ನನ್ನ ಬ್ಲಾಗ್ ಪಟ್ಟಿ

ಸೋಮವಾರ, ನವೆಂಬರ್ 19, 2018

ಮನೆಯಲ್ಲಿನ ಕ್ಷಣಗಳು

ಇದು ಕಥೆಯಲ್ಲ. ನನ್ನ ಮನೆಯಲ್ಲಿ ನಡೆದಂತಹ ಹಲವು ಘಟನೆಗಳು ನನ್ನ ಮನಸ್ಸಿನಲ್ಲಿ ಹಾಗೆಯೇ ಹೂತುಹೋಗಿದ್ದು, ಅವುಗಳನ್ನು ಇಲ್ಲಿ ಮೆಲಕು ಹಾಕಿದ್ದೇನೆ ಅಷ್ಟೇ. ಕೆಳಕಂಡ ಘಟನೆಗಳು ನಡೆದಾಗ ನಾನಿನ್ನೂ ಪಿ ಯು ಸಿ ಓದುತ್ತಿದ್ದೆ. ಮನೆ ಹತ್ತಿರದಲ್ಲೇ ಇದ್ದ ಸರ್ಕಾರೀ ಪದವಿ ವಿಜ್ಞಾನ ಕಾಲೇಜಿನಲ್ಲಿ ನನ್ನ ವ್ಯಾಸಂಗ. ಪದವಿ ಕಾಲೇಜಿನಲ್ಲಿ ಪಿ ಯು ಸಿ ಹೇಗೆ ಎಂದು ಹುಬ್ಬೇರಿಸಬೇಡಿ. ಆಗ ಚಿತ್ರದುರ್ಗದಲ್ಲಿ ಪಿ ಯು ಸಿ ಕಾಲೇಜು ಅಂತ ಇದ್ದದ್ದೇ ಒಂದು. ಇಡೀ ಜಿಲ್ಲೆಯ ಮಕ್ಕಳನ್ನೆಲ್ಲಾ ಒಂದೇ ಕಾಲೇಜಿನಲ್ಲಿ ತುಂಬಲು ಸಾಧ್ಯವಾಗದಾಗ ಪದವಿ ಕಾಲೇಜಿನಲ್ಲಿ ಓದಲು ನಮಗೆ ಅನುಕೂಲ ಮಾಡಲಾಗಿತ್ತು. ಹಾಗಾಗಿ ನಮಗೆ ಪಿ ಯು ಸಿ ಅನ್ನು ಡಿಗ್ರೀ ಕಾಲೇಜಿನಲ್ಲಿ ಓದುವ ಅವಕಾಶ ಸಿಕ್ಕಿತ್ತು. ಅದೊಂದು ಹಳೇ ಕಾಲೇಜು. ನಾನು ಅಲ್ಲಿ ಓದುತ್ತಿದ್ದಾಗ ಮಳೆ-ಬಿಸಿಲಿಗೆ ಅದರ ಗೋಡೆಗಳೆಲ್ಲಾ ಕಲರ್ ಬಿಟ್ಟು ಹಳಸಿಹೋಗಿದ್ದವು. ನೀವೇನಾದರೂ ಡಾ. ವಿಷ್ಣುವರ್ಧನ್ ಅಭಿನಯದ ನಾಗರಹಾವು ಫಿಲಂ ನೋಡಿದ್ದರೆ ಅದರಲ್ಲಿ ನಾನು ಓದಿದ್ದ ಕಾಲೇಜನ್ನೂ ನೋಡಿರುತ್ತೀರಿ. ಅದರಲ್ಲಿ ತೆಗೆದಿರುವ ಕಾಲೇಜಿನ ದೃಶ್ಯಗಳನ್ನೆಲ್ಲಾ ಚಿತ್ರದುರ್ಗದ ಸರ್ಕಾರೀ ವಿಜ್ಞಾನ ಪದವಿ ಕಾಲೇಜಿನಲ್ಲಿಯೇ ತೆಗೆದಿದ್ದು. ಅಂತಹ ಅಮೋಘ ಚರಿತ್ರೆಯುಳ್ಳ ಕಾಲೇಜಿನಲ್ಲಿ ಓದುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತಿತ್ತು.      

  ಸಮಯದಲ್ಲಿ ನನ್ನ ತಮ್ಮ ರಘು ಇನ್ನೂ ಏಳನೇ ಕ್ಲಾಸು ಓದುತ್ತಿದ್ದರೆ ನನ್ನ ಮುದ್ದು ತಂಗಿ ನಳಿನ ಮೂರನೇ ಕ್ಲಾಸು ಓದುತ್ತಿದ್ದಳು. ಅವರಿಬ್ಬರೂ ಒಂದೇ ಸ್ಕೂಲಿನಲ್ಲಿ ಓದುತ್ತಿದ್ದುದರಿಂದ ಇಬ್ಬರ ನಡುವೆ ಆತ್ಮೀಯತೆ ಹೆಚ್ಚು. ನನ್ನ ತಂದೆ ತಾಯಿಗೆ ನನ್ನ ತಂಗಿಯನ್ನು ಕಂಡರೆ ಪ್ರಾಣ. ಅವಳು ಮನೆಯಲ್ಲಿ ಏನೇ ತರಲೆ ತಂಟೆ ಮಾಡಿದರೂ ಯಾರೂ ಏನೂ ಅನ್ನುತ್ತಲೇ ಇರಲಿಲ್ಲ. ಅವಳು ಮನೆಯಲ್ಲಿ ಸರಿಯಾಗಿ ಊಟ ಮಾಡಿ ಚೆನ್ನಾಗಿ ಓಡಾಡಿಕೊಂಡಿದ್ದಾರೆ ಸಾಕು ಎನ್ನುತ್ತಿದ್ದರು. ಅವಳೇನಾದರೂ ಸ್ಕೂಲಿಗೆ ಹೋಗುವ ಮುನ್ನ ಸ್ವಲ್ಪ ಕೆಮ್ಮಿದರೂ ಸಾಕು, ಅಪ್ಪ ಅವಳನ್ನು ಎತ್ತಿಕೊಂಡು ಆಸ್ಪತ್ರೆಗೆ ಓಡೋರು. ಅಂತಹ ಮುದ್ದಿನ ಮಗಳು. ಅವಳಿಗೆ ಮನೆಯಲ್ಲಿ ಸ್ವಲ್ಪ ಹೆದರಿಕೆ ಎಂದು ಇದ್ದರೆ ಅದು ನನ್ನನ್ನು ಕಂಡರಷ್ಟೇ. ಅವಳನ್ನು ನಾನೂ ಕೂಡ  ಎಲ್ಲರಂತೆಯೇ ಮುದ್ದುಮಾಡಿದರೂ, ಅವಳೇನಾದರೂ ತಂಟೆ ಮಾಡಿದರೆ ತಕ್ಷಣವೇ ಗದರಿಸಿ ಬಿಡುತ್ತಿದ್ದೆ. ಹೀಗಾಗಿ ನನ್ನನ್ನು ಕಂಡರೆ ಅವಳು ಸ್ವಲ್ಪ ತಣ್ಣಗೆ ಇರುತ್ತಿದ್ದಳು. ನಾನಿಲ್ಲದಿದ್ದರೆ ಇಡೀ ಮನೆಯಲ್ಲೆಲ್ಲಾ ಜಿಂಕೆಯಂತೆ ನೆಗೆದಾಡೋಳು. ಎಷ್ಟೋ ಬಾರಿ ಹಾಗೆ ಓಡುವಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದು ಉಂಟು.    

 ನನ್ನ ತಮ್ಮ ಕಾಲದಲ್ಲೇ ಯಕುಜಾನನಂತೆ ತಿಂದುಂಡು ಹಳೇ ಕಾಲದ ಪೈಲ್ವಾನರಂತೆ ಇದ್ದ. ಏಳನೇ ಕ್ಲಾಸಿನಲ್ಲಿದ್ದಾಗಲೇ ಅವನು ಅನಾಮತ್ತು ಎಂಬತೈದು ಕೆಜಿ! ನಾನಿನ್ನೂ ಅವಾಗ ಅರವತ್ತೂ ಮುಟ್ಟಿರಲಿಲ್ಲ. ಅವನು ಸುಮ್ಮನೆ ಎಡಗೈಯನ್ನು ಹೀಗೆ ಬೀಸಿದರೆ ಸಾಕು, ನಾನು ಸತ್ತೇಹೋಗುತ್ತಿದ್ದೆ. ಮೊದಲೆಲ್ಲಾ ಅವನನ್ನು ಆಟೋದಲ್ಲಿ ಬೇರೆ ಮಕ್ಕಳ ಜೊತೆ ಸ್ಕೂಲಿಗೆ ಕಳಿಸುತ್ತಿದ್ದರು. ದಿನೇದಿನೇ ಇವನ ಸೈಜು ಹೆಚ್ಚಾದಂತೆ, ಇವನ ಜೊತೆ ಆಟೋದಲ್ಲಿ ಬರುತ್ತಿದ್ದ ಮಕ್ಕಳಿಗೆ ಜಾಗ ಕಡಿಮೆಯಾಗುತ್ತಾ ಹೋಯಿತು. ಅವನನ್ನೇನಾದರೂ ಆಟೋದ ಮೂಲೆಯಲ್ಲಿ ಕೂಡಿಸಿಬಿಟ್ಟರೆ ಆಟೋ ಒಂದು ಕಡೆ ವಾಲಿಬಿಡೋದು. ಅಂತಹ ಘಟ. ಕೊನೆಗೊಮ್ಮೆ ಅಪ್ಪನಿಗೆ ಇವನನ್ನು ಹೀಗೆ ಬಿಟ್ಟರೆ ಒಂದು ದಿನ ಊದಿಕೊಂಡು ಒಡೆದೇ ಹೋಗುತ್ತಾನೆ ಎಂದು ಅವನಿಗೊಂದು ಸೈಕಲ್ ಕೊಡಿಸಿದರು. ಅವನಿನ್ನೂ ಚಿಕ್ಕವನಾದ್ದರಿಂದ ಮತ್ತು ಅವನಿಗೆ ಸೈಕಲ್ ಹೊಡೆಯಲು ಬರುತ್ತಿರಲಿಲ್ಲವಾದ್ದರಿಂದ, ಸೈಕಲ್ಲನ್ನು ಅಂಗಡಿಯಿಂದ ನಾನೇ ಮನೆವರೆಗೆ ಹೊಡೆದುಕೊಂಡು ಬಂದಿದ್ದೆ. ಮರುದಿನದಿಂದ ಅಪ್ಪ ಅವನಿಗೆ ಸೈಕಲ್ ಕಲಿಸೋ ಜವಾಬ್ದಾರಿಯನ್ನು ನನಗೆ ವರಿಸಿಬಿಟ್ಟರು. ನಾನೂ ಅದೇನು ಮಹಾ ಎಂದುಕೊಂಡು ಒಪ್ಪಿಕೊಂಡುಬಿಟ್ಟೆ. ಅವತ್ತು ಸಂಜೆ ತಮ್ಮನಿಗೆ ಸೈಕಲ್ ಕಲಿಸಲು ಮೈದಾನಕ್ಕೆ ಕರೆದುಕೊಂಡು ಹೋಗೋಣವೆಂದು ಅವನನ್ನು ಹಿಂದೆ ಕ್ಯಾರಿಯರ್ ಮೇಲೆ ಕೂರಿಸಿಕೊಂಡು ಸೈಕಲ್ ತುಳಿದರೆ ಅದು ಅಲ್ಲಾಡಲೇ ಇಲ್ಲ. ಇದ್ಯಾಕೆ ಎಂದು ಮತ್ತೊಮ್ಮೆ ಅತ್ತಿತ್ತ ನೋಡಿ ಮತ್ತೆ ತುಳಿದೆ. ಉಹುಂ, ಸೈಕಲ್ ನಿಂತಲ್ಲೇ ಜಾಂಡಾ ಹೂಡಿಬಿಟ್ಟಿತ್ತು. ಅಯ್ಯೋ, ಹೊಸ ಸೈಕಲ್ ಬೇರೆ ಏನಾಯ್ತು ಇದಕ್ಕೆ ಎಂದು ಅವನನ್ನು ಕೆಳಗಿಸಿಳಿ ಬ್ರೇಕ್ ಏನಾದ್ರು ಸಿಕ್ಕಿಕೊಂಡಿದಿಯ ಎಂದು ನೋಡಿದೆ. ಏನೂ ಆಗಿರಲಿಲ್ಲ. ನಾನೊಬ್ಬನೇ ಹತ್ತಿ ತುಳಿದರೆ ಅದು ಸಲೀಸಾಗಿ ಮುಂದೆ ಬಂತು. ಇದಕ್ಯಾವ ದೆವ್ವ ಮೆಟ್ಟಿಕೊಳ್ತಾಪ್ಪ ಎಂದು ಮತ್ತೊಮ್ಮೆ ಅವನನ್ನು ಕೂರಿಸಿಕೊಂಡು ಪೆಡಲ್ ತುಳಿದೆ. ಅದು ಮುಂದೆ ಹೋಗಲು ಸುತರಾಂ ಒಪ್ಪಲಿಲ್ಲ. ನಾನು ಅರೇ ಇಸ್ಕಿ ಎಂದು ಮತ್ತೊಮ್ಮೆ ಇಳಿದು ಸೈಕಲನ್ನು ನಾಲ್ಕು ರೌಂಡು ಹಾಕಿ ಬಂದೆ. ನನಗೇನು ಹೊಳೆಯಲೇ ಇಲ್ಲ. ಕೊನೆಗೊಮ್ಮೆ ನನಗೆ ಸೈಕಲ್ ಮುಂದೆ ಹೋಗದಿರಲು ಕಾರಣ ಭಲಭೀಮನಂತಿದ್ದ ನನ್ನ ತಮ್ಮನ ತೂಕವೇ ಕಾರಣ ಎಂದು ಗೊತ್ತಾಗುವಷ್ಟರಲ್ಲಿ ಕತ್ತಲು ಆವರಿಸಿತ್ತು. ಅಂದಿಗೆ ಅವನಿಗೆ ಸೈಕಲ್ ಕಲಿಸುವ ಪಾಠವನ್ನು ಅಲ್ಲಿಗೇ ನಿಲ್ಲಿಸಿದೆ. ಮತ್ತೆ ಅವನಿಗೆ ಸೈಕಲ್ ಕಲಿಸಿದ್ದು ಅಪ್ಪನೇ.

 ನನ್ನ ತಮ್ಮನ ಅತಿಪ್ರಿಯವಾದ ಅಡಿಗೆ ಎಂದರೆ ಅನ್ನ ಸಾಂಬಾರು. ಯಾವ ಸಾಂಬಾರಾದರು ಸರಿಯೇ, ಅವನೇನು ಅದಕ್ಕೆಲ್ಲ ಭೇದ ಭಾವ ಮಾಡುತ್ತಿರಲಿಲ್ಲ. ಅವನು ತಿನ್ನಲು ಕುಳಿತನೆಂದರೆ, ಅಮ್ಮ ಇನ್ನೊಂದು ಸಾರಿ ಕುಕ್ಕರ್ ಕೂಗಿಸಲೇಬೇಕು. ಅವನು ಮನೆಯಲ್ಲಿದ್ದರೆ ಸಾಕು ಅಕ್ಕಿ ಚೀಲಗಳೆಲ್ಲ ಗಡಗಡ ನಡುಗಿಬಿಡೋವು. ಹಾಗಿತ್ತು ಅವನ ಹವಾ. ಅವನಿಗೆ ಊಟಕ್ಕೆ ಅಮ್ಮ ತಟ್ಟೆಯಲ್ಲಿ ಕೊಡುತ್ತಿರಲಿಲ್ಲ, ದೊಡ್ಡ ಅರಿವಾಣದಲ್ಲಿ ಕೊಡುತ್ತಿದ್ದರು. ಹೀಗೇ ತಿಂದೂ ತಿಂದೂ ಸಾಹೇಬರು ಕಮಲದ ಹೂವಿನ ತರ ಎಲ್ಲಾ ಕಡೆಯೂ ಹರಳಿಕೊಂಡು ಬಿಟ್ಟಿದ್ದರು. ನೀವೇನಾದರೂ ಅದು ಅವನ ಹೊಟ್ಟೆಬಾಕತನ ಎಂದು ತಿಳಿಯುವುದಾದರೆ ನೀವು ತಪ್ಪಾಗಿ ತಿಳಿದಿದ್ದೀರಿ ಎನ್ನಬೇಕು. ಅವನು ಹಾಗೆ ಆಗಲು ಕಾರಣವೆ ನನ್ನಮ್ಮ. ಮಹಾನ್ ಪಾಕಪ್ರವೀಣೆ ಅವಳು. ಅವಳೇನಾದರೂ ಅವರೇಕಾಳು ಸಾರು ಮಾಡಿದರೆಂದಳೇ, ಇಡೀ ಬೀದಿ ಹೆಂಗಸರೆಲ್ಲ ಬರೀ ವಾಸನೆ ಹಿಡುದುಕೊಂಡೇ ಬಂದು ಕೇಳೋರುಏನ್ರಿ ಇವತ್ತು ಅವರೇಕಾಳು ಸಾಂಬಾರ?”. ನಾನೂ ಅದೇ ಮನೆಯಲ್ಲಿದ್ದು ನಾನೇಕೆ ಕಡಿಮೆ ತಿಂತಿದ್ವಿ ಅಂತ ನಿಮಗೇನಾದರೂ ಅನ್ಸಿದ್ರೆ, ಅದು ನಮ್ಮಲ್ಲೇ ಇದ್ದ ಪ್ರಾಬ್ಲಮ್ಮು ಅಂದ್ಕೊಳ್ಳಿ.

 ಇಷ್ಟೆಲ್ಲಾ ಹೇಳಿದಮೇಲೆ ನಮ್ಮ ತಮ್ಮನ ಇನ್ನೊಂದು ಸ್ಪೆಷಾಲಿಟಿ ಬಗ್ಗೆ ಹೇಳಲೇಬೇಕು. ಅವನು ಆಗಿನ ಕಾಲದಲ್ಲಿ   ಹೊರಗಿನಿಂದ ಜಟ್ಟಿಯ ತರ ಕಂಡರೂ ಒಳಗೆ ಬಹಳ ಪುಕ್ಕುಲ. ಹೆಚ್ಚುಕಮ್ಮಿ ಎಲ್ಲಾ ಪ್ರಾಣಿಪಕ್ಷಿಗಳಿಗೂ, ಕ್ರಿಮಿಕೀಟಗಳಿಗೂ ಹೆದರಿ ಕಪ್ಪೆ ತರ ನೆಗೆದಾಡೋನು. ನನಗೊಮ್ಮೊಮ್ಮೆ ಇವನ ಮುಂದೆ ನಿಜವಾದ ಕಪ್ಪೆ ತಂದು ಬಿಟ್ಟು ಯಾರು ಚೆನ್ನಾಗಿ ನೆಗೀತಾರೋ ನೋಡ್ಬೇಕು ಅನ್ನಿಸ್ತಿತ್ತು. ಮನೆಗೇನಾದರೂ ಯಾವುದಾದರು ಹುಳ ಹುಪ್ಪಟೆ ಬಂದರಂತೂ ಕಥೆ ಮುಗಿದಂತೆಯೇ ಬಿಡಿ. ಒಂದೋ ಅದು ಸಾಯಬೇಕು ಇಲ್ಲಾ ಇವನು ಸಾಯಬೇಕು, ಅಲ್ಲಿವರೆಗೂ ಇವನಿಗೂ ನೆಮ್ಮದಿಯಿಲ್ಲ, ಹಾಗೇ ಮನೆಯವರಿಗೂ ನೆಮ್ಮದಿಯಿಲ್ಲ. ವಿಷಯದಲ್ಲಿ ನನ್ನ ತಂಗಿ ಇನ್ನೂ ಒಂದು ಕೈ ಮುಂದೆ ಬಿಡಿ. ಆದರೆ ಅವಳು ಬುದ್ದಿವಂತೆ. ಯಾವುದಾದರೂ ಹುಳ ಕಂಡರೆ ಸ್ವಲ್ಪವೂ ಶಬ್ದ ಮಾಡದೇ ಓಡಿಬಿಡೋಳು. ನನ್ನ ತಮ್ಮನೂ ಹಾಗೆಯೆ ಮಾಡೋನು, ಆದರೆ ಸ್ವಲ್ಪ ಬೇರೆ ರೀತಿಯಲ್ಲಿ ಅಷ್ಟೆ. ಓಡೋ ಬದಲು ಅಲ್ಲೇ ಜಾಂಡಾ ಹೂಡಿ ಅಕ್ಕಪಕ್ಕದ ಮನೆಯವರ ನವರಂದ್ರಗಳೂ ಅಧುರುವಂತೆ ವದರಿಬಿಡೋನು. ಇವನ ವದಾರಾಟಕ್ಕೆ ಕಿಟಕಿಯ ಗಾಜುಗಳೆಲ್ಲ ಅಲ್ಲಾಡಿಬಿಡೋವು. ಅಂತಹ ತಾನಸೇನನ ಕಂಠ. ಒಂದು ಸಮಯದಲ್ಲಿ ನಮ್ಮನೆಯಲ್ಲಿ ಜಿರಳೆ ಕಾಟ ಜಾಸ್ತಿ ಆಗಿತ್ತು. ಅದೂ ಹಾರೋ ಜಿರಳೆಗಳು. ಎಲ್ಲೆಂದರಲ್ಲಿ ಯಾವಾಗಂದರೆ ಅವಾಗ ಪ್ರತ್ಯಕ್ಷವಾಗಿಬಿಡೋವು. ಅವುಗಳನ್ನು ನೋಡಿ ನನ್ನ ತಮ್ಮ ತಂಗಿ ಆಡೋ ದೊಂಬರಾಟಗಳಿಗೆ ನಮ್ಮಪ್ಪ ತಲೆಹೊತ್ತು ಕೆಲಸಕ್ಕೆ ರಜೆ ಹಾಕಿ ಯಾರನ್ನೋ ಕರೆಸಿ ಔಷದಿ ಹೊಡೆಸಿದ್ದರು.

 ಚಿತ್ರದುರ್ಗದಲ್ಲಿ ಮಂಗಗಳ ಕಾಟ ಸ್ವಲ್ಪ ಜಾಸ್ತಿಯೇ. ಮೊದಲೆಲ್ಲಾ ಅವುಗಳು ದೇವಸ್ಥಾನದ ಸುತ್ತಮುತ್ತವಷ್ಟೇ ಕಂಡುಬರುತ್ತಿದ್ದು ಅಲ್ಲಿ ಸಿಗುವ ಪ್ರಸಾದಕ್ಕೆ ಲೈನಿನಲ್ಲಿ ಕಾಯಿಕೊಂಡು ಕುಳಿತಿರುತ್ತಿದ್ದವು. ಬರುಬರುತ್ತಾ  ದೇವಸ್ಥಾನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಿ ಅವುಗಳಲ್ಲೇ ಪ್ರಸಾದಕ್ಕಾಗಿ ಒಳಜಗಳಾಗಲು ಶುರುವಾದವು. ದಿನೇ ದಿನೇ ಅವುಗಳಲ್ಲಿ ಮನಸ್ತಾಪಗಳು ಹೆಚ್ಚಾದ ಮೇಲೆ ಅವುಗಳು ಸಣ್ಣ ಸಣ್ಣ ಗುಂಪುಗಳಾಗಿ ವಿಂಗಡಗೊಂಡವು. ಮೊದಮೊದಲೆಲ್ಲಾ ಜನಗಳು ಬಾಳೆಹಣ್ಣು ಕಾಯಿಗಳನ್ನು ತಾವಾಗಿಯೇ ಕೊಡುತ್ತಿದ್ದರು. ಇವುಗಳು ಗುಂಪುಗಳಾಗಿ ವಿಂಗಡಣೆಗೊಂಡ ನಂತರ ಕೆಲವು ಖೇಡಿ ಮಂಗಗಳು ಜನ ಕೊಡುವುದಕ್ಕೆ ಮುಂಚೆಯೇ ಇವೇ ಹೋಗಿ ಅವರುಗಳ ಕೈಯಿಂದ ಕಿತ್ತುಕೊಳ್ಳಲು ಶುರುಮಾಡಿದವು. ಸಣ್ಣ ಮಕ್ಕಳಂತೂ ಇವುಗಳ ಕಾಟದಿಂದ ದೇವಸ್ಥಾನದಲ್ಲಿ ತಾಯಂದಿರ ಕೈಯನ್ನು ಬಿಡುತ್ತಲೇ ಇರಲಿಲ್ಲ. ಕೊನೆಗೊಮ್ಮೆ ಜನ ಬೇಸತ್ತು ಇವುಗಳ ಸಹವಾಸವೇ ಬೇಡ ಎಂದು ಅವುಗಳಿಗೆ ಹಣ್ಣು ಕಾಯಿ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರು. ಹಾಗೂ ಜನಗಳೆಲ್ಲ ಸೇರಿ ದೇವಸ್ಥಾನದ ನಿರ್ವಾಹಕರಿಗೆ ಇವುಗಳನ್ನು ಇಲ್ಲಿಂದ ಓಡಿಸಬೇಕೆಂದು ದೂರು ಕೊಟ್ಟರು. ಮೊದಮೊದಲು "ಹಾಗೆಲ್ಲ ಮಾಡೋಕಾಗುತ್ಯೇ..” ಎನ್ನುತ್ತಾ ಇದ್ದ ನಿರ್ವಾಹಕರು, ಬರಬರುತ್ತಾ ಇವುಗಳಿಂದ ಜನ ಕಡಿಮೆ ಆದರೂ ಅಂತ ಅವುಗಳ ಜಾಗ ಖಾಲಿ ಮಾಡಿಸುವ ಪ್ರಯತ್ನ ಮಾಡಿದರು. ತಲೆತಲಾಂತರಗಳಿಂದ ದೇವಸ್ಥಾನದ ಸುತ್ತಮುತ್ತಲಿನ ಮರಗಳಲ್ಲೇ ಜಾಂಡಾ ಹೂಡಿದ್ದ ಮಂಗಗಳು ಇದ್ದಕ್ಕಿದ್ದಂತೆ ಆದ ಬದಲಾವಣೆಗಳಿಂದ ಆವಕ್ಕಾದಂತೆ ಕಂಡು ತುಂಬಾ ದಿನಗಳವರೆಗೂ ಸುಮ್ಮನೇ ದೇವಸ್ಥಾನದ ಕಂಪೌಂಡಿನ ಮೇಲೆ ಕುಳಿತು ಮಿಕ ಮಿಕ ನೋಡುತ್ತಿದ್ದವು.  

 ತಮ್ಮ ಊಟದ ಮೂಲವೇ ನಿಂತುಹೋದಮೇಲೆ ಎಷ್ಟು ದಿನ ಅಂತ ಅವೂ ಕೂಡ ಅಲ್ಲೇ ಜಾಂಡಾ ಹೂಡಿ ಕೂತಾವು? ನಿಧಾನವಾಗಿ ಅವುಗಳು ತಮ್ಮ ನಿವಾಸವನ್ನು ಬೇರೆಡೆಗೆ ವರ್ಗಾಹಿಸಲು ಜಾಗ ಹುಡುಕಲು ಶುರುಮಾಡಿದವು. ಆದರೆ ಎಲ್ಲಾ ದೇವಸ್ಥಾನಗಳ ಸುತ್ತಮುತ್ತಲೂ ಅದೇ ಸ್ಥಿತಿ ಎದುರಾದಾಗ ಅವುಗಳು ಬೇರೆ ದಾರಿ ಕಾಣಗೆ ಅಲೆಮಾರಿಗಳಾಗಿ ಜೀವನ ಸಾಗಿಸಬೇಕಾಗಿ ಬಂತು. ದಿನಗಳೆದಂತೆ ಎಲ್ಲರ ಮನೆಗಳ ಮೇಲೆ ಓಡಾಡಿಕೊಂಡು, ಮನೆಯ ಮೇಲೇನಾದರೂ ತಿನ್ನುವ ವಸ್ತುವೇನಾದರೂ ಸಿಕ್ಕರೆ ಅಲ್ಲೇ ಸ್ವಾಹಾ ಮಾಡಿ ಮುಂದಿನ ಮನೆಗಳಿಗೆ ಮುಂದುವರೆಯುತ್ತಿದ್ದವು. ಜನಗಳಿಗೆ ಅದೂ ಗೊತ್ತಾಗಿ ಅವುಗಳ ಕೈಯಿಗೆ ಏನು ಸಿಗದ ಹಾಗೆ ಮಾಡಿಬಿಟ್ಟರು. ಕೊನೆಗೊಂದು ದಿನ ಮಂಗಗಳ ಗುಂಪಿಗೆ ತಿನ್ನುವುದಕ್ಕೆ ಏನೂ ಸಿಗದಿದ್ದಾಗ ಹೊಟ್ಟೆ ಹಸಿವಿಗೆ ಸೋತು ಮನೆಗಳ ಕಿಟಕಿಯಿಂದ ಏನು ಸಿಕ್ಕಿದರೂ ಅದನ್ನು ಎತ್ತುಕೊಂಡು ಹೋಗುವುದನ್ನು ಕಲಿತವು. ಅದೂ ತಿನ್ನುವ ವಸ್ತುವೋ ಅಥವಾ ಇನ್ನೊಂದೋ ಎಂದೂ ನೋಡದೆ ಕೈಯಿಗೆ ಸಿಕ್ಕಿದ್ದನ್ನೆಲ್ಲ ಕಬಳಿಸಿ ಬಿಡುತ್ತಿದ್ದವು. ಎಷ್ಟೋ ಜನ ಮಂಗಗಳ ಕಾಟದಿಂದ ತಮ್ಮ ಬೆಲೆಬಾಳುವ ವಸ್ತುಗಳನ್ನೆಲ್ಲ ಕಳೆದುಕೊಂಡರು. ಹಲವಾರು ಕಡೆ ಮಂಗಗಳ ಮೇಲೆ ಇದೇ ತರದ ಆಪಾದನೆಗಳು ಶುರುವಾಗಿ ಜನಗಳು ಅವುಗಳ ಕೈಯಿಗೆ ಏನೂ ಸಿಗದ ಹಾಗೆ ವಸ್ತುಗಳನ್ನು ಇಡಲಾರಂಭಿಸಿದರು. ಕೊನೆಗೊಮ್ಮೆ ಮತ್ತೇನು ಮಾಡಲಾಗದೆ ಅವುಗಳು ಮನೆಯೊಳಗೇ ನುಗ್ಗಿ ಬರುವ ಕೆಲಸಕ್ಕೆ ಕೈ ಹಾಕಬೇಕಾಯಿತು. ಹೊಟ್ಟೆ ಹಸಿವು ಎಂತಹ ಕ್ರೂರಿಯೆಂದರೆ ಮೂಕ ಪ್ರಾಣಿಗಳನ್ನೂ ದರೋಡೆಕೋರರನ್ನಗಿ ಮಾಡಿಬಿಟ್ಟಿತ್ತು.  


 ಒಮ್ಮೆ ಅವುಗಳಿಗೆ ಜನ ತಮ್ಮನ್ನು ಕಂಡರೆ ಹೆದರುತ್ತಾರೆ ಅಂದು ಗೊತ್ತಾದಮೇಲಂತೂ ಚಿತ್ರದುರ್ಗದ ರಾಜಬೀದಿಗಳಲ್ಲಿ ದೊಡ್ಡ ದೊಡ್ಡ ಗುಂಪುಗಳಲ್ಲಿ ಅವು ರಾಜಾರೋಷವಾಗಿ ಓಡಾಡಿದ್ದೆ ಓಡಾಡಿದ್ದು. ಅವುಗಳ ಗುಂಪಲ್ಲಿ ಒಂದು ದೊಡ್ಡ ಗಡವ ಮಂಗ ನಾಯಕನಂತೆ ಎಲ್ಲೆಲ್ಲಿ ಯಾವಯಾವ ಮನೆಗೆ ಲಗ್ಗೆ ಹಾಕಬೇಕು ಎಂದು ಪ್ಲಾನು ಹಾಕುತ್ತೆ, ಉಳಿದವು ಗಡವ ಮಂಗನನ್ನು ಕಣ್ಣುಮುಚ್ಚಿ ಫಾಲೋ ಮಾಡ್ತವೆ ಅಷ್ಟೇ. ಗಡವ ಮಂಗನೇನಾದರೂ ಅಂದು ಯಾವುದಾದರು ಮನೆಗೆ ಲಗ್ಗೆ ಹಾಕಬೇಕು ಎಂದರೆ ಮೊದಲು ಮನೆಯ ಸುತ್ತಮುತ್ತಲೆಲ್ಲ ಒಂದು ರೌಂಡು ತಿರುಗಾಡಿಕೊಂಡು ಬರುತ್ತೆ. ಮನೆಯಲ್ಲಿ ಯಾರ್ಯಾರು ಇದ್ದಾರೆ ಅಂದು ಅಂದಾಜು ಮಾಡೋಕೆ. ಮಕ್ಕಳು ಮತ್ತು ಹೆಂಗಸರು ಅದರಂತೂ ಮುಗೀತು ಅಕ್ರಮಣವಾದಂತೆಯೇ. ಮನೆಯಲ್ಲಿ ಯಾರಾದರೂ ಗಂಡಸಿರಿದ್ದಾರೆ ಎಂದು ಗೊತ್ತಾದರೆ, ಮನೆ  ಅವತ್ತಿಗೆ ಬೇಡ ಅಂತ


 ಒಂದು ದಿನ ಸಂಜೆ ನಾನು ಕಾಲೇಜು ಮುಗಿಸಿ ಬಂದು ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದೆ. ಆಗೆಲ್ಲಾ ನಮ್ಮ ಮನೆಯಲ್ಲಿ ಸೋಫಾ ಗಿಫಾ ಎಲ್ಲಾ ಇರಲಿಲ್ಲ. ಇದ್ದ ಎರಡು ಮಂಚಗಳನ್ನು ಒಂದು ರೂಮಿನಲ್ಲೂ ಮತ್ತೊಂದು ಹಾಲಿನಲ್ಲೂ ಇಡಲಾಗಿತ್ತು. ಹಾಲಿನ ಮಂಚದಮೇಲೆ ಒರಗಿ ಆರಾಮಾಗಿ ಟಿವಿ ನೋಡುವುದು ನನ್ನ ಹವ್ಯಾಸ. ಅಷ್ಟರಲ್ಲಿ ನನ್ನ ತಮ್ಮ ತಂಗಿ ಸ್ಕೂಲಿನಿಂದ ಬಂದರು. ನನ್ನ ತಮ್ಮ ಬಂದವನೇ ಮೊದಲು ಬಟ್ಟೆ ಬದಲಾಯಿಸಲು ರೂಮಿನೊಳಗೆ ಹೋದ. ಅವನು ರೂಮಿನೊಳಗೆ ಹೋದದ್ದು ಹಾಲಿನಲ್ಲಿದ್ದ  ನಾನು ನೋಡಿದ್ದೆ. ಅವನು ಹೊರಗೆ ಬಂದರೂ ನನಗೆ ಕಾಣಲೇಬೇಕಿತ್ತು. ನಾನು ಟಿವಿ ನೋಡುತ್ತಾ ಹೀಗೇ ಕುಳಿತಿರುವಾಗ ಏನೋ ತಣ್ಣಗಿನದ್ದು ನನ್ನ ಕೈಯ್ಯನ್ನು ಮುಟ್ಟಿದ ಹಾಗಾಯಿತು. ತುಂಬಾ ತಣ್ಣಗಿದ್ದು ಏನಾದರು ಇದ್ದಕ್ಕಿದ್ದ ಹಾಗೆ ಮೈಮೇಲೆ ಬಿದ್ದಾಗ ಹೇಗಾಗುತ್ತದೆಯೋ ಹಾಗೆಯೇ ಆಯಿತು. ನಾನು ಸರಕ್ಕನೆ ಕೈ ಎಳೆದುಕೊಂಡು ಏನದು ಎಂದು ತಿರುಗಿ ನೋಡಿದೆ. ಅಲ್ಲೊಂದು ದೊಡ್ಡ ಗಡವ ಮಂಗ ನನ್ನ ಪಕ್ಕದಲ್ಲೇ ಮಂಚದ ಮೇಲೆ ಕುಳಿತು ನನ್ನನ್ನೇ ಗುರಾಯಿಸುತ್ತಿದೆ! ಅದನ್ನು ನೋಡಿದವನೇ ನಾನು ಛಂಗನೆ ಅದಕ್ಕಿಂತಲೂ ಚೆನ್ನಾಗಿ ನೆಗೆದು ದೊರಕ್ಕೆ ನಿಂತೆ. ನಾನು ನೆಗೆದ ರಭಸಕ್ಕೆ ಮಂಚ ಒಂದು ಸಾರಿ ಕಿರ್ರೋ ಎಂತು. ಮಂಗಗಳನ್ನು ಬಹಳ ನೋಡಿದ್ದರಿಂದ ಹೆದರುವಂತದ್ದೇನು ಇರಲಿಲ್ಲ . ಜೋರಾಗಿ ಒಮ್ಮೆ "ಹೇ... ಶೂ ಶೂ" ಎಂದು ಕಿರುಚಿದೆ. ಅದು ಒಮ್ಮೆ ನನ್ನ ಮೇಲೆ ನೆಗೆಯುವಂತೆ ಮಾಡಿ ಓಡಿ ಹೋಯಿತು. ನಾನು ಅದರ ಹಿಂದೆಯೇ ಓಡಿ ಹೋಗಿ ಅದು ಮತ್ತೆ ಬರಬಾರದೆಂದು ಬಾಗಿಲು ಹಾಕಿದೆ.   

 ನನ್ನ ತಮ್ಮ ರೂಮಿನಲ್ಲಿ ಇದ್ದದ್ದು ನನಗೆ ನೆನಪಾದದ್ದು ಮತ್ತೆಯೇ. ನಮ್ಮ ಮನೆಯೊಳಗೆ ಬರುವಾಗ ಮೊದಲು ಸಿಗುವುದೇ ರೂಮು. ಅದಕ್ಕೇನು ಬಾಗಲಿರಲಿಲ್ಲ. ಹಾಗಾಗಿ ಮಂಗ ಬರುವುದು ರಘುವಿಗೆ ಕಂಡಿರಬೇಕಲ್ಲವೇ? ಅವನು ಅದನ್ನು ನೋಡಿದ್ದರೆ ಯಾಕೆ ಏನೂ ಹೇಳದೆ ಸುಮ್ಮನಿದ್ದ? ನನ್ನನ್ನಾದರೂ ಎಚ್ಚರಿಸಬೇಕಿತ್ತಲ್ಲ ಎಂದು ರೂಮಿಗೆ ಹೋಗಿ ಇಣುಕಿದೆ. ಅವನು ಅಲ್ಲಿ ಇರಲಿಲ್ಲ. ನನಗೆ ಗೊತ್ತಾಗದೆ ಅವನು ರೂಮಿನಿಂದ ಯಾವಾಗ ಹೊರಬಂದ ಎಂದು ಅನುಮಾನವಾಯ್ತು. ಮಂಗ ಒಳಗಡೆ ಬಂದದ್ದೇ ನನಗೆ ಗೊತ್ತಾಗಲಿಲ್ಲ ಎಂದರೆ ಅವನು ರೂಮಿನಿಂದ ಹೊರಗೆ ಬಂದದ್ದೂ ಗೊತ್ತಾಗಿರಲಿಕ್ಕಿಲ್ಲ ಎಂದುಕೊಂಡೆ. ಅವನು ಒಳಗಡೆ ಇರಬಹುದು ಎಂದು ಅವನನ್ನು ಹುಡುಕಿದರೆ ಎಲ್ಲಿಯೂ ಕಾಣಲಿಲ್ಲ. ಅವನೆಲ್ಲಿಗೆ ಮಾಯವಾದ ಎಂದು ಹುಡುಕುತ್ತ ಮತ್ತೆ ರೂಮಿಗೆ ಬಂದುರಘು..?” ಎಂದೆ. ಅವನು..” ಎಂದ. ಅವನು ಎಂದಿದ್ದೇನೋ ನನಗೆ ಸರಿಯಾಗೇ ಕೇಳಿಸಿತು, ಆದರೆ ಅವನೇ ಕಾಣಲಿಲ್ಲ. ಒಮ್ಮೆ ಸರಿಯಾಗಿ ರೂಮಿನೊಳಗೆ ಹೋಗಿ ನೋಡಿದೆ. ಎಲ್ಲೂ ಇಲ್ಲಾ. ಅದೇನು ಅಂತಹ ದೊಡ್ಡ ರೂಮಲ್ಲ, ಎಲ್ಲಿದ್ದರೂ ಕಾಣಲೇಬೇಕು ಹಾಗಿತ್ತು ಅದು. ಅಂತಹ ಸಣ್ಣ ರೂಮಿನಲ್ಲಿ ಅಂತಹ ದೊಡ್ಡ ದೇಹ ನನಗೆ ಕಾಣಲಿಲ್ಲ ಎಂದರೇನರ್ಥ? ನನಗೇನಾದರೂ ಕಣ್ಣೇ ಹೋಯಿತೇ ಎಂದು ಒಮ್ಮೆ ಕಣ್ಣುಜ್ಜಿಕೊಂಡೆ. ಏನೂ ಉಪಯೋಗವಾಗಲಿಲ್ಲ. ಹಾಗಾದರೆ ನನ್ನ ಕಿವಿಗಳೇ ನನಗೆ ಮೋಸಮಾಡಿದವೇ ಎಂದು ಇನ್ನೊಮ್ಮೆಎಲ್ಲೋ ಇದೀಯಾ?” ಎಂದೆ. ಆಗ ಪುಣ್ಯಾತ್ಮ ನಿಧಾನವಾಗಿ ಮಂಚದ ಕೆಳಗಿನಿಂದ ಹೊರಬಂದ. ಅದೂ ಬರಿ ಚಡ್ಡಿಯಲ್ಲಿ! ನಾನು ಮಂಚದ ಪಕ್ಕದಲ್ಲೇ ನಿಂತಿದ್ದರಿಂದ ಅವನು ಇದ್ದಕ್ಕಿದ್ದಂತೆ ನನ್ನ ಕಾಲ ಬಳಿಯಲ್ಲಿಯೇ ಪ್ರತ್ಶಕ್ಷವಾದದ್ದು  ಕಂಡು ಹೆದರಿ ಹಿಂದಕ್ಕೆ ಜಿಗಿದೆ. "ಏನಾಯ್ತೋ? ಯಾಕೋ ಅಲ್ಲಿದ್ದೆ?” ಎಂದೆ. ಅದಕ್ಕವನು ಪೆಚ್ಚುಮೋರೆ ಹಾಕಿಕೊಂಡುಬಟ್ಟೆ ಬದಲಾಯಿಸುವಾಗ ಮಂಗ ಬಂದ್ಬಿಡ್ತು ಅಣ್ಣಎಂದ. ಹಾಗಾದರೆ ಅವನು ಮಂಗಕ್ಕೆ ಹೆದರಿಯೇ ಮಂಚದ ಕೆಳಗೆ ಹೊಕ್ಕಿದ್ದು ಎಂದು ಖಾತ್ರಿಯಾಯ್ತು. ಆದರೆ ಅದನ್ನು ನೋಡಿಯೂ ನನಗೆ ಒಂದು ಮಾತೂ ಹೇಳದೆ ತಾನು ಮಾತ್ರ ಮಂಚದ ಕೆಳಗೆ ಅವಿತು ಕುಳಿತದ್ದಕ್ಕೆ ಸರೀ ಸಿಟ್ಟು ಬಂದು ಎರಡು ಬಾರಿಸಬೇಕು ಎಂದುಕೊಂಡೆ. ಆದರೆ ಅವನಿದ್ದ ಪರಿಸ್ಥಿತಿಗೂ ಮತ್ತವನ ಮುಖದಲ್ಲಿದ್ದ ಭಯಕ್ಕೂ ನನಗೆ ನಗು ತಡೆಯಲಾಗಲಿಲ್ಲ. ಹೋಗಲಿ ಬಿಡು ಅಂದುಕೊಂಡು ಮತ್ತೆ ಟಿವಿ ನೋಡಲು ಹೊರಟೆ.

 ಇನ್ನೊಮ್ಮೆ ಏನಾಯಿತೆಂದರೆ, ನಮ್ಮಜ್ಜಿ ಹಳ್ಳಿಯಿಂದ ಬಂದಿದ್ದರು. ಅವರಿಗೆ ಬೆಳಗಿನ ಹೊತ್ತು ಬಿಸಿಲು ಕಾಯಿಸಿ ರೂಡಿ. ಹಾಗಾಗಿ ಬೆಳಗಿನ ಹೊತ್ತು ಮನೆ ಮೇಲೆ ಟೆರೇಸಿಗೆ ಹೋಗಿ ಅಲ್ಲೇ ತುಂಬಾ ಹೊತ್ತು ಕೂರೋರು. ಅವರು ದೊಡ್ಡ ಎಲೆ ಅಡಿಕೆ ಗಿರಾಕಿ. ಊಟ ಬೇಕಾದರೂ ಬಿಡೋರು, ಆದ್ರೆ ಎಲೆ ಅಡಿಕೆ ಬಿಡುತ್ತಿರಲಿಲ್ಲ. ಒಂದು ದಿನ ಹೀಗೆ ನನ್ನ ಅಜ್ಜಿ ಬಿಸಿಲು ಕಾಯಿಸಲು ನಿಧಾನಕ್ಕೆ ಮೆಟ್ಟಿಲು ಹತ್ತಿಕೊಂಡು ಹೋಗುತ್ತಿರುವಾಗ ಒಂದು ಮಂಗಾ ದಿಡೀರನೆ ಅವರಿಗೆ ಎದುರಾಗಿದೆ. ನಂತರ ಗೊತ್ತಾದ ವಿಷಯವೆಂದರೆ ಅದು ಯಾರದ್ದೋ ಸಾಕು ಮಂಗ, ತಪ್ಪಿಸಿಕೊಂಡಿದೆ ಎಂದು. ಇಲ್ಲದಿದ್ದರೆ ಜನಗಳಿಂದ ಮಂಗಗಳು ಆದಷ್ಟು ದೂರವಿರುತ್ತವೆ. ಮೊದಲೇ ಸಾಕುಮಂಗವಾದ್ದರಿಂದ ನಮ್ಮಜ್ಜಿಯನ್ನು ಕಂಡು ಅದೇನು ಹೆದರಿಕೊಂಡಿಲ್ಲ. ಬದಲಿಗೆ ಇನ್ನೂ ಹತ್ತಿರಕ್ಕೆ ಬಂದಿದೆ. ನಮ್ಮಜ್ಜಿ ಮಂಗ ಹತ್ತಿರ ಬಂದಿದ್ದು ನೋಡಿ ಹೆದರಿಬಿಟ್ಟಿದ್ದಾರೆ, ಆದರೆ ತುಂಬಾ ವಯಸ್ಸಾದ್ದರಿಂದ ಅವರಿಗೆ ಎಲ್ಲಿಗಾದರೂ ಓಡಿಹೋಗುವಷ್ಟು ಶಕ್ತಿ ಇರಲಿಲ್ಲ. ಇತ್ತ ಸಾಕುಮಂಗವಾದ್ದರಿಂದ ಅದಕ್ಕೆ ಜನಗಳ ಮೈಮೇಲೆ ಹತ್ತಿ ರೂಡಿ. ಹಿಂದೂ ಮುಂದೂ ನೋಡದೆ ಅಜ್ಜಿಯ ಮೇಲೆ ಹತ್ತಲಿಕ್ಕೆಂದು ಹೋಗಿದೆ. ಅಜ್ಜಿ ಹೆದರಿ ಹೌಹಾರಿಅಯ್ಯಯೋ... ಹೇ..ಉಷು ಉಷು..” ಎಂದು ಅದರ ಕೈ ಹಿಡಿದುಕೊಂಡುಬಿಟ್ಟಿದ್ದಾರೆ. ಅಲ್ಲಿಗೆ ಇವರಿಬ್ಬರ ಜಂಗಿ ಕುಸ್ತಿ ಶುರುವಾಗಿದೆ. ಇಬ್ಬರೂ ಒಬ್ಬರ ಕೈಯ್ಯನ್ನೊಬ್ಬರು ಹಿಡಿದುಕೊಂಡು ಮುಂದಕ್ಕೂ ಹೋಗಲಾಗದೆ ಹಿಂದಕ್ಕೂ ಹೋಗಲಾಗದೆ ನಿಂತಲ್ಲಿಯೇ ಕುಸ್ತಿ ನಡೆಸಿದ್ದಾರೆ. ಮಂಗಕ್ಕೆ ಕೊನೆಗೂ ಮಾನವ ಸಂಗ ಸಿಕ್ಕಿದ್ದರಿಂದಲೋ ಏನೋ, ಅದೂ ಅಲ್ಲಿಂದ ಹೋಗುವ ಯೋಚನೆಯೇ ಮಾಡಿಲ್ಲ. ಅಜ್ಜಿಗೋ, ಪಾಪ ಪ್ರಾಣ ಸಂಕಟವಾಗಿಬಿಟ್ಟಿದೆ. ಅವರು ಅಲ್ಲಿಂದಲೇಅಯ್ಯಯ್ಯೋ, ಶಿವಣ್ಣಾಶಿವಣ್ಣಾ…” ಎಂದು ನನ್ನನ್ನು ಕರೆದಿದ್ದಾರೆ. ಆದರೆ ಟಿವಿ ಮುಂದೆ ಕುಳಿತಿದ್ದ ನನಗೆ ಅದು ಕೇಳಿಸಿಲ್ಲ. ಅದೆಷ್ಟು ಹೊತ್ತು ನಮ್ಮಜ್ಜಿ ಹಾಗೆ ಮಂಗನ ಜೊತೆ ಕುಸ್ತಿ ಆಡುತ್ತಿದ್ದರೋ ನನಗೆ ಗೊತ್ತಿಲ್ಲ, ಕೊನೆಗೊಮ್ಮೆ ಅದೂ ಹೇಗೋ ಅಪ್ಪನಿಗೆ ಕೇಳಿ ಅವರು ಹೋಗಿ ಮಂಗನನ್ನು ಹೆದರಿಸಿ ಓಡಿಸಿ ಅಜ್ಜಿಯನ್ನು ಕರೆದುಕೊಂಡು ಬಂದರು. ಪಾಪ ಅಜ್ಜಿ, ಅದಾದ ಮೇಲೆ ಮತ್ತೆ ಟೆರೇಸಿಗೆ ಹೋಗಲೇ ಇಲ್ಲ.   

 ಅದಾದ ಮೇಲೆ ಸ್ವಲ್ಪ ದಿನಗಳ ನಂತರ ಒಂದು ಶನಿವಾರದ ದಿನ ನಾನು ಕಾಲೇಜು ಮುಗಿಸಿ ಬರುವಷ್ಟರಲ್ಲಿ ನನ್ನ ತಮ್ಮ ಮತ್ತು ತಂಗಿ ಆಗಲೇ ಬಂದಾಗಿತ್ತು. ಇಬ್ಬರೂ ಟಿವಿಗೆ ವಿಡಿಯೋ ಗೇಮನ್ನು ಹಾಕಿ ಆಡುತ್ತಿದ್ದರು. ಅಪ್ಪ ಅದನ್ನು ರಘುಗೆ ಎಂದು ತಂದುಕೊಟ್ಟಿದ್ದರು. ಅದರಲ್ಲಿ ಒಬ್ಬರು ಅಥವಾ ಇಬ್ಬರು ಆಡಬಹುದಿತ್ತು. ನನ್ನ ತಂಗಿಗೇನು ಆಡಲು ಬರುತ್ತಿರಲಿಲ್ಲ, ಆದರೆ  ಅವಳಿಗೆ ಮಾಡಲು ಬೇರೇನೂ ಕೆಲಸ ಇರಲಿಲ್ಲವಾದ್ದರಿಂದ ಅವಳೂ ಅವನ ಜೊತೆಗೆ ಸುಮ್ಮನೆ ಕುಳಿತಿದ್ದಳಷ್ಟೆ. ನಾನು ಬರುವಾಗ ನನ್ನ ತಮ್ಮ ಜೋರಾಗಿ ನನ್ನ ತಂಗಿಗೆಅದನ್ನು ಒತ್ತು, ಇದನ್ನು ಒತ್ತು ಹಾಂಗ್ ಮಾಡು ಹಿಂಗ್ ಮಾಡುಅಂತ ಏನೇನೋ ಹೇಳಿಕೊಡುತ್ತಿದ್ದ. ನನ್ನ ತಂಗಿಗೆ ಅದೇನು ಅರ್ಥವಾಯಿತೋ ಗೊತ್ತಿಲ್ಲ. ಗೇಮಿನಲ್ಲಿ ನೆಗೆಯೋದು ಓಡೋದು ಬಿಟ್ರೆ ಬೇರೇನೂ ಇರಲಿಲ್ಲ. ಇಬ್ಬರೂ ಟಿವಿಗೆ ಒಂದಡಿಯಷ್ಟೇ ಮುಂದೆ ಕುಳಿತಿದ್ದರಿಂದ ಇವರು ಆಡುತ್ತಿದ್ದ ಗೇಮಿನಲ್ಲಿ ಇವರ ಪಾತ್ರವೇನಾದರೂ ಎಡಗಡೆ ಓಡಿದರೆ ಇವರು ಕುಳಿತಿದ್ದ ಕುರ್ಚಿಯಲ್ಲೇ ಬಲಗಡೆ ವಾಲೋರು, ಅದು ಬಲಗಡೆ ಓಡಿದರೆ ಎಡಗಡೆ ವಾಲೋರು. ಇನ್ನು ಏನಾದರು ಅದು ನೆಗೀಬೇಕು ಎಂದರೆ ನನ್ನ ತಮ್ಮ ಜೋರಾಗಿನೆಗಿ ನೆಗಿಅನ್ನೋನು, ಇಬ್ಬರೂ ಕುಳಿತಲ್ಲಿಯೇ ಕುರ್ಚಿಮೇಲೇ ಒಮ್ಮೆ ನೆಗೆದು ಕೂರೋರು

 ನನಗೆ ತುಂಬಾ ಹಸಿವಾಗಿದ್ದ ಕಾರಣ ನಾನು ಮೊದಲು ಏನಾದರು ತಿನ್ನಬೇಕು ಎಂದು ಅಡಿಗೆ ಮನೆ ಹೊಕ್ಕೆ. ಅಮ್ಮ ಮೊದಲ ರೂಮಿನಲ್ಲಿ ಮಲಗಿದ್ದರು. ತಮ್ಮ ತಂಗಿ ಮನೆಯಲ್ಲಿದ್ದರೆ ಅವರಿಗೆ ಸ್ವಲ್ಪ ಕೆಲಸ ಜಾಸ್ತಿಯೇ. ಹಾಗಾಗಿ ಅವರನ್ನು ಮತ್ತೆ ಏಳಿಸುವುದು ಬೇಡ ಎನ್ನಿಸಿ ನಾನೇ ಬಡಿಸಿಕೊಂಡೆ. ಊಟ ಮಾಡುವಾಗ ಟಿವಿ ನೋಡುವುದು ನನ್ನ ವಾಡಿಕೆ. ಆದರೆ ತಮ್ಮ ತಂಗಿ ಗೇಮು ಆಡುತ್ತಿದ್ದುದರಿಂದ ಯಾಕೋ ಅವರನ್ನು ಅಲ್ಲಿಂದ ಏಳಿಸಿ ಬೇಜಾರುಮಾಡಿಸುವುದು ಬೇಡ ಎನ್ನಿಸಿ ಊಟದ ಕೋಣೆಯಲ್ಲೇ ಟೇಬಲ್ ಮೇಲೆ ಕುಳಿತೆ. ನಾನು ಊಟ ಮಾಡುವಾಗ ಅವರ ಗೇಮು ತುಂಬಾ ಜೋರಾಗೇ ನಡೆದಿತ್ತು. ಇಬ್ಬರೂ  ಜೋರಾಗಿ ನಗುತ್ತಾ, ಒಬ್ಬರನ್ನೊಬ್ಬರು ಬಯ್ಯುತ್ತಾ ಗೇಮಿನಲ್ಲೇ ಮುಳುಗಿಬಿಟ್ಟಿದ್ದರು.  

 ಆಗ ನಮ್ಮ ಮನೆಯಲ್ಲಿದ್ದುದು ಬಿ ಪಿ ಎಲ್ ಟಿವಿ. ಆಗಿನ ಕಾಲದಲ್ಲೇ ಇಪ್ಪತ್ತು ಸಾವಿರ ಅದಕ್ಕೆ. ತುಂಬಾ ಒಳ್ಳೆ ಟಿವಿ. ಅದನ್ನು ಹಾಲಿನಲ್ಲೇ ಒಂದು ಮೂಲೆಯಲ್ಲಿ ಇಟ್ಟಿದ್ವಿ. ಟಿವಿ ಪಕ್ಕದಲ್ಲೇ ಒಂದು ಕಿಟಕಿ ಇತ್ತು. ಅಮ್ಮನಿಗೆ ಯಾವಾಗಲೂ ಅದು ತೆಗೆದಿರಲೇ ಬೇಕು. ಅದನ್ನೇನಾದರೂ ನಾವು ಮುಚ್ಚಿಬಿಟ್ಟರೆ, “ಏನಾಗಿದೇರೋ ನಿಮ್ಗೆ, ಇಂತ ಸೆಖೆಯಲ್ಲಿ ಕಿಟಕಿ ಮುಚ್ಚಿದೀರಲ್ಲ ಏನ್ ಉಸಿರ್ ಕಟ್ಟಿ ಸಾಯ್ಬೇಕು ಅಂತ ಇದಿರೇನ್ರೋಅನ್ನೋರು. ಹಾಗಾಗಿ ನಾವು ಅದನ್ನ ಮುಚ್ಚೋದೆ ನಿಲ್ಸಿದ್ವಿ. ನಮ್ಮ ಮನೆಯ ಪಕ್ಕ ಒಂದು ಸೈಟು ಖಾಲಿ ಇದ್ದು, ಅದರ ಓನರ್ ಬಂಗಳೊರಿನಲ್ಲಿದ್ರು. ಅವರನ್ನು ನಾವ್ಯಾರು ಕಂಡದ್ದೇ ಇಲ್ಲ. ಅವರು ರಿಟೈರ್ ಆದ್ಮೇಲೆ ವಾಪಾಸ್ ಬಂದು ಅಲ್ಲಿ ಮನೆ ಕಟ್ಟಬೇಕು ಅಂತ ಇದ್ರಂತೆ. ಹಾಗಾಗಿ ಸೈಟು ಹಾಗೇ ಖಾಲಿ ಬಿದ್ದು ಅದರಲ್ಲೆಲ್ಲಾ ಗಿಡಗಂಟಿಗಳು ಬೆಳೆದುಬಿಟ್ಟಿದ್ವು. ಅಲ್ಲಿಂದ ಅವಾಗವಾಗ ಮಿಡತೆಗಳು, ಸಣ್ಣ ಸಣ್ಣ ಕೀಟಗಳು ರಾತ್ರಿಯ ಹೊತ್ತು ಒಳಗೆ ಬಂದು ನನ್ನ ತಮ್ಮ ತಂಗಿಯನ್ನು ಡ್ಯಾನ್ಸು ಮಾಡಿಸುತ್ತಿದ್ದವು. ಅದರಿಂದಲೇ ನಮಗೂ ಕಿಟಕಿಗೂ ಒಂದು ತರದ ವೈಷಮ್ಯ

ಎಲ್ಲವೂ ಸರಿಯಾಗೇ ಇದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ನನ್ನ ತಮ್ಮ ಜೋರಾಗಿಅಯ್ಯಯ್ಯೋಗುಬ್ಬ..ಗುಬ್ಬಎಂದು ವದರಿಬಿಟ್ಟ. ಅದರ ಹಿಂದೆಯೇ ವಿಡಿಯೋ ಗೇಮು ಮತ್ತು ಚೇರುಗಳು ದಡದಡನೆ ಬಿದ್ದ ಸೌಂಡು ಬಂತು. ಇವನು ವದರಿದ್ದ ರೀತಿಗೆ ನಾನೊಮ್ಮೆ ನೆಟ್ಟುಬಿದ್ದು ಬಾಯಲ್ಲಿದ್ದ ಅನ್ನ ನೆತ್ತಿಗೇರಿಬಿಟ್ಟಿತು. ಅವನು ಮಾತ್ರ ಕಿರುಚಿದ್ದು ಕೇಳಿ ತಂಗಿಗೇನಾದರೂ ಆಯಿತೇ ಎಂದು ಕೆಮ್ಮುತ್ತಾ ಎದ್ದೂ ಬಿದ್ದೂ ಹಾಲಿನ ಕಡೆಗೆ ಓಡಿ ಬಂದಾಗ ಮೊದಲು ಕಂಡವಳೇ ನನ್ನ ತಂಗಿ. ಸದ್ಯ ಅವಳಿಗೇನು ಆಗಿಲ್ಲವಲ್ಲ ಎಂದು ಸಮಾಧಾನಪಟ್ಟುಕೊಂಡೆ. ಕಡೆಯಿಂದ ಅಮ್ಮನೂ ಏನೋ ಆಯಿತೆಂದು ಮಲಗಿದ್ದವರು ಎದ್ದು ಓಡಿ ಬಂದರುತಂಗಿಯನ್ನು ಕಂಡು ಅವರೂ ಸಮಾಧಾನ ಪಟ್ಟುಕೊಂಡುಏನಾಯ್ತೋ?” ಎಂದು ಏದುಸಿರು ಬಿಟ್ಟು ಕೇಳಿದರು. ನನ್ನ ತಮ್ಮ ಮಂಚದ ಮೇಲೆ ಹತ್ತಿ ಒಂದು ಮೂಲೆಯಲ್ಲಿ ಬಂಡಿಹುಳದ ತರ ಸುರುಳಿಸುತ್ತಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತ ಮೇಲೆ ಏನನ್ನೋ ನೋಡುತ್ತಾ  ಕುಂತುಬಿಟ್ಟಿದ್ದ. ಇವನಿಗ್ಯಾವ ದೆವ್ವ ಮೆಟ್ಟಿಕೊಳ್ತಾಪ್ಪ ಎಂದು ನಾನುಲೇ, ಏನಾಯ್ತೋಎಂದು ರೇಗಿದೆ. ಅವನ ಬದಲು ನನ್ನ ತಂಗಿಅಣ್ಣ ಗುಬ್ಬಿ ಒಳಗೆ ಬಂದ್ಬಿಟ್ಟಿದೆಅಂದ್ಲು.

 ಅಯ್ಯೋ ಇವನ ಜನ್ಮಕ್ಕಿಷ್ಟು, ಬರೀ ಒಂದು ಗುಬ್ಬಿ ನೋಡಿ ಇವನು ಹೀಗೆ ಹೆದರಿಕೊಂಡು ಗುಬ್ಬ ಗುಬ್ಬ ಎಂದು ಕಿರುಚಿದ್ನ ಎಂದು ನಗು ಬಂತು. ನಾನು ಮುಂದೆ ಹೋಗಿ ತಂಗಿಗೆಎಲ್ಲಿ ಪಾಪಿ ಗುಬ್ಬಿ?” ಎಂದೇ. ಅವಳನ್ನು ನಾನು ಚಿಕ್ಕವಳಿದ್ದಾಗಲಿಂದಲೂ ಪಾಪಿ ಎಂದೇ ಕರೆಯೋದು. ಅವಳು ಹುಟ್ಟಿದಾಗ ಪಾಪು ಎಂತಿದ್ದೆ, ಅವಳು ಬೆಳೆದಮೇಲೆ ಪಾಪು ಹೋಗಿ ಪಾಪಿ ಆಯಿತು. ಅವಳು ನಿಂತಲ್ಲಿಂದಲೇ ಮೇಲೆ ಹಾಕಿದ್ದ ದೇವರ ಫೋಟೋ ಕಡೆಗೆ ತೋರಿಸಿಅದರ ಹಿಂದಕ್ಕೆ ಹೋಯ್ತುಅಂದಳು. ನಾನು ಅದು ಕಾಣಲೆಂದು ಇನ್ನೂ ಹಿಂದಕ್ಕೆ ಹೋಗಿ ನೋಡಿದೆ. ಪಾಪ ಗುಬ್ಬಿ ಇವನು ಕಿರುಚಿದ ರೀತಿದ ಹೆದರಿ ನಡುಗುತ್ತಾ  ಫೋಟೋ ಹಿಂದೆ ಕೂತು ಪಿಳ ಪಿಳ ಕಣ್ಣು ಬಿಡುತ್ತಿತ್ತು. ನನ್ನ ತಮ್ಮ ಕಿರುಚಿದ ರೀತಿಗೆ ಅದ್ಯಾಕೆ ಸತ್ತೇ ಹೋಗಲಿಲ್ಲ ಎಂಬುದು ಒಂದು ಚಿದಂಬರ ರಹಸ್ಯವಾಗಿಬಿಟ್ಟಿದೆ. ನನಗೆ ತಮ್ಮನನ್ನು ನೋಡಿ ನಗಬೇಕೋ, ಅಥವಾ ಗುಬ್ಬಿಯನ್ನು ನೋಡಿ ನಗಬೇಕೋ ತಿಳಿಯದಾಯ್ತು. ಗುಬ್ಬಿ ನೋಡಿದರೆ ನನ್ನ ಮುಷ್ಟಿಯ ಅರ್ಧದಷ್ಟೂ ಇರಲಿಲ್ಲ, ಏನೋ ದಾರಿತಪ್ಪಿ ಕಿಟಕಿಯ ಮೂಲಕ ಒಳಗೆ ಬಂದುಬಿಟ್ಟಿದೆ. ಅದು ಹಾರಿಬರುವಾಗ ಮೊದಲು ಕಂಡದ್ದೇ ನನ್ನ ತಮ್ಮ. ಇವನ ದಡೂತಿ ದೇಹಕ್ಕೆ ಅದು ಡಿಕ್ಕಿ ಹೊಡೆಯದಂತೆ ಚೆನ್ನಾಗಿ ಡ್ರೈವಿಂಗ್ ಮಾಡಿಕೊಂಡು ಹೇಗೋ ಹಾರಿ ಹೋಗಿ ಫೋಟೋ ಹಿಂದೆ ಕೂತಿದೆ. ಅದೇ ಸಮಯಕ್ಕೆ ಇವನಿಗೂ ಅದು ಕಂಡಿದೆ. ಆದರೆ ಇವನು ಅದರ ನೂರರಷ್ಟು ದಪ್ಪ ಇದ್ದರೂ ಅದನ್ನು ನೋಡಿ ಹೇತುಕೊಳ್ಳುವ ಹಾಗೇ ಕಿರುಚಾಡಿ ನಮ್ಮನ್ನೆಲ್ಲ ಹೆದರಿಸಿಬಿಟ್ಟಿದ್ದ. ಇವನಿಗಿಂತ ನನ್ನ ತಂಗಿಯೇ ಪರವಾಗಿಲ್ಲ, ಒಂದಿಷ್ಟೂ ಕಿಮಿಕ್ ಅನ್ನದೆ ಸುಮ್ಮನೆ ಎದ್ದು ಓಡಿ ಬಂದಿದ್ದಳು. ಅದಾಗಿ ತುಂಬಾ ಹೊತ್ತು ಗುಬ್ಬಿ ಅಲ್ಲಾಡದೆ ಫೋಟೋ ಹಿಂದೆಯೇ ಕುಳಿತು ಸಮಾಧಾನ ಪಟ್ಟುಕೊಂಡಿತು. ಕೊನೆಗೆ ನನ್ನ ತಮ್ಮನನ್ನು ಹಾಲಿನಿಂದ ಅಮ್ಮ ರೂಮಿಗೆ ಕರೆದುಕೊಂಡು ಹೋದಮೇಲೆ ಅದು ಮತ್ತದೇ ಕಿಟಕಿಯಿಂದ ಹಾರಿಹೋಯಿತು


ತೋಟದ ಮನೆ : ಭಾಗ-2

ತೋಟದ ಮನೆ ಭಾಗ-೨ ಪ್ರೇತದ ಅಟ್ಟಹಾಸ ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದ...