ಚಿತ್ರದುರ್ಗದಿಂದ ರಾಮಗಿರಿಗೆ ಸುಮಾರು 50 ಕಿ. ಮೀ. ನಷ್ಟು ದೂರವಿರಬಹುದು. ಅದು ನನ್ನ ಅಪ್ಪನ ಊರು. ಅಲ್ಲಿಗೆ ಹೋಗಿ ಈಗ್ಗೆ ಏನಿಲ್ಲವೆಂದರೂ ಎರಡು ವರ್ಷಗಳೇ ಕಳೆದುಹೋಗಿವೆ. ನಾವು
ಚಿಕ್ಕವರಾಗಿದ್ದಾಗ ಹಬ್ಬ ಹರಿದಿನಗಳಿಗೆಲ್ಲಾ ರಾಮಗಿರಿಗೆ ಬಂದು ಜಾಂಡಾ ಹೂಡುತ್ತಿದ್ದೆವು. ಬರಬರುತ್ತಾ, ಗೊತ್ತಿಲ್ಲದೆಯೇ ನಾವು ನಮ್ಮ ಅಮ್ಮನ ಊರಾದ ಅಳಗವಾಡಿಗೆ ಹೋಗುವುದು ಹೆಚ್ಚಾಗುತ್ತಾ ಬಂದಿತು. ಆದರೆ ನನಗೆ ರಾಮಗಿರಿಯ ಬಗ್ಗೆ ಆಸಕ್ತಿಯಾಗಲಿ ಪ್ರೀತಿಯಾಗಲಿ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ. ಅಲ್ಲಿ ನನ್ನ ಚಿಕ್ಕಮ್ಮ
ಮತ್ತು ಚಿಕ್ಕಪ್ಪ ಇದ್ದರು. ಅವರು ಇದ್ದದ್ದು ನಮ್ಮ ತಾತ ಬಿಟ್ಟು ಹೋದ ಮನೆಯಲ್ಲಿಯೇ. ಅದೇ ಮನೆಯಲ್ಲಿಯೇ ನನ್ನ ಅಪ್ಪ ಬೆಳೆದಿದ್ದು. ನನ್ನ ಅಪ್ಪ ಬೆಳೆದ ಮನೆ ತುಂಬಾ ದೊಡ್ಡದು. ಅಲ್ಲಿ ನಾವು ಚಿಕ್ಕವರಾಗಿದ್ದಾಗ ಕಣ್ಣಾ ಮುಚ್ಚಾಲೆ ಆಡುವಷ್ಟು ದೊಡ್ಡದಿತ್ತು. ನನ್ನ ತಾತನಿಗೆ ಅಪ್ಪನೇ ದೊಡ್ಡ ಮಗ. ಅಪ್ಪನಿಗೆ ಇಬ್ಬರು ತಮ್ಮಂದಿರೂ ಮತ್ತು ನಾಲ್ಕು
ಜನ ತಂಗಿಯರೂ ಇದ್ದರು. ಅವರಿಗೆಲ್ಲಾ ಮಕ್ಕಳಾದ ಮೇಲೆ ನಾವು ಹಬ್ಬ ಹರಿದಿನಗಳಲ್ಲಿ ರಾಮಗಿರಿಯಲ್ಲಿ ಸೇರಿದಾಗಲೇ ನಮಗೆ ನಮ್ಮ ಕುಟುಂಬದ ಜನಸಂಖ್ಯೆಯ ಬಗ್ಗೆ ಅರಿವಾದದ್ದು. ಅಂತಹ ದೊಡ್ಡ ಮನೆಯಲ್ಲೂ ನಾವೆಲ್ಲಾ
ಸೇರಿದಾಗ ಜಾಗ ಕಡಿಮೆಯಾಗುತ್ತಿತ್ತು. ಎಷ್ಟೋ ಬಾರಿ ನಾವೆಲ್ಲಾ
ಅಲ್ಲೇ ಇದ್ದ ಬೇರೆ ಸಂಬಂದಿಕರ ಮನೆಯಲ್ಲಿ ಮಲಗಿದ್ದೂ
ಉಂಟು. ಚಿಕ್ಕಮಕ್ಕಳೆಲ್ಲರೂ
ಒಂದೇ ರೂಮಿನಲ್ಲಿ ಸೇರಿಕೊಂಡು ಮನೆಯ ಹೆಂಚೇ ಹಾರಿಹೋಗುವಷ್ಟು ಗಲಾಟೆ ಮಾಡುತ್ತಿದ್ದೆವು. ದೊಡ್ಡವರೆಲ್ಲಾ
ಅವರಿಗೆ ನಾವು ತೊಂದರೆ ಕೊಡದೆ ಇದ್ದೇವಲ್ಲ
ಎಂದು ಸಮಾಧಾನ ಪಟ್ಟುಕೊಂಡು ನಾವೆಷ್ಟೇ ಗಲಾಟೆ ಮಾಡಿದರೂ
ಒಂದೂ ಮಾತು ಹೇಳದೆ ಸುಮ್ಮನಿರುತ್ತಿದ್ದರು. ಈಗ ನಮ್ಮ ಮಕ್ಕಳ ಸೈನ್ಯದಲ್ಲಿದ್ದ ಹಲವರಿಗೆ ಮಧುವೆಯಾಗಿ ಮಕ್ಕಳೇ ಆಗಿಹೋಗಿವೆ. ನಮ್ಮ ಸೈನ್ಯವನ್ನು ಈಗ ನಾನು ಒಟ್ಟಾಗಿ ನೋಡಿ
ಎರೆಡು ದಶಕಗಳೇ ಕಳೆದುಹೋಗಿವೆ.
ಚಿತ್ರದುರ್ಗದಿಂದ ರಾಮಗಿರಿಗೆ ಡೈರೆಕ್ಟ್ ಬಸ್ಸುಗಳು ಅನುಕೂಲಕ್ಕೆ ತಕ್ಕನಾಗಿ ಇರದ ಕಾರಣ
ನಾನು ಮೊದಲು ಹೊಳಲ್ಕೆರೆಗೆ ಹೋಗಿ ಅಲ್ಲಿಂದ ರಾಮಗಿರಿಗೆ ಬಸ್ಸು ಹಿಡಿದೆ. ಬೇಸಿಗೆಯ ಕಾಲವಾದ್ದರಿಂದ ನಾನು ಹೊಳಲ್ಕೆರೆ ಮುಟ್ಟುವ ಮೊದಲೇ ಬೆವರಿನಲ್ಲಿ ಸ್ನಾನವಾಗಿತ್ತು. ಹೊಳಲ್ಕೆರೆಯಲ್ಲಿ
ಮತ್ತೆ ಸ್ವಲ್ಪ ಹೊತ್ತು ಕಾದ ಮೇಲೆ ರಾಮಗಿರಿಗೆ ಬಸ್ಸು ಸಿಕ್ಕಿತು. ಹೊಳಲ್ಕೆರೆಯಿಂದ ರಾಮಗಿರಿಗೆ ಹತ್ತರಿಂದ ಹದಿನೈದು ನಿಮಿಷವಷ್ಟೇ ಪ್ರಯಾಣ. ಬಸ್ಸು ಇಳಿದು, ಮನೆ ಕಡೆ ನಡೆಯುವಾಗ ದಾರಿಯಲ್ಲಿ ಬಹಳಷ್ಟು
ಜನ ಪರಿಚಯದವರು ಸಿಕ್ಕರು. ಅವರೆಲ್ಲರ ಹತ್ತಿರವೂ ಎರೆಡೆರಡು ನಿಮಿಷ ಕುಶಲೋಪಚರಿ ನಡೆಸಿಯೇ ಮುಂದುವರೆಯಬೇಕಾಯಿತು. ಮನೆ ಮುಟ್ಟಿದೊಡನೆಯೇ ಮೊದಲು ಎರೆಡು ಬಕೆಟ್ಟು ತಣ್ಣೀರು ತಲೆಯ ಮೇಲೆ ಹಾಕಿಕೊಂಡು ನಂತರವಷ್ಟೇ ಮನೆಯವರನ್ನು ಮಾತನಾಡಿಸಿದೆ. ಚಿಕ್ಕಮ್ಮ ನಾನು ಬಂದ ತಕ್ಷಣವೇ ಮಡಿಕೆ ನೀರಿನಿಂದ ತಣ್ಣಗೆ ಮಜ್ಜಿಗೆ ಮಾಡಿದರು. ಎರೆಡು ಜಗ್ಗುಗಳಷ್ಟು ಮಜ್ಜಿಗೆ ಕುಡಿದ
ಮೇಲಷ್ಟೇ ಮನಸ್ಸಿಗೆ ಸ್ವಲ್ಪ ಸಮಾಧಾನ ಆಗಿದ್ದು.
“ಚಿಕ್ಕಪ್ಪ ಎಲ್ಲಿ ಚಿಕ್ಕಮ್ಮ?”
“ಹೊಲಕ್ಕೆ ಹೋಗಿದಾರಪ್ಪ. ನೀನು ಬರ್ತೀಯ ಅಂತ ಮಾಮ ನಿನ್ನೇನೆ ಹೇಳಿತ್ತಲ್ಲಾ, ಅದಕ್ಕೆ ನಿನಗೆ ಅಂತ ಹೊಲದಿಂದ ಸೊಪ್ಪು ಕಿತ್ಕೊಂಡು
ಬರೋಕೆ ಹೋಗಿದಾರೆ. ಇವತ್ತು ರಾತ್ರಿ ಸೊಪ್ಪಿನಸಾರು
ಮಾಡ್ತೀನಿ” ಎಂದು ಚಿಕ್ಕಮ್ಮ ಒಲೆ ಮುಂದಿನಿಂದಲೇ ಉತ್ತರಿಸಿದರು.
ನನ್ನ ಚಿಕ್ಕಮ್ಮನಿಗೆ ನಾನೆಂದರೆ ಎಲ್ಲಿಲ್ಲದ ಪ್ರೀತಿ. ನಾನು ರಾಮಗಿರಿಗೆ ಹೋದಾಗಲೆಲ್ಲ ನನಗೆ ತರಹೇವಾರಿ ಅಡಿಗೆ ಮಾಡಿ ಬಡಿಸೋದೆಂದರೆ ಅವರಿಗೆ ಏನೋ ಖುಷಿ. ನಾನು ಎಷ್ಟೇ ಬೇಡವೆಂದರೂ ಮತ್ತೊಂದು ರೌಂಡು ತಿನ್ನೋವರೆಗೂ ಅವರು ಇಂದಿಗೂ ಬಿಟ್ಟವರೇ ಅಲ್ಲ. ಅವರ ಈ ಪ್ರೀತಿಯಿಂದ ನನಗೆ ಎಷ್ಟೋ ಬಾರಿ ಹೊಟ್ಟೆನೋವು ಬಂದು ಹೊತ್ತಲ್ಲದ ಹೊತ್ತಲ್ಲಿ ಚಂಬು ಹಿಡಿದುಕೊಂಡು ಹೊರಟದ್ದುಂಟು.
"ಅಣ್ಣ ಎಲ್ಲೋದ? ನಾನು ಬರ್ತಾ ಇರೋದು ಗೊತ್ತಿರ್ಲಿಲ್ವಾ ಅವ್ನಿಗೆ?" ಎಂದು ಕೇಳಿದೆ. ನಾನು ಬರ್ತೀನಿ ಎಂದು ಗೊತ್ತಾದರೆ ಬಸ್ ಸ್ಟ್ಯಾಂಡಿಗೆ ಬಂದು ಯಾವಾಗ್ಲೂ ಕಾಯೋನು ಈ ಬಾರಿ ಬಾರದಿದ್ದುದು
ನನಗೆ ಆಶ್ಚರ್ಯ ತಂದಿತ್ತು.
"ಅದನ್ನ ಏನುಂತ ಹೇಳ್ಲಿ ಶಿವೂ...ಅವ್ನಿಗೇನಾದ್ರು ನಿನ್
ತರ ಜವಾಬ್ದಾರಿ ಇದ್ಯಾ? ಬರೀ ಊರು ಸುತ್ತೋದು ಬಿಟ್ಟು ಅವ್ನು ಜೀವನದಲ್ಲಿ ಬೇರೇನು ಕಿಸ್ದು ದಬಾಕಿದಾನೆ ಹೇಳು?? ಅದು ಸಾಲ್ದು ಅಂತ ಈಗ ಅವಳ್ಯಾವಳೋ ಜೊತೆ ತಿರುಗ್ತಾನೆ ಅಂತ ಊರ್ನೋವ್ರೆಲ್ಲ ಬಂದು ನಿಮ್ಮ ಚಿಕ್ಕಪ್ಪನಿಗೆ ಹೇಳಿ ಹೇಳಿ ಹೋಗ್ತಾರೆ. ನನಗಂತೂ ಇವ್ನ ಹೆತ್ತಿದ್ದಕ್ಕೆ ನಾಚ್ಕೆ ಆಗತ್ತೆ" ಎಂದು ತುಂಬಾ ದುಃಖದಿಂದ ಹೇಳಿದರು.
ಯಾರೋ ಹುಡುಗಿ ಜೊತೆ ತಿರುಗ್ತಾ ಇದಾನೆ ಅಂತ ಹೇಳಿದ್ ಕೇಳಿ ನಂಗೆ ಒಂದೂ ಕ್ಷಣ ಯಾವ ತರ ಪ್ರತಿಕ್ರಿಯಸಬೇಕು ಅಂತಾನೆ ಗೊತ್ತಾಗ್ಲಿಲ್ಲ. ಹುಡುಗೀರನ್ನ
ನಮ್ಮಣ್ಣ ಮಾತಾಡ್ಸೋದೆ ಕಷ್ಟ ಇತ್ತು. ಅಂತದ್ರಲ್ಲಿ ಜೊತೆಗೆ ಓಡಾಡ್ತಾಯಿದಾನೆ ಎಂದ್ರೆ
ನಂಬೋದ್ ಹೇಗೆ?
ನಾನು ಎದ್ದು ಅಡಿಗೆ ಮನೆಗೇ ನುಗ್ಗಿ "ಏನಾಯ್ತು ಚಿಕ್ಕಮ್ಮ??" ಎಂದು ಕೇಳಿದೆ. ನಂತರ ಅವರು ಹೇಳಿದ ಕಥೆ ಕೇಳಿ ನಾನು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆ. ಅದೇನು ನಗೋ ಅಂತ ಪ್ರಸಂಗ ಅಲ್ಲ. ನಡೆದದ್ದಿಷ್ಟೇ, ನಮ್ಮಣ್ಣ ಯಾರೋ ಹುಡುಗಿನ ಲವ್ ಮಾಡ್ತಾಯಿದಾನಂತೆ. ಆ ಹುಡುಗಿ ಪೇಟೆ ಹುಡುಗಿ ಅಂತೆ. ಅಣ್ಣ ಒಂದು ಹುಡುಗಿನ ಲವ್ ಮಾಡಬಹುದು ಅನ್ನೋದೇ ನಂಗೆ ಯೊಚ್ಸೋಕೆ ಆಗ್ತಾ ಇರ್ಲಿಲ್ಲ. ಅಂತದ್ರಲ್ಲಿ ಯಾರೋ ಪೇಟೆ ಹುಡುಗಿ ಅಂದ್ರೆ ನಂಬೋದು ಕಷ್ಟ ಆಗ್ತಾ ಇತ್ತು. ಅದ್ರಲ್ಲೂ ಚಿಕ್ಕಮ್ಮ ಅವನ ಅವಾಂತರಗಳನ್ನು ಹೇಳೋವಾಗ
ಅವುಗಳನ್ನೆಲ್ಲಾ ಊಹಿಸಿಕೊಳ್ಳೋದೇ ಸೊಗಸಾಗಿತ್ತು.
ರಾಮಗಿರಿ ತನ್ನ ಹೆಸರಿಗೆ ತಕ್ಕಂತೆ ಒಂದು ಪರ್ವತದ ತಪ್ಪಲಿನಲ್ಲಿ ಸ್ಥಾಪಿತವಾಗಿದೆ. ಅದೊಂದು ಸಣ್ಣ ಊರು. ಆ ಪರ್ವತವು ಒಂದು ಪರ್ವತಸಾಲಿನ ಭಾಗವಾಗಿದ್ದು ಪಶ್ಚಿಮದಿಂದ ಬೀಸುವ ಗಾಳಿಯನ್ನೆಲ್ಲಾ
ಹಿಡಿದಿಡುತ್ತಿದ್ದವು. ಕೇಂದ್ರ ಸರ್ಕಾರ ಇದೇ ಗಾಳಿಯನ್ನು ಉಪಯೋಗಿಸಿ ವಿದ್ಯುತ್ ತಯಾರಿಸಲು ಯೋಜನೆಗಳನ್ನು ಹಾಕಿ ಅದನ್ನು ಕಾರ್ಯರೂಪಕ್ಕೆ ತಂದಿತ್ತು. ಅದರ
ಪ್ರಕಾರ, ಬೆಟ್ಟಗಳ ಮೇಲೆಲ್ಲಾ ವಿಂಡ್ ಮಿಲ್ ಅಂದರೆ ಗಾಳಿಯಿಂದ ತಿರುಗುವ ಬೃಹದಾಕಾರದ ಫ್ಯಾನುಗಳನ್ನು ನೆಡುವ ಕೆಲಸ ನಡೆದಿತ್ತು. ಕೇಂದ್ರ ಸರ್ಕಾರ ಯಾರೋ ಅತಿಮುಖ್ಯ ಮಿನಿಸ್ಟರೊಬ್ಬರು ಬಹಳ ಆಸಕ್ತಿವಹಿಸಿ ಈ ಪ್ರಾಜೆಕ್ಟ್ ಅನ್ನು ಕಾರ್ಯರೂಪಕ್ಕೆ ತಂದಿದ್ದರಿಂದ ಬಹಳ ಜನ ಆಫೀಸರುಗಳು ರಾಮಗಿರಿಯಲ್ಲಿ ಜಾಂಡಾ ಹೂಡುವ ಪರಿಸ್ಥಿತಿ ಬಂದಿತ್ತು. ಅಂತಹ ಆಫೀಸರುಗಳಲ್ಲಿ ಒಬ್ಬರ ಮಗಳೇ ಕಾವ್ಯ. ನಮ್ಮಣ್ಣ ಮಹಾನುಭಾವ ಊರಲ್ಲಿರುವ ಹುಡುಗಿಯರನ್ನೆಲ್ಲ ಬಿಟ್ಟು ಅವಳನ್ನು ಲವ್ ಮಾಡಿ ಇದ್ದಕ್ಕಿದ್ದಂತೆ ಊರಿನಲ್ಲಿ
ಒಬ್ಬ ಮುಖ್ಯ
ವ್ಯಕ್ತಿಯಾಗಿದ್ದ. ಪರಿಹಾಸ್ಯವೆಂದರೆ ಅಣ್ಣನ ಗೆಳೆಯರಿಗೆಲ್ಲಾ
ಅವನೊಬ್ಬ ದಿವ್ಯಪುರುಷನಂತೆಯೇ ಕಂಡುಬಂದದ್ದು. ಅವರ ಪ್ರಕಾರ, ಪೇಟೆಯ ಹುಡುಗಿಯನ್ನು ಮಾತನಾಡಿಸುವುದೇ ಒಂದು ಸಾಧನೆಯ ಕೆಲಸ. ಅಂಥದ್ದರಲ್ಲಿ ಲವ್ವಿನಲ್ಲಿ ಬೀಳುವಂತೆ ಮಾಡುವದೆಂದರೆ ಸಾಮಾನ್ಯದ ವಿಷಯವೇ!! ಅವರಿಗೆಲ್ಲಾ ಅದು ಒಬ್ಬ ಸಾಮಾನ್ಯ ಮನುಷ್ಯ
ಸಾವಿರಾರು ವರ್ಷದಷ್ಟು ಹಳೆಯದಾದ ಒಂದು ನಿಗೂಢ ರಹಸ್ಯವನ್ನು ಭೇದಿಸಿದಂತೆಯೇ ಭಾಸವಾಯಿತು. ಅಣ್ಣ ಆ ಟೈಮಿನಲ್ಲೇನಾದರೂ ಎಲೆಕ್ಷನ್ನಿಗೆ ನಿಂತಿದ್ದರೆ
ಗೆದ್ದೇ ಬಿಡುತ್ತಿದ್ದನೇನೋ ಅನ್ನುವಷ್ಟು ಖ್ಯಾತಿ ಗಳಿಸಿದ್ದ.
ಅಣ್ಣನ ಈ ಲವ್ ಸ್ಟೋರಿ ಹೇಗೆ ಮತ್ತು ಯಾವಾಗ ಶುರುವಾಯಿತು ಎಂದು ಊರಿನ ಯಾರಿಗೂ ಗೊತ್ತಿರಲಿಲ್ಲ. ಅಂತೂ ಇಂತೂ ಶುರುವಾಗಿದೆ ಎನ್ನುವುದೊಂದೇ ಊರಿನಲ್ಲೆಲ್ಲಾ ದೊಡ್ಡ ಮಾತಾಗಿತ್ತು. ನಮ್ಮ ಓಣಿಯ ಸಣ್ಣ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರೆಲ್ಲಾ ಇವನ ಲವ್ ಸ್ಟೋರಿ ಬಗ್ಗೆಯೇ ಮಾತನಾಡುತ್ತಿದ್ದುದು ನೋಡಿದರೆ ಏನೋ ಬಹಳ ದೊಡ್ಡದನ್ನೇ ಸಾದಿಸಿದ್ದಾನೆ ಎನ್ನುವಂತಿತ್ತು. ಇದರ ಬಗ್ಗೆ ಅವರಿವರ ಹತ್ತಿರ ಕೇಳಿದರೆ ಉತ್ಪ್ರೇಕ್ಷೆಯ ಮಾತುಗಳೋ ಅಥವಾ ಅಪಹಾಸ್ಯದ ಮಾತುಗಳೋ ಕೇಳಿಬರುವುದರ ಅರಿವಿದ್ದ ನನಗೆ ಇದನ್ನೆಲಾ ಅವನ ಹತ್ತಿರವೇ ಕೇಳಿ ತಿಳಿದುಕೊಳ್ಳಬೇಕೆಂದು ಅವನಿಗಾಗಿ ಕಾದೆ. ಆದರೆ ರಾತ್ರಿ ಒಂಬತ್ತು ಗಂಟೆಯಾದರೂ ಅಸಾಮಿಯ ಸವಾರಿ
ಮನೆ ಕಡೆ ಬರಲೇ ಇಲ್ಲ. ಪ್ರಯಾಣದಿಂದ ದಣಿದಿದ್ದಕ್ಕೋ
ಅಥವಾ ಚಿಕ್ಕಮ್ಮ ಕುತ್ತಿಗೆವರೆಗೂ ಬರೋವರೆಗೂ ತಿನ್ನಿಸಿದ್ದಕ್ಕೋ, ಅವತ್ತು ತುಂಬಾ ಬೇಗನೆ ಮಲಗಿಬಿಟ್ಟೆ.
ಮರುದಿನ ನಾನಾಗಿಯೇ ಏಳೋವರೆಗೂ ಯಾರೂ
ನನ್ನನ್ನು ಎಬ್ಬಿಸುವ ಗೋಜಿಗೆ ಹೋಗಲಿಲ್ಲ. ನಾನು ಎದ್ದು ವಾಚ್ ನೋಡಿಕೊಂಡಾಗ ಆಗಲೇ ಗಂಟೆ ಎಂಟಾಗಿತ್ತು. ಮನೆಯಲ್ಲಿ ಯಾರೂ ಕಾಣಲಿಲ್ಲ. ಎದ್ದು ಹೊರಗೆ ಬಂದಾಗ ಚಿಕ್ಕಪ್ಪ ಮನೆಯ ಮುಂದು ಸೌದೆಗಾಗಿ
ಕಟ್ಟಿಗೆ ಹೊಡೆಯುತ್ತಿದ್ದರು.
"ಅಣ್ಣ ಬರ್ಲಿಲ್ವಾ ಚಿಕ್ಕಪ್ಪ?"
ಅವರು ಸೌದೆ ಹೊಡೆಯುವುದನ್ನು ನಿಲ್ಲಿಸಿ, "ಅವನೆಲ್ಲಿ ಇರ್ತಾನಪ್ಪ!! ಬೆಳಗ್ಗೆನೇ ಎದ್ದೋದ. ಮತ್ತೆ ರಾತ್ರಿನೇ ಅವ್ನು ಬರೋದು. ಮನೇಲಿ ಕೆಲಸ ಇದಿಯೋ ಇಲ್ವೋ ಅನ್ನೋ ಅಷ್ಟೂ
ಪರಿಜ್ಞಾನ ಇಲ್ಲ ಅವ್ನಿಗೆ. ಇವಾಗಿವಾಗಂತೂ ಒಂದು ಕೆಲ್ಸನೂ ಮಾಡಲ್ಲ ಸೋಮಾರಿನನ್ಮಗ" ಎಂದು ಅವನಿಗೆ ಶಾಪ ಹಾಕಿದರು. ಅರೆ! ನಾನು ಬಂದಿರೋದು ಗೊತ್ತಿದ್ದರೂ ಇಷ್ಟು ಬೇಗ ಎಲ್ಲಿ ಹಾಳಾಗಿ ಹೋದ ಇವ್ನು ಎಂದು ನಾನು ತಲೆ ಕೆರೆದುಕೊಳ್ಳುತ್ತಾ ಸ್ನಾನಕ್ಕೆ ಹೋದೆ. ಸ್ನಾನದ ನಂತರ ಒಂದು ಬಕೆಟ್ಟಿನಷ್ಟು ಟೀ ಕುಡಿದೆ. ನನಗೆ ಚಿಕ್ಕಮ್ಮ ಮಾಡುವ ಬೆಲ್ಲದ ಟೀ ಎಂದರೆ ಬಲು ಇಷ್ಟ. ಮನೆಯಲ್ಲೇ ಹಾಲು ಕರೆಯುವ ಎಮ್ಮೆಗಳು ಇದ್ದದ್ದರಿಂದ ಗಟ್ಟಿ ಹಾಲಿನಲ್ಲಿ ಮಂದಗೆ ಟೀ ಮಾಡುತ್ತಿದ್ದರು. ನನಗಾಗೇ ಮಂಡಕ್ಕಿ ತಿಂಡಿ ಮಾಡಿದ್ದರು. ಅದು ನನ್ನ ಅತಿಪ್ರಿಯವಾದ ತಿಂಡಿ ಎಂದು ಅವರಿಗೆ ಗೊತ್ತು. ಅದರ ಜೊತೆಗೆ ನೆಂಚಿಕೊಳ್ಳಲು ಬಿಸಿ ಬಿಸಿ ಮೆಣಸಿನಕಾಯಿ ಬೇರೆ! ನನಗೆ ತಿಂದು ಮತ್ತೊಮ್ಮೆ ಮಲಗದಿದ್ದರೆ ಸಾಕು ಎನ್ನುವಷ್ಟು ತಿಂದೆ. ಇನ್ನೇನು ಚಿಕ್ಕಪ್ಪ ಮತ್ತೆ ಹೊಲಕ್ಕೋ ಇಲ್ಲ ತೋಟಕ್ಕೋ ಹೋಗೋಕೆ ರೆಡಿ ಆಗುತ್ತಿದ್ದರು. ಚಿಕ್ಕಮ್ಮನಿಗೆ ಮನೆಯಲ್ಲಿ ಮಾಡೋಕೆ ಬೇಕಾದಷ್ಟು ಕೆಲಸಗಳಿದ್ದುವು. ಇಬ್ಬರೂ
ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾದ ಮೇಲೆ ನಾನು ಅಣ್ಣನನ್ನು ಹುಡುಕಿ ನಾಲಕ್ಕು ತದುಕುವ ಬಗ್ಗೆ ನಿರ್ಧಾರ ತೆಗೆದುಕೊಂಡು, ಕೈಗೆ ಸಿಕ್ಕಿದ ಒಂದು ಜೀನ್ಸ್ ಪ್ಯಾಂಟು ಮತ್ತು ಟೀಶರ್ಟ್ ಸಿಗಿಸಿಕೊಂಡು ಮನೆಯಿಂದ ಹೊರಬಿದ್ದೆ.
ಮನೆಯಿಂದ ಹೊರಬಿದ್ದ ಸ್ವಲ್ಪ ಹೊತ್ತಿನಲ್ಲೇ
ಬಸವ ಎದುರಾದ. ಯಾವಾಗಲೂ ಕುಡಿದು ಊರಲ್ಲೆಲ್ಲಾ ಗಲಾಟೆ ಮಾಡಿಕೊಳ್ಳುವ ಅವನನ್ನು ಉರಬಸವ ಎಂದೇ ಜನಪ್ರಿಯವಾಗಿದ್ದ. ಅವನ ಕಥೆಯೇ ವಿಚಿತ್ರವಾದುದು. ಯಾರೋ ಪಕ್ಕದ
ಊರಿನ ಹುಡುಗಿಯನ್ನು ಪ್ರೀತಿಸಿ ಮನೆಯವರೆಲ್ಲರ ದ್ವೇಷ ಕಟ್ಟಿಕೊಂಡೇ ಮದುವೆಯಾದ. ಅವಳು ಮೂರೇ ತಿಂಗಳಲ್ಲಿ ಬೇರೆ ಯಾವನ
ಜೊತೇನೋ ಓಡಿಹೋದಳು. ಮನೆಯವರೆಲ್ಲ ಮಾನ
ಹೋದೀತೆಂದು ಅವಳನ್ನು ಹೇಗೋ ಪತ್ತೆ ಮಾಡಿ ಒತ್ತಾಯದಿಂದ ಮತ್ತೆ ಮನೆಗೆ ಕರೆದುಕೊಂಡು ಬಂದರು. ಆದರೆ ಅವಳು ಅವನನ್ನು ಪಂಚಾಯಿತಿಗೆ ಎಳೆದು ತಂದಳು. ಇಡೀ ಊರಿನ ಮುಂದೆ ಅವಳು ಬಸವನನ್ನು ಹೀಯಾಳಿಸಿ ಕೊನೆಗೆ 'ಅವನು ಗಂಡಸೇ ಅಲ್ಲ' ಎಂದುಬಿಟ್ಟಳಂತೆ. ಅವಳ ಮಾತು ಕೇಳಿ ಇಡೀ ಪಂಚಾಯಿತಿಯೇ ನಿಬ್ಬೆರಗಾಗಿ ಕೊನೆಗೆ ದಾರಿ ಕಾಣದೆ ಅವಳ ಪರವಾಗಿಯೇ ತೀರ್ಪು ಕೊಟ್ಟಿತು. ಅವತ್ತಿನಿಂದ ಬಸವ ಕುಡಿತದ ಪಾಲಾದ. ಇಡೀ ಊರೇ ಅವನನ್ನು ನೋಡಿ ನಗುವಂತಾದ. ಪ್ರೀತಿ ಮಾಡಿ ಮದುವೆಯಾದವನ ಗತಿ ಹೀಗಾಯಿತೆಲ್ಲ ಎಂದು ಅವನ ಗೆಳೆಯರೆಲ್ಲ ಮರುಕಪಟ್ಟರೂ, ಅವನ ಕುಡಿತದ ಚಟ ನೋಡಿ ಅವನನ್ನು ದೂರಮಾಡಿಬಿಟ್ಟರು. ಕೊನೆಗೆ ಬಸವ ತನ್ನ ಮನೆಯಲ್ಲೂ, ತನ್ನ ಊರಿನಲ್ಲೂ ಬೇರೆಯವನಾಗಿಬಿಟ್ಟ.
ಅವನನ್ನು ಹಿಂದೆ ಹಾಕಿ ಮುಂದುವರೆದಂತೆ ದಾರಿಯಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ದನಕರುಗಳೇ ಎದುರಾದವು. ನಾನು ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರೂ ಅವುಗಳು ನಾನ್ಯಾರೆಂದು ನೋಡಲು ತಲೆ ಕೂಡ ಎತ್ತಲಿಲ್ಲ. ತುಂಬಾ ಕಷ್ಟ ಪಟ್ಟು ಫ್ಯಾನುಗಳನ್ನು ಹಾಕುತ್ತಿದ್ದ ಜಾಗಕ್ಕೆ ತಲುಪಿದಾಗ ಅಲ್ಲಿ ಹಲವಾರು ಜನ ಬಹಳ ಅರ್ಜೆಂಟಿನಲ್ಲಿ ಓಡಾಡುತ್ತಿದ್ದರು. ಒಂದು ದೊಡ್ಡ ಫ್ಯಾನಿನ ರೆಕ್ಕೆಯನ್ನು ಜೋಡಿಸುವ ಕೆಲಸ ನಡೆದಿತ್ತು. ಅದಕ್ಕಾಗಿ ಎರೆಡು ದೊಡ್ಡ ದೊಡ್ಡ ಕ್ರೇನುಗಳು
ಫ್ಯಾನಿನ ರೆಕ್ಕೆ ಹಿಡಿದು ಅತ್ತಿತ್ತ ಓಡಾಡುತ್ತಿದ್ದವು. ಆ ಒಂದು ರೆಕ್ಕೆಯೇ ಏನಿಲ್ಲವೆಂದರೂ ೩೦ ಅಡಿ ಉದ್ದವಿತ್ತು. ಅದರ ತೂಕ ನನಗೆ ಅಂದಾಜು ಮಾಡಲಾಗಲಿಲ್ಲ. ಅಂತಹ ದೊಡ್ಡ ವಸ್ತುವೊಂದು ಗಾಳಿಯಿಂದ ತಿರುಗತ್ತದೆ ಎಂದು ಹೇಳಿದರೆ ಹಳ್ಳಿಯವರಾರೂ
ನಂಬಲೇ ಇಲ್ಲವಂತೆ. ಅಲ್ಲಿದ್ದ ಆಫೀಸರುಗಳಾರೂ
ಅದನ್ನು ಹಳ್ಳಿಗರಿಗೆ ಅರ್ಥಮಾಡಿಸುವ ಗೋಜಿಗೂ ಹೋಗಲಿಲ್ಲ. ಅದನ್ನೆಲ್ಲ ಪಕ್ಕಕ್ಕಿಟ್ಟು, ಅಣ್ಣನ ಬಗ್ಗೆ ವಿಚಾರಿಸಲು ಪರಿಚಯವಿರುವ ಮುಖಗಳ್ಯಾವುದಾದರೂ ಇವೆಯೇ
ಎಂದು ನೋಡಿದೆ. ಒಂದು ಕಡೆ ಮಹೇಶ ಕಾಣಿಸಿದ. ಅವನ ಹತ್ತಿರ ಹೋಗಿ ಕುಶಲೋಪಚರಿ
ನಡೆಸಿ ಅಣ್ಣನ ಬಗ್ಗೆ ವಿಚಾರಿಸಿದೆ.
ಅಣ್ಣನ ಬಗ್ಗೆ ಕೇಳಿದ ತಕ್ಷಣವೇ ಅವನ ಮುಖಚರ್ಯೆಯೇ ಬದಲಾಗಿ ಹೋಯಿತು. "ಆ ಬಡ್ಡಿಮಗನ್ ಬಗ್ಗೆ ಏನ್ ಕೇಳ್ತಿಯಾ ಬಿಡು ಶಿವೂ. ಹುಡುಗಿ ಸಿಕ್ಕಿದ ಮೇಲೆ ನಮ್ಮನ್ನೆಲ್ಲ ನೋಡಿದ್ರು ನೋಡದೆ
ಇರೊನ್ ತರ ಓಡಾಡ್ತಾನೆ. ಇಷ್ಟರಲ್ಲೇ ಇದೆ ಆ ನನ್ಮಗನಿಗೆ. ನಾವೆಲ್ಲ ಆಗ್ಲೇ ಮಾತಡ್ಕೊಂಡಿದೀವಿ ಅವ್ನಿಗೆ ಸರಿಯಾಗಿ ತದಕಬೇಕು ಅಂತ. ಸಿಗ್ಲಿ ನನ್ಮಗ..." ಎಂದು ಇನ್ನೂ ಮಾತಾಡ್ತಾನೆ ಇರಬೇಕಾದರೆ ಅವನನ್ನು ಅರ್ಧದಲ್ಲೇ ತಡೆದು "ಹೋಗ್ಲಿ ಬಿಡೋ ಮಹೇಶ, ಈಗ ಅವ್ನು ಎಲ್ಲಿ ಸಿಗ್ತಾನೆ ಹೇಳು" ಎಂದೆ. ಅವ್ನು ಇನ್ನೂ ಏನೇನೋ ಮಾತಾಡ್ಬೇಕು ಅಂತ ಇದ್ದೋವ್ನು
ನಾನು ಮಾತು ಮುರಿದದ್ದನ್ನ ನೋಡಿ ಮುಖ ಸಣ್ಣಗೆ ಮಾಡಿಕೊಂಡು "ಇನ್ನೆಲ್ಲಿ ಇರ್ತಾನೆ! ಆಂಜನೇಯ ಸ್ವಾಮಿ ಗುಡಿ ಹಿಂದೆ ಆ ಹುಡುಗಿ ಜೊತೆ ಕೂತ್ಕೊಂಡಿರ್ತಾನೆ ಅಷ್ಟೇ." ನಾನು ಮರುಮಾತಾಡದೆ ಅವನಿಗೆ ತಕ್ಷಣ ವಿದಾಯ ಹೇಳಿ ಆಂಜನೇಯ ಸ್ವಾಮಿ ಗುಡಿ ಕಡೆ ಹೊರಟೆ.
ಇಡೀ ಊರನ್ನೇ ಬಿಟ್ಟು ಆ ಬ್ರಹ್ಮಚಾರಿ ಆಂಜನೇಯನ ಗುಡಿಯ ಜಾಗವನ್ನೇ ತನ್ನ ಪ್ರೇಮಸಲ್ಲಾಪಕ್ಕಾಗಿ ಆರಿಸಿಕೊಂಡಿರುವ ಅಣ್ಣನಿಗೆ ಉಗಿಬೇಕೋ ಅಥವಾ ಅವನ ಮೂರ್ಖತನಕ್ಕೆ ನಗಬೇಕೋ ತಿಳಿಯದಾಯ್ತು. ಹೇಗೋ ದಾರಿಸವೆಸಿ
ಆಂಜನೇಯ ಸ್ವಾಮಿ ಗುಡಿ ಹತ್ತಿರ ಹೋದಾಗ ಅಲ್ಲಿ ಒಂದು ನರಪಿಳ್ಳೆಯೂ ಕಾಣಲಿಲ್ಲ. ಏನಕ್ಕೂ ಇರಲಿ ಎಂದು ಗುಡಿಯ ಒಂದು ಪ್ರದಕ್ಷಿಣೆ ಹಾಕಿ ಅಲ್ಲೇಲ್ಲಾದರೂ ಕಾಣಸಿಗುವನೇ ಎಂದು ನೋಡಿದೆ. ಊಹುಂ.. ಎಲ್ಲಿಯೂ ಪತ್ತೆ ಇಲ್ಲ. ಮೊದಲೇ ಬಿಸಿಲಿನಲ್ಲಿ ನಡೆದು ಬೇರೆ ಬಂದಿದ್ದರಿಂದ ಅವನು ಅಲ್ಲಿ ಇರುದಿರುವುದು ಅವನ ಮೇಲಿನ ಕೋಪವನ್ನು ಇಮ್ಮಡಿಗೊಳಿಸಿತ್ತು. ಅಲ್ಲಿ ಇದ್ದು ಮತ್ತೇನು ಮಾಡುವುದಕ್ಕೆ ಇರಲಿಲ್ಲವಾದ್ದರಿಂದ, ಆಂಜನೇಯ ಸ್ವಾಮಿಗೆ ನಮಸ್ಕರಿಸಿ ಮತ್ತೆ ಮನೆ ಕಡೆಗೆ ತಿರುಗಿದೆ. ಅಲ್ಲಿಂದ ಒಂದು ಫರ್ಲಾಂಗಿನಷ್ಟು ದೂರ ಬಂದಾಗ ಯಾರೋ ಹಿಂದಿನಿಂದ ಕೂಗಿದಹಾಗಾಯಿತು. ತಿರುಗಿ ನೋಡಿದರೆ ಅಣ್ಣ!! ದೇವಸ್ಥಾನ ಹಿಂದಿರುವ ದೊಡ್ಡ ಕಲ್ಲು ಬಂಡೆಯ ಮೇಲಿನಿಂದ ಕೈಬೀಸುತ್ತಿದ್ದ. ಮತ್ತೆ ಹಿಂತಿರುಗಿ ಅವನ ಕಡೆ ಕಾಲುಹಾಕುತ್ತ ಅವನಿಗೆ ಸರಿಯಾಗಿ ಬೈಯಬೇಕೆಂದು ಅಂದುಕೊಂಡೇ ಮುಂದುವರಿದೆ. ಕಷ್ಟ ಪಟ್ಟು ಆ ಕಲ್ಲುಬಂಡೆ ಹತ್ತುತ್ತಾ "ನಿಂಗೇನೋ ಬಂದಿದೆ ಬರಬಾರದ್ದು. ನಿನಗೋಸ್ಕರ ಎಲ್ಲೆಲ್ಲೋ ಹುಡುಕಿದ್ನಲ್ಲೋ. ಇಲ್ಯಾವ ಬಂಡೆಗೆ ಪೈಂಟ್ ಹೊಡಿಯೋಕೆ ಬಂದಿದಿಯೋ..." ಎಂದು ಮಾತು ಮುಗಿಸುವಷ್ಟರಲ್ಲಿ ಅವನ ಹಿಂದಿದ್ದ ಅವನ ಪ್ರೇಯಸಿ ಕಾಣಿಸಿದಳು. ಅಷ್ಟಕ್ಕೇ ಮಾತು ಮುಗಿಸಿ ಯಾಕೆ ಅವಳ ಮುಂದೆ ಅವನ ಮರ್ಯಾದೆ ತೆಗಿಯೋದು ಎಂದು ನನ್ನ ಕೋಪವನ್ನು ಪಕ್ಕಕ್ಕಿಟ್ಟು ಸುಮ್ಮನೇ ನಿಂತೆ. ಹೀಗೆ ಊರಿಂದ ದೂರ ಒಂದು ಬಂಡೆಯ ಮೇಲೆ ಹುಡುಗನ ಜೊತೆ ಕುಳಿತುಕೊಂಡಿದ್ದ ಅವಳ ಬಗ್ಗೆ ಒಳ್ಳೆಯ ಅಭಿಪ್ರಾಯವೇನೂ
ಬರಲಿಲ್ಲ. ಆದರೆ ಏನೂ ಹೇಳುವಹಾಗಿರಲಿಲ್ಲ ನೋಡಿ. ಸುಮ್ಮನೇ ಒಂದು ನಗು ತೇಲಿಬಿಟ್ಟು, ಅಣ್ಣನ ಕಡೆ ತಿರುಗಿ "ಯಾಕಪ್ಪ, ನಿನಗೆ ಬಿಸಿಲು ಮಳೆ ಎಲ್ಲ ತಾಗೋದು
ನಿಂತುಹೋದ್ವೋ ಹೇಗೆ? ಇಂತ ಬಿಸಿಲಲ್ಲಿ, ಅದೂ ಬಂಡೆಯಮೇಲೆ ಕೂತ್ಕೊಂಡಿದೀಯಾ?" ಎಂದೆ. ಅದಕ್ಕವನು ಸುಮ್ಮನೇ ಹಲ್ಲು ಕಿರಿದ. ಜೊತೆಗೆ ಅವಳೂ ಹಲ್ಲು ಕಿರಿದಳು. ಮನಸ್ಸಲ್ಲೇ 'ಸರಿಯಾಗಿ ಸಿಕ್ಕಿದಾಳೆ ಬಿಡು' ಎಂದುಕೊಂಡು ಸುಮ್ಮನಾದೆ.
ಅಣ್ಣ ಅವಳನ್ನು ಪರಿಚಯಿಸಿದ ಹಿಂದೆಯೇ ಉಭಯಕುಶಲೋಪಚರಿ ಆಯಿತು. ಅವಳ ಮಾತಲ್ಲಿ ಹಳ್ಳಿಯ ಸೊಗಡು ಇರಲಿಲ್ಲ. ತೆಳ್ಳಗೆ ಬೆಳ್ಳಗೆ ಇದ್ದು ಸಿಟಿ ಹುಡುಗಿ ತರ ಕಂಡಳು. ಅವಳು
ಹಾಕಿದ್ದ ಡ್ರೆಸ್ಸೂ ತುಂಬಾ ಚೆನ್ನಾಗಿದ್ದು ಅವಳನ್ನು ನೋಡಿದಕೂಡಲೇ ಇವಳು ಇಲ್ಲಿನವಳಲ್ಲ ಎನ್ನುವಂತಿತ್ತು. ಮತ್ತೆ ಅಣ್ಣನ ಕಡೆ ತಿರುಗಿ, "ನಾನಂತು ಇಂಥಾ ಬಿಸಿಲಲ್ಲಿ ಇರಲ್ಲಪ್ಪ. ನೀನು ಬೇಕಿದ್ರೆ ಇರು. ನಂಗೆ ಸಿಕ್ಕಾಪಟ್ಟೆ ಬಾಯಾರಿಕೆ ಬೇರೆ ಆಗ್ತಾ ಇದೆ. ನಾನು ಹೊರಡ್ತೀನಿ" ಎಂದು ತಿರುಗಿದೆ. ಅಷ್ಟರಲ್ಲೇ ಅವಳು ತನ್ನ ಪಕ್ಕದಲ್ಲೇ ಇದ್ದ ಬ್ಯಾಗಿನಿಂದ ಒಂದು ಗುಲಾಬಿ ಬಣ್ಣದ ನೀರಿನ ಬಾಟಲಿ ತೆಗೆದು ನನಗೆ ಕೊಡಲು ಕೈ ಮುಂದೆ ಮಾಡಿದಳು. ನಾನು ಅಣ್ಣನ ಮುಖವನ್ನೊಮ್ಮೆ ನೋಡಿದೆ. ಅವನು ನಗುತ್ತಾ 'ತಗೋ ಪರವಾಗಿಲ್ಲ' ಅನ್ನೋ ರೀತಿಯಲ್ಲಿ ತಲೆಯಾಡಿಸಿದ. ನಾನು ಅವನಿಗೆ ಮನದಲ್ಲೇ “ಥೂ ಬಡ್ಡಿಮಗನೇ” ಎಂದು ಉಗಿದು ನೀರಿನ ಬಾಟಲಿ ತೆಗೆದುಕೊಂಡು ಕುಡಿದೆ. ಮತ್ತೆ ಬಾಟಲಿ ಹಿಂದಿರುಗಿಸಿ ಅವಳಿಗೊಂದು ಸ್ಮೈಲ್ ಕೊಟ್ಟು ‘ಥ್ಯಾಂಕ್ಸ್’ ಎಂದೆ. ಅದಕ್ಕವಳು ಸುಮ್ಮನೇ ನಕ್ಕಳು. ನನಗಿಂತ ಎರೆಡು ಮೂರೂ ವರ್ಷ ದೊಡ್ಡವಳಿರಬೇಕು. ಆದರೆ ಸ್ವಲ್ಪ ಕಂಡೂ ಕಾಣದಂತೆ ಮೇಕಪ್ ಮಾಡಿಕೊಂಡು ನನಗಿಂತ ಚಿಕ್ಕವಳಂತೆಯೇ ಕಾಣುತ್ತಿದ್ದಳು. ಹಾಳಾಗಲಿ ಎಂದು ಅಣ್ಣನ
ಜೊತೆ ಮತ್ತೆ ಸ್ವಲ್ಪ ಹೊತ್ತು ಮಾತಾಡಿ ಅಲ್ಲಿಂದ ಹೊರಡುವುದು ಒಳ್ಳೆಯದು ಎನಿಸಿತು. ಅಂತೆಯೇ ಹತ್ತು ನಿಮಿಷ ಅಲ್ಲೇ ಅವನ ಜೊತೆ ಅದೂ ಇದೂ ಮಾತಾಡಿ "ನಾನಿನ್ನು ಹೊರಡ್ತಿನಪ್ಪ. ನಂಗೆ ಈ ಬಿಸಿಲಲ್ಲಿ ಹಿಂಗೆಲ್ಲ ಓಡಾಡಿದ್ರೆ ಸಂಜೆ ಹೊತ್ತಿಗೆ ತಲೆನೋವು ಬರೋದು ಗ್ಯಾರಂಟಿ" ಎಂದು ಎದ್ದು ನಿಂತೆ. ಅಣ್ಣ "ಸರಿ, ಆ…" ಎಂದು ಏನೋ ಹೇಳುವವನಿದ್ದ ಅಷ್ಟರಲ್ಲಿ ಅವಳು ಮದ್ಯೆ ಬಾಯಿ ಹಾಕಿ "ಅರೆರೆ, ಇಷ್ಟು ಬೇಗನಾ! ಏನ್ರಿ, ಬರೀ
ನಿಮ್ಮಣ್ಣನ ಜೊತೆ ಮಾತನಾಡಿ ಹೊರಟಬಿಟ್ರೆ ಹೇಗೆ?! ನಮ ಜೊತೆನೂ ಸ್ವಲ್ಪ ಮಾತಾಡ್ರಿ... ನಿಮ್ಮಣ್ಣ
ಯಾವಾಗ್ಲೂ ನಿಮ್ ಬಗ್ಗೆನೇ ಹೇಳ್ತಾ ಇರ್ತಾರೆ" ಎಂದಳು. ನನಗೆ ಸ್ವಲ್ಪ ಕಸಿವಿಸಿಯಾಯಿತು. ಮೊದಲೇ ಬಿಸಿಲು ತುಂಬಾ ಹೆಚ್ಚಾಗಿದ್ದರಿಂದ ಅಲ್ಲಿ ನಿಲ್ಲೋದು ಯಾಕೋ ಇಷ್ಟವಾಗಲಿಲ್ಲ. ಅದರಲ್ಲೂ ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ನಾನ್ಯಾಕೆ ಇವರ ಮದ್ಯೆ ಎಂದೆನಿಸಿತು. ನಾನು ನಕ್ಕು ಅಣ್ಣನ ಮುಖ ನೋಡಿದೆ. ಅವನಿಗೇನೋ ನಾನು ಅಲ್ಲಿ ಇರುವುದು ಅಷ್ಟೇನೂ ಇಷ್ಟವಾದಂತೆ ಕಾಣಲಿಲ್ಲ. ಅವನ ಮುಖಭಾವವೇ ಹಾಗಿತ್ತು. ಆದರೂ ಬೆಳಗ್ಗೆಯಿಂದ ನನ್ನನ್ನು ಅಲೆದಾಡಿಸಿದ ಇವನನ್ನು ಸ್ವಲ್ಪ ಉರಿಸೋಣ ಎಂದು “ಹಮ್... ನಂಗೇನೂ
ತೊಂದ್ರೆ ಇಲ್ಲ. ಆದ್ರೆ ಇಲ್ಲಿ ಬಿಸಿಲು ತುಂಬಾ ಜಾಸ್ತಿ. ಆ ಮರದ್ ನೆರಳಲ್ಲಿ ಕುತ್ಕೊಳೋದಾದ್ರೆ ಇರ್ತೀನಿ” ಎಂದು ದೇವಸ್ಥಾನದ ಮುಂಭಾಗದಲ್ಲಿದ್ದ ಆಲದಮರ ತೋರಿಸಿದೆ. ಅದಕ್ಕವಳು ಎದ್ದುನಿಂತು “ಖಂಡಿತ. ನಿಮಗೋಸ್ಕರ ಬರ್ತೀವಿ” ಎಂದಳು. ಅಣ್ಣನ ಮುಖ ಸಣ್ಣಗಾಯಿತು.
ಮರದ ಕೆಳಗೆ ಕುಳಿತು
ತುಂಬಾ ಹೊತ್ತು ಹರಟಿದೆವು. ಸಣ್ಣ ಸಣ್ಣ ಜೋಕುಗಳಿಗೂ ನಗುತ್ತಿದ್ದ ಕಾವ್ಯಳನ್ನು ನಗದಂತೆ ತಡೆಯುವುದೇ
ಕಷ್ಟವಾಯ್ತು. ಅಲ್ಲಿ ಅವಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ ಕಾಲವೂ ಸಿಕ್ಕಿತು. ಮೂಲತಃ ಚೆನ್ನೈನವಳಾದರು
ಓದಿದ್ದೆಲ್ಲಾ ಮೈಸೂರಿನಲ್ಲಿ. ಹಾಗಾಗಿ ಕನ್ನಡದವನ್ನು ಸುಲಲಿತವಾಗಿ ಮಾತನಾಡುತ್ತಿದ್ದಳು. ಅದಕ್ಕಿಂತಲೂ
ಚೆನ್ನಾಗಿ ಇಂಗ್ಲೀಷು ಬರುತ್ತೆ ಅನ್ನೋದು ಅವಳ ಮಾತಾಡುವ ರೀತಿ ನೋಡಿಯೇ ಗೊತ್ತಾಗುತ್ತಿತ್ತು. ಆದರೆ
ನಾ ಕಂಡ ಹಾಗೆ ಅವಳಿಗೆ ಅದರ ಬಗ್ಗೆ ಜಂಬವಿರಲಿಲ್ಲ. ಅಣ್ಣನಿಗೆ ಇಂಗ್ಲಿಷಿನ ಗಂಧವೇ ಇರದಿದ್ದರಿಂದ ಅವನ
ಮುಂದೆ ನಾವು ಇಂಗ್ಲೀಷಿನಲ್ಲಿ ಮಾತನಾಡಿದರೆ ಅವನು ಬೇಜಾರು ಮಾಡಿಕೊಂಡಾನು ಎಂದು ಸುಮ್ಮನಾದೆವು. ಇಂಗ್ಲೀಷು
ಗೊತ್ತಿದ್ದೊರು ಎಲ್ಲದಕ್ಕೂ ಅದರಲ್ಲೇ ಟಸ್ಸು ಪುಸ್ಸು ಅನ್ನೋರನ್ನು ನೋಡಿದ್ದ ನನಗೆ ಕಾವ್ಯಳನ್ನು ನೋಡಿ
ಖುಷಿಯಾಯಿತು. ತಾನು ಸಿಟಿ ಹುಡುಗಿ ಅನ್ನೋದನ್ನು ತೋರಿಸಿಕೊಳ್ಳದೆ ತುಂಬಾ ನಯವಾಗಿ ಎಲ್ಲರ ಜೊತೆಯೂ
ಬೆರೆಯುವ ಮನಸ್ಸಿನೊಳು ಅನ್ನಿಸಿತು. ಅವಳು ನಮ್ಮ ಜೋಕುಗಳಿಗೆ ನಗುತ್ತಿದ್ದ ರೀತಿ ನೋಡಿದರೆ ಇಲ್ಲಿಯವರೆಗೂ
ಜೋಕುಗಳನ್ನು ಬೇರೆಲ್ಲೂ ಕೇಳಿಯೇ ಇಲ್ಲವಾ ಅನ್ನುವ ಹಾಗೆ ನಗುತ್ತಿದ್ದಳು. ಹೆಚ್ಚಾದ ಮೇಕಪ್ ಇಲ್ಲ,
ಕೈಯಲ್ಲೊಂದು ಸುಮಾರಾದ ವಾಚು, ಕಿವಿಗೆ ಇನ್ನೂ ಸುಮಾರಾಗಿ ಕಾಣುವ ಓಲೆ, ಮತ್ತು ಹಣೆಗೊಂದು ಸಣ್ಣ ಬಿಂದಿ.
ನಾವೆಷ್ಟೇ ಮಾತನಾಡಿದರೂ ಸ್ವಲ್ಪವೂ ಕುತೂಹಲ ಕಡಿಮೆಯಾಗದವರಂತೆ ಸುಮ್ಮನೇ ಕೇಳೋಳು. ರೇಗಿಸಿದರೆ ತುಂಬಾ
ನಾಚಿಕೊಳ್ಳೋಳು. ನಮ್ಮಣ್ಣ ಇವಳನ್ನೇ ಮದುವೆಯಾದರೆ ನನಗೊಬ್ಬಳು ಒಳ್ಳೇ ಫ್ರೆಂಡ್ ಸಿಗುತ್ತಾಳೆ ಎಂದು
ಮನದಲ್ಲೇ ಅಂದುಕೊಂಡೆ.
* * * * *
ನನಗೆ ರಾಮಗಿರಿಯ
ಬೆಟ್ಟ ಸುತ್ತುವ ಹುಚ್ಚು ತುಂಬಾ ಚಿಕ್ಕವನಾಗಿದ್ದಾಗಿನಿಂದಲೂ ಇತ್ತು. ಮೊದಲೆಲ್ಲಾ ಅಣ್ಣನ ಜೊತೆ ಬೆಟ್ಟ
ಸುತ್ತಿ ಅಲ್ಲಿಂದ ನಮ್ಮ ತೋಟಕ್ಕೆ ಹೋಗಿ ಅಲ್ಲಿ ಒಂದೆರಡು ಎಳನೀರು ಕುಡಿದು ದಾರಿಯಲ್ಲಿ ಸಿಗುವ ಎಲ್ಲಾ
ಹಣ್ಣಿನ ಮರಗಳಿಗೂ ಕಲ್ಲು ಹೊಡೆದು ಸಿಕ್ಕಿದ್ದನ್ನೆಲ್ಲ ತಿಂದು ಮನೆಗೆ ವಾಪಸಾಗುತ್ತಿದ್ದೆವು. ಈಗ ಅದನ್ನೆಲ್ಲ
ಮಾಡಲು ಅಣ್ಣನಿಗೆ ಟೈಮೇ ಇಲ್ಲ. ಅವನಿಗೆ ಮೂರುಹೊತ್ತೂ ಕಾವ್ಯಳದ್ದೇ ಧ್ಯಾನವಾಗಿಬಿಟ್ಟಿತ್ತು. ಬೆಳಗ್ಗೆ
ಎದ್ದು ಓಡೋವ್ನು, ಮತ್ತೆ ಬರುತ್ತಿದ್ದುದೇ ರಾತ್ರಿ ಊಟಕ್ಕೆ. ದಿನಪೂರ್ತಿ ಹೀಗೆ ಅಲಿಯೋ ಇವರು ಮಧ್ಯಾನ್ಹದ ಊಟಕ್ಕೆ ಏನು
ಮಾಡ್ತಾರೆ ಅಂತ ಅನಿಸಿದ್ದೂ ಉಂಟು.
ಒಂದು ದಿನ ಕಾವ್ಯ
ಸಿಕ್ಕಾಗ "ನೀವು ಮಧ್ಯಾನ್ಹದ ಊಟಕ್ಕೆ ಏನ್ ಮಾಡ್ತೀರಿ? ನಮ್ಮಣ್ಣ ಅಂತೂ ಮನೆಗೆ ಬರೋದಿಲ್ಲ. ಎಲ್ಲಿ
ತಿಂತಾನೆ ಅನ್ನೋದೂ ಗೊತ್ತಿಲ್ಲ. ನಿಮ್ ಕಥೆ ಏನು?" ಅಂದೆ.
"ನಿಮ್ಮಣ್ಣ
ಇದಾರಲ್ಲ, ಏನಾದ್ರು ತಿನ್ನೋಕೆ ಏರ್ಪಾಡು ಮಾಡ್ತಾರೆ. ಎಲ್ಲೆಲ್ಲಿಂದಲೋ ಹಣ್ಣುಗಳನ್ನು ತಗೊಂಡು ಬರ್ತಾರೆ.
ಇಲ್ಲಾಂದ್ರೆ ಎಳನೀರು ತರ್ತಾರೆ. ಹೆಂಗೋ ಜೀವನ ನಡೆದೋಗತ್ತೆ" ಎಂದು ನಕ್ಕಳು.
ನನಗೆ ಮನದಲ್ಲೇ
'ಎಲ ಬಡ್ಡಿಮಗನೇ! ಹುಡುಗೀಗೋಸ್ಕರ ಏನೆಲ್ಲಾ ಕಳ್ಳತನ ಮಾಡ್ತಾಯಿದಾನೆ ಇವ್ನು' ಅಂತ ಅನ್ನುಸ್ತು. ಮೊದಲು
ನನ್ ಜೊತೆ ಇದ್ದಾಗ್ಲೂ ಅದನ್ನೇ ಮಾಡ್ತಾ ಇದ್ದ. ಆದ್ರೆ ಆಗ ತಮ್ಮನಿಗೋಸ್ಕರ ಮಾಡ್ತಾ ಇದ್ದಿದ್ರಿಂದ
ಯಾರೂ ಏನೂ ಅಂದ್ಕೊಳ್ತಾ ಇರ್ಲಿಲ್ಲ ಬಿಡಿ. ಆದ್ರೆ ಒಂದು ಹುಡುಗಿಗೋಸ್ಕರ ಹೀಗೆಲ್ಲ ಮಾಡ್ತಾ ಇದಾನೆ
ಅಂತ ಗೊತ್ತಾದ್ ತಕ್ಷಣ ಜನ ಒಂಥರಾ ನೋಡ್ತಾರೆ ನೋಡಿ.
ನಾನು ರಾಮಗಿರಿಯಲ್ಲಿ
ಇರುವಷ್ಟು ದಿನವೂ ತಿರುಗಾಡೋದೇ ಆಗುತ್ತಿತ್ತು. ನಾನು ಎಷ್ಟು ಸಾರಿ ಬೆಟ್ಟಕ್ಕೆ ಹೋದರೂ ಅಲ್ಲಿ ದಿನವೂ
ಏನಾದರೊಂದು ಹೊಸದು ನೋಡುವುದಕ್ಕೋ ಇಲ್ಲ ಮಾಡುವುದಕ್ಕೋ ಸಿಗುತ್ತಿತ್ತು. ಬೆಟ್ಟದ ಪೂರ್ವದಿಕ್ಕಿನ ತಪ್ಪಲಿನಲ್ಲೊಂದು
ದೊಡ್ಡ ಬಂಡೆಯಿತ್ತು. ಏನಿಲ್ಲವೆಂದರೂ 20-25 ಅಡಿ ಎತ್ತರವಿರಬಹುದು. ನಾನು ಅಣ್ಣನ ಜೊತೆ ಬೆಟ್ಟವನ್ನು
ಸುತ್ತುತ್ತಿದ್ದಾಗ ಬೆಟ್ಟದಲ್ಲಿರುವ ಬಂಡೆಗಳನ್ನೆಲ್ಲಾ ಹತ್ತಿ ಇಳಿಯೋದು ರೂಢಿಯಾಗಿತ್ತು. ಅದರಲ್ಲೇನೋ
ಒಂಥರಾ ಖುಷಿ ಸಿಗೋದು. ಜೊತೆಯಲ್ಲಿ ಅಣ್ಣ ಬೇರೆ ಇದ್ದಿದ್ದರಿಂದ ಬಿದ್ದರೂ ಎತ್ತಿಕೊಂಡು ಹೋಗಲಿಕ್ಕೆ
ಒಬ್ಬರು ಇರುತ್ತಾರೆ ಎನ್ನೋ ನಂಬಿಕೆ ಬೇರೆ. ಆದರೆ ಈಗ ಅಣ್ಣನ ಅನುಪಸ್ಥಿತಿಯಲ್ಲಿ ಅದನ್ನೆಲ್ಲಾ ಸ್ವಲ್ಪ
ಕಡಿಮೆ ಮಾಡಿದ್ದೆ. ಬಂಡೆಗಳನ್ನು ಹತ್ತೋಕೆ ಸ್ವಲ್ಪ ಭಯ ಆಗೋದು. ಒಬ್ಬನೇ ಸುತ್ತೋಕು ಸ್ವಲ್ಪ ಭಯ ಇದ್ದೆ
ಇತ್ತು. ಯಾಕೆಂದರೆ ರಾಮಗಿರಿಯ ಬೆಟ್ಟದಲ್ಲಿ ಕರಡಿ ಮತ್ತು ಚಿರತೆ ಇರುವುದನ್ನು ನಾನು ಕಣ್ಣಾರೆ ಕಂಡಿದ್ದೆ.
ಜಾಗ ನನಗೆ ಎಷ್ಟೇ ಚಿರಪರಿಚಿತವಿದ್ದರೂ, ಮನಸ್ಸಿನಲ್ಲಿ ಒಂದು ಅಳುಕು ಇದ್ದೇ ಇತ್ತು. ಒಂದು ದಿನ ನಾನು
ಆ ದೊಡ್ಡ ಬಂಡೆಯ ಹತ್ತಿರ ಬಂದಾಗ ಇದನ್ನು ಇವತ್ತು ಹತ್ತಿಯೇ ತಿರಬೇಕು ಅನ್ನಿಸಿತು. ಹುಚ್ಚು ಮನಸಿಗೆ
ಹತ್ತು ಮುಖಗಳು ಎನ್ನುವ ಹಾಗೆ ಯಾಕೋ ಅವತ್ತು ಮನಸ್ಸು ಹಾದಿ ತಪ್ಪಿತ್ತು. ಬಿದ್ದರೆ ಏನಾಗುವುದೆಂದು
ಸಂಪೂರ್ಣ ಅರಿವಿದ್ದರೂ ಹುಚ್ಚು ಹುರುಪಿನಲ್ಲಿ ಬಂಡೆ ಏರಲು ಸಿದ್ಧನಾಗಿಯೇ ಬಿಟ್ಟೆ.
ಬಂಡೆ ಬಹಳ ಕಡಿದಾಗಿದ್ದು
ಮೊದಲ ಹತ್ತು ಅಡಿ ಏರುವುದೇ ಸವಾಲಾಗಿತ್ತು. ಅದನ್ನು ಏರುವಷ್ಟರಲ್ಲಿ ನನ್ನ ಕೈಯೆಲ್ಲಾ ಸೋತು ಹೋಗಿ
ಅಲ್ಲೇ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡೆ. ಮತ್ತೂ ಮೇಲಕ್ಕೆ ಹತ್ತುವುದು ನನ್ನ ಕೈಯಲ್ಲಿ ಆಗದ ಕೆಲಸವೆಂದು
ಗೊತ್ತಿದ್ದರೂ, ಪ್ರಯತ್ನವನ್ನಾದರೂ ಪಡೋಣ ಎಂದು ಎಲ್ಲಿಯಾದರೂ ಬಂಡೆಯಲ್ಲಿ ಬಿರುಕು ಸಿಕ್ಕೀತೇ ಎಂದು
ತಲೆಯೆತ್ತಿ ತಡಕಾಡಿದೆ. ನಾನು ತಡಕಾಡಿದ ರಭಸಕ್ಕೆ ಬಂಡೆಯ ಮೇಲ್ಪದರ ಮೇಲಿದ್ದ ಸಣ್ಣ ಹುಳುವೊಂದು ಜಾರಿ
ನನ್ನ ಕಣ್ಣಿಗೆ ಬಿದ್ದುಬಿಟ್ಟಿತು. ಅದು ಕಣ್ಣಿಗೆ ಬಿದ್ದೊಡನೆ ನಾನು ತಲೆ ಕೊಡವಿ ಅದನ್ನು ತೆಗೆಯಲು
ಬಲಗೈಯನ್ನು ಬಿಟ್ಟೊಡನೆಯೇ ಆಯತಪ್ಪಿ ಹತ್ತು ಅಡಿ ಕೆಳಗೆ ಧೊಪ್ಪನೆ ಬಿದ್ದೆ. ಹೇಗೆ ಬಿದ್ದೆನೋ ಗೊತ್ತಿಲ್ಲ,
ಆದರೆ ಬಿದ್ದ ಪೆಟ್ಟಿಗೆ ಕಣ್ಣೆಲ್ಲಾ ಮಂಜಾಗಿ ಸ್ವಲ್ಪ ತಲೆ ಸುತ್ತಿದ ಹಾಗಾಯಿತು. ಆದರೆ ಕಣ್ಣಲ್ಲಿ
ಬಿದ್ದಿದ್ದ ಹುಳುವಿನಿಂದ ಇನ್ನು ಕಣ್ಣು ನೋಯುತ್ತಲೇ ಇತ್ತು. ಅದನ್ನು ಉಜ್ಜಿಕೊಳ್ಳಲು ಕೈ ಎತ್ತಿದಾಗಲೇ
ಬಿದ್ದಿದ್ದರ ಗಂಭೀರತೆಯ ಅರಿವಾದದ್ದು. ಬಲಗೈಯೆಲ್ಲಾ ತರಚಿಕೊಂಡು ಒಂದು ಕಡೆ ರಕ್ತ ಹೊರಬರುತ್ತಿತ್ತು.
ಕಣ್ಣು ನೋವು ತಾಳಲಾರದೆ ಎಡಗೈಯಲ್ಲೇ ಕಣ್ಣಿನಲ್ಲಿ ಬಿದ್ದಿದ್ದ ಹುಳುವನ್ನು ಹುಡುಕಿ ಹೊರತಗೆದೆ. ಸ್ವಲ್ಪ
ಸಮಾಧಾನವಾಯಿತು. ಮತ್ತೆ ಬಲಗೈ ನೋಡಿಕೊಂಡು ತಕ್ಷಣ ಪ್ಯಾಂಟಿನಲ್ಲಿದ್ದ ಕರ್ಚಿಫು ಹೊರತೆಗೆದು ರಕ್ತ
ಹೆಚ್ಚು ಸೋರದಿರಲಿ ಎಂದು ಒತ್ತಿ ಇಟ್ಟುಕೊಂಡೆ. ತುಂಬಾ ಜೋರಾಗೇ ಬಿದ್ದಿರಬೇಕು, ಬಲಗೈಯನ್ನು ಎತ್ತಲೂ
ಆಗದಷ್ಟು ನೋವಾಗುತ್ತಿತ್ತು. ನಿಧಾನವಾಗಿ ಎದ್ದು ಅತ್ತಿತ್ತ ನೋಡಿದೆ. ಯಾವ ಪ್ರಾಣಿಯು ಕಾಣಲಿಲ್ಲ.
ಅಲ್ಲಿಂದ ನಡೆದು ಸ್ವಲ್ಪವೇ ದೂರದಲ್ಲಿದ್ದ ನಮ್ಮ ತೋಟದ ದಾರಿಗೆ ನಡೆದುಬಂದೆ. ದಾರಿಗೆ ಬಂದ ಮೇಲೆ ಸ್ವಲ್ಪ
ಹೊತ್ತು ಅಲ್ಲೇ ಇದ್ದ ಮರದ ಬುಡದಲ್ಲಿ ಕುಳಿತುಕೊಂಡು ಮತ್ತೆ ಕೈ ನೋಡಿಕೊಂಡೆ. ರಕ್ತ ಬರುವುದು ಸ್ವಲ್ಪ
ಕಡಿಮೆಯಾಗಿತ್ತು. ಸ್ವಲ್ಪ ಹೊತ್ತು ಅಲ್ಲೇ ಕಾದಮೇಲೆ ಅಲ್ಲಿಗೆ ಪ್ರಕಾಶಣ್ಣ ಬೈಕಿನ ಮೇಲೆ ಎಲ್ಲಿಗೋ
ಹೋಗಲಿಕ್ಕೆಂದು ಬಂದವನು ನನ್ನನ್ನು ನೋಡಿ ಬೈಕು ನಿಲ್ಲಿಸಿದ. ಹೆಚ್ಚು ಮಾತನಾಡದೆ ನನ್ನನ್ನು ತಕ್ಷಣವೇ
ಬೈಕಿನ ಮೇಲೆ ಕೂರಿಸಿಕೊಂಡು ವಾಪಸ್ಸು ಊರಿನ ಕಡೆ ಗಾಡಿ ತಿರುಗಿಸಿದ.
ಮನೆಗೆ ತಲುಪಿದ
ಮೇಲೆ ನಾನು ಮೊದಲೇ ಎಣಿಸಿದಂತೆ ಚಿಕ್ಕಪ್ಪ ಮತ್ತು ಚಿಕ್ಕಮ್ಮ ನಾನು ಸತ್ತೇ ಹೋದೆನೇನೋ ಅನ್ನುವಂತೆ
ಅತ್ತರು. ಬಿದ್ದು ಬಂದಿದ್ದ ನನ್ನನ್ನು ನೋಡಿಕೊಳ್ಳುವುದಿರಲಿ, ನಾನೆ ಅವರನ್ನು ನೋಡಿಕೊಳ್ಳುವಂತಹ ಪರಿಸ್ಥಿತಿ
ಬಂತು. ನನಗೇನೂ ಆಗಿಲ್ಲ ಎಂದು ಅವರಿಗೆ ಅರಿವು ಮಾಡಿಸುವುದಕ್ಕೆ ನಾನು ಮನೆಯಲ್ಲಿಯೇ ಒಂದೆರೆಡು ರೌಂಡು
ಜಾಗಿಂಗ್ ಮಾಡಿದ್ದೂ ಆಯಿತು. ನಾನು ಎಷ್ಟೇ ಹೇಳಿದರೂ ಕೇಳದೆ ಇಬ್ಬರೂ
ಸೇರಿ ನನ್ನನ್ನು ರಾಮಗಿರಿಯಲ್ಲಿಯೇ ಇದ್ದ ಒಂದು ಸಣ್ಣ ಹಾಸ್ಪಿಟಲ್ಲಿಗೆ ಕರೆದುಕೊಂಡು ಹೋದರು. ಡಾಕ್ಟರು
ನನ್ನನ್ನು ಪರಿಶೀಲಿಸಿ "ಏನು ಆಗಿಲ್ಲ. ಆದರೆ ಗಾಯಗಳಾಗಿರುವುದರಿಂದ
ಸ್ವಲ್ಪ ಜ್ವರ ಬರಬಹುದು. ಒಂದೆರೆಡು
ದಿನ ಮನೆಯಲ್ಲಿಯೇ ರೆಸ್ಟ್ ತೆಗೆದುಕೊಂಡರೆ ಎಲ್ಲಾ ಸರಿ ಹೋಗುತ್ತದೆ" ಎಂದರು. ಗಾಯಗಳಿಂದ ಇಂಫೆಕ್ಷನ್ ಆಗದಿರಲಿ ಎಂದು ಒಂದು ಇಂಜೆಕ್ಷನ್ ಕೂಡ ಕೊಟ್ಟರು. ಚಿಕ್ಕಮ್ಮನಿಗೆ ಆದರೂ ಸಮಾಧಾನವೇ ಆಗಲಿಲ್ಲ. ಅವರು ನನಗೆ ಗ್ಲುಕೋಸ್ ಬಾಟಲಿ ಹಾಕಿ ಎಂದು ಡಾಕ್ಟಾರಿಗೆ ದುಂಬಾಲು ಬಿದ್ದರು. ಡಾಕ್ಟಾರು ಎಷ್ಟೇ ಬಾರಿ ಅದರ ಅವಶ್ಯಕತೆ ಇಲ್ಲ ಎಂದರೂ ಅವರು ಕೇಳಲೊಲ್ಲರು. ಕೊನೆಗೆ ಡಾಕ್ಟಾರು ಒಮ್ಮೆ ಸಿಟ್ಟಿನಲ್ಲಿ "ನೋಡಮ್ಮ, ಹಾಗೆಲ್ಲಾ ಸುಮ್ಮಸುಮ್ಮನೆ ಬಾಟಲಿ ಹಾಕಿದರೆ ಚೆನ್ನಾಗಿದ್ದೋರು
ಚೆನ್ನಾಗಿಲ್ಲದ ಹಾಗೆ ಆಗಬಹುದು. ಈಗ ಹೇಳಿ, ಬಾಟಲಿ ಹಾಕಬೇಕಾ?" ಆಗಲೇ ನಮ್ಮ ಚಿಕ್ಕಮ್ಮ ಸುಮ್ಮನಾದದ್ದು.
ಆ ಊರಲ್ಲಿ ಡಾಕ್ಟರನ್ನು ನೋಡಲು ಬರೋರೆಲ್ಲ ಹಳ್ಳಿಯವರೇ. ಹಾಗಾಗಿ ಅವರಿಗೆ ಅಲ್ಲಿಗೆ ಬಂದೋರಿಗೆ ಏನಾದರೂ ಹೆಚ್ಚಿಗೆ ಬೆಲೆಯ ಔಷದಿ ಬರೆದರೆ ಎಲ್ಲಿ ಬರುವುದನ್ನೇ ಬಿಟ್ಟಾರು
ಎಂದು ಏನೇ ಆದರೂ ಏನೂ ಆಗಿಯೇ ಇಲ್ಲ ಎನ್ನುವಂತೆ ಹೇಳುತ್ತಿದ್ದರು. ಇದು ನನಗೆ ಗೊತ್ತಿದ್ದರಿಂದ ನಾನು "ಡಾಕ್ಟರ್, ನಾನು ಚಿತ್ರದುರ್ಗದಲ್ಲಿ ಇರೋದು. ನಾನು ಬಿದ್ದಾಗ ಸ್ವಲ್ಪ ಹೆಚ್ಚಾಗಿಯೇ ರಕ್ತ ಹೋಗಿದ್ದನ್ನು ನೋಡಿದೆ. ಆದ್ದರಿಂದ, ನಿಮಗೇನಾದರೂ ನಾನು ಅಡ್ಮಿಟ್ ಆಗಬೇಕು ಅಂತ ಅನಿಸಿದರೆ ನಾನು ಕೂಡಲೇ ನಮ್ಮಪ್ಪನಿಗೆ ಫೋನ್ ಮಾಡಿ ಹೇಳಿ ಅವರನ್ನು ಕರೆಸಿಕೊಳ್ಳುತ್ತೇನೆ. ಅವರು ಚಿತ್ರದುರ್ಗದಲ್ಲಿ ಇನ್ಸ್ಪೆಕ್ಟರ್ ಆಗಿದ್ದಾರೆ" ಎಂದೆ. ಅವರಿಗೆ ನಾನು ಇನ್ಸ್ಪೆಕ್ಟರ್ ಮಗ ಎಂದು ಗೊತ್ತಾದಕೂಡಲೇ ಅಲ್ಲಿಯವರೆಗೂ ಕುತ್ಕೊಳಯ್ಯ, ಏನಾಯ್ತಯ್ಯಾ ಅನ್ನುತ್ತಿದ್ದೋರು ತಕ್ಷಣವೇ ಮಾತಿನ ಧಾಟಿ ಬದಲಿಸಿ, "ಛೆ ಛೆ, ಅಂತದ್ದೇನು ಆಗಿಲ್ಲ ಬಿಡಿ. ಸ್ವಲ್ಪ ಪೆಟ್ಟು ಬಿದ್ದಿದೆ ಅಷ್ಟೇ. ನೀವು ಇನ್ನು ಒಂದು ವಾರದಲ್ಲಿ ಫುಲ್ ರಿಕವರಿ ಆಗ್ತೀರಾ ನೋಡಿ" ಎಂದರು. ಚಿಕ್ಕಮ್ಮ "ಹಾಗಾದರೆ ಸಾಕಪ್ಪ. ನಾನು ಬೆಟ್ಟದ ಮೇಲಿರೋ ಸ್ವಾಮಿಗೆ ಪೂಜೆ ಮಾಡಿಸ್ತೀನಿ" ಎಂದು ಬೆಟ್ಟದ ಕಡೆ ತಿರುಗಿ ಕೈ ಮುಗಿದರು. ನಾನು ಅವರ ಮುಗ್ದತೆಗೆ ನಕ್ಕು ಸುಮ್ಮನಾದೆ.
* * * * *
ನಾನು, ಚಿಕ್ಕಪ್ಪ ಮತ್ತು ಚಿಕ್ಕಮ್ಮ ವಾಪಸ್ಸು ಮನೆ ಕಡೆ ಹೆಜ್ಜೆ ಹಾಕುವಾಗ ಚಿಕ್ಕಪ್ಪ ಅಣ್ಣನಿಗೆ
ಶಪಿಸುತ್ತಾ “ಬರಲೀ ಇವತ್ತು ಬಡ್ಡಿಮಗ, ಅವನ ಚಡ್ಡಿ ಉದುರೋ ಹಾಗೆ ಹೊಡಿತೀನಿ. ಯಾವಾಗ ನೋಡಿದರೂ
ಊರು ತಿರುಗ್ತಾ ಇರ್ತಾನೆ. ಅವ್ನು ಇದ್ದಿದ್ರೆ ಇಷ್ಟೆಲ್ಲಾ ಆಗ್ತಾನೇ
ಇರ್ಲಿಲ್ಲ. ಇವಾಗ ಇವರಪ್ಪನಿಗೆ ಏನಾದ್ರು ಇವ್ನು ಹಿಂಗೇ ಮಾಡ್ಕೊಂಡಿರೋದು ಗೊತ್ತಾದ್ರೆ ನಮ್ಮನ್ನ ಸುಮ್ನೆ ಬಿಡ್ತಾನಾ. ನಮ್ಮನ್ನ ಮುಖ ಮೂತಿ ನೋಡದೆ ಉಗಿತಾನೆ" ಎಂದು ಚಿಕ್ಕಮ್ಮನಿಗೆ ಹೇಳಿದರು. ಚಿಕ್ಕಮ್ಮ ಅಪ್ಪನ ಬಗ್ಗೆ ನೆನದುಕೊಂಡೇ ದಿಗಿಲು ಪಟ್ಟರು. ನಾನು "ಅಯ್ಯೋ ಸುಮ್ನೆ ಇರಿ ಚಿಕ್ಕಪ್ಪ. ಎಲ್ಲದಕ್ಕೂ ಅಣ್ಣನಿಗೆ ಯಾಕೆ ಬೈತೀರಾ! ಅವನಿಂದೇನು ಆದದ್ದಲ್ಲ ಇದು. ನಂದೇ ತಪ್ಪು. ನಾನು ಬಿದ್ದದ್ದು ಅಪ್ಪನಿಗೆ ಗೊತ್ತಾಗದ ಹಾಗೆ ನೋಡಿಕೊಂಡರೆ ಸಾಕು. ನಾನು ಇನ್ನೂ
ಸ್ವಲ್ಪ ದಿನ ಇಲ್ಲೇ ಇದ್ದು ಎಲ್ಲಾ ಗಾಯ ವಾಸಿ ಮಾಡ್ಕೊಂಡೇ ಹೋಗ್ತೀನಿ" ಎಂದೆ. ಅವರು ಅಲ್ಲಿಗೆ ಸುಮ್ಮನಾದರೂ, ಅಣ್ಣನ ಮೇಲಿನ ಕೋಪ ಇನ್ನೂ
ಆರಿರಲಿಲ್ಲ. “ನಿಂಗೊತ್ತಿಲ್ಲಪ್ಪಾ, ಅವ್ನು ಇವಾಗಿವಾಗಂತೂ ನಮ್ಮ ಮನೆ ಮರ್ವಾದೆನೇ ತೆಗಿಯೋಕೆ ನಿಂತುಬಿಟ್ಟಿದಾನೆ. ಇವನಿಂದ
ಊರ್ನೋವ್ರೆಲ್ಲಾ ನನ್ನ ಒಂಥರಾ ನೋಡ್ತಾರೆ. ನಾನು ಕಷ್ಟ ಪಟ್ಟು ಹೊಲದಲ್ಲಿ ವ್ಯವಸಾಯ ಮಾಡ್ತಾ ಇದ್ರೆ ಈ ಲೋಪರು ಹುಡುಗಿ ಹಿಂದೆ ಅಲೀತ ಇದಾನೆ. ನೀನು ಇವತ್ತು ಸುಮ್ನೆ ಇದ್ದುಬಿಡು. ಅವ್ನನ್ನ ನಾನು ವಿಚಾರಿಸಿಕೊಳ್ತೀನಿ" ಎಂದು ಸಿಟ್ಟಿನಲ್ಲೇ ನುಡಿದರು. ಅವರು ನುಡಿದುದು
ಸತ್ಯವೇ ಇತ್ತು
ಬಿಡಿ. ಈಗೀಗ ಅಣ್ಣ ಅವಳ
ಹಿಂದೆ ಅಲಿಯೋದು ಜಾಸ್ತಿ ಆಗ್ಬಿಟ್ಟಿತ್ತು. ಮನೆಯವರೂ ಎಲ್ಲಿವರೆಗೂ ಅಂತ ಸುಮ್ನಿರ್ತಾರೆ. ಒಂದಲ್ಲ ಒಂದು ದಿನ ಅವನಿಗೆ ಸರಿಯಾಗಿ ಉಗಿಸಿಕೊಳ್ಳೋ ಪ್ರೋಗ್ರಾಮ್ ಇತ್ತು. ಅದು ಇವತ್ತಿಗೇ ಶಿಫ್ಟ್ ಆದದ್ದು ವಿಪರ್ಯಾಸವೇ ಸರಿ. ನಾನು ಸುಮ್ನೆ ಅವರ ಮಾತು ಬದಲಿಸೋಕೆ ಅಲ್ಲಿ ಕಂಡ ಮನೆಗಳನ್ನೆಲ್ಲಾ
'ಆ ಮನೆ ಯಾರದ್ದು? ಇದು ಯಾರದ್ದು?' ಅಂತ ಕೇಳ್ಕೊಂಡು ಮನೆ
ಕಡೆ ನಡೆದೆವು. ಮನೆ ಕ್ರಾಸಿಗೆ ಬರುತ್ತಲೇ ಮೂವರು ಚಕ್ಕನೆ ಬ್ರೇಕ್
ಹಾಕಿದಂತೆ ನಿಂತುಬಿಟ್ಟೆವು. ಮನೆ ಮುಂದೆ ಅಪ್ಪನ ಬೈಕು!!!!! ನಮ್ಮ ಚಿಕ್ಕಮ್ಮ ಅಲ್ಲೇ ನಡುಗಿಹೋದರು. ಬೆಟ್ಟದ ಮೇಲಿರೋ ದೇವಸ್ಥಾನದ ಕಡೆ ತಿರುಗಿ "ಶಿವ ಶಿವಾ, ಕಾಪಾಡಪ್ಪ
ಭಗವಂತ!" ಎಂದು ಕಣ್ಣು ಮುಚ್ಚಿಕೊಂಡು ಕೈ ಮುಗಿದರು. ನನಗೂ ಒಳಗೇ ದಿಗಿಲಾಯ್ತು.
ಮನೆ ಒಳಗೆ
ಕಾಲಿಡುತ್ತಿದ್ದಂತಯೇ ಕುರ್ಚಿಯಲ್ಲಿ ಕುಳಿತಿದ್ದ ಅಪ್ಪ ನನ್ನನ್ನು ನೋಡಿ ದೆವ್ವವನ್ನೇ ನೋಡಿದಂತೆ ನೆಗೆದು ನಿಂತು "ಅಯ್ಯಯ್ಯೋ...ಏನಾಯ್ತೋ ನಿಂಗೆ?" ಎಂದು ಓಡಿ ಬಂದರು. ಅವರು ಓಡಿ ಬಂದ ರೀತಿಗೆ ನನ್ನ ಜಂಘಾಬಲವೇ ಉಡುಗಿ ಹೋಗಿ ಅಲ್ಲೇ ಪುಸುಕ್ಕನೆ ಕುಳಿತುಬಿಟ್ಟೆ. ಅವರಿಗೆ ನಾನು ಕುಳಿತದ್ದು ನೋಡಿ ನಾನು ಮೂರ್ಛೆಯೇ ಹೋಗಿಬಿಟ್ಟೆ ಎಂದುಕೊಂಡು ನನ್ನನ್ನು ಸಣ್ಣ ಮಗುವಿನ ತರ ಮೇಲೆತ್ತಿಕೊಂಡು ಎಲ್ಲಿ ಮಲಗಿಸುವುದು ಎಂದು ಅತ್ತಿತ್ತ ನೋಡಿದರು. ಅಲ್ಲಿಯವರೆಗೂ ಚಿಕ್ಕಪ್ಪ
ಮತ್ತು ಚಿಕ್ಕಮ್ಮ ಗರಬಡಿವರಂತೆ ಏನಾಗುತ್ತಿದೆ ಎಂದು ನಿಂತಲ್ಲೇ ನಿಂತು ನೋಡುತ್ತಿದ್ದರು. ಅಪ್ಪನಿಗೆ ಅವರು ಹಾಗೆ ನಿಂತದ್ದು ಇನ್ನೂ ದಿಗಿಲು ಹುಟ್ಟಿಸಿತು. ಅವರು ನನ್ನನ್ನು ಸಣ್ಣ ಮಗುವಿನ ಹಾಗೆ ಎತ್ತಿಕೊಂಡೇ ಚಿಕ್ಕಪ್ಪನಿಗೆ "ಏನಾಯ್ತೋ ಇವನಿಗೆ?" ಎಂದು ಕೇಳಿದರು. ಅಷ್ಟರಲ್ಲಿ ನನಗೆ ಸ್ವಲ್ಪ ಬುದ್ದಿ ಬಂದು "ಅಯ್ಯೋ ನನಗೆ ಏನು ಆಗಿಲ್ಲ ಬಿಡಪ್ಪ" ಎಂದು ಅವರ ಕೈಗಳಿಂದ ಇಳಿದು ನಿಂತೆ. ಅವರು ನಾನು ನಿಂತದ್ದನ್ನು ನೋಡಿ ಮತ್ತೆ ಚಿಕ್ಕಪ್ಪನ ಮುಖ ನೋಡಿದರು. ಅವರು ಏನೂ
ಹೇಳುವ ಸ್ಥಿತಿಯಲ್ಲಿರಲಿಲ್ಲ. ಸ್ವಲ್ಪ ಸಮಯ ನಾವೆಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಅಲ್ಲಿಯೇ ನಿಂತೆವು.
ಅವತ್ತು ಅಪ್ಪನನ್ನು ಸಮಾಧಾನ ಮಾಡುವಷ್ಟರಲ್ಲಿ ನಮ್ಮೆಲ್ಲರಿಗೂ ಅರ್ಧ
ಲೀಟರ್ ರಕ್ತವೇ ಖರ್ಚಾಯ್ತು. ನಾನು, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಅವರನ್ನು ಅತ್ತೂ ಕರೆದೂ ಹೇಗೋ ಸುಮ್ಮನಾಗಿಸಿದೆವು. ಅವರು ಮನಸ್ಸಿಲ್ಲದ ಮನಸ್ಸಿನಿಂದಲೇ ವಾಪಸ್ಸು ಹೊರಡಲು ರೆಡಿಯಾದರು. ಅವರು ಇಲ್ಲಿಂದ ವಾಪಸ್ಸು ಹೋದಮೇಲೆ ಅಮ್ಮನನ್ನು ಸಮಾಧಾನ ಮಾಡುವ ಕೆಲಸ ಮಾಡಬೇಕಿತ್ತು. ನನ್ನನ್ನು ವಾಪಸ್ಸು ಕರೆದುಕೊಂಡು ಬರದಿದ್ದಕ್ಕೆ ಅಮ್ಮ ಅದೇನೇನು ಮಾಡುವಳೋ ಗೊತ್ತಿಲ್ಲ. ಅಪ್ಪನಿಗೆ ಅದರ ಚಿಂತೆ ಇದ್ದರೂ ಇತ್ತು. ಹೆಚ್ಚುಕಮ್ಮಿ ನಾಳೆಯೇ ಅಮ್ಮ ಇಲ್ಲಿಗೆ ಬಂದರೂ ಆಶ್ಚರ್ಯಪಡಬೇಕಿಲ್ಲ. ಕೊನೆಗೆ ಚಿಕ್ಕಪ್ಪನಿಗೆ ನನ್ನನ್ನು ಹುಷಾರಾಗಿ ನೋಡಿಕೊಳ್ಳಲು ಹೇಳಿ ಭಾರದ ಮನಸ್ಸಿನಿಂದ ಹೊರಟರು. ನಾನು ಮತ್ತು ಚಿಕ್ಕಪ್ಪ ಸಮಾಧಾನದಿಂದ ಮನೆಯೊಳಗೆ ಬಂದು ಕುರ್ಚಿಯಲ್ಲಿ ಕುಳಿತೆವು. ಸ್ವಲ್ಪ ಹೊತ್ತು ಇಬ್ಬರೂ
ಮಾತನಾಡಲೇ ಇಲ್ಲ. ಅವರಿಗೂ ನನ್ನ ಬೇಜವಾಬ್ದಾರಿ ನಡೆವಳಿಕೆ ಬಗ್ಗೆ ಬೇಸರ ಬಂದಿರಬೇಕು. ಆದರೆ ನಾನು ಇಂತಹ ಅವಾಂತರ ಸೃಷ್ಟಿಸಿದ್ದು ಇದೇ ಮೊದಲು. ಹಾಗಾಗಿ ಅವರು ಹೆಚ್ಚೇನೂ ಹೇಳದೆ ಸುಮ್ಮನಾದರು. ಚಿಕ್ಕಮ್ಮ ನಾವು ಬೇಜಾರಿಂದ ಕುಳಿತಿದ್ದನ್ನು ನೋಡಿ ಬಿಸಿ ಬಿಸಿ ಪಕೋಡ ಮತ್ತು ಬೆಲ್ಲದ ಟೀ ಮಾಡಿದರು. ಮೂವರೂ ಕುಳಿತು ಪಕೋಡದ ಜೊತೆ ಟೀ ಹೀರಿದೆವು.
ಸಂಜೆಯಾಗುತ್ತಿದ್ದ ಹಾಗೆ ನನಗೆ ಗಾಯವಾದಲ್ಲಿ ನೋವು ಸ್ವಲ್ಪ ಜಾಸ್ತಿಯಾಗುವಂತೆ ಅನ್ನಿಸಿತು. ಜೊತೆಗೆ ಜ್ವರದ ಲಕ್ಷಣಗಳೂ ಕಾಣಿಸಿದವು. ಚಿಕ್ಕಪ್ಪ ಓಡಿ ಹೋಗಿ ಅಂಗಡಿಯಿಂದ ಬನ್ನು ತಂದರು. ಅವತ್ತಿನ ಊಟ ಹಾಲು ಮತ್ತು ಬನ್ನು ಮಾತ್ರ. ಅವತ್ತು ತುಂಬಾ ಬೇಗವೇ ಮಲಗಿಬಿಟ್ಟೆ. ರಾತ್ರಿ ಒಮ್ಮೆ ನಿದ್ರೆಯಲ್ಲಿ ಉರುಳಾಡಿ ಕೈ ನೋವು ಮಾಡಿಕೊಂಡು ಎಚ್ಚರವಾಯ್ತು. ಕರೆಂಟು ಹೋಗಿತ್ತು. ಚಿಕ್ಕಮ್ಮ ಪಕ್ಕದಲ್ಲೇ ಕುಳಿತು ನನಗೆ ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿದ್ದರು.
"ಯಾಕೆ ಚಿಕ್ಕಮ್ಮ? ನಿದ್ರೆ ಬರ್ತಾ ಇಲ್ವಾ?" ಎಂದೆ.
"ಇಷ್ಟು ಬೇಗ ನಾನು ಮಲಗಲ್ಲಪ್ಪಾ. ನೀನು ನಿದ್ರೆ ಮಾಡು." ಎಂದರು.
ನಾನು ಕೈಯ್ಯಲ್ಲಿ ಕಟ್ಟಿದ್ದ ವಾಚ್ ನೋಡಿಕೊಂಡೆ. ರೇಡಿಯಂ ಹಾಕಿದ್ದ ಮುಳ್ಳುಗಳು 1 ಗಂಟೆ
ಎಂದು ತೋರಿಸಿದವು. ಚಿಕ್ಕಮ್ಮನಿಗೆ ಈಗ ನಾನೆಷ್ಟೇ ಹೇಳಿದರೂ ಅವಳು ಮಲಗುವುದಿಲ್ಲ ಎಂದು ಗೊತ್ತಿತ್ತು. ಅವಳನ್ನು ಮಲಗಿಸಬೇಕೆಂದರೆ ನಾನು ಮೊದಲು ಮಲಗಬೇಕು ಅಷ್ಟೇ. ನಾನು ಹಾಗೇ ಕಣ್ಣು ಮುಚ್ಚಿದೆ. ನಿದ್ರಾದೇವಿ ಮತ್ತೆ ನನ್ನನ್ನು ಆವರಿಸಿಕೊಂಡಳು.
* * * * *
ನಾನು ಬಿದ್ದದ್ದು ನಮ್ಮ ಓಣಿಯವರಿಗೆಲ್ಲ ಗೊತ್ತಾಗಿ ಜನ ತಂಡೋಪತಂಡವಾಗಿ ಬಂದು ನನ್ನನ್ನು ನೋಡಿಕೊಂಡು ಹೋದರು. ಬಂದವರೆಲ್ಲ ಒಂದೇ ಸಮನೆ "ನಾನು ಹಾಗೆ ಒಬ್ಬನೇ ಹೋದದ್ದು ತಪ್ಪು. ಬೆಟ್ಟದಲ್ಲಿ ಕರಡಿ ಮತ್ತು ಕಿರುಬಗಳಿವೆ. ಹಾಗೆಲ್ಲ ಹೋಗುವುದು ಜೀವಕ್ಕೆ ಅಪಾಯ" ಎಂದು ಪುನರಾವರ್ತಿಸಿದರು. ಅದು ಸಾಲದೆಂಬಂತೆ, ಎಲ್ಲರೂ "ನೀನು ಯಾಕೆ ಒಬ್ಬನೇ ಹೋದದ್ದು? ನಿಮ್ಮಣ್ಣ ಎಲ್ಲಿ ಹೋದ? ಅವನ್ಯಾಕೆ ನಿನ್ನ ಜೊತೆ ಇರಲಿಲ್ಲ?" ಎಂದು ಚಿಕ್ಕಪ್ಪನ
ಮುಂದೆಯೇ ಕೇಳಿ ಅವರಿಗೆ ಮೊದಲೇ ಅಣ್ಣನ್ನ ಮೇಲಿದ್ದ ಸಿಟ್ಟನ್ನು
ದ್ವಿಗುಣ ಮಾಡಿದರು. ನನಗೂ ಕೂಡ ಅಣ್ಣ ನನ್ನನ್ನು
ಇಂತಹ ಪರಿಸ್ಥಿತಿಯಲ್ಲೂ ಒಬ್ಬನೇ ಇರುವುದಕ್ಕೆ ಬಿಟ್ಟುಹೋದದ್ದಕ್ಕೆ ಬೇಸರಪಟ್ಟುಕೊಂಡೆ.
ಬಂದವರೆಲ್ಲ ಹೋದಮೇಲೆ, "ಚಿಕ್ಕಮ್ಮ, ಅಣ್ಣ ನಿನ್ನೆ ಬರ್ಲೆ ಇಲ್ವಾ?" ಎಂದೇ.
"ಅಯ್ಯೋ, ಬಂದಿದ್ನಲ್ಲಪ್ಪ. ರಾತ್ರಿ ನಿನ್ನ ಪಕ್ಕಾನೇ ಎಷ್ಟು ಹೊತ್ತು ಕೂತ್ಕೊಂಡಿದ್ದ. ನಿನಗೆ ತುಂಬಾ ನಿದ್ರೆ ಇತ್ತು ಅನ್ಸುತ್ತೆ. ನಿಂಗೆ ಗೊತ್ತಾಗಿಲ್ಲ." ಅಂದರು.
ಅವನು ಮನೆಗೆ ಬಂದಿದ್ದ ಮೇಲೆ ಚಿಕ್ಕಪ್ಪ ಅವನಿಗೆ ಸರಿಯಾಗಿ ಬಾರಿಸಿರಬೇಕು ಎಂದುಕೊಂಡು ಚಿಕ್ಕಪ್ಪನ ಕಡೆಗೆ ತಿರುಗಿ ನೋಡಿದೆ. ಅವರಿನ್ನೂ ಸಿಟ್ಟಿನಲ್ಲೇ ಇದ್ದಂತಿತ್ತು. ಅವನಿಗೆ ಬಾರಿಸಿದ್ದೇ ಆದರೆ ಅವರು ಹೀಗೆಲ್ಲ ಸುಮ್ಮನಿರುವರಲ್ಲ. ಅದನ್ನು ನನ್ನ ಹತ್ತಿರ ಹೇಳಿಯೇ ತೀರುತ್ತಿದ್ದರು. ಅವರ ಮೌನ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ.
"ಇವತ್ತು ಬೆಳಗ್ಗೇನೂ ಅವ್ನು ಮತ್ತೆ ಹೋಗಿದಾನ?" ಎಂದು ಬೇಸರದಿಂದಲೇ ಚಿಕ್ಕಮ್ಮನನ್ನು ಕೇಳಿದೆ.
"ಏನೋ ಗೊತ್ತಿಲ್ಲಪ್ಪ, ಚಿತ್ರದುರ್ಗಕ್ಕೆ ಹೋಗ್ತೀನಿ ಅಂದಹಾಗಿತ್ತು" ಎಂದರು.
ದುರ್ಗಕ್ಕಾ??! ಅವನ್ಯಾಕೆ ಚಿತ್ರದುರ್ಗಕ್ಕೆ ಹೋಗಿರ್ತಾನೆ ಅಂತ ನನಗೂ ಐಡಿಯಾ ಬರಲಿಲ್ಲ. ಏನಾದರು ಕೆಲಸದ ಮೇಲೆ ಹೋಗಿರ್ಬೇಕು ಅನ್ನೋಕೆ ಅವನೀಗ ಮನೆಯ ಯಾವುದೇ ಕೆಲಸವನ್ನೂ
ಮಾಡುತ್ತಿರಲಿಲ್ಲ. ಅಂತಹ ಕೆಲಸವೇನಾದರೂ ಇದ್ದರೆ
ಅದನ್ನು ಚಿಕ್ಕಪ್ಪನೇ ಮಾಡಬೇಕಿತ್ತು. ನನ್ನನ್ನು ಇಂತಹ ಪರಿಸ್ಥಿತಿಯಲ್ಲೂ ಒಮ್ಮೆಯೂ ಮಾತನಾಡಿಸದೆ ಹೋದದ್ದಕ್ಕೆ ಅಣ್ಣನ ಮೆಲ್ಯಾಕೋ ಬೇಜಾರಾಯಿತು. ಹೋಗಲಿ ಬಿಡು ಎಂದು ಚಿಕ್ಕಮ್ಮನಿಗೆ “ಚಿಕ್ಕಮ್ಮ ಸ್ವಲ್ಪ ನಾನೂ ಹೊರಗೆ ಹೋಗಿ ಬರ್ತೀನಿ” ಎಂದೆ. ಅವರು ಅಡಿಗೆ
ಮನೆಯಿಂದ ಓಡಿ ಬಂದು “ಅಯ್ಯಯ್ಯೋ, ಇಂತ ಪರಿಸ್ಥಿತಿಯಲ್ಲಿ ಎಲ್ಲಿಗೆ ಹೋಗ್ತಿಯಪ್ಪ? ನೀನು ಎಲ್ಲಿಗೂ ಹೋಗೋದು ಬೇಡ. ಸುಮ್ನೆ ಮನೇಲೇ
ಮಲಕ್ಕೊಂಡಿರು. ನಿನಗೋಸ್ಕರ ಹೋಳಿಗೆ ಮಾಡ್ತಾ ಇದ್ದೀನಿ” ಎಂದು ಕಟ್ಟಪ್ಪಣೆ ಮಾಡಿದರು. ಅವರ ಮಾತನ್ನು ಈ ಸಮಯದಲ್ಲಿ ತಳ್ಳಿ ಹಾಕುವಂತಿರಲಿಲ್ಲ. ಅದರಲ್ಲೂ ಅವರು ಹೋಳಿಗೆ ಮಾಡುತ್ತಿದ್ದಾರೆ ಎಂದು ಕೇಳಿದ ತಕ್ಷಣವೇ ಬಾಯಲ್ಲಿ ನೀರೂರಿತು. "ಆಗಲಿ ಚಿಕ್ಕಮ್ಮ" ಎಂದು ಮತ್ತೆ ಮಂಚದ ಮೇಲೆ ಹಾಗೇ ಉರುಳಿಕೊಂಡೆ.
ಸ್ವಲ್ಪ ಹೊತ್ತು ಚಿಕ್ಕಪ್ಪನ ಹತ್ತಿರ ಅದೂ ಇದೂ ಮಾತನಾಡಿ ಹೋಳಿಗೆ ಆಯ್ತಾ ಎಂದು ಪದೇ ಪದೇ ಇಬ್ಬರೂ ಅಡಿಗೆ ಮನೆಯ ಕಡೆ ನೋಡುತ್ತಿದ್ದೆವು. ಇಬ್ಬರಿಗೂ ಹೋಳಿಗೆ ಎಂದರೆ ಬಲು ಇಷ್ಟ. ಹಬ್ಬ-ಹರಿದಿನಗಳಲ್ಲಷ್ಟೇ ಮಾಡುತ್ತಿದ್ದ ಹೋಳಿಗೆ, ನಾನು ಬಿದ್ದು ಪೆಟ್ಟು ಮಾಡಿಕೊಂಡಿದ್ದಕ್ಕೆ ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿರದ ವಿಷಯವೇನಲ್ಲ. ಅಷ್ಟರಲ್ಲಿ ಹೊರಗಡೆ ಯಾರೋ ಬಂದಂತೆ ಅನ್ನಿಸಿ ಚಿಕ್ಕಪ್ಪ ಬಗ್ಗಿ ನೋಡಿದರು. ತಕ್ಷಣವೇ ಎದ್ದು ನಿಂತು ಇನ್ನೊಮ್ಮೆ ಬಗ್ಗಿ ನೋಡಿದರು. ಅವರು ಹಾಗೆ
ಮಾಡಿದ್ದೂ ನೋಡಿ ನಾನು ಯಾವುದಾದರೂ
ನಾಯಿಯೋ ಬೆಕ್ಕೋ ಒಳಗೆ ಬಂದಿರಬೇಕು ಎಂದುಕೊಂಡೆ. ಆದರೆ ಬಂದಿದ್ದು ಅಣ್ಣ. ಜೊತೆಗೆ ಕಾವ್ಯ ಕೂಡ ಬಂದಿದ್ದಳು!!! ಅವಳನ್ನು ನೋಡಿಯೇ ಚಿಕ್ಕಪ್ಪ ಹಾಗೆ ಎದ್ದು ನಿಂತದ್ದು ಎಂದು ನಿಮಗೆ ಇಷ್ಟರಲ್ಲಿ ಗೊತ್ತಾಗಿರಬೇಕಲ್ಲವೇ.
ಅವಳನ್ನು ನೋಡಿ ನಾನೂ ಕೂಡ ಚಕಿತನಾದೆ. ಅಣ್ಣನ ಜೊತೆ ತಿರುಗುತ್ತಲೇ ಎಂದು ಎಲ್ಲರಿಗು ಗೊತ್ತಿದ್ದ ವಿಷಯವೇ ಬಿಡಿ. ಆದರೆ ಮನೆಗೆ ಬರುವಷ್ಟು ಧೈರ್ಯ ಮಾಡುತ್ತಾಳೆ ಎಂದು ಖಂಡಿತ ಅಂದುಕೊಂಡಿರಲಿಲ್ಲ. ಅದರಲ್ಲೂ ಅಣ್ಣ ಅವಳನ್ನು ಮನೆಗೆ ಕರೆದುಕೊಂಡು ಬರುತ್ತಾನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಬಿಡಿ. ಚಿಕ್ಕಪ್ಪನಿಗೆ ಅವರಿಬ್ಬರನ್ನು ನೋಡಿ ಏನು ಹೇಳಬೇಕು ಎಂದು ತಿಳಿಯದೆ ಹಾಗೇ
ಸುಮ್ಮನೆ ನಿಂತುಬಿಟ್ಟರು. ನಾನೂ ಕೂಡ ಚಿಕ್ಕಪ್ಪನ ಮೌನ ನೋಡಿ ಸ್ವಲ್ಪ ಹೊತ್ತು ಹಾಗೇ
ನಿಂತುಬಿಟ್ಟೆ.
ಕೊನೆಗೆ ಮೌನ ಅಸಹನೀಯವಾದಾಗ, ನಾನೆ ಕಾವ್ಯಳಿಗೆ “ಹಾಯ್, ಬನ್ನಿ ಕುಳಿತುಕೊಳ್ಳಿ” ಎಂದು ಕುರ್ಚಿಯ ಕಡೆ ಕೈ ಮಾಡಿದೆ. ಹಾಗೇ ಹೇಳುವಾಗ ಚಿಕ್ಕಪ್ಪ ನನಗೆಲ್ಲಿ ಬೈಯುತ್ತಾರೋ ಎಂಬ ಭಯವಂತೂ ಇದ್ದೆ ಇತ್ತು.
ಅವಳು ನನಗೊಂದು ನಗೆ ಬೀರಿ ಚಿಕ್ಕಪ್ಪನ ಕಡೆ ತಿರುಗಿ ಎರೆಡು ಹೆಜ್ಜೆ ಇಟ್ಟು
ಧಢಕ್ಕನೆ ಅವರ ಕಾಲಿಗೆ ಬಿದ್ದುಬಿಟ್ಟಳು. ಅವಳು ಕಾಲಿಗೆ ಬಿದ್ದ ರೀತಿಗೆ ಚಿಕ್ಕಪ್ಪ ಚಂಗನೆ ನೆಗೆಯೋದೊಂದೇ ಬಾಕಿ. ನಾನೂ ಕೂಡ ಒಂದು ಕ್ಷಣ ಬಾಯಿ ಬಿಟ್ಟುಕೊಂಡು ಏನಾಯಿತು ಎನ್ನುವಂತೆ ಅವರಿಬ್ಬರನ್ನು ನೋಡಿದೆ. ಇನ್ನೂ ನಾನೂ ಮತ್ತು ಚಿಕ್ಕಪ್ಪ ಆದದ್ದನ್ನು
ಅರಗಿಸಿಕೊಳ್ಳುವಷ್ಟರಲ್ಲಿ ಅವಳು ನಿಧಾನವಾಗಿ
ನಡೆದು ಹೋಗಿ ಕುರ್ಚಿಯ ಮೇಲೆ ಕುಳಿತುಕೊಂಡಳು. ನಾನು
ಮಂಚದ ಮೇಲೆ ಹಾಗೇ ಕುಸಿದೆ.
"ಹೇಗಿದ್ದೀರ? ತುಂಬಾ ಗಾಯ ಮಾಡಿಕೊಂಡಿರಂತೆ?" ಎಂದು ಕೇಳಿದಳು.
ಅವಳು ಮನೆಗೆ ಬಂದದ್ದನ್ನು ಕಂಡು
ನನಗೆ ನಾನು ಬಿದ್ದದ್ದೇ ಮರೆತುಹೋಗಿತ್ತು. ಹಾಗೆಯೇ ಪ್ರಯಾಸದ ನಗು ಬೀರುತ್ತಾ, “ಈಗ ಪರವಾಗಿಲ್ಲ. ಮಾತ್ರೆ ತಗೊಳ್ತಾ ಇದೀನಿ” ಎಂದೆ. ಚಿಕ್ಕಪ್ಪ ಮತ್ತು ಅಣ್ಣ ಇನ್ನೂ ನಿಂತೇ ಇದ್ದರು. ಪರಿಸ್ಥಿತಿ ತುಂಬಾ ಗೊಂದಲಮಯವಾಗಿತ್ತು. ಕೂಡಲೇ ಅವರ ಕಡೆ ತಿರುಗಿ "ಕೂತ್ಕೊಳ್ಳಿ ಚಿಕ್ಕಪ್ಪ" ಎಂದೆ. ಅವರು ಅಲ್ಲೇ ಇದ್ದ ಕುರ್ಚಿಯನ್ನು ಕಾವ್ಯಾಳಿಂದ ದೂರಕ್ಕೆ ಎಳೆದುಕೊಂಡು ಕುಳಿತರು. “ಇವರು ಕಾವ್ಯ ಅಂತ. ಇಲ್ಲಿ ವಿಂಡ್ ಮಿಲ್ ಹಾಕೋಕೆ ಬಂದಿರೋ ಆಫೀಸರೊಬ್ಬಳ
ಮಗಳು" ಎಂದು ಸಂಕೋಚದಿಂದಲೇ ಕಾವ್ಯಳನ್ನು ಚಿಕ್ಕಪ್ಪನಿಗೆ ಪರಿಚಯಿಸಿದೆ. ಅವರು ನನ್ನ ಮೇಲಿನ ಮಮತೆಯಿಂದಲೋ ಎಂಬಂತೆ ಅವಳ ಕಡೆ ತಿರುಗಿ “ನಮಸ್ತೆ” ಎಂದರು. ಅಲ್ಲಿಗೆ ಪರಿಸ್ಥಿತಿ ಸುಧಾರಿಸಿತು ಎಂದು ನನಗೂ, ಅಣ್ಣನಿಗೂ ಅರಿವಾಗಿ ಇಬ್ಬರೂ ನಿಟ್ಟುಸಿರು ಬಿಟ್ಟೆವು. ಪಾಪ ಚಿಕ್ಕಪ್ಪ. ಅವರಿಗೆ ಅಂತಹ ಸಂದಿಗ್ನ ಪರಿಸ್ಥಿತಿ ಎಂದೂ ಎದುರಾಗಿರಲಿಕ್ಕಿಲ್ಲ. ಅವರು ಸುಮ್ಮನೆ ಬಾಗಿಲು ನೋಡುತ್ತಲೇ ಇದ್ದರು. ಅಷ್ಟರಲ್ಲಿ ಚಿಕ್ಕಮ್ಮ ಅಡಿಗೆ ಮನೆಯೊಳಗಿಂದ ಎದ್ದು ಬಂದರು. ಕಾವ್ಯಳನ್ನು ನೋಡಿ ಅವರು ಕೆಂಡಗಣ್ಣು ಮಾಡಿಕೊಂಡು ಅಣ್ಣನ
ಕಡೆ ತಿರುಗಿದರು. ನಾನೂ 'ಅಯ್ಯಯ್ಯೋ, ಚಿಕ್ಕಮ್ಮ ಈಗೇನಾದರೂ ಕೋಪ ಮಾಡಿಕೊಂಡರೆ ನನ್ನ ಹೋಳಿಗೆ ಹಾಳಾಗಿಹೋಗುತ್ತದಲ್ಲ' ಎಂದು
ತಕ್ಷಣವೇ ಕಾವ್ಯಳಿಗೆ ಚಿಕ್ಕಮ್ಮನನ್ನು ಪರಿಚಯಿಸಿದೆ. ಅವಳು ಮತ್ತೊಮ್ಮೆ ಅವರು ಏನಾದರು ಹೇಳುವ ಮುಂಚೆಯೇ ಅವರ ಕಾಲಿಗೂ ಬಿದ್ದುಬಿಟ್ಟಳು. ಅವರು ಕೂಡ ಚಿಕ್ಕಪ್ಪನಷ್ಟೇ ಆವಾಕ್ಕಾಗಿ
ನಿಂತರು. ಕಾವ್ಯ ಅವರಿಗೊಂದು ನಗು ಬೀರಿ ಮತ್ತೆ ಕುರ್ಚಿಯ ಕಡೆಗೆ ನಡೆದಳು. ಚಿಕ್ಕಮ್ಮ ಏನೂ ಹೇಳದೆ ತಿರುಗಿ ಅಡಿಗೆ
ಮನೆಗೆ ಹೋದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ