ನಾನು ಚಿಕ್ಕವನಿದ್ದಾಗ ರಜೆಗಳನ್ನೆಲ್ಲಾ ಅಳಗವಾಡಿಯಲ್ಲಿ ಕಳೆದದ್ದೇ ಹೆಚ್ಚು. ಅದು ನಮ್ಮಮ್ಮನ ಊರು. ಅಲ್ಲಿಗೆ ಹೋಗುವುದೆಂದರೆ ನನಗೆ ಎಲ್ಲಿಲ್ಲದ ಉತ್ಸಾಹ. ಅದೊಂದು ಮಳೆಗಾಲದಲ್ಲಿ ನಾನು ಅಮ್ಮನ ಜೊತೆ ಅಳಗವಾಡಿಗೆ ಹೋಗಿದ್ದಾಗಿನ ಘಟನೆಯೊಂದನ್ನು ಇಲ್ಲಿ ಮೆಲುಕುಹಾಕಿದ್ದೇನೆ. ಮಳೆಗಾಲದಲ್ಲಿ ಅಳಗವಾಡಿ ಆ ಕಾಲದಲ್ಲಿ ಕೆಸರಿನ ತೊಪ್ಪೆಯಾಗುತ್ತಿತ್ತು. ಎಲ್ಲಿ ಕಾಲಿಟ್ಟರೂ ಬರೀ ಕೆಸರೇ. ಬರೀ ದಸರೆಯ ದಿನಗಳನ್ನು ಅಲ್ಲಿ ಕಳೆದ ನನಗೆ ಮಳೆಗಾಲದಲ್ಲಿ ಅಳಗವಾಡಿಯೇಕೋ ಮಂಕಾಗಿ ಕಾಣುತ್ತಿತ್ತು. ಚಿತ್ರದುರ್ಗದಿಂದ ಅಳಗವಾಡಿಗೆ ಬೆಳಗೊಂದು ಸಂಜೆಯೊಂದು ಸರ್ಕಾರಿ ಬಸ್ಸುಗಳಿದ್ದವು. ಅವುಗಳನ್ನು ಮಿಸ್ ಮಾಡಿಕೊಂಡರೆ ಯಾವುದಾದರು ಮೆಟಡೋರೋ ಅಥವಾ ಟೆಂಪೋ ಗಾಡಿಗಳನ್ನೋ ಹಿಡಿಯಬೇಕಿತ್ತು. ಅವುಗಳೋ, ಜನ ತುಂಬಿ ಉಸಿರಾಡಲೂ ಆಗದಷ್ಟು ಟೈಟಾಗುವವರೆಗೂ ಹೊರಡುತ್ತಿರಲಿಲ್ಲ. ಹಾಗಾಗಿ ಜನಗಳೆಲ್ಲಾ ಸರ್ಕಾರೀ ಬಸ್ಸನ್ನೇ ಹೆಚ್ಚಾಗಿ ನಂಬಿದ್ದರು. ಎಲ್ಲರೂ ಬಸ್ಸನ್ನೇ ಅವಲಂಬಿಸಿದ್ದು ಬಸ್ಸುಗಳಲ್ಲೂ ಜನಜಂಗುಳಿ ಹೆಚ್ಚಾಗಿ ಒಮ್ಮೊಮ್ಮೆ ಒಂದು ಕಡೆಗೆ ಪೂರ್ತಿ ವಾಲಿಕೊಂಡೇ ಹೋಗುವಷ್ಟು ತುಂಬಿಬಿಡುತ್ತಿದ್ದವು.
ಹೀಗೇ ಒಂದು ಮಳೆಗಾಲದ ದಿನ ನಾನು ಮತ್ತು ಅಮ್ಮ ಅಜ್ಜನ ಊರಿಗೆ ಹೋಗಲು ತಯಾರಾದೆವು. ಮಳೆಗಾಲದಲ್ಲಿ ನನ್ನನ್ನು ಅಜ್ಜನ ಮನೆಗೆ ಕಳಿಸಲು ಅಪ್ಪನಿಗೆ ಸುತರಾಂ ಒಪ್ಪಿಗೆ ಇರಲಿಲ್ಲ. ಅವರು ಆಗ ಪೊಲೀಸ್ ನೌಕರಿಯಲ್ಲಿದ್ದರು. ಅವರಿಗೆ ಮಕ್ಕಳ ಆರೋಗ್ಯದ ಬಗ್ಗೆ ತುಂಬಾ ಕಾಳಜಿ. ನಾನು ಅಜ್ಜನ ಊರಿಗೆ ಹೋದರೆ ಎಲ್ಲಿ ಬೇಕೋ ಅಲ್ಲೆಲ್ಲ ತಿರುಗಾಡಿ ಹುಷಾರು ತಪ್ಪಿಸಿಕೊಳ್ಳುತ್ತೇನೆ ಎಂಬ ಆತಂಕ ಅವರಿಗೆ. ಅವರ ಆತಂಕಕ್ಕೆ ಪುಷ್ಟಿ ಕೊಡುವಂತೆ ನನಗೆ ಅಜ್ಜನ ಮನೆಗೆ ಹೋದಾಗಲೆಲ್ಲಾ ಜ್ವರವೋ ಇಲ್ಲ ನೆಗಡಿಯೊ ಆಗಿ ಡಾಕ್ಟರನ್ನು ನೋಡಲು ಮತ್ತೆ ಚಿತ್ರದುರ್ಗಕ್ಕೆ ಬರಬೇಕಾಗುತ್ತಿತ್ತು. ನನಗೇನಾದರೂ ಹಾಗೆ ಆದರೆ ಅದಕ್ಕೆ ಅಪ್ಪ ಅಮ್ಮನೇ ಕಾರಣ ಎಂದು ಅಮ್ಮನನ್ನು ದೂಷಿಸುತ್ತಿದ್ದರು. ನನಗೆ ಹುಷಾರಿಲ್ಲದ್ದಕ್ಕೆ ಅಮ್ಮ ಕಾರಣವಲ್ಲ ಎಂದು ಅವರಿಗೆ ಗೊತ್ತಿದ್ದರೂ ಅವರಿಗೆ ಯಾರನ್ನಾದರೂ ಬಯ್ಯದಿದ್ದರೆ ಸಮಾಧಾನವಾಗುತ್ತಿರಲಿಲ್ಲ. ಹಾಗಾಗಿ ಅಮ್ಮನಿಗೆ ಬಯ್ಗುಳ ಸಿಗುತ್ತಿದ್ದವು. ನಾವು ಊರಿಗೆ ಹೋಗಬೇಕಾದಾಗೆಲ್ಲ ಅಪ್ಪನೇ ನಮ್ಮನ್ನು ಖುದ್ದಾಗಿ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದರು. ಬಸ್ಸಿನಲ್ಲಲ್ಲ, ಅಪ್ಪನ ಮೊಪೆಡ್ಡಿನಲ್ಲಿ. ಅವರದು ಆಗ T.V.S. ಕಂಪನಿಯ 70 ಸಿಸಿ ಯ ಮೊಪೆಡ್ ಒಂದಿತ್ತು. ಅದರಲ್ಲೇ ನಾವು ಮೂರೂ ಜನ ಯಾವಾಗಲೂ ಸವಾರಿ ನಡೆಸುತ್ತಿದ್ದುದು. ಅದೇನು ದೊಡ್ಡ ಗೇರು ಗಾಡಿಯೇನಿರಲಿಲ್ಲ. ಸಣ್ಣ ಮೊಪೆಡ್ ಅಷ್ಟೇ. ಅದರಲ್ಲಿ ಇಬ್ಬರು ಸರಿಯಾಗಿ ಕುಳಿತುಕೊಳ್ಳಬಹುದಿತ್ತಷ್ಟೆ. ಮೂರನೆಯವರಿಗೆ ಜಾಗವೇ ಇರಲಿಲ್ಲ. ಮೊದಲೆಲ್ಲಾ ಅಪ್ಪ ತೆಳ್ಳಗೆ ಫಿಲಂ ಹೀರೋ ತರಹವೇ ಇದ್ದರು. ಆಗ ಅವರು ಹೀರೋ ಸೈಕಲ್ ಓಡಿಸುತ್ತಿದ್ದರು. ಇದೆಲ್ಲಾ 1990-91ರ ಕಾಲ. ಮೊಪೆಡ್ ಕೊಂಡದ್ದು ಅವರ ಫಿಲಂ ಹೀರೋ ತರಹದ ಬಾಡಿಗೆ ಶಾಪವಾಗಿ ಪರಿಣಮಿಸಿತು. ಅದನ್ನು ಕೊಂಡಮೇಲೆ ಅವರಿಗೆ ಕಷ್ಟಪಟ್ಟು ಮಾಡುವ ಕೆಲಸವೇ ಇಲ್ಲದಂತಾಗಿ ಇದ್ದಕ್ಕಿದ್ದಂತೆ ಕಂಡಾಪಟ್ಟೆ ದಪ್ಪವಾಗಿಬಿಟ್ಟರು. ಇವರ ದೇಹದ ತೂಕ ಹೆಚ್ಚಾದಂತೆಯೂ, ಬೈಕಿಗೆ ಕಷ್ಟವಾಗುತ್ತ ಹೋಯಿತು. ಕೆಲವೊಮ್ಮೆ ಅದು ಇವರ ಭಾರವನ್ನು ಎಳೆಯುತ್ತಲೇ ಇರಲಿಲ್ಲ. ದಿಣ್ಣೆಯೇನಾದರೂ ಹತ್ತಬೇಕಾಗಿ ಬಂದರೆ ಆ ಮೊಪೆಡ್ ಕಿರ್ರರ್ರೋ ಎಂದು ಕಿರುಚಿಕೊಂಡು ಅಳುತ್ತಿತ್ತು. ಆದರೆ ಅಪ್ಪನಿಗೆ ಅದೆಲ್ಲಾದರ ಚಿಂತೆಯೇ ಇರಲಿಲ್ಲ. ಅವರು ಆ ಮೊಪೆಡನ್ನು ಅಗಸನ ಕತ್ತೆಯಂತೆಯೇ ದುಡಿಸಿಕೊಳ್ಳುತ್ತಿದ್ದರು. ಆ ಮೊಪೆಡ್ ಎಷ್ಟೇ ಗೋಳು ಹೊಯ್ದುಕೊಂಡರೂ ಅಪ್ಪ ದಿನ ಬೆಳಗೆದ್ದು ಅದರ ಪ್ರಾಣ ಹಿಂಡುತ್ತಿದ್ದುದು ಸುಳ್ಳಲ್ಲ.
ನಾವು ಹೊರಡುವ ದಿನ ಅಪ್ಪ ಎಂದಿನಂತೆ ನನ್ನನ್ನು ಮತ್ತು ಅಮ್ಮನನ್ನು ಮೊಪೆಡ್ಡಿನಲ್ಲಿ ಕೂರಿಸಿಕೊಂಡು ಅಳಗವಾಡಿಗೆ ಹೊರಡಲು ಅನುವಾದಾಗ ಬೆಳಗ್ಗೆ ಇನ್ನೂ 7.30 ಆಗಿತ್ತಷ್ಟೆ. ಅಳಗವಾಡಿ ಚಿತ್ರದುರ್ಗದಿಂದ 20 ಕಿ. ಮೀ. ಅಷ್ಟೇ ಇದ್ದುದಾದರೂ, ಅಮ್ಮ ತಾನೇನೋ ಕನ್ಯಾಕುಮಾರಿಗೆ ಹೊರಟವಳಂತೆ ಒಂದು ದೊಡ್ಡ ಬ್ಯಾಗನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡಿದ್ದಳು. ನಾವೆಲ್ಲಾ ಒಟ್ಟಾಗಿ ರೆಡಿಯಾಗಿ ಹೊರಬಂದುದನ್ನು ನೋಡಿ ಆ ಮೊಪೆಡ್ಡಿಗೆ ತಲೆಸುತ್ತು ಬಂದಿರಲಿಕ್ಕೂ ಸಾಕು. ಅದು ಹಳೆಯ ಕಾಲದ ಮೊಪೆಡ್ ಆದುದರಿಂದ ಅದಕ್ಕೆ ಎಲೆಕ್ಟ್ರಿಕ್ ಅಥವಾ ಕಿಕ್ ಸ್ಟಾರ್ಟ್ ಇರಲಿಲ್ಲ. ಬದಲಿಗೆ ಸೈಕಲ್ಲಿನ ತರಹ ಪೆಡಲುಗಳಿದ್ದವು. ಅದನ್ನು ಸ್ಟಾರ್ಟ್ ಮಾಡಲು ಅದರ ಸೆಂಟರ್ ಸ್ಟಾಂಡ್ ಹಾಕಿ ನಾವು ಪೆಡಲು ಜೋರಾಗಿ ತುಳಿಯಬೇಕಿತ್ತು. ಕೆಲವೊಮ್ಮೆ ಅದಕ್ಕೇನಾದರೂ ಮನಸ್ಸಿಲ್ಲದಿದ್ದರೆ ನಾವು ಅದರ ಮುಂದೆ ಚಡ್ಡಿಯಲ್ಲಿ ತಿಪ್ಪರಲಾಗ ಹೊಡೆದರೂ ಸ್ಟಾರ್ಟ್ ಆಗುತ್ತಿರಲಿಲ್ಲ. ಮೊದಲೇ ಮಳೆಗಾಲ ಬೇರೆ. ಹಿಂದಿನ ದಿನ ಸ್ವಲ್ಪ ಮಳೆಯಲ್ಲಿ ನೆಂದಿದ್ದರ ಕಾರಣವೋ ಏನೋ ಎಂಬಂತೆ ಅವತ್ತು ಅದು ತನ್ನ ರಾಗ ಶುರು ಮಾಡಿತು. ಅಪ್ಪ 10 ನಿಮಿಷ ಶತಪ್ರಯತ್ನ ಮಾಡಿದರೂ ಅದು ಕಿಮ್ಮಕ್ ಕೂಡ ಅನ್ನಲಿನ್ನ. ಅಪ್ಪನಿಗೆ ಸರೀ ಕೋಪ ಬಂದು ಅದನ್ನು ಬಾಯಿಗೆ ಬಂದಂತೆ ಬೈದರು. ಏನಾದರೂ ಮಾತನಾಡಿದರೆ ನಮಗೂ ಬೈಗಳು ಬಿದ್ದಾವೆಂದು ನಾನು ಮತ್ತು ಅಮ್ಮ ಕಲ್ಲಿನ ಶಿಲ್ಪಗಳಂತೆ ಸುಮ್ಮನೆ ಬಿಟ್ಟಗಣ್ಣು ಬಿಟ್ಟುಕೊಂಡು ನೋಡುತ್ತಿದ್ದೆವು. ಅಷ್ಟೂ ಹೊತ್ತು ಅವರು ಅದನ್ನು ಕೊನೆಯಿಲ್ಲದಂತೆ ಸ್ಟಾರ್ಟ್ ಮಾಡುವ ಪ್ರಯತ್ನದ ಶಬ್ದಕ್ಕೆ ಅಕ್ಕಪಕ್ಕದ ಮನೆಯವರೆಲ್ಲ ಬಾಗಿಲಿಗೆ ಬಂದು ನಿಂತಿದ್ದರು. ಇದು ಅಮ್ಮನಿಗಂತೂ ಬಹಳ ಅವಮಾನದ ವಿಷಯ. ಆದರೂ ಅವರು ಮನಸ್ಸಲ್ಲೇ ಆ ಮೊಪೆಡ್ಡಿಗೆ ಶಪಿಸಿ ಅಲ್ಲಾಡದೆ ಹಾಗೇ ನಿಂತಿದ್ದರು. ಕೊನೆಗೊಮ್ಮೆ ಅಪ್ಪನಿಗೆ ಇದ್ಯಾಕೋ ಸ್ಟಾರ್ಟ್ ಆಗೋಹಾಗೆ ಕಾಣೋದಿಲ್ಲ ಅನ್ನಿಸಿ, ಅಮ್ಮನ ಕಡೆ ತಿರುಗಿ ''ಇದ್ಯಾಕೋ ಸ್ಟಾರ್ಟ್ ಆಗ್ತಾ ಇಲ್ಲ ಕಣೆ. ರಿಪೇರಿ ಮಾಡಿಸ್ಬೇಕು ಅನ್ಸುತ್ತೆ. ನೀವು ಬಸ್ಸಿನಲ್ಲೇ ಹೋಗಿ" ಎಂದುಬಿಟ್ಟರು. ನಮಗೂ ಮನೆಮುಂದೆ ರೋಡಿನಲ್ಲಿ ಅಪ್ಪ ತನ್ನ ಬೈಕಿನ ಜೊತೆ ಜಂಗೀಕುಸ್ತಿ ಆಡುತ್ತಿದ್ದುದನ್ನು ಅಕ್ಕಪಕ್ಕದ ಮನೆಯವರೆಲ್ಲ ನೋಡಿದ್ದನ್ನು ಕಂಡು ಅವಮಾನವಾದಂತಾಗಿತ್ತು. ಮೊದಲು ಅಲ್ಲಿಂದ ಓಡಿದರೆ ಸಾಕು ಎನ್ನುವಂತೆ ಅಪ್ಪನನ್ನು ಹಿಂದೆ ಹಾಕಿ ಮತ್ತೊಮ್ಮೆ ತಿರುಗಿಯೂ ನೋಡದೆ ನಡೆದೆವು. ನಮ್ಮ ಮನೆಯ ಬೀದಿ ದಾಟುವವರೆಗೂ ಅಪ್ಪ ಮತ್ತೆಲ್ಲಿ ಕರೆದಾರೋ ಎಂಬ ಭಯದಲ್ಲೇ ಹೆಜ್ಜೆ ಹಾಕಿದೆವು. ನಮ್ಮ ಮನೆ ಬೀದಿಯನ್ನು ದಾಟಿದ ಮೇಲೇ ನಮಗೆ ಸ್ವಲ್ಪ ಧೈರ್ಯ ಬಂದದ್ದು.
ಆಟೋ ಹಿಡಿದು ನಾವು ಬಸ್ ಸ್ಟ್ಯಾಂಡಿಗೆ ಬರುವ ಹೊತ್ತಿಗೆ ಅಳಗವಾಡಿಯ ಬಸ್ಸು ಆಗಲೇ ರೆಡಿಯಾಗಿ ನಿಂತಿತ್ತು. ನಾವು ಗಡಗಡನೆ ಬಸ್ಸು ಹತ್ತಿ ಸೀಟು ಹುಡುಕಿಕೊಂಡು ಕುಳಿತೆವು. ಅಮ್ಮನಿಗೆ ಬಸ್ಸಿನಲ್ಲಿ ತುಂಬಾ ಜನ ಅಳಗವಾಡಿಯವರೇ ಇದ್ದುದರಿಂದ ಹರಟೆ ಹೊಡೆಯಲು ತಾಂಬೂಲ ಕೊಟ್ಟು ಕೂರಿಸಿದಂತಾಯ್ತು. ಅಲ್ಲಿ ಶುರುವಾದ ಅವರ ಮಾತು ನಾವು ಸಿರಿಗೆರೆ ತಲುಪುವವರೆಗೂ ನಿಲ್ಲಲೇ ಇಲ್ಲ. ಕೊನೆಗೊಮ್ಮೆ ಕಂಡಕ್ಟರು ಎಲ್ಲರನ್ನು ಸಿರಿಗೆರೆಯಲ್ಲೇ ಇಳಿಯಿರಿ ಎಂದು ಜೋರಾಗಿ ಹೇಳಿದಾಗ ನಾನು ಮತ್ತು ಅಮ್ಮ ಮುಖ-ಮುಖ ನೋಡಿಕೊಂಡೆವು. ಕಂಡಕ್ಟರನ್ನು ಹಿಡಿದು ಯಾಕೆ ಎಂದು ನಾವು ಕೇಳಿದಾಗ ''ಎರಡು ದಿನದಿಂದ ಹುಯ್ದಿರುವ ಭಾರಿ ಮಳೆಯಿಂದ ಸಿರಿಗೆರೆಯಿಂದ ಅಳಗವಾಡಿಗೆ ಹೋಗಲು ಇದ್ದ ಎರಡೂ ಮಾರ್ಗಗಳು ಸೊಂಟದೆತ್ತರದ ಕೆಸರಿನಿಂದ ಹೂತುಹೋಗಿವೆ. ಆ ಕೆಸರಿನಲ್ಲಿ ನಿನ್ನೆ ಸಂಜೆ ಅಳಗವಾಡಿಗೆ ಹೋಗಲು ಪ್ರಯತ್ನಿಸಿದ ಬಸ್ಸು ಇನ್ನೂ ಕೇಸರಿನಲ್ಲೇ ಸಿಕ್ಕಿಹಾಕಿಕೊಂಡಿದೆ. ಆದ್ದರಿಂದ ಹಿರಿಯ ಅಧಿಕಾರಿಗಳೇ ಬಸ್ಸನ್ನು ಅಳಗವಾಡಿಗೆ ಯಾವುದೇ ಕಾರಣಕ್ಕೂ ತಗೆದುಕೊಂಡು ಹೋಗಲೇ ಕೂಡದು ಎಂದು ಆರ್ಡರ್ ಕೊಟ್ಟಿದ್ದಾರೆ.' ಎಂದು ಒಂದೇ ಉಸುರಿನಲ್ಲಿ ವದರಿದ. ನಮ್ಮಂತೆ ಅವನಿಗೆ ತುಂಬಾ ಜನರಿಗೆ ಇದೇ ಪ್ರಶ್ನೆಗೆ ಉತ್ತರಿಸಬೇಕಾದ್ದರಿಂದ ಅವನಿಗೆ ಅದನ್ನು ಹೇಳಲೂ ಬೇಜಾರು ಬಂದಂತಿತ್ತು. ಅವನನ್ನು ಹೋಗಲು ಬಿಟ್ಟು ನಾನು ಮತ್ತು ಅಮ್ಮ ಬಸ್ ಸ್ಟ್ಯಾಂಡಿನಂತಿದ್ದ ದೊಡ್ಡ ಅರಳಿಮರದ ಕಟ್ಟೆಯ ಮೇಲೆ ಬಂದು ಕುಳಿತೆವು. ಅಳಗವಾಡಿಗೆ ಹೋಗಲಿಕ್ಕೆ ಅಮ್ಮನಿಗೂ ಕೂಡ ನನ್ನಷ್ಟೇ ಆಸೆಯಿದ್ದುದರಿಂದ ನಾವು ವಾಪಸ್ಸು ದುರ್ಗಕ್ಕೆ ಹೋಗುವ ಬಗ್ಗೆಯೇನು ನನಗೆ ಭಯವಿರಲಿಲ್ಲ. ಅಮ್ಮ ಏನಾದರೊಂದು ಉಪಾಯ ಹುಡುಕುತ್ತಾಳೆ ಎಂಬ ಆಸೆಯಲ್ಲೇ ಅವಳ ಪಕ್ಕ ಕೂತು ಅವಳು ಕೊಡಿಸಿದ ಬಿಸ್ಕೆಟ್ಟು ತಿನ್ನಲು ಶುರುಮಾಡಿದೆ. ಮುಂದಿನ 30 ನಿಮಿಷ ನಿಧಾನವಾಗಿ ಒಂದೊಂದೇ ಬಿಸ್ಕೆಟ್ಟು ತಿನ್ನೋದು ಮತ್ತೆ ಅಮ್ಮನ ಮುಖ ನೋಡೋದರಲ್ಲೇ ಕಳೆಯಿತು. ಆದರೆ ಅಮ್ಮನಿಗೆ ಏನು ಮಾಡಬೇಕೆಂದು ಇನ್ನೂ ದೃಢ ನಿರ್ಧಾರ ಮಾಡೋಕೆ ಆಗಿರಲಿಲ್ಲ. ಅಮ್ಮಒಬ್ಬಳೇ ಇದ್ದಿದ್ದರೆ ನಡೆದೇ ಹೋಗಿಬಿಡೋಳೇನೋ, ಆದರೆ ಜೊತೆಗೆ ನಾನಿದ್ದೇನಲ್ಲ. ಜೊತೆಗೊಂದು ದೊಡ್ಡ ಬ್ಯಾಗು ಬೇರೆ ತಂದಿದ್ದಾಳೆ. ಅವಳಿಗೆ ಏನು ಮಾಡಬೇಕು ಎಂಬುದೇ ತೋಚದಂತೆ ಸುಮ್ಮನೆ ಕುಳಿತುಬಿಟ್ಟಳು.
ನಾವು ಹೀಗೆ ಸಿರಿಗೆರೆಯಲ್ಲಿ ಕುಳಿತಿರೋದು ಯಾರೋ ನಮ್ಮ ಅಜ್ಜನಿಗೆ ಹೇಳಿದರು ಅನ್ನಿಸುತ್ತೆ, ನಮ್ಮಜ್ಜ ಅಳಗವಾಡಿಯಿಂದ ಸಿರಿಗೆರೆವರೆಗೆ ಬರಬರನೇ ನಡೆದೇ ಬಂದುಬಿಟ್ಟರು. ಅವರು ನಮ್ಮನ್ನು ಹುಡುಕಿ ಬಂದಾಗ ಅವರ ಮೈಯೆಲ್ಲಾ ಕೆಸರೊ ಕೆಸರು. ನಾನು ಅವರನ್ನು ನೋಡಿ ಸಂತೋಷದಿಂದ ಓಡಿ ಹೋಗಿ ಅವರ ಮೇಲೆ ನೆಗೆದುಬಿಟ್ಟೆ. ಅವರು ''ಅಯ್ಯಯ್ಯೋ ಬೇಡಪ್ಪ, ಮೈಯೆಲ್ಲಾ ಕೆಸರಾಗಿದೆ’' ಎಂದು ನನ್ನನ್ನು ಗಾಳಿಯಲ್ಲೇ ಹಿಡಿದು ನೆಲದ ಮೇಲೆ ನಿಲ್ಲಿಸಿದರು. ಅಮ್ಮನಿಗೆ ಅಜ್ಜ ಬಂದದ್ದು ಬಸ್ಸೇ ಬಂದಷ್ಟು ಖುಷಿಯಾಗಿತ್ತು. ಅವರು ಚಂಗನೆ ನೆಗೆದು ಬ್ಯಾಗನ್ನು ಬಗಲಿಗೆ ಹಾಕಿಕೊಂಡು ಹೊರಡಲು ಅನುವಾದರು. ಅಜ್ಜ ಬೇಗನೆ ಅಲ್ಲೇ ಇದ್ದ ಬೋರಿನ ಹತ್ತಿರ ಹೋಗಿ ಕೈಕಾಲು ತೊಳೆದುಕೊಂಡು ಬಂದು ಅಮ್ಮನ ಬ್ಯಾಗನ್ನು ತಲೆಯ ಮೇಲೆ ಇಟ್ಟುಕೊಂಡು ಅಳಗವಾಡಿಯ ಕಡೆಗೆ ನಡೆಯಲು ಶುರುಮಾಡಿದರು. ನಾನು ಅಜ್ಜನ ಸುತ್ತಲೂ ನೆಗೆದಾಡುತ್ತ ಹೊರಟೆ.
ನಾವು ಸಿರಿಗೆರೆ ಮಠ ದಾಟುವವರೆಗೂ ರೋಡು ಕಣ್ಣಿಗೆ ಕಾಣುತ್ತಲೇ ಇತ್ತು. ಅದರ ನಂತರ ರೋಡು ಇದ್ದಕ್ಕಿದ್ದಂತೆ ಮಾಯವಾಗಿ ದೂರದೂರಕ್ಕೂ ಕಂಡದ್ದೆಲ್ಲ ಕೆಸರೇ. ನಾನು ಕೆಸರು ನೋಡಿ ನಿಂತಲ್ಲೇ ಏನು ಮಾಡೋದೆಂದು ಯೋಚನೆ ಮಾಡೋವಷ್ಟರಲ್ಲಿ, ಅಜ್ಜ ಬ್ಯಾಗನ್ನು ಅಮ್ಮನಿಗೆ ಕೊಟ್ಟು, ನನ್ನನ್ನು ಎತ್ತಿಕೊಂಡು ತಮ್ಮ ಹೆಗಲ ಮೇಲೆ ಕೂರಿಸಿಕೊಂಡರು. ಅಲ್ಲಿಂದ ಶುರುವಾದದ್ದೇ ನಮ್ಮ ಕೆಸರಿನ ಸವಾರಿ. ಅದೇ ಹೊತ್ತಿಗೆ ಎಲ್ಲಿಂದಲೋ ಇನ್ನಷ್ಟು ಜನ ನಮ್ಮಂತೆಯೇ ಅಳಗವಾಡಿಗೆ ಹೋಗೋರು ಬಂದರು. ಅವರಿಗೆಲ್ಲ ಅಜ್ಜ ಚಿರಪರಿಚಯ. ಹಾಗಾಗಿ ಅಮ್ಮನೂ ಚೆನ್ನಾಗಿಯೇ ಪರಿಚಿತವಿದ್ದರು. ಅವರಲ್ಲೊಬ್ಬರು ಅಮ್ಮನ ತಲೆಯಮೇಲಿನ ಬ್ಯಾಗು ನೋಡಿದೊಡನೆಯೇ ಓಡಿ ಹೋಗಿ ಅವರ ಬ್ಯಾಗು ತೆಗೆದುಕೊಂಡು ತಮ್ಮ ತಲೆಯ ಮೇಲೆ ಇಟ್ಟುಕೊಂಡರು. ಅವರ ನಿಜವಾದ ಹೆಸರು ನನಗೆ ಗೊತ್ತಿಲ್ಲ, ಆದರೆ ಅವರನ್ನು ಎಲ್ಲರೂ ಮೂಕಣ್ಣ ಎಂದು ಕರೆಯುತ್ತಿದ್ದರು. ಅವರಿಗೆ ಮಾತು ಬರುತ್ತಿರಲಿಲ್ಲವಾದ್ದರಿಂದ ಅವರಿಗೆ ಆ ಹೆಸರಿನಿಂದ ಕರೆಯುತ್ತಿದ್ದರು ಎಂದು ನನಗೆ ಅರಿವಾದದ್ದು ತುಂಬಾ ವರ್ಷಗಳ ನಂತರವಷ್ಟೇ. ನಾವು ನಿಧಾನವಾಗಿ ಕೆಸರಿನಲ್ಲಿ ಹೆಜ್ಜೆ ಹಾಕುತ್ತ ದಾರಿ ಸವೆಸಿದೆವು. ಸ್ವಲ್ಪ ದೂರ ಬರುವಷ್ಟರಲ್ಲಿ ಕೆಸರು ಎಷ್ಟು ಆಳವಾಗಿತ್ತೆಂದರೆ, ಅಮ್ಮನ ಚಪ್ಪಲಿಯೊಂದು ಸಂಪೂರ್ಣವಾಗಿ ಹೂತುಹೋಯಿತು. ಅವರಿಗೆ ಅದನ್ನು ಬಿಟ್ಟು ಬರಲು ಇಷ್ಟವಿಲ್ಲದ್ದರಿಂದ, ಅವರು ಅದನ್ನು ಸಾಕಷ್ಟು ಹುಡುಕಾಡಿ ಕೈಯೆಲ್ಲಾ ಕೆಸರು ಮಾಡಿಕೊಂಡರು. ಅವರಿಗೆ ಸಹಾಯ ಮಾಡಲು ಕೆಲವರು ಪ್ರಯತ್ನಿಸಿದರೂ, ಆ ಚಪ್ಪಲಿ ಯಾವ ಪಾತಾಳದಲ್ಲಿ ಅಡಗಿತ್ತೋ ಏನೋ, ಸಿಗಲೇ ಇಲ್ಲ. ಕೊನೆಗೆ ಅಮ್ಮ ಪೆಚ್ಚುಮೋರೆ ಹಾಕಿಕೊಂಡು ಇನ್ನೊಂದು ಕಾಲಲ್ಲಿ ಇದ್ದ ಚಪ್ಪಲಿಯನ್ನೂ ಅಲ್ಲೇ ಎಸೆದು ಬರಿಗಾಲಲ್ಲಿ ಕಾಲುಹಾಕಿದರು. ಅದನ್ನು ನೋಡಿದ ನಾನು, ಚಕ್ಕನೆ ಅಜ್ಜನಿಗೆ ನಿಲ್ಲಲು ಹೇಳಿ ನನ್ನ ಕಾಲಿಗೆ ಹಾಕಿದ್ದ ಬೂಟುಗಳನ್ನು ಬಿಚ್ಚಿ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡೆ.
ನಾವು ಆಮೆಗತಿಯಲ್ಲಿ ಕೆಸರಿನಲ್ಲಿ ಹೆಜ್ಜೆ ಹಾಕುತ್ತ ಒಂದು ಗಂಟೆ ನಡೆದರೂ ಅರ್ಧ ದಾರಿ ಕೂಡ ಸವೆದಿರಲಿಲ್ಲ. ಅಳಗವಾಡಿಗೆ ಸಿರಿಗೆರೆಯಿಂದ ಕೇವಲ ಮೂರೂವರೆ ಕಿಲೋಮೀಟರು ಅಷ್ಟೇ ದೂರವಿದ್ದರು, ಅದೇಕೋ ಅಂದು ಅದು ನೂರು ಮೈಲಿಯಂತೆ ಭಾಸವಾಯಿತು. ಅಜ್ಜನಿಗೆ ವಯಸ್ಸು ಆಗಲೇ ಅರವತ್ತು ದಾಟಿತ್ತು. ಏನಿಲ್ಲವೆಂದರೂ ಇಪ್ಪತ್ತು ಕೆಜಿ ತೂಕವಿದ್ದ ನನ್ನನ್ನು ಹೊತ್ತು ಆ ಕೆಸರಿನಲ್ಲಿ ಹೆಜ್ಜೆಹಾಕುವುದು ಅವರಿಗೆ ಸುಲಭದ ಮಾತಾಗಿರಲಿಲ್ಲ. ಆದರೂ ಅಜ್ಜ ಒಮ್ಮೆಯೂ ನಿಧಾನಮಾಡದೆ, ನಾನೆಲ್ಲಿ ಬಿದ್ದುಬಿಡುವೆನೋ ಎಂದು ಅತೀ ಸೂಕ್ಷ್ಮವಾಗಿ ಹೆಜ್ಜೆ ಹಾಕುತ್ತ ಮುಂದುವರೆದರು. ನಾನು ಕೂಡ ಎಲ್ಲಿ ಕೆಸರಿನಲ್ಲಿ ಬಿದ್ದುಬಿಡುವೆನೋ ಎಂಬ ಆತಂಕದಲ್ಲಿ ಅಜ್ಜನ ಕೂದಲನ್ನು ಗಟ್ಟಿಯಾಗಿ ಹಿಡಿದು ಕೂತಿದ್ದೆ. ಅಜ್ಜನಿಗೆ ಎಷ್ಟು ಕೂದಲು ನೋವು ಬಂದಿರಬಹುದೋ ಎಂದು ನನಗೆ ಯೋಚನೆಯೇ ಇರಲಿಲ್ಲ. ಈಗ ನನಗೇ ಹತ್ತು ತಿಂಗಳ ಮಗಳಿದ್ದಾಳೆ. ಅವಳನ್ನು ನಾನು ಹಲವಾರು ಬಾರಿ ಸಂಜೆಯ ಹೊತ್ತಲ್ಲಿ ವಾಕಿಂಗ್ ಕರೆದುಕೊಂಡು ಹೋದಾಗ ಅಜ್ಜ ನನ್ನನ್ನು ಹೆಗಲಮೇಲೆ ಕೂರಿಸಿಕೊಂಡ ರೀತಿಯಲ್ಲೇ ಕೂರಿಸಿಕೊಳ್ಳುವುದು ವಾಡಿಕೆ. ಆಗ ಅವಳೂ ಕೂಡ ಗಟ್ಟಿಯಾಗಿ ಕೂದಲು ಹಿಡಿದುಕೊಂಡು ಕೂತಿರುತ್ತಾಳೆ. ನನಗೇ ಹತ್ತೇ ನಿಮಿಷಕ್ಕೆ ಕೂದಲನ್ನು ಕಿತ್ತಷ್ಟೆ ನೋವಾಗಿ ಅವಳನ್ನು ಇಳಿಸಿಬಿಡುತ್ತೇನೆ. ಅಂತದ್ದರಲ್ಲಿ ಅಜ್ಜ ಅವತ್ತು ಏನಿಲ್ಲವೆಂದರೂ ಎರಡು ಗಂಟೆ ನನ್ನನ್ನು ಹಾಗೇ ಕೂರಿಸಿಕೊಂಡು ನಡೆದದ್ದು ನೆನೆಸಿಕೊಂಡರೆ ಅವರ ಬಗ್ಗೆ ಹೆಮ್ಮೆಯೆನಿಸುತ್ತದೆ. ಅವರ ಬಗ್ಗೆ ಹೇಳಿಕೊಂಡು ಕುಳಿತರೆ ಈ ಕಥೆ ಮುಗಿಯುವುದೇ ಇಲ್ಲ ಎಂಬುದು ನನ್ನ ಅನಿಸಿಕೆ. ಪ್ರತಿ ದಿನ ಹೊಲದಲ್ಲಿ ಬೆವರು ಸುರಿಸಿ ಕೆಲಸ ಮಾಡುವ ಅವರೆದುರು, ಆಫೀಸಿನಲ್ಲಿ ಒಂದು ಡೆಸ್ಕಿನ ಮುಂದೆಯೇ ದಿನ ಕಳೆಯುವ ನನ್ನನ್ನು ಹೋಲಿಸಿಕೊಳ್ಳುವುದು ಸಮಂಜಸವಲ್ಲ ಎಂದು ನನ್ನ ಅಂಬೋಣ.
ನಾವು ಕೆಸರಿನಲ್ಲಿ ನಡೆದು ನಡೆದು ದಾರಿ ಸವೆಸುವುದಕ್ಕೆ ಬಹಳಷ್ಟು ಕಷ್ಟ ಪಡಬೇಕಾಯಿತು. ನಾನು ಅಜ್ಜನ ಹೆಗಲ ಮೇಲೆ ಕುಳಿತಿದ್ದರೂ ಕೂಡ, ಒಂದೇ ಜಾಗದಲ್ಲಿ ಕುಳಿತಿದ್ದರಿಂದಲೋ ಏನೋ ಎಂಬಂತೆ ಕಾಲುಗಳೆಲ್ಲ ಜುಮ್ಮು ಹಿಡಿದುಬಿಟ್ಟಿದ್ದವು. ನಮ್ಮ ಕಷ್ಟಗಳಿಗೆ ಪುಷ್ಟಿ ಕೊಡುವಂತೆ ನಿಧಾನವಾಗಿ ಮಳೆ ಶುರುವಾಗುವ ಸೂಚನೆಗಳು ಕಂಡುಬರಲಾರಂಭಿಸಿದವು. ಮೋಡವಾದೊಡನೆ ಅಜ್ಜನಿಗೆ ಅದೆಲ್ಲಿಂದ ಶಕ್ತಿ ಬಂತೋ ಗೊತ್ತಿಲ್ಲ, ಆದರೆ ಅವರು ಕೆಸರನ್ನು ಲೆಕ್ಕಿಸದೆ ದಡಬಡನೆ ಹೆಜ್ಜೆ ಹಾಕುತ್ತ ಮುಂದೆ ಸಾಗಿದರು. ಹಿಂದೆ ತಿರುಗಿ ಅಮ್ಮನ ಜೊತೆ ಬರುತ್ತಿದ್ದ ಮೂಕಣ್ಣನಿಗೆ "ಹೇ ಮೂಕಣ್ಣ, ಮಳೆ ಬಾರೋ ಹಾಗಿದೆ. ನಾನು ಮಗೂನ ಕರ್ಕೊಂಡು ಮುಂದೆ ಹೋಗಿರ್ತೇನೆ. ನೀನು ಅವಳನ್ನ ಕರ್ಕೊಂಡು ಆದಷ್ಟು ಬೇಗ ಬಾ" ಎಂದು ಹೇಳಿ, ಅಮ್ಮನ ಜವಾಬ್ದಾರಿಯನ್ನ ಮೂಕಣ್ಣನಿಗೆ ಕೊಟ್ಟು ಅವನ ಉತ್ತರಕ್ಕೂ ಕಾಯದೆ ಅಳಗವಾಡಿಯ ಕಡೆಗೆ ಹೆಜ್ಜೆ ಹಾಕಿದರು. ನಾನು ಅಜ್ಜನ ತಲೆಯನ್ನು ಇನ್ನೂ ಗಟ್ಟಿಯಾಗಿ ಹಿಡಿದುಕೊಂಡು ಕುಳಿತೆ. ಅಲ್ಲಿಂದ ನಮ್ಮದು ಹೆಚ್ಚುಕಮ್ಮಿ ಓಡಿದ ರೀತಿಯಲ್ಲೇ ನಡೆದದ್ದಾಯಿತು. ನಾನು ಅವರ ತಲೆ ಮೇಲೆ ಕುಳಿತುಕೊಂಡು ವಾಲಾಡಿ ವಾಲಾಡಿ ನಿದ್ದೆಯೇ ಬಂದುಬಿಟ್ಟಿತು. ಆದರೆ ಕೆಳಗಿನ ಕೆಸರು ನನ್ನನ್ನು ನಿದ್ದೆಗೆ ಜಾರದಂತೆ ಹಿಡಿದು ಇಟ್ಟಿತ್ತು. ಅಷ್ಟರಲ್ಲಿ ನಿಧಾನವಾಗಿ ತುಂತುರು ಮಳೆಯಾರಂಭವಾಯಿತು. ಅಜ್ಜ ನಾನು ನೆಂದರೆ ಅಪ್ಪ ಬಂದು ನನ್ನನ್ನು ಮತ್ತೆ ದುರ್ಗಕ್ಕೆ ಕರೆದುಕೊಂಡು ಹೋಗುವರು ಎಂದರಿತು ನನ್ನನ್ನು ಆದಷ್ಟು ಬೇಗ ಮನೆ ಸೇರಿಸಲು ಹೆಚ್ಚುಕಮ್ಮಿ ಓಡಿಯೇ ಬಿಟ್ಟರು. ದೇವರ ದಯೆಗೊ, ನಮ್ಮ ಅದೃಷ್ಟಕ್ಕೋ, ನಾವು ಮುಕ್ಕಾಲು ಭಾಗ ದಾರಿ ಸವೆಸಿದಮೇಲೆ ಕೆಸರು ಕಡಿಮೆಯಾಯಿತು. ಅಲ್ಲಿಂದ ಅಜ್ಜ ನನ್ನನ್ನು ಕೆಳಗಿಳಿಸಿ ನನ್ನನ್ನು ಮನೆಯ ಕಡೆಗೆ ಓಡಲು ಹೇಳಿ ನನ್ನ ಜೊತೆ ಮಕ್ಕಳಂತೆ ಅವರೂ ಓಡಲು ಶುರುಮಾಡಿದರು. ನಾವಿಬ್ಬರೂ ಆದಷ್ಟು ಬೇಗ ಓಡಿಯೇ ಊರು ಪ್ರವೇಶ ಮಾಡಿದೆವು. ನಾವು ಊರಿಗೆ ಪ್ರವೇಶ ಮಾಡಿದಾಗ ಅಲ್ಲೇ ಗುಡಿ ಮುಂದೆ ಕುಂತಿದ್ದ ಮುದುಕರೆಲ್ಲ ನಮ್ಮನ್ನು ನೋಡಿ ಇವರಿಗೇನಾಯಿತು ಎಂದು ಕಣ್ಣರಿಳಿಸಿ ನೋಡಿದರು. ಅಲ್ಲ್ಯಾರೋ ಅಜ್ಜನಿಗೆ "ಯಾಕೋ ಹಿಂಗೇ ಓಡ್ತಾ ಇದ್ದೀಯ?" ಎಂದು ಕೇಳಿದರು. ಅಜ್ಜನಿಗೆ ಅವರಿಗೆಲ್ಲ ಉತ್ತರ ಕೊಡುವಷ್ಟು ಸಮಯವೇ ಇಲ್ಲದವರಂತೆ ನನ್ನನ್ನು ಮನೆ ಮುಟ್ಟುವ ತನಕವೂ ಹುರಿದುಂಬಿಸುತ್ತಲೇ ನನ್ನ ಜೊತೆಗೆ ಓಡಿದರು. ನಾವು ಮನೆ ಸೇರಿದ್ದೇ ಸಾಕೆನ್ನುವಂತೆ ಮಳೆರಾಯ ಒಮ್ಮೆಲೇ ಆರ್ಭಟಿಸುತ್ತಾ ಧರೆಗಿಳಿದ. ನಾವು ಮನೆ ಸೇರಿದಾಗ ಅಜ್ಜಿ ನಮಗಾಗಿ ಬಿಸಿ ಬಿಸಿ ಬೆಲ್ಲದ ಟೀ ಮಾಡಿ ಅಂಗಡಿಯಿಂದ ನನಗಾಗಿ ಬನ್ನು ತಂದು ಬಾಗಿಲಲ್ಲೇ ಕಾಯುತ್ತಾ ಕುಳಿತಿದ್ದಳು. ನಾನು ಅದನ್ನೆಲ್ಲಾ ಸ್ವಾಹಾ ಮಾಡಿ ಅಮ್ಮನ ಬರವಿಗಾಗಿ ಕಾದು ಕುಳಿತೆ.
ನಾನು ಅಳಗವಾಡಿಯಲ್ಲಿ ಮಳೆಗಾಲದಲ್ಲಿ ತುಂಬಾ ಮಜಾ ಮಾಡಿದೆ. ನನಗೆ ಅಲ್ಲಿ ಆಟವಾಡಲು ತುಂಬಾ ಗೆಳೆಯರು ಇದ್ದರು. ಅವರಾರೂ ಸ್ಕೂಲಿಗೆ ಹೋಗುತ್ತಿರಲಿಲ್ಲ. ಹೊಲಮನೆಯ ಚಾಕರಿ ಮಾಡಿಕೊಂಡೇ ಇರುತ್ತಿದ್ದರು. ಅವರಿಗೆ ಅದಕ್ಕೆ ಅವರ ಮನೆಯವರೆಲ್ಲರ ಒಪ್ಪಿಗೆಯೂ ಇತ್ತು. ಹೇಗಿದ್ದರೂ ಒಂದು ಅಕ್ಷರವೂ ತಲೆಗೆ ಹತ್ತದ ಅವರನ್ನು ಸುಮ್ಮನೆ ಸ್ಕೂಲಿಗೆ ಕಳಿಸಿ ಏನು ಸಾಧಿಸಬೇಕಿದೆ! ಎಂಬುದು ಅವರ ತಂದೆತಾಯಿಗಳ ವಾದ. ಹೀಗಾಗಿ, ನಾನು ಅಳಗವಾಡಿಗೆ ಬಂದಾಗಲೆಲ್ಲಾ ನನಗೆ ಗೆಳೆಯರ ಹಿಂಡೇ ಸಿಗುತ್ತಿತ್ತು. ನಾನೂ ಹಲವಾರು ಬಾರಿ ಅವರೊಡನೆ ಎಮ್ಮೆ ಮೇಯಿಸಲಿಕ್ಕೆ ಹೋಗುತ್ತಿದ್ದೆ. ಎಮ್ಮೆ ಮೇಯಿಸುವುದು ತುಂಬಾ ಸುಲಭದ ಕೆಲಸವಾಗಿರುತ್ತಿತ್ತು. ಸುಮ್ಮನೆ ಎಮ್ಮೆಗಳನ್ನು ಊರ ಹೊರಗಿನ ಮಟ್ಟಿಯ ಹತ್ತಿರ ಕರೆದುಕೊಂಡು ಹೋದರೆ ಸಾಕು. ಅವುಗಳು ತಮ್ಮಂತಾವೆ ಮೇಯಿಕೊಂಡು ವಾಪಸ್ಸು ಮಟ್ಟಿಯ ಹತ್ತಿರವೇ ಬರುತ್ತಿದ್ದವು. ಅವುಗಳು ಮೇಯುವ ತನಕವೂ ನಮಗೆ ಅಲ್ಲಿಲ್ಲಿ ತಿರುಗಾಡಿ ಮಜಾ ಮಾಡುವುದೇ ಕೆಲಸ. ಸಂಜೆಯ ಹೊತ್ತಿಗೆ ಮತ್ತೆ ಎಮ್ಮೆಗಳನ್ನು ಮನೆಗೆ ಕರೆದುಕೊಂಡು ಬರುವುದು ಮಾಡಿದರೆ ಅಂದಿನ ಕೆಲಸಗಳೆಲ್ಲ ಮುಗಿದಂತೆ. ಆಗಿನ ಕಾಲದಲ್ಲಿ ಊರಿಗೆ ಇದ್ದುದು ಒಂದೋ ಎರಡೂ ಟಿವಿಗಳು. ಅದೂ ಶ್ರೀಮಂತರ ಮನೆಗಳಲ್ಲಿ ಮಾತ್ರವೇ ಇರುತ್ತಿದ್ದುದರಿಂದ ನಮಗಲ್ಲಿ ಹೋಗುವ ಅವಕಾಶಗಳು ಬಲು ಕಡಿಮೆ. ಹಾಗಾಗಿ ನಾವು ಸಂಜೆಯ ಹೊತ್ತಿನಲ್ಲಿ ಐಸ್-ಪೈಸ್ ಆಡಿಕೊಂಡೋ, ಇಲ್ಲ ನಮ್ಮನ್ನು ನಾವೇ ಬೈಕು ಎಂದುಕೊಂಡು ಊರೆಲ್ಲ ತಿರುಗುವ ಆಟವನ್ನೋ ಆಡುತ್ತಿದ್ದೆವು. ಸಂಜೆ 7 ಆಯಿತೆಂದರೆ ಎಲ್ಲಾ ಆಟಗಳೂ ಬಂದ್ ಆಗಿಬಿಡುತ್ತಿದ್ದವು. ನಮ್ಮ ಹಳ್ಳಿಯಲ್ಲಿ ರಾತ್ರಿಯ ಊಟ ಸಂಜೆ 7 ಕ್ಕೇ ಆಗಿಬಿಡುತ್ತಿತ್ತು. ಮೊದಲೇ ಮಳೆಗಾಲವಾದ್ದರಿಂದ, ನಾವು ಮತ್ತೆ ಹೊರಹೋಗದೆ 8 ಕ್ಕೆಲ್ಲಾ ಮಲಗೇ ಬಿಡುತ್ತಿದ್ದೆವು. ಇದು ಅಲ್ಲಿಯ ಹುಡುಗರ ಜೊತೆ ಸೇರಿದ ಮೇಲೆ ನನ್ನ ದಿನಚರಿಯೂ ಆಗಿಹೋಗಿತ್ತು.
ಈ ಕಥೆ ನಡೆಯುವ ಸಮಯದಲ್ಲಿ ನಮ್ಮ ಮನೆಯಲ್ಲಿ ಒಂದು ಎಮ್ಮೆ ಇತ್ತು. ಅದು ಆಗ ಮರಿ ಹಾಕುವ ಸಮಯವಾದ್ದರಿಂದ ಅದನ್ನು ನಾವು ಬೇರೆ ಎಮ್ಮೆಗಳ ಜೊತೆಗೆ ಮೇಯುವುದಕ್ಕೆ ಕಳುಹಿಸುತ್ತಿರಲಿಲ್ಲ. ಯಾವುದಾದರು ಎಮ್ಮೆ ತಿವಿದರೆ ಹುಟ್ಟುವ ಕರುವಿಗೆ ಕಷ್ಟವಾಗುತ್ತದೆ ಎಂದು ಅದನ್ನು ನಮ್ಮಜ್ಜಿ ತಾವೇ ಮಧ್ಯಾನ್ಹದ ಹೊತ್ತು ಊರ ಹೊರಗಿನ ದೇವಸ್ಥಾನದ ಹತ್ತಿರ ಮೇಯಲಿಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು. ನಾನೂ ಪದೇ ಪದೇ ನಮ್ಮಜ್ಜನ ಮನೆಗೆ ಬರುತ್ತಿದ್ದುದರಿಂದ, ಆ ಎಮ್ಮೆಯನ್ನು ಚಿಕ್ಕವನಿದ್ದಾಗಿನಿಂದಲೂ ನೋಡಿದ್ದೆ. ಅದೇ ರೀತಿ ಆ ಎಮ್ಮೆಯೂ ನಾನು ಪರಿಚಿತನೆಂದು ನನ್ನನ್ನು ನೋಡಿ ಸಿಟ್ಟಾಗಲಿ ಇನ್ನೊಂದಾಗಲಿ ಮಾಡುತ್ತಿರಲಿಲ್ಲ. ಎಷ್ಟೋ ಬಾರಿ ಅಜ್ಜ ನನ್ನನ್ನು ಆ ಎಮ್ಮೆಯ ಮೇಲೆ ಕುಳ್ಳಿರಿಸಿ ಸವಾರಿ ಮಾಡಿಸಿದ್ದುಂಟು. ಹಾಗಾಗಿ ನಮ್ಮಿಬ್ಬರ ಮದ್ಯೆ ಸ್ವಲ್ಪ ಮಟ್ಟಿಗಾದರೂ ಫ್ರೆಂಡಶಿಪ್ ಆಗಿತ್ತು ಎಂದು ನನ್ನ ಅನಿಸಿಕೆ. ಮರುದಿನ ಅಜ್ಜಿ ಎಂದಿನಂತೆ ಎಮ್ಮೆಯನ್ನು ಹೊಡೆದುಕೊಂಡು ಹೋಗಲು ಹೊರಟಾಗ ನಾನು ಅವರ ದುಂಬಾಲು ಬಿದ್ದೆ. ಮೊದಲೇ ಮಳೆಗಾಲವಾದ್ದರಿಂದ ಅಮ್ಮನಿಗೆ ನಾನು ಅಜ್ಜಿಯ ಜೊತೆ ಹೋಗುವುದು ಇಷ್ಟವೇ ಇರಲಿಲ್ಲ. ಅವರನ್ನು ಒಪ್ಪಿಸಲು ನಾನು ನೆಲದ ಮೇಲೆಲ್ಲಾ ಬಿದ್ದು ಜೋರಾಗಿ ಕಿರುಚಾಡಿ ಅಳಬೇಕಾಯಿತು. ಕೊನೆಗೆ ಅಮ್ಮ ಏನಾದರು ಮಾಡಿಕೋ ಹೋಗು ಎಂದು ಬಿಟ್ಟುಬಿಟ್ಟರು. ಅವರು ಹಾಗೆ ಅಂದದ್ದೇ ತಡ, ನನ್ನ ಅಳುವನ್ನು ಅಲ್ಲಿಗೇ ನಿಲ್ಲಿಸಿ ಅಜ್ಜಿಯ ಹಿಂದೆ ಓಡಿದೆ. ಅಜ್ಜಿ, ಅಮ್ಮ ನನ್ನನ್ನು ಹೋಗಲು ಬಿಟ್ಟದ್ದನ್ನು ನೋಡಿ ಅಮ್ಮನಿಗೆ "ಮೊದಲೇ ಮಳೆ ಬಾರೋ ಹಾಗಿದೆ. ಇವನೋ, ಎಲ್ಲೆಂದರಲ್ಲಿ ಓಡಿಹೋಗುತ್ತಾನೆ. ಇವನು ಇಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು" ಎಂದರು. ಅಜ್ಜಿ ಹೇಳಿದ ಮಾತು ಕೇಳಿ ನಾನು ಮತ್ತೊಮ್ಮೆ ನೆಲದಲ್ಲೆಲ್ಲ ಉರುಳಾಡಿ ಅಳುವ ನಾಟಕವಾಡಿದೆ. ಅಮ್ಮ ನಾನು ನೆಲದಲ್ಲಿ ಒದ್ದಾಡುವ ರೀತಿ ನೋಡಿ "ಇರ್ಲಿ ಕರ್ಕೊಂಡು ಹೋಗು. ಇಲ್ಲಾಂದ್ರೆ ನೀನು ವಾಪಸ್ಸು ಬಾರೋ ತನಕನೂ ಅವನು ಹೀಗೆ ಅಳೋದು ಗ್ಯಾರಂಟಿ" ಎಂದು ಮತ್ತೆ ಕಳುಹಿಸಿಕೊಟ್ಟರು. ಅಜ್ಜಿ ಮರುಮಾತಾಡದೆ ನನ್ನನ್ನು ಕೈಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಎಮ್ಮೆಯ ಕೊರಳಿಗೆ ಬಿಗಿದಿದ್ದ ಹಗ್ಗ ಹಿಡಿದುಕೊಂಡು ದೇವಸ್ಥಾನದ ಕಡೆಗೆ ಕಾಲು ಹಾಕಿದರು.
ಮಳೆಗಾಲವಾದ್ದರಿಂದ ಹೆಚ್ಚೇನೂ ಬಿಸಿಲು ಇರಲಿಲ್ಲ. ಆದ್ದರಿಂದ ನಾವು ಪ್ರಯಾಸಪಡದೆ ಸಲೀಸಾಗಿ ದೇವಸ್ಥಾನ ಮುಟ್ಟಿದೆವು. ಆ ಜಾಗವೇನು ಊರಿನಿಂದ ಹೆಚ್ಚು ದೂರವಿರಲಿಲ್ಲ. ಆದ್ದರಿಂದ ಮಳೆ ಬರುವ ಹಾಗೇನಾದರೂ ಆದರೆ ಕೂಡಲೇ ಹೊರಟು ಊರು ಸೇರಬೇಕು ಎಂದು ಅಜ್ಜಿ ಹೇಳಿಕೊಟ್ಟರು. ನಾನು ಆಯಿತು ಎಂದು ತಲೆಯಾಡಿಸಿ ರೋಡಿನ ತುಂಬೆಲ್ಲಾ "ಬ್ರುಮ್...ಬ್ರುಮ್" ಎಂದು ಬೈಕು ಬಿಟ್ಟುಕೊಂಡು ಓಡುತ್ತಿದ್ದೆ. ಅಜ್ಜಿಯಿಂದ ಹೆಚ್ಚಿಗೆ ದೂರ ಹೋಗಬಾರದೆಂದು ಆಗಾಗ ತಿರುಗಿ ಎಷ್ಟು ದೂರ ಬಂದಿದ್ದೇನೆ ಎಂದು ನೋಡಿ ತುಂಬಾ ದೂರ ಬಂದಿದ್ದರೆ ವಾಪಸ್ಸು ಅಜ್ಜಿಯ ಕಡೆಗೆ ಓಡುತ್ತಿದ್ದೆ. ನಮ್ಮ ಎಮ್ಮೆ ನಮಗೆ ಎಳ್ಳಷ್ಟೂ ಕಷ್ಟ ಕೊಡದೆ ಅತೀ ಗಾಂಭೀರ್ಯದಿಂದ ಅಜ್ಜಿ ಹಿಂದೆಯೇ ನಡೆದುಬರುತ್ತಿತ್ತು. ನಾವು ದೇವಸ್ಥಾನದ ಹತ್ತಿರ ಬಂದಾಗ ಅದರ ಹಿಂದೆ ಸುಮಾರು 200 ಮೀಟರ್ ದೂರದಲ್ಲಿದ್ದ ಅರಳೀ ಮರದ ನೆರಳಿಗೆ ಹೋಗಿ ಎಮ್ಮೆಯನ್ನು ಮೇಯಲಿಕ್ಕೆ ಬಿಟ್ಟೆವು. ಮಳೆಗಾಲವಾದ್ದರಿಂದ ಹುಲ್ಲು ಬೇಕಾದಷ್ಟು ಇದ್ದು ನಮ್ಮ ಎಮ್ಮೆ ದೂರವೆಲ್ಲೂ ಹೋಗಬೇಕಾಗಿ ಬರಲಿಲ್ಲ. ನಾವು ದೇವಸ್ಥಾನ ದಾಟುವಾಗ ಅಜ್ಜಿಗೆ ದೇವಸ್ಥಾನದಲ್ಲಿ ಅರ್ಚಕ ಇದ್ದುದು ಕಂಡು ಅವನ ಜೊತೆ ಸ್ವಲ್ಪ ಹೊತ್ತು ಮಾತನಾಡಿ ಮತ್ತೆ ಮುಂದುವರೆದಿದ್ದೆವು. ಅಜ್ಜಿ ನನಗೆ ಅರಳೀ ಮರದ ಕೆಳಗೆ ಕುಳಿತುಕೊಳ್ಳಲು ಹೇಳಿ ಎಮ್ಮೆಗೆ ಹುಲ್ಲು ಕೊಯ್ಯಲು ಹೋದರು. ನಾನು ದೊಡ್ಡ ಅರಳೀಮರದ ಸುತ್ತಲೂ ಅದು ಎಷ್ಟು ಅಗಲವಿರಬಹುದು ಎಂದು ಯೋಚಿಸುತ್ತ ತಿರುಗಾಡುತ್ತಿದ್ದೆ.
ಅಷ್ಟರಲ್ಲಿ ಅದೆಲ್ಲಿಂದ ಮೋಡಗಳು ಬಂದವೋ ಗೊತ್ತಿಲ್ಲ, ಅಜ್ಜಿಗೆ ಮಳೆ ಬರುತ್ತದೆ ಎಂದು ಗೊತ್ತಾಗುವಷ್ಟರಲ್ಲಿ ಮಿಂಚು ಸಿಡಿಲುಗಳೆಲ್ಲವೂ ಸೇರಿ ಒಮ್ಮೆಲೇ ಜೋರಾಗಿ ಮಳೆ ಶುರುವಾಯಿತು. ಅಜ್ಜಿ ಮತ್ತೆ ಎಮ್ಮೆ ಇಬ್ಬರೂ ಮಳೆ ಮತ್ತು ಸಿಡಿಲಿಗೆ ಹೆದರಿ ಓಡಿ ಅರಳೀ ಮರದ ಕೆಳಗೆ ಸೇರಿಕೊಂಡರು. ಅಜ್ಜಿಗೆ ಮಳೆಯ ಸಮಯದಲ್ಲಿ ಮರದ ಕೆಳಗೆ ನಿಂತುಕೊಳ್ಳುವುದು ಎಷ್ಟು ಅಪಾಯ ಎಂದು ತಿಳಿದಿದ್ದರಿಂದಲೋ ಏನೋ ಅಲ್ಲಿಂದ ಬೇಗ ನಾವು ಓಡಿ ದೇವಸ್ಥಾನದ ಸೂರು ಸೇರಿಕೊಳ್ಳಬೇಕು ಎಂದು ನನಗೆ ಹೇಳಿದಳು. ನಾನು ಆಯಿತು ಎಂದೆ. ಆದರೆ ದೇವಸ್ಥಾನ 200 ಮೀಟರು ದೂರವಿದ್ದುದರಿಂದ, ನಾವೆಷ್ಟೇ ಜೋರಾಗಿ ಓಡಿದರೂ, ಪೂರ್ತಿ ನೆನೆದು ಹೋಗುವುದು ನಿಶ್ಚಿತ ಎಂದು ಇಬ್ಬರಿಗೂ ಗೊತ್ತಿತ್ತು. ಎರಡೇ ದಿನ ಹಿಂದೆ ರಜೆಗೆಂದು ಹಳ್ಳಿಗೆ ಬಂದಿದ್ದ ನಾನು ಮಳೆಯಲ್ಲಿ ನೆಂದರೆ ಖಂಡಿತ ಜ್ವರ ಬರಿಸಿಕೊಳ್ಳುತ್ತೇನೆ ಎಂದು ಅಜ್ಜಿ ಬೇರೇನಾದರೂ ಉಪಾಯ ಇರಬಹುದೇ ಎಂದು ಯೋಚಿಸಿದರು. ಅವರಿಗೆ ದೇವಸ್ಥಾನದ ಅರ್ಚಕ ನೆನಪಾಗಿರಬೇಕು, ಅವನ ಹತ್ತಿರ ಛತ್ರಿಯೇನಾದರೂ ಇರಬಹುದೇ ಎಂದು ಕೇಳಲು ದೇವಸ್ಥಾನದ ಕಡೆ ತಿರುಗಿ ಜೋರಾಗಿ ಅವನ ಹೆಸರು ಹಿಡಿದು ಕೂಗಿದರು. ಆದರೆ ಮಳೆಯ ಆರ್ಭಟ ಎಷ್ಟು ಜೋರಾಗಿತ್ತೆಂದರೆ, ಅವರ ಕೂಗು ಅವರ ಪಕ್ಕದಲ್ಲೇ ಇದ್ದ ನನಗೇ ಕ್ಷೀಣವಾಗಿ ಕೇಳಿಸಿತು. ಅವರು ಹಲವಾರು ಬಾರಿ ಹಾಗೆ ಕೂಗಿ ಕೊನೆಗೆ ಅವನಿಗೆ ಕೇಳಿಸುವುದಿಲ್ಲ ಎಂದು ಖಾತ್ರಿಯಾದಮೇಲೆ ಸುಮ್ಮನಾದರು.
ಸಮಯ ಕಳೆದಂತೆ ಮಳೆಯ ಆರ್ಭಟ ಹೆಚ್ಚಾಗುತ್ತಾ ಹೋಯಿತು. ಸಿಡಿಲುಗಳ ಸದ್ದಿಗೆ ನಾನು ನೆಟ್ಟು ಬೀಳುತ್ತಿದ್ದೆ. ಒಮ್ಮೆಯಂತೂ ಸಿಡಿಲು ಎಷ್ಟು ಜೋರಾಗಿ ಹೊಡೆಯಿತೆಂದರೆ, ನಮ್ಮ ಪಕ್ಕವೇ ಸಿಡಿಲು ಹೊಡೆಯಿತೇನೋ ಎನ್ನುವಷ್ಟು ಶಬ್ದ. ನಾನು ಅಜ್ಜಿಯ ಕೈ ಗಟ್ಟಿಯಾಗಿ ಹಿಡಿದು ನಿಂತುಕೊಂಡೆ. ಅಜ್ಜಿಗೆ ಇನ್ನು ಹೆಚ್ಚು ಹೊತ್ತು ಅಲ್ಲೇ ನಿಲ್ಲುವುದು ಅಪಾಯವೆನಿಸಿ ನನ್ನನ್ನು ದೇವಸ್ಥಾನ ಕಡೆಗೆ ಕರೆದುಕೊಂಡು ಹೋಗಲು ಅಣಿಯಾದರು. ನನ್ನನ್ನು ಒಂದು ಕೈಯ್ಯಲ್ಲಿ, ಇನ್ನೊಂದು ಕೈಯ್ಯಲ್ಲಿ ಎಮ್ಮೆಯ ಹಗ್ಗವನ್ನು ಹಿಡಿದು ಅದಕ್ಕೂ ದೇವಸ್ಥಾನದ ಕಡೆಗೆ ನಡೆ ಎನ್ನುವಂತೆ ಸನ್ನೆ ಮಾಡಿ ಎರೆಡು ಹೆಜ್ಜೆ ಇಡುವಷ್ಟರಲ್ಲಿ ನಮ್ಮ ಎಮ್ಮೆ ಜೋರಾಗಿ ಒಮ್ಮೆ ಅಂಬಾ.. ಎಂದು ಕೂಗಿ ಕುಳಿತುಬಿಟ್ಟಿತು. ಅಜ್ಜಿಗೆ ಅದಕ್ಕೆ ಹೆರಿಗೆ ನೋವು ಬಂದಿದೆಯೆಂದು ಗೊತ್ತಾಗುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ನಾವೀಗ ಒಂದು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೆವು. ಎಮ್ಮೆಯನ್ನು ಹಾಗೆಯೇ ಬಿಟ್ಟು ಹೋಗುವುದು ಅದಕ್ಕೂ ಮತ್ತು ಹುಟ್ಟುವ ಕರುವಿಗೂ ಅಪಾಯ ಎಂದು ಅರಿತಿದ್ದ ಅಜ್ಜಿ, ಮತ್ತೊಮ್ಮೆ ದೇವಸ್ಥಾನದ ಕಡೆಗೆ ತಿಗುರಿ ಅರ್ಚಕನನ್ನು ಕರೆಯಲು ಜೋರಾಗಿ ಕೂಗಿ ಪ್ರಯತ್ನಿಸಿದಳು. ಆದರೆ ಮಳೆಯ ಆರ್ಭಟ ಇನ್ನು ಹಾಗೆ ಇದ್ದುದರಿಂದ, ಅದು ಯಾರಿಗೂ ಕೇಳಿರಲಿಕ್ಕಿಲ್ಲ.
ಕೊನೆಗೆ ಕಡೇ ಪ್ರಯತ್ನವೆಂಬಂತೆ ಅಜ್ಜಿ ನನ್ನ ಕೈ ಹಿಡಿದು "ಬಾ, ಹೋಗಿ ಅರ್ಚಕನನ್ನು ಕರೆದುಕೊಂಡು ಬರೋಣ. ಎಮ್ಮೆ ಕರು ಹಾಕುವಾಗ ಯಾರಾದರೂ ಇರಲೇಬೇಕು" ಎಂದು ನನ್ನ ಕೈ ಹಿಡಿದು ಎಳೆದರು. ನನಗೆ ಆಗ ಏನೆನ್ನಿಸಿತೋ ಏನೋ, "ನಾನು ಇಲ್ಲೇ ಇರುತ್ತೇನೆ ಅಜ್ಜಿ. ನೀನು ಹೋಗಿ ಕರೆದುಕೊಂಡು ಬಾ" ಎಂದುಬಿಟ್ಟೆ. ಬೇರಾವ ಸಮಯದಲ್ಲೇ ಆಗಿದ್ದರು ಅಜ್ಜಿ ನನ್ನನ್ನು ಅಂತಹ ಮಳೆಯಲ್ಲಿ ಬಿಟ್ಟುಹೋಗುವವಳೇ ಅಲ್ಲ, ಆದರೆ ಅವಳು ಕರುವಾಗಿದ್ದಾಗಿನಿಂದಲೂ ಸಾಕಿದ್ದ ಎಮ್ಮೆಯ ಪ್ರಾಣಕ್ಕೆ ಸಂಕಟ ಇದ್ದಿದ್ದರಿಂದ, ಅವಳು ಬಹಳ ಧೈರ್ಯ ಮಾಡಿ "ಆಯಿತು, ಇಲ್ಲೇ ಇರು. ಎಲ್ಲೂ ಹೋಗಕೂಡದು" ಎಂದು ನನಗೆ ಎಚ್ಚರಿಸಿ ದೇವಸ್ಥಾನದ ಕಡೆಗೆ ಓಡಿದಳು. ನಾನು ಚಿಕ್ಕವನಿದ್ದಾಗ ಒಮ್ಮೆ ದೊಡ್ಡಪ್ಪನ ಮನೆಯಲ್ಲಿ ಎಮ್ಮೆ ಕರು ಹಾಕಿದ್ದನ್ನು ನೋಡಿದ್ದೆ. ಎಮ್ಮೆಗಳು ಈಗ ಸಂಪೂರ್ಣವಾಗಿ ಸಾಕುಪ್ರಾಣಿಗಳು ಆಗಿರುವುದರಿಂದ, ಅವುಗಳಿಗೆ ಕರು ಹಾಕುವಾಗ ಸಹಾಯ ಸಿಕ್ಕರೆ ಒಳಿತು. ದೊಡ್ಡಪ್ಪನ ಮನೆಯಲ್ಲಿ ಎಮ್ಮೆ ಕರು ಹಾಕುವಾಗ ಆ ಕರುವನ್ನು ನಮ್ಮ ಅಜ್ಜ ಮತ್ತು ದೊಡ್ಡಪ್ಪ ಇಬ್ಬರೂ ಸೇರಿ ಎಳೆದು ಹೊರತಗೆದಿದ್ದರು.
ಅಜ್ಜಿ ದೇವಸ್ಥಾನದ ಕಡೆ ಓಡಿದ ನಂತರ ನಮ್ಮ ಎಮ್ಮೆ ಹಲವಾರು ಬಾರಿ ನೋವಿನಿಂದ ‘ಅಂಬಾ.. ಅಂಬಾ..’ ಎಂದು ಕೂಗುತ್ತ ನನ್ನ ಕಡೆಗೆ ನೋಡಿತು. ನಾನಿನ್ನೂ ಆಗ ಚಿಕ್ಕ ಹುಡುಗ. ನನ್ನನ್ನೇ ಇನ್ನೊಬ್ಬರು ನೋಡಿಕೊಳ್ಳೋ ಸಮಯದಲ್ಲಿ ಎಮ್ಮೆ ನನ್ನನ್ನು ಸಹಾಯಕ್ಕಾಗಿ ಕೇಳಿದ್ದು ನನಗೆ ನನ್ನ ಅಸಹಾಯಕತೆಯ ಬಗ್ಗೆ ಬೇಸರ ತರಿಸಿತು. ನಾನು ಅದರ ಹತ್ತಿರ ಹೋಗಿ ಅದರ ತಲೆಯ ಹತ್ತಿರ ಕುಳಿತು ಹೆದರಿಕೆಯಲ್ಲಿಯೇ ಅದರ ತಲೆ ಸವರಿದೆ. ಬೇರೆ ದಿನವಾದರೆ ನನಗೇನು ಹೆದರುವ ಅವಶ್ಯಕತೆ ಇರಲಿಲ್ಲ. ಆದರೆ ಈಗ ಅದು ನೋವಿನಲ್ಲಿದ್ದುದರಿಂದ ಏನಾದರು ತಿವಿದುಬಿಟ್ಟರೆ ಎಂಬ ಭಯವಿತ್ತು. ಆದರೆ ನಮ್ಮ ಎಮ್ಮೆ ಹಾಗೇನು ಮಾಡಲಿಲ್ಲ. ನನ್ನ ಮುಖವನ್ನೇ ನೋಡುತ್ತಾ ಹಾಗೆ ಕುಳಿತುಕೊಂಡಿತ್ತು. ನಾನು ಅಜ್ಜಿಯ ಬರುವಿಕೆಗಾಗಿ ಕಾದು ದೇವಸ್ಥಾನದ ಹಾದಿಯನ್ನೇ ಪದೇ ಪದೇ ನೋಡುತ್ತಿದ್ದೆ. ಯಾಕೋ ಅಜ್ಜಿ ತಡ ಮಾಡಿದರು ಎಂದೆನಿಸಿತು. ಅಲ್ಲದೆ ಅಂತಹ ಮಳೆಯಲ್ಲಿ ಸ್ವಲ್ಪ ತೊಯ್ದಿದ್ದಕ್ಕೋ ಏನೋ ಸ್ವಲ್ಪ ಸೀನುಗಳು ಬಂದವು.
ನಾನು ಅಜ್ಜಿಯ ಬರವನ್ನು ನೋಡುತ್ತಾ ಇರುವಾಗ ಇದ್ದಕಿದ್ದಂತೆ ನಮ್ಮ ಎಮ್ಮೆ ಜೋರಾಗಿ ಅಂಬಾ ಎನ್ನುತ್ತಾ ಎದ್ದುನಿಂತುಬಿಟ್ಟಿತು. ನಾನು ಭಯದಲ್ಲಿ ನೆಗೆದು ಹಿಂದೆ ನಿಂತೆ. ನಮ್ಮ ಎಮ್ಮೆ ನಿಧಾನಕ್ಕೆ ನನ್ನ ಹತ್ತಿರಕ್ಕೆ ನಡೆದು ಬಂದು ಮತ್ತೊಮ್ಮೆ ನನ್ನ ಮುಖಕ್ಕೇ ಅಂಬಾ.. ಎಂದು ಕಿರುಚಿತು. ನನಗೆ ಏನೂ ಅರ್ಥವೇ ಆಗಲಿಲ್ಲ. ಅದು ನನಗೆ ಸಹಾಯ ಕೇಳುತ್ತಿರಬಹುದು ಎಂದೆಣಿಸಿ ಅದರ ಹಗ್ಗ ಹಿಡಿದು "ಅಜ್ಜಿ ಬರ್ತಾಳೆ ಇರು" ಎಂದು ಹೇಳಿದೆ. ನಾನು ಹೇಳಿದ್ದು ಅದಕ್ಕೆ ಎಷ್ಟು ಅರ್ಥವಾಯಿತೋ ಏನೋ, ಅದು ಮತ್ತೊಮ್ಮೆ ಮತ್ತೂ ಜೋರಾಗಿ ಅಂಬಾ.. ಎಂದು ಕೂಗಿತು. ನನಗೆ ಅದು ಏನು ಮಾಡುತ್ತಿದೆ ಎಂದೇ ಗೊತ್ತಾಗಲಿಲ್ಲ. ಗೊಂದಲದಲ್ಲಿ ಸುಮ್ಮನೆ ಅದರ ಮುಖವನ್ನೇ ನೋಡಿದೆ. ಅದು ದೇವಸ್ಥಾನದ ಕಡೆಗೆ ತಿರುಗಿ ಅಂಬಾ.. ಎಂದು ಕೂಗುತ್ತ ನಡೆಯಲಾರಂಭಿಸಿತು. ಅದು ಮಳೆಯಲ್ಲಿ ನೆನೆಯಬಹುದೆಂದು ನಾನು ಅದರ ಹಗ್ಗ ಹಿಡಿದು ತಡೆಯಲು ಪ್ರಯತ್ನಿಸಿದೆ. ಆದರೆ ಅದು ನನ್ನ ಎಳೆತಕ್ಕೆ ಸ್ವಲ್ಪವೂ ಬಗ್ಗದೆ ನಡೆಯುತ್ತಲೇ ಇತ್ತು. ಒಂದು ನಿಮಿಷದ ಹಿಂದೆ ನೋವಿನಲ್ಲಿ ಕಿರುಚುತ್ತಿದ್ದ ಇದಕ್ಕೆ ಏನಾಯಿತೆಂದು ನನಗೆ ಹೊಳೆಯಲೇ ಇಲ್ಲ. ನಾನು ಆದಷ್ಟು ಅದನ್ನು ತಡೆಯಲು ಪ್ರಯತ್ನಿಸಿದೆ, ಅದು ನಿಲ್ಲದೆ ಮುಂದುವರೆದು ನನ್ನನ್ನೇ ಮಳೆಗೆ ಎಳೆಯಲು ಶುರುವಾದಮೇಲೆ ಹಗ್ಗ ಬಿಟ್ಟು ಸುಮ್ಮನಾಗಿಬಿಟ್ಟೆ. ಎಮ್ಮೆ ಮಳೆಯಲ್ಲೇ ಸ್ವಲ್ಪ ದೂರ ಹೋಗಿ ಹಿಂತಿರುಗಿ ನಿಂತು ನನ್ನ ನೋಡಿ ಅಂಬಾ.. ಎಂದಿತು. ನಾನು ಇದಕ್ಕೇನಾದರೂ ಹುಚ್ಚು ಹಿಡಿಯಿತೇ ಎಂದು ಕೋಪದಲ್ಲಿ ''ಬಾ ಬಾ'' ಎಂದು ಅದನ್ನು ವಾಪಸ್ಸು ಕರೆಯುವ ಪ್ರಯತ್ನ ಮಾಡಿದೆ. ಆದರೆ ಅದು ನನ್ನ ಮಾತಿಗೆ ಸೊಪ್ಪು ಹಾಕದೆ ಅಲ್ಲಿಂದಲೇ ಮತ್ತೆ ಅಂಬಾ.. ಎಂದು ಕೂಗಿತು.
ನಾವಿಬ್ಬರೂ ಒಬ್ಬರನ್ನೊಬ್ಬರು ಕರೆಯುವ ಜುಗಲ್ಬಂದಿಯಲ್ಲಿ ಹಲವಾರು ನಿಮಿಷ ಕಳೆದೆವು. ಕೊನೆಗೊಮ್ಮೆ ಎಮ್ಮೆಗೆ ಏನನ್ನಿಸಿತೋ ಏನೋ, ಅದು ನನ್ನ ಕಡೆ ನಿಧಾನವಾಗಿ ಹೆಜ್ಜೆ ಹಿಡುತ್ತ ಅಂಬಾ.. ಎಂದು ಕೂಗುತ್ತಲೇ ಬಂತು. ನಾನು ಅರ್ಧ ದಾರಿಗೆ ಹೋಗಿ ಅದರ ಕೊರಳಿಗೆ ಕಟ್ಟಿದ್ದ ಹಗ್ಗ ಹಿಡಿದುಕೊಂಡು ಅದನ್ನು ಮರದ ಬುಡದ ಕಡೆಗೆ ಎಳೆದೆ. ಅದು ಅಲ್ಲಿಂದ ಒಂದು ಹೆಜ್ಜೆಯೂ ಕದಲದಂತೆ ಗಟ್ಟಿಯಾಗಿ ನಿಂತಲ್ಲೇ ನಿಂತು ಮತ್ತೊಮ್ಮೆ ಅಂಬಾ.. ಎಂದು ಕೂಗಿತು. ನನಗೆ ಅದರ ಆಟ ನೋಡಿ ಕೋಪವೇ ಬಂದುಹೋಗಿತ್ತು. ಸುಖಾಸುಮ್ಮನೆ ನನ್ನನ್ನು ಮಳೆಯಲ್ಲಿ ನೆನೆಯಲು ಕರೆಯುತ್ತಿದೆ ಎಂದೇ ನಾನು ತಿಳಿದೆ. ನಾನು ಅದನ್ನು ನನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ಎಳೆದರೂ ಅದು ಅಲುಗಾಡಲೂ ಇಲ್ಲ. ಬದಲಿಗೆ ನನ್ನನ್ನೇ ಹಗ್ಗದ ಮುಖಾಂತರ ಮರದಿಂದ ದೂರ ಎಳೆಯಲು ಶುರುಮಾಡಿತು. ನಾನು ಅದರ ಹಗ್ಗವನ್ನು ಜೋರಾಗಿ ಹಿಡಿದಿದ್ದರಿಂದಲೋ ಏನೋ, ಅದು ಎಳೆದ ರಭಸಕ್ಕೆ ಮುಗ್ಗರಿಸಿ ಬಿದ್ದುಬಿಟ್ಟೆ. ಆದರೆ ಎಮ್ಮೆ ಅಲ್ಲಿಗೆ ನಿಲ್ಲದೆ ನನ್ನನ್ನು ಮತ್ತಷ್ಟು ದೂರ ಎಳೆದುಕೊಂಡು ಹೋಯಿತು. ನಾನು ಭಯದಲ್ಲಿ ಜೋರಾಗಿ ಕಿರುಚಿಕೊಂಡೆ. ಆದರೆ ಮಳೆಯಲ್ಲಿ ನನ್ನ ಕೂಗೂ ಯಾರಿಗೂ ಕೇಳಲಿಲ್ಲ. ಎಮ್ಮೆ ನನ್ನನ್ನು ಮರದಿಂದ ಸುಮಾರು ದೂರ ಎಳೆದುಕೊಂಡು ಬಂದು ಒಂದು ಕಡೆ ನಿಂತಿತು. ಅದು ನಿಂತ ಕೂಡಲೇ, ನಾನು ಎದ್ದು ನಿಂತು ಅದು ಮತ್ತೇನು ಮಾಡುವುದೋ ಎಂದು ಹೆದರಿ ಅತ್ತಿತ್ತ ನೋಡುವಷ್ಟರಲ್ಲಿ ನಾನು ನಿಂತಿದ್ದ ಮರಕ್ಕೆ ಜೋರಾಗಿ ಮಿಂಚು ಹೊಡೆದು ಒಂದು ದೊಡ್ಡ ಕೊಂಬೆಗೆ ಬೆಂಕಿ ಹತ್ತಿಕೊಂಡು ನಾವು ಅಷ್ಟು ಹೊತ್ತು ನಿಂತಿದ್ದ ಜಾಗಕ್ಕೆ ಧೊಪ್ಪನೆ ಬಿತ್ತು. ನಾನು ಅಲ್ಲಿಯೇ ಮರಗಟ್ಟಿದವನಂತೆ ನಿಂತುಬಿಟ್ಟೆ. ಸಿಡಿಲಿನ ಶಬ್ದಕ್ಕೂ, ಬೆಂಕಿಯ ಜ್ವಾಲೆಗಳನ್ನು ನೋಡಿದ್ದಕ್ಕೂ ನನಗೆ ಭಯದಿಂದ ಹಾಗೇ ತಲೆ ಸುತ್ತಿ ಬಂದಹಾಗಾಯಿತು. ಅಜ್ಜಿ ದೂರದಲ್ಲೆಲ್ಲೋ "ಶಿವೂ..." ಎಂದು ಕೂಗಿಕೊಂಡು ಬರುತ್ತಿದ್ದುದು ಕ್ಷೀಣವಾಗಿ ಕೇಳಿಸಿತು. ನಂತರ ಏನೂ ಸರಿಯಾಗಿ ನೆನಪಿಲ್ಲ.
ಮರುದಿನ ಬೆಳಗ್ಗೆ ನಾನು ಎದ್ದಾಗ ಅಜ್ಜ ಎಮ್ಮೆಗೆ ಹುಲ್ಲು ಹಾಕುತ್ತಿದ್ದರು. ಅದು ಮಲಗಿದ್ದಲ್ಲಿಯೇ ತನ್ನ ಕತ್ತು ಚಾಚಿ ಹುಲ್ಲು ತಿನ್ನುತ್ತಿತ್ತು. ಅದರ ಕರು ಅದರ ಪಕ್ಕವೇ ಮಲಗಿತ್ತು. ನಾನೇನಾದರೂ ಹಿಂದಿನ ದಿನ ಮರದಿಂದ ದೂರ ಬರದೇ ಹೋಗಿದ್ದರೆ ನನ್ನ ಕಥೆಯೇನಾಗಿರುತ್ತಿತ್ತೋ ಯಾರು ಬಲ್ಲರು. ನನ್ನನ್ನು ಮರದಿಂದ ದೂರ ಕರೆದುಕೊಂಡು ಬಂದು ನನ್ನ ಜೀವ ಉಳಿಸಿದ ಎಮ್ಮೆಗೆ ಹೇಗೆ ಧನ್ಯವಾದ ಹೇಳಬೇಕೋ ನನಗೆ ತಿಳಿಯಲಿಲ್ಲ. ನಾನು ಹೇಳಿದರೂ ಅದಕ್ಕೆ ಅದೆಲ್ಲಾ ಅರ್ಥವಾಗುವುದೋ ಎಂದು ನನ್ನನ್ನು ನಾನೆ ಪ್ರಶ್ನಿಸಿಕೊಂಡೆ. ಆದರೆ ಅಪಾಯದ ಮುನ್ಸೂಚನೆ ಪಡೆದು ತಾನೊಬ್ಬನೇ ಮರದಿಂದ ದೂರ ಹೋಗದೆ ನನ್ನನ್ನೂ ದೂರ ಕರೆದುಕೊಂಡು ಹೋಗಿ ನನ್ನನ್ನೂ ಅಪಾಯದಿಂದ ಪಾರುಮಾಡಿದ ಎಮ್ಮೆಗೆ ಧನ್ಯವಾದ ಅರ್ಥವಾಗದೆ ಏನು ಎಂದುಕೊಂಡು ಅದರ ಹತ್ತಿರ ಹೋಗಿ ಅದರ ತಲೆ ಸವರಿ ಧನ್ಯವಾದ ಹೇಳಿದೆ. ಅದಕ್ಕೆ ಅರ್ಥವಾಯಿತೋ ಏನೋ ಎನ್ನುವಂತೆ ಅದು ಅಂಬಾ.. ಎಂದಿತು. ಅದರ ಕೂಗು ಕೇಳಿ ಪಕ್ಕದಲ್ಲಿ ಮಲಗಿದ್ದ ಕರು ನೆಟ್ಟುಬಿದ್ದು ಎದ್ದು ಸುತ್ತಲೂ ಒಂದು ಸುತ್ತು ನೋಡಿ ಕೊನೆಗೆ ನನ್ನನ್ನು ನೋಡುತ್ತಾ ಪಿಳಿ ಪಿಳಿ ಕಣ್ಣು ಬಿಟ್ಟಿತು. ನಾನು ಅದರ ಪಕ್ಕಕ್ಕೆ ಹೋಗಿ ಕುಳಿತು ಅದರ ತಲೆ ಸವರಿದೆ. ಅದು ನನ್ನ ಕೈ ನೆಕ್ಕಿ ಸಂತಸ ವ್ಯಕ್ತಪಡಿಸಿತು.