ನನ್ನ ಬ್ಲಾಗ್ ಪಟ್ಟಿ

ಶನಿವಾರ, ಫೆಬ್ರವರಿ 29, 2020

ಸೋಮನ ಜೊತೆ


ನಾನು ಚಿಕ್ಕವನಿದ್ದಾಗ ನನ್ನ ಅಜ್ಜನ ಮನೆಯಲ್ಲಿ ಒಂದು ನಾಯಿಯಿತ್ತು. ಸೋಮ ಎಂದು ಅದರ ಹೆಸರು. ಮನುಷ್ಯರಿಗಿಡುವ ಹೆಸರನ್ನು ನಾಯಿಗೇಕೆ ಇಟ್ಟಿದ್ದಿರಿ ಎಂದು ನೀವು ಕೇಳಬಹುದು. ಅದರ ನಿಜವಾದ ಹೆಸರು ಸೋಮ ಅಲ್ಲ. ಅದನ್ನು ನನ್ನ ಅಜ್ಜನ ಮನೆಗೆ ತಂದುಕೊಟ್ಟವನ ಹೆಸರು ಸೋಮ. ಮೊದಲೆಲ್ಲಾ ಅದನ್ನು ಸೋಮನ ನಾಯಿ ಎಂದೇ ಕರೆಯುತ್ತಿದ್ದರಂತೆ. ಬರುತ್ತಾ ಬರುತ್ತಾ, ಅಷ್ಟು ಉದ್ದದ ಹೆಸರು ಹೇಳಲು ಕಷ್ಟವಾಗಿ ಎಲ್ಲರೂ ಬರೀ ಸೋಮ ಎಂದು ಕರೆಯಲು ಶುರುಮಾಡಿದರಂತೆ. ನಾಯಿಗೂ ಹೆಸರು ಇಷ್ಟವಾಗಿ, ಯಾರಾದರೂ ಸೋಮ ಎಂದರೆ ಸಾಕು, ಬಾಲ ಅಲ್ಲಾಡಿಸುತ್ತ ಅವರತ್ತ ಓಡಿಬಿಡೋದು. ಹಲವು ದಿನಗಳ ನಂತರ ಅಜ್ಜನ ಸಂಬಂದಿ ಸೋಮಯ್ಯ, ಅದೇ ನಾಯಿ ತಂದುಕೊಟ್ಟವರು, ಅವರು ಮನೆಗೆ ಬಂದಾಗ ಅವರ ಹೆಸರೇ ನಾಯಿಗೂ ಇಟ್ಟದ್ದು ಕಂಡು ಕಸಿವಿಸಿಗೊಂಡರಂತೆ. ನಮ್ಮಜ್ಜ ಸೋಮನ, ಅಂದರೆ ನಾಯಿಯ, ಶಿಸ್ತು, ನೀಯತ್ತನ್ನು ಹಾಡಿ ಹೊಗಳಿದ ಮೇಲೇ ಅವರು ಸಮಾಧಾನಗೊಂಡದ್ದು ಎಂದು ಅಜ್ಜ ಹೇಳಿದರು.
ನಾಯಿಯೇನೂ ಈಗಿನ ಕಾಲದವರು ಸಾಕುವಂತಹ ಒಳ್ಳೇ ತಳಿಯ ನಾಯಲ್ಲ. ಊರಲ್ಲಿರುವ ಎಲ್ಲಾ ಬೀದಿನಾಯಿಗಳಂತೆಯೇ ಇದೂ ಒಂದು ಅಷ್ಟೇ. ಆದರೆ ಉಳಿದೆಲ್ಲವುಕ್ಕಿಂತಲೂ ಅತೀ ತೀಕ್ಷ್ಣ, ಬುದ್ದಿವಂತ, ಮತ್ತು ನಿಯತ್ತಿನ ಪ್ರಾಣಿ. ಅದರ ನಿಯತ್ತನ್ನು, ನಮ್ಮಜ್ಜನನ್ನು ಬಿಡಿ, ಪಕ್ಕದ ಮನೆಯವರೆಲ್ಲರೂ ಹಾಡಿ ಹೊಗಳಿದ್ದೇ ಹೊಗಳಿದ್ದು. ಅಂತಹ ನಾಯಿ ನಮಗಾದರು ಸಿಗಬಾರದಿತ್ತೇ ಎಂದು ಕೊರಗಿದವರೂ ಇದ್ದರು. ನಾಯಿಗೆ ಅಂತಹ ಹೆಸರಿತ್ತು
ಈಗಿನ ಕಾಲದವರು ನಾಯಿಗಳನ್ನು ಅಡುಗೆ ಮನೆ ಬಚ್ಚಲು ಮನೆ ಎನ್ನದೆ ಎಲ್ಲಂದರಲ್ಲಿ ಓಡಾಡಲು ಬಿಡುತ್ತಾರೆ. ಅದಕ್ಕಾಗಿಯೇ ಒಂದು ಮನೆ, ಆಡಲು ಆಟದ ಸಾಮಾನು, ತಾವು ತಿನ್ನುವುದಕ್ಕಿಂತಾ ಹೆಚ್ಚಿನ ಖರ್ಚು ಮಾಡಿ ಊಟ ಹಾಕುತ್ತಾರೆ. ಆದರೆ ನಮ್ಮಜ್ಜನ ನಾಯಿಗೆ ಅಂತಹ ಸವಲತ್ತುಗಳೇನು ಇರಲಿಲ್ಲ. ತಿನ್ನಲು ಕೆರಕಲು ಮುದ್ದೆ ಬಿಟ್ಟರೆ ಅದಕ್ಕಿನ್ನೇನು ಹಾಕಿದ್ದೇ ನೋಡಿಲ್ಲ. ಹಳ್ಳಿಯಲ್ಲಿರುವ ನಾಯಿಗಳದೆಲ್ಲ ಅದೇ ಪಾಡು ಬಿಡಿ. ಶ್ರೀಮಂತಿಕೆಯ ಸುಪ್ಪತ್ತಿನಲ್ಲಿ ಬೆಳೆಯುವ ಅದೃಷ್ಟ ನಾಯಿಗಿರಲಿಲ್ಲ. ಹಾಕಿದ್ದನ್ನು ತೆಪ್ಪಗೆ ತಿಂದು ಮನೆ ಕಾಯುವುದೊಂದೇ ಅದರ ಕೆಲಸವಿತ್ತು. ಬೆಳಗಿನ ಹೊತ್ತು ಅಜ್ಜನ ಜೊತೆ ಹೊಲಕ್ಕೆ ಹೋಗೋದು, ಸಂಜೆಯ ಹೊತ್ತು ಮನೆ ಮುಂದೆ ಇರುವ ಕಟ್ಟೆಯ ಕೆಳಗೆ ಕುಳಿತುಕೊಳ್ಳೋದು ಅಷ್ಟೇ ಅದು ಮಾಡುತ್ತಿದ್ದುದು. ಅದಕ್ಕೆ ನಮ್ಮ ಅಜ್ಜನ ಮನೆಗೆ ಯಾರೆಲ್ಲ ಬರುತ್ತಿದ್ದರು ಎಂದು ಚೆನ್ನಾಗಿ ಗೊತ್ತಿತ್ತು. ಗೊತ್ತಿದ್ದವರು ಬಂದರೆ ಸುಮ್ಮನೆ ಎದ್ದು ನಿಲ್ಲೋದು, ಗೊತ್ತಿರದವರು ಬಂದರೆ ಬಾಗಿಲಿಗೆ ಅಡ್ಡವಾಗಿ ನಿಂತು ಮನೆಯವರು ಹೊರಗೆ ಬರುವವರೆಗೂ ಬೊಗೋಳೋದು. ಊರೂರು ತಿರುಗುವ ಗೊರಪ್ಪ, ಪಾತ್ರೆ ಮಾರುವವರೇನಾದರೂ ಬಂದರೆ ಅವರಿಗೆ ನಮ್ಮ ಮನೆಯ ಅಂಗಳಕ್ಕೂ ಬರಲು ಬಿಡುತ್ತಿರಲಿಲ್ಲ. ಯಾರಾದರೂ ಪ್ಯಾಂಟು ಟಿ ಶಿರ್ಟ್ ಹಾಕಿಕೊಂಡು ಬಂದರಂತೂ ಅವರನ್ನು ನಿಂತಲ್ಲಿಯೇ ಕೆಟ್ಟದಾಗಿ ಗುರಾಯಿಸೋದು. ಅವರು ಇದರ ನೋಟ ನೋಡಿಯೇ ನಮ್ಮಜ್ಜನನ್ನು ಮನೆಯಿಂದ ಇಪ್ಪತ್ತು ಅಡಿ ದೂರ ನಿಂತೇ ಕೂಗಿ ಕರೆಯೋರು.      
ನಾನು ಚಿಕ್ಕವನಿದ್ದಾಗ ರಜೆಯ ದಿನಗಳನ್ನೆಲ್ಲಾ ಕಳೆಯಲು ನಮ್ಮಜ್ಜನ ಊರಿಗೆ ಹೋಗೋದು ವಾಡಿಕೆ. ನಾನಲ್ಲಿಗೆ ಹೋದಾಗ ಮಾತ್ರ ಅದಕ್ಕೆ ಮನೆಯೊಳಗೆ ಪ್ರವೇಶ. ಅದೂ ನಾನು ಮನೆಯೊಳಗಿದ್ದರೆ ಮಾತ್ರ. ಇಲ್ಲದಿದ್ದರೆ ಮತ್ತದೇ ಮನೆಯ ಮುಂದಿನ ಕಟ್ಟೆಯ ಕೆಳಗೆಯೇ ಅದರ ವಾಸ. ನಾನಾಗ ಇನ್ನು ಎರಡನೇ ಕ್ಲಾಸು. ನಮ್ಮಪ್ಪನ ಮನೆಯಲ್ಲಿ ನಾಯಿ ಇರಲಿಲ್ಲ. ನಮ್ಮಮ್ಮನಿಗೆ ನಾಯಿ ಸಾಕೋಣ ಅಂದರೆ, ನಿಮ್ಮಪ್ಪನೇ ಇದರಲ್ಲೋ!! ಮತ್ಯಾಕೆ ಇನ್ನೊಂದು ನಾಯಿ?? ಅನ್ನೋರು. ಹೀಗಾಗಿ ನಾನು ಊರಿಗೆ ಹೋದಾಗಲೆಲ್ಲಾ ಸೋಮ ನನ್ನ ಆಪ್ತಮಿತ್ರನಾಗಿಬಿಡುತ್ತಿದ್ದ. ನಾವಿಬ್ಬರೂ ಎಷ್ಟು ಒಳ್ಳೆಯ ಗೆಳೆಯರಾಗಿದ್ದೆವು ಎಂದರೆ ನಾನದರ ಜೊತೆ ರನ್ನಿಂಗ್ ರೇಸು, ಕಳ್ಳ ಪೊಲೀಸು, ಕಟ್ಟೆಯ ಮೇಲಕ್ಕೂ ಕೆಳಕ್ಕೂ ನೆಗೆಯೋದು, ಮತ್ತೂ ಹಲವಾರು ಆಟವಾಡುತ್ತಿದ್ದೆ. ನಾನು ಊರಿಗೆ ಬಂದೆನೆಂದರು ನನಗಿಂತಲೂ ಸೋಮನಿಗೇ ಹೆಚ್ಚು ಖುಷಿ. ಯಾಕೆಂದರೆ ನನಗೆ ಸಿಗುತ್ತಿದ್ದ ತಿಂಡಿಗಳೆಲ್ಲವನ್ನೂ ನಾವು ಹಂಚಿಕೊಂಡೇ ತಿನ್ನುತ್ತಿದ್ದೆವು. ಸೋಮನಿಗೆ ಬಿಸ್ಕೇಟು, ಬ್ರೆಡ್ಡು ಏನಾದರು ಸಿಗಬೇಕೆಂದರೆ ನಾನು ಊರಿಗೆ ಬಂದಾಗಲಷ್ಟೇ. ಮನೆಯ ಬಾಗಿಲಲ್ಲಿ ಬಿಸ್ಕೆಟಿನ ಪೊಟ್ಟಣ ಇಟ್ಟರೂ ಅದನ್ನು ತಿನ್ನದಂತಹ ನಿಯತ್ತಿನ ಪ್ರಾಣಿ. ನಿಯತ್ತಿಗೆ ಇನ್ನೊಂದು ಹೆಸರು ನಾಯಿ ಅನ್ನೋದಕ್ಕೆ ಸೋಮ ಉದಾಹರಣೆಯಂತಿದ್ದ.  
ನನ್ನಜ್ಜನಿಗೆ ನಾನೆ ಮೊದಲ ಮೊಮ್ಮೊಗ. ಅದರಲ್ಲೂ ನಮ್ಮಪ್ಪ ಪೊಲೀಸು ಬೇರೆ. ಆದ್ದರಿಂದ ನನ್ನನ್ನು ಹದ್ದುಗಣ್ಣಿಟ್ಟೇ ಕಾಯೋರು. ನಾನು ನಮ್ಮ ಮನೆಯ ಓಣಿ ಬಿಟ್ಟು ಬೇರೆಲ್ಲೂ ಹೋಗುವಂತೆಯೇ ಇರಲಿಲ್ಲ. ಆದರೆ ಸೋಮ ನನ್ನ ಜೊತೆಯಿದ್ದರೆ ನನಗೆ ಸ್ವಲ್ಪ ಸ್ವತಂತ್ರ ಸಿಗೋದು. ನಾನು ಅಕ್ಕಪಕ್ಕದ ಓಣಿಗೆಲ್ಲಾ ಹೋಗಬಹುದಿತ್ತು. ಮತ್ತೂ ಮುಂದಕ್ಕೆ ಹೋದರೆ ಸೋಮನೇ ಜೋರಾಗಿ ಬೊಗಳಿ ಮನೆಯವರನ್ನು ಎಚ್ಚರಿಸಿಬಿಡೋನು. ಹೀಗಾಗಿ ನನಗೆ ಸೆರೆಮನೆಯ ಖೈದಿಗಳಿಗಿಂತಲೂ ಹೆಚ್ಚು ಕಣ್ಗಾವಲಿತ್ತು. ಒಮ್ಮೆ ನಾನು ರಾತ್ರಿ ಹೊತ್ತು ನಮ್ಮಜ್ಜನ ಮನೆಗೆ ಅಂಟಿಕೊಂಡೇ ಇದ್ದ ಚಿಕ್ಕಪ್ಪನ ಮನೆಗೆ ಹೋಗಿದ್ದೆ. ಆಗೆಲ್ಲಾ ಈಗಿರುವಂತೆ ಟಿವಿ ಯಾಗಲಿ, ಮೊಬೈಲಾಗಲಿ ಇರಲಿಲ್ಲ. ಚಿಕ್ಕಮಕ್ಕಳಿಗಿದ್ದ ಒಂದೇ ಮನರಂಜನೆಯೆಂದರು ಅಜ್ಜಿಯರಿಂದ, ಅಥವಾ ಬೇರೊಬ್ಬರಿಂದ ಕಥೆ ಕೇಳೋದು. ನನ್ನ ಚಿಕ್ಕಮ್ಮ ಬಹಳ ಚೆನ್ನಾಗಿ ಕಥೆ ಹೇಳುತ್ತಿದ್ದರು. ನಾನು ಅವರಿಗೆ ಸುಮಾರು ತೊಂದರೆ ಕೊಟ್ಟು ಒಂದು ಕಥೆ ಹೇಳೆಂದು ದುಂಬಾಲು ಬಿದ್ದೆ. ಅವರು ನನ್ನನ್ನು ಅಡುಗೆ ಮಾಡುವವರೆಗೂ ಅಲ್ಲಿಯೇ ಕುಳಿತಿರು ಎಂದು ಕೈಯಲ್ಲೊಂದು ಹಳೇ ಪುಸ್ತಕ ಕೊಟ್ಟು ಅಡುಗೆ ಮನೆ ಸೇರಿದರು. ಇತ್ತ ನಮ್ಮಜ್ಜನ ಮನೆಯಲ್ಲಿ ನನ್ನ ಸದ್ದೇ ಇಲ್ಲದ್ದನ್ನು ಗಮನಸಿದ ಅಜ್ಜಿ ರಾತ್ರಿ ಹೊತ್ತಲ್ಲಿ ಎಲ್ಲಿ ಹೋದ ನೋಡಿ ಎಂದು ನನ್ನಜ್ಜನನ್ನು ಕಳಿಸಿದರು. ಅಜ್ಜ ಹೊರಗೆ ಬಂದು ನೋಡಿದಾಗ ಸೋಮ ಯಥಾವತ್ ಅವನ ಜಾಗದಲ್ಲಿ ಮಲಗಿದ್ದನ್ನು ಕಂಡ ಅಜ್ಜ, ಅದು ನನ್ನನ್ನು ಯಾವುದೊ ಓಣಿಗೆ ಆಡಲು ಕರೆದುಕೊಂಡು ಹೋಗಿ ಅಲ್ಲೇ ಬಿಟ್ಟುಬಂದುಬಿಟ್ಟಿದೆ ಎಂದು ಅಲ್ಲೇ ಇದ್ದ ಹಳೆಯ ಬಕೆಟ್ಟಿನಿಂದ ಸರಿಯಾಗಿ ನಾಲ್ಕು ತದುಕಿದರು. ನೋವು ತಾಳಲಾರದೆ ಅದು ಕುಯ್ಯಯ್ಯೋ...ಎಂದು ಕೂಗಿದ್ದನ್ನು ಕೇಳಿ ನಾನು ಎದ್ದು ಓಡಿ ಬಂದೆ. ಸ್ವಲ್ಪ ಹೊತ್ತಿನ ನಂತರ ಅಜ್ಜಿಗೆ ಅಜ್ಜ ಯಾಕೆ ಸೋಮನಿಗೆ ಹೊಡೆದರೆಂದು ಕೇಳಿದೆ. ಅವರು ನಕ್ಕು "ನಿನ್ನನ್ನು ಎಲ್ಲೋ ಕರೆದುಕೊಂಡು ಹೋಗಿ ಬಿಟ್ಟುಬಂದಿದೆ ಎಂದುಕೊಂಡು ಹೊಡೆದುಬಿಟ್ಟರು" ಎಂದರು. ಅದೇ ಕೊನೆ, ನಾನು ಊರು ಬಿಡುವವರೆಗೂ ಸೋಮ ನನ್ನ ಬದಿಯಲ್ಲೇ ನಿಂತಿರುತ್ತಿದ್ದ
ಒಂದು ದಿನ ನಾನು ಮತ್ತು ಸೋಮ ರನ್ನಿಂಗ್ ರೇಸು ಆಡುತ್ತಿದ್ದೆವು. ಪ್ರತಿ ಬಾರಿಯೂ ಸೋಮನೇ ನನಗಿಂತ ಜೋರಾಗಿ ಓಡಿದರೂ, ನನಗಿಂತ ಎರೆಡು ಹೆಜ್ಜೆ ಮುಂದೆ ಹೋದ ತಕ್ಷಣವೇ ಮತ್ತೆ ಕುಪ್ಪಳಿಸಿ ಕುಪ್ಪಳಿಸಿ ನನ್ನ ಹಿಂದೆ ಬರುತ್ತಿದ್ದ. ಮತ್ತೆ ನಮ್ಮ ರೇಸು ಶುರುವಾಗೋದು. ಅವತ್ತು ಇಬ್ಬರೂ ಬೆಳ್ಳಂಬೆಳಗ್ಗೆಯೇ ಗಡದ್ದಾಗಿ ತಿಂದುದರಿಂದಲೋ ಏನೋ, ಎಷ್ಟು ಓಡಿದರೂ ಸುಸ್ತೆ ಆಗಲಿಲ್ಲ. ಹೀಗೆ ಆಡುತ್ತಾ ಆಡುತ್ತಾ ಇಬ್ಬರು ಹೆಚ್ಚುಕಮ್ಮಿ ಊರಿನ ಕೊನೆಯ ಓಣಿಯವರೆಗೂ ಬಂದುಬಿಟ್ಟಿದ್ದೆವು. ಸೋಮನಿಗೆ ಅದರ ಅರಿವಾದೊಡನೆಯೇ ಮತ್ತೆ ವಾಪಸ್ಸು ಓಡಲು ಶುರುಮಾಡಿದ. ನಾನು ಅವನ ಹಿಂದೆಯೇ ಓಡಿಬರುತ್ತೇನೆ ಎನ್ನೋ ನಂಬಿಕೆ ಅವನಿಗೆ. ಆದರೆ ನನಗೆ ಜಾಗವೆಲ್ಲಾ ಹೊಸದು. ನಾನು ನಿಂತಲ್ಲಿಯೇ ಅಲ್ಲಿರುವ ಮನೆಗಳು, ಮನೆಗಳ ಮುಂದೆ ಕಟ್ಟಿದ್ದ ಕುರಿ, ದನ, ಮೇಕೆಗಳನ್ನು ನೋಡುತ್ತಾ ಇದ್ದುಬಿಟ್ಟೆ. ಸೋಮ ಮತ್ತೆ ನನ್ನ ಕಡೆಗೆ ಓಡಿ ಬಂದದ್ದು ನೋಡಿ ಮತ್ತೆ ನಮ್ಮ ರೇಸು ಶುರುವಾಯಿತೆಂದು ನಾನು ಊರಿಂದ ಹೊರಕ್ಕೆ ಹೋಗುವ ದಾರಿಯಲ್ಲಿ ಮತ್ತೆ ಓಡಲು ಶುರುಮಾಡಿದೆ. ಕ್ಷಣಮಾತ್ರದಲ್ಲಿ ಸೋಮ ನನ್ನನ್ನು ಹಿಂದೆ ಹಾಕಿ ನನ್ನ ಕಾಲಿಗೆ ತೊಡರಾಗಿ ನಿಂತುಬಿಟ್ಟ. ಅವನು ನನ್ನ ಜೊತೆ ಆಟವಾಡುತ್ತಿದ್ದಾನೆ ಎಂದುಕೊಂಡು ಮತ್ತೂ ಓಡಿದೆ. ಕೊನೆಗವನು ನನ್ನನ್ನು ತಡೆಹಾಕಿ ನನ್ನ ಶರ್ಟಿಗೆ ಬಾಯಿಹಾಕಿ ವಾಪಸ್ಸು ಎಳೆಯಲು ಶುರುಮಾಡಿದ. ನನಗೇನೂ ಅವನು ಬಾಯಿಹಾಕಿದ್ದಕ್ಕೆ ಹೆದರಿಕೆ ಆಗಲಿಲ್ಲ. ನಾವಿಬ್ಬರೂ ಹೀಗೆ ತುಂಬಾ ಬಾರಿ ಆಡಿದ್ದರಿಂದ ನನಗಿನ್ನೂ ನಾವು ಆಡುತ್ತಿದ್ದೇವೆ ಅಂತಲೇ ಯೋಚನೆ. ನಾನು ಹೇಗೋ ಅದರಿಂದ ಬಿಡಿಸಿಕೊಂಡು ಇನ್ನು ಜೋರಾಗಿ ಓಡಿದೆ. ನಾನು ಓಡುತ್ತಿದ್ದುದು, ನನ್ನ ಹಿಂದೆ ನಾಯಿಯೊಂದು ಓಡಿಬರುತ್ತಿರುವುದು ನೋಡಿದ ಅಲ್ಲಿಯ ಕೆಲವು ಬೀದಿನಾಯಿಗಳು ಜೋರಾಗಿ ಬೌ ಬೌ ಎಂದು ನನ್ನ ಕಡೆಗೆ ದೌಡಾಯಿಸಿದವು. ನಾನು ಒಮ್ಮೆಲೇ ಅಷ್ಟೊಂದು ನಾಯಿಗಳು ನನ್ನ ಕಡೆಗೆ ಓಡಿ ಬರುತ್ತಿದ್ದುದನ್ನು ನೋಡಿಅಯ್ಯಯ್ಯೋಎಂದು ಕಿರುಚುತ್ತಾ ಮತ್ತು ಜೋರಾಗಿ ಓಡಿದೆ. ಹಿಂದೆ ಸೋಮನಿಗೆ ನನ್ನನ್ನು ಹಿಡಿಯಬೇಕೋ, ಅಥವಾ ನನ್ನ ಹಿಂದಿದ್ದ ನಾಯಿಗಳ ಜೊತೆ ಹೊಡೆದಾಡಬೇಕೋ ತಿಳಿಯದಂತಾಗಿ ತನ್ನ ಹಿಂದಕ್ಕೂ ಮುಂದಕ್ಕೂ ನೋಡುತ್ತಾ ನನ್ನ ಹಿಂದೆಯೇ ಓಡಿದ. ಅಷ್ಟು ಹೊತ್ತಿಗೆ ನಾನು ಆಗಲೇ ಊರಿನಿಂದ ಸುಮಾರು ೨೦೦ ಮೀಟರು ದೂರ ಬಂದುಬಿಟ್ಟಿದ್ದೆ
ಇದ್ದಕ್ಕಿದ್ದಂತೆ ಸೋಮನಿಗೆ ಅದೇನಾಯಿತೋ ಗೊತ್ತಿಲ್ಲ, ನಾಯಿಗಳೆಲ್ಲಿ ನನ್ನನ್ನು ಏನಾದರು ಮಾಡಿಬಿಟ್ಟವೋ ಎಂದು ತಿರುಗಿ ನಿಂತು ಜೋರಾಗಿ ಬೊಗಳುತ್ತ ನಾಯಿಗಳ ಕಡೆಗೆ ಓಡಿದ. ನಾಯಿಗಳಿಗೆ ಸೋಮಾನ್ಯಕೆ ತಿರುಗಿಬಿದ್ದ ಎನ್ನುವುದು ಗೊತ್ತಾಗುವ ಮೊದಲೇ ಅಲ್ಲಿದ್ದ ನಾಯಿಯೊಂದರ ಮುಂಗಾಲಿಗೆ ಅದು ಕುಯ್ಯಯ್ಯೋ ಎನ್ನುವಂತೆ ಕಚ್ಚಿ ಅದರ ಪಕ್ಕದಲ್ಲಿದ್ದ ನಾಯಿಯ ಮೇಲೇ ಬಿದ್ದ. ಸೋಮನ ದಾಳಿಗೆ ಕಾರಣವೇ ತಿಳಿಯದ ನಾಯಿಗಳು ಸುಮ್ಮನೆ ಕಡೆ ಕಡೆ ನೆಗೆದು ಸೋಮನ ಬಾಯಿಂದ ತಪ್ಪಿಸಿಕೊಂಡವು. ಅವೆಲ್ಲಾ ಸುಮ್ಮನೇ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತ ಮೇಲೇ ಸೋಮ ನನ್ನ ಕಡೆಗೆ ನೋಡಿದರೆ ನಾನಿನ್ನೂ ಪಿ ಟಿ ಉಷಾ ತರಹ ಓಡುತ್ತಲೇ ಇದ್ದೆ. ನನ್ನ ಮನಸ್ಸಿನಲ್ಲಿ ಇನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತಲೇ ಇದ್ದಂತಹ ಭಾವನೆ. ಹಿಂದೆ ತಿರುಗಿಯೂ ನೋಡಿರಲಿಲ್ಲ ನಾನು. ನಾನು ಅಷ್ಟೊಂದು ದೂರ ಇದ್ದದ್ದನ್ನು ಕಂಡು ಸೋಮ ಮತ್ತೆ ನನ್ನ ಕಡೆಗೆ ಓಡಿದ. ಅವನನ್ನು ಕಂಡು ಉಳಿದ ನಾಯಿಗಳೆಲ್ಲವೂ ಮತ್ತೆ ಅವನ ಹಿಂದೆಯೇ ಓಡಲು ಶುರುಮಾಡಿದವು. ಸೋಮನಿಗೆ ಅವುಗಳನ್ನು ಕಂಡು ನಿಜವಾಗಿಲು ತಿಕ್ಕಲು ಹಿಡಿದಿರಬೇಕು. ಒಮ್ಮೆ ತಿರುಗಿ ನಿಂತು ಅವುಗಳ ಮೇಲೇ ಧಾಳಿಯಿಟ್ಟ ನೋಡಿ, ಇಪ್ಪತ್ತು ಸೆಕೆಂಡುಗಳಲ್ಲಿ ನಾಯಿಗಳ ಹಿಂಡು ಬರಖಾಸ್ತಾಗಿ ಹೋಯಿತು. ಅವು ಮತ್ತೊಮ್ಮೆ ಅವನನ್ನು ಹಿಂಬಾಲಿಸದಂತೆ ನೋಡಿಕೊಂಡು ಸೋಮ ನನ್ನ ಕಡೆಗೆ ಓಡಿದ. ನಾಯಿಗಳೆಲ್ಲವೂ ಅಲ್ಲಿಯೇ ನಿಂತು ನಮ್ಮಿಬ್ಬರನ್ನು ನೋಡಿದವು
ಸೋಮ ನನ್ನ ಬಳಿಗೆ ಬರುವ ಹೊತ್ತಿಗೆ ನಾನಾಗಲೇ ಸಂಪೂರ್ಣವಾಗಿ ಧಣಿದಿದ್ದೆ. ನನ್ನ ಕಾಲುಗಳಲ್ಲಿನ ಶಕ್ತಿಯೆಲ್ಲಾ ನಶಿಸಿಹೋಗಿ ಅವು ಥರಥರನೇ ನಡುಗುತ್ತಿದ್ದವು. ಎಲ್ಲವೂ ಅರ್ಥವಾದಂತೆ ಸೋಮ ನನ್ನ ಕೈಯ್ಯನ್ನು ನೆಕ್ಕುತ್ತಾ ನನ್ನನ್ನು ರೋಡಿನಿಂದ ಪಕ್ಕಕ್ಕೆ ಕರೆತಂದ. ನಾನು ಅಲ್ಲೇ ಇದ್ದ ದೊಡ್ಡದೊಂದು ಮರದ ಕೆಳೆಗೆ ಹೆಚ್ಚುಕಮ್ಮಿ ಕುಸಿದಂತೆ ಕುಳಿತೆ. ನನ್ನ ಜೀವನದಲ್ಲೇ ಅಷ್ಟೊಂದು ಸುಸ್ತಾಗಿರಲಿಲ್ಲ ನನಗೆ. ಓಡಿದ ರಭಸಕ್ಕೆ ಬೆವೆತು ಅದರಲ್ಲೇ ಸ್ನಾನವೂ ಆಗಿಹೋಗಿತ್ತು. ಅಲ್ಲಿ ಕುಳಿತು ಸುಮಾರು ಹೊತ್ತು ಏದುಸಿರು ಬಿಡುತ್ತಲೇ ಸುಧಾರಿಸಿಕೊಂಡೆ. ಸೋಮ ನನ್ನ ಅಕ್ಕಪಕ್ಕವೆಲ್ಲ ನೆಗೆದಾಡುತ್ತ ನನ್ನನ್ನು ಮೂಸಿ ಕೀರಲು ಧ್ವನಿಯಲ್ಲಿ ಕುಯ್ ಕುಯ್ ಎನ್ನುತ್ತಿದ್ದ. ಅವನಿಗೆ ನನ್ನ ಪರಿಸ್ಥಿತಿ ಅರ್ಥವಾಗಿರಲಿಕ್ಕೆ ಸಾಕು. ಸುಮಾರು ಹೊತ್ತು ಅಲ್ಲಿಯೇ ಕುಳಿದ್ದ ನನಗೆ ಓಡಿದ ಸುಸ್ತಿಗೋ, ಅಥವಾ ಮರದ ನೆರಳಿಗೋ ನಿದ್ರೆ ಬಂದಂತಾಯ್ತು. ಸೋಮ ಮಾತ್ರ ಇನ್ನು ನೆಗೆದಾಡುತ್ತಲೇ ಇದ್ದ. ನನಗೇನಾಗಿಲ್ಲ ಎಂದು ಅವನಿಗೆ ಗೊತ್ತಿದ್ದರೂ, ನನ್ನನ್ನು ಮೊದಲು ಮನೆ ಸೇರಿಸುವ ಚಿಂತೆ. ಅವನಿನ್ನೂ ನನ್ನ ಸುತ್ತ ಓಡಾಡುತ್ತಿರುವಾಗಲೇ ನಾನು ಕುಳಿತಲ್ಲಿಯೇ ನಿದ್ರೆ ಮಾಡಿಬಿಟ್ಟಿದ್ದೆ.
ಇತ್ತ ಅಜ್ಜನ ಮನೆಗೆ ಯಾರೋ ನನ್ನನ್ನು ನಾಯಿಗಳು ಅಟ್ಟಿಸಿಕೊಂಡು ಹೋದವೆಂದು ಹೇಳಿಬಿಟ್ಟಿದ್ದರು. ನನ್ನ ಅಜ್ಜಿ ಮತ್ತೂ ಅಮ್ಮ ಇಡೀ ಊರಿಗೆ ಕೇಳುವಂತೆ ಕಿರುಚಿಕೊಂಡು ಅಳುತ್ತಾ "ಅಯ್ಯೋ....ನನ್ನ ಹುಡುಗನ್ನ ಯಾವೋ ನಾಯಿಗಳು ಅಟ್ಟಿಸಿಕೊಂಡು ಹೊದ್ವಂತೆ ಯಾರಾದ್ರೂ ಸ್ವಲ್ಪ ನೋಡ್ರಪ್ಪಾ..." ಎಂದು ಓಡಿದರು. ಊರಲ್ಲಿದ್ದ ಗಂಡಸರೆಲ್ಲ ಹೊಲ ಗದ್ದೆಗಳಿಗೆ ಹೋಗಿದ್ದರಿಂದ ಎಲ್ಲಾ ಮನೆಯ ಹೆಣ್ಣುಮಕ್ಕಳೂ ಮನೆಯಿಂದ ಹೊರಬಂದು ಅಮ್ಮ ಅಜ್ಜಿಯ ಜೊತೆಯೇ ಓಡಿದರು. ಪ್ರತಿಯೊಬ್ಬರೂ ಮತ್ತೊಬ್ಬರನ್ನು "ಏನಾಯ್ತೆ? ಯಾಕಿಂಗೆ ಓಡ್ತಿದೀರಾ?" ಎಂದು ಕೇಳೋರೇ. ಬಾಯಿಂದ ಬಾಯಿಗೆ ನನ್ನ ಸುದ್ದಿ ಹರಡುವಾಗ  ನಾಯಿ ಅಟ್ಟಿಸಿಕೊಂಡು ಹೊದ್ವಂತೆ ಅನ್ನೋದರಿಂದ ಹಿಡಿದು, ಯಾರೋ ನನ್ನನ್ನು ಕಿಡ್ನಾಪ್ ಮಾಡಿಬಿಟ್ಟರು, ಮಕ್ಕಳ ಕಳ್ಳರು ಬಂದಿದಾರಂತೆ, ಕೊನೆ ಓಣಿಯ ಓರಿ ಹಾದುಬಿಟ್ಟಿತು, ಕಿರುಬ ಕಚ್ಚಿಕೊಂಡು ಹೋಗಿಬಿಡ್ತು ಎಂದೆಲ್ಲಾ ಮಾತಾಡಿದರು. ನಮ್ಮಜ್ಜಿಗೆನಾದರೂ ಮಾತುಗಳು ಕೇಳಿಸಿದ್ದರೆ ಅಲ್ಲೇ ಎದೆಯೊಡೆದುಕೊಂಡು ಸತ್ತೇ ಹೋಗೋಳೇನೋ. ಅವರ ಅದೃಷ್ಟಕ್ಕೆ ಎಂಬಂತೆ ಊರಲ್ಲಿ ಹಲವಾರು ಗಂಡಸರು ಕಾರಣಾಂತರಗಳಿಂದ ಹೊಲ-ಗದ್ದೆಗಳಿಗೆ ಹೋಗದೆ ಮನೆಯಲ್ಲೇ ಇದ್ದರು. ಅಂತಹವರಲ್ಲಿ ಕೆಲವರು ತಮ್ಮ ಸೈಕಲ್ಲುಗಳನ್ನೇರಿ ಹೆಂಗಸರನ್ನೆಲ್ಲಾ ಹಿಂದೆ ಹಾಕಿ ನಾವಿದ್ದ ಜಾಗದ ಕಡೆಗೆ ದೌಡಾಯಿಸಿದರು. ಪಾಪ, ಇನ್ನೂ ಉಂಡಿದ್ದರೋ ತಿಂದಿದ್ದರೋ ಗೊತ್ತಿಲ್ಲ, ನನಗಾಗಿ ಮನೆ ಮಠಗಳನ್ನೆಲ್ಲ ಹಾಗೆಯೇ ಬಿಟ್ಟು ನನ್ನ ಸಹಾಯಕ್ಕೆ ಧಾವಿಸಿದ್ದರು. ಹಳ್ಳಿಗರ ಒಂದು ಪ್ರವೃತ್ತಿಗೆ ನಾನು ಇಂದಿಗೂ ಚಿರಋಣಿ. ಪೇಟೆ ಮಂದಿ ಪಕ್ಕದ ಮನೆಯಲ್ಲಿ ಜೋರಾಗಿ ಮಾತಾಡಿದರೂ ಸಾಕು ತಮ್ಮ ಮನೆ ಬಾಗಿಲು ಭದ್ರ ಮಾಡಿಕೊಳ್ಳುತ್ತಾರೆ
ಏನಿಲ್ಲವೆಂದರೂ ಹತ್ತು ಸೈಕಲ್ಲುಗಳಿರಬೇಕು. ಅಷ್ಟೊಂದು ಜನ ಸೈಕಲ್ಲಿನ ಮೇಲೆ ನಮ್ಮ ಕಡೆಗೆ ಬರೋದನ್ನು ಕಂಡು ಸೋಮನಿಗೆ ದಿಗ್ಬ್ರಮೆಯಾಗಿದೆ. ಅವರಲ್ಲಿ ಸುಮಾರು ಜನರ ಮುಖಪರಿಚಯವೂ ಸೋಮನಿಗಿಲ್ಲ. ಅವರು ನಮ್ಮ ಸಮೀಪ ಬಂದು ನೋಡಿದರೆ ನಾನು ಮರದ ಕೆಳಗೆ ಮಲಗಿದ್ದೇನೆ. ಆದರೆ ಅವರು ಅಂದುಕೊಂಡದ್ದು ನನಗೇನೋ ಆಗಿ ಬಿದ್ದಿದ್ದೇನೆ ಅಂತ. ಅವರಲ್ಲಿ ಕೆಲವರು ನನಗೆ ಸಹಾಯ ಮಾಡಲೆಂದು ಹತ್ತಿರ ಬರಬೇಕೆನ್ನುವಷ್ಟರಲ್ಲಿ ಸೋಮ ನನಗೆ ಕಾವಲಾಗಿ ನಿಂತಿದ್ದಾನೆ. ಹತ್ತಿರ ಬರಲೆತ್ನಿಸಿದ ಕೆಲವರ ಮೇಲೇ ಹಠಾತ್ ಧಾಳಿ ಮಾಡಿ 'ತಾನಿಲ್ಲಿ ಹುಡುಗನಿಗೆ ಕಾವಲಿದ್ದೇನೆ' ಎಂದು ಹೇಳಿದ್ದಾನೆ. ಪಾಪ ಜನಗಳಿಗೆ ನಾಯಿಯ ತರ್ಕ ಅರ್ಥವಾಗಿಲ್ಲ, ಅವರು ಇನ್ನೂ ನಾನು ಏನೋ ಆಗಿ ಬಿದ್ದುಬಿಟ್ಟಿದ್ದೇನೆ ಎಂದೇ ತಿಳಿದುಕೊಂಡಿದ್ದಾರೆ. ಕೆಲವರು ಅಲ್ಲಿಯೇ ಇದ್ದ ಕಲ್ಲು ತೆಗೆದುಕೊಂಡು ಸೋಮನನ್ನು ಹೊಡೆಯುವ ನಾಟಕ ಮಾಡಿದ್ದಾರೆ. ಆದರೆ ನಾನು ಸೋಮನ ಹಿಂದೆಯೇ ಮಲಗಿದ್ದುದರಿಂದ ಕಲ್ಲು ಎಸೆದಿಲ್ಲ. ಇಷ್ಟೆಲ್ಲಾ ಆಗುತಿದ್ದರೂ ನಾನು ಅಲ್ಲಾಡದಂತೆ ಇನ್ನು ಮಲಗಿಯೇ ಇದ್ದೇನೆ. ಅಷ್ಟರಲ್ಲೊಬ್ಬ ನಾಯಿ ನನಗೆ ಸಹಾಯ ಮಾಡಲು ಬಿಡೋದಿಲ್ಲ ಎಂದು ನಿಜವಾಗಿಯೂ ಕಲ್ಲು ಎಸೆದಿದ್ದಾನೆ. ಅಷ್ಟೇ ನೋಡಿ, ಸೋಮನ ತಲೆ ತಿರುಗಿ ಅಲ್ಲಿದ್ದವರ ಮೇಲೇ ಮಾಡಿದ ಧಾಳಿಗೆ ಹಲವರ ಪಂಚೆ ಹರಿದಿದೆ, ಮತ್ತೆ ಕೆಲವರು ನಾಯಿಯಿಂದ ದೂರ ಓಡಿ ಹೋಗುವಾಗ ಬಿದ್ದು ಗಾಯ ಮಾಡಿಕೊಂಡಿದ್ದಾರೆ, ಇನ್ನೂ ಕೆಲವರ ಬನಿಯನ್ನಿಗೂ ಸೋಮ ಬಾಯಿ ಹಾಕಿ 'ಇನ್ನೊಮ್ಮೆ ಕಡೆ ತಿರುಗಿ ನೋಡಿದರೂ ನಿಮ್ಮನ್ನು ಉಳಿಸೋದಿಲ್ಲ...ಹುಷಾರ್...' ಎಂದು ಹೇಳಿದ್ದಾನೆ
ಅಲ್ಲಿದ್ದ ಜನರು ಒಂದು ನಾಯಿಯ ಮುಂದೆ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲವೆನಿಸುತ್ತದೆ. ಇದ್ದುದರಲ್ಲೇ ಧೈರ್ಯವಂತರು ಒಂದು ಕೈ ನೋಡೇ ಬಿಡೋಣ ಎನ್ನುವಂತೆ ಅಲ್ಲೇ ಬಿದ್ದಿದ್ದ ಸಣ್ಣ ಪುಟ್ಟ ಕಡ್ಡಿಗಳನ್ನೆತ್ತಿಕೊಂಡು "ಓಯ್ ಅಚ್ಚಾ..." ಎಂದು ಮುಂದೆ ಬಂದಿದ್ದಾರೆ. ಸೋಮ ತಾನು ಹೇಳಿದ್ದು ಇವರಿಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲವೆಂದುಕೊಂಡು ಮುಂದಿದ್ದವನ ಮರ್ಮಾಂಗಕ್ಕೇ ಬಾಯಿ ಹಾಕಿಬಿಟ್ಟಿದೆ. ಅವನು "ಅಯ್ಯಯ್ಯಪ್ಪಾ...ಅಚ್ಚಾ...ಅಚ್ಚಾ...ಲೇ ಬಿಡಿಸ್ರೋ" ಎಂದು ಉಳಿದವರಿಗೆ ಕೇಳಿಕೊಂಡಿದ್ದಾನೆ. ಆದರೆ ಉಳಿದವರೆಲ್ಲಾ ಮೊದಲು ತಮ್ಮ ತಮ್ಮ ಮರ್ಮಾಂಗಗಳನ್ನು ಉಳಿಸಿಕೊಳ್ಳಲು ಅಲ್ಲಿಂದ ಕಾಲು ಕಿತ್ತಿದ್ದಾರೆ. ಇಲ್ಲಿ ಸೋಮನ ಕೈಯಲ್ಲಿ ಸಿಕ್ಕಿಕೊಂಡವನ ಪಂಚೆಯ ಜೊತೆ ಒಳಗಿದ್ದ ಚಡ್ಡಿಯೂ ಹರಿದು ಊರುಬಾಗಿಲು ಮಾಡಿದಮೇಲೆಯೇ ಸೋಮ ಅವನನ್ನು ಬಿಟ್ಟದ್ದು. ಅವನು ಹರಿದ ಚಡ್ಡಿಯಲ್ಲೇ ಸದ್ಯ ಜೀವ ಉಳೀತಲ್ಲ ಎಂದುಕೊಂಡು ಓಡಿ ಉಳಿದವರನ್ನು ಸೇರಿಕೊಂಡಿದ್ದಾನೆ
ನಾಯಿಯ ತಿಕ್ಕಲುತನಕ್ಕೆ ರೋಸಿಹೋದ ಜನ ಕೆಲವರನ್ನು ಅಲ್ಲೇ ಇರಲು ಹೇಳಿ ಸೈಕಲ್ಲು ಹಾಕಿಕೊಂಡು ಮತ್ತೆ ಹಳ್ಳಿಯ ಕಡೆಗೆ ದೌಡಾಯಿಸಿದ್ದಾರೆ. ಅಲ್ಲಿ ನನ್ನ ಅಮ್ಮ ಮತ್ತು ಅಜ್ಜಿಗೆ ನಮ್ಮ ನಾಯಿಯ ಬಗ್ಗೆ ದೂರು ಕೊಟ್ಟು ಅದು ಮಾಡಿದ್ದನ್ನೆಲ್ಲಾ ಹೇಳಿದ್ದಾರೆ. ಹಾಗೆಯೇ ಅವರನ್ನು ಸೈಕಲ್ಲಿನ ಮೇಲೇ ಹತ್ತಿಸಿಕೊಂಡು ಮತ್ತೆ ನಾವಿದ್ದ ಜಾಗಕ್ಕೆ ಬಂದಿದ್ದಾರೆ. ಅಷ್ಟೂ ಹೊತ್ತು ಅಲ್ಲಿಯೇ ಉಳಿದಿದ್ದ ಯಾವ ಗಂಡಸರೂ ನನ್ನ ಬಳಿಗೆ ಬರುವ ಸಾಹಸ ಮಾಡಿಲ್ಲ. ಸೋಮ ನನ್ನ ಪಕ್ಕವೇ ಕುಳಿತುಕೊಂಡು ಕೆಂಗಣ್ಣಿನಿಂದ ಅವರನ್ನು ಎವೆಯಿಕ್ಕದೆ ಗುರಾಯಿಸುತ್ತಲೇ ಇದೆ.
ಕೊನೆಗೆ ಅಮ್ಮ ಮತ್ತು ಅಜ್ಜಿಯನ್ನು ನೋಡುತ್ತಲೇ ಸೋಮನಿಗೆ ನಂಬಿಕೆ ಬಂದು ಅವರ ಕಡೆಗೆ ಓಡಿದೆ. ಅಜ್ಜಿಯ ಸೀರೆಗೆ ಬಾಯಿಹಾಕಿ ಅವರನ್ನು ನನ್ನ ಕಡೆಗೆ ಎಳೆತಂದಿದೆ. ಅಜ್ಜಿ ನನ್ನನ್ನು ಎತ್ತಿಕೊಂಡು "ಶಿವೂ ಶಿವೂ.." ಎಂದು ಹಲವಾರು ಬರೀ ಎಬ್ಬಿಸಿದರು ನನಗೆ ಎಚ್ಚರಿಕೆಯಾಗಿಲ್ಲ. ಇತ್ತ ಅಮ್ಮನೋ ನನಗೇನೋ ಆಗಿಯೇಬಿಟ್ಟಿದೆ ಎಂದು ತಲೆ ತಲೆ ಚಚ್ಚಿಕೊಂಡು ಅಳುತಿದ್ದಾರೆ. ಜನಕ್ಕೆ ಮಾತಾಡಲು ಒಳ್ಳೆಯ ವಿಷಯ ಸಿಕ್ಕಂತಾಗಿ, ನಾನು ಏನಾಗಿ ಸತ್ತಿರಬಹುದೆಂದು ಆಗಲೇ ಊಹಿಸಲು ಶುರುಮಾಡಿದ್ದಾರೆ. ಹಲವರುಹಾವು ಕಚ್ಚಿರಬಹುದುಎಂದರೆ, ಮತ್ತೆ ಕೆಲವರುಇಲ್ಲಿಲ್ಲ, ಯಾರೋ ಕುತ್ತಿಗೆ ಹಿಚುಕಿ ಎಸೆದು ಹೋಗಿದ್ದಾರೆಎಂದರು. ಇನ್ನೂ ಕೆಲವರುಯಾರೋ ನನಗೆ ಮಾಟ ಮಾಡಿಸಿ ಕೊಂದುಬಿಟ್ಟಿದ್ದಾರೆಎಂದರು. ನಾನು ಯಾವುದರಿಂದ ಸತ್ತಿದ್ದೇನೆ ಎಂದು ಎಲ್ಲರೂ ಮಾತನಾಡುತ್ತಿರುವಾಗಲೇ ಯಾರೋ ಪುಣ್ಯಾತ್ಮ ಎಲ್ಲಿಂದಲೋ ಸ್ವಲ್ಪ ನೀರು ತಂದು ನನ್ನ ಮುಖದ ಮೇಲೆ ಎರಚಿದ. ನನಗೆ ಎಚ್ಚರಿಕೆಯಾಯಿತು. ನಾನು ಕಣ್ಣು ಬಿಟ್ಟಮೇಲೆ ಅಲ್ಲಿದ್ದವರೆಲ್ಲರಿಗೂ ನಾನಿನ್ನು ಬದುಕಿದ್ದೇನೆ ಎಂದು ನಂಬಿಕೆ ಬಂದು 'ದೇವರು ದೊಡ್ಡೋನು, ನೋಡು ಹೆಂಗೆ ಹುಡುಗನ್ನ ಬದುಕಿಸಿಬಿಟ್ಟ' ಎಂದು ಊರಿನ ಮದ್ಯೆದಲ್ಲಿದ್ದ ದೇವಸ್ಥಾನದ ಕಡೆಗೆ ತಿರುಗಿ ಕೈಮುಗಿದರು

ನಾನು ಸರಿಯಾಗಿ ಎಚ್ಚರವಾದಮೇಲೆ ಆದದ್ದನ್ನೆಲ್ಲ ಅಮ್ಮನಿಗೆ ಹೇಳಿದೆ. ಅವರು ಊರಿನ ನಾಯಿಗಳಿಗೆಲ್ಲಾ ಹಿಡಿ ಶಾಪ ಹಾಕಿ, ನನ್ನನ್ನು ಯಾರದ್ದೋ ಸೈಕಲ್ಲಿನ ಮೇಲೇ ಕೂಡಿಸಿಕೊಂಡು ಮನೆಗೆ ಕರೆದುಕೊಂಡು ಬಂದರು. ನಾವು ಸೈಕಲ್ಲಿನ ಮೇಲೇ ಬರುವಾಗ ಸೋಮ ಸೈಕಲ್ಲಿನ ಪಕ್ಕದಲ್ಲೇ ಓಡಿಕೊಂಡು ಬರುತ್ತಿದ್ದ

ತೋಟದ ಮನೆ : ಭಾಗ-2

ತೋಟದ ಮನೆ ಭಾಗ-೨ ಪ್ರೇತದ ಅಟ್ಟಹಾಸ ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದ...