ಬೆಳ್ಳಂಬೆಳಗ್ಗೆ ಏನೋ ಜೋರಾಗಿ ಶಬ್ದವಾದಂತಾಗಿ ನನಗೆ ಎಚ್ಚರವಾಯಿತು. ನಾನು ಹಾಸಿಗೆಯಲ್ಲಿಯೇ ಅಸಹನೀಯವಾಗಿ ಹೊರಳಾಡಿ ಏನದು ಶಬ್ದ ಎನ್ನುವ ಹಾಗೆ ಅತ್ತಿತ್ತ ನೋಡಿದೆ. ನನ್ನದೇ ಅಲರಾಮು ನನ್ನನ್ನು ಎಚ್ಚರಿಸಲು ಘಂಟೆ ಬಡಿದಂತೆ ಬಡಿದುಕೊಳ್ಳುತ್ತಿತ್ತು. ನನ ಕಣ್ಣೂ ಬಿಡಲು ಆಗದಂತಹ ನಿದ್ರೆ. ಮಲಗಿದ್ದಲ್ಲಿಂದಲೇ ಪಕ್ಕದಲ್ಲಿದ್ದ ಟೇಬಲಿನ ಮೇಲೆ ಕೈಯಾಡಿಸಿ ಅಲಾರಾಮಿಗಾಗಿ ತಡಕಾಡಿದೆ. ಸಮಯ ಸರಿದಷ್ಟೂ ಅದರ ಸ್ವರ ತಾರಕಕ್ಕೇರಿ ನನ್ನ ನಿದ್ರೆಯನ್ನು ಇನ್ನೂ ಹಾಳುಮಾಡುತ್ತಿತ್ತು. ನಾನೆಷ್ಟೇ ತಡಕಾಡಿದರೂ ಅಲರಾಮು ಕೈಗೆ ಸಿಗದಾಗ, ತಲೆಯೆತ್ತಿ ಒಂದೇ ಕಣ್ಣಿನಲ್ಲಿ ಆ ಧರಿದ್ರದ ಅಲರಾಮನ್ನು ಎಲ್ಲಿದೆ ಎಂದು ಹುಡುಕಾಡಿದೆ. ಅದು ಟೇಬಲಿನ ಇನ್ನೊಂದು ಮೂಲೆಯಲ್ಲಿ ನನ್ನ ಕೈಗೆಟುಕದಷ್ಟು ದೂರದಲ್ಲಿದ್ದುದು ನನ್ನನ್ನು ಕಂಡೊಡನೆ ಮತ್ತಷ್ಟು ಜೋರಾಗಿ ಕಿರುಚಾಡಲಾರಂಭಿಸಿತು. “ಅಯ್ಯೋ ಇದರ ಮನೆ ಹಾಳಾಗ!!!” ಎಂದು ಮೂದಲಿಸಿದೆ. ನನ್ನ ಮಾತಿಗೆ ಎಳ್ಳಷ್ಟೂ ಬೆಲೆಕೊಡದೆ, ನನ್ನನ್ನು ಹಾಸಿಗೆಯಿಂದ ಮೇಲೇಳಿಸಲೇಬೇಕೆಂದು ಛಲಬಿಡದ ತ್ರಿವಿಕ್ರಮನ ಹಾಗೆ ಅದು ಮತ್ತೂ ಬಡಿದುಕೊಳ್ಳುತ್ತಿತ್ತು. ಅಷ್ಟರಲ್ಲಿ ಪಕ್ಕದ ಮನೆಯ ಅಭಿ ಏನೋ ಜೋರಾಗಿ ಹೇಳಿದ ಹಾಗೆನ್ನಿಸಿ “ಇವನ್ಯಾಕೆ ಇಷ್ಟು ಬೇಗ ಎದ್ದಿದ್ದಾನೆ” ಎಂದು ತಲೆ ಎತ್ತಿ ನೋಡಿದೆ. ಅಲರಾಮಿನ ವದಾರಾಟ ಬಿಟ್ಟರೆ ಮತ್ತೇನು ಕೇಳಿಸಲಿಲ್ಲ. ಇದು ಇಷ್ಟಕ್ಕೇ ನಿಲ್ಲಿಸಲ್ಲ ಅಂತ ಗೊತ್ತಾದ ಮೇಲೆ “ನಿನ್ನ ಇವತ್ತು ಕೊಂದೇ ತಿರುತ್ತೇನೆ” ಎಂದು ಶಪಥ ಮಾಡಿ ಹಾಸಿಗೆಯಿಂದ ನೆಗೆದು ನಿಂತೆ. ನನ್ನನ್ನು ನೋಡಿ ಅಲರಾಮು “ಇದೆ ಏನು ನಿನ್ನ ಪರಾಕ್ರಮ!” ಎಂದು ಕುಹಿಕಿ ನಕ್ಕಿತು. ನಾನು ಬಬ್ರುವಾಹನ ಅರ್ಜುನನ ರುಂಡ ಹಾರಿಸಿದಂತೆ ಇದರ ರುಂಡವನ್ನೂ ಹಾರಿಸಿಯೇ ತಿರುತ್ತೇನೆ ಎಂದು ಅದನ್ನು ನೆಲಕ್ಕೆಸೆಯಲು ಹಿಡಿದು ಮೇಲೆತ್ತಿದಾಗ ತಕ್ಷಣ ಕಂಡದ್ದು, ಸಮಯ ಬೆಳಗಿನ ಜಾವ 4:30 !! ಇಷ್ಟು ಹೊತ್ತಲ್ಲಿ ಇದು ಯಾಕೆ ಹೀಗೆ ಬಡುಕೊಳ್ಳ್ಳುತ್ತಿದೆ ಎಂದು ಯೋಚಿಸುತ್ತಾ ಅದನ್ನು ಕೊಲ್ಲುವ ಯೋಜನೆಯನ್ನು ಮುಂದೆ ಹಾಕಿದೆ. ನಿದ್ರೆಯ ಜೋಂಪು ಇಳಿದು ಸರಿಯಾಗಿ ನೆನೆಪು ಮಾಡಿಕೊಂಡಾಗ ರಾತ್ರಿ ನಾನೇ 4:00 ಗಂಟೆಗೆ ಅಲರಾಮು ಇಟ್ಟದ್ದು ನೆನಪಾಯ್ತು. “ಅಂದರೆ ನಾನು ಇದರ ಘಂಟಾಘೋಷದ ನಡುವೆಯೂ 30 ನಿಮಿಷ ಮಲಗಿದ್ದೆನೇ?” ಎಂದು ನನ್ನ ಮೇಲೆ ನನಗೆ ಬೇಸರ ಬಂತು. “ನಿನ್ನನ್ನು ಇನ್ನೊಂದು ದಿನ ಖಂಡಿತವಾಗಿಯೂ ಕೊಲ್ಲುತ್ತೇನೆ” ಎಂದು ಅಲರಾಮಿಗೆ ಎಚ್ಚರಿಕೆ ಕೊಟ್ಟು ಮತ್ತೆ ಟೇಬಲ್ಲಿನ ಮೇಲಿಟ್ಟೆ.
ಅಂದು ಭಾನುವಾರ. ಹಿಂದಿನ ದಿನ ರಾತ್ರಿ ನಾನು ಮತ್ತೂ ಅಭಿ ಬೆಳ್ಳಂಬೆಳಗ್ಗೆ ಪಶ್ಚಿಮ ಘಟ್ಟಗಳ ನಡುವೆ ಸೂರ್ಯೋದಯ ನೋಡಲು ಹೋಗೋಣವೆಂದು ನಿರ್ಧರಿಸಿದ್ದೆವು. ಹಾಗಾಗಿಯೇ ಅಲರಾಮು ನನ್ನನ್ನು ಎಚ್ಚರಗೊಳಿಸಿದ್ದು. “ಪಾಪ, ಅಂತಹ ಒಳ್ಳೆಯ ಮಿತ್ರನನ್ನು ಅನ್ಯಾಯವಾಗಿ ಕೊಂದುಬಿಡುತ್ತಿದ್ದೆನಲ್ಲ” ಎಂದು ದುಃಖಿಸಿದೆ. ಹಿಂದೆಯೇ “ಒಹ್... ಇದರ ಸದ್ದಿಗೇನ ಅಭಿ ಎದ್ದಿರೋದು!" ಎಂದು ನಕ್ಕೆ. ಅಲರಾಮಿಗೆ ಬೇಜಾರಾದೀತೆಂದು ಸಾರಿ ಕೇಳಿ ಮುಂದುವರೆದೆ. ನಾನು ಮತ್ತೂ ಅಭಿ ಹಲವಾರು ತಿಂಗಳುಗಳಿಂದ ಈ ಸೂರ್ಯೋದಯ ನೋಡಲಿಕ್ಕೆ ಹೋಗೋಣವೆಂದು ಎಷ್ಟೋ ಬರಿ ತೀರ್ಮಾನ ಮಾಡಿ, ಎದ್ದೇಳಲಾಗದೆ ಅದು ಮತ್ತೆ ಮುಂದಿನ ವಾರಕ್ಕೆ ಮುಂದೂಡಲಾಗುತ್ತಿತ್ತು. ಇಬ್ಬರೂ ಕುಂಭಕರ್ಣನ ವಂಶಸ್ಥರೇ ಆದ್ದರಿಂದ ನಾವು ಅಲರಾಮನ್ನು ಯಾವತ್ತೂ ಇಟ್ಟವರೇ ಎಲ್ಲ. ಆದರೆ ನಿನ್ನೆ ಮಾತ್ರ ಇಬ್ಬರೂ ಇದೇ ನಮ್ಮ ಅಂತಿಮ ತೀರ್ಮಾನ ಎನ್ನುವಂತೆ ಅಲರಾಮು ಇಟ್ಟು ಮಲಗಿದ್ದೆವು. ಸರಿ, ದೇವರ ದಯೆಯಿಂದ ಕೊನೆಗೂ ಎಚ್ಚರವಾಯಿತಲ್ಲ ಎಂದುಕೊಂಡು ಅಭಿಯನ್ನು ಮಾತನಾಡಿಸಲು ಬಾಗಿಲು ತೆರೆದವನೇ ನನ್ನ ಮುಂದಿರುವ ಭಯಾನಕ ಧೃಶ್ಯ ನೋಡಿ ಗರಬಡಿದವನಂತೆ ಅಲ್ಲೇ ನಿಂತುಕೊಂಡು ಬಿಟ್ಟೆ. ಹೊರಗಡೆಯೆಲ್ಲಾ ಇನ್ನೂ ರಾತ್ರಿ ಹನ್ನೆರೆಡು ಗಂಟೆಯಷ್ಟೇ ಕತ್ತಲಿತ್ತು. ಜೀವನದಲ್ಲಿ ಇಷ್ಟು ಬೇಗ ಎದ್ದದ್ದೇ ಇದೇ ಮೊದಲಲ್ಲವೇ, ಕತ್ತಲನ್ನು ಕಂಡು ಸ್ವಲ್ಪ ದಂಗಾಗಿದ್ದೆ. ನಿದ್ರೆಯಂತೂ ಹೋಗಿಯಾಗಿತ್ತು, ಇನ್ನು ಹೇಗಾದರೂ ಮಾಡಿ ಇದೊಂದು ಬಾರಿ ಸೂರ್ಯೋದಯ ನೋಡಿಯೇ ಬಂದುಬಿಡೋಣ ಎಂದು ಪಕ್ಕದಲ್ಲೇ ಇದ್ದ ಅಭಿ ಮನೆಕಡೆ ಹೊರಟೆ.
ಅವನ ಮನೆ ಬಾಗಿಲಿನ ಮುಂದೆ ನಿಂತು ಬೆಲ್ಲು ಮಾಡಿದೆ. ಏನು ಆಗಲೇ ಇಲ್ಲ. ಅಂದರೆ ಏನು ಶಬ್ದವೇ ಬರಲಿಲ್ಲ ಎಂದರ್ಥ. ಸರಿಯಾಗಿ ಒತ್ತಲಿಲ್ಲವೇನೋ ಎಂದುಕೊಂಡು ಮತ್ತೆ ಬೆಲ್ಲು ಮಾಡಿದೆ. ಉಹುಂ, ಈಗಲೂ ಹಿಂದಿನಷ್ಟೇ ನಿಶಬ್ದ. ನಿನ್ನೆ ರಾತ್ರಿ ಊಟಕ್ಕೆ ಹೋಗುವಾಗ ಇದು ಸರಿಯಾಗೇ ಇದ್ದುದು ನೆನಪಾಯ್ತು. ಹೋಗಲಿ ಬಿಡು ಎಂದು ಒಮ್ಮೆ ಬಾಗಿಲು ಬಡಿದೆ. ಈ ಬಾರಿ ಶಬ್ದ ಬಂದಾಗ ಖುಷಿಯಾಯ್ತು. ನನ್ನಷ್ಟಕ್ಕೆ ನಾನೇ "ಇನ್ನೂ ಕಿವಿ ಸರಿಯಾಗೇ ಇದೆ" ಎಂದುಕೊಂಡೆ. ಆದರೆ ಅಭಿ ಮನೆಯೊಳಗಿಂದ ಏನು ಶಬ್ದ ಬರಲಿಲ್ಲ. ಮತ್ತೊಮ್ಮೆ ಜೋರಾಗಿ ಬಾಗಿಲು ಕುಟ್ಟಿದೆ. ಮತ್ತದೇ ಉತ್ತರ. ಒಮ್ಮೆ ಬಾಗಿಲಿಗೆ ಜಾಡಿಸಿ ಹೊಡೀಬೇಕೆನ್ನಿಸಿತು. ಬೇರೆ ದಾರಿಕಾಣದೆ, ಅಂತಹ ಸರಿಹೊತ್ತಿನಲ್ಲಿ ಒಮ್ಮೆ ಜೋರಾಗಿ “ಅಭಿ…” ಎಂದು ಕರೆದೆ. ಉತ್ತರವಿಲ್ಲ. ಇನ್ನೊಮ್ಮೆ ಕರೆದೆ. ಏನು ಪ್ರಯೋಜನಾಗಲಿಲ್ಲ. ಇನ್ನೂ ಜೋರಾಗಿ ಕರೆದರೆ ಅಕ್ಕಪಕ್ಕದ ಮನೆಯವರು ಬಾಗಿಲು ತೆರೆದಾರೆಂದು ನಿಧಾನಕ್ಕೆ ಹೆಚ್ಚು ಸದ್ದು ಮಾಡದೇ ಕಳ್ಳನಂತೆ ಮನೆಗೆ ವಾಪಸ್ಸು ಹೋದೆ. ಬೆಡ್ಡಿನ ಮೂಲೆಯಲ್ಲಿದ್ದ ಮೊಬೈಲನ್ನು ಕೈಗೆತ್ತಿಕೊಂಡು ಅವನಿಗೊಂದು ಕರೆ ಮಾಡಿದೆ. “ನೀವು ಕರೆ ಮಡಿದ ಗ್ರಾಹಕರು ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿದ್ದಾರೆ” ಎಂದು ಬಂತು. ಬಡ್ಡೀಮಗ ಕೈಕೊಟ್ಟ ಎಂದು ಗ್ಯಾರಂಟಿಯಾಯ್ತು. ನಿನ್ನೆ ರಾತ್ರಿ “ನೀನೇನು ತಲೆ ಕೆಡಸಿಕೊಳ್ಬೇಡ, ನಾನೇ ಬಂದು ನಿನ್ನನ್ನ ಎದ್ದೇಳಿಸ್ತೀನಿ" ಎಂದು ಬಡಾಯಿ ಕೊಚ್ಕೊಂಡಿದ್ದ ಪಾಪಿ ಇವನೇನಾ ಎಂದು ಕೋಪಬಂತು. ನಾನು ಇಷ್ಟು ಕಷ್ಟ ಪಟ್ಟು ಎದ್ದಿರುವಾಗ ಇವನು ನನಗೆ ಇಂತಹ ಮೋಸ ಮಾಡಬಹುದೇ!! ಬಡವ ರಾಸ್ಕಲ್ ಎಂದು ಶಪಿಸುತ್ತಾ ಮೊಬೈಲು ತೆಗೆದುಕೊಂಡು ನನಗೆ ತಿಳಿದಿರುವ ಎಲ್ಲಾ ಸಂಸ್ಕೃತ ಪದಗಳನ್ನು ಉಪಯೋಗಿಸಿ ಅವನಿಗೆ ಒಂದು ಚೆಂದದ ಮೆಸೇಜ್ ಕಳಿಸಿದೆ. ಮೆಸೇಜು ಓದಿದವನಿ ಒಂದು ಕಣ್ಣೇ ಹೋಗಬೇಕು ಇಲ್ಲ ಹಾರ್ಟ್ ಅಟ್ಯಾಕ್ ಆಗಬೇಕು.
ಅಲ್ಲಿಯೇ ಇದ್ದ ಕುರ್ಚಿಯ ಮೇಲೆ ಕುಳಿತು "ಮುಂದೇನು?" ಎಂದು ನನ್ನನ್ನು ನಾನೇ ಕೇಳಿಕೊಂಡೆ. ಪಕ್ಕದಲ್ಲಿದ್ದ ಬೆಡ್ಡು ನನ್ನನ್ನು "ಮುತ್ತೊಂದ ನೀಡುವೆನು ಹತ್ತಿರ ಹತ್ತಿರ ಬಾ!” ಎಂದು ಮೋಹಿನಿ ಹಾಗೆ ಕರೆಯುತ್ತಿತ್ತು. ಮಲಗಿಬಿಡೋಣ ಎನ್ನಿಸಿದರೂ "ಛೆ ಛೆ! ಹೀಗೆಲ್ಲ ವೀಕಾಗಬಾರದು" ಎಂದು ನನಗೆ ನಾನೇ ಹೇಳಿಕೊಂಡು ಮತ್ತೊಂದು ಕಡೆ ತಿರುಗಿ ಕುಳಿತೆ. "ಹೇಗೋ ಎದ್ದದ್ದಾಗಿದೆ, ಮತ್ತೆ ಮಲಗಿದರೆ ಏನನ್ನು ಸಾಧಿಸಿದಹಾಗಾಯಿತು?? ಒಬ್ಬನೇ ಹೋಗಿಬರೋಣ" ಎಂದು ನನ್ನನ್ನು ನಾನೇ ಓಲೈಸಿದೆ. ಇತ್ತ ಟೇಬಲಿನ ಮೇಲಿದ್ದ ಅಲರಾಮು ನನ್ನ ತೀರ್ಮಾನಕ್ಕೆ ಅವಕ್ಕಾದಂತೆ ದೊಡ್ಡ ಕಣ್ಣುಗಳಿಂದ ನನ್ನನ್ನೇ ನೋಡುತ್ತಿರುವಂತೆ ಅನ್ನಿಸಿತು. “ನನ್ನನ್ನು ಏನಂದುಕೊಂಡಿದ್ದೀಯ!” ಎಂದು ಅದಕ್ಕೊಂದು ಬಿಂಕದ ನಗೆ ಕೊಟ್ಟು ಎಂದು ರೆಡಿ ಆಗಲಿಕ್ಕೆ ಹೊರಟೆ.
ನಾನು ಮನೆ ಬಾಗಿಲಿಗೆ ಬೀಗ ಹಾಕಿ ತಿರುಗಿ ನೋಡಿದಾಗ ಇನ್ನೂ ಕಗ್ಗತ್ತಲು ಕವಿದೇ ಇತ್ತು. ನಾನು ಮತ್ತೊಮ್ಮೆ ಮನಸ್ಸು ಬದಲಾಗುವ ಮೊದಲು ಅಲ್ಲಿಂದ ಹೊರಡಲು ಬೈಕ್ ಸ್ಟಾರ್ಟ್ ಮಾಡಿದೆ. ಚಳಿಗೋ ಏನೋ ಎಂಬಂತೆ ಬೈಕ್ ಒಮ್ಮೆ ಧುಪ್ ಧುಪ್ ಎಂದು ಮತ್ತೆ ಆಫ್ ಆಯಿತು. ಹೇಳಿಕೊಳ್ಳುವಂತಹ ಚಳಿಯೇನು ಇಲ್ಲದಿದ್ದರಿಂದ ನಾನು ಎದೆಗುಂದದೆ ಮತ್ತೆ ಅದನ್ನು ಸ್ಟಾರ್ಟ್ ಮಾಡಿದೆ. ಮತ್ತೊಂದೆರಡು ಬರಿ ಹಾಗೆ ಧುಪ್ ಧುಪ್ ಎಂದು ಕೊನೆಗೊಮ್ಮೆ ಸ್ಟಾರ್ಟ್ ಆಯಿತು. ಕಿವಿಗೆ ಗಾಳಿ ಹೋಗದಂತೆ ಟೋಪಿ ಹಾಕಿ ಅದರ ಮೇಲೆ ಹೆಲ್ಮೆಟ್ ಹಾಕಿ ಹೊರಟೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಎಲ್ಲೋ ಇರಬೇಕಿದ್ದ ಮೋಡವೊಂದು ಬಂದು ನನ್ನೆದೆರು ರಸ್ತೆ ಮೇಲೇ ನಿಂತಂತೆ ಮಂಜು ಕವಿಯಿತು. ನನ್ನ ಬೈಕಿನ ಬೆಳಕು ಅದನ್ನು ಭೇದಿಸುವಲ್ಲಿ ವಿಫಲವಾಗಿ ಬೈಕಿನ ವೇಗ ಕುಂಠಿತಗೊಳಿಸಬೇಕಾಯಿತು. ನಾನು ಆಮೆ ವೇಗದಲ್ಲಿ ಚಲಿಸುತ್ತಿದ್ದೆ. ಸರಿಸುಮಾರು ನಲವತ್ತು ನಿಮಿಷಗಳ ತರುವಾಯ ನಾನು ತಲುಪಬೇಕೆಂದಿದ್ದ ಜಾಗ ಸೇರಿದೆ. ಅದೊಂದು ಕೈಕಂಬದಿಂದ ಸ್ವಲ್ಪ ದೂರದಲ್ಲಿ ರಸ್ತೆಯಿಂದ ಎಡಕ್ಕೆ ನೂರು ಮೀಟರು ನಡೆದರೆ ಸಿಗುವ ಸಣ್ಣ ದಿಣ್ಣೆಯಂತಹ ಸ್ಥಳ. ಅಗಾಧವಾಗಿ ಕವಿದಿದ್ದ ಮಂಜು ನನ್ನನ್ನು ಬೈಕಿನಿಂದ ಇಳಿಯುವ ಮೊದಲೇ ನಿರುತ್ಸಾಹಗೊಳಿಸಿತು. ಎರಡು ಮೂರೂ ಮೀಟರು ನಂತರ ಏನು ಕಾಣುತ್ತಲೇ ಇರಲಿಲ್ಲ. ನಾನು “ಬಂದದ್ದೇ ಉಂಟು” ಎಂದು ಮೈಕೊಡವಿ ಬೈಕಿನಿಂದ ಇಳಿದು ದಿಣ್ಣೆಯ ಕಡೆ ಹೊರಟೆ. ಆಗ ಸಮಯ ಆರಕ್ಕೆ ಹತ್ತು ನಿಮಿಷ. ದಿಣ್ಣೆಯ ತುದಿಗೆ ತಲುಪಿದಾಗ ಮೋಡವೊಂದು ನನಗಿಂತ ಮೊದಲೇ ಬಂದು ಕಾದು ಕುಳಿತಂತೆ ಕಂಡಿತು. ದಿಣ್ಣೆಯ ಮತ್ತೊಂದು ಕಡೆ ಪ್ರಪಾತವೊಂದು ಮೈಚಾಚಿ ಮಲಗಿತ್ತು. ಮೊದಲೇ ಮಂಜಿನ ಕಾರಣ ಏನೂ ಕಾಣಿಸುತ್ತಲೇ ಇರಲಿಲ್ಲ, ಏನಾದರೂ ಕಾಲು ಜಾರಿದ್ದೆ ಆದರೆ, ಅದೇ ನನಗೆ ಹರಿಶ್ಚಂದ್ರ ಘಾಟ್ ಆಗುವುದರಲ್ಲಿ ಅನುಮಾನವೇ ಇರಲಿಲ್ಲ. ಹಾಗಾಗಿ ನಾನು ಕೊಕ್ಕರೆಯಂತೆ ನೆಲವನ್ನು ಕೆದಕಿ ಕೆದಕಿ ನಡೆಯಬೇಕಾಯಿತು.
ನಾನು ಅಂತೂ ಇಂತೂ ಗುರಿ ತಲುಪಿದಾಗ ಮಂಜು ನಿಧಾನವಾಗಿ ತಿಳಿಯಾಗುತ್ತಿತ್ತು. ಸೂರ್ಯ ಉದಯಿಸುವ ತನಕ ಬ್ಯಾಗಿನಿಂದ ಕ್ಯಾಮೆರಾ ತೆಗೆದು ಆ ಬೆಳಕಿನಲ್ಲಿ ಏನೇನು ಕಾಣಿಸುತ್ತಿತ್ತೋ ಅದರದ್ದೆಲ್ಲಾ ಫೋಟೋ ತೆಗೆದೆ. ಅಲ್ಲೊಂದು ಬಸವನಹುಳು ನಿಧಾನವಾಗಿ ಎತ್ತಲೋ ಸಾಗುತ್ತಿತ್ತು. ಬೇರೇನೂ ಕೆಲಸವಿಲ್ಲದೆ ಅದನ್ನೇ ತುಂಬಾ ಹೊತ್ತು ಹಾಗೇ ನೋಡುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಬೆಟ್ಟದ ಒಳಗೆ ಹೂತಿದ್ದ ರವಿರಾಯ ನಿಧಾನವಾಗಿ ತಲೆಯೆತ್ತಲಾರಂಭಿಸಿದ. ತುಂಬಾ ಹೊತ್ತು ಬರೀ ಬೆಳಕಿನ ಕಿರಣಗಳೇ ಕಾಣಿಸಿದವೇ ಹೊರತು ಸೂರ್ಯನ ಅಡ್ದ್ರೆಸ್ಸೇ ಇರಲಿಲ್ಲ. ಪಾಪ ಅವನೂ ಚಳಿಗೆ ಹೊದ್ದು ಮಲಗಿರಬೇಕು ಎಂದು ಮತ್ತೊಮ್ಮೆ ಬಸವನಹುಳುವಿನ ಹತ್ತಿರ ಬಂದು ಕುಶಲೋಪಚಾರಿ ಆರಂಭಿಸಿದೆ. ನಾನು ಎಷ್ಟೇ ಮಾತನಾಡಿಸಿದರು ಅದು ಬಹಳ ತುರ್ತು ಕೆಲಸ ಇದೆಯೆಂಬಂತೆ, ತನ್ನ ತಲೆಯ ಮೇಲಿದ್ದ ಎರಡು ಕೊಂಬುಗಳನ್ನು ಮೇಲಕ್ಕೂ ಕೆಳಕ್ಕೂ ಮಾಡುತ್ತಾ ಮಂದಗತಿಯಲ್ಲಿ ನಡೆಯುತ್ತಲೇ ಇತ್ತು. ನಾನು "ಪಾಪ, ಮನೆಯಲ್ಲೇನೋ ಪ್ರಾಬ್ಲಮ್ಮು ಅನ್ಸುತ್ತೆ" ಎಂದು ಸುಮ್ಮನಾದೆ. ಅತ್ತ ಸೂರ್ಯನೂ ಇಲ್ಲ, ಇತ್ತ ಬಸವನೂ ಇಲ್ಲ ಎಂಬಂತಾಗಿ ನಾನು ಅಲ್ಲೇ ಇದ್ದ ಸಣ್ಣ ಕಲ್ಲೊಂದರ ಮೇಲೆ ಚಕ್ಕಳುಬಕ್ಕಳು ಹಾಕಿ ಕುಳಿತುಕೊಂಡೆ. ಒಮ್ಮೆ ಟೈಮೆಷ್ಟು ಅಂತ ವಾಚ್ ನೋಡುವುದು, ಇನ್ನೊಮ್ಮೆ ಬೆಟ್ಟದ ಅಂಚು ಇಣುಕುವುದು, ಮತ್ತೊಮ್ಮೆ ಇನ್ನು ಅಲ್ಲೇ ಹೋಗುತ್ತಿದ್ದ ಬಸವನಹುಳು ನೋಡುವುದೇ ನನ್ನ ಕೆಲಸವಾಯ್ತು.
ಸುಮಾರು ಆರು ಗಂಟೆ ಐದು ನಿಮಿಷಕ್ಕೆ ಸರಿಯಾಗಿ ಸೂರ್ಯ ದರ್ಶನ ಕೊಡಲಾರಂಭಿಸಿದ. ಅದಕ್ಕೆ ಅನುಗುಣವಾಗಿ ಮಂಜೂ ಕರಗುತ್ತಿತ್ತು. ಬಸವನಹುಳು ನನ್ನ ಹತ್ತಿರ ಮಾತನಾಡಲಿಲ್ಲ ಎಂದು ಬೇಸರದಿಂದ ಕುಳಿತಿದ್ದ ಕಲ್ಲಿನ ಮೇಲಿದ್ದ ಮಂಜೆಲ್ಲಾ ನನ್ನ ಪ್ಯಾಂಟಿಗೆ ಹತ್ತಿಕೊಂಡು ಆಗಬಾರದ ಜಾಗವೆಲ್ಲ ಒದ್ದೆಯಾಗಿತ್ತು. ನಾನು ರಾತ್ರಿಯ ವೇಳೆಯಾದ್ದರಿಂದ ಕಲ್ಲು ತಣ್ಣಗಿದೆ ಎಂದುಕೊಂಡು ಬಹಳ ಹೊತ್ತು ಹಾಗೇ ಕುಳಿತಿದ್ದರಿಂದಲೋ ಏನೋ ಹಿಂದಿನಿಂದ ನನ್ನ ಪ್ಯಾಂಟು ಒದ್ದೆಯಾಗಿ ಅಲ್ಲೊಂದು ಗೊತ್ತಿಲ್ಲದ ದೇಶದ ಮ್ಯಾಪು ಮೂಡಿತ್ತು. "ಅಯ್ಯಯ್ಯೋ, ಇದೆಂತಹ ಕ..ರ್ಮ” ಎಂದು ಕಲ್ಲಿಗೂ ಶಾಪ ಹಾಕಿ ಮುಂದಿನ ಅಭೂತಪೂರ್ವ ಕ್ಷಣಗಳಿಗೆ ಕಾದೆ. ಆಗ ಬೆಟ್ಟದ ಹಿಂದಿನಿಂದ ಸೂರ್ಯ ಕೆಂಪಗಿನ ಉಂಡೆಯೊಂದು ಕತ್ತಲಿನಿಂದ ಮೇಲೆದ್ದಂತೆ ಉಜ್ವಲಿಸುತ್ತ ಹೊರಬಂದ. ಎಂತಹಾ ಅದ್ಭುತ ಕ್ಷಣ! ಕವಿಗಳಿಗೆ ರಸದೌತಣ. ನನಗರಿವಿಲ್ಲದಂತೆಯೇ ನಾನು ಮುಗುಳ್ನಕ್ಕೆ. ಅದರ ಆನಂದ ಸವೆಯುತ್ತಾ ನನ್ನ ಕ್ಯಾಮೆರವನ್ನೇ ಸಂಪೂರ್ಣವಾಗಿ ಮರೆತುಬಿಟ್ಟೆ. ಹಿಂದೆಯೇ ಕ್ಯಾಮೆರಾ ನೆನಪಾದೊಡನೆಯೇ ದಡದಡನೆ ಅದರ ಮುಖಕ್ಕೆ ಹಾಕಿದ್ದ ಕ್ಯಾಪು ತೆಗೆದು ಕ್ಲಿಕ್ ಕ್ಲಿಕ್ ಎಂದು ಹಲವಾರು ಫೋಟೋ ತೆಗೆದೆ. ಎಷ್ಟು ಫೋಟೋ ತೆಗೆದರು ಸಮಾಧಾನವೇ ಆಗಲಿಲ್ಲ. ಅಂತಹ ರಮಣೀಯ ಸೌಂದರ್ಯದ ಮಡಿಲಲ್ಲಿ ನಿಂತಿದ್ದೆ. ಆ ಸೌಂದರ್ಯವನ್ನು ಮನದಣಿಯೆ ನೋಡಿ ಮಣಿದೆ.
ಆಗೊಮ್ಮೆ ನನ್ನ ಬೈಕು ನೆನಪಾಗಿ ಅದು ನಾನು ನಿಲ್ಲಿಸಿದ ಹತ್ತಿರವೇ ಇದೆಯೋ ಎಂದು ತಿರುಗಿ ನೋಡಿದಾಗ, ಅದರ ಹಿಂದೊಂದು ಕಾರು ನಿಂತಿತ್ತು. ಆಗ ತಾನೇ ಬಂದಿರಬೇಕು, ಅದರ ಲೈಟುಗಳು ಇನ್ನು ಉರಿಯುತ್ತಿದ್ದವು. ಈ ಸಮಯದಲ್ಲಿ ಅದ್ಯಾಕೆ ನನ್ನ ಬೈಕಿನ ಹಿಂದೆ ನಿಂತಿದೆ ಎಂದು ಸಂಶಯ ಬಂದು ಎದ್ದು ನಿಂತು ಅದರ ಕಡೆಗೇ ನೋಡಿದೆ. ಸ್ವಲ್ಪ ಹೊತ್ತು ಏನೂ ನಡೆಯಲಿಲ್ಲ. ನನಗೆ ಕುತೂಹಲ ಇನ್ನೂ ಹೆಚ್ಚಾಯ್ತು. ಅಷ್ಟರಲ್ಲಿ ಅದರ ಡ್ರೈವರಿನ ಸೀಟಿನಿಂದ ಯಾರೋ ಇಳಿದಂತಾಯ್ತು. ಕಾರಿನಲ್ಲಿ ಬಂದಿರುವವರಲ್ಲವೇ, ನನ್ನ ಹಾಗೆಯೇ ಯಾರೋ ಪರಿಸರ ಪ್ರೇಮಿಗಳಿರಬೇಕು ಎಂದುಕೊಂಡೆ. ಆಗ ಆ ವ್ಯಕ್ತಿ ಕಾರಿನ ಮುಂಭಾಗದಿಂದ ಕಾರನ್ನು ಬಳಸಿ ನಾನಿರುವ ಕಡೆಗೆ ನಡೆಯಲಾರಂಭಿಸಿದ. ನಾನು 'ಜೊತೆಗೊಬ್ಬರು ಕಂಪನಿ ಸಿಕ್ಕಿದರು' ಎಂದು ಖುಷಿಪಟ್ಟೆ. ಮಂಜು ಇನ್ನೂ ಪೂರ್ತಿ ಕರಗಿರದ ಕಾರಣ ಆ ವ್ಯಕ್ತಿಯು ನನಗೆ ಸರಿಯಾಗಿ ಕಾಣುತ್ತಲೇ ಇರಲಿಲ್ಲ. ಏನಕ್ಕೂ ಇರಲಿ ಎಂದು ಒಮ್ಮೆ ಕೈಬಿಸಿದೆ. ಆ ಕಡೆಯಿಂದ ಆ ವ್ಯಕ್ತಿ ಕೈ ಬಿಸುತ್ತಲೂ ಕೈ ಕೆಳಗೆ ಬಾವಲಿಗಳಿಗೆ ಇರುವಂತೆ ಒಂದು ರೆಕ್ಕೆಯಂತಹ ಪದರ ಏರ್ಪಟ್ಟಿತು. ನಾನು ಒಂದು ಕ್ಷಣ ಅವಾಕ್ಕಾದೆ. ಕ್ಷಣಗಳೆದಂತೆಯೂ ಆ ರೆಕ್ಕೆಯುಳ್ಳ ವ್ಯಕ್ತಿ ನನಗೆ ಹತ್ತಿರಾಗುತ್ತಲೇ ಇದ್ದ. ನನಗೆ ಏನು ಮಾಡಬೇಕು ಎಂತಲೇ ತಿಳಿಯದಾಗಿ ನಿಂತಲ್ಲಿಯೇ ನಿಂತು ಆ ವ್ಯಕ್ತಿಯನ್ನು ನೋಡುತ್ತಲೇ ಇದ್ದೆ. ಹಾಗೇನಾದರೂ, ನಾನು ದೆವ್ವದ ಫಿಲ್ಮುಗಳಲ್ಲಿ ನೋಡಿರುವಂತೆ ಇದೊಂದು ಪಿಶಾಚಿಯೇ?! ದುಗುಡ ಹೆಚ್ಚಾಯ್ತು. ನನಗೂ ಆ ವ್ಯಕ್ತಿಗೂ ಕೇವಲ ೩೦ ಮೀಟರುಗಳಷ್ಟೇ ಅಂತರವಿದ್ದರೂ ಮಂಜು ಮತ್ತೊಮ್ಮೆ ನನಗೆ ಆ ವ್ಯಕ್ತಿಯನ್ನು ಗುರುತಿಸಲು ಅಡ್ಡಿಪಡಿಸಿತು. ಕ್ಷಣಾರ್ಧದಲ್ಲಿ ಭಯ ನನ್ನನ್ನು ಪೂರ್ತಿಯಾಗಿ ಆವರಿಸಿ ನನ್ನನ್ನು ಆ ಜಾಗದಿಂದ ಓಡಿಹೋಗಲು ಪ್ರೇರೇಪಿಸಿತು. ಆದರೆ ಓಡುವುದಾದರೂ ಎಲ್ಲಿಗೆ? ಒಂದು ಕಡೆ ಪ್ರಪಾತ, ಇನ್ನೊಂದು ಕಡೆ ಪಿಶಾಚಿ!! ನಾನು ಯಾವ ಕಡೆ ಹೋದರೂ ಸಾವು ಖಚಿತ ಎಂದು ನನ್ನ ಮನಸ್ಸು ಹೇಳಿತು. ಕೊನೆಗೊಮ್ಮೆ ಆ ವ್ಯಕ್ತಿ ಸರಿಯಾಗಿ ಕಾಣುವಷ್ಟು ಹತ್ತಿರವಾಗಿ ಒಂದು ಸುಂದರವಾದ ಹುಡುಗಿಯಾಗಿ ರೂಪುಗೊಂಡು ನನ್ನನು ನೋಡಿ ನಸುನಕ್ಕಳು. ದೆವ್ವಗಳು ಮನುಷ್ಯರನ್ನು ಕೊಲ್ಲುವ ಮೊದಲು ಸುಂದರ ಹುಡುಗಿಯ ರೂಪದಲ್ಲಿ ಬಂದು ಮೋಹಿಸಿದಂತೆ ಮಾಡಿ ನಂತರ ಅವರ ರಕ್ತ ಕುಡಿಯುವ ಹಲವಾರು ಸನ್ನಿವೇಶಗಳನ್ನು ಪುಸ್ತಕಗಳಲ್ಲಿ ಓದಿಯೂ, ಮತ್ತು ಫಿಲ್ಮು-ದಾರಾವಾಹಿಗಳ್ಳಲ್ಲಿ ನೋಡಿಯೂ ಇದ್ದುದರಿಂದ ಆ ಸುಂದರ ಹುಡುಗಿ ನಕ್ಕಾಗ ಸ್ವಲ್ಪ ಜಾಸ್ತಿಯೇ ಹೆದರಿಕೆಯಾಯ್ತು. ಮೊದಲೇ ನಿರ್ಜನ ಪ್ರದೇಶ, ಕಿರುಚಿದರೆ ಒಂದು ನಾಯಿಯೂ ಓಗೊಡಲಿಕ್ಕಿಲ್ಲದಂತಹ ಜಾಗ ಬೇರೆ. ಅಂತಹದರಲ್ಲಿ ಅತಿರೂಪ ಸುಂದರಿಯೊಬ್ಬಳು ನಿಮ್ಮ ಎದುರಿಗೆ ಬಂದರೆ ಏನು ಮಾಡಬಹುದು?? ನೀವೇನೇ ಹೇಳಿದರೂ, ನನಗೆ ಅಂತಹ ಸಮಯದಲ್ಲಿ ಬಂದದ್ದು ಸಂಶಯ ಮತ್ತು ಹೆದರಿಕೆಗಳು ಮಾತ್ರ.
ನಾನು ಅವಳನ್ನೊಮ್ಮೆ ತಲೆಯಿಂದ ಕಾಲಿನವರೆಗೂ ಸಂಶಯದಿಂದ ಕೂಲಂಕುಷವಾಗಿ ಕಣ್ಣೋಡಿಸಿದೆ. ಯಾವ ಕೆಡೆಯಿಂದಲೂ ಅವಳು ನನಗೆ ಪಿಶಾಚಿಯಂತೆ ಕಾಣಲಿಲ್ಲದಿದ್ದರು, ಮನಸ್ಸಿನಲ್ಲಿ ಅನುಮಾನ ಕಡಿಮೆಯಾಗಲೇ ಇಲ್ಲ. ಅವಳ ಕೈಯಲ್ಲಿ ನನ್ನಂತಹದೇ ಒಂದು ಕ್ಯಾಮೆರಾ ಕಂಡು ಸ್ವಲ್ಪ ಸಮಾಧಾನವಾದರೂ, ಮನಸ್ಸಿನಲ್ಲೇನೋ ತಳಮಳ. ಕೊನೆಗೊಮ್ಮೆ ಅವಳು ಹಾಕಿದ್ದ ಚೂಡಿದಾರದ ದುಪಟ್ಟಾ ಗಾಳಿಗೆ ಬಾವುಟದಂತೆ ಹಾರಾಡಲೂ, ನನಗೆ ಅವಳು ಕೈ ಬಿಸಿದಾಗ ರೆಕ್ಕೆಯಂತೆ ಕಂಡಿದ್ದು ಇದೇ ದುಪಟ್ಟಾ ಎಂದು ಅರಿವಾಯ್ತು. ಅನ್ಯಾಯವಾಗಿ ಸುಂದರ ಹುಡುಗಿಯೊಬ್ಬಳನ್ನು ಪಿಚಶಿಯೆಂದುಕೊಂಡ ನನ್ನ ಮೂರ್ಖತನದ ಮೇಲೆ ನಗುಬಂತು. ನಾನು ಇಷ್ಟೆಲ್ಲಾ ಯೋಚನೆ ಮಾಡುತ್ತಿರುವಾಗ, ಅವಳು ಅಷ್ಟೂ ಹೊತ್ತು ನನ್ನನ್ನು ಎವೆಯಿಕ್ಕದೆ ನೋಡುತ್ತಲೇ ಇದ್ದಳು. ನಾನು ಅವಳನ್ನು ಹಾಗೆ ನೋಡುತ್ತಿದುದು ಅವಳಿಗೂ ಮುಜುಗರ ತರಿಸಿರಬೇಕು. ಆದರೂ ನನ್ನನ್ನು ಅರ್ಥ ಮಾಡಿಕೊಂಡವಳಂತೆ, ಮತ್ತೊಮ್ಮೆ ನಸುನಕ್ಕು "ಹಾಯ್" ಎಂದಳು. ನನಗಾಗ ಅವಳು ಪಿಚಾಚಿಯಲ್ಲ ಎಂದು ಖಚಿತವಾಗಿ, "ಹಾಯ್" ಎಂದೆ.
ನಂತರ ಅವಳು ಬೆಟ್ಟದ ಸಾಲುಗಳ ಕಡೆಗೆ ತಿರುಗಿ ತನ್ನ ಕ್ಯಾಮೆರಾ ಹೊರತೆಗೆದು ಸೂರ್ಯೋದಯದ ಕ್ಷಣಗಳನ್ನು ಸೆರೆ ಹಿಡಿಯುತ್ತಾ, "ನಾನು ಮತ್ತೊಮ್ಮೆ ಲೇಟ್ ಆದೆ ಅನ್ಸುತ್ತೆ. ಆಗಲೇ ಸೂರ್ಯೋದಯ ಆಗೇ ಬಿಟ್ಟಿದೆ" ಎಂದಳು. ನನಗೆ ಅವಳು ನನ್ನ ಹತ್ತಿರ ಮಾತನಾಡುತ್ತಾಳೆ ಎಂದು ಅನ್ನಿಸಿರಲೇ ಇಲ್ಲ. ಆದರೆ ಸುಂದರ ಹುಡುಗಿಯೊಬ್ಬಳು ಅವಳಾಗೇ ಮಾತನಾಡಿಸಲು ಸುಮ್ಮನಿರಲು ಸಾಧ್ಯವೇ!
"ಹೌದು...ಸ್ವಲ್ಪ ಬೇಗ ಬಂದಿದ್ದರೆ ಇನ್ನಷ್ಟು ಒಳ್ಳೆ ಫೋಟೋಗಳು ಸಿಗುತ್ತಿದ್ದವು" ಎಂದೆ.
ಅವಳು ತುಂಬಾ ಶ್ರದ್ದೆಯಿಂದ ಫೋಟೋ ತೆಗೆಯುತ್ತಿರುವಾಗ ನಾನು ಅವಳನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ನಸುಗೆಂಪು ಬಣ್ಣದ ಚುಡಿದಾರಿನಲ್ಲಿ, ಅದರಲ್ಲೂ ಆ ಹೊಂಬಣ್ಣದ ಬೆಳಕಿನ ಕಿರಣಗಳ ಬೆಳಕಲ್ಲಿ ಅವಳು ಕಣ್ಣು ಕುಕ್ಕುವಂತೆ ಹೊಳೆಯುತ್ತಿದ್ದಳು. ಹಾಲಿನಷ್ಟೇ ಬಿಳಿಯ ಮೈಬಣ್ಣ, ಗಾಳಿಯಲ್ಲಿ ತೇಲುತ್ತಿರುವ ಅವಳ ಕೇಶರಾಶಿ, ಕ್ಯಾಮೆರಾವನ್ನು ಕಣ್ಣಿಗೆ ಇಟ್ಟು ಸೂರ್ಯನಿಗೇ ಗುರಿಯಿಡುತ್ತಿರುವ ಅವಳ ದೇಹಕಾಂತಿ ನೋಡಿ, ಕವಿಗಳು ಇಂತಹವರನ್ನು ನೋಡಿಯೇ ಕವಿತೆ ಬರೆಯುತ್ತಾರೇನೋ ಎನ್ನಿಸಿತು. ಮತ್ತೊಂದು ಕಡೆ ನನಗೇ ಅರಿವಿಲ್ಲದಂತೆ ನನ್ನ ಹೃದಯದಲ್ಲಿ ರಕ್ತದೊತ್ತಡ ಏರುಪೇರಾಗಿ ಮನಸ್ಸಿನಲ್ಲಿ ಚಿಟ್ಟೆಗಳು ಹಾರಾಡಿದಂತಾಗಿ, ಹಿಂದಿನಿಂದ "ಅಣ್ಣಂಗೇ...ಲವ್ ಆಗಿದೆ.." ಎಂದು ಹಾಡು ಕೇಳಿದಂತಾಯ್ತು. ಮೊದಲ ನೋಟದಲ್ಲೇ ಪ್ರೀತಿ ಆಗುವುದು ಎಂದರೆ ಏನೆಂದು ನನಗೆ ಅವತ್ತೇ ಅರಿವಾಗಿದ್ದು. ಎಷ್ಟು ನೋಡಿದರೂ ತಣಿಯದಂತಹ ಮೈಮಾಟದ ಚೆಲುವೆ. ಅವಳೇನಾದರೂ ಸೀರೆಯುಟ್ಟು ನನ್ನೆದುರು ಬಂದಿದ್ದರೆ ನಾನು ಖಂಡಿತವಾಗಿಯೂ ಕೈಯಲ್ಲಿ ಮಾಂಗಲ್ಯವನ್ನು ಹಿಡಿದೇ ಅವಳನ್ನು ಮಾತನಾಡಿಸುತ್ತಿದ್ದೆ.
ಕೆಲವೇ ಕ್ಷಣಗಳ ಹಿಂದೆ ಇವಳನ್ನೇನ ನಾನು ಪಿಶಾಚಿ ಎಂಡೊಕೊಂಡಿದ್ದು ಎಂದು ಎಂದು ಮತ್ತೊಮ್ಮೆ ನಗು ಬಂತು. ಅದೇ ಕ್ಷಣಕ್ಕೆ ಅವಳು ತಿರುಗಿನೋಡಲು, ಕಣ್ಣು ಅಗಲ ಮಾಡಿ "ಏನಾಯ್ತು?" ಎಂದಳು. ನಾನು ತಲೆಬಗ್ಗಿಸಿ ನನ್ನಷ್ಟಕ್ಕೆ ನಾನೆ ನಗುತ್ತಿದ್ದುದರಿಂದ ಅವಳು ನಾನು ನಕ್ಕಿದ್ದನ್ನು ನೋಡಿದ್ದಾಳೆ ಎಂದು ನನಗೆ ಗೊತ್ತಾಗಲಿಲ್ಲ. ಅವಳ ಪ್ರಶ್ನೆ ಕೇಳಿ ಚಕಿತನಾಗಿ "ಏನಾಯ್ತು?" ಎಂದೆ. "ಏನೋ ನಗ್ತಾ ಇದ್ದೀರಿ..." ಎಂದಳು. ಅಯ್ಯೋ ಇವಳು ನೋಡಿಬಿಟ್ಟಳೇ ಎಂದು ಮನಸ್ಸಿನಲ್ಲೇ ಗಲಿಬಿಲಿಗೊಂಡು, ಅದನ್ನು ತೋರಿಸಿಕೊಳ್ಳದೆ "ಏನಿಲ್ಲ, ಹೀಗೆ ಏನೋ ನೆನಪಿಗೆ ಬಂತು" ಎಂದೆ. ಅವಳು ಇನ್ನೂ ದೊಡ್ಡದಾಗಿ ಕಣ್ಣು ಅಗಲಿಸಿ, ಮುಗುಳ್ನಗುತ್ತ ನನ್ನ ಕಡೆಗೆ ನಡೆಯುತ್ತಾ "ಏನ್ರಿ ಅದು?? ನಂಗೂ ಹೇಳಿ" ಎಂದಳು. ನನಗೆ ಅವಳ ಧೈರ್ಯ ನೋಡಿ ಕೊಂಚ ಆಶ್ಚರ್ಯವೇ ಆಯಿತು. ಗೊತ್ತಿಲ್ಲದ ಹುಡುಗನೊಂದಿಗೆ, ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ, ಇಷ್ಟು ಸಲುಗೆ ಅವಶ್ಯವೇ ಎಂದು ಕೇಳಿಕೊಂಡೆ. ಆದರೂ ಅವಳ ರೂಪಿಗೆ ಮಾರುಹೋಗಿದ್ದ ನಾನು ಇದು ನನ್ನ ಅದೃಷ್ಟವೇ ಸರಿ ಎಂದು "ಹೂಂ... ಏನು ಹೇಳೋದು??" ಎಂದು ಇನ್ನೂ ನಗುತ್ತಲೇ ಕೇಳಿದೆ. "ಏನನ್ನು ನೆನಸಿಕೊಂಡು ನಗುತ್ತ ಇದ್ದೀರಿ ಅಂತ ಹೇಳಿ" ಎಂದು ನಾನು ಮೊದಲು ಬಸವನಹುಳುವಿನ ಮೇಲೆ ಮುನಿಸಿಕೊಂಡು ಕುಳಿತಿದ್ದ ಕಲ್ಲಿನ್ನ ಮೇಲೆಯೇ ಕುಳಿತು ನನ್ನನ್ನು ನೋಡಿದಳು. ನಾನು, ‘ಇದೇನು ಕನಸೇ??’ ಎಂದು ಒಮ್ಮೆ ಆವಳಿಗೆ ಕಾಣದಂತೆ ನನ್ನ ಕೈಯನ್ನು ಚಿವುಟಿಕೊಂಡೆ. ಸ್ವಲ್ಪ ಜೋರಾಗೆ ಚಿವುಟಿಕೊಂಡಿದ್ದರಿಂದ, ನೋವಾಯ್ತು. ಕನಸೇನಲ್ಲ!! ಮತ್ತಷ್ಟು ಖುಷಿಯಾಯ್ತು. ಆದರೆ ನಾನು ನಕ್ಕಿದ್ದೇಕೆ ಎಂದು ಹೇಳುವುದು ಹೇಗೆ?? ಅವಳೋ, ಕಥೆ ಕೇಳಲು ಆಗಲೇ ಬಂದು ಕುಳಿತಾಗಿದೆ. ಈಗ ಏನಾದರು ಹೇಳಲೇಬೇಕು.
ಏನು ಹೇಳುವುದು ಎಂದು ಸ್ವಲ್ಪ ಮನಸ್ಸಿನಲ್ಲೇ ಹುಡುಕಾಡಿ, "ಏನಿಲ್ಲಾ, ನಿನ್ನೆ ರಾತ್ರಿ ನಾನು ಮತ್ತು ನನ್ನ ಫ್ರೆಂಡ್ ಅಭಿ ಇಬ್ಬರೂ ಇಲ್ಲಿಗೆ ಸೂರ್ಯೋದಯ ನೋಡಲು ಬರಬೇಕೆಂದು ತೀರ್ಮಾನ ಮಾಡಿದ್ದೆವು. ಆದರೆ ಇವತ್ತು ಬೆಳಗ್ಗೆ ಹಲವಾರು ಕಾರಣಗಳಿಂದ ನಾನೊಬ್ಬನೇ ಬರಬೇಕಾಯ್ತು. ಈಗ ನೋಡಿ, ನಾನು ಒಬ್ಬನೇ ಇರುವುದನ್ನು ನೋಡಿ ಆ ದೇವರು ದೇವಕನ್ಯೆಯಂತಿರುವ ನಿಮ್ಮನ್ನು ಕಳಿಸಿದ್ದಾನೆ. ಅಭಿ ಏನಾದರು ಬಂದಿದ್ದರೆ ಇಷ್ಟು ಹೊತ್ತಿಗೆ ನಿಮಗೆ ಯಾರೂ ಲೈನು ಹೊಡಿಬೇಕು ಅಂತ ನಮ್ಮಿಬ್ಬರಲ್ಲಿ ಜಗಳ ಶುರುಆಗಿರೋದು." ಎಂದೆ.
ನನ್ನ ಮಾತು ಕೇಳಿ ಅವಳು ಕಲ್ಲಿನ ಮೇಲೆ ಕಲ್ಲಾಗಿಯೇ ಕುಳಿತುಬಿಟ್ಟಳು. ನನ್ನ ನೇರನುಡಿ ನನಗೆ ಆಶ್ಚರ್ಯ ತಂದಿತ್ತು. ನಾನು ಹುಡುಗೀರಯ ಹತ್ತಿರ ಅಷ್ಟು ನೇರವಾಗಿ ಮಾತನಾಡಿದ್ದು ಇದೇ ಮೊದಲು, ಅದರಲ್ಲೂ ಇಂತಹ ಸುಂದರ ಹುಡುಗಿಯರ ಹತ್ತಿರ ಮಾತನಾಡುವಾಗ ನನಗೆ ಬಾಯಿ ಕಟ್ಟುತ್ತಿತ್ತು. ಅದು ಹೇಗೆ ನನಗೆ ಅಂತಹ ಡೈಲಾಗುಗಳು ಬಂದವೋ ದೇವರೇ ಬಲ್ಲ! ನನ್ನ ಮಾತು ಕೇಳಿ ನನಗೆ ಆಶ್ಚರ್ಯವಾಗಿದೆ ಎಂದಮೇಲೆ ಅವಳಿಗೆ ಇನ್ನೆಷ್ಟು ಆಗಿರಬೇಡ?! ಅವಳು ಇಪ್ಪತ್ತು ಸೆಕೆಂಡು ಹಾಗೆಯೇ ಕುಳಿತು ಮುಖದಲ್ಲಿ ಏನು ಬದಲಾವಣೆಯೇ ಇಲ್ಲದೆ ನನ್ನನ್ನೇ ನೋಡುತ್ತಿದ್ದಳು. ನನಗೆ ಒಂದು ಸೆಕೆಂಡು ನಾನು ಹಾಗೆ ಹೇಳಿದ್ದು ಅವಳಿಗೆ ಇಷ್ಟವಾಗಲಿಲ್ಲ ಎನ್ನಿಸಿ, ಸಾರಿ ಕೇಳುವವನಿದ್ದೆ,
ಅಷ್ಟರಲ್ಲಿ ಅವಳ ಕೆನ್ನೆಗಳು ಕೆಂಪಾಗಿ, ನಸುನಕ್ಕು "ಏನ್ರಿ, ದೇವಕನ್ಯೆ ಅನ್ನೋ ಪದಗಳನ್ನೆಲ್ಲ ಉಪಯೋಗಿಸ್ತೀರಿ! ಕನ್ನಡದ ಪಂಡಿತರೇನು ನೀವು?" ಎಂದಳು. ಸದ್ಯ ಅವಳಿಗೆ ನಾನು ಹೇಳಿದ್ದು ಬೇಜಾರು ತರಿಸಲಿಲ್ಲವಲ್ಲ ಎಂದು ಸಮಾಧಾನಗೊಂಡು, "ಏಕೆ, ನಿಮಗೆ ಕನ್ನಡದ ಪಂಡಿತರನ್ನು ಕಂಡರೆ ಆಗೋದಿಲ್ಲೇನು?" ಎಂದೆ. ಅದಕ್ಕವಳು ಎದ್ದು "ಹಾಗೇನಿಲ್ಲ..." ಎಂದು ತನ್ನ ಕ್ಯಾಮೆರಾ ಹಿಡಿದು ಫೋಟೋ ತೆಗೆಯಲು ಹೊರಟಳು.
"ನಾನು ಇಲ್ಲಿಗೆ ಬಂದು ಸೂರ್ಯೋದಯ ನೋಡಬೇಕು ಅಂತ ತುಂಬಾ ದಿನಗಳಿಂದ ಅಂದುಕೊಂಡಿದ್ದೆ. ಆದರೆ ಏನಾದೊರೊಂದು ಆಗಿ ಬರೋಕೆ ಆಗ್ತಿರಲಿಲ್ಲ. ಇವತ್ತು ಕಷ್ಟ ಪಟ್ಟು ಏನೇನೋ ಅಂದ್ಕೊಂಡು ಬಂದೆ. ಆದ್ರೆ ಇಲ್ಲಿ ನೋಡಿ, ನಾನು ಬಾರೋ ಮೊದ್ಲೇ ಸೂರ್ಯೋದಯ ಆಗೋಗಿದೆ" ಅಂದಳು.
ನಾನು ನನ್ನ ಕ್ಯಾಮೆರಾ ತೆಗೆದುಕೊಂಡು ಮತ್ತೊಮ್ಮೆ ಫೋಟೋ ಕ್ಲಿಕ್ಕಿಸುತ್ತಾ, “ನಾನು ನಿಮ್ಮನ್ನು ದೇವಕನ್ಯೆ ಅಂತೆಲ್ಲ ಹೇಳಿ ಹೊಗಳಿದರೂ, ನೀವು ಪ್ಲೇಟ್ ಚೇಂಜ್ ಮಾಡಿ ಬೇರೇನೋ ಮಾತಾಡ್ತಾ ಇದ್ದೀರಾ” ಎಂದು ನಿರಾಸೆಯಲ್ಲಿ ಕೇಳಿದೆ.
ಅದಕ್ಕವಳು ನನ್ನ ಕಡೆ ನೋಡಿ, "ಏನ್ರಿ? ಸುಮ್ನೆ ಜೋಕಿಗೆ ಲೈನು ಹೊಡಿತೀನಿ ಅಂತ ಹೇಳಿದ್ರೇನೋ ಅಂದ್ಕೊಂಡ್ರೆ ನಿಜವಾಗ್ಲೂ ಹೊಡಿತಿದಿರಿ!" ಅಂದ್ಲು.
ನಾನು ನಕ್ಕು ಸುಮ್ಮನಾದೆ. ಹುಡುಗಿ ಮಾತನಾಡುವ ರೀತಿ ಮತ್ತು ಸರಳತೆ ನನಗೆ ಇಷ್ಟವಾಯ್ತು. ಮೊದಲೇ ನನ್ನಂತೆಯೇ ಕ್ಯಾಮೆರಾ ಹಿಡಿದು ಬೇರೆ ಬಂದಿದ್ದಾಳೆ, ನನಗಾಗಲೇ ಮದುವೆ ಕನಸುಗಳು ಶುರುವಾಗಿದ್ದವು. ಮಾತು ಸಿಲ್ಲಿಸುವುದಕ್ಕೆ ಮನಸ್ಸಾಗದೆ ನಾನೆ ಅವಳನ್ನು ಮತ್ತೊಮ್ಮೆ ಮಾತಿಗೆಳೆದೆ. "ಎಂದ ಹಾಗೆ ನಿಮ್ಮ ಹೆಸರು ಗೊತ್ತಾಗ್ಲಿಲ್ಲ." ಎಂದೆ.
ಅದಕ್ಕವಳು ನನ್ನ ಕಡೆ ತಿರುಗಿಯೂ ನೋಡದೆ "ಯಾಕೆ ಅಂದ್ರೆ ನಾನಿನ್ನು ನನ್ನ ಹೆಸರು ಹೇಳೇ ಇಲ್ಲ" ಅಂದ್ಲು.
ಛೆ! ಅವಳಾಗೇ ಹೇಳೋದಕ್ಕಿಂತ ಮೊದಲೇ ಕೇಳಿದ್ದು ಅವಳಿಗೆ ನಾನೊಬ್ಬ ಅತಿರೇಕದ ವ್ಯಕ್ತಿ ಎಂದೆನ್ನಿಸಿರಬೇಕು ಎಂದು ತೆಪ್ಪಗೆ ವಾಪಸ್ಸು ಬಂದು ನಾನು ಮೊದಲೇ ಕುಳಿತಿದ್ದ ಕಲ್ಲಿನ ಮೇಲೆ ಕುಳಿತುಕೊಂಡೆ.
ಅಷ್ಟರಲ್ಲಿ ಸಂಪೂರ್ಣವಾಗಿ ಸೂರ್ಯೋದಯವಾಗಿ ಫೋಟೋ ತೆಗೆಯಲು ಮತ್ತೇನೂ ಉಳಿದಿರಲಿಲ್ಲ. ನಾನು ನನ್ನ ಹಳೆ ಗೆಳೆಯ ಬಸವನಹುಳು ಎಲ್ಲಿ ಹೋಯ್ತೆಂದು ಅತ್ತಿತ್ತ ನೋಡಿದಾಗ ಅದು ಮೊದಲ ಸ್ಥಾನದಿಂದ ಸ್ವಲ್ಪವೇ ದೂರದಲ್ಲಿ ಬಿಸಿಲು ಕಾಯಿಸುತ್ತಾ ಕುಳಿತಿತ್ತು. ನಾನು ಅದರ ಹತ್ತಿರ ಹೋಗಿ ಅದರದ್ದೂ ಕೆಲವು ಫೋಟೋ ತೆಗೆದೆ.
ನಾನು ಬಸವನಹುಳುವಿನ ಫೋಟೋ ತೆಗೆಯುತ್ತಿದ್ದುದು ಕಂಡು ಅವಳು "ಏನ್ರೀ ಅದು?" ಎಂದು ಹತ್ತಿರ ಬಂದಳು. ಅದಕ್ಕೆ ನಾನು "ಇದರ ಹೆಸರು ಬಸವ ಎಂದು. ನಾನು ಹೆಸರು ಕೇಳಿದ ತಕ್ಷಣ ಹೇಳಿ ನನ್ನ ಜೊತೆ ಫ್ರೆಂಡ್ ಆಗಿದೆ. ನೀವು ಬರೋ ಮುಂಚೆ ನನ್ನ ಜೊತೆ ಮಾತಾಡೋಕೆ ಇದ್ದಿದ್ದು ಇದೊಂದೇ.” ಎಂದು ಟಾಂಗ್ ಕೊಟ್ಟೆ. ಅದಕ್ಕವಳು ನನ್ನ ಕಡೆ ಒಂದು ಬಿಂಕದ ನಗೆ ಚೆಲ್ಲಿ "ಒಹೋ.. ಹೆಸ್ರು ಹೇಳ್ಲಿಲ್ಲ ಅಂತ ಟಾಂಗ್ ಕೊಡ್ತಾ ಇದಿರೇನ್ರಿ? ಇವಾಗ ಹೆಸ್ರು ಕೇಳ್ತಿರಾ, ಮತ್ತೆ ಫೋನ್ ನಂಬರ್, ನಾಳೆ ಡೇಟಿಗೆ ಬರ್ತಿಯಾ ಅಂತ ಕೇಳಲ್ಲ ಅಂತ ಏನ್ ಗ್ಯಾರಂಟಿ" ಎಂದು ಸೊಂಟದ ಮೇಲೆ ಕೈಯಿಟ್ಟು ಕೇಳಿದಳು.
"ಅಯ್ಯೋ, ನೀವು ಅಷ್ಟೆಲ್ಲ ದೂರಕ್ಕೆ ಹೋಗ್ಬೇಡಿ. ನಾವೇನು ನಿಮ್ಮನ್ನ ಗರ್ಲ್ ಫ್ರೆಂಡ್ ಮಾಡ್ಕೋಬೇಕು ಅಂತ ಕೇಳ್ಲಿಲ್ಲ. ಏನೋ ನಮ ಥರಾನೇ ಹವ್ಯಾಸಗಳಿದವಲ್ಲಾ ಅದಕ್ಕೆ ಕೇಳಿದ್ದು ಅಷ್ಟೇ" ಎಂದು ಹವ್ಯಾಸ ಅಂದ್ರೆ ಏನು ಅಂತ ಅರ್ಥ ಆಗ್ಲಿ ಅಂತ ಕ್ಯಾಮೆರಾ ತೋರಿಸಿದೆ.
ಅದಕ್ಕವಳು ಥಟ್ಟನೆ ನನ್ನ ಕಡೆ ನೋಡಿ, “ನಿಮಗೆ ಗೊತ್ತಿರಲಿ ಅಂತ ಹೇಳ್ತಾ ಇದೀನಿ, ನಂಗೆ ಆಗ್ಲೇ ಬಾಯ್ ಫ್ರೆಂಡ್ ಇದಾನೆ" ಅಂದಳು.
ಅವಳು ಬಾಯ್ ಫ್ರೆಂಡ್ ಐದನೇ ಎಂದು ಹೇಳಿದ ತಕ್ಷಣವೇ ಆಗಷ್ಟೇ ನನ್ನ ಹೃದಯಲ್ಲಿ ಅರಳಿದ್ದ ಹೂಗಳೆಲ್ಲ ಮುದುಡಿ ಹೋಗಿ ಹಿಂದಿನಿಂದ "ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹಾ" ಹಾಡು ಕೇಳಿತು. ಕೇವಲ ಹೆಸರು ಕೇಳಿದ್ದಕ್ಕೆ ಇಷ್ಟೆಲ್ಲಾ ಮಾತಾಡೋ ಹುಡುಗಿ ನಮಗೆಲ್ಲ ಬಿಳ್ತಾಳ ಅಂತ ನನಗೆ ನಾನೆ ಕೇಳಿಕೊಂಡೆ. ಅದ್ರಲ್ಲೂ ಬಾಯ್ ಫ್ರೆಂಡ್ ಬೇರೆ ಇದಾನೆ ಅಂದ್ಮೇಲೆ ನಂದೇನಿದ್ರೂ ಬರಿ ಐಸ್ ಕ್ರೀಮು ಚಾಕಲೇಟು ಕೊಡ್ಸೋ ಕೆಲಸ ಆಗತ್ತೆ ಅಷ್ಟೇ ಎಂದುಕೊಂಡೆ. ಎಟುಕದ ದ್ರಾಕ್ಷಿ ಎಂದೂ ಉಳಿನೇ ಎಂದುಕೊಂಡು ಸುಮ್ಮನಾದೆ.
"ಮತ್ತೇ..ಸೂರ್ಯೋದಯ ಹೇಗಿತ್ತು ಅಂತ ಹೇಳ್ರಿ?" ಎಂದಳು.
ನಾನದಕ್ಕೆ "ಅಯ್ಯೋ, ಮದ್ವೆ ಮುಂಚೆನೇ ರೀ ಅಂತೆಲ್ಲ ಹೇಳ್ಬೇಡಿಪ್ಪ, ನಂಗೆ ನಾಚ್ಕೆ ಆಗತ್ತೆ" ಎಂದೆ.
ಅದಕ್ಕವಳು "ಏನಂದ್ರಿ?" ಎಂದು ಬಾಯಿಬಿಟ್ಟುಕೊಂಡು ನನ್ನ ಕಡೆ ನೋಡುತ್ತಾ ನಿಂತುಬಿಟ್ಟಳು. ನಾನು ಏನು ಆಗಿಯೇ ಇಲ್ಲದವನಂತೆ, “ನೋಡಿ, ಮತ್ತೇ ನೀವು ರೀ ಅಂತಾನೆ ಕರೀತೀರಪ್ಪ" ಅಂದೆ.
"ಹಲೋ, ಏನ್ರೀ ನಿಮ್ಮರ್ಥ?" ಎಂದು ಸಿಡುಕಿದಳು.
"ಮತ್ತೇ, ಹೆಸ್ರು ಕೇಳಿದ್ರೆ ನಂಗೆ ಬಾಯ್ ಫ್ರೆಂಡ್ ಇದಾನೆ ಅಂತಿರಲ್ಲ. ನಿಮ್ಮ ಮಾತಿನ ಅರ್ಥ ಏನು? ನಾನೇನು ನೋಡಿದ ಹುಡುಗಿರನೆಲ್ಲಾ ನನ್ನ ಗರ್ಲ್ ಫ್ರೆಂಡ್ ಆಗು ಅಂತ ಕೇಳ್ತೀನಿ ಅಂತಾನಾ?" ಎಂದು ಸರಿಯಾಗೇ ಟಾಂಗ್ ಕೊಟ್ಟೆ.
ಅದಕ್ಕವಳು ಏನೂ ಹೇಳಬೇಕೋ ತಿಳಿಯದೆ ಸರ್ರನೆ ಮುಖ ತಿರುಗಿಸಿ ಮತ್ತೆ ಕ್ಯಾಮೆರಾ ಕಣ್ಣಿಗಿಟ್ಟುಕೊಂಡು ಏನೋ ಕ್ಲಿಕ್ಕಿಸಿದಳು. ನನ್ನ ಮಾತು ಸರಿಯಾಗೇ ಮುಟ್ಟಿತ್ತು ಎಂದು ಕಾಣುತ್ತೆ, ಸ್ವಲ್ಪ ಹೊತ್ತು ಏನೂ ಮಾತೇ ಬರಲಿಲ್ಲ.
ಮೌನ ಯಾಕೋ ಸ್ವಲ್ಪ ಜಾಸ್ತಿಯಾಯ್ತು ಅನ್ನೋ ಅಷ್ಟರಲ್ಲಿ "ಸೂರ್ಯೋದಯ ಹೇಗಿತ್ತು ಅಂತ ಹೇಳಲೇ ಇಲ್ಲ ನೀವು" ಎಂದು ಅವಳೇ ಮಾತು ಶುರು ಮಾಡಿದಳು.
ನನಗೋ ಒಳಗೊಳಗೇ ಲಡ್ಡು ತಿಂದಷ್ಟೇ ಖುಷಿ! ಆದರೆ ತೋರಿಸಿಕೊಳ್ಳುವಂತಿಲ್ಲವಲ್ಲ. ಮತ್ತೆ ನನಗೇ ನಾನೆ ಹೇಳಿಕೊಂಡೆ, 'ಆಗಲೇ ಬಾಯ್ ಫ್ರೆಂಡ್ ಬೇರೆ ಇದಾನೆ ಅಂತ ಹೇಳಿದಾಳೆ, ಮತ್ಯಾಕೆ ಹೆಚ್ಚು ಮಾತು? ಇನ್ನರ್ದ ಗಂಟೇಲಿ ನೀನ್ಯಾರೋ, ಅವಳ್ಯಾರೋ! ಇದ್ದಷ್ಟು ಕ್ಷಣ ಒಳ್ಳೆಯವನಾಗಿರು.'
"ನಿಮಗೆ ಗೊತ್ತಿಲ್ಲದಂಹದ್ದೇನಿಲ್ಲ ಬಿಡಿ. ಆ ಬೆಟ್ಟಗಳ ಸಾಲಿನ ಹಿಂದಿನಿಂದ ಸೂರ್ಯ ಉದಯಿಸಿದ ಅಷ್ಟೇ" ಎಂದೆ.
"ಏನ್ರೀ, ಇಲ್ಲಿ ಬಂದು ಸೂರ್ಯೋದಯ ನೋಡೋಕೆ ಎಷ್ಟೋ ಜನ ಬೇರೆ ರಾಜ್ಯಗಳಿಂದೆಲ್ಲಾ ಬರ್ತಾರೆ. ಅಂತಹ ರೋಮಾಂಚಕಾರಿ ಸನ್ನಿವೇಶವನ್ನ ನೀವಿಷ್ಟು ನೀರಸವಾಗಿ ಹೇಳಿಬಿಟ್ರಲ್ಲಾ. ಕೇಳೋಕೇ ಬೇಜಾರಾಯ್ತು" ಎಂದು ಆರೋಪಿಸಿದಳು.
ಅರೆ! ಹುಡುಗಿಗೆ ನನ್ನಂತೆಯೇ ದೇಶ ಸುತ್ತೋ ಹುಚ್ಚಿದೆ ಅಂತಾಯ್ತು. ಹುಡುಗೀನ ಮೆಚ್ಚಿಸಿ ಮಾಡುವೆ ಆಗೋಣ ಎಂದರೆ ಬಾಯ್ ಫ್ರೆಂಡ್ ಬೇರೆ ಇದಾನೆ ಅಂತ ಹೇಳಿಬಿಟ್ಟಿದಾಳೆ. ನಾನೆಷ್ಟೇ ಯೋಚಿಸಿದರು, ಅವಳಿಗೆ ಬಾಯ್ ಫ್ರೆಂಡ್ ಇದಾನೆ ಅನ್ನೋ ವಿಷ್ಯ ನನ್ನ ತಲೆ ಬಿಟ್ಟು ಹೋಗುತ್ತಲೇ ಇರಲಿಲ್ಲ. ಆದರೂ ಹುಡುಗಿ ಪಾಪ ಆಸಕ್ತಿಯಿಂದ ಕೇಳಿದಾಳೆ ಅಂತ ನನ್ನ ಪ್ರಾವೀಣ್ಯತೆ ತೋರಲು ಶುರು ಮಾಡಿದೆ.
"ನೀವು ಯಾವತ್ತಾದ್ರೂ ಸೂರ್ಯೋದಯ ಆಗೋವಾಗ ಬೆಟ್ಟಗಳ ಬಣ್ಣ ಬದಲಾಗೋದು ಗಮನಿಸಿದ್ದಿರೇನು?" ಎಂದೆ.
"ಏನು? ಬೆಟ್ಟಗಳ ಬಣ್ಣ ಬದಲಾಗುತ್ತಾ" ಎಂದು ಹುಬ್ಬು ಏರಿಸಿ ಕೇಳಿದಳು.
"ಇಲ್ಲಿಲ್ಲಾ, ಬಣ್ಣ ಬದಲಾಗೋಲ್ಲ. ಆದರೆ ನೋಡೋರಿಗೆ ಹಾಗನ್ನಿಸುತ್ತೆ. ಅದು ಸೂರ್ಯೋದಯ ಬೆಟ್ಟಗಳ ಮೇಲೆ ಬೀರೋ ಪ್ರಭಾವ."
"ನಂಗೆ ಅರ್ಥ ಆಗ್ಲಿಲ್ಲ." ಎಂದು ಕುತೂಹಲದಿಂದ ಹತ್ತಿರ ಬಂದಳು. ನಾನು 'ಅಲ್ಲೇ ನಿಂತು ಕೇಳಿದ್ದಾರೆ ಆಗುತ್ತಿರಲಿಲ್ಲವೇ!' ಎಂದುಕೊಂಡೆ.
"ಇನ್ನೇನು ಸೂರ್ಯೋದಯ ಆಗುತ್ತೆ ಅನ್ನೋವಾಗ ಬೆಟ್ಟಗಳ ಸಾಲೆಲ್ಲಾ ಮಂಜು ಮುಸುಕಿದ ತಿಳಿನೀಲಿ ಬಣ್ಣದಂತೆ ಕಾಣುತ್ತವೆ. ಸೂರ್ಯೋದಯ ಆಗುತ್ತಲೂ, ಅವು ತಮ್ಮ ಬಣ್ಣ ಬದಲಾಯಿಸಿದಂತೆ ಕಂಡು ಕಂದು ಬಣ್ಣಕ್ಕೆ ತಿರುಗುತ್ತವೆ" ಎಂದು ನನ್ನ ಪ್ರವಚನ ಶುರು ಮಾಡಿದೆ.
ಅದಕ್ಕವಳು ಕಣ್ಣಗಲಿಸಿ "ನಿಜವಾಗ್ಲೂ? ನನಗೇ ಯಾವತ್ತೂ ಹಾಗೆ ಅನ್ನಿಸಿಯೇ ಇಲ್ಲ" ಎಂದಳು.
ಮತ್ತೆ ಬೆಟ್ಟಗಳ ಸಾಲಿನ ಕಡೆಗೆ ತಿರುಗಿ ಏನೇನೋ ಹುಡುಕಿ ಮತ್ತೊಮ್ಮೆ ನನ್ನ ಕಡೆ ತಿರುಗಿ "ಏನು ಕಾಣಿಸ್ತಾ ಇಲ್ವಲ್ಲಾ ನಂಗೆ" ಎಂದು ಬೇಜಾರಿನಲ್ಲಿ ಹೇಳಿದಳು.
"ಈಗಾಗಲೇ ಸೂರ್ಯೋದಯವಾಗಿ 20 ನಿಮಿಷಗಳೇ ಕಳೆದಿವೆ. ಈಗೇನು ಕಾಣೋದಿಲ್ಲ ಬಿಡಿ" ಎಂದೆ.
“ಅಯ್ಯೋ…, ನೀವು ಹೇಳದೇ ಇದ್ದಿದ್ರೆ ಚೆನ್ನಾಗಿರ್ತಿತ್ತು. ಈಗ ಅದನ್ನ ನೋಡೋಕೆ ಇನ್ನೊಂದು ದಿನ ಬರಬೇಕು" ಎಂದಳು.
ನಾನು ತಕ್ಷಣವೇ ಎಚ್ಚೆತ್ತು, ಇನ್ನೊಂದು ದಿನ ಬೇರೆ ಬರ್ತಾಳೆ ಅಂದ್ರೆ ಸುಮ್ಮನಿರೋದು ಹೇಗೆ!? "ಹಾಗಿದ್ರೆ ಬನ್ನಿ" ಎಂದೆ.
ಅದಕ್ಕವಳು "ಹಾಂ...?? ನೋಡೋಣ ಬಿಡಿ" ಎಂದು ಸುಮ್ಮನಾದಳು. ಹುಡುಗಿಗೆ ಅದನ್ನು ನೋಡಲಿಕ್ಕೆ ಅಷ್ಟು ಆಸಕ್ತಿಯಿದ್ದಂತೆ ಕಾಣಲಿಲ್ಲ. ಅವಳನ್ನು ಒತ್ತಾಯಿಸುವಷ್ಟು ಸಲುಗೆ ನನಗೆ ಇಲ್ಲದ ಕಾರಣ, ನಾನು ಮತ್ತೊಮ್ಮೆ ಅವಳನ್ನು ನೋಡುವ ಕನಸು ಅಲ್ಲಿಯೇ ಕಮರಿಹೋಯ್ತು.
"ಆದರೆ ಈಗ ಗುಡ್ಡಗಳು ನನಗೆ ಕಂಧು ಬಣ್ಣದ ಹಾಗೆ ಕಾಣಿಸ್ತಾ ಇಲ್ಲ, ಅದು ಕೇಸರಿ ಮಿಶ್ರಿತ ಕಂಧು ಅನ್ನಿಸ್ತಾ ಇದೆ. " ಎಂದು ಬೆಟ್ಟಗಳನ್ನೇ ನೋಡುತ್ತಾ ಹೇಳಿದಳು.
ಈ ಹುಡುಗಿಯರಿಗೂ ಬಣ್ಣಗಳಿಗೂ ಏನು ಸಂಬಂಧವೋ ನನಗೆ ತಿಳಿಯದು. ಬಣ್ಣಗಳ ಬಗ್ಗೆ ಏನೇನೋ ಮಾತಾಡ್ತಾರೆ. ನನಗೆ ಕಂಧು ಬಣ್ಣವೇ ಸರಿಯಾಗಿ ಗೊತ್ತಾಗುವುದಿಲ್ಲ, ಅದರಲ್ಲಿ ಕೇಸರಿ ಮಿಶ್ರಿತ ಬೇರೆ!! ಎಂದು ನನಗೆ ನಾನೆ ಹೇಳಿಕೊಂಡೆ. ನಾನು ಹಿಂದೆ ಓಧುವಾಗ ನನ್ನ ಕ್ಲಾಸಿನಲ್ಲಿ ಒಬ್ಬಳು ಹುಡುಗಿ ಇದ್ದಳು. ಅವಳಿಗೆ ಗುಲಾಬಿ ಬಣ್ಣದ ಹುಚ್ಚು. ಏನೇ ತೆಗೆದುಕೊಂಡಳು ಅದರಲ್ಲಿ ಸ್ವಲ್ಪವಾದರೂ ಗುಲಾಬಿ ಬಣ್ಣ ಇರಲೇಬೇಕು. ಗುಲಾಬಿ ಬಣ್ಣದ ಡ್ರೆಸ್ಸು, ಉಗುರುಬಣ್ಣ, ಬ್ಯಾಗು, ಕ್ಲಿಪ್ಪು, ಹೀಗೇ ಹಲವಾರು. ಅವಳ ಈ ಗುಲಾಬಿ ಬಣ್ಣದ ಹುಚ್ಚಿಗೆ ನಾವೆಲ್ಲ ಅವಳನ್ನು ಪಿಂಕಿ (ಇಂಗ್ಲಿಷಿನಲ್ಲಿ ಗುಲಾಬಿ ಬಣ್ಣ) ಎಂತಲೇ ಕರೆಯುತ್ತಿದ್ದೆವು. ನನಗೆ ಬಣ್ಣಗಳ ಬಗ್ಗೆ ಅಷ್ಟೆಲ್ಲಾ ಏನು ಗೊತ್ತಿಲ್ಲ. ಹಾಗಾಗಿ ನಾನು ಅವಳು ಹೇಳಿದ್ದು ಇದ್ದರೂ ಇರಬಹುದು ಎಂದುಕೊಂಡು ಸುಮ್ಮನಾದೆ.
ಆದರೆ ನನ್ನ ಮೌನ ಅವಳಿಗೆ ಇಷ್ಟವಾದಂತೆ ಕಾಣಲಿಲ್ಲ. ಅವಳು ಮತ್ತೊಮ್ಮೆ "ಅಲ್ವಾ?" ಎಂದು ನನ್ನೆಡೆಗೆ ತಿರುಗಿದಳು. ನಾನು ಒಮ್ಮೆ ಬೆಟ್ಟಗಳ ಸಾಲಿನ ಕಡೆಗೆ ತಿರುಗಿ ನನ್ನ ಬಣ್ಣಗಳ ಬಗೆಗಿನ ಜ್ಞಾನವನ್ನೆಲ್ಲ ಉಪಯೋಗಿಸಿ ಯೋಚಿಸಿದರೂ, ನನಗೆ ಅದರಲ್ಲಿ ಕೇಸರಿ ಬಣ್ಣ ಕಾಣಲೇ ಇಲ್ಲ. ಆದರೂ, ಸುಂದರ ಹುಡುಗಿಗೆ ಸುಖಾಸುಮ್ಮನೆ ಬೇಸರ ಮಾಡುವುದು ಬೇಡ ಎಂದು "ನನಗೆ ಬಣ್ಣಗಳ ಬಗ್ಗೆ ಅಷ್ಟೆಲ್ಲಾ ತಿಳಿದಿಲ್ಲ. ಹಾಗಾಗಿ ಇದ್ದರೂ ಇರಬಹುದು" ಎಂದೆ.
"ನೀವು ಹುಡುಗರೇ ಅಷ್ಟು ಬಿಡಿ" ಎಂದು ಹೇಳಿ ಮುಸುಡಿ ತಿರುಗಿಸಿದಳು.
ಅರೆ! ನನಗೆ ಒಂದು ಬಣ್ಣ ಗೊತ್ತಿಲ್ಲ ಅಂತ ಇಡೀ ಹುಡುಗರ ಜಾತಿಯನ್ನೇ ಹೀಯಾಳಿಸುವುದೇ?! ನನಗೆ ಸುಮ್ಮನಿರಲಾಗಲಿಲ್ಲ.
"ಹೌದೌದು! ಏನ್ಮಾಡೋದು ಹೇಳಿ, ನಿಮಗೆ ಅಂತಾನೆ ಎಷ್ಟೋ ಕಂಪನಿಗಳು ಹಗಲು ರಾತ್ರಿ ನಿದ್ರೆಗೆಟ್ಟು ನಾನಾ ಕಲರ್ ಲಿಪ್ಸ್ಟಿಕ್ಕು, ನೈಲ್ ಪಾಲೀಶು ಮಾಡ್ತಾರೆ. ನಮಗೆ ಅಂತ ಈ ಕಂಪನಿಗಳು ಏನಾದ್ರು ಮಾಡಿದ್ದಾರಾ? ನಾವು ಕಣ್ಣಿಗೆ ಎಣ್ಣೆ ಹಾಕ್ಕೊಂಡು ಹುಡುಕಿದ್ರೂ ಸಿಗೋದು ನಾಲ್ಕೇ ಕಲರ್ ಬಟ್ಟೆ. ಅದನ್ನೇ ತಿರುಗ್ಸಿ ಮುರುಗ್ಸಿ ಹಾಕ್ಕೋಬೇಕು. ಹೀಗಾದ್ರೆ ನಮಗೆಲ್ಲಿ ಗೊತ್ತಾಗತ್ತೆ ಕಲರ್ ಗಳ ಬಗ್ಗೆ!” ಎಂದು ಹುಡುಗರ ಅಳವು ತೋಡಿಕೊಂಡೆ.
"ಏನ್ರೀ, ನಿಮಗೆ ಹುಡುಗೀರನ್ನ ನೋಡಿದ್ರೆ ಕಾಣೋದು ಬರಿ ಲಿಪ್ಸ್ಟಿಕ್ ಅಷ್ಟೇನಾ?" ಎಂದು ತಿರುಗಿ ಕೇಳಿದಾಗ ಸ್ವಲ್ಪ ತಬ್ಬಿಬಾದದ್ದು ನಿಜ. ಆದರೆ ಅದನ್ನೆಲ್ಲ ತೋರಿಸೊಕೊಳ್ಳದೆ, "ನಾನು ಲಿಪ್ ಸ್ಟಿಕ್ ಜೊತೆ ನೈಲ್ ಪಾಲೀಶು ಕೂಡ ಹೇಳಿದೆ. ಆದ್ರೆ ನಿಮಗೆ ಕೇಳಿದ್ದು ಲಿಪ್ ಸ್ಟಿಕ್ ಮಾತ್ರ ನೋಡಿ. ಎಂತಹ ವಿಪರ್ಯಾಸ!” ಎಂದು ಅವಳ ಮಾತನ್ನು ಅವಳಿಗೇ ತಿರುಗಿಸಿ ನುಸುಳಿಕೊಂಡೆ.
"ನಂಗೂ ಅದು ಕೇಳಿಸ್ತು, ಆದ್ರೆ ನೀವು ಮೊದ್ಲು ಹೇಳಿದ್ದು ಲಿಪ್ಸ್ಟಿಕ್ ಅಲ್ವಾ. ಹಾಗಿದ್ರೆ ನೀವು ಹುಡುಗಿರಲ್ಲಿ ಮೊದ್ಲು ನೋಡೋದೇ ಲಿಪ್ ಸ್ಟಿಕ್ಕ್ಕ?" ಎಂದು ಮತ್ತೆ ಟಾಂಗ್ ಕೊಟ್ಟಳು.
ನನಗೆ ತಲೆಕೆಟ್ಟು, "ನಿಮಗೆ ನಾನು ಹ್ಞೂ ಅಂದ್ರೆ ಖುಷಿ ಆಗೋದಾದ್ರೆ ಹಾಗೇ ಅಂದ್ಕೊಳ್ಳಿ" ಎಂದು ತಲೆ ಕೊಡವಿದೆ.
"ತುಂಬಾ ಚೆನ್ನಾಗಿ ಮಾತಾಡ್ತೀರ ಕಣ್ರಿ" ಎಂದು ನಕ್ಕು, "ಅಕಸ್ಮಾತ್ ಹುಡುಗಿ ಲಿಪ್ ಸ್ಟಿಕ್ ಹಾಕಿಲ್ಲ ಅಂದ್ರೆ?" ಎಂದು ತುಂಟ ನಗೆ ಬೀರಿ ಹುಬ್ಬೇರಿಸಿ ಕೇಳಿದಳು.
ಇದೊಳ್ಳೆ ಧರ್ಮ ಸಂಕಟಕ್ಕೆ ಬಂತಲ್ಲ! ಹಾಗಂತ ನಿಜ ಹೇಳೋಕೆ ನಾನು ಧರ್ಮರಾಯನೇನು ಅಲ್ಲವಲ್ಲ, "ಹಾಗಾದ್ರೆ ನೋಡೋದೇ ಇಲ್ಲ" ಎಂದುಬಿಟ್ಟೆ.
ಅದಕ್ಕವಳು, "ಅಯ್ಯಯ್ಯಯ್ಯಯ್ಯೊ...ಪಾಪ. ಅಷ್ಟು ಒಳ್ಳೆಯವರೇನ್ರಿ ನೀವು? ಛೆ ಛೆ, ಎಂತ ಅನ್ಯಾಯವಾಯ್ತುರೀ. ನಂಗೆ ನೀವು ಮೊದ್ಲೇ ಸಿಗ್ಬೇಕಿತ್ತು. ಛೆ!" ಎಂದಳು.
ಮೊದ್ಲೇ ಸಿಗ್ಬೇಕಿತ್ತ?? ಎಲ್ಲ ಸುಂದರ ಹುಡುಗೀರಿಗೆ ಮೊದಲೆಲ್ಲಾ ಹೇಗೆ ಒಬ್ಬ ಪೈಲವಾನ್ ಅಣ್ಣ ಇರ್ತಿದ್ನೋ, ಈ ಕಾಲದಲ್ಲಿ ಒಬ್ಬ ಬಾಯ್ ಫ್ರೆಂಡ್ ಇರೋದು ಸಾಮಾನ್ಯ ಆದಂತಿದೆ ಎಂದು ಕಲಿಯುಗಕ್ಕೆ ಶಪಿಸಿದೆ. ಆದರೂ, ಮನಸ್ಸಿನಲ್ಲೊಂದು ಸಣ್ಣ ಆಸೆಯ ಚಿಗುರು, ಇದನ್ನು ಇಷ್ಟಕ್ಕೇ ಬಿಡಬೇಡ ಎಂದು ಹೇಳಿದಂತೆನಿಸಿ, 'ಮೊದ್ಲೇ ಸಿಕ್ಕಿದ್ರೆ ಏನು ಮದ್ವೆ ಅಗ್ತಿದ್ರ?" ಎಂದು ಮೆಲುಧ್ವನಿಯಲ್ಲೇ ಕೇಳಿದೆ.
ನಾನು ಸೀದಾ ಮದುವೆಗೇ ಹೋದದ್ದು ಅವಳಿಗೆ ಆಶ್ಚರ್ಯ ತಂದಿದ್ದಂತೂ ನಿಜ. ನನ್ನ ಕಡೆ ನೋಡಿ, ತುಂಟ ಕೋಪ ತೋರಿಸಿ, "ಏನ್ರೀ, ಎಲ್ಲರೂ ಆ ಪ್ರಶ್ನೆಗೆ ಮೊದ್ಲೇ ಸಿಕ್ಕಿದ್ರೆ ಲವ್ ಮಾಡ್ತಿದ್ಯ ಅಂತ ಕೇಳ್ತಾರೆ. ನೀವು ಮದ್ವೆಗೇ ಹೋಗ್ಬಿಟ್ರಿ?" ಎಂದು ನಕ್ಕಳು.
"ಅದನ್ನೆಲ್ಲ ಮದ್ವೆ ಆದ್ಮೇಲೆ ಮಾಡಿದ್ರಾಯ್ತು ಬಿಡಿ” ಎಂದೆ.
ಅದಕ್ಕವಳು ಸ್ವಲ್ಪವೂ ಚಕಿತಳಾಗದೆ, "ಆಹಾ..ಹಾಗಿದ್ರೆ ಸಂಸಾರ ಯಾವಾಗ ಮಾಡ್ತೀರಾ?" ಎಂದು ಹತ್ತಿರ ಬಂದು ಪಕ್ಕದಲ್ಲೇ ಇದ್ದ ಸಣ್ಣ ಕಲ್ಲಿನ ಮೇಲೆ ಚಕ್ಕಳು-ಬಕ್ಕಳು ಹಾಕಿ ಕುಳಿತು ಕೇಳಿದಳು.
ನನಗೆ ಅವಳು ದೂರದಲ್ಲಿದ್ದಾಗಲೇ ಅಷ್ಟು ಸುಂದರವಾಗಿ ಕಂಡೋಳು, ಪಕ್ಕದಲ್ಲೇ ಬಂದು ಕುಳಿತು ಕೇಳಿದಾಗ ಹೇಗಾಗಿರಬೇಕು ಎಂದು ನಿಮಗೆ ತಿಳಿಸಿ ಹೇಳುವುದು ಸ್ವಲ್ಪ ಕಷ್ಟವೇ. ಅವಳ ಕಣ್ಣುಗಳನ್ನು ಅವಳು ಅರಳಿಸಿ ನನ್ನ ಉತ್ತರಕ್ಕಾಗೆ ಕಾದು ಕುಳಿತಿದ್ದಾಗ ನನಗೆ ಗಂಟಲಿನಲ್ಲಿದ್ದ ಮಾತು ಅಲ್ಲೇ ಸಿಕ್ಕಿಕೊಂಡಂತೆ ಆಯಿತು. ಅವಳನ್ನು ಅಷ್ಟು ಹತ್ತಿರದಿಂದ ನೋಡಿ ನನಗೆ ತೊದಲುವುದೊಂದೇ ಬಾಕಿ.
ಆದರೂ ಏನೂ ತೋರಿಸಿಕೊಳ್ಳದೆ ಅವಳ ಮುಖವನ್ನೇ ದಿಟ್ಟಿಸಿ ನೋಡಿ "ಥೂ..ಹೋಗಿಪ್ಪ. ನೀವು ಏನೇನೋ ಮಾತಾಡ್ತಿರ!" ಎಂದು ಹುಡುಗಿಯರ ಶೈಲಿಯಲ್ಲೇ ಹೇಳಿ ನಾಚಿಕೆಯಿಂದ ಮುಖ ತಿರುಗಿಸಿಕೊಂಡೆ.
ಅವಳು ಒಮ್ಮೆಲೇ ಜೋರಾಗಿ ನಕ್ಕು "ಏನ್ರಿ? ರೋಲ್ ಚೇಂಜ್ ಆಗೋಯ್ತು!!" ಎಂದಳು. ನಾನು ಹಾಗೇ ಅವಳ ಕಡೆ ನೋಡದೆ ನಕ್ಕೆ.
ಒಂದು ಹುಡುಗಿಯನ್ನು ಮೊದಲ ಸಲ ನೋಡಿದ ತಕ್ಷಣವೇ ಲವ್ ಆಗೋಕೆ ಸಾಧ್ಯವೇ ಎಂದು ನನಗೆ ನಾನೆ ಕೇಳಿಕೊಂಡೆ. ಹಿಂದೆಲ್ಲ ನನ್ನ ಹಲವಾರು ಗೆಳೆಯರು ಹುಡುಗಿಯರನ್ನ ನೋಡಿದ ತಕ್ಷಣವೇ ಲವ್ ಆಗೋಯ್ತು ಅಂತ ಹೇಳಿದ್ದು ಕೇಳಿ ಅವರ ಬಗ್ಗೆ ನಕ್ಕಿದ್ದೆ. ನಾವೊಮ್ಮೆ ಗೆಳೆಯರೆಲ್ಲ ಒಮ್ಮೆ ಗೋವಾಗೆ ಹೋಗುವಾಗ ದಾರಿಯ ಮದ್ಯದಲ್ಲಿ ನಂಬರ್ ಒನ್ ಮಾಡಲು ನಿಲ್ಲಿಸಿದ್ದೆವು. ನಾವು ನಮ್ಮ ಕಾರ್ಯದಲ್ಲಿ ಮಗ್ನರಾಗಿದ್ದಾಗ ದಾರಿಯಲ್ಲಿ ಒಂದು ಓಪನ್ ಟಾಪ್ ಜೀಪಿನಲ್ಲಿ ಹುಡುಗಿಯರ ಹಿಂಡೊಂದು ನಮ್ಮ ಭಂಗಿಗಳನ್ನು ನೋಡಿ ಜೋರಾಗಿ ನಗುತ್ತಾ ಹಾರನ್ ಮಾಡಿಕೊಂಡು ಹೋದರು. ಅದರಲ್ಲಿ ಒಂದು ಹುಡುಗಿ ನನ್ನ ಗೆಳೆಯನೊಬ್ಬನಿಗೆ ಉಚ್ಛೆ ಹೊಯ್ಯುವಾಗಲೇ ಇಷ್ಟವಾಗಿಬಿಟ್ಟಳು. ಅವನು ಅರ್ಧಂಬರ್ಧ ಉಚ್ಛೆ ಹೊಯ್ದು ನಮ್ಮನ್ನೂ ಮಾಡಲು ಬಿಡದೆ ಆ ಹುಡುಗಿಯರ ಜೀಪ್ ಹಿಂಬಾಲಿಸಿ ಮೂರೂ ದಿನ ಅವಳು ಹೋದಲ್ಲೆಲ್ಲ ನಾಯಿಯಂತೆ ಹಿಂಬಾಲಿಸಿ ಕೊನೆಗೂ ಅವಳಿಗೆ ಐ ಲವ್ ಯು ಹೇಳಿಯೇ ಬಿಟ್ಟ. ನೀವು ನಂಬಲಿಕ್ಕಿಲ್ಲ, ೪ ವರ್ಷದ ನಂತರ ಅದೇ ಹುಡುಗಿಯ ಜೊತೆ ಮದುವೆಯೂ ಆಯಿತು. ಉಚ್ಛೆ ಹೊಯ್ಯುವಾಗ ಲವ್ ಆದ ಜಗತ್ತಿನ ಮೊದಲ ಮತ್ತು ಕೊನೆಯ ವ್ಯಕ್ತಿ ಅವನೇ ಇರಬೇಕು.
"ತುಂಬಾ ಸರಿ ಬಂದಿದೀರಾ ಇಲ್ಲಿಗೆ " ಎಂದು ಮತ್ತೆ ಅವಳೇ ಮಾತು ಶುರು ಮಾಡಿದಳು.
"ಇದೆ ಮೊದಲ ಸಾರಿ. ನೀವು?”.
"ನಾನು ಕೂಡ" ಎಂದು ಮುಗುಳ್ನಕ್ಕಳು.
"ಬೈಕಿನಲ್ಲಿ ತುಂಬಾ ತಿರುಗೋ ಹವ್ಯಾಸ ಇದೆ ಅನ್ಸತ್ತೆ?" ಎಂದು ದೊರದ ಬೆಟ್ಟದ ಕಡೆಗೆ ನೋಡುತ್ತಲೇ ಕೇಳಿದಳು.
ನಾನು ಒಂದು ಕ್ಷಣ ಯೋಚಿಸಿ, "ಕಾರ್ ಇದ್ದಿದ್ರೆ ಅದ್ರಲ್ಲೇ ತಿರುಗ್ತಿದ್ದೆ" ಎಂದೆ.
"ನಾನು ಹಾಗಲ್ಲಾರಿ ಕೇಳಿದ್ದು…"
"ಅರ್ಥ ಆಯಿತು ಬಿಡಿ. ಬೈಕಿನಲ್ಲಿ ತಿರುಗೋ ಖಯಾಲಿ ತುಂಬಾ ಹಿಂದಿನಿಂದಲೇ ಬಂದುಬಿಟ್ಟಿದೆ. ಮೊದಲೆಲ್ಲ ಅಪ್ಪನ ಬೈಕಿನಲ್ಲಿ, ಇವಾಗ ನಂದು ಅಂತಾನೆ ಆದಮೇಲೆ ಸ್ವಲ್ಪ ಜಾಸ್ತಿ ಆಯಿತು ಅಷ್ಟೇ”.
"ಎಲ್ಲೆಲ್ಲಿ ಹೋಗಿದಿರಿ ಬೈಕಿನಲ್ಲಿ?"
"ಮನಸ್ಸು ಎಲ್ಲಿಗೆ ಹೇಳುತ್ತೋ ಅಲ್ಲಿಗೆಲ್ಲಾ ಹೋಗಿದೀನಿ"
"ಯಾವಾಗ್ಲೂ ಹೀಗೆ ಒಬ್ರೇ ಹೋಗ್ತೀರಾ?"
"ಇಲ್ಲ, ಫ್ರೆಂಡ್ಸ್ ಜೊತೆ ಹೋಗೋದೇ ಜಾಸ್ತಿ. ಇವತ್ತು ಫ್ರೆಂಡ್ ಜೊತೇನೆ ಬರ್ಬೇಕಿತ್ತು, ಆದ್ರೆ ಅವ್ನು ಕೈಕೊಟ್ಟ ಅಷ್ಟೇ"
“ಹಂಮ್..."
ಮತ್ತೆ ಕೆಲ ಹೊತ್ತು ಏನೂ ಮಾತುಕತೆ ನಡೆಯದೆ ಬೆಳಗಿನ ಹೊತ್ತಿನಲ್ಲಿ ಪಕ್ಷಿಗಳ ಕಲರವ ಕೇಳುತ್ತ ಹಾಗೆ ಕುಳಿತೆವು. ಪಕ್ಕದಲ್ಲಿ ಅವಳು ಕುಳಿತಿದ್ದ ಹೊತ್ತೆಲ್ಲಾ ನನ್ನ ಮನಸ್ಸಲ್ಲಿ ಏನೋ ಒಂಥರಾ ತಳಮಳ. ಎಷ್ಟು ಮುದ್ದಾಗಿ ಕಾಣುತ್ತಿದ್ದಳೆಂದರೆ, ಆ ಸುಂದರ ಪ್ರಕೃತಿಯ ಮಡಿಲಿನಲ್ಲೂ ಅವಳ ಒಂದು ಮುಗುಳುನಗೆಗೆ ಪ್ರತಿ ದಿನವೂ ಅಲ್ಲಿಗೆ ಬರುವುದಕ್ಕೆ ತಯಾರಿದ್ದೆ. ಅವಳ ಹೆಸರಾದರೂ ಕೇಳಬೇಕೆಂದು ಎನ್ನಿಸಿದರೂ, ಅವಳಿಗೆ ಬಾಯ್ ಫ್ರೆಂಡ್ ಇದಾನೆ ಎಂದು ಹೇಳಿದ್ದು ನೆನಪಾಗುತ್ತಿತ್ತು. ಹಾಗಾಗಿ ಅವಳು ಮತ್ತೆಂದೂ ಸಿಗುವವಳಲ್ಲ ಎನಿಸುತ್ತಿತ್ತು. ಸುಖಾಸುಮ್ಮನೆ ಅವಳನ್ನು ಮನಸ್ಸಿಗೆ ಹಚ್ಚಿಕೊಂಡು ಮತ್ತೆ ಭಗ್ನ ಪ್ರೇಮಿಯಾಗೋದು ಬೇಡ ಎಂದುಕೊಂಡೆ. ಏನೇ ಆದರೂ, ಅವಳ ಬಗ್ಗೆ ಏನೂ ಕೇಳಬಾರದು ಎಂದು ದೃಢವಾಗಿ ನಿರ್ಧರಿಸಿ ಸುಮ್ಮನಾಗಿಬಿಟ್ಟೆ. ಆದರೆ, ಮೊದಲ ನೋಟದಲ್ಲೇ ಮನಸ್ಸು ಕದ್ದ ಹುಡುಗಿಯ ಹೆಸರಾದರೂ ತಿಳಿದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮನಸ್ಸಿನಲ್ಲೇ ಕೊರಗಿದೆ. ಎಷ್ಟು ಹೊತ್ತು ಮಾತಿಲ್ಲದೆ ಹಾಗೆ ಕುಳಿತಿದ್ದೆವೋ ಗೊತ್ತಿಲ್ಲ, ಆದರೆ ನಿಧಾನವಾಗಿ ಸೂರ್ಯ ಮೇಲೇರಿ ಬಿಸಿಲು ಮೈ ಸುಡಲಾರಂಭಿಸಿತು. ಇನ್ನೇನು ಹೊರಡುವ ವೇಳೆಯಾಯ್ತು ಎಂದು ಅವಳ ಕಡೆ ತಿರುಗಿ, "ಬಿಸಿಲಾಗ್ತಾ ಇದೆ. ಹೊರೋಡೋಣ್ವ?" ಎಂದು ಕೇಳಿದೆ. ಮನಸ್ಸಿನಲ್ಲಿ ಹೊರಡಲು ಕಿಂಚಿತ್ತೂ ಇಷ್ಟವಿರದಿದ್ದರು, ಅದು ಅನಿವಾರ್ಯವಾಗಿತ್ತು.
ಅವಳೂ ತನ್ನ ಕ್ಯಾಮೆರಾ ಕೈಗೆತ್ತಿಕೊಂಡು ಎದ್ದುನಿಂತಳು. ನನಗೇ ತಿಳಿಯದಂತೆ ನನ್ನ ಎದೆ ಬಡಿತ ಹೆಚ್ಚಾಗಿ ಏನೋ ವಿಚಿತ್ರ ಅನುಭವ. ನಿಜವಾಗ್ಲೂ ನನಗೆ ಲವ್ ಆಯ್ತಾ ಎಂದು ನನಗೆ ನಾನೆ ಕೇಳಿಕೊಂಡೆ. ಏನೇ ಆದರೂ ಅದನ್ನು ತೂಗಿ ಅಳೆದು ನೋಡೋ ಸ್ವಭಾವದನವಾದ್ದರಿಂದ ಅದನ್ನು ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳೋದೇ ಒಳ್ಳೇದು ಎಂದೆನಿಸಿ ಮತ್ತೆ ಸಮಾಧಾನ ಮಾಡಿಕೊಂಡೆ. ಆದರೆ ಇನ್ನೊಂದು ಕಡೆ ಮತ್ತೆ ಹುಡುಗಿ ಸಿಗೋದೇ ಇಲ್ಲ ಅಂದಮೇಲೆ ಅಳೆದು ತೂಗಿ ನೋಡಿ ಏನೂ ಮಾಡೋಕಾಗತ್ತೆ ಎಂದೆನಿಸಿತು. ನನ್ನ ಜೀವನದಲ್ಲಿ ಹಲವಾರು ಗೊಂದಲದ ಕ್ಷಣಗಳನ್ನು ನೋಡಿದ್ದರೂ, ಅಂದೇಕೋ ನನ್ನ ಮನಸ್ಸು ದಾರಿಕಾಣದೆ ಅಲೆಮಾರಿಯಂತೆ ಅಲೆದಾಡಿತು. ನಾನು ಇಷ್ಟೆಲ್ಲಾ ಯೋಚಿಸುವಷ್ಟರಲ್ಲಿ ಅವಳೂ ಒಂದೆರೆಡು ಹೆಜ್ಜೆ ಮುಂದಿಟ್ಟು ಮತ್ತೆ ಹಿಂತಿರುಗಿ ನೋಡಿ, "ನಂದೊಂದು ಫೋಟೋ ತೆಗಿತೀರಾ ಇಲ್ಲಿ?" ಎಂದು ಕೇಳಿದಳು. ಎಲ್ಲೋ ಕಳೆದುಹೋಗಿದ್ದ ನನಗೇ ಅವಳ ಮಾತುಗಳು ಮನದಟ್ಟಾಗುವುದಕ್ಕೆ ಹಲವು ಕ್ಷಣಗಳು ಬೇಕಾದವು.
ನಾನು ಅವಳ ಕ್ಯಾಮೆರಾ ಹಿಡಿದುಕೊಂಡು ಅವಳಿಗೆ ನಿಲ್ಲಲು ಹೇಳಿ ಒಂದೊಳ್ಳೆ ಜಾಗ ಹುಡುಕಿ ಫೋಟೋ ತೆಗೆಯಲು ಅಣಿಯಾದೆ. ಅವಳು ಬೆಟ್ಟಗಳ ಸಾಲಿಗೆ ಬೆನ್ನುಮಾಡಿ ನಿಂತು ನನ್ನನ್ನೊಮ್ಮೆ ನೋಡಿ ರೆಡಿ ಎನ್ನುವಂತೆ ತಲೆಯಾಡಿಸಿದಳು. ನಾನು ಕ್ಯಾಮೆರಾ ಕಣ್ಣಿಗೇರಿಸಿ ಫೋಟೋ ತೆಗೆಯುವಷ್ಟರಲ್ಲಿ ಅವಳು ತನ್ನ ತಲೆಯನ್ನು ಎಡಕ್ಕೆ ವಾಲಿಸಿ ಕ್ಯಾಮೆರಾ ಕಣ್ಣುಗಳನ್ನೇ ನೋಡುತ್ತಾ ಮುಗುಳುನಕ್ಕಳು. ಒಹ್..ನೀವೊಮ್ಮೆ ಅವಳನ್ನು ಆಗ ನೋಡಬೇಕಿತ್ತು. ಅವಳ ಸೌಂದರ್ಯಕ್ಕೆ ನಾನು ಅಲ್ಲಿಯೇ ಕರಗಿಹೋದೆ. ಕಣ್ಣುಮುಚ್ಚಿ ಅವಳ ಮುಖವನ್ನೊಮ್ಮೆ ಹಾಗೆಯೆ ಮನಸ್ಸಿನಲ್ಲೊಮ್ಮೆ ಅಚ್ಚುಹೊತ್ತಿಕೊಂಡೆ. ನನಗರಿವಿಲ್ಲದಂತೆಯೇ ನನ್ನ ಕೈಗಳಿಗೆ ಆ ಕ್ಯಾಮೆರಾವೂ ಭಾರವಾದಂತಾಗಿ ಜೋತುಬಿದ್ದು, ಮೈಯೆಲ್ಲಾ ಒಮ್ಮೆ ಜುಮ್ ಎಂದು ನಿಟ್ಟುಸಿರೊಂದು ಹೊರಬಂತು. ನಿಮಗೆ ಅತಿಯಾಗಿ ಖಿಷಿಯಾದಾಗ ಹೇಗೆನ್ನಿಸುತ್ತದೋ ಹಾಗೆ. ಮೈಯೆಲ್ಲಾ ಭಾರವಾದ ಹಾಗೆ. ನಾನು ಕಣ್ಣು ಬಿಟ್ಟು ತಲೆಯೆತ್ತಿದಾಗ ಅವಳು ನನ್ನನ್ನೇ ಎವೆಯಿಕ್ಕದೆ ನೋಡುತ್ತಿದ್ದುದು ಕಂಡೆ ದಡಬಡಾಯಿಸಿ ಎಚ್ಚೆತ್ತೆ. ನನ್ನ ದಡ್ಡತನಕ್ಕೆ ನಾನೆ ಶಪಿಸಿಕೊಂಡೆ.
"ಏನಾಯ್ತು?" ಅವಳು ಕೇಳಿದಳು.
ನಾನಾದರೂ ಏನೆಂದು ಹೇಳಲಿ! "ಏನೂ ಇಲ್ಲ. ರೆಡಿನಾ?" ಎಂದು ಮತ್ತೆ ಫೋಟೋ ತೆಗೆಯೆಲು ಅಣಿಯಾದೆ.
ಅವಳೊಮ್ಮೆ ಸಂಶಯದ ನೋಟ ಬೀರುತ್ತಾ, ಮತ್ತೊಮ್ಮೆ ಫೋಟೋಗೆ ಮುಗುಳುನಕ್ಕಳು. ನಾನು ಮತ್ತೆ ದಡ್ಡತನ ತೋರಿಸದೆ, ಮನಸ್ಸಿನಲ್ಲಿಯೇ ಆನಂದಿಸುತ್ತಾ ಒಂದೆರೆಡು ಫೋಟೋ ತೆಗೆದು ಅವಳಿಗೆ ತೋರಿಸಿದೆ. ಅವಳಿಗೆ ಫೋಟೋ ಒಪ್ಪಿಗೆಯಾಗಿ, ಓಕೆ ಎಂದಳು. ಹಿಂದೆಯೇ, "ನಿಮ್ಮ ಫೋಟೋ ತೆಗಿಬೇಕಾ?" ಎಂದು ಕೇಳಿದಳು. ನನಗೇ ಅಷ್ಟೇನೂ ಫೋಟೋ ಹುಚ್ಚಿಲ್ಲದ ಕಾರಣ ಬೇಡವೆಂದು ಹೇಳಿದೆ.
ಅವಳ ಕ್ಯಾಮೆರಾ ಅವಳ ಕೈಗಿಟ್ಟು "ಸರಿ ಹೊರೋಡೋಣ.." ಎಂದು ಮುಂದುವರಿದೆ.
"ಇಬ್ಬರೂ ಒಂದು ಫೋಟೋ ತಗೋಳೋಣ್ವಾ? ಜೊತೆಗೆ?" ಹಿಂದಿನಿಂದ ಅವಳ ಪ್ರಶ್ನೆ.
ನಿಜ ಹೇಳಿಬಿಡುತ್ತೇನೆ, ಹುಡುಗಿ ಫೋಟೋಗೆ ಕರೆದಾಗ ನಾನೊಮ್ಮೆ ಜೋರಾಗಿ ಕಿರುಚಬೇನ್ನಿಸುವಷ್ಟು ಖುಷಿಯಾದರೂ, ತೋರಿಸಿಕೊಳ್ಳದೆ ಸುಮ್ಮನೆ ತಲೆಯಾಡಿಸಿ ಅವಳ ಬಳಿ ಹೋದೆ. ಅವಳು ತನ್ನ ಕ್ಯಾಮೆರಾವನ್ನು ನಾವಿಬ್ಬರೂ ಕಾಣುವಂತೆ ಹೊಂದಿಸಿ ಎರೆಡು ಫೋಟೋ ತೆಗೆದಳು. ನಾನು ನನ್ನ ಮನಸ್ಸಿನಲ್ಲಿದ್ದ ಖುಷಿಯನ್ನೆಲ್ಲ ಮುಖದಲ್ಲಿ ಕಾಣುವಂತೆ ನಸುನಕ್ಕೆ.
ನಾನು ಅವಳಿಗೆ ನನ್ನ ಕ್ಯಾಮೆರಾದಲ್ಲೂ ಒಂದು ಫೋಟೋ ತೆಗಿತೇನೆ ಎಂದು ಹೇಳಬೇಕೆನ್ನುವಷ್ಟರಲ್ಲಿ "ಸರಿ ಹೊರಡೋಣ. ಟೈಮಾಯ್ತು." ಎಂದಳು. ಅವಳ ಮಾತು ಕೇಳಿ ನನ್ನ ಮಾತು ಗಂಟಲಲ್ಲೇ ನಿಂತುಹೋಗಿ, ಆಕಾಶದ ಕಡೆಯೊಮ್ಮೆ ನೋಡಿ ನಸುನಕ್ಕು "ಆಯ್ತು" ಎಂದೆ.
ಮಾತಿಲ್ಲದೆ ಅವಳ ಕಾರಿನವರೆಗೂ ನಡೆದದ್ದಾಯ್ತು. ನಾನೇಕೋ ಆ ಹೊತ್ತಿನಲ್ಲಿ ಮಂಕು ಬಡಿದಂತೆ ಮೌನವಾಗಿಬಿಟ್ಟಿದ್ದೆ. ಆದರೆ ಮುಖದಲ್ಲಿ ನಗು ತೋರಿಸಲು ಮರೆಯಲಿಲ್ಲ. ಅವಳು ಕಾರಿನ ಬಾಗಿಲು ತೆಗೆಯುತ್ತಾ, "ನೀವು ಯಾವಕಡೆ?" ಎಂದಳು. ನಾನು ಮೂಡಬಿದಿರೆಯ ಕಡೆ ಕೈಮಾಡಿದೆ. "ನೀವು?" ಎಂದೆ. ಅವಳು ಮಂಗಳೂರಿನ ಕಡೆ ಕೈಮಾಡಿದಳು.
ಪೂರ್ವ-ಪಶ್ಚಿಮ ದಿಕ್ಕುಗಳು. ಅದಕ್ಕಾಗಿಯೇ ನನ್ನ ಮನಸ್ಸು ಮೊದಲಿನಿಂದಲೂ ನಕಾರಾತ್ಮಕ ಚಿಂತನೆಯಲ್ಲೇ ತೊಡಗಿತ್ತು ಎನ್ನಿಸಿತು. ಮನಸ್ಸಿಲ್ಲಿನಲ್ಲಿ ಬೇಜಾರಿದ್ದರು, ತೋರಿಸಿಕೊಳ್ಳದೆ "ಸರಿ ಹಾಗಾದರೆ. ಮತ್ತೆ ಸಿಗೋಣ." ಎಂದು ಕೈ ಮುಂದೆ ಮಾಡಿದೆ. ಅವಳೂ ನಸುನಗುತ್ತಾ ಕೈಕುಲುಕಿದಳು. ಮತ್ತೆ ಅಲ್ಲಿಯೇ ನಿಂತು ಮಾಡುವುದಕ್ಕೇನು ಇರಲಿಲ್ಲವಾದ್ದರಿಂದ, ಬೈ ಹೇಳಿ ನನ್ನ ಬೈಕಿನ ಕಡೆ ನಡೆದೆ. ನನ್ನ ಹಿಂದೆಯೇ ಕಾರು ಸ್ಟಾರ್ಟ್ ಆದ ಶಬ್ದ ಬಂತು. ನಾನು ನನ್ನ ಬೈಕಿನ ಮೇಲೆ ಹತ್ತುವಷ್ಟರಲ್ಲಿ ಅವಳ ಕಾರು ನನ್ನನ್ನು ಬಳಸಿ ಮುಂದುವರೆಯಿತು. ಕಿಟಕಿಯಲ್ಲಿ ಅವಳು ಮತ್ತೊಮ್ಮೆ ಕೈಬೀಸಿ ಬೈ ಹೇಳಿದಳು. ಕಾರು ಮುಂದೆ ಹೋದಮೇಲೆ ನನಗೆ ನಾನೆ ಹೇಳಿಕೊಂಡೆ "ಮೊದಲ ನೋಟಕ್ಕೆ ಮನಸೋತ ಹುಡುಗಿಯ ಹೆಸರನ್ನೂ ಕೇಳದೆ ತಪ್ಪು ಮಾಡಿದೆ". ಮತ್ತೆ ಹೆಚ್ಚು ಹೊತ್ತು ಅಲ್ಲಿ ನಿಲ್ಲಲು ಮನಸ್ಸಾಗದೆ ಬೈಕು ಸ್ಟಾರ್ಟ್ ಮಾಡಿ ಮನೆ ಕಡೆ ತಿರುಗಿಸಿದೆ.
ಬೈಕು ಓಡಿಸುತ್ತಾ ಮನಸ್ಸು ಎಲ್ಲೋ ಕಳೆದುಹೋಗಿತ್ತು. ಕಣ್ಣಲ್ಲೆಲ್ಲ ಅವಳ ಮುಖವೇ ತುಂಬಿದಂತೆ. ಸಿನಿಮಾಗಳಲ್ಲಿ ಇದನ್ನೆಲ್ಲಾ ತೋರಿಸುವಾಗ ಡೈರೆಕ್ಟರುಗಳಿಗೆ ಶಪಿಸುತ್ತಿದ್ದೆ. ಆದರೆ ನನಗೇ ಅನುಭವವಾದಾಗ, ಜಗತ್ತೆಲ್ಲ ವಿಚಿತ್ರವಾಗಿ ಕಂಡಿತು. ಮನಸ್ಸು ಪುಟ್ಟ ಮಗುವಿದೆ ಕಾಲು ಬಂದಂತೆ, ಎಲ್ಲೆಲ್ಲೋ ವಾಲಾಡುತ್ತ ಅಲೆದಾಡಿತು. ಕೈಕಂಬ ಬಂದಾಗ ಯಾಕೋ ಟೀ ಕುಡಿಯುವ ಮನಸ್ಸಾಗಿ, ಅಲ್ಲೇ ಟೀ ಅಂಗಡಿಯೊಂದರ ಮುಂದೆ ನಿಲ್ಲಿಸಿ ಒಳನುಗ್ಗಿದೆ. ಒಂದು ಮೂಲೆ ಹುಡುಕಿ ಅಲ್ಲಿಗೆ ನಡೆದು ಒಂದು ಸ್ಪೆಷಲ್ ಟೀ ಹೇಳಿದೆ.
ಕಣ್ಣು ಮುಚ್ಚಿದಾಗಲೆಲ್ಲ ಅವಳ ಮುಖವೇ ಕಂಡಂತಾಗುತ್ತಿತ್ತು. ಇದೆಲ್ಲಾ ನನಗೆ ಮೊದಲ ಸಲ. ಇದಕ್ಕಿಂತ ಮುಂಚೆ ಯಾರೂ ಇಷ್ಟೊಂದು ಇಷ್ಟವಾಗಿರಲಿಲ್ಲ. ಅವಳ ಮುಖ ನೆನಪಾದಾಗಲೆಲ್ಲಾ ನನಗರಿಯದಂತೆಯೇ ಮುಖದಲ್ಲೊಂದು ಮಂದಹಾಸ. ಖಂಡಿತ ಇದು ಪ್ರೀತಿಯೇ ಸರಿ. ಹುಡುಗಿ ತುಂಬಾ ಇಷ್ಟವಾಗಿಬಿಟ್ಟಿದ್ದಳು. ಬರೀ ಲವ್ ಮಾಡೋವಷ್ಟು ಅಲ್ಲ, ಮಾಡುವೆ ಆಗೋ ಅಷ್ಟು. ನಾನ್ಯಾಕೆ ಅವಳ ಹೆಸರನ್ನು ಕೇಳದೆ ಬಂದೆ ಎಂಬುದನ್ನು ನಾನು ನನ್ನ ಜೀವನವಿಡೀ ನನ್ನನ್ನೇ ಕೇಳಿಕೊಂಡು ಕೊರಗುವ ಪ್ರಶ್ನೆಯಾಗುವುದು ಖಂಡಿತ. ಅಲ್ಲದೆ, ಇದನ್ನೇನಾದರೂ ನಾನು ಅಭಿಗೆ ಹೇಳಿದ್ದೆ ಆದರೆ ಜೀವನವಿಡೀ ಅವನಿಂದ ಹೀಯಾಳಿಸಿಕೊಳ್ಳುವುದು ತಪ್ಪದು. ಹುಡುಗಿ ನನನ್ನು ಬೇಡ ಅಂದಿದ್ದರು ಅಷ್ಟೇನೂ ಅವನಿಂದ ತೊಂದರೆ ಇರೋದಿಲ್ಲ. ಆದರೆ ಒಂದು ಹುಡುಗಿಯ ಹತ್ತಿರ ೨ ಗಂಟೆ ಮಾತನಾಡಿ ಅದರ ಮದ್ಯೆದಲ್ಲಿಯೇ ಅವಳ ಮೇಲೆ ಲವ್ ಆಗಿ, ಅವಳ ಜೊತೆ ಫೋಟೋ ತೆಗೆಸಿಕೊಂಡು ಸಹ ಹೆಸರು ಕೇಳದೆ ಬಂದಿರುವ ನನ್ನನ್ನು ಅವನು ಅಕ್ಷರಷ್ಯ ಜೀವಂತವಾಗೇ ಹೂತುಬಿಡುವನೇನೋ.
ಅಷ್ಟರಲ್ಲಿ ಟೀ ಬಂತು. ಯಾರೇನು ಅಂದುಕೊಂಡರೇನು? ಇಂದಲ್ಲಾ ನಾಳೆ ಅವರೆಲ್ಲ ಸುಮ್ಮನಾಗುವರು. ಆದರೆ ನನ್ನ ಮನಸು ಸುಮ್ಮನಾಗುವುದೇ? ಅವಳನ್ನು ಸಂಪೂರ್ಣವಾಗಿ ಮರೆಯುವ ತನಕವೂ ಕಾಡದೆ ಬಿಡುವುದಿಲ್ಲ. ಜೀವನದಲ್ಲಿ ಯಾವುದನ್ನೂ ಕಷ್ಟಪಟ್ಟಾದರೂ ಮರೆಯಬೇಕು ಎಂದುಕೊಳ್ಳುತ್ತೇವೋ, ಅದನ್ನು ಎಂದೂ ಮರೆಯುವುದಕ್ಕಾಗುವುದಿಲ್ಲ ಎಂದೂ ನನಗೆ ಗೊತ್ತಿತ್ತು. ನಿಧಾನಕ್ಕೆ ಟೀ ಹೀರುತ್ತಾ 'ಕೊನೆಗೂ ಭಗ್ನ ಪ್ರೇಮಿಯಾಗಿಯೇ ಬಿಟ್ಟೆ!' ಎಂದು ನನಗೆ ನಾನೇ ಹೇಳಿಕೊಂಡೆ. ಹಿಂದೆಯೇ ನನ್ನ ಮೇಲೆ ನಾನೇ ಒಂದು ಕುಹುಕದ ನಗೆ ಕೊಟ್ಟುಕೊಂಡೇ.
ಟೀ ಮುಗಿದರೂ ಯಾಕೋ ಮನೆಗೆ ಹೊರಡುವ ಮನಸ್ಸೇ ಆಗಲಿಲ್ಲ. ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು ನಾನು ಯಾಕೆ ಹೀಗೆ ಮಾಡಿಕೊಂಡೆ ಎಂದು ಯೋಚಿಸಿದೆ. 'ಅವಳಿಗೆ ಆಗಲೇ ಬಾಯ್ ಫ್ರೆಂಡ್ ಇದಾನೆ ಅಂತ ಹೇಳಿದ್ದಕ್ಕೆ ತಾನೇ ನಾನು ಕೊನೆವರೆಗೂ ಸುಮ್ಮನಿದ್ದಿದ್ದು. ಎಲ್ಲಾ ಹುಡುಗೀರೂ ಮೊದಲು ಹೇಳೋದೇ ಹಾಗೇ ಅಲ್ಲವೆ. ಯಾರು ತಾನೇ ಬಂದು ನಾನು ಫ್ರೀ ಇದೀನಿ ಅಂತಾರೆ!. ಅವಳಿಗೆ ಬಾಯ್ ಫ್ರೆಂಡ್ ಇದಾನೆ ಅಂತ ಗೊತ್ತಾದ ಮೇಲೆ ನನಗೇನಾದರೂ ಅವಳ ಮೇಲಿನ ಮೋಹ ಕಡಿಮೆಯಾಯ್ತ? ಇಲ್ವಲ್ಲ. ಹಾಗಾದ್ರೆ ಅವಳ ಬಾಯ್ ಫ್ರೆಂಡ್ ಬಗ್ಗೆ ಯಾಕೆ ಅಷ್ಟೊಂದು ಯೋಚನೆ ಮಾಡಿದೆ?! ಅವಳಿಗೆ ನನ್ನನ್ನು ನೋಡಿ ಲವ್ ಆಗದೆ ಇರಬಹುದು. ಆದರೆ ನನಗಾಗಿದೆಯಲ್ಲ!' ಎಂದು ಹೇಳಿಕೊಂಡೆ. ನನಗೆ ಅತಿಯಾಗಿ ಬೇಜಾರಾದದ್ದು ಒಂದೇ ಒಂದು ವಿಷಯದ ಬಗ್ಗೆ. ನನಗೆ ಅವಳ ಹೆಸರು ಗೊತ್ತಾಗಬೇಕಿತ್ತು ಅಷ್ಟೇ. ಅದನ್ನೇ ಯೋಚಿಸುತ್ತಾ ಇನ್ನೂ ಬೇಜಾರಾಗಿ ಅಲ್ಲಿಯೇ ಟೇಬಲ್ಲಿನ ಮೇಲೆ ತಲೆಯಿಟ್ಟು ಕಣ್ಣುಮುಚ್ಚಿಕೊಂಡೆ.
ಅಷ್ಟರಲ್ಲಿ ಮುಂದಿನಿಂದ "ಹಾಯ್.." ಎಂದು ಹುಡುಗಿಯ ಧ್ವನಿಯೊಂದು ಕೇಳಿಬಂತು. ನಾನು ಅಷ್ಟು ಹತ್ತಿರದಿಂದ ಧ್ವನಿ ಕೇಳಿ ಚಕಿತನಾಗಿ ತಲೆಯೆತ್ತಿ ನೋಡಿದೆ. ನನ್ನ ಮುಂದೆ ಅವಳು ಕುಳಿತಿದ್ದಳು. ನನಗೆ ನಂಬಲಿಕ್ಕೇ ಆಗಲಿಲ್ಲ. ನಿಜವಾಗಿಯೂ ಅವಳೇನಾ? ಇದೇನು ಕನಸ? ನನ್ನ ಜೀವನದಲ್ಲೂ ಒಂದು ಸಿನಿಮೀಯಾ ರೀತಿಯ ಕ್ಲೈಮಾಕ್ಸ್ ಏನಾದರು ದೇವರು ಬರೆದಿದ್ದಾನಾ?!
ಅವಳು ನನ್ನ ಮುಖವನ್ನೇ ದಿಟ್ಟಿಸಿ ನೋಡಿ ನಸುನಗುತ್ತಾ “ನನ್ನ ಹೆಸರು ಅನನ್ಯ. ನಿಮ್ಮದು?” ಎಂದು ಹಸ್ತಲಾಘವಕ್ಕೆ ಕೈ ಮುಂದೆ ಮಾಡಿದಳು. ನಾನು ಅವಳ ಮುಖವನ್ನೇ ದಿಟ್ಟಿಸುತ್ತಾ ಹಾಗೇ ನಿಧಾನವಾಗಿ ಎದ್ದು ನಿಂತು ಕೈ ಮುಂದೆ ಮಾಡಿ ನಸುನಕ್ಕೆ. ಅಲ್ಲಿಗೆ ನನ್ನ ಜೀವನದಲ್ಲೊಂದು ಹೊಸ ಅದ್ಯಾಯ ಶುರುವಾಗಿತ್ತು.