ಮ ಇನ್ನೂ ಸುಖನಿದ್ರೆಯಲ್ಲಿದ್ದಾರೆ.
ದೇವಪ್ಪನ ದೇಹವನ್ನು ಎಳೆದುಕೊಂಡು ಅವರ ರೂಮಿನ ಕಿಟಕಿಯ ಹತ್ತಿರ ತಂದು ಹಾಕಿತು ಪ್ರೇತ. ಆ ಜಾಗದಲ್ಲಿ ತಂದು ಹಾಕಲಿಕ್ಕೆ  ಒಂದು ಬಲವಾದ ಕಾರಣವೂ ಇತ್ತು. ಅದು ಯಾರಿಗೂ ಇನ್ನೂ ಗೊತ್ತಿರಲಿಲ್ಲ. ದೇವಪ್ಪನ ದೇಹವನ್ನು ಹೊಕ್ಕಲಿಕ್ಕೆ ಅದು ಸೂಕ್ತವಾದ ಜಾಗ. ಆ ಜಾಗದಲ್ಲಿ ಅದಕ್ಕೆ ಅದ್ಬುತ ಶಕ್ತಿ ಬರುತ್ತಿತ್ತು. ಬೇರಾವುದೇ ಜಾಗದಲ್ಲಾದರೆ ಅದಕ್ಕೆ ಸದ್ಯಕ್ಕೆ ಶಕ್ತಿ ಕಡಿಮೆ. ಅದರಿಂದಲೇ ಅದು ದೇವಪ್ಪನನ್ನು ಅದೇ ಕಿಟಕಿಯಿಂದ ಪ್ರತೀದಿನ ಕಾಡುತ್ತಿದ್ದುದು. ಅಂದು ದೇವಪ್ಪನ ದೇಹವನ್ನು ಒಮ್ಮೆ ಹೊಕ್ಕಿಬಿಟ್ಟರೆ ಪ್ರೇತಕ್ಕೆ ಅದೊಂದು ಮೈಲುಗಲ್ಲು. ಒಮ್ಮೆ ಪ್ರೇತ ಮೈಮೇಲೆ ಬಂದರೆ ಮುಗಿಯಿತು. ಎರಡನೇ ಬಾರಿ ಬರುವುದಕ್ಕೆ ಹೆಚ್ಚು ಕಷ್ಟವೇ ಇಲ್ಲ.
ಅಷ್ಟರಲ್ಲಿ ದೇವಪ್ಪನಿಗೆ ನಿಧಾನವಾಗಿ ಪ್ರಜ್ಞೆ ಬರುವುದಕ್ಕೆ ಶುರುವಾಗಿದೆ. ದೇವಪ್ಪ ಪ್ರಜ್ಞೆಯಲ್ಲಿರುವಾಗ ಅವರ ಮೈಯಲ್ಲಿ ಹೊಕ್ಕಲು ಸಾಧ್ಯವಿಲ್ಲವೆಂದು ಅರಿತಿರುವ ಪ್ರೇತ ಅವರ ಮೇಲೆ ಮತ್ತೊಮ್ಮೆ ಆಕ್ರಮಣ ಮಾಡಿದೆ. ಅವರ ಕೈಗಳನ್ನು ಹಿಡಿದು ಎರೆಡೂ ಕಡೆಯಿಂದ ತನ್ನೆಲ್ಲಾ ಶಕ್ತಿಬಿಟ್ಟು ಎಳೆಯುತ್ತಿದೆ. ಅದರ ಶಕ್ತಿ ಇನ್ನೂ ಸ್ವಲ್ಪವೇ ಹೆಚ್ಚಿದ್ದರೂ ದೇವಪ್ಪನ ಕೈಗಳು ಭುಜದಿಂದ ಕಿತ್ತೇ ಬರಬೇಕಿತ್ತು. ಅವರ ಅದೃಷ್ಟ ಅವತ್ತು ಚೆನ್ನಾಗಿತ್ತಷ್ಟೆ. ಆದರೂ ಆ ಎಳೆತದ  ರಭಸಕ್ಕೆ ದೇವಪ್ಪನ  ಮೈಯೆಲ್ಲಾ ಸೆಟೆದು ಅವರ ಕಾಲುಗಳು ಸೋತು ಅವರು ತನ್ನ ಮೊಣಕಾಲಮೇಲೆ ಕುಳಿತುಬಿಟ್ಟರು. ಅವರ ಮೈಮೇಲೆ ಸಂಪೂರ್ಣವಾಗಿ ಹೊಕ್ಕಲಿಕ್ಕೆ ಪ್ರೇತಕ್ಕೆ ಹೆಚ್ಚೇನೂ ಸಮಯ ಬೇಕಿರಲಿಲ್ಲ. ಆ ಪ್ರೇತ ಹಾಗೆಯೇ ಇನ್ನೂ ಸ್ವಲ್ಪ ಹೊತ್ತು  ದೇವಪ್ಪನ ಮೇಲೆ ಹಿಡಿತ ಸಾಧಿಸಿದ್ದರೂ ಸಾಕಿತ್ತು. ದೇವಪ್ಪನನ್ನು ಅದು ಸಂಪೂರ್ಣವಾಗಿ ಅವರಿಸಿಬಿಡೋದು. ಆಗಲೇ ಶಾಂತಮ್ಮ ಬಂದದ್ದು. ಪ್ರೇತಕ್ಕೆ ಶಾಂತಮ್ಮನ ಬಳಿ ಯಾವುದೇ ಸಂಬಂಧವಿಲ್ಲ. ಹಾಗಾಗಿಯೇ ಅದು ಅವರ ಮುಂದೆಯೂ ದೇವಪ್ಪನ ಮೇಲಿನ ಆಕ್ರಮಣ ಮುಂದುವರೆಸಿದ್ದು. ಎಲ್ಲಿಯವರೆಗೂ ಶಾಂತಮ್ಮ ದೂರವೇ ಇರುವರೋಅಲ್ಲಿಯವರೆಗೂ ಪ್ರೇತ ಶಾಂತಮ್ಮನಿಗೆ ಏನೂ ತೊಂದರೆ ಕೊಡುವುದಿಲ್ಲ. ಶಾಂತಮ್ಮ ಯಾವಾಗ ದೇವಪ್ಪನಿಗೆ ಸಹಾಯ ಮಾಡಲಿಕ್ಕೆ ಮುಂದೆ ಬಂದರೋಆಗಲೇ ಆ ಪ್ರೇತ ದೇವಪ್ಪನ ಮೂಲಕ ಅವರ ಕಡೆಗೆ ಕೆಂಗಣ್ಣಿನಿಂದ ನೋಡಿದ್ದು.
ಶಾಂತಮ್ಮ ದೇವಪ್ಪನನ್ನು ನೋಡಿ ಹೆದರಿದ್ದರೂಒಂದು ಒಳ್ಳೆಯ ಕೆಲಸವನ್ನು ಮಾಡಿದ್ದರು. ಮನಸ್ಸಿನಲ್ಲೇ ಅವರು ದೇವಪ್ಪನನ್ನು ನೋಡುತ್ತಾ ಹನುಮಾನ್ ಚಾಲೀಸಾ ಹೇಳಲು ಶುರುಮಾಡಿದರು. ಕೆಟ್ಟ ಶಕ್ತಿಗಳಿಗೆಲ್ಲಾ ಹನುಮಾನ್ ಚಾಲೀಸಾ ರಾಮಬಾಣವಿದ್ದಂತೆ. ಎಂತಹ ಶೈತಾನ್ ಇದ್ದರೂ ಅಲ್ಲಿಂದ ಓಡಿಹೋಗಬೇಕು. ಅಂತಹ ಶಕ್ತಿಯಿದೆ ಅದಕ್ಕೆ. ಅದೆಲ್ಲಿಂದ ಕಲಿತಿದ್ದಳೋ ಶಾಂತಮ್ಮಸಮಯಕ್ಕೆ ಸರಿಯಾಗಿ ಅದನ್ನು ಮನದಲ್ಲೇ ಪಠಿಸಲು ಶುರುಮಾಡಿದಮೇಲೆಯೇ ಪ್ರೇತ ಮತ್ತು ದೇವಪ್ಪನ ಒಳಕಾಳಗದಲ್ಲಿ ದೇವಪ್ಪನ ಕೈ ಮೇಲಾದುದು. ಅತ್ತ ಹನುಮಾನ್ ಚಾಲೀಸಾ ಮುಂದುವರೆದಷ್ಟೂ ದೇವಪ್ಪನ ಶಕ್ತಿ ಹಿಗ್ಗುತ್ತಾ ಹೋಯಿತು. ಹಾಗೆಯೇ ಪ್ರೇತದ ಶಕ್ತಿ ಕುಗ್ಗುತ್ತಾ ಹೋಯಿತು. ಹನುಮಾನ್ ಚಾಲೀಸಾ ಮುಗಿಯುವುದರೊಳಗೆ ಪ್ರೇತ ಅಲ್ಲಿಂದ ಜಾಗ ಖಾಲಿಮಾಡಿದರೆ ಅದು ಉಳಿದಂತೆ. ಹಾಗೆ ಹನುಮಾನ್ ಚಾಲೀಸಾ ಮುಗಿಯುವವರೆಗೂ ಜಾಗ ಖಾಲಿಮಾಡದ ಪ್ರೇತಗಳು ಯಾವುವೂ ಮತ್ತೊಂದು ರಾತ್ರಿ ಕಂಡಿಲ್ಲ.  
ಪ್ರೇತಕ್ಕೆ ತನ್ನ ಶಕ್ತಿ ಯಾವಾಗ ದೇವಪ್ಪನನ್ನು ಹಿಡಿದಿಡಲಾರದು ಎಂದು ಅರಿವಾಯ್ತೋಅದಕ್ಕೆ ಅಲ್ಲಿಂದ ಜಾಗ ಖಾಲಿಮಾಡುವುದೇ ಒಳಿತೆನ್ನಿಸಿತು. ಅದೇ ಸಮಯಕ್ಕೆ ದೇವಪ್ಪನೂ ತನ್ನೆಲ್ಲಾ ಶಕ್ತಿಯನ್ನು ಬಿಟ್ಟು ಅದನ್ನು ಮೈಯಿಂದ ಹೊರಹಾಕಲು ಪ್ರಯತ್ನಿಸಿದರು. ಅದಕ್ಕೇ ಅವರು ಕೊನೆಗೆ ಹಾಗೆ ಜೋರಾಗಿ ಕೂಗಿದ್ದು. ಆ ಕ್ಷಣದಲ್ಲಿಯೇ ಪ್ರೇತ ದೇವಪ್ಪನ ದೇಹದ ಮೇಲಿನ ಹಿಡಿತ ಕಳೆದುಕೊಂಡು ಅಲ್ಲಿಂದ ಪರಾರಿಯಾಯಿತು. ತನ್ನ ಶಕ್ತಿಯನ್ನೆಲ್ಲಾ ಕಳೆದುಕೊಂಡಿದ್ದ ದೇವಪ್ಪ ಕುಸಿದು ಬಿದ್ದರು. ಆಗಲೇ ಸೂರಿ ಅವರನ್ನು ಎತ್ತಿಕೊಂಡು ಬಂದು ಮನೆಯೊಳಗೆ ಮಲಗಿಸಿದ್ದು. ಶಾಂತಮ್ಮ ಹನುಮಾನ್ ಚಾಲೀಸಾ ಮುಗಿಯುವವರೆಗೂ ಅಲ್ಲಿಯೇ ನಿಂತಿದ್ದು ನಂತರ ಒಳಗೆ ಬಂದರು. ಇತ್ತ ತನ್ನ ಕೆಲಸ ಮುಗಿಸದಿದ್ದುದಕ್ಕೆ ಪ್ರೇತ ಮನೆಯ ಸುತ್ತೆಲ್ಲಾ ಜೋರಾಗಿ ಕಿರುಚಾಡುತ್ತಾ ಓಡಾಡಿತು. ಇದಕ್ಕೆಲ್ಲಾ ಕಾರಣ ಶಾಂತಮ್ಮನೇ ಎಂದು ತನ್ನ ವಕ್ರದೃಷ್ಟಿಯನ್ನು ಶಾಂತಮ್ಮನ ಕಡೆಗೆ ತಿರುಗಿಸಿತು.
******
ಪೂಜಾರಿಗಳು ಅಷ್ಟು ಬಾರಿ ಅವರು ಹೇಳಿದವರನ್ನು ಕಾಣಲು ಇಂದೇ ಹೋಗಿ ಎಂದು ಹೇಳಿದ್ದು ಸೂರಿಗೆ ತಲೆನೋವು ತಂದಿತ್ತು. ದೇವಪ್ಪನಿಗೆ ಈಗಷ್ಟೆ ಸ್ವಲ್ಪ ಸರಿಹೋಗಿದ್ದು ಅವರನ್ನು ಅಷ್ಟು ದೂರದ ಪ್ರಯಾಣಕ್ಕೆ ಕರೆದುಕೊಂಡು ಹೋಗುವುದು ಸೂಕ್ತವೇ ಎಂದು ಪ್ರಶ್ನಿಸಿಕೊಂಡ. ಹೋಗದಿದ್ದರೆ ದೇವಪ್ಪನ ಸ್ಥಿತಿ ಮತ್ತೆ ಕೆಟ್ಟದಾಗಬಹುದು ಎಂಬ ಯೋಚನೆಯೂ ಬಂತು. ನಿನ್ನೆ ರಾತ್ರಿ ನಡೆದ ಘಟನೆಗಳನ್ನೆಲ್ಲಾ ಅವಲೋಕಿಸಿಎಷ್ಟೇ ಕಷ್ಟವಾದರೂ ಪರವಾಗಿಲ್ಲಇವತ್ತು ಹೋಗಿಬರೋಣ ಎಂದು ನಿರ್ಧಾರ ಮಾಡಿ ತನ್ನ ತಂದೆಯ ಬಳಿ ಮಾತನಾಡಲು ಹೊರಟ.
ದೇವಪ್ಪ ದೈಹಿಕವಾಗಿ ಅಂತಹದೊಂದು ಪ್ರಯಾಣಕ್ಕೆ ತಯಾರಿರಲಿಲ್ಲ. ಅವರಿಗೆ ಬಹುವಾಗಿಯೇ ವಿರಾಮದ ಅವಶ್ಯಕತೆಯಿತ್ತು. ಆದರೆ ಅವರಿಗೆ ಸಮಯ ಇರಲಿಲ್ಲ. ಅದು ಅವರಿಗೂ ತಿಳಿದಿದ್ದ ವಿಷಯ. ಅದರಲ್ಲೂ ಪೂಜಾರಿಗಳು ಅಷ್ಟು ಬಾರಿ ಅಲ್ಲಿಗೆ ಹೋಗಿಬನ್ನಿ ಎಂದು ಹೇಳಿದ್ದು ಚೆನ್ನಾಗಿ ನೆನಪಿತ್ತು. ಹಾಗಾಗಿ ಅವರು ಸೂರಿಯ ಜೊತೆ ಹೊರಡಲು ರೆಡಿಯಾದರು. ಸೂರಿ ತನ್ನ ತಂದೆಗೆ ಅನುಕೂಲವಾಗಲೆಂದು ಊರಿನಿಂದ ಯಾರದೋ ಸಣ್ಣ ವ್ಯಾನ್ ತೆಗೆದುಕೊಂಡು ಬರಲು ನಿರ್ಧರಿಸಿದ. ಅವನು ಮನೆಯಿಂದ ಹೊರಡುವ ಮುಂಚೆ ಶಾಂತಮ್ಮ ದೇವರಿಗೆ ಪೂಜೆ ಮಾಡಿ ಅವನ ಕೈಗೆ ಅಂತ್ರ ಕಟ್ಟಿದರು. ಅದ್ಯಾವ ದೇವರದೆಂದು ಕೇಳುವ ಗೋಜಿಗೂ ಹೋಗಲಿಲ್ಲ ಸೂರಿ. ಮೊದಲು ತನ್ನ ಮನೆಯವರಿಗಿರುವ ಅಪಾಯ ತೊಲಗಬೇಕು ಎಂದು ಪಣತೊಟ್ಟು ನಿಂತ. 
ಅವನ ಅದೃಷ್ಟಕ್ಕೆ ಬೇಗನೆ ವ್ಯಾನಿನ ವ್ಯವಸ್ಥೆಯಾಯಿತು. ಅದರ ಖರ್ಚೆಲ್ಲಾ ಮಾತನಾಡಿಕೊಂಡು ಅದನ್ನು ಮನೆಯ ಮುಂದೆ ತಂದು ನಿಲ್ಲಿಸಿದ. ದೇವಪ್ಪ ತಯಾರಾಗುತ್ತಿದ್ದರು. ಸೂರಿಯೂ ಬೇಗಬೇಗನೆ ಸ್ನಾನ ಮುಗಿಸಿ ಹೊರಡಲು ಅನುವಾದ. ಶಾಂತಮ್ಮ ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗಲು ದೇವಪ್ಪ ಒಪ್ಪಲಿಲ್ಲ. ಹಾಗಾಗಿ ಅವರೂ ಹೊರಡಲು ಅಣಿಯಾದರು. ಇನ್ನು ಹರೀಶನೂ ಅಷ್ಟರಲ್ಲೇ ಮನೆಗೆ ಬರುವುದಕ್ಕಿತ್ತು. ಅವನನ್ನು ಮಾತ್ರ ಯಾಕೆ ಬಿಟ್ಟು ಹೋಗೋದು ಎಂದು ಅವನಿಗೆ ಕಾದು ಕುಳಿತರು. ಸೂರಿಗೆ ಮನೆಯವರೆಲ್ಲರೂ ಹೊರಟದ್ದು ಇಷ್ಟವಿರಲಿಲ್ಲ. ಅದನ್ನು ತನ್ನ ತಂದೆಯ ಹತ್ತಿರ ಹೇಳಿಕೊಂಡ. ಆದರೆ ದೇವಪ್ಪ ಕೇಳಲಿಲ್ಲ. ಅವರಿಗೆ ಯಾರನ್ನೂ ಮನೆಯಲ್ಲಿ ಬಿಟ್ಟು ಹೋಗೋದಕ್ಕೆ ಇಷ್ಟವಿರಲಿಲ್ಲ. ಅದರಲ್ಲೂ ಅವರಿಗೆ ಹಿಂದಿನ ದಿನದ ಘಟನೆಗಳನ್ನು ನೆನೆಸಿಕೊಂಡು ಮತ್ತೆಂದೂ ಈ ಮನೆಗೆ ವಾಪಸ್ಸು ಬರಲೇ ಬಾರದು ಎನ್ನಿಸಿಬಿಟ್ಟಿತ್ತು.
ಎಂಟು ಗಂಟೆ ಸುಮಾರಿಗೆ ಹರೀಶ ಮನೆಗೆ ಬಂದ. ಅವನನ್ನು ಕಾದುಕೊಂಡು ಎಲ್ಲರೂ ಬಾಗಿಲ ಬಳಿಯೇ ನಿಂತಿದ್ದರು. ಹರೀಶನಿಗೆ ಇವರೇಕೆ ಹೀಗೆ ನಿಂತಿದ್ದಾರೆ ಎಂದು ಅನ್ನಿಸಿದರೂ ಅವರ ಮುಖಭಾವದಿಂದ ಅಲ್ಲೇನೋ ಸರಿಯಿಲ್ಲ ಎಂದನಿಸಿತು. ಸೂರಿ ಅವನಿಗೆ ಬೇಗನೆ ಮುಖತೊಳೆದು ತಿಂಡಿ ತಿನ್ನಲು ಹೇಳಿದ. ಅವನು ತಿಂಡಿ ತಿನ್ನುವಾಗ ಅಲ್ಲಿಯವರೆಗೂ ಆದುದನ್ನೆಲ್ಲಾ ಸಂಕ್ಷಿಪ್ತವಾಗಿ ತಿಳಿಸಿದ. ತನಗೆ ತನ್ನ ತಂದೆಯಿಂದ ಫೋನು ಬಂದೆ ಇಲ್ಲವೆಂದು ತಿಳಿದು ಹರೀಶನ ಮುಖ ಬಿಳಿಚಿತು. ಮೊದಲೇ ಹರೀಶ ಶಾಂತಮ್ಮನಂತೆ ಮಹಾನ್ ದೈವಭಕ್ತ. ಅವನಿಗೆ ಇದನ್ನೆಲ್ಲಾ ಪ್ರಶ್ನಿಸುವ ಧೈರ್ಯವೇ ಬರಲಿಲ್ಲ. ಸೂರಿಯೇ ಹೇಳುತ್ತಿರಬೇಕಾದರೆ ಇದು ಯಾವುದೊ ಕೆಟ್ಟ ಶಕ್ತಿಯ ಕುತಂತ್ರವೇ ಇರಬೇಕು ಎಂದು ಸುಮ್ಮನಾದ. ಎಲ್ಲರೂ ತಯಾರಾದ ಮೇಲೆ ಸೂರಿ ಅವರನ್ನು ಕೂರಿಸಿಕೊಂಡು ಹೊರಟ. ಆ ನಾಲ್ಕು ಜನರ ಜೊತೆ ಆ ಕೆಟ್ಟ ಶಕ್ತಿಯೂ ಅವರ ಜೊತೆಗೆ ಅದೇ ವ್ಯಾನಿನಲ್ಲೇ ಇದ್ದುದು ಯಾರಿಗೂ ಗೊತ್ತಾಗಲಿಲ್ಲ. ಅವರೆಲ್ಲರನ್ನೂ ಒಂದೇ ಕಡೆ ಸೇರಿಸುವ ಅದರ ಉಪಾಯ ಫಲಿಸಿತ್ತು.

ಮುಂದುವರೆಯುವುದು.....

ಸೋಮವಾರ, ಮಾರ್ಚ್ 30, 2020

ತೋಟದ ಮನೆ - ಭಾಗ-೧

ತೋಟದ ಮನೆ
ಭಾಗ-೧
ಮುತ್ತಿಗೆ ಹಾಕುವ ಮುನ್ನ
ಸೂರಿ ಮಂಡ್ಯದಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಕಾಲ. ಎರೆಡು ವರ್ಷ ಮುಗಿಸಿ  ಮೂರನೇ ವರ್ಷಕ್ಕೆ ಆಗತಾನೆ ಕಾಲಿಟ್ಟಿದ್ದ. ಅವನ ತಂದೆ ಪೊಲೀಸು ಡೆಪಾರ್ಟ್ಮೆಂಟಿನಲ್ಲಿ ದಫೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ವಂತ ಊರಿಗೆ ಹತ್ತಿರವಾಗಲೆಂದು ಬಹಳಷ್ಟು ಕಷ್ಟ ಪಟ್ಟು ಅವರ ಊರಿಗೇ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದರು. ಮೂರೂವರೆ ಎಕರೆ ಹೊಲದಲ್ಲಿ ಒಬ್ಬ ಅಳನ್ನಿಟ್ಟು ಕೆಲಸ ಮಾಡಿಸುತ್ತಿದ್ದರು. ಸಮಯವಿದ್ದಾಗಲೆಲ್ಲ ಅವರೇ ಖುದ್ದು ಕೆಲಸ ಮಾಡೋರು. ಡ್ಯೂಟಿ ಮೇಲಿದ್ದಾಗ ಆಳಿಗೆ ಹೇಳಿ ಹೋಗೋರು. ಅಷ್ಟೇನೂ ಆಸ್ತಿವಂತರಲ್ಲ,ಆದರೆ ಸುಖೀ ಕುಟುಂಬ.  ಇತ್ತೀಚೆಗಷ್ಟೆತೋಟದಲ್ಲಿಯೇ ದೊಡ್ಡ ಮನೆಯೊಂದನ್ನು ಕಟ್ಟಿಸಿಕೊಂಡು ಅಲ್ಲಿಯೇ ವಾಸವಿದ್ದರು. ತೋಟದ ಮನೆಯಾದ್ದರಿಂದ ಊರಿನಿಂದ ಹೊರಗಿತ್ತು. ಹೆಚ್ಚೇನೂ ಇಲ್ಲ, ಒಂದು ಕಿಲೋಮೀಟರು ಅಷ್ಟೇ. ಸೂರಿ ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದರಿಂದ ಕೆಲಸ-ಕಾರ್ಯಗಳಲ್ಲಿ ಎತ್ತಿದ ಕೈ. ಮನೆಯಲ್ಲಿನ ಕೆಲಸಗಳೆಲ್ಲವನ್ನೂ ಒಬ್ಬನೇ ಮಾಡಿ ಮುಗಿಸುತ್ತಿದ್ದ. ಸೂರಿಗೆ ಒಬ್ಬ ತಮ್ಮನಿದ್ದ. ಹರೀಶ ಎಂದು ಅವನ ಹೆಸರು. ಶಿವಮೊಗ್ಗದಲ್ಲಿ ಪಿ.ಯು.ಸಿ ಮಾಡುತ್ತಿದ್ದ. ಅವನೂ ಕೂಡ ಸೂರಿಯಷ್ಟೇ ಕೆಲಸ-ಕಾರ್ಯಗಳಲ್ಲಿ ಮುಂದು. ಅಣ್ಣ-ತಮ್ಮಂದಿರಿಬ್ಬರೂ ತಂದೆ-ತಾಯಿಗಳಿಗೆ ಎಂದೂ ಮನಸ್ಸಿಗೆ ನೋವು ಮಾಡದಂತೆ ಬದುಕುತ್ತಿದ್ದರು.
ಸೂರಿಗೆ ಕಾಲೇಜು ಶುರುವಾಗಿ ಹದಿನೈದು ದಿನಗಳಾಗಿತ್ತು. ಕಾಲೇಜಿನಲ್ಲಿಯೂ ಕೂಡ ಸೂರಿ ತುಂಬಾ ಒಳ್ಳೆಯ ವಿದ್ಯಾರ್ಥಿ. ದುಡ್ಡಿದ್ದವರು ಮಾಡುವ ಶೋಕಿಯೆಲ್ಲಾ ಇವನಿಗೆ ಹಿಡಿಸದು. ಹಾಸಿಗೆಯಿದ್ದಷ್ಟೇ ಕಾಲುಚಾಚಬೇಕು ಎನ್ನುವುದನ್ನು ಅರಿತಿರುವ ಬುದ್ದಿವಂತ.  ಒಂದು ದಿನ ತಡ ರಾತ್ರಿ ಸೂರಿಗೆ ಅಪ್ಪನ ಫೋನು ಬಂತು. ಅವನ ತಂದೆ ಎಂದಿಗೂ ಹಾಗೆಲ್ಲಾ ತಡರಾತ್ರಿಯಲ್ಲಿ ಫೋನು ಮಾಡುವವರಲ್ಲ. ಹಾಗಾಗಿ,ಸ್ವಲ್ಪ ಕಳವಳಗೊಂಡೇ ಫೋನು ಎತ್ತಿದ. 
"ಹಲೋ..."
"ಏನು ಮಾಡ್ತಿದಿಯೋ ಮಗನೆ?" ಸೂರಿಯ ತಂದೆಯ ಮಾತೇಕೋ ಕಂಪಿಸಿದಂತಿತ್ತು.
"ಏನು ಇಲ್ಲಪ್ಪಾಹೀಗೆ ಕೂತ್ಕೊಂಡಿದ್ದೆ. ಏನಾಯ್ತುಯಾಕೋ ಒಂಥರಾ ಮಾತಾಡ್ತಾ ಇದ್ದೀಯ?"
"ಏನು ಇಲ್ಲಹೀಗೆ ಸುಮ್ಮನೆ ಮಾಡಿದೆ ಅಷ್ಟೇ. ಊಟ ಆಯ್ತಾ?"
ಅಪ್ಪ ಏನೂ ಕಾರಣ ಇಲ್ಲದೆ ಹಾಗೆಲ್ಲಾ ಫೋನು ಮಾಡುವ ಅಸಾಮಿಯೇ ಅಲ್ಲ ಎಂಬುದು ಸೂರಿಗೆ ತಿಳಿದಿತ್ತು.
" ನನ್ನ ಊಟ ಆಯಿತು. ನಿಮ್ಮದು ಆಯ್ತಾ?" 
"ಹ್ಞೂಆವಾಗ್ಲೇ ಆಯಿತು."
ಸೂರಿಗೆ ಅಪ್ಪನ ಮಾತು ತುಂಬಾನೇ ಭಿನ್ನವೆನಿಸಿತು. ತನ್ನ ಅಪ್ಪನ ಜೊತೆಯೇ ಮಾತಾಡುತ್ತಿದ್ದೇನೆಯೇ ಎನ್ನುವಷ್ಟು ಭಿನ್ನ. 
"ಏನಾಯ್ತಪ್ಪಎಲ್ಲರೂ ಚೆನ್ನಾಗಿದ್ದರೆ ತಾನೇ?"
"ಹ್ಞೂ... ಎಲ್ಲರೂ ಚೆನ್ನಾಗಿದಾರೆನೀನೇನು ಯೋಚನೆ ಮಾಡ್ಬೇಡ ಬಿಡು"
ಅವರು ಯೋಚನೆ ಮಾಡ್ಬೇಡ ಎಂದು ಹೇಳಿದ ಮೇಲೆ ಏನೂ ಯೋಚನೆ ಮಾಡೋ ಅಂತ ವಿಷಯವೇ ನಡೆದಿರಬೇಕು ಎಂದು ಸೂರಿಗೆ ದೃಢವಾಯ್ತು.  ಸೂರಿ ತನ್ನ ತಂದೆಗೆ ತಕ್ಷಣವೇ ಮನೆಗೆ ಬರ್ತೀನಿ ಬಿಡು ಎಂದು ಹೇಳಿ ಹಿಂದೂ ಮುಂದು ನೋಡದೆ ನನ್ನ ಪಕ್ಕದ ರೂಮಿನವನಿಂದ ಬಸ್ ಸ್ಟ್ಯಾಂಡಿಗೆ ಬೈಕಿನಲ್ಲಿ ಡ್ರಾಪು ತೆಗೆದುಕೊಂಡು ಊರಿಗೆ ಬಸ್ಸು ಹಿಡಿದ.
ಸೂರಿ ಮನೆ ತಲುಪಿದಾಗ ಬೆಳಗಿನ ಜಾವ ನಾಲ್ಕು ಗಂಟೆ. ಮನೆಯ ಲೈಟು ಇನ್ನು ಹಾಗೆಯೇ ಇತ್ತು. ಸೂರಿಯ ತಂದೆ ಬೆಳಗಿನ ಹೊತ್ತು ಅಷ್ಟು ಬೇಗ ಏಳೋದು ಅಪರೂಪ. ಮನೆಯ ಮುಂದೆ ಆಟೋ ನಿಂತೊಡನೆಯೇ ಅವರಿಗೆ ಸೂರಿಯ ಬರುವಿಕೆ ತಿಳಿದಿತ್ತೆಂದು ಕಾಣುತ್ತದೆಸೂರಿ ಬಾಗಿಲು ಬಡಿಯುವ ಮುಂಚೆಯೇ ಬಾಗಿಲು ತೆರೆದರು. ಅವರನ್ನು ಕಂಡರೆ ನಿದ್ದೆ ಮಾಡಿದವರಂತೆ ಕಾಣಲಿಲ್ಲ. 
"ಏನಾಯ್ತಪ್ಪಯಾಕೆ ಹೀಗೆ ಇದ್ದೀಯಯಾರಿಗಾದ್ರೂ ಏನಾದ್ರು ಅಯ್ತೆನು?" ಸೂರಿ ಕೇಳಿದ.
ಸೂರಿಯ ತಂದೆ ಏನೂ ಮಾತನಾಡದೆ ಸುಮ್ಮನೆ ಇದ್ದರು. ಸೂರಿ ಮತ್ತೊಮ್ಮೆ ಏನಾಯ್ತೆಂದು ಕೇಳಿದರೂ ಅವರು ಏನೂ ಇಲ್ಲವೆಂಬಂತೆ ತಲೆಯಲ್ಲಾಡಿಸಿದರು. ಸೂರಿ ಮೊದಲು ಅವನ ಅಮ್ಮನನ್ನು ಹುಡುಕಿದ. ಅವರು ರೂಮಿನಲ್ಲಿ ಸುಖವಾಗೇ ನಿದ್ದೆ ಮಾಡುತ್ತಿದ್ದರು. ಇನ್ನು ತಮ್ಮನಿಗೆ ಏನಾದರೂ ಆಗಿರಬಹುದೇ ಎಂದು ಅಂದುಕೊಂಡರೂಅಮ್ಮ ಅಷ್ಟು ಚೆನ್ನಾಗಿ ನಿದ್ರೆ ಮಾಡುತ್ತಿರುವಾಗ ಅವನಿಗೆ ಏನೂ ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ಸುಮ್ಮನಾದ. ಬೇಗ ಬೇಗನೆ ಮುಖ ತೊಳೆದು ಅವನೇ ಎರಡು ಲೋಟ ಕಾಫಿ ಮಾಡಿದ. ಸೂರಿಯ ತಂದೆ ಏನೂ ಮಾತನಾಡದೆ ಸುಮ್ಮನೆ ಕುಡಿದರು. ಅವರ ಹವಾ ಭಾವ ನೋಡಿ ಯಾಕೋ ಸೂರಿಗೆ ಬಹಳವೇ ಅನುಮಾನ. ತನ್ನಿಂದೇನೋ ಮುಚ್ಚಿಡುತ್ತಿದ್ದಾರೆ ಎಂದು. 
ಕಾಫಿ ಕುಡಿದ ಮೇಲೆ ಅವರೇ ಮಾತು ಆರಂಭಿಸಿ "ಎಷ್ಟು ದಿನ ರಜೆ ತಗೊಂಡೆ?" ಎಂದರು.
"ಮೂರು ದಿನ"
"ಸರಿಸ್ವಲ್ಪ ಹೊತ್ತು ಮಲಕ್ಕೋ. ನಾನು 6 ಗಂಟೆಗೆ ಏಳಿಸ್ತೀನಿದೇವಸ್ಥಾನಕ್ಕೆ ಹೋಗ್ಬೇಕು."
ಸೂರಿ ಆಗೆಲ್ಲಾ ದೇವಸ್ಥಾನಗಳಿಗೆ ಹೋಗೋದು ಅತೀ ವಿರಳವಿತ್ತು. ಯಾರಾದರೂ ಕುತ್ತಿಗೆ ಹಿಡಿದು ಎಳೆದುಕೊಂಡು ಹೋದರೆ ಮಾತ್ರ ಹೋಗುತ್ತಿದ್ದ. ಅಪ್ಪ-ಅಮ್ಮನ ಜೊತೆಯಂತೂ ಹೋಗುತ್ತಲೇ ಇರಲಿಲ್ಲ. ಅವರ ಆಚಾರ-ವಿಚಾರಗಳು ಅವನಿಗೆ ಅಷ್ಟೊಂದು ಹಿಡಿಸದಿದ್ದುದೇ ಅದಕ್ಕೆ ಕಾರಣ. ಆದರೆ ಇವತ್ಯಾಕೋ ಅಪ್ಪ ಹೇಳಿದ ರೀತಿಯಲ್ಲಿ ಸೂರಿಗೆ ಇದು ಮುಖ್ಯ ಕೆಲಸವೇ ಇರಬೇಕು ಎನ್ನಿಸಿತು. ಆಯ್ತು ಎಂದು ಹೇಳಿ ಮಲಗಿದ.
ಸೂರಿಯನ್ನು ಅವನ ಅಪ್ಪ ಎಳಿಸಿದಾಗ ಆಗಲೇ 6.30 ಆಗಿತ್ತು. ಬೇಗಬೇಗನೆ ಸ್ನಾನ ಮುಗಿಸಿ ಇನ್ನೊಂದು ಲೋಟ ಕಾಫಿ ಕುಡಿದ. ಅವನ ಅಮ್ಮನಿನ್ನೂ ಮಲಗೇ ಇದ್ದರು.
"ಯಾವ ದೇವಸ್ಥಾನಕ್ಕೆ ಹೋಗ್ತಿರೋದು?"
"ನಮ್ಮ ಮನೆದೇವರಿಗೆ "
ಅವರು ಮನೆಯಿಂದ ಹೊರಡುವಷ್ಟರಲ್ಲಿ ಸೂರಿಯ ತಾಯಿ ಎದ್ದು ಸೂರಿಯನ್ನು ನೋಡಿ ಆಶ್ಚರ್ಯಗೊಂಡರು. ಅವರಿಗೆ ಸೂರಿ ಬರುವ ವಿಷಯವೇ ತಿಳಿದಿರಲಿಲ್ಲ. ಸೂರಿ ಹೀಗೆ ಇದ್ದಕ್ಕಿದ್ದಂತೆ ಬಂದುದನ್ನು ಕಂಡು ಸ್ವಲ್ಪ ಕಳವಳಗೋಡು "ಯಾಕೆ ಹೀಗೆ ಹೇಳದೆ ಕೇಳದೆ ಬಂದಿದಿಯಏನಾದ್ರು ತೊಂದರೆ ಆಯ್ತೆನು?". ಸೂರಿ ಅವನ ಅಮ್ಮನಿಗೆ ಏನೋ ಒಂದು ಸಬೂಬು ಹೇಳಿ ನುಣುಚಿಕೊಂಡ. ಅವನ ಅಮ್ಮನಿಗೆ ಇನ್ನೂ ಅನುಮಾನ ಹಾಗೇ ಇತ್ತು.  
ಸೂರಿಯ ತಾಯಿಗೆ ತಂದೆ-ಮಗ ಬೆಳ್ಳಂಬೆಳಗ್ಗೆ ಎಲ್ಲಿಗೆ ಹೊರಟಿದ್ದಾರೆಂದು ಗೊತ್ತಿರಲಿಲ್ಲ. ಅವರು ಇಬ್ಬರನ್ನೂ ಬಾಗಿಲವರೆಗೂ ಹಿಂಬಾಲಿಸಿ ನೋಡುತ್ತಲೇ ಇದ್ದರು. ಅವರು ಹೊರಟಿರುವಾಗ 'ಎಲ್ಲಿಗೆ?' ಎಂದು ಕೇಳೋಕೆ ಸುರಿಯ ತಾಯಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವರೇ ಹೇಳಲಿ ಎಂದು ಕಾಯುತ್ತಾ ನಿಂತರು. ಅಪ್ಪ-ಮಗ ಇಬ್ಬರೂ ಏನು ಮಾತನಾಡದೆ ಸುಮ್ಮನೆ ಹೊರಟದ್ದನ್ನು ನೋಡಿ ವಿಧಿಯಿಲ್ಲದೆ "ಯಾವ ಕಡೆಗೆ ಹೋಗ್ತಾ ಇದಿರಿ?" ಎಂದು ಕೇಳಿದರು. ಸೂರಿಯ ತಂದೆಗೆ ಸ್ವಲ್ಪ ಕಸಿವಿಸಿಯಾದರು, "ಸ್ವಲ್ಪ ಮನೆದೇವರಿಗೆ ಹೋಗಿ ಬರ್ತೀವಿ. ಏನೋ ಕೆಲಸ ಇದೆ" ಎಂದರು. ಸೂರಿಯ ತಾಯಿಗೆ ತನ್ನ ಮಗನೂ ದೇವಸ್ಥಾನಕ್ಕೆ ಹೊರಟಿರುವುದು ಅನುಮಾನದ ಹುತ್ತವನ್ನೇ ಹುಟ್ಟುಹಾಕಿತು. ಅವನು ದೇವಸ್ಥಾನಕ್ಕೆ ಸುಮ್ಮ-ಸುಮ್ಮನೆ ಹೋಗುವವನಲ್ಲ ಎಂದು ಅವರಿಗೂ ತಿಳಿದಿತ್ತು. ಆದರೆ ದೇವಸ್ಥಾನಕ್ಕೆ ಹೊರಟವರಿಗೆ ನೂರೊಂದು ಪ್ರಶ್ನೆ ಹಾಕೋದು ಒಳ್ಳೆಯದಲ್ಲ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಂಡರು.
ತಂದೆಯ ಮನಸ್ಸು ಯಾಕೋ ಸರಿ ಇಲ್ಲದ್ದನ್ನು ಗಮನಿಸಿದ್ದ ಸೂರಿ ಬೈಕನ್ನು ತಾನೇ ಓಡಿಸಲು ಮುಂದಾದ. ಸೂರಿಯ ತಂದೆಯೂ ಏನು ಹೇಳದೆ ಸುಮ್ಮನೆ ಹಿಂದಿನ ಸೀಟಿನಲ್ಲಿ ಕುಳಿತುಕೊಂಡರು. ಸೂರಿ ಬೈಕು ಓಡಿಸಿಕೊಂಡು ರಸ್ತೆಯಲ್ಲಿ  ಕಾಣೆಯಾಗುವವರೆಗೂ ಸೂರಿಯ ತಾಯಿ ಬಾಗಿಲ ಬಳಿಯಲ್ಲಿಯೇ ನಿಂತು ನೋಡುತ್ತಿದ್ದರು. ಅವರಿಗೆ ಏನೋ ನಡೆದಿದೆ ಎಂಬ ಬಲವಾದ ಅನುಮಾನ. ಎಲ್ಲರಿಗೆ ಒಳ್ಳೆಯದಾಗಲಿ ಎಂದು ಮೊದಲು ದೇವರಿಗೆ ಪೂಜೆ ಮಾಡಬೇಕೆಂದು ಮನೆಯೊಳಗೇ ನಡೆದರೂ.
ಸುಮಾರು ಮೂವತ್ತು ಕಿಲೋಮೀಟರು ಆದ ಮೇಲೆ ಒಂದು ಕಡೆ ಹೋಟೆಲು ನೋಡಿಕೊಂಡು ಸೂರಿ ಬೈಕು ನಿಲ್ಲಿಸಿದ. ಇಬ್ಬರೂ ಒಂದೊಂದು ದೋಸೆ ಹೇಳಿ ಟೇಬಲ್ಲಿನ ಮುಂದೆ ಕುಳಿತರುಸೂರಿಗೆ ಅಪ್ಪನನ್ನು ಮಾತನಾಡಿಸಲು ಇದೇ ಒಳ್ಳೆಯ ಸಮಯವೆನಿಸಿತು. ಅಷ್ಟರಲ್ಲಿ ಅವರೇ ಮಾತು ಶುರು ಮಾಡಿದರು.
"ಯಾಕೋ ಈಗೀಗ ರಾತ್ರಿ ಹೊತ್ತಲ್ಲಿ ನಂಗೆ ಏನೇನೋ ಕನಸು ಬೀಳ್ತವೆ. ಕೆಟ್ಟ ಕೆಟ್ಟ ಕನಸುಗಳು. ನಿದ್ರೇನೇ ಬರಲ್ಲ."
ಅಪ್ಪ ಕೆಟ್ಟ ಕನಸು ಬೀಳ್ತವೆ ಎಂದು ಹೇಳೋದು ಕೇಳಿ ಸೂರಿಗೆ ನಗೂನೆ ಬಂತು. ಚಿಕ್ಕವನಿದ್ದಾಗ ಸೂರಿ ಅಪ್ಪನಿಗೆ  ಯಾವಾಗ್ಲೂ ಹೇಳುತ್ತಿದ್ದ ಡೈಲಾಗ್ ಅದು. ಆದರೆ ಅವರು ತಮಾಷೆ ಮಾಡ್ತಾ ಇರಲಿಲ್ಲ. ಅದೂ ಅಲ್ಲದೆ ಬರೀ ಕೆಟ್ಟ ಕನಸುಗಳಿಗೆಲ್ಲಾ ಅಪ್ಪ ಹೆದರೋ ಅಸಾಮಿಯೇ ಅಲ್ಲ ಎಂದು ಗೊತ್ತಿದ್ದರಿಂದ ಸುಮ್ಮನೆ ಕೇಳಿಸಿಕೊಂಡ. 
ಮೊದಲೆಲ್ಲಾ ಬರೀ ಕನಸು ಅಂತ ಅಂದ್ಕೊಂಡು ಸುಮ್ನಾಗಿ ಬಿಡ್ತಿದ್ದೆ. ಆದ್ರೆ ಈಗೀಗ ಏನೋ ಒಂಥರಾ ಅನ್ಸುತ್ತೆ ಮನೇಲಿ.” ಈ ಮಾತು ಹೇಳ್ತಿರೋದು ಅಪಾನೇನ ಅನ್ನುವಷ್ಟು ಆಶ್ಚರ್ಯ ಸೂರಿಗೆ. ಸೂರಿ ಚಿಕ್ಕವನಿದ್ದಾಗ ಟೀವಿಲಿ ಬರೋ ಜಿರಳೆಗಳಿಗೂ ಹೆದರುತ್ತಿದ್ದ ತನಗೆ ಧೈರ್ಯ ತುಂಬಿದ್ದ ಅಪ್ಪ ಇಂಥ ಮಾತು ಹೇಳುತ್ತಿದ್ದಾರೆ ಎಂದರೆ ವಿಷಯ ಯಾಕೋ ತುಂಬಾ ಗಂಭೀರವೇ ಇರಬೇಕು ಅನ್ನಿಸಿತು.
"ಒಂಥರಾ ಯಾರೋ ಮನೇಲಿ ಓಡಾಡಿದಂಗೆ ಅನ್ಸುತ್ತೆ. ಮಲಗಿರ್ಬೇಕಾದ್ರೆ ತಲೆ ಸವರಿದಂಗೆಕೈ ಎಳೆದಂಗೆಜೋರಾಗಿ ಅಲ್ಲಾಡಿಸಿದಂಗೆ ಆಗುತ್ತೆ. ಮೊದ್ಲೆಲ್ಲಾ ನಾನೂ ಇದೆಲ್ಲಾ ಮನಸಲ್ಲಿ ಅಷ್ಟೇ ಆಗ್ತಿರೋದು ಅಂದ್ಕೊಂಡು ಸುಮ್ನಾಗಿದ್ದೆ. ಆದ್ರೆ ಮೊನ್ನೆ ರಾತ್ರಿ ಯಾರೋ ಕಿಟಕಿ ಹತ್ರ ನಿಂತ್ಕೊಂಡು ನನ್ನ ಹೆಸರನ್ನ ಜೋರಾಗಿ ಕಿರುಚೋ ತರ ಆಯ್ತು. ಎಷ್ಟು ಜೋರಾಗಿ ಅಂದ್ರೆ ನಾನು ಅದುರುಬಿದ್ದು ಎದ್ದೆ. ನೋಡಿದ್ರೆ ಕಿಟಕಿ ಹತ್ರ ಏನೋ ನೆರಳು. ನಾನು ಏನದು ಅಂತ ಇನ್ನೂ ಮಲಗಿದ್ದಲ್ಲೇ ನೋಡ್ತಾ ಇರ್ಬೇಕಾದ್ರೆ ಇನ್ನೊಂದ್ಸರಿ ಜೋರಾಗಿ ನನ್ನ ಹೆಸರು ಕಿರುಚಿದ ಹಾಗೆ. ಶಬ್ದ ಮಾತ್ರ ಕಿಟಕಿ ಕಡೆಯಿಂದಲೇ ಬಂದದ್ದು. ನಿಮ್ಮಮ್ಮ ಪಕ್ಕದಲ್ಲೇ ಮಲಗಿದ್ಲು. ಆದ್ರೆ ಅವ್ಳಿಗೆ ಅದು ಕೇಳೇ ಇಲ್ಲ ಅನ್ನೋ ಹಾಗೆ ಮಲಗೇ ಇದ್ಲು. ನಂಗ್ಯಾಕೋ ಇದೆಲ್ಲ ಸರಿ ಬರ್ಲಿಲ್ಲ. ಅದಕ್ಕೆ ನಿನಗೆ ಫೋನು ಮಾಡಿದ್ದು."
ಅಪ್ಪ ಅದನ್ನೆಲ್ಲಾ ಹೇಳುವಾಗ ಸೂರಿಗೆ ಕುತೂಹಲದ ಜೊತೆ ಅನುಮಾನವೂ ಮೂಡಿದ್ದು ನಿಜ. ಆದರೆ ಅಪ್ಪನ ಬಾಯಿಂದ ಇಂತಹ ವಿಷಯಗಳು ನಿಜವಲ್ಲದೆ ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಅವನಿಗೆ ಗೊತ್ತಿತ್ತುಆದರೆ ಅಮ್ಮನಿಗೆ ಕೇಳಿಸದ್ದು ಅಪ್ಪನಿಗೆ ಕೇಳಿದ್ದು ಹೇಗೆಅದೂ ಅವರು ಎದ್ದ ಮೇಲೆಯೂ!! ಅಪ್ಪನಿಗೆ ಮಲಗಿರುವಾಗ ಸ್ವಲ್ಪವೇ ಸ್ವಲ್ಪ ಶಬ್ದವಾದರೂ ಸಾಕು ಎದ್ದುಬಿಡುತ್ತಿದ್ದರು. ಆದರೆ ಅಮ್ಮ ಅಪ್ಪನಿಗಿಂತಲೂ ಸೂಕ್ಷ್ಮ. ಹಾಗೇನಾದರೂ ನಿಜವಾಗಿಯೂ ಶಬ್ದ ಬಂದಿದ್ದೇ ಆದಲ್ಲಿ ಅದು ಅಮ್ಮನಿಗೇ ಮೊದಲು ಕೇಳಬೇಕಿತ್ತು. ಅಪ್ಪನ ಮಾತುಗಳು ಯಾಕೋ ಸೂರಿಗೆ  ನಿಗೂಢವೆನಿಸಿದವು.
"ಅಮ್ಮನಿಗೆ  ಇದನ್ನೆಲ್ಲಾ ಹೇಳಿದ್ಯಾ?"
''ಇಲ್ಲ. ಇದನ್ನೆಲ್ಲಾ ಹೇಳಿದ್ರೆ ನಿಮ್ಮಮ್ಮ ಸುಮ್ನೆ ಇರ್ತಾಳಅವ್ಳಿಗೆ ಹೇಗೆ ಹೇಳೋದು ಅಂತಾನೂ ನನಗೆ ಗೊತ್ತಾಗ್ತಿಲ್ಲ."
ದೇವರ ವಿಷಯದಲ್ಲಿ ಸೂರಿಯ ತಂದೆಗಿಂತ ಸೂರಿಯ ತಾಯಿಗೇ ಹೆಚ್ಚು ನಂಬಿಕೆ. ಅವರು ದೇವರನ್ನು ಎಷ್ಟು ನಂಬುತ್ತಿದ್ದರು ಎಂದರೆ ಸೂರಿಯ ತಂದೆ ಏನಾದರೂ ನಿಜವಾಗ್ಯೂ ಅವರಿಗೆ ಇದನ್ನೆಲ್ಲಾ ಹೇಳಿದ್ದರೆ "ಛೆ ಛೆದೇವರಿದ್ದಾಗ ಇಂಥಾದ್ದೆಲ್ಲಾ ಆಗೋದುಂಟಾ! ಬಿಡಿ ಬಿಡಿಸುಮ್ನೆ ದೇವ್ರು ಹೆಸರು ಹೇಳ್ಕೊಂಡು ಮಲಕ್ಕೊಳಿ" ಅನ್ನೋದು ಗ್ಯಾರಂಟಿ.
"ನಿನ್ನೆ ರಾತ್ರಿಯಂತೂ ಇನ್ನೂ ಜಾಸ್ತಿಯಾಯ್ತು.” ಸೂರಿಯ ತಂದೆ ಮುಂದುವರೆಸಿದರು. ನಾನು ಮಲಗಿದ್ದಾಗ ಯಾರೋ ಬಂದು ಕಿವಿಯ ಹತ್ತಿರವೇ ನಿಂತು ಉಸಿರಾಡುತ್ತಿದ್ದ ಹಾಗೆ. ನನಗೆ ತಕ್ಷಣವೇ ಎಚ್ಚರವಾಯ್ತು. ಅತ್ತಿತ್ತ ತಿರುಗಿ ನೋಡಿದರೆ ಯಾರೂ ಇರಲಿಲ್ಲ. ಯಾವುದಕ್ಕೂ ಲೈಟು ಹಾಕಿ ನೋಡಿದೆ. ರೂಮು ಬಾಗಿಲು ಹಾಕಿದ್ದು ಹಾಗೆ ಇತ್ತು. ನಿಮ್ಮಮ್ಮ ಪಕ್ಕದಲ್ಲಿ ಮಲಗಿದ್ದಳು. ಎಲ್ಲವು ಇದ್ದ ಹಾಗೇ ಇತ್ತು. ಆದರೆ ಮನಸ್ಸಿಗೇಕೋ ಯಾರೋ ಇದ್ದಾರೆ ಅನ್ನುವ ಬಲವಾದ ಅನುಮಾನ. ಹಾಗಾಗಿ ಹಾಗೇ ಲೈಟು ಹಾಕಿಕೊಂಡೆ ಮಲಗಿದೆ. ಸ್ವಲ್ಪ ಹೊತ್ತು ಏನೂ ಆಗಲಿಲ್ಲ. ನನಗೂ ನಿದ್ರೆ ಬಂತು. ಆದರೆ ಒಂದೊತ್ತಿನಲ್ಲಿ ಯಾಕೋ ಇದ್ದಕ್ಕಿದ್ದಂತೆ ಎಚ್ಚರವಾಯ್ತು. ಯಾಕೆಂದು ಬೇಗನೇ ಗೊತ್ತಾಗಲಿಲ್ಲ. ಲೈಟು ಹಾಗೇ ಇದ್ದುದರಿಂದ ಎಲ್ಲವು ಸರಿಯಾಗೇ ಕಾಣುತ್ತಿತ್ತು. ಮತ್ತೆ ಯಾರೋ ಕಿಟಕಿಯ ಹತ್ತಿರ ನಿಂತಿರುವ ಹಾಗೆ ಅನ್ನಿಸಿತು. ನಾನು ಕಣ್ಣುಜ್ಜಿಕೊಂಡು ನೋಡಿದೆ. ಆದರೆ ಬರೀ ಕತ್ತಲೆ. ಕಿಟಕಿಯಿಂದ ನಾನಿದ್ದದ್ದು ಬರೀ ಮೂರು ಅಡಿ ದೂರ. ಲೈಟು ಬೇರೆ ಆನ್ ಇತ್ತು. ಲೈಟು ಆನಿದ್ದರೂ ಏನೂ ಕಾಣಿಸದೆ ಇರೋಕೆ ಸಾಧ್ಯವೇ ಇರಲಿಲ್ಲ. ಆದರೆ ಕಂಡಿದ್ದು ಮಾತ್ರ ಬರೀ ನೆರಳಷ್ಟೇ. ಇದ್ದಕ್ಕಿದ್ದಂತೆ ನನ್ನ ಕುತ್ತಿಗೆಯ ಸುತ್ತಲೂ ತಣ್ಣನೆಯ ಗಾಳಿ ಸುಳಿದಂತಾಯ್ತು. ಯಾರೋ ಕುತ್ತಿಗೆಯ ಹತ್ತಿರ ಉಸಿರಾಡಿದಂತೆ. ಆ ಉಸಿರು ಎಷ್ಟೊಂದು ತಣ್ಣಗಿತ್ತೆಂದರೆ ಮಂಜಿನಗಡ್ಡೆಯಷ್ಟು. ನನ್ನ ಮೈಕೆಯೆಲ್ಲಾ ತಣ್ಣಗಾಗಿ ಚಳಿಯಾದಂತೆನಿಸಿತು."
ಸೂರಿಯ ತಂದೆಯ ಹೆಸರು ದೇವಪ್ಪ. ಅವರು ಪೊಲೀಸು ಆಫೀಸರು ಆಗಿದ್ದರಿಂದ ಅದೆಷ್ಟೋ ರಾತ್ರಿಗಳನ್ನು ಬೈಕಿನಲ್ಲಿ ಕೊರೆಯುವ ಚಳಿಯಲ್ಲೇ ನೈಟ್ ಡ್ಯೂಟಿ ಮಾಡಿದ್ದುಂಟು. ಎಂತಹ ಚಳಿಗಾಲದಲ್ಲಿಯೂ ಬೆಳ್ಳಂಬೆಳಗ್ಗೆ ಎದ್ದು ವಾಕಿಂಗ್ ಹೋಗುವ ಅವರೇ ಚಳಿ ಎಂದು ಹೇಳುತ್ತಿದ್ದಾರೆಂದರೆ ಅದು ನಿಜವಾಗಿಯೂ ಕೊರೆಯುವ ಚಳಿಯೇ ಇರಬೇಕು ಎಂದು ಸೂರಿ ಅಂದುಕೊಂಡ.. 
ಈ ಮುಂಚೆ ದೇವಪ್ಪ ಎಂದೂ ಸೂರಿಯ ಹತ್ತಿರ ಹೀಗೆಲ್ಲಾ ಮಾತನಾಡಿದವರಲ್ಲ. ಅದೂ ದೆವ್ವ-ಭೂತಗಳ ಬಗ್ಗೆ ಅವರಿಬ್ಬರ ನಿಲುವುಗಳೇ ಬೇರಿದ್ದವು. ಅದನ್ನೆಲ್ಲಾ ನಂಬುವವರು ಸೂರಿಯ ಸಂಬಂಧಿಕರಲ್ಲಿ ಬೇಕಾದಷ್ಟು ಜನ ಇದ್ದರು. ಅವರನ್ನೆಲ್ಲಾ ಬಿಟ್ಟು ದೇವಪ್ಪ ಇದನ್ನೆಲ್ಲಾ ನನ್ನ ಹತ್ತಿರ ಯಾಕೆ ಹೇಳಿಕೊಳ್ಳುತ್ತಿದ್ದರೋ ಎಂದು ಸೂರಿಗೆ ಅರ್ಥವಾಗಲಿಲ್ಲ.
"ಬೇರೆ ಯಾರಿಗಾದ್ರೂ ಇದನ್ನೆಲ್ಲಾ ಹೇಳಿದಿಯೇನಪ್ಪಾ?" ಸೂರಿ ಕೇಳಿದ.
 "ಯಾರಿಗೆ ಹೇಳ್ಬೇಕು ಅಂತಾನೇ ಗೊತ್ತಾಗ್ಲಿಲ್ಲ"
"ಹೋಗ್ಲಿ ಬಿಡು. ಆದ್ರೆ ಇವಾಗ ಯಾಕೆ ಮನೆದೇವರಿಗೆ ಹೋಗ್ತಿದೀವಿ?"
"ಯಾಕೋ ಮನ್ಸಿಗೆ ಸಮಾಧಾನನೇ ಆಗ್ತಾ ಇರ್ಲಿಲ್ಲ. ಅದಕ್ಕೆ ನಿನ್ನೆ ರಾತ್ರಿನೇ ಹೋಗೋಣ ಅಂದ್ಕೊಂಡಿದ್ದೆ. ಇವತ್ತು ನೀನು ಬಂದಿದ್ದು ಒಳ್ಳೇದೇ ಆಯಿತು. ಒಬ್ನೇ ಹೋಗೋಕೆ ನಂಗೂ ಕಷ್ಟ ಆಗಿರೋದು."
"ಆದ್ರೆ ಮನೆ ದೇವ್ರಿಗೆ ಯಾಕಪ್ಪ ಹೋಗ್ತಾ ಇದೀವಿಅಲ್ಲಿಗೆ ಹೋಗು ಅಂತ ಯಾರಾದ್ರೂ ಹೇಳಿದ್ರೇನು?"
"ಹಾಗೇನಿಲ್ಲ...ಯಾಕೋ ನಂಗೆ ಹಾಗನ್ನಿಸ್ತು.... ಹೋಗಿಬಂದ್ರೆ ಸ್ವಲ್ಪ ಸಮಾಧಾನ ಆಗಬಹುದೇನೋ ಅಂತ..."
ಆದರೆಅವರಿಗೆ ಯಾರ ಬಳಿ ಮೊದಲು ಹೋಗಬೇಕು ಎಂದು ಗೊತ್ತಾಗದೆಮನಸ್ಸಿಗೆ ಸಮಾಧಾನವಾಗಲೆಂದು ಮೊದಲು ಮನೆದೇವರಿಗೆ ಹೊರಟರು. 
ಅವರ ಮನೆದೇವರ ದೇವಸ್ಥಾನ ಇದ್ದದ್ದು ಒಂದು ಕಗ್ಗಾಡಿನಲ್ಲಿರುವ ಹಳ್ಳಿಯಲ್ಲಿ. ಅದನ್ನು ಇತ್ತೀಚೆಗಷ್ಟೇ ಪುನರ್ನಿರ್ಮಾಣ ಮಾಡಿದ್ದರು. ಆ ದೇವಸ್ಥಾನದಲ್ಲಿ ಪೂಜೆ ನಡಿಯೋದು ವಾರಕ್ಕೆ ಒಂದೇ ದಿನ. ಉಳಿದ ದಿನವೇನಾದ್ರು ಹೋದರೆ, ಹೋದವರೇ ಪೂಜೆ ಮಾಡ್ಕೊಂಡು ಬರಬೇಕಿತ್ತು. ದೇವಪ್ಪ ಹಲವಾರು ಬಾರಿ ಅಲ್ಲಿಗೆ ಹೋಗಿದ್ದರಿಂದ ಅವರಿಗೆ ಅಲ್ಲಿಯ ಪೂಜಾರಿಯ ಪರಿಚಯ ಚೆನ್ನಾಗಿಯೇ ಇತ್ತು. ಹಾಗಾಗಿ ಅವರು ಮೊದಲು ಪೂಜಾರಿಯ ಮನೆಗೇ ಹೋಗಿ ಅಲ್ಲಿಂದ ಪೂಜಾರಿಯನ್ನು ಕರೆದುಕೊಂಡು ಬಂದರು. 
ದೇವಪ್ಪ ಯಾವಾಗಲೂ ಪೂಜೆಯ ದಿನವೇ ಬರುತ್ತಿದ್ದುದರಿಂದ ಅವರು ಹೀಗೆ ಅನಾಮತ್ತಾಗಿ ಬಂದದ್ದು ಪೂಜಾರಿಗೂ ಯಾಕೋ ಸರಿ ಕಾಣಲಿಲ್ಲ ಎನಿಸುತ್ತದೆ. ಅವರು ಪದೇ ಪದೇ ದೇವಪ್ಪನನ್ನು "ಏನು ವಿಷಯ ಹೀಗೆ ಇದ್ದಕ್ಕಿದ್ದಂತೆ ಬಂದುಬಿಟ್ಟಿದ್ದೀರಿ?" ಎಂದು ಕೇಳುತ್ತಲೇ ಇದ್ದರು. ದೇವಪ್ಪ ಹೇಗೋ ಅವರಿಗೆ ಅದೂ ಇದೂ ಹೇಳಿ ಪೂಜೆ ಮುಗಿಯುವತನಕ ಕಾದಿದ್ದು ಅನಂತರ ಅವರೊಡನೆ ಕುಳಿತು ನಡೆದದ್ದನ್ನೆಲ್ಲಾ ಹೇಳಿದರು. 
ಇಂತಹ ವಿಷಯಗಳನ್ನು ಅವರಿವರ ಮುಂದೆ ಹೇಳುವಾಗ ಯಾರೇ ಆಗಲಿ ಕಟ್ಟೆಚ್ಚರ ವಹಿಸುವುದು ಅತಿ ಮುಖ್ಯ. ಯಾಕೆಂದರೆಜನರ ತೊಂದರೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಬಕಪಕ್ಷಿಗಳನ್ನು ನಾನು ನೋಡಿದ್ದೇನೆ. ಈಗೀಗಂತೂ ಅಂತಹವರೇ ಹೆಚ್ಚಿಗೆ ಕಾಣೋದು. 
ಪೂಜಾರಿಯು ತುಂಬಾ ಹೊತ್ತು ಗಾಢವಾಗಿ ಯೋಚನೆ ಮಾಡಿದ ನಂತರ  "ನನಗೆ ಇಂತಹ ವಿಷಯಗಳಲ್ಲಿ ಅಷ್ಟೇನೂ ಅನುಭವವಿಲ್ಲ. ನಿಮಗೆ ಸುಳ್ಳು ಹೇಳಿ ವಂಚನೆ ಮಾಡೋಕೂ ನನಗೆ ಇಷ್ಟವಿಲ್ಲ. ಹಾಗಾಗಿನೀವು ಈ ವ್ಯಕ್ತಿಯನ್ನು ಕಂಡು ನಿಮ್ಮನ್ನು ನಾನು ಕಳುಹಿಸಿದ್ದೇನೆ ಎಂದು ಹೇಳಿದರೆ ಮುಂದಿನ ಕೆಲಸ ಅವರು ನೋಡಿಕೊಳ್ಳುತ್ತಾರೆ" ಎಂದು ವ್ಯಕ್ತಿಯೋರ್ವರ ಹೆಸರು ಮತ್ತು ವಿಳಾಸ ಹೇಳಿದರು. ಸೂರಿ ಅದನ್ನು ಒಂದು ಚೀಟಿಯಲ್ಲಿ ಬರೆದುಕೊಂಡ. 
ಅವರ ಮಾತಿನ ಧಾಟಿಯಲ್ಲಿ ಅವರೊಬ್ಬ ಮಾಟ-ಮಂತ್ರ ಮಾಡುವವರ ಹತ್ತಿರ ದೇವಪ್ಪನನ್ನು ಕಳುಹಿಸುತ್ತಿದ್ದಾರೆ ಎನ್ನುವುದು ಸೂರಿಗೆ ಸ್ಪಷ್ಟವಾಯ್ತು. ಪೂಜಾರಿಯು ಅತೀ ವಿಶ್ವಾಸದಿಂದಲೇ ಆ ವ್ಯಕ್ತಿಯ ಬಗ್ಗೆ ಮಾತನಾಡಿದರು ಸೂರಿಗೆ ಇದು ಮಾಟ-ಮಂತ್ರದಿಂದ ಮುಗಿಯುವ ತೊಂದರೆಯಂತೆ ಕಾಣಲಿಲ್ಲ. 
ಸೂರಿ ಮತ್ತು ದೇವಪ್ಪ ಬೇರಾಗುವವರೆಗೂ ಕಾದುಸೂರಿಯ ಮನದ ಆಲೋಚನೆಗಳನ್ನು ತಿಳಿದವರ ಹಾಗೆ ಆ ಪೂಜಾರಿಯು ಸುರಿಯನ್ನುದ್ದೇಶಿಸಿ ಹೇಳಿದರು "ಮಾಟ-ಮಂತ್ರದ ಬಗ್ಗೆ ಹಾಗೆಲ್ಲಾ ಯೋಚನೆ ಮಾಡ್ಬೇಡ." 
ಸೂರಿಗೆ ಅವರೇಕೆ ಹಾಗೆ ಹೇಳಿದರು ಎನ್ನುವುದಕ್ಕಿಂತ ಅವನು ಮನಸ್ಸಿನಲ್ಲಿ ಅಂದುಕೊಂಡದ್ದು ಪೂಜಾರಿಗೆ ಗೊತ್ತಾಯ್ತೆ ಎಂದೆನಿಸಿತು. ಸೂರಿಯ ದಿಗ್ಬ್ರಮೆಯ ನೋಟ ನೋಡಿ ಪೂಜಾರಿಯು "ಕೆಲವೊಮ್ಮೆ ನಮ್ಮ ಯೋಚನೆಗೂ ಮತ್ತು ತರ್ಕಕ್ಕೂ ಸಿಲುಕದ್ದು ಈ ಪ್ರಪಂಚದಲ್ಲಿ ಕಂಡುಬರುತ್ತದೆ. ನಿನಗಿದು ಹೊಸತಿರಬಹುದು. ಹಾಗಾಗಿ ನಾನು ನಿನ್ನ ಬಗ್ಗೆ ಬೇಜಾರಾಗಲಿಕೋಪವಾಗಲಿ ಮಾಡಿಕೊಳ್ಳುವುದಿಲ್ಲ. ಇವತ್ತು ರಾತ್ರಿ ನಿಮ್ಮ ಮನೆಯಲ್ಲಿಯೇ ಮಲಕ್ಕೋ. ನಿನಗೆ ಗೊತ್ತಾಗುತ್ತೆ"  ಅಂದರು.
ಸೂರಿಗೆ ಅವರು ಹೇಳಿದ್ದು ಸ್ವಲ್ಪ ಎಚ್ಚರಿಕೆ ಕೊಟ್ಟಹಾಗೆ ಕಂಡಿತು. ತನ್ನನ್ನು ಹೆದರಿಸಲೇನಾದರೂ ಹಾಗೇ ಹೇಳುತ್ತಿರಬಹುದೇ ಎಂದು ಮನದಲ್ಲೇ ಅಂದುಕೊಂಡ.
ಆದರೆ ಅದನ್ನೂ ತಿಳಿದವರಂತೆ ಪೂಜಾರಿಯು ಮತ್ತೊಮ್ಮೆ ಸೂರಿಯನ್ನು ದಿಗ್ಭ್ರಮೆಗೊಳಿಸಿದರು. " ನಿನ್ನನ್ನು ಹೆದರಿಸುವುದರಿಂದ ನನಗೇನು ಸಿಗೋದಿಲ್ಲ ಎನ್ನೋದು ನಿನಗೂ ಗೊತ್ತಿದೆಯಲ್ಲವೇ!?" 
ಸೂರಿಗೆ ಪೂಜಾರಿಯು ಆಲೋಚನೆಗಳನ್ನು ಕೇಳಿಸಿಕೊಳ್ಳುವ ಯಾವುದೊ ಮಾಯಾವಿಯಂತೆಯೇ ಕಂಡರು.
"ತರ್ಕಕ್ಕೆ ಸಿಲುಕದ್ದು ಅಂದರೆ?"
"ತರ್ಕಕ್ಕೆ ಸಿಲುಕದ್ದು ಅಂದರೆ ಉತ್ತರವಿದ್ದೂ ಉತ್ತರವಿಲ್ಲದ್ದು ಎಂದರ್ಥ."
"ನನಗೆ ನಿಮ್ಮ ಮಾತೇ ಅರ್ಥವಾಗುತ್ತಿಲ್ಲ ಸ್ವಾಮಿಗಳೇ. ಸ್ವಲ್ಪ ಬಿಡಿಸಿ ಹೇಳುವಿರೇನು?"
ಪೂಜಾರಿಗಳು ಏನೂ ಹೇಳದೆ ಸುಮ್ಮನೆ ನಕ್ಕು ಅಪ್ಪನ ದೇವಪ್ಪನ ಕಡೆಗೆ ನಡೆದರು. 
ಸೂರಿ ಪೂಜಾರಿಯು ಹೇಳಿದ ವಿಳಾಸ ನೋಡಿದಾಗ ಇವತ್ತಿಗೆ ಅಲ್ಲಿಗೆ ಹೋಗುವುದು ಸಾಧ್ಯವಿಲ್ಲದ ಮಾತು ಎನಿಸಿತು. ಚಿತ್ರದುರ್ಗದಿಂದ ಸುಮಾರು ಇನ್ನೂರು ಕಿಲೋಮೀಟರುಗಳಷ್ಟು ದೂರದ ಹಳ್ಳಿಯೊಂದಕ್ಕೆ ಅವರು ಹೋಗಬೇಕಿತ್ತು. ಅವರು ಮನೆಗೆ ವಾಪಸ್ಸು ಹೋಗುವಷ್ಟರಲ್ಲಿ ಲೇಟಾದರೂ ಆಗಬಹುದು. ಹಾಗಾಗಿ ಏನೇ ಮಾಡಿದರೂ ಅಂದು ರಾತ್ರಿಯನ್ನು ಮನೆಯಲ್ಲಿಯೇ ಕಳೆಯಬೇಕಾಗಬಹುದು ಎಂದುಕೊಂಡು ಸೂರಿ. ದೇವಪ್ಪ ಮತ್ತಷ್ಟು ಹೊತ್ತು ಪೂಜಾರಿಗಳ ಜೊತೆ ಮಾತನಾಡಿದರು. ಅವರಿಗೇನಾದರೂ ತನ್ನ ಮುಂದೆ ಹೇಳಲಾಗದ್ದು ಇದ್ದರೆ ಹೇಳಿಬಿಡಲೆಂದು ಸೂರಿ ದೂರವೇ ಉಳಿದ.
ಸ್ವಲ್ಪ ಹೊತ್ತಿನ ನಂತರ ಪೂಜಾರಿಯು ದೇವಸ್ಥಾನದ ಮುಂದಿರುವ ಗಿಡದಲ್ಲಿ ಹೂವು ಕಿತ್ತುಕೊಳ್ಳುವ ಸಲುವಾಗಿ ಹೊರಗೆ ಬಂದಾಗ ಸೂರಿ ಅವರನ್ನೇ ಹಿಂಬಾಲಿಸಿ ಮಾತಿಗೆಳೆದ.
"ನಿಮಗೆ ಇದರ ಬಗ್ಗೆ ಏನನ್ನಿಸ್ತ್ತಿದೆ ಸ್ವಾಮಿಗಳೇಇದೆಲ್ಲಾ ಅಪ್ಪನ ಮನಸ್ಸಲ್ಲಿ ಆಗ್ತಾ ಇರೋದು ಅನ್ನಿಸ್ತಿದಿಯೋ ಅಥವಾ ನಿಜವಾಗ್ಲೂ ನಡೀತಾ ಇದೆ ಅನ್ನಿಸ್ತಾ ಇದೆಯೋ?"
ಪೂಜಾರಿಗಳು ಸ್ವಲ್ಪ ಹೊತ್ತು ಸೂರಿಯನ್ನೇ ದಿಟ್ಟಿಸಿ ನೋಡಿದರು. ಅವನು ನಂಬಲರ್ಹ ವ್ಯಕ್ತಿಯೇ ಎಂದು ಅವರಿಗೆ ತಿಳಿಯಬೇಕಿತ್ತು. ಹೊರನೋಟಕ್ಕೆ ದೇವಭಕ್ತನಲ್ಲದಿದ್ದರೂಮನಸ್ಸಲ್ಲಿ ಯಾವುದೇ ಕಲ್ಮಶವಿಲ್ಲವೆಂದು ಅರಿತರು. ಅವನ ಹತ್ತಿರ ಇದ್ದದ್ದನ್ನು ಹೇಳಿಬಿಡುವುದೇ ಒಳಿತೆಂದು ಭಾವಿಸಿದರು. "ಈಗಲೇ ಏನೂ ಹೇಳಲಾರೆ. ಆದರೆ ನಿನ್ನ ತಂದೆಯವರು ಹೇಳಿದ್ದೆಲ್ಲಾ ಕೇಳಿದರೆ ಇದು ಅವರ ಭ್ರಮೆಯೆಂದು ಅನಿಸುತ್ತಿಲ್ಲ. ಸದ್ಯಕ್ಕೆ ಹೆದರುವಂತದ್ದೇನಿಲ್ಲ. ಆದರೆ ಇದನ್ನು ಇಲ್ಲಿಯೇ ನಿಲ್ಲಿಸಿಬಿಡುವುದು ಸೂಕ್ತ. ಅದಕ್ಕೆ ನಿಮಗೆ ಆ ವ್ಯಕ್ತಿಯನ್ನು ಕಾಣಲು ಹೇಳಿದ್ದು."
"ನೀವು ಹೇಳುತ್ತಿರುವ ವ್ಯಕ್ತಿ ಮಂತ್ರಗಾರನೇ?" ಸೂರಿಗೆ ಮಾಟ-ಮಂತ್ರದ ಬಗ್ಗೆಯಷ್ಟು ನಂಬಿಕೆಯಿರಲಿಲ್ಲ. ಅದು ಸಂಮೋಹನ ವಿದ್ಯೆಯಿಂದ ಜನರ ವಿವೇಚನಾ ಶಕ್ತಿಯನ್ನು ಹಾಳುಮಾಡುವ ಕುತಂತ್ರವೆಂದು ನಂಬಿದ್ದ.
"ಮಾಟಮಂತ್ರಪೂಜೆವಾಮಾಚಾರಎಲ್ಲವೂ ಒಂದಿಲ್ಲೊಂದು ಶಕ್ತಿಯನ್ನು ಓಲೈಸುವ ಕ್ರಮವಷ್ಟೇ. ಕೆಲವೊಬ್ಬರು ಒಳಿತಿಗಾಗಿ ಮಾಡಿದರೆ ಮತ್ತಲವರು ಕೆಡುಕಿಗೆ ಮಾಡುತ್ತಾರೆ. ಆ ವ್ಯಕ್ತಿಯು ಹಲವಾರು ಜನಕ್ಕೆ ತಮ್ಮ ವಿದ್ಯೆಯಿಂದ ಒಳ್ಳೆಯದನ್ನು ಮಾಡಿದ್ದಾರೆ. ಹಾಗಾಗಿ ನಿಮಗೆ ಅವರನ್ನು ಕಾಣಲು ಹೇಳಿದೆ."
"ಈ ಕೆಟ್ಟ ಶಕ್ತಿಗಳು ಎಂದರೆ ಏನು?" 
"ಜನರಿಗೆ ಒಳ್ಳೆಯದನ್ನು ಮಾಡುವ ಶಕ್ತಿಗಳು ಒಳ್ಳೆಯ ಶಕ್ತಿಗಳಾಗಿ ದೇವರೆಂದು ಕರೆಯಲ್ಪಡುತ್ತವೆ. ಅದೇ ಜನರಿಗೆ ಕೆಡುಕುನಷ್ಟವನ್ನುಂಟುಮಾಡುವ ಶಕ್ತಿಗಳಿಗೆ ಕೆಟ್ಟ ಶಕ್ತಿಗಳೆಂದು ಕರೆಯಬಹುದು."
"ಹಾಗಾದರೆ ಪ್ರೇತಾತ್ಮಗಳು ಇರುವುದು ನಿಜವೇ?"
"ಕೆಟ್ಟ ಶಕ್ತಿಗಳಿಗೆ ಹಲವಾರು ಹೆಸರುಗಳಿವೆ. ದೆವ್ವಭೂತಪಿಶಾಚಿಪ್ರೇತಹೀಗೆ ಹಲವಾರು. ಒಬ್ಬಬ್ಬರು ಒಂದೊಂದು ಹೆಸರು ಕರೆಯುತ್ತಾರೆ."
"ಹಾಗಾದರೆ ದೇವರೇಕೆ ಅವುಗಳನ್ನೆಲ್ಲಾ ಶಿಕ್ಷಿಸುವುದಿಲ್ಲ?"
"ದೇವರೇಕೆ ಶಿಕ್ಷಿಸಬೇಕು?" ಪೂಜಾರಿಗಳು ಆಶ್ಚರ್ಯಗೊಡು ಕೇಳಿದರು.
"ಏಕೆಂದರೆಅದು ದೇವರ ಕೆಲಸವಲ್ಲವೇ?" 
ಪೂಜಾರಿಗಳು ನಕ್ಕು ಸೂರಿಯನ್ನು ಪಕ್ಕದಲ್ಲಿಯೇ ಇದ್ದ ಕಟ್ಟೆಯ ಮೇಲೆ ಕೂರಲು ಹೇಳಿ ತಾವು ಅಲ್ಲಿಯೇ ಕುಳಿತರು. ಸೂರಿಯ ಪ್ರಶ್ನೆ ನಿಜವಾಗಿಯೂ ಅವರಿಗೆ ನಗು ತರಿಸಿತ್ತು. ಅವರು ಸೂರಿಗೆ ಶಾಂತಸ್ವರದಲ್ಲಿ ಕೇಳಿದರು "ಈಗಒಂದು ಗಿಡವು ಮರವಾಗಿ ಹಣ್ಣು ಕೊಟ್ಟರೆ ಆ ಹಣ್ಣು ನಮಗೆ ಕೊಟ್ಟದ್ದು ಅನ್ನುವ ಹಾಗಿದೆ ನಿನ್ನ ವಾದ. ಹಣ್ಣು ಬಿಡುವುದು ಗಿಡಮರಗಳ ನೈಸರ್ಗಿಕ ಕಾರ್ಯ. ಅದು ನಮಗಾಗೇ ಹಣ್ಣು ಬಿಡುತ್ತಿದೆ ಎಂದು ಅಂದುಕೊಳ್ಳುವುದು ತಪ್ಪಲ್ಲವೇ? "
"ಅದೂ ಸರಿಯೇ!" ಎಂದ ಸೂರಿ. ಸೂರಿಗೆ ಪೂಜಾರಿಗಳು ಜ್ಞಾನಿಗಳಂತೆ ಕಂಡುದರಿಂದಅವರ ಜೊತೆ ತನ್ನ ಬುದ್ಧಿವಂತಿಕೆಯ ಪ್ರದರ್ಶನ ಸರಿ ಅಲ್ಲ ಎನಿಸಿತು. ಅವರ ಮಾತು ಕೇಳುವುದರಲ್ಲಿಯೇ ನಮಗೆ ಅನುಕೂಲ ಎಂದು ಸುಮ್ಮನಾದ.
ಅವರು ತುಂಬಾ ಹೊತ್ತು ಅಲ್ಲಿಯೇ ಕುಳಿತಿದ್ದು ಮದ್ಯಾನ್ಹದ ಮೂರರ ಹೊತ್ತಿಗೆ ವಾಪಸ್ಸಾದರು. ಮೊದಲೇ ಮಾತನಾಡಿಕೊಂಡಂತೆಸೂರಿಯ ತಾಯಿಶಾಂತಮ್ಮನಿಗೆಇದರ ಬಗ್ಗೆಯೇನು ತಿಳಿಸಲಿಲ್ಲ. ಶಾಂತಮ್ಮನಿಗೆ ಇವರಿಬ್ಬರೂ ಯಾಕೆ ಹೀಗೆ ಕಳ್ಳರ ಹಾಗೆ ಹೇಳದೆ ಕೇಳದೆ ದೇವಸ್ಥಾನಕ್ಕೆ ಹೋದರು ಎಂದು ಅತಿಯಾದ ಅನುಮಾನ. ಮೊದಲೇ ಹೇಳಿದ್ದರೆ ತಾನೂ ಹೋಗಬಹುದಿತ್ತಲ್ಲ ಎಂದು ಅವರ ಲೆಕ್ಕಾಚಾರ. ಅದರಲ್ಲೂ ಇಬ್ಬರೂ ಶಾಂತಮ್ಮ ಇಲ್ಲದುದನ್ನು ನೋಡಿ ಗುಸು-ಗುಸು ಮಾತನಾಡುವುದನ್ನು ಶಾಂತಮ್ಮ ಗಮನಿಸಿದ್ದರು. ಸೂರಿ ಮತ್ತು ದೇವಪ್ಪ ಮನೆಗೆ ಬಂದ ಮೇಲೂ ಶಾಂತಮ್ಮ ಹಲವಾರು ಬಾರಿ ಅವರಿಗೆ ಏನು ವಿಷಯ ಎಂದು ಕೇಳುತ್ತಲೇ ಇದ್ದರು. ಆದರೆ ಇಬ್ಬರೂ ಅದೂ ಇದೂ ಸಬೂಬು ಹೇಳಿ ಶಾಂತಮ್ಮನನ್ನು ಸುಮ್ಮನಾಗಿಸುತ್ತಲೇ ಇದ್ದರು. ದೇವಸ್ಥಾನದಿಂದ ವಾಪಸ್ಸು ಬರುವಾಗ ಉರಿಬಿಸಿಲಿನಲ್ಲಿ ಬೈಕು ಓಡಿಸಿ ಸೂರಿಗೆ ಕೈಕಾಲೆಲ್ಲಾ ಸುಟ್ಟಹಾಗಾಗಿತ್ತು. ಹಾಗಾಗಿ ಬಂದವನೇ ಒಂದು ಬಕೆಟ್ಟು ತಣ್ಣೀರು ತಲೆ-ಮೇಲೆ ಹಾಕಿಕೊಂಡ. ಸ್ನಾನ ಮುಗಿಸಿದವನೇ ನೇರವಾಗಿ ಹೋಗಿ ಮಲಗಿಬಿಟ್ಟ.
ಸಂಜೆ ಶಾಂತಮ್ಮ ಟೀ ಮಾಡಿ ಸೂರಿಯನ್ನು ಎಬ್ಬಿಸಿದಾಗ ಆಗಲೇ ಗಂಟೆ 7. ಟೀ ಕುಡಿಯುತ್ತಾ ಸೂರಿ ನಾಳೆ ಮತ್ತೆ ಇಬ್ಬರೂ 200 ಕಿ.ಮಿ. ಪ್ರಯಾಣ ಮಾಡಬೇಕಾದುದರ ಬಗ್ಗೆ ಸ್ವಲ್ಪ ಯೋಚಿಸಿದ. ಆದರೆ ಅದರ ಮದ್ಯೆ ಆ ಪೂಜಾರಿಯು ಹೇಳಿದ ಮಾತುಗಳು ಮತ್ತೆ ಮತ್ತೆ ಅವನನ್ನು ಗೊಂದಲಗೊಳಿಸುತ್ತಿದ್ದವು. ಅವರ ಮಾತಿನ ಪ್ರಕಾರ ಸೂರಿ ಅಂದು ಅಲ್ಲಿಯೇ ಮಲಗಿದರೆ ತನ್ನ ತಂದೆಗೆ ಆಗುತ್ತಿರುವ ತೊಂದರೆಯ ಪರಿಚಯವಾಗಿತ್ತದೆ. ಅಂದರೆ ಪೂಜಾರಿಗಳು ತನ್ನ ತಂದೆಗೆ ಏನೋ ತೊಂದರೆಯಾಗುತ್ತಿದೆ ಎಂಬುದನ್ನು ಪೂರ್ತಿಯಾಗಿ ನಂಬಿದ್ದರು. ಇದೆಲ್ಲಾ ನಡೆದದ್ದು ಅಪಾನ ರೂಮಿನಲ್ಲಿ ಅಲ್ಲವೇಹಾಗಾದರೆ ಅದನ್ನೊಮ್ಮೆ ನೋಡಿಕೊಂಡು ಬರೋಣ ಎಂದು ಅಪ್ಪನ ರೂಮಿಗೆ ನಡೆದ. 
ತನ್ನ ತಂದೆಯ ರೂಮು ಸಂಜೆಯ ಹೊತ್ತಿನಲ್ಲಿ ಎಂದಿನಂತೆಯೇ ಕಂಡಿತು. ದೇವಪ್ಪ ಯಾವುದೊ ನೆರಳನ್ನು ಕಂಡುದಾಗಿ ಹೇಳಿದ ಕಿಟಕಿಯತ್ತ ನೋಡಿದ. ಅದಿನ್ನೂ ತೆಗೆದೇ ಇತ್ತು. ಅದರ ಹತ್ತಿರ ಹೋಗಬೇಕೆನ್ನಿಸಿದರೂ ಮನಸ್ಸೇಕೋ ಬೇಡವೆಂದಿತು ಸೂರಿಗೆ. ಎಂತಹ ದೈವಭಕ್ತರೇ ಆಗಲಿ ಕೆಟ್ಟ ಶಕ್ತಿಗಳ ಸಹವಾಸ ಮಾಡುವಂತಹ ಯಾವ ಕಾರ್ಯಗಳಿಗೂ ಕೈಹಾಕುವುದಿಲ್ಲ. ಅದರಲ್ಲೂ ಆ ಪೂಜಾರಿಯ ಜೊತೆ ಮಾತನಾಡಿದ ನಂತರ ಸೂರಿಗೆ ಕೆಟ್ಟ ಶಕ್ತಿಗಳು ಇದ್ದರೂ ಇರಬಹುದು ಎಂಬ ಅನುಮಾನ ಶುರುವಾಗಿತ್ತು. ಬೇರೆ ಯಾರಾದರೂ ಹಾಗೆಲ್ಲಾ ದೆವ್ವ ಭೂತಗಳ ಬಗ್ಗೆ ಮಾತನಾಡಿದ್ದರೆ ಸೂರಿ ನಂಬುತ್ತಿರಲಿಲ್ಲ. ಆದರೆ ಪ್ರತಿದಿನವೂ ದೇವರನ್ನು ಪೂಜಿಸುವ ಪೂಜಾರಿಗಳೇ ಹಾಗೆ ಹೇಳಿದ ಮೇಲೆ ಸೂರಿಗೆ ಅದನ್ನು ಅಲ್ಲಗಳೆಯುವುದು ಕಷ್ಟವಾಯಿತು. ಕಿಟಕಿಯ ಕಡೆ ಸ್ವಲ್ಪ ಹೊತ್ತು ಹಾಗೇ ನೋಡುತ್ತಾ ನಿಂತು ಸದ್ಯಕ್ಕಂತೂ ಅಲ್ಲೇನು ಇಲ್ಲವೆಂಬುದನ್ನು ಖಾತ್ರಿಮಾಡಿಕೊಂಡ. ನಂತರ ನಿಧಾನಕ್ಕೆ ಅದರ ಹತ್ತಿರ ಹೋಗಿ ಅದರಿಂದ ಹೊರಗೆ ನೋಡಿದ. ಹೊಲದ ಮನೆಯಾದ್ದರಿಂದ ಕಿಟಕಿಯಿಂದ ಬರೀ ಗಿಡಗಂಟಿಗಳೇ ಕಾಣಿಸಿದವೇ ಹೊರತು ಮತ್ತೇನೂ ಕಾಣಿಸಲಿಲ್ಲ. ಮತ್ತೊಮ್ಮೆ ಕೂಲಂಕುಷವಾಗಿ ಕಣ್ಣಾಡಿಸಿದ. ಅಂಥದ್ದೇನೂ ಕಂಡುಬರಲಿಲ್ಲ. ಹೊರಗೆ ಹೋಗಿ ನೋಡೋಣವೆಂದರೆ ಆಗಲೇ ಕತ್ತಲಾಗಿತ್ತು. ಈ ದೆವ್ವದ ವಿಷಯ ಬರದಿದ್ದರೆ ರಾತ್ರಿ ಹನ್ನೆರೆಡು ಗಂಟೆಗೂ ಇಡೀ ತೋಟವನ್ನೇ ಬೇಕಾದರೆ ಸುತ್ತಿ ಬರುತ್ತಿದ್ದ ಸೂರಿ. ಅದು ಅವನಿಗೆ ಅಭ್ಯಾಸದಂತಗಿಹೋಗಿತ್ತು. ಆದರೆ ಇವತ್ತೇಕೋ ಸೂರಿಯ ಮನದಲ್ಲಿ ಅಳುಕ. ಎಂತೆಂಥವರೋ ಹೇಳಿದ ದೆವ್ವದ ಕಥೆಗಳನ್ನೆಲ್ಲಾ ಕೇಳಿ ಸ್ವಲ್ಪವೂ ತಲೆಕೆಡಿಸಿಕೊಳ್ಳದ ಸೂರಿಅಪ್ಪನ ಬಾಯಿಂದ ಬಂದ ಮಾತುಗಳನ್ನು ಕೇಳಿ ನಿಜವಾಗಿಯೂ ಹೆದರಿಬಿಟ್ಟಿದ್ದ.
ಸಂಜೆಯ ಹೊತ್ತು ದೇವಪ್ಪ ಮತ್ತು ಶಾಂತಮ್ಮ ಟಿವಿಯಲ್ಲಿ ಧಾರಾವಾಹಿ ನೋಡುವುದು ವಾಡಿಕೆ. ಅದರಂತೆ ಇಬ್ಬರೂ 7.30 ಕ್ಕೆಲ್ಲಾ ಟಿವಿಯ ಮುಂದೆ ಕುಳಿತುಬಿಟ್ಟರು. ಸೂರಿಗೆ ಧಾರಾವಾಹಿ ನೋಡುವ ಅಭ್ಯಾಸವೇನಿಲ್ಲ. ಹಾಗಾಗಿ ಅವನು ಸುಮ್ಮನೆ ಮನೆಯ ಮುಂದಿದ್ದ ಕಟ್ಟೆಯ ಮೇಲೆ ಬಂದು ಕುಳಿತ. ಹೊರಗಿನ ಲೈಟು ಆನ್ ಆಗಿದ್ದುದರಿಂದ ಬೇಕಾದಷ್ಟು ಬೆಳಕಿತ್ತು. ಮನೆಯ ಮುಂಭಾಗಕ್ಕೆ ಒಂದೂವರೆ ಕಿಲೋಮೀಟರಿನಷ್ಟು ಅಡಿಕೆ ತೋಟ. ಸೂರಿ ಕುಳಿತ ಜಾಗದಿಂದ ದೂರದಲ್ಲಿ ಊರಿನ ದೀಪಗಳು ಕಾಣಿಸಿದವು. ಅಲ್ಲಿ ಅವನಿಗೆ ಬಹಳಷ್ಟು ಜನ ಗೆಳೆಯರಿದ್ದರು. ಒಂದೊಮ್ಮೆ ಅವರನ್ನಾದರೂ ಹೋಗಿ ಮಾತನಾಡಿಸಿಕೊಂಡು ಬರೋಣ ಎಂದುಕೊಂಡ ಸೂರಿ ಯಾಕೋ ಮನಸ್ಸಿಲ್ಲದೆ ಸುಮ್ಮನಾದ. ಅವನಿಗೆ ದೇವಪ್ಪನ ರೂಮಿನ ಬಗ್ಗೆಯೇ ಚಿಂತೆ. ಮತ್ತೊಮ್ಮೆ ಅಲ್ಲಿಗೆ ಹೋಗಿ ಕಿಟಕಿಯನ್ನೇ ನೋಡಿದ. ಏನೂ ಕಾಣಲಿಲ್ಲ. ರೂಮಿನ ಲೈಟು ಹಾಕಿದರೂ ಕಿಟಕಿಯಿಂದ ಬರೀ ಕಾಣುತ್ತಿದ್ದುದು ಕತ್ತಲೆ ಅಷ್ಟೇ.  
ಅಲ್ಲಿಯೇ ಇದ್ದ ಟಾರ್ಚು ತೆಗೆದುಕೊಂಡು ಒಮ್ಮೆ ಅಪ್ಪನ ರೂಮಿನ ಸುತ್ತಾ ನೋಡಲೇ ಬೇಕೆಂದು ಧೈರ್ಯ ಮಾಡಿ ಹೊರಗೆ ಬಂದ. ಮನೆಯ ಮುಂದಿದ್ದ ಲೈಟಿನ ಬೆಳಕು ದೇವಪ್ಪನ ರೂಮಿನ ತನಕ ಬರುತ್ತಿರಲಿಲ್ಲ. ಕೈಯಲ್ಲಿ ಟಾರ್ಚು ಹಿಡಿದುಕೊಂಡು ಆದದ್ದಾಗಲಿ ಎಂದು ಮನೆಯ ಪಕ್ಕಕ್ಕೆ ನಡೆದ. ದೇವಪ್ಪನ ರೂಮಿನ ಕಿಟಕಿಯ ಹತ್ತಿರ ಬಂದು ಒಮ್ಮೆ ಕಿಟಕಿಯನ್ನೇ ನೋಡಿದ. ಮತ್ತೊಮ್ಮೆ ಅದರ ಮೂಲಕ ಕಾಣುತ್ತಿದ್ದ ಗಿಡಗಂಟೆಗಳ ಕಡೆ ನೋಡಿದ. ಗಾಳಿಗೆ ಹೊಯ್ದಾಡುತ್ತಿದ್ದ ಗಿಡಗಂಟಿಗಳು ಕತ್ತಲಲ್ಲಿ ಟಾರ್ಚಿನ ಬೆಳಕಿಗೆ ಭಯಾನಕವಾಗಿ ಕಂಡವು. ಅದೇ ಗಿಡಗಳನ್ನು ಸಾವಿರಾರು ಬಾರಿ ನೋಡಿದ್ದ ಸೂರಿಗೂ ಕೂಡ ಭಯ ಆವರಿಸಿಕೊಂಡಿತು. ಸೂರಿ ಧೈರ್ಯ ತಂದುಕೊಂಡು ಕಿಟಕಿಯ ಸುತ್ತಲೂ ನೆಲದ ಮೇಲೆ ಟಾರ್ಚು ಹಾಯಿಸಿದ. ಅಂಥದ್ದೇನೂ ಕಾಣಲಿಲ್ಲ. ಅವನ ತಾಯಿ ಮನೆಯ ಸುತ್ತಲೆಲ್ಲಾ ಚೆನ್ನಾಗಿ ಕಸ ಹೊಡೆದು ಓರಣ ಮಾಡಿಟ್ಟಿದ್ದರು. ಸುಮ್ಮನೆ ಇಲ್ಲದುದನ್ನೆಲ್ಲ ಯೋಚಿಸುತ್ತಿದ್ದೇನೆ ಎಂದು ತನ್ನ ಬಗ್ಗೆಯೇ ನಕ್ಕು ಸೂರಿ ಹಿಂದಿರುಗಲು ಟಾರ್ಚ್ ತಿರುಗಿಸಿದಾಗ ಪಕ್ಕದಲ್ಲೇನೋ ಪ್ರಾಣಿ ಕಂಡ ಹಾಗಾಯಿತು. ಒಮ್ಮೆ ನೆಟ್ಟುಬಿದ್ದು ಅದು ಕಂಡ ಕಡೆಗೆ ಮತ್ತೆ ಟಾರ್ಚು ತಿರುಗಿಸಿದ. ಆದರೆ ಅಲ್ಲೇನೂ ಇರಲಿಲ್ಲ. ತುಂಬಾ ಮುಂದಕ್ಕೆ ಹೋಗಿ ನೋಡಬೇಕೆನ್ನಿಸಿದರೂ ಮನಸ್ಸೇಕೋ ಒಪ್ಪಲಿಲ್ಲ. ಅದು ಕಂಡ ಜಾಗಕ್ಕೆ ಸ್ವಲ್ಪ ಹೊತ್ತು ಟಾರ್ಚು ಬಿಟ್ಟುಕೊಂಡು ನಿಂತೇ ಇದ್ದ. ಅಲ್ಲಿ ಸಣ್ಣಪುಟ್ಟ ಗಿಡಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ.
ತೋಟದ ಮನೆಯಾದ್ದರಿಂದ ಅಂತ-ಇಂತ ಪ್ರಾಣಿಗಳು ಓಡಾಡುವುದು ಸರ್ವೇ ಸಾಮಾನ್ಯ. ಸೂರಿ ಕೂಡ ಅಲ್ಲಿ ಎಷ್ಟೋ ಬಾರಿ ಹಲವಾರು ಕಾಡು ಹಂದಿಗಳನ್ನು ನೋಡಿದ್ದ. ಆದರೆ ಇವತ್ತಿನಷ್ಟು ಎಂದೂ ಹೆದರಿರಲಿಲ್ಲ. ಅವನಿಗೆ ಯಾವುದೊ ಪ್ರಾಣಿಯನ್ನಷ್ಟೇ ಕಂಡ ಹಾಗೇ ಅನ್ನಿಸಿತ್ತೇ ಹೊರತು ಯಾವ ಪ್ರಾಣಿಯನ್ನು ಎಂದು ಗುರುತಿಸಲಾಗಲಿಲ್ಲ. ಅದರಲ್ಲೂ ಅವನು ಅಲ್ಲಿ ಟಾರ್ಚು ಬಿಟ್ಟುಕೊಂಡು ನಿಂತಿರುವಾಗ ಯಾವ ಪ್ರಾಣಿಯೂ ಮನುಷ್ಯರ ಹತ್ತಿರ ಸುಳಿಯುವ ಸಾಹಸ ಮಾಡದು. ನಾವು ಹೇಗೆ ಪ್ರಾಣಿಗಳಿಂದ ದೂರವಿರಲು ಪ್ರಯತ್ನಿಸುತ್ತೇವೆಯೋಅವೂ ಕೂಡ ಹಾಗೆಯೆ ಮಾಡುತ್ತವೆ ಎಂದು ಸೂರಿಗೆ ತಿಳಿದಿತ್ತು. ಅದೇ ಅವನ ಭಯವನ್ನು ಹೆಚ್ಚಿಸಿದ್ದು.
ಎರೆಡು ನಿಮಿಷ ಅಲ್ಲೇ ನಿಂತಿದ್ದು ಏನೂ ಇಲ್ಲವೆಂಬುದನ್ನು ಖಾತ್ರಿಪಡಿಸಿಕೊಂಡ ಮೇಲೆ ವಾಪಸ್ಸಾಗಲು ತೀರ್ಮಾನಿಸಿದ. ಆದರೆ ಅವನಿಗೆ ಏನನ್ನೋ ನೋಡಿದ ಬಲವಾದ ನಂಬಿಕೆ. ಹೆಚ್ಚು ಹೊತ್ತು ಅಲ್ಲಿಯೇ ನಿಲ್ಲುವುದಕ್ಕೆ ಮನಸ್ಸಾಗದೆ ಮನೆ ಕಡೆಗೆ ತಿರುಗಿ ಎರೆಡು ಹೆಜ್ಜೆ ಇಡುವಷ್ಟರಲ್ಲಿ ಹಿಂದಿನಿಂದ ಹೆಜ್ಜೆ ಸಪ್ಪಳ ಕೇಳಿಸಿತು. ತರೆಗೆಲೆಗಳ ಮೇಲೆ ಯಾರೋ ನಡೆದಂತಹ ಶಬ್ದ. ಸೂರಿ ಸರಕ್ಕನೆ ಹಿಂದಿರುಗಿ ಮತ್ತೊಮ್ಮೆ ಟಾರ್ಚನ್ನು ಎಲ್ಲ ಕಡೆಗೂ ಹಾಯಿಸಿದ. ಆದರೆ ಮತ್ತೂ ಏನೂ ಕಾಣಲಿಲ್ಲ. ಯಾವುದಾದರೂ ಪ್ರಾಣಿ ಇದ್ದದ್ದೇ ಆದರೆ ಟಾರ್ಚು ಬೆಳಕಿನಲ್ಲಿ ಕಾಣಿಸಲೇ ಬೇಕಿತ್ತು. ಹೊರಗೆ ಬರುವ ದುಸ್ಸಾಹಸ ಮಾಡಿ ತಪ್ಪು ಮಾಡಿದೆ ಎಂದು ಕೊಂಡು ಕಲ್ಲಿನಂತೆ ನಿಂತಲ್ಲಿಯೇ ನಿಂತು ತನ್ನ ಸುತ್ತಮುತ್ತಲೆಲ್ಲಾ ಹುಡುಕಿದ. ಕೊನೆಗೆ ಅಲ್ಲಿ ಬಂದುದೇ ತಪ್ಪಾಯಿತೆಂದು ತಿರುಗಿ ನಡೆದ. ಅವನು ಮತ್ತೆ ಎರೆಡು ಹೆಜ್ಜೆಯಿಡುವಷ್ಟರಲ್ಲಿ ಮತ್ತೆ ಹಿಂದಿನಿಂದ ಯಾರೋ ನಡೆದಂತಹ ಶಬ್ದ ಬಂತು. ಈ ಬಾರಿ ಸೂರಿ ನಿಲ್ಲಲಿಲ್ಲ.  ಏನಾದರೂ ಆಗಲಿ ಎಂದು ಹಿಂದೆ ನೋಡದೆ ಮನೆಯ ಅಂಗಳ ತಲುಪಿದ. ಮನೆಯ ಬಾಗಿಲಲ್ಲಿ ಅವನ ಅಪ್ಪ ನಿಂತಿದ್ದರು. 
ಇವನನ್ನು ಕಂಡೊಡನೆಯೇ ಅವರು "ಎಲ್ಲಿದ್ದೆ?? ಅವಾಗಿಂದ ನಿನ್ನನ್ನ ಕೂಗ್ತಾನೆ ಇದೀನಿ. ಕೇಳಿಸಲಿಲ್ವಾ?"
ಸೂರಿಗೆ ಎಲ್ಲವೂ ಕನಸಿನಂತೆ ಕಂಡಿತು. ತಾನು ನಿಂತಿದ್ದ ಜಾಗದಿಂದ ದೇವಪ್ಪ ಕೆಲವ ಇಪ್ಪತ್ತು ಅಡಿಗಳಷ್ಟೇ ದೂರವಿದ್ದರು. ಅವರು ಕೂಗಿದ್ದರೆ ಸೂರಿಗೆ ಕೇಳಿಸಲೇಬೇಕಿತ್ತು. ಸೂರಿಯ ಮುಖದ ಮೇಲಿದ್ದ ಬೆವರಿನ ಹನಿಗಳನ್ನು ಕಂಡು ದೇವಪ್ಪ "ಏನಾಯ್ತು?" ಎಂದು ಕುತೂಹಲದಿಂದ ಹತ್ತಿರ ಬಂದು ಕೇಳಿದರು. ಸೂರಿ ಆದುದನ್ನೆಲ್ಲ ಹೇಳಿದ. ಹಾಗೂ ಅವರು ಕೂಗಿದ್ದು ನಾನು ಅಷ್ಟೇ ಹತ್ತಿರವಿದ್ದರೂ ಕೇಳಿಸಲೇ ಇಲ್ಲ ಎಂದ. ದೇವಪ್ಪನಿಗೆ ಅವರು ಅಲ್ಲಿ ನಿಂತಿರುವುದೇ ಅಪಾಯವೆನಿಸಿ, "ಮೊದಲು ಮನೆಯೊಳಗೇ ಹೋಗೋಣ ಬಾ" ಎಂದು ಸೂರಿಯನ್ನು ಒಳಗೆ ಕರೆದುಕೊಂಡು ಹೋದರು. ಒಳಗೆ ಹೋದವರೇ ಸೂರಿಗೆ ತಾನೊಬ್ಬನೇ ಹೊರಗೆ ಹೋಗಿದ್ದಕೆ ಸರಿಯಾಗಿ ಬೈದರು. ಸುರಿಗೂ ಕೂಡ ತಾನೊಬ್ಬನೇ ಹಾಗೇ ಹೋದದ್ದು ಸರಿಯಲ್ಲ ಎಂದು ಅನಿಸಿತು. ಅವನು ಹಾಗೆ ಎಷ್ಟೋ ಬಾರಿ ರಾತ್ರಿಯೆಲ್ಲಾ ಒಬ್ಬನೇ ಓಡಾಡಿದ್ದ. ಆದರೆ ಅವತ್ತಿನ ಸಂಗತಿ ಅವನನ್ನು ನಿಜವಾಗಿಯೂ ಬೆಚ್ಚುಬೀಳಿಸಿತ್ತು.
ದೇವಪ್ಪ ಸೂರಿಗೆ ಹಾಗೆಲ್ಲಾ ಮತ್ತೆಂದೂ ಮಾಡಬಾರದು ಎಂದು ಹೇಳಿ ಮನೆಯ ಬೀಗ ಹಾಕಿದರು. ಇಬ್ಬರೂ ಹಾಲಿಗೆ ವಾಪಸ್ಸಾದಾಗ ಶಾಂತಮ್ಮ ಇನ್ನೂ ಟಿವಿ ನೋಡುತ್ತಲೇ ಇದ್ದರು. ಇವರು ಹಾಲಿಗೆ ವಾಪಸ್ಸಾದಾಗ ಇದ್ದ ಮುಖಭಾವ ನೋಡಿ ಇವರಿಬ್ಬರು ಏನೋ ನಡೆಸಿದ್ದಾರೆ ಅನ್ನೋ ಅನುಮಾನ ಶಾಂತಮ್ಮನಿಗೆ ಜಾಸ್ತಿಯಾಯಿತು. ರಾತ್ರಿ ದೇವಪ್ಪ ಮಲಗಲು ಬಂದಾಗ ಕೇಳಿದರಾಯಿತು ಎಂದು ಸುಮ್ಮನಾದರು. ಅವರ ಧಾರಾವಾಹಿ ಮುಗಿದ ನಂತರ ಅಡಿಗೆ ಮಾಡಲು ಅಣಿಯಾದರು. 
ಮಗ ತುಂಬಾ ದಿನದ ನಂತರ ಮನೆಗೆ ಬಂದಿದ್ದರಿಂದ ಅವನಿಗೆ ಏನಾದರು ಸ್ಪೆಷಲ್ ಮಾಡೋಣವೆಂದು "ಏನು ಅಡಿಗೆ ಮಾಡ್ಲಿ ಸೂರಿ?" ಎಂದು ಕೇಳಿದರು. 
ನಡೆದದ್ದನ್ನೆಲಾ ಅರಗಿಸಿಕೊಳ್ಳಲು ಸೂರಿಗೆ ಇನ್ನೂ ಸಮಯ ಬೇಕಿತ್ತು. ಆದರೆ ಶಾಂತಮ್ಮನಿಗೆ ಏನೂ ಸಂಶಯ ಬರದಿರಲೆಂದು "ಮುದ್ದೆ ಮಾಡಮ್ಮ ಸಾಕು" ಎಂದ. 
ಸೂರಿ ಮನೆಗೆ ಬಂದಾಗಲೆಲ್ಲಾ ಏನಾದರೂ ಸ್ಪೆಷಲ್ ಮಾಡೆಂದು ಶಾಂತಮ್ಮನನ್ನು ಕೇಳೋದು ವಾಡಿಕೆ. ಅಂತವನು ಸುಮ್ಮನೆ ಮುದ್ದೆ ಸಾಕೆಂದು ಹೇಳಿದ್ದನ್ನು ಕೇಳಿ ಶಾಂತಮ್ಮ "ಯಾಕೋ ಸೂರಿಮೈಯಲ್ಲಿ ಉಷಾರಿಲ್ವಾಒಂಥರಾ ಇದ್ದೀಯ" ಎಂದರು. 
"ಹಾಗೇನಿಲ್ಲಮ್ಮಾಇವತ್ತು ದೇವಸ್ಥಾನಕ್ಕೆ ಬಿಸಿಲಲ್ಲಿ ಹೋಗಿ ಬಂದಿದ್ದಕ್ಕೆ ಸ್ವಲ್ಪ ಸುಸ್ತು ಅಷ್ಟೇ. ಜಾಸ್ತಿ ಏನು ತಿನ್ನಲು ಮನಸ್ಸಿಲ್ಲ." 
ಸುರಿಯ ಮಾತುಗಳು ಶಾಂತಮ್ಮನಿಗೆ ನಂಬಿಕೆ ತರಿಸಿದ್ದರಿಂದ ಅವರು "ಆಯಿತು ಬಿಡು. ನಾಳೆ ಮದ್ಯಾಹ್ನಕ್ಕೆ ಏನಾದ್ರು ಸ್ಪೆಷಲ್ ಮಾಡ್ತೀನಿ" ಎಂದು ಅಡಿಗೆ ಮನೆ ಹೊಕ್ಕರು.
ಅತ್ತ ಶಾಂತಮ್ಮ ಅಡಿಗೆ ಮನೆ ಸೇರಿದೊಡನೆಯೇ ಇತ್ತ ಅಪ್ಪ-ಮಗ ಇಬ್ಬರು ಹಾಲಿನಲ್ಲಿ ಕುಳಿತು ತಮ್ಮ ಗುಪ್ತಸಮಾಲೋಚನೆ ಶುರುಮಾಡಿದರು.
"ನಾನು ನಿಜವಾಗ್ಯೂ ಏನನ್ನೋ ನೋಡಿದ ಹಾಗಾಯ್ತು ಅಪ್ಪ. ಎಂಥದ್ದೋ ಪ್ರಾಣಿಯ ಹಾಗೆ ಅನ್ನಿಸಿತು. ಆದರೆ ಮರುಕ್ಷಣದಲ್ಲಿ ಅಲ್ಲಿ ಏನೂ ಇರಲಿಲ್ಲ" ಸೂರಿಯೇ ಮಾತು ಆರಂಭಿಸಿದ. 
ದೇವಪ್ಪ ಅದನ್ನು ಸಮಾಧಾನದಿಂದ ಕೇಳಿಸಿಕೊಂಡು "ನಾನ್ಯಾವತ್ತೂ ಅಲ್ಲಿ ಏನಿದೆ ಎಂದು ನೋಡಲು ಹೋಗಿರಲಿಲ್ಲ. ಆದರೆ ನನಗೆ ಮೊದಲಿನಿಂದಲೂ ಎಂಥದ್ದೋ ಇದೆ ಅನ್ನುವ ಅನುಮಾನವಿತ್ತು. ನನಗೆ ನೆರಳು ಕಂಡಿದ್ದು ಹಾಗಾದರೆ ನಿಜವೇ ಸರಿ"
"ಮತ್ತೆ ನನ್ನ ಹಿಂದೆಯೇ ಯಾರೋ ಹೆಜ್ಜೆ ಇಡುತ್ತಿರುವಂತೆ ಅನ್ನಿಸಿದ್ದೂ ಕೂಡ ನನಗೆ ಬಹಳವೇ ಭಯ ಹುಟ್ಟಿಸಿತ್ತು. ನಾನು ಎರೆಡು ಬಾರಿ ಸರಿಯಾಗಿಯೇ ಟಾರ್ಚ್ ಬಿಟ್ಟು ನೋಡಿದ್ದೆ. ಎಂಥದ್ದೂ ಕಾಣಲಿಲ್ಲ. ಆದರೆ ನಾನು ಹಿಂದಿರುಗಿ ಹೊರಟ ತಕ್ಷಣವೇ ಶಬ್ದ ಬರೋದು" ಸೂರಿ ಆದದ್ದನ್ನೇ ಮತ್ತೊಮ್ಮೆ ದೇವಪ್ಪನಿಗೆ ಹೇಳಿದ.  
ದೇವಪ್ಪನಿಗೆ ಮಗನ ಮಾತುಗಳು ತನಗೇ ಆದ ಕೆಲವು ಸಂದರ್ಭಗಳನ್ನು ನೆನಪಿಸಿತು. ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದ ದೇವಪ್ಪನಿಗೆ ಒಂಟಿಯಾಗಿ ಓಡಾಡುವುದು ಎಂದೂ ಭಯ ಹುಟ್ಟಿಸಿರಲಿಲ್ಲ. ಆದರೆ ಇತ್ತೀಚಿಗೆ ಅವರಿಗೆ ಮನೆಗೆ ಬಂದ ತಕ್ಷಣವೇ ಯಾರೋ ಬೇರೊಬ್ಬರು ಮನೆಯಲ್ಲಿ ಇದ್ದಾರೆ ಎನ್ನುವಂತಹ ಅನುಮಾನ ಕಾಡುತ್ತಿತ್ತು. ಅವರು ಎಷ್ಟೇ ಕಷ್ಟಪಟ್ಟರೂ ಅವರ ಮನಸ್ಸಿನಿಂದ ಅದನ್ನು ಅವರಿಗೆ ತೆಗೆಯಲು ಸಾಧ್ಯವಾಗುತ್ತಲೇ ಇರಲಿಲ್ಲ. ತೋಟದಲ್ಲಿ ಬೇರೆ ಮನೆ ಮಾಡಿದ್ದರಿಂದ ಅಕ್ಕಪಕ್ಕದಲ್ಲಿ ಮನೆಗಳು ಇಲ್ಲದ್ದು ಇವರನ್ನು ಒಂಟಿಯನ್ನಾಗಿಸಿತ್ತು.  
ಅವರೆಲ್ಲರೂ ಒಟ್ಟಿಗೇ ಊಟ ಮುಗಿಸುವ ಹೊತ್ತಿಗೆ ಶಾಂತಮ್ಮ ಮಲಗುವ ಸಮಯ ಬಂದಿತ್ತು. ಅವರು ಸರಿಯಾಗಿ ಹತ್ತೂವರೆಗೆ ಮಲಗಿಬಿಡುತ್ತಿದ್ದರು. ಮನೆಯಲ್ಲಿ ಒಂಟಿಯಾಳು ಬೇರೆ. ಎಲ್ಲ ಕೆಲಸವನ್ನೂ ಅವರೇ ಮಾಡಬೇಕಿತ್ತು. ಸುಸ್ತಿನಿಂದಲೋ ಏನೋಅವರೆಂದೂ ಲೇಟಾಗಿ ಮಲಗಿದವರೇ ಅಲ್ಲ. ಹಾಗಾಗಿ ಅವರು ತಮ್ಮೆಲ್ಲಾ ಕೆಲಸಗಳನ್ನು ಮುಗಿಸಿ ಮಲಗಲು ಹೊರಟರು. ಇತ್ತ ದೇವಪ್ಪ ಮತ್ತು ಸೂರಿ ಹಾಲಿನಲ್ಲಿಯೇ ಮಲಗುವುದೆಂದು ತೀರ್ಮಾನಿಸಿದರು. ದೇವಪ್ಪನಿಗೆ ಶಾಂತಮ್ಮನನ್ನು ಆ ರೂಮಿನಲ್ಲಿ ಒಬ್ಬರೇ ಮಲಗಲು ಬಿಡುವುದಕ್ಕೆ ಇಷ್ಟವಿಲ್ಲದಿದ್ದರೂಇಲ್ಲಿಯವರೆಗೂ ಶಾಂತಮ್ಮನಿಗೆ ಯಾವುದೇ ತೊಂದರೆಯಾಗದ್ದರಿಂದ ಸುಮ್ಮನಾಗಬೇಕಾಯಿತು.
ದೇವಪ್ಪ ಮತ್ತು ಸೂರಿ ಇಬ್ಬರೂ ಸೇರಿ ಅವತ್ತಿನ ಮಟ್ಟಿಗೆ ಹಾಲಿನಲ್ಲೇ ಮಲಗೋದೆಂದು ತೀರ್ಮಾನಿಸಿದರು. ಅದರಿಂದ ದೇವಪ್ಪನಿಗೆ ಮಲಗುವ ಜಾಗ ಬದಲಾಗುತ್ತದೆ. ಮತ್ತು ಸುರಿಗೂ ಮಲಗಲು ಬೇಕಾದಷ್ಟು ಜಾಗವಿತ್ತು. ದೇವಪ್ಪ ಹಾಲಿನ ಎಡಭಾಗದಲ್ಲಿ ಮದ್ಯಕ್ಕೆ ಹಾಕಿದ್ದ ದಿವಾನು ಮಂಚದ ಮೇಲೆ ಮಲಗಿದರೆ ಸೂರಿ ಹಾಲಿನ ಉತ್ತರಕ್ಕಿದ್ದ ಸೋಫಾದ ಮೇಲೆಯೇ ಮಲಗಿಕೊಳ್ಳಲು ನಿರ್ಧರಿಸಿದ.  ದೇವಪ್ಪ ದಿನವೂ ಬೇಗನೆ ಮಲಗಿ ರೂಡಿಯಾದ್ದರಿಂದ ಅವರು ತಲೆದಿಂಬಿಗೆ ತಲೆಯಿಟ್ಟವರೇ ಮಲಗಿ ಗೊರಕೆ ಹೊಡೆಯಲು ಶುರು ಮಾಡಿದರು. ಸೂರಿ ಹಾಗೆಲ್ಲಾ ಬೇಗ ಮಲಗುವವನಲ್ಲ. ಕಾಲೇಜಿನಲ್ಲಾದರೆ ಸ್ವಲ್ಪ ಹೊತ್ತು ಓದಿಕೊಂಡುಬೋರಾದರೆ ಗೆಳೆಯರ ಹತ್ತಿರ ಹರಟೆ ಹೊಡೆಯುತ್ತಾಇಲ್ಲಾ ಯಾವದಾದರೂ ಪಿಕ್ಚರ್ ನೋಡುತ್ತಾ ಮಲಗುವಷ್ಟರಲ್ಲಿ ಎಷ್ಟೋ ಬಾರಿ ರಾತ್ರಿ ೧ ಗಂಟೆಯೇ ಆಗಿಬಿಡುತ್ತಿತ್ತು. ಅದರಲ್ಲೂ ದೇವಸ್ಥಾನದಿಂದ ಬಂದ ಮೇಲೊಂದು ಸಣ್ಣ ನಿದ್ರೆಯನ್ನೂ ಮಾಡಿದ್ದರಿಂದ ಅವತ್ತು ಲೇಟಾಗೆ ಮಲಗಬೇಕೆಂದು ಎಣಿಸಿದ. ಕಿವಿಗೊಂದು ಈಯರ್ ಫೋನು ಸಿಕ್ಕಿಸಿಕೊಂಡು ಮೊಬೈಲಿನಲ್ಲಿ ಹಾಡು ಕೇಳುತ್ತಾ ಮಲಗಿದ. ಇತ್ತ ದೇವಪ್ಪ ಮಲಗಿದರೂ ಟಿವಿ ಇನ್ನೂ ಓಡುತ್ತಲೇ ಇತ್ತು. ಅದು ರಾತ್ರಿಯೆಲ್ಲಾ ಹಾಗೇ ಇರಲಿ ಎಂದು ಸುಮ್ಮನಾದ. ದೇವಪ್ಪ ಮತ್ತು ಶಾಂತಮ್ಮ ಇಬ್ಬರೂ ಮಲಗಿದ್ದುದರಿಂದ ಆ ಮನೆಯಲ್ಲಿ ಆಗ ಎದ್ದಿರುವುದು ತಾನು ಮಾತ್ರ ಎಂದೆಣಿಸಿದ ಸೂರಿ. ಅಥವಾ ಹಾಗಂತ ಅವನಂದುಕೊಂಡಿದ್ದ ಅಷ್ಟೇ.

ಒಂದು ಹೊತ್ತಿನಲ್ಲಿ ಯಾವ ಕಾರಣಕ್ಕೋ ಗೊತ್ತಿಲ್ಲದೇ ಸೂರಿ ನೆಟ್ಟುಬಿದ್ದು ಎದ್ದ. ಕೈಯಲ್ಲಿದ್ದ ವಾಚು ನೋಡಿದಾಗ ಆಗಲೇ ಸಮಯ 3ಗಂಟೆ 17 ನಿಮಿಷ. ಟಿವಿ ಇನ್ನು ಹಾಗೆಯೇ ಆನ್ ಇತ್ತು. ಸೂರಿಗೆ ತಾನು ಮಲಗಿದ್ದೇ ನೆನಪಿಲ್ಲ. ಕೈಯಲ್ಲಿದ್ದ ಮೊಬೈಲು ಕೆಳಗೆ ಬಿದ್ದಿತ್ತು. ಅದನ್ನು ಎತ್ತಿಕೊಂಡು ಅಪ್ಪನ ಕಡೆಗೆ ನೋಡಿದ. ಅವರು ಅಲ್ಲಿರಲಿಲ್ಲ. ಅವರಿಗೆ ಶುಗರ್ ಇರುವುದರಿಂದ ಶೌಚಕ್ಕೆ ಅತಿಯಾಗಿಯೇ ಹೋಗುತ್ತಾರೆ ಎಂದು ಸೂರಿಗೆ ಗೊತ್ತಿತ್ತು.. ಹಾಗಾಗಿ ಅವನು ಹೆಚ್ಚಿಗೆ ಸಂಶಯ ಪಡದೆ ಸೋಫಾದಲ್ಲಿಯೇ ಸ್ವಲ್ಪ ಹೊರಳಾಡಿ ನೀರು ಕುಡಿಯಲಿಕ್ಕೆ ಎದ್ದ. 
ಸೂರಿಯ ಮನೆಯಲ್ಲಿ ಅಡಿಗೆ ಮನೆ ಹಾಲಿನ ದಕ್ಷಿಣಕ್ಕೆ ಇದ್ದಾರೆ ಶೌಚಾಲಯ ಹಾಲಿನ ಪೂರ್ವಕ್ಕಿತ್ತು. ಎರಡಕ್ಕೂ ಹಾಲಿನಿಂದ ಒಂದೇ ಬಾಗಿಲು.ಆ ಬಾಗಿಲಿನಿಂದ ಎಡಕ್ಕೆ ಹೋದರೆ ಅಡಿಗೆ ಮನೆಬಲಕ್ಕೆ ಹೋದರೆ ಸ್ನಾನದ ಮತ್ತು ಶೌಚದ ಮನೆ. ಬಾಗಿಲ ಬಳಿ ನಿಂತರೆ ಸ್ನಾನದ ಮತ್ತು ಶೌಚದ ಮನೆಯ ಲೈಟು ಆನ್ ಇದ್ದಾರೆ ಕಾಣುತ್ತಿತ್ತು. ಅದರಿಂದ ಒಳಗೆ ಯಾರಾದರೂ ಇದ್ದಾರೆಂದು ಬೇರೆಯವರಿಗೆ ಗೊತ್ತಾಗುತ್ತಿತ್ತು. ದೇವಪ್ಪ ಶೌಚಕ್ಕೆ ಹೋಗಿರಬೇಕೆಂದು ಅಭ್ಯಾಸದಂತೆ ಶೌಚದ ಲೈಟು ಆನ್ ಇದೆಯೇ ಎಂದು ನೋಡಿದ. ಆದರೆ ಅದು ಆಫ್ ಇತ್ತು. ಇನ್ನೂ ಅಡಿಗೆ ಮನೆಯ ಲೈಟೂ ಆಫ್ ಇತ್ತು. ಸೂರಿಗೆ ದೇವಪ್ಪ ಮತ್ತೆಲ್ಲಿಗೆ ಹೋಗಿರಬಹುದೆಂದು ಅನುಮಾನವಾಯ್ತು. ವಾಪಸ್ಸು ಹೋಗಿ ಅವರು ಮಲಗುತ್ತಿದ್ದ ರೂಮನ್ನು ಒಮ್ಮೆ ನೋಡಿದ. ಶಾಂತಮ್ಮ ಒಬ್ಬರೇ ಮಲಗಿದ್ದರು. ಅವನಿಗೆ ನಿದ್ದೆಯ ಜೊಂಪೆಲ್ಲಾ ಒಮ್ಮೆಲೇ  ಇಳಿದುಹೋಯ್ತು. ಏನಕ್ಕೂ ಇರಲಿ ಎಂದು ಮನೆಯಲ್ಲಿದ್ದ ಇನ್ನೊಂದು ರೂಮನ್ನೂ ಹೋಗಿ ಹುಡುಕಿದ. ದೇವಪ್ಪ ಅಲ್ಲೂ ಇರಲಿಲ್ಲ. ಸೂರಿಗೆ ಏನೂ ಮಾಡಬೇಕಂದೇ ತೋಚಲಿಲ್ಲ. ಮತ್ತೊಮ್ಮೆ ಮನೆಯನ್ನೆಲ್ಲಾ ಜಾಲಾಡಿ ನೋಡಿದ. ದೇವಪ್ಪನ ಸುಳಿವೇ ಇಲ್ಲಾ. ಭಯದಿಂದ ನಡುಗುತ್ತಲೇ ಓಡಿ ಹೋಗಿ ಶಾಂತಮ್ಮನನ್ನು ಎಬ್ಬಿಸಿದ. 
ಶಾಂತಮ್ಮನಿಗೆ ನಡೆದುದ್ದನ್ನೆಲ್ಲಾ ಅರ್ಥ ಮಾಡಿಸುವಷ್ಟರಲ್ಲಿ ಸೂರಿಗೆ ಸಾಕುಸಾಕಾಗಿ ಹೋಯಿತು. ನಿದ್ರೆಯ ಮಂಪಲ್ಲಿ ಶಾಂತಮ್ಮನಿಗೆ ಅದೆಷ್ಟು ಅರ್ಥವಾಯಿತೋ ಏನೋಆದರೆ ಸೂರಿ ಅಷ್ಟೊಂದು ಗಾಬರಿಯಾಗಿದ್ದನ್ನು ಕಂಡು ದೇವಪ್ಪನಿಗೆ ಏನೋ ಆಗಿಯೇ ಬಿಟ್ಟಿದೆ ಎಂದುಕೊಂಡರು. ಊರಿಂದ ದೂರದ ಮನೆ ಬೇರೆ. ಕಿರುಚಿದರೂ ಯಾರಿಗೂ ಕೇಳುವುದಿಲ್ಲ. ಅಂತದ್ದರಲ್ಲಿ ಗಂಡನನ್ನು ಎಲ್ಲೆಂದು ಹುಡುಕೋದು ಎಂದು ಯೋಚಿಸಿಯೇ ಶಾಂತಮ್ಮ ಕುಸಿದುಬಿಟ್ಟರು. ಸೂರಿ ಶಾಂತಮ್ಮನಿಗೆ ಇದು ಅಳುವ ಸಮಯವಲ್ಲ ಎಂದು ತಿಳಿ ಹೇಳಿ ದೇವಪ್ಪನನ್ನು ಹುಡುಕಲು ಹೊರಟ. ಶಾಂತಮ್ಮನೂ ಸೂರಿಯ ಹಿಂದೆಯೇ ರೂಮಿನಿಂದ ಎದ್ದು ಹೊರಬಂದರು. ಇಬ್ಬರೂ ಸೇರಿ ಮತ್ತೊಮ್ಮೆ ಮನೆಯನ್ನು ಚೆನ್ನಾಗಿ ಹುಡುಕಿದರೂ ದೇವಪ್ಪನ ಸುಳಿವೇ ಸಿಕ್ಕಲಿಲ್ಲ.
ಸೂರಿಗೆ ಅನುಮಾನ ಬಂದು ಮುಂಬಾಗಿಲ ಬಳಿ ಬಂದು ನೋಡಿದರೆ ಹಾಕಿದ್ದ ಚಿಲಕ ತೆಗೆದಿತ್ತು. ಅದರಿಂದ ದೇವಪ್ಪ ಹೊರಗೆ ಹೋಗಿದ್ದಾರೆನ್ನುವುದು ಇಬ್ಬರಿಗೂ ಸ್ಪಷ್ಟವಾಯ್ತು. ಆದರೆ ದೇವಪ್ಪ ಎಂದಿಗೂ ನಡುರಾತ್ರಿಯಲ್ಲಿ ಹೊರಹೋದವರಲ್ಲ. ತೋಟದ ಕೆಲಸಕ್ಕಂತಲೇ ಆಳಿದ್ದುದರಿಂದ ಅವರಿಗೆ ಎಲ್ಲಿಗೂ ಹೋಗುವ ಪ್ರಮೇಯ ಇರಲಿಲ್ಲ. ಸೂರಿ ಮತ್ತು ಶಾಂತಮ್ಮ ಇಬ್ಬರೂ ಹೊರಗೆ ಬಂದು ಅಂಗಳದಲ್ಲಿ ನಿಂತು ಒಮ್ಮೆ ಸುತ್ತಲೂ ಟಾರ್ಚನ್ನು ಹಾಯಿಸಿದರು. ಬರೀ ಕತ್ತಲೆಯ ಹೊರತು ಬೇರೇನೂ ಕಾಣಲಿಲ್ಲ. ದೇವಪ್ಪನ ಬೈಕು ಕೂಡ ಅಂಗಳದಲ್ಲಿಯೇ ಇತ್ತು. ಸೂರಿ ಜೋರಗೊಮ್ಮೆ "ಅಪ್ಪಾ..." ಎಂದು ಕಿರುಚಿದ. ಏನೂ ಉತ್ತರ ಬರದೇ ಮತ್ತೊಮ್ಮೆ ಇನ್ನೂ ಜೋರಾಗಿ "ಅಪ್ಪಾ" ಎಂದು ಕಿರುಚಿದ. ಮತ್ತೂ ಉತ್ತರವಿಲ್ಲ. ಉದ್ದನೆಯ ಅಡಿಕೆಯ ಮರಗಳು ಗಾಳಿಯಲ್ಲಿ ತೊಯ್ದಾಡುತ್ತಾ ರಾತ್ರಿಯ ಹೊತ್ತಲ್ಲಿ ಭಯಾನಕವಾಗಿ ಕಾಣಿಸಿದವು. ಮಗನ ಮಾತಿನಲ್ಲಿದ್ದ ಭಯ ಕಂಡು ಶಾಂತಮ್ಮ ಸೂರಿಗೆ "ನೀನು ಇಲ್ಲೇ ನಿಂತು ನಿಮ್ಮಪ್ಪ ಎಲ್ಲಿಗಾದ್ರೂ ಹೋಗಿದ್ರೆ ವಾಪಸ್ಸು ಬರ್ತಾರಾ ಅಂತ ನೋಡು. ನಾನು ಮನೆ ಹಿಂದೆ ಒಮ್ಮೆ ನೋಡಿಕೊಂಡು ಬರ್ತೀನಿ" ಎಂದರು. ಸೂರಿಗೆ ತನ್ನ ತಾಯಿಯನ್ನು ಹಾಗೆ ಒಬ್ಬರೇ ಕಳುಹಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಮನೆಯಲ್ಲಿ ಇದ್ದುದು ಇಬ್ಬರೇ ಆದ್ದರಿಂದ ಸಮರ್ಪಕವಾಗಿ ಹುಡುಕುವುದಾದರೆ ಅದೇ ಸರಿಯಾದ ರೀತಿ ಎನ್ನಿಸಿತು. ಆಗಲಿ ಎಂದು ಮನೆಯಂಗಳದಲ್ಲಿಯೇ ಜೋರಾಗಿ ಅಪ್ಪಾ ಅಪ್ಪಾ ಎಂದು ಕೂಗುತ್ತ ಟಾರ್ಚು ಹಾಯಿಸುತ್ತಲೇ ನಿಂತ.
ಇತ್ತ ಶಾಂತಮ್ಮ ಮತ್ತೊಂದು ಟಾರ್ಚು ತೆಗೆದುಕೊಂಡು ಹಿಂದಿನ ಬಾಗಿಲು ತೆಗೆದು ಮನೆಯ ಹಿಂದೆಲ್ಲಾ ಹುಡುಕಾಡಿದರು. ಅತ್ತ ಸೂರಿ ಮನೆಯ ಮುಂದೆ ನಿಂತು ಇನ್ನೂ ಅಪ್ಪಾ ಅಪ್ಪಾ ಎಂದು ಕೂಗುತ್ತಿರುವುದು ಶಾಂತಮ್ಮನಿಗೆ ಕೇಳುತ್ತಲೇ ಇತ್ತು. ಶಾಂತಮ್ಮ ತನ್ನ ಗಂಡನನ್ನು ಹುಡುಕುತ್ತಾ ಅತ್ತಿತ್ತ ಒಂದೆರೆಡು ಹೆಜ್ಜೆ ಓಡಾಡಿದರೂ ಏನೂ ಕಾಣಲಿಲ್ಲ. ಏನಕ್ಕೂ ಇರಲಿ ಎಂದು ಶಾಂತಮ್ಮ ಮನೆಯನ್ನು ಒಂದು ಸುತ್ತು ಹಾಕುವುದಕ್ಕೆ ತೀರ್ಮಾನಿಸಿ ಆ ಕತ್ತಲಲ್ಲಿಯೂ ಧೈರ್ಯದಿಂದಲೇ ಮನೆಯ ಬಲಭಾಗಕ್ಕೆ ಬಂದರು. ಅಲ್ಲಿನ ದೃಶ್ಯ ಕಂಡು ಹೆದರಿ ಹೌಹಾರಿ ಜೋರಾಗಿ ಕಿರುಚಿಕೊಂಡು ಅಲ್ಲಿಯೇ ಕಲ್ಲಿನಂತೆ ನಿಂತುಬಿಟ್ಟರು.
ಸೂರಿಗೆ ತನ್ನ ತಾಯಿಯ ಕೂಗು ಕೇಳಿ ಕಾಲೇ ಮರಗಟ್ಟಿಹೋದವು. ಎರೆಡು ಕ್ಷಣ ಅವನಿಗೆ ತನ್ನ ಕಾಲುಗಳ ಮೇಲೆ ಹಿಡಿತವೇ ಇರಲಿಲ್ಲ. ತನ್ನ ತಾಯಿಯ ಕೂಗು ಕೇಳಿ ಅವರ ಹತ್ತಿರ ಓಡಿಹೋಗಬೇಕೆನ್ನಿಸಿದರೂ ಅವನ ಕಾಲುಗಳನ್ನೇ ಅವನಿಗೆ ಎತ್ತಲು ಆಗಲಿಲ್ಲ. ನಿಂತಲ್ಲಿಯೇ "ಅಮ್ಮಾ....ಎಲ್ಲಿದೀಯ" ಎಂದು ಜೋರಾಗಿ ಕೂಗಿದ. ಆದರೆ ಅವನ ಪ್ರಶ್ನೆಗೆ ಉತ್ತರ ಬರಲಿಲ್ಲ. ಎಲ್ಲಿ ತನ್ನ ತಾಯಿಗೆ ಏನಾದರೂ ಆಯಿತೋ ಎಂದು ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ತನ್ನ ಕಾಲುಗಳನ್ನು ಎಳೆದುಕೊಂಡು ಮನೆಯ ಬಾಗಿಲು ಮುಟ್ಟಿದ. ಅಷ್ಟರಲ್ಲಿ ಅವನ ಕಾಲುಗಳು ಆಶ್ಚರ್ಯವೆಂಬಂತೆ ಸರಿಹೋದವು. ಅಲ್ಲಿಂದ ಓಡಿ ಮನೆಯ ಹಿಂಬಾಗಿಲು ತಲುಪಿದ. ಶಾಂತಮ್ಮನನ್ನು ಕಾಣದೆ ಜೋರಾಗಿ ಅಮ್ಮಾ ಎಂದು ಕೂಗಿದ. ಅತ್ತ ಶಾಂತಮ್ಮ ಜೋರಾಗಿ ಸೂರಿ ಎಂದು ಕೂಗಿದರು. ಶಬ್ದ ಬಂದ ಕಡೆಗೆ ಸೂರಿ ಓಡಿದ. ಮನೆಯ ಬಲಭಾಗಕ್ಕೆ ಬರುವಷ್ಟರಲ್ಲಿಯೇ ಸೂರಿಗೆ ಶಾಂತಮ್ಮ ಸಿಕ್ಕರು. ಅವರು ಒಂದು ಕಡೆ ಟಾರ್ಚು ಬಿಟ್ಟುಕೊಂಡು ಕಲ್ಲಿನಂತೆ ನಿಂತಿದ್ದರು. 
ತನ್ನ ತಾಯಿಯನ್ನು ಕಂಡೊಡನೆಯೇ ಸೂರಿ "ಏನಾಯ್ತಮ್ಮಯಾಕ ಕಿರುಚ್..." ಮಾತು ಮುಗಿಸುವ ಮುಂಚೆಯೇ ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ಸೂರಿ ದೇವಪ್ಪನನ್ನು ಕಂಡ. ಅವರು ಅವರ ರೂಮಿನ ಕಿಟಕಿಯಿಂದ ಸುಮಾರು ೫ ಅಡಿ ದೂರದಲ್ಲಿ ಒಂದು ಸಣ್ಣ ಗಿಡದ ಮುಂದೆ ತಮ್ಮ ಮೊಳಕಾಲೂರಿ ಕುಳಿತು ತಮ್ಮೆರೆಡೂ ಕೈಗಳನ್ನು ಭುಜದ ನೇರಕ್ಕಿಂತ ಸ್ವಲ್ಪ ಮೇಲೆತ್ತಿ ಕುಳಿತಿದ್ದರು. ಮೈಕೈಯೆಲ್ಲಾ ಮಣ್ಣಾಗಿತ್ತು.  ಬಾಯಿಯಲ್ಲೇನೋ ಚಡಪಡಿಸುತ್ತಿದ್ದರು. ಆದರೆ ಅವರ ಕಣ್ಣುಗಳನ್ನು ನೋಡಿ ಸೂರಿ ನಡುಗಿಹೋದ. ಅವರ ಕಣ್ಣುಗಳು.....ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ಕೆಂಪಗೆ ಹೊಳೆಯುತ್ತಿದ್ದವು.

ಮುಂದುವರೆಯುವುದು.....

ತೋಟದ ಮನೆ : ಭಾಗ-2

ತೋಟದ ಮನೆ ಭಾಗ-೨ ಪ್ರೇತದ ಅಟ್ಟಹಾಸ ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದ...