ಕರಡಿ ಕಥೆ
ನಾನು, ಸುನಿಲ ಮತ್ತು ಅರುಣ ಈಗ್ಗೆ ಬೆಂಗಳೂರಿಗೆ ಬಂದು ಮೂರು ವರ್ಷವಾಯ್ತು. ನಮ್ಮ ಗೆಳೆತನ ಅದಕ್ಕಿಂತಲೂ ಹಿಂದಿನದು. ಹೀಗಾಗಿ ನನ್ನ ಮನೆಯವರ ಪರಿಚಯವೂ ಅವರಿಗಿತ್ತು. ಹಾಗೆಯೆ ಅವರ ಮನೆಯವರ ಪರಿಚಯವೂ ನನಗಿತ್ತು. ನಾವೆಲ್ಲರೂ ಚಾಚೂತಪ್ಪದೆ ಮಾಡುತ್ತಿದ್ದ ಹಲವಾರು ಕೆಲಸಗಳಲ್ಲಿ, ಪ್ರತೀ ಭಾನುವಾರ ಮಟನ್ ಬಿರಿಯಾನಿ ತಿನ್ನುವುದು ಕೂಡ ಒಂದು. ಮೂವರೂ ಮಟನ್ ಪ್ರಿಯರೇ. ಎಷ್ಟೋ ಬಾರಿ ಒಂದು ಮಟನ್ ಬಿರಿಯಾನಿಗೆ ಹೊಟ್ಟೆಯೇ ತುಂಬುತ್ತಿರಲಿಲ್ಲ. ಅಂತಹ ಹೊಟ್ಟಬಾಕರು. ನಾವೆಷ್ಟು ಬಾರಿ ಮಟನ್ ಬೀರಿಯಾನಿ ತಿನ್ನಲು ಹೋಟೆಲಿಗೆ ಹೋಗಿದ್ದೆವೋ, ಅಷ್ಟೂ ಬಾರಿ ಅರುಣ ಒಂದು ಮಾತನ್ನು ಹೇಳಿಯೇ ತೀರುತ್ತಿದ್ದ. ಅದೇನೆಂದರೆ, “ನೀವೊಂದುಸಾರಿ ನಮ್ಮನೇಲಿ ಮಟನ್ ಬಿರಿಯಾನಿ ತಿನ್ಬೇಕು. ಅವಾಗ ಈ ಹೋಟೆಲುಗಳನ್ನೆಲ್ಲ ಮಾರ್ತೇಬಿಡ್ತೀರ. ಹಂಗೆ ಮಾಡ್ತಾಳೆ ನಮ್ಮಮ್ಮ”. ಅವನು ಪ್ರತೀ ಬಾರಿ ಹಾಗೆ ಹೇಳಿದಾಗ ನಾವು “ಹಾಗಾದರೆ ನಡಿ ನೆಕ್ಸ್ಟ್ ವೀಕ್ ಹೋಗೇ ಬಿಡೋಣ” ಎಂದು ಹೇಳುವುದು ವಾಡಿಕೆ. ಆದರೆ ಈ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ, ಅದ್ಹೇಗೆ ವಾರವೆನ್ನುವುದು ಉರುಳಿ ಹೋಗುತ್ತಿತ್ತೋ. ನಮಗೆ ಮತ್ತೆ ಮುಂದಿನ ಭಾನುವಾರದ ದಿನವೇ ಅರುಣನ ಮಾತು ನೆನಪಾಗುತ್ತಿದ್ದುದು. ಹೀಗೇ ವರುಷಗಳೇ ಉರುಳಿಹೋದರೂ, ಅರುಣನ ಮನೆಯ ಮಟನ್ ಬಿರಿಯಾನಿ ತಿನ್ನುವ ಭಾಗ್ಯ ನಮಗೆ ಬರಲೇ ಇಲ್ಲ.
ಕೊನೆಗೊಂದು ದಿನ ಶನಿವಾರದ ನಡುರಾತ್ರಿಯಲ್ಲಿ, ಸುನಿಲ “ಮಗ, ಯಾಕೋ ಮಟನ್ ಬಿರಿಯಾನಿ ತಿನ್ಬೇಕು ಅನ್ನಿಸ್ತಿದೆ ಕಣೋ. ನಡಿಯೋ ನಾಳೆ ಅರುಣನ ಮನೆಗೆ ಹೋಗೋಣ” ಎಂದ. ಲ್ಯಾಪ್ಟಾಪಿನಲ್ಲಿ ಏನೋ ನೋಡಿಕೊಂಡು ಕೂತಿದ್ದ ಅರುಣ ಅದನ್ನು ಕೇಳಿದೊಡನೆ ಕರೆಂಟ್ ಹೊಡೆವನಂತೆ ಛಂಗನೆ ಎದ್ದು ನಿಂತ. ಅವನ ಮುಖದಲ್ಲಿ ಇದ್ದ ಆ ಉತ್ಸುಕತೆ ನಾನು ಇನ್ನೂ ಮರೆತಿಲ್ಲ. ನನಗೇನೂ ಆ ವಾರ ಅಂತಹ ಹೇಳಿಕೊಳ್ಳುವ ಕೆಲಸಗಳೇನೂ ಇರಲಿಲ್ಲ, ಹಾಗೂ ನನಗೂ ಇದು ಹಲವಾರು ಬಾರಿ ಅನ್ನಿಸಿದ್ದುಂಟು. “ಸರಿ, ಹಾಗಾದರೆ ನನಗೇನು ತೊಂದರೆಯಿಲ್ಲ” ಎಂದು ಹೇಳಿದೆ. ಅಷ್ಟಕ್ಕೇ, ಮಹಾನುಭಾವ ಅರುಣ ಹೆಚ್ಚುಕಮ್ಮಿ ಕಣ್ಣಲ್ಲಿ ನೀರು ತುಂಬಿಸಿಕೊಂಡು “ಕೊನೆಗೂ ನೀವು ನಮ್ಮನೇಗೆ ಬರ್ತೀರಲ್ಲ, ಸಾಕು ಬಿಡಿ” ಎಂದ. ಪಕ್ಕದಲ್ಲಿ ಸುನಿಲ, “ನಿನ್ನ ಮುಖ ನೋಡ್ಕೊಂಡು ಯಾರು ಬರ್ತಾ ಇದಾರೋ, ಏನೋ ಮಟನ್ ಮಾಡಿಸ್ತೀನಿ ಅಂತ ಹೇಳಿದ್ದಕ್ಕೆ ಬರ್ತಿರೋದು” ಅಂದ. ಅವನು ತಮಾಷೆಗೆ ಹಾಗೆ ಹೇಳಿದ್ದು ಅಂತ ಅರುಣನಿಗೂ ಗೊತ್ತಿತ್ತು. “ಮಾಡಿಸ್ತೀನಿ ಬಾರೋ, ಅದೆಷ್ಟು ತಿಂತೀಯಾ ಅಂತ ನಾನೂ ನೋಡೇಬಿಡ್ತೀನಿ’’ ಅಂದು ಅವರ ಅಮ್ಮನಿಗೆ ಫೋನ್ ಮಾಡಿ ತಿಳಿಸಲು ಹೊರಗೋದ. ನಮಗೋಸ್ಕರ ಒಂದು ಕುರಿ ನಾಳೆ ಬಲಿಯಾಗುತ್ತೆ ಎಂದು ನಾನು ಮರುಗಿದೆ.
ಮರುದಿನ ಬೆಳ್ಳಂಬೆಳಗ್ಗೆ ಅರುಣನೇ ನಮ್ಮನ್ನೆಲ್ಲ ಏಳಿಸಿದ. ಬೆಳಗ್ಗೆ ೪ ಗಂಟೆಗೇ ಟೀ ಮಾಡಿದ್ದ, ನನಗೆ ಮತ್ತು ಸುನಿಲನಿಗೆ ಸ್ನಾನಕ್ಕೆ ನೀರು ಕಾಯಿಸಿದ್ದ, ಅಷ್ಟೊತ್ತಿಗೇ ಮನೆ ಕಸ ಹೊಡೆದು ದೇವರ ಪೂಜೆ ಕೂಡ ಮಾಡಿಬಿಟ್ಟಿದ್ದ. ಅವನು ಆಡುತ್ತಿದ್ದ ರೀತಿ ನೋಡಿ ಅವನು ರಾತ್ರಿ ಮಲಗಿದ್ದನೋ ಇಲ್ಲವೋ ಗೊತ್ತಾಗಲಿಲ್ಲ. ಅವನ ಕಾರ್ಯವೈಖರಿ ನೋಡಿ ನಾನು ಕೇಳಿದೆ, "ಏನಪ್ಪಾ, ಎಲ್ಲಾ ಕೆಲಸ ನೀನೇ ಮಾಡ್ತಿದ್ದೀಯಾ, ಇನ್ನೆನು ನಮಗೆ ಸ್ನಾನಾನು ನೀನೇ ಮಾಡಿಸ್ತಿಯೋ ಏನು?” ಎಂದೆ. ಅದಕ್ಕವನು, "ಯಾಕೇ, ಇನ್ನೋಂದಿದಿಯಲ್ಲ ಅದನ್ನು ಮಾಡ್ತೀನಿ ಬಾ" ಎಂದು ಟಾಂಗ್ ಕೊಟ್ಟ. "ಸರಿ, ನನ್ನ ಕೆಲಸ ನಾನೆ ಮಾಡ್ಕೋಬೇಕು" ಅಂತೇಳಿ ನಾನು ಸ್ನಾನಕ್ಕೆ ಹೊರಟೆ. ನಾವೆಲ್ಲಾ ರೆಡಿಯಾಗಿ ಹೊರಡುವಷ್ಟರಲ್ಲಾಗಲೇ ೫.೩೦ ಗಂಟೆ ಆಗಿತ್ತು. ಅಷ್ಟರಲ್ಲಿ ಬಿಎಂಟಿಸಿ ಬಸ್ಸುಗಳು ಶುರುವಾಗಿರುತ್ತವೆ ಆದ್ದರಿಂದ, ನಮಗೆ ಬಸ್ಸಿಗೆ ಕಾಯುವ ಪ್ರಮೇಯ ತಪ್ಪಿತ್ತು. ನಾವು ಮನೆಯಿಂದ ಮೇನ್ ಬಸ್ಟ್ಯಾಂಡಿಗೆ ಸಿಟಿ ಬಸ್ ಹಿಡಿದು ಸೇರಿದೆವು. ಅಲ್ಲಿಂದ ಸಿಕ್ಕ ಮೊದಲ ಬಸ್ಸಿನಲ್ಲಿ ತುಮಕೂರಿಗೆ ಪಯಣ.
ನಾವಿನ್ನು ಬಸ್ಸೇ ಇಳಿದಿರಲಿಲ್ಲ, ಅಷ್ಟರಲ್ಲಿ ಅರುಣ ನಮ್ಮೆಲ್ಲರ ಬ್ಯಾಗುಗಳನ್ನು ಹೊತ್ತುಕೊಂಡು ಇನ್ನೊಂದು ಬಸ್ಸಿನ ಕಡೆಗೆ ಓಡಿದ. ಇವನಿಗೇನಾಯ್ತು ಎಂದು ನಾನು ಮತ್ತು ಸುನಿಲ ಮುಖ ನೋಡಿಕೊಂಡೆವು. ಯಾವುದೊ ಒಂದು ಹಳೇ ಗವರ್ನಮೆಂಟ್ ಬಸ್ಸಿನ ಮುಂದೆ ನಿಂತು "ಬೇಗ ಬರ್ರೋ, ಇರೋದು ಇದೊಂದೇ ಬಸ್ಸು" ಎಂದು ಕೂಗಿದ. ಅಗಾದರೂ ನನಗೆ ಮುಂದಿನ ಸುಮಾರು ಒಂದೂವರೆ ಗಂಟೆಗಳ ಪ್ರಯಾಣದ ಬಗ್ಗೆ ಒಂದು ಐಡಿಯಾ ಬರಬೇಕಿತ್ತು, ಆದರೆ ನನ್ನ ಕರ್ಮಕ್ಕೇ ನಾನು ಕೂಡಾ ಅವನಂತೆ ಏನೂ ಯೋಚಿಸದೆ ಬಸ್ಸಿನ ಕಡೆಗೆ ಓಡಿದೆ. ನನ್ನ ಅದೃಷ್ಟ, ಬಸ್ಸಿನಲ್ಲಿ ಅಷ್ಟಾಗಿ ಜನ ಇರಲಿಲ್ಲ. ಸಮಾಧಾನದಿಂದ ಸೀಟ್ ಹಿಡಿದು ಕೂತೆ. "ಏನೋ, ಒಂದೇ ಬಸ್ಸು ಅಂದ್ಯಲ್ಲಾ, ಮತ್ತೆ ನಾವು ವಾಪಾಸ್ ಬರೋದೇಗೊ?" ಎಂದೇ. ಅದಕ್ಕವನು, "ಇದೆ ಬಸ್ಸು ಸಾಯಂಕಾಲನೂ ಬರುತ್ತೆ ಕಣೋ" ಎಂದ. ಸರಿ ಹೋಗ್ಲಿ ಬಿಡು ಅಂತ ಸುಮ್ಮನಾದೆ. ನಾವು ಕೂತು ಹತ್ತು ನಿಮಿಷವಾದ್ರೂ, ಡ್ರೈವರು ಕಂಡಕ್ಟರುಗಳ ಮುಖವೇ ಕಾಣಲಿಲ್ಲ. ನಾನು, ಏನಪ್ಪಾ ಇದು ಅನ್ನೋ ಹಾಗೆ ಮುಖ ಮಾಡಿ ಅರುಣನ ಕಡೆಗೆ ನೋಡಿದೆ. ಅವನು ತನ್ನ ಮೂವತ್ತೆರಡೂ ಹಲ್ಲುಗಳನ್ನು ತೋರಿಸಿ ನಕ್ಕ. ಅದಾಗಿ ಸುಮಾರು ಹತ್ತು ನಿಮಿಷಗಳಲ್ಲಿ ಡ್ರೈವರು ಕಂಡಕ್ಟರು ಬಂದು ಬಸ್ಸಿನ ಪಕ್ಕ ನಿಂತರು. ಸರಿ, ಇನ್ನಾದರೂ ಹೊರಡುತ್ತಲ್ಲಾ ಅಂದುಕೊಂಡ್ರೆ, ಅದೂ ಆಗಲಿಲ್ಲ. ಅವರಿಬ್ಬರೂ ಆರಾಮಾಗಿ ಹರಟೆ ಹೊಡೆಯುತ್ತಾ ಇದ್ದರು. ನನಗೆ ರೇಗಿಹೋಯ್ತು “ರೀ, ಕಂಡಕ್ಟರೇ ಇನ್ನು ಎಷ್ಟೊತ್ರಿ ಹೊರೋಡೋಕೆ” ಅಂತಾ ಬಸ್ಸಿನಿಂದಲೇ ಕೇಳಿದೆ. ಅದಕ್ಕವನು ನನ್ನನ್ನು ಗುರಾಯಿಸಿ ನೋಡಿ, "ಜನ ಬರೋದು ಬ್ಯಾಡ ಏನ್ರಿ?" ಅಂತಾ ನನಗೆ ಮರುಪ್ರಶ್ನೆ ಮಾಡಿದ. ಅದಕ್ಕೆ ಪಕ್ಕದಲ್ಲಿದ್ದ ಸುನಿಲ, "ಯಾಕ್ರೀ, ನಾವೇನ್ ನಿಮ್ಮ ಕಣ್ಣಿಗೆ ಜನಗಳ್ ತರ ಕಾಣಲ್ವಾ?" ಅಂದ. ಅದಕ್ಕವನು, ಡ್ರೈವರಿಗೆ ಇವರ್ಯಾರೋ ತರಲೆಗಳ ತರಹ ಕಾಣಿಸಿದರು. "ಆಯ್ತಯ್ತು, ಇನ್ನೇನು ಹೊರಡ್ತೀವಿ ಬಿಡ್ರಿ" ಅಂದ.
ಸ್ವಲ್ಪ ಹೊತ್ತಿನ ನಂತರ ಅವರಿಗೂ ಯಾರೂ ಬರ್ಲಿಕ್ಕಿಲ್ಲ ಅನ್ಸಿರಬೇಕು, ನಿದಾನವಾಗಿ ಬಂದು ಬಸ್ಸು ಹೊರಡ್ಸಿದ್ರು. ಆಗ ಬಸ್ಸಿನಲ್ಲಿದ್ದವರು ನಮ್ಮನ್ನು ಸೇರಿಸಿ 8 ಜನ ಮಾತ್ರ. ಇಡೀ ಬಸ್ಸೇ ನಮ್ದು ಅಂದ್ಕೊಂಡು ನಾವು ಒಬ್ಬೊಬ್ರು ಒಂದೊಂದು ಸೀಟ್ನಲ್ಲಿ ಕೂತಿದ್ವಿ. ಆದ್ರೆ ಅರುಣ ಮಾತ್ರ ತುಂಬಾ ಸೈಲೆಂಟಾಗೆ ಇದ್ದ. ಬಸ್ಸು, ಬಸ್ಟ್ಯಾಂಡಿನಿಂದ ಹೊರಟು ಮಾರ್ಕೆಟ್ ಹತ್ರ ಬರ್ತಿದ್ದಂಗೇ ಎಲ್ಲಿದ್ರೋ ಏನೋ, ಸುಮಾರು ಎಪ್ಪತ್ತು ಜನ ಬಸ್ಸಿಗೆ ಮುಗಿ ಬಿದ್ದರು. ನಾನು ಮತ್ತು ಸುನಿಲ ಅವರೆಲ್ಲ ಬರೋದು ನೋಡಿ ಗಾಬರಿಯಿಂದ ಯಾರಾದ್ರೂ ಬಸ್ಸಿನ ಕೆಳಗೇನಾದ್ರು ಬಿದ್ರೆನೋ ಅಂತಾ ಕಿಟಕಿಯಿಂದ ತಲೆ ಹೊರಗಾಕಿ ನೋಡಿದ್ವಿ. ಏನೂ ಆಗಿರ್ಲಿಲ್ಲ. ಇನ್ನೊಂದ್ಕಡೆ ಇರ್ಬೇಕು ಅಂತಾ ಸುನಿಲ ಆ ಕಡೆನೂ ನೋಡಿಬಂದ. ಉಹುಂ, ಅಲ್ಲೂ ಏನೂ ಇಲ್ಲ. ಯಾವಾಗ ಅವ್ರೆಲ್ಲ ಕಿಟಕಿಯಿಂದ ಶಾಲು ಕರ್ಚಿಫು ಸೀಟ್ ಮೇಲೆ ಹಾಕಿದ್ರೋ, ಆವಾಗ್ಲೇ ನಮಗೆ ಗೊತ್ತಾಗಿದ್ದು, ಅವರೆಲ್ಲಾ ಇದೇ ಬಸ್ಸಿಗೆ ಬರೋವ್ರು ಅಂತಾ. ನಾನು ಮತ್ತೊಂದಸಾರಿ ಅರುಣನ ಕಡೆಗೆ ತಿರುಗಿನೋಡಿದೆ, ಅವ್ನು “ನಮ್ಮೂರಿಗೆ ಜನ ಎಲ್ಲಾ ಇಲ್ಲಿಂದಾನೆ ಹತ್ತೋದು” ಎಂದು ಹಲ್ಲುಕಿರಿದ. ನಾನು ಮನಸ್ಸಿನಲ್ಲೇ 'ಬಡ್ಡಿಮಗ ಇದಕ್ಕಾ ಇಷ್ಟೊತ್ತು ಸೈಲೆಂಟಾಗಿದ್ದಿದ್ದು' ಅಂದ್ಕೊಂಡೆ.
ಕಂಡಕ್ಟರ್ ಅಷ್ಟೂ ಜನರನ್ನು ಆ ಬಸ್ಸಿನಲ್ಲಿ ಹೇಗೆ ತುಂಬಿದನೂ ದೇವರೇ ಬಲ್ಲ. ಕೆ ಆರ್ ಮಾರ್ಕೆಟ್ಟಿನ ಜನವನ್ನೆಲ್ಲಾ ಒಂದೇ ಬಸ್ಸಿನಲ್ಲಿ ತುಂಬಿದಂತಿತ್ತು. ತನ್ನ ಮನೆಯ ಬಿರಿಯಾನಿ ಬಗ್ಗೆ ಅಷ್ಟೆಲ್ಲಾ ಹೇಳಿಕೊಂಡಿದ್ದ ಅರುಣ ಬಸ್ಸಿನ ವಿಷಯದಲ್ಲಿ ಮೋಸ ಮಾಡಿದ್ದು ನನಗೆ ಕೋಪ ತರಿಸಿತು. ಹೋಗಲಿ ಇಳಿದುಹೋಗೋಣವೆಂದರೆ ಇಳಿಯುವುದಕ್ಕೂ ಜಾಗವಿಲ್ಲದ ಹಾಗೆ ಜನ ತುಂಬಿದ್ದರು. ಬರೀ ಜನವಿದ್ದರೆ ಹೇಗೋ ನಡೆದುಬಿಡುತ್ತಿತ್ತು, ಆದರೆ ಅವರ ಲಗೇಜು ಬೇರೆ ಇತ್ತಲ್ಲ. ಲಗಜೇಂದರೇನು ಅಂತಿಂತದ್ದಲ್ಲ, ಕುರಿ ಕೋಳಿ ಪಾತ್ರೆ ಪಗಡಗಳನ್ನೊಳಗೊಂಡು ಅರುಣನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯಕುಜಾನನ ಹೆಂಡತಿಯಂತಿದ್ದ ಹೆಂಗಸನ್ನೂ ಒಳಗೊಂಡಿತ್ತು. ಅವಳ ಪಕ್ಕದಲ್ಲೊಬ್ಬಳು ಸಣ್ಣಗಿನ ಹೆಂಗಸು ತನ್ನ ಕಿರಿಗೂಸನ್ನು ಎತ್ತಿಕೊಂಡು ಕೂತಿದ್ದಳು. ಆ ಸೀಟಿನಲ್ಲಿ ಅವಳು ಹೇಗೆ ಕುಳಿತಿದ್ದಳೋ ಏನೋ, ಅವಳಿಗೆ ನನ್ನದೊಂದು ಸಲಾಮು. ಅರುಣನೇನಾದರೂ ಅವತ್ತು ಮಟನ್ ಅಸೆ ತೋರಿಸಿರದಿದ್ದರೆ, ನಾನು ಕಿಟಕಿಯಿಂದಲೇ ನೆಗೆಯುವ ಪ್ರಯತ್ನವನ್ನು ಖಂಡಿತ ಮಾಡುತ್ತಿದ್ದೆ. ಅಂತೂ ಇಂತೂ ನಾವು ಅರುಣನ ಊರು ಸೇರುವಾಗ ನನಗೆ ತಲೆನೋವೇ ಬಂದು ಹೋಗಿತ್ತು. ಬಸ್ಸಿನಿಂದಿಳಿದು ನಾನು ಮತ್ತು ಸುನಿಲ ಅರುಣನ ಮನೆ ಕಡೆ ಭಾರವಾದ ಹೆಜ್ಜೆ ಹಾಕುತ್ತ ಸಾಗಿದೆವು.
ಅರುಣನ ಮನೆಹತ್ತಿರ ಬರುತ್ತಿದ್ದಂತೆ ನಮಗೆ ರಾಜಮರ್ಯಾದೆ ಕಾದಿತ್ತು. ಅವರ ಮನೆಯವರಷ್ಟೇ ಅಲ್ಲದೆ ಅಕ್ಕಪಕ್ಕದ ಮನೆಯವರೆಲ್ಲಾ ನಮ್ಮನ್ನು ನೋಡಲು ಕಾತುರರಾಗಿ ನಿಂತಂತಿತ್ತು. ನಾನೂ ಸುನೀಲನೂ ನಾಚಿಕೆಯಿಂದ ಕರಗಿಯೇ ಹೋದೆವು. ಅರುಣನ ತಾಯಿ ನಾಳೆ ನಮ್ಮ ಮನೆಗೆ ಎಂಜಿನೀರುಗಳು (ಇಂಜಿನೀಯರುಗಳು) ಬರ್ತಾರೆ ಅಂತಾ ಹೇಳಿಕೊಂಡಿದ್ದರಂತೆ. ಅದಕ್ಕಾಗಿ ಅಷ್ಟೆಲ್ಲಾ ಜನ ಇದ್ದದ್ದು ಎಂದು ನನಗೆ ಮತ್ತೆ ಗೊತ್ತಾಯ್ತು. ಎಂತಹಾ ಮುಗ್ದ ಜನ ಇವರೆಲ್ಲಾ ಎನ್ನಿಸಿತು. ಮನೆಯೊಳಗೆ ಹೋದವರೇ, ನಾನೂ ಮತ್ತು ಸುನಿಲ ನಮ್ಮ ಬೆವರಿನಿಂದ ತೊಯ್ದಿದ್ದ ಅಂಗಿಗಳನ್ನು ಬದಲಿಸಿಬಿಟ್ಟೆವು. ಮುಖ ತೊಳೆದು ಬಂದು ಚೇರಿನಲ್ಲಿ ಕುಳಿತವರಿಗೆ ಅರುಣನ ಅಮ್ಮ ಬಂದು "ಏನು ಕುಡಿತಿರಪ್ಪ? ಕಾಪಿನ ಟೀನಾ" ಎಂದರು. ನಾನು ಸ್ವಲ್ಪವೂ ನಾಚಿಕೊಳ್ಳದೆ “ಒಂದರ್ಧ ಬಕೆಟ್ ಟೀ ಮಾಡಿದರೆ ಒಳ್ಳೇದು ಆಂಟಿ” ಎಂದೆ. ಅವರು ನನ್ನ ಮಾತಿಗೆ ನಗುತ್ತ "ಆಯಿತು ಆಯಿತು" ಎಂದು ಒಳಗೊದರು. ನನಗೆ ಅವರೇನಾದರೂ ನನ್ನ ಮಾತನ್ನು ನಿಜವೇ ಎಂದು ನಂಬಿ ಅರ್ಧ ಬಕೆಟ್ ಟೀ ಮಾಡಿಬಿಟ್ಟರೇನು ಕಥೆ ಎಂದು ದಿಗಿಲಾಯ್ತು. ಆದರೆ ಅರುಣ ಅಲ್ಲೇ ಇದ್ದುದರಿಂದ, ಅವರಿಗೆ ಅಂದಾಜು ಬಂದಿರಬೇಕೆಂದು ಸುಮ್ಮನಾದೆ. ನಾವಷ್ಟು ಟೀ ಕುಡಿಯುವುದಿಲ್ಲ ಎಂದೇನಲ್ಲ, ಅದಕ್ಕಿಂತಲೂ ಹೆಚ್ಚಿಗೆ ಕುಡಿಯುವವರೇ, ಆದರೆ ಅವತ್ತು ಮಟನ್ ಇತ್ತಲ್ಲ, ಅದಕ್ಕೆ ಕಡಿಮೆ ಕುಡಿಯೋ ಪ್ಲಾನ್ ಇಟ್ಟುಕೊಂಡದ್ದು. ಅರುಣನ ಮನೆಯಲ್ಲೇ ಹಸು ಎಮ್ಮೆಗಳು ಇದ್ದುದರಿಂದ ಟೀನಲ್ಲಿ ಮತ್ತು ಬರುವಷ್ಟು ಹಾಲು ಹಾಕಿದ್ದರು ಅವನ ಅಮ್ಮ. ಸುನಿಲನಂತೂ ಬರೀ ಟೀ ಕುಡಿದೇ ತೇಗಿಬಿಟ್ಟ.
ನಮಗೋಸ್ಕರವೇ ಟೀ ಜೊತೆಗೆ ಮಂಡಕ್ಕಿ ತಿಂಡಿಯನ್ನೂ ಮಾಡಿದರು. ನನಗಂತೂ ಅದು ಬಲು ಇಷ್ಟ. ಅದರ ಜೊತೆಗೆ ಬಿಸಿಬಿಸಿ ಮೆಣಸಿನಕಾಯಿ ಬೇರೆ. ಅದರಲ್ಲೂ ಅರುಣನ ತಾಯಿಯ ಕೈ ರುಚಿ ನನಗೆ ಬಹುವಾಗಿಯೇ ಹಿಡಿಸಿಬಿಟ್ಟಿತು. ನನಗೆ ಯಾವುದನ್ನೂ ತಿನ್ನಬೇಕು ಯಾವುದನ್ನು ಬಿಡಬೇಕು ಎಂತಲೂ ಗೊತ್ತಾಗದೆ ನನ್ನ ಹೊಟ್ಟೆ ಬಿರಿಯುವವರೆಗೂ ತಿಂದುಬಿಟ್ಟೆ. ನನಗೆ ಮಟನ್ ಮತ್ತೆಯೇ ನೆನಪಾದದ್ದು. “ಛೆ ಛೆ, ಎಂತಹಾ ಅಪಚಾರವಾಯಿತು” ಎಂದುಕೊಂಡೆ. ತಿಂದಿದ್ದನ್ನು ಮಟನ್ ಮಾಡುವುದರೊಳಗೆ ಕರಗಿಸಬೇಕೆಂದು ಅರುಣನ ಹಳ್ಳಿಯಳ್ಳಿ ಒಂದು ಸುತ್ತುಹಾಕಿ ಬಂದೆವು. ಅರುಣ ಎಲ್ಲವನ್ನೂ ನಮಗೆ ಪರಿಚಯಿಸುತ್ತಿದ್ದ. “ಇದು ನನ್ನ ಚಿಕ್ಕಪ್ಪನ ಮನೆ, ಅದು ನನ್ನ ಫ್ರೆಂಡ್ನದ್ದು, ಅಲ್ಲಿ ಆ ದೇವಸ್ಥಾನವಿದೆ, ಇಲ್ಲೊಂದು ಬಾವಿ ಇದೆ” ಹೀಗೇ ಅವನ ಊರಿನ ಸಮಗ್ರಚಿತ್ರಣ ನಮ್ಮ ಮುಂದಿಡುತ್ತಿದ್ದ. ನಾನೂ ಕೂಡ, ಮಂಡಕ್ಕಿ ತಿಂಡಿ ಕರಗಿ ಮಟನ್ನಿಗೆ ಸ್ವಲ್ಪ ಜಾಗ ಮಾಡಲಿಕ್ಕೆ ಹೆಚ್ಚಿಗೆಯೇ ಓಡಾಡಿಬಿಟ್ಟೆ. ಸರೀ, ಇವನ ಊರಲ್ಲಿ ನೋಡಲಿಕ್ಕೆ, ಕೇಳಲಿಕ್ಕೆ ಇನ್ನೆನೂ ಇಲ್ಲ ಎಂದು ಅರಿವಾದಾಗ ನಾವು ಮನೆಯ ಕಡೆಗೆ ಹೆಜ್ಜೆ ಹಾಕಿದೆವು.
ಮನೆಗೆ ಬಂದವರಿಗೆ ಮತ್ತೊಮ್ಮೆ ಟೀ ತಂದುಕೊಟ್ಟರು. ನಾನು ಮಂಡಕ್ಕಿ ತಿಂಡಿ ತಿಂದು ಆದ ಹಾಗಾಗಬಾರದೆಂದು ಕಡಿಮೆ ಕುಡಿದೆ. ಅಷ್ಟರಲ್ಲಿ ಎಲ್ಲಿಂದಲೋ ಒಂದು ದೊಡ್ಡ ಪಾತ್ರೆಯಲ್ಲಿ ಮಟನ್ ಬಂತು. ಅದು ನನಗೆ ಕಾಣದಿದ್ದರೂ, ಅದನ್ನು ಅವರು ತರುವ ರೀತಿಯಲ್ಲೇ ಗುರುತುಹಿಡಿದೆ. ಇನ್ನೇನು ಇನ್ನೆರೆಡು ಗಂಟೆಯಲ್ಲಿ ನಮ್ಮ ಹೊಟ್ಟೆಯಲ್ಲಷ್ಟೇ ಅಲ್ಲದೆ ಕಿಡ್ನಿ ಲಿವರುಗಳಲ್ಲೂ ತುಂಬುವಷ್ಟು ಮಟನ್ ತಿಂದು ಸಂಜೆ ಬೆಂಗಳೂರಿಗೆ ವಾಪಾಸ್ ಹೋದರಾಯ್ತು ಎಂದುಕೊಂಡೆ. ಅರುಣನ ಮನೆಯಲ್ಲಿ ಒಂದು ಹಳೇ ಕಾಲದ ಟಿವಿ ಇತ್ತು. ಆದರೆ ಕರೆಂಟ್ ಇರಲಿಲ್ಲ. ಮೊಬೈಲಿನಲ್ಲಿ ಸಿಗ್ನಲ್ ಇರದಿದ್ದುದರಿಂದ ಅದೂ ಸುಮ್ಮನಿತ್ತು. ಹೀಗಾಗಿ ನನಗೆ ಎಲ್ಲರನ್ನೂ ಮಾತನಾಡಿಸಲು ಸ್ವಲ್ಪ ಬಿಡುವು ಸಿಕ್ಕಂತಾಯ್ತು. ನಾನು ಮನೆಯ ಗೋಡೆಯ ಮೇಲೆಲ್ಲಾ ಎಲ್ಲೆಂದೆರಲ್ಲಿ ಮೊಳೆ ಹೊಡೆದು ನೇತುಹಾಕಿದ್ದ ಫೋಟೋಗಳನ್ನೆಲ್ಲಾ ಒಮ್ಮೆ ನೋಡಿ ಬಂದೆ. ಸದ್ಯ ಅರುಣ ಆಗ ಅಲ್ಲಿರಲಿಲ್ಲ, ಇಲ್ಲದಿದ್ದರೆ ಆ ಫೋಟೋಗಳಲ್ಲಿ ಯಾರ್ಯಾರು ಎಲ್ಲೆಲ್ಲಿದ್ದಾರೆ ಎಂದೂ ನನಗೆ ಹೇಳಿಬಿಡುತ್ತಿದ್ದನೇನೋ.
ಅರುಣನಿಗೆ ಒಬ್ಬಳು ಅಕ್ಕ ಹಾಗೂ ಒಬ್ಬಳು ತಂಗಿ ಇದ್ದಳು. ಅಕ್ಕನಿಗೆ ಮದುವೆಯಾಗಿ ಗಂಡನಮನೆಯಲ್ಲಿದ್ದಳು. ತಂಗಿ ಇನ್ನೂ ಓದುತ್ತಿದ್ದಾಳಂತೆ. ಬಹಳ ಒಳ್ಳೆಯ ಹುಡುಗಿ. ನಾವು ಬಂದಾಗ ಅವಳೇ ಕುರ್ಚಿಯನ್ನು ನಮಗೆ ತಂದುಕೊಟ್ಟದ್ದು. ಅಷ್ಟೇ ಅಲ್ಲದೆ ನಮ್ಮ ಮುಂದೆಯೇ ಒಂದು ಬಟ್ಟೆಯಿಂದ ಅದನ್ನು ಒರೆಸಿಕೂಡ ಕೊಟ್ಟಿದ್ದಳು. ಅವಳ ಅಮ್ಮನಷ್ಟೇ ಚಮತ್ತಾಗಿ ಕೆಲಸ ಮಾಡುತ್ತ ಇದ್ದುದು ಕಂಡು ನಿಜವಾಗಿಯೂ ಖುಷಿಯಾಯ್ತು. ಅಷ್ಟರಲ್ಲಿ ಅರುಣ ಎಲ್ಲೋ ಹೋಗಿದ್ದವನು ವಾಪಸ್ಸು ಬಂದ. ಒಂದು ಕೈಯಲ್ಲಿ ದೊಡ್ಡ ಎಳನೀರಿನ ಗೊಂಚಲಿತ್ತು. ಅದರಲ್ಲಿ ಏನಿಲ್ಲವೆಂದರೂ ೧೦ ಕಾಯಿಯಿದ್ದುವು. ಮತ್ತೊಂದು ಕೈಯಲ್ಲಿ ದೊಡ್ಡ ಕವರಿನಲ್ಲಿ ಏನೇನೋ ತಂದಿದ್ದ. ನಾನು "ಏನೋ ಅದು?" ಅಂದೇ. ಅದಕ್ಕವನು "ಬಂದೆಯಿರಪ್ಪಾ.." ಎಂದು ಅಡಿಗೆ ಮನೆಯೊಳಗೋದ. ಮತ್ತಲ್ಲಿಂದ ಏನೇನೋ ಕವರಿನಿಂದ ತೆಗೆಯುತ್ತಿರುವುದು ಕೇಳಿಸಿತು.. ನನಗ್ಯಾಕೋ ಇವರೆಲ್ಲಾ ಊಟಕ್ಕಾಗಿ ಮಾಡುತ್ತಿರುವ ತಯಾರಿ ಕಂಡು ವಾಪಾಸ್ ಹೇಗೆ ಹೋಗೋದು ಎನಿಸಿತು. ಮತ್ತದೇ ಬಸ್ಸಿನಲ್ಲಿ ಬೇರೆ!
ಅರುಣನ ತಂಗಿ ಅಷ್ಟರಲ್ಲಿ ನನಗೂ ಸುನಿಲನಿಗೂ ಒಂದೊಂದು ದೊಡ್ಡ ತಟ್ಟೆಯಲ್ಲಿ ಏನೋ ತಂದು “ತಗೋಳಿ ಅಣ್ಣ” ಅಂದಳು. ನಾನು ಏನಿರಬಹುದೆಂದು ಇಣುಕಿದೆ. ಅದರಲ್ಲಿ, ಎರೆಡೆರೆಡು ತರದ ಬಿಸ್ಕೇಟು, ಖಾರ, ಚಕ್ಕುಲಿ, ನಿಪ್ಪಟ್ಟು, ಮತ್ತು ಕರ್ಜಿಕಾಯಿ ಇದ್ದವು. ಅದನ್ನು ನೋಡಿದವನೇ ನಾನು "ಅರುಣಾ" ಎಂದು ಸಿಟ್ಟಿನಲ್ಲಿ ಕೂಗಿದೆ. ಅವನೂ, ಅವನ ತಾಯಿಯೂ ಜೊತೆಗೇ ಅಡಿಗೆಮನೆಯಿಂದ ಹೊರಬಂದರು. “ಇದೇನೋ ಇದು? ಮಟನ್ ಮಾಡಿಸ್ತೀನಿ ಅಂತಾ ಕರ್ಕೊಂಡುಬಂದು ಬಿಸ್ಕತ್ ತಿನ್ನಿಸ್ತಿದ್ದೀಯಲ್ಲೋ?” ಎಂದೆ. ಅದಕ್ಕವನ ತಾಯಿ ಮತ್ತು ತಂಗಿ ಜೋರಾಗಿ ನಗುತ್ತಾ ನಿಂತುಬಿಟ್ಟರು. “ಅಡಿಗೆ ಆಗೋದು ಇನ್ನು ಲೇಟಾಗುತ್ತೆ ಕಣೋ, ಅಲ್ಲಿವರೆಗೂ ಇದನ್ನ ತಿಂತಾ ಇರಿ” ಎಂದ. ಅದಕ್ಕೆ ಸುನಿಲ, “ಇದನ್ನೆಲ್ಲಾ ನಾವ್ ತಿಂದ್ರೆ ಮತ್ತೆ ಮಟನ್ ಯಾರೋ ತಿಂತಾರೋ” ಎಂದು ನಕ್ಕ. ಅದಕ್ಕವನ ತಾಯಿ, “ನಿಮಗೆ ಎಷ್ಟು ಬೇಕೋ ಅಷ್ಟು ತಿನ್ನಿಯಪ್ಪಾ” ಎಂದು ನಕ್ಕರು. ಆ ತಟ್ಟೆಯಲ್ಲಿದುದರ ಕಾಲುಭಾಗ ತಿಂದರೂ ನಮಗೆ ಮಟನ್ನಿಗೆ ಜಾಗವಿಲ್ಲದ ಹಾಗಾಗುತ್ತಿತ್ತು. ಹಾಗಾಗಿ ನಾನು ಅದನ್ನು ಸರಾಸಗಾಟಾಗಿ ತಳ್ಳಿಹಾಕಿದೆ. ಆದರೆ ಅವರು ಬಿಡಲೇ ಇಲ್ಲ. ಕೊನೆಗೂ ನನ್ನ ಕೈಯಲ್ಲಿ ತಟ್ಟೆ ಇಟ್ಟುಬಿಟ್ಟರು. ನಾವು ಅದನ್ನ ತಿಂದವರ ಹಾಗೆ ಮಾಡಿ ಹೇಗೋ ಸಾಗಹಾಕಿದೆವು.
ಅದಾಗಿ ಸುಮಾರು ಎರಡು ಗಂಟೆಗಳ ನಂತರ ನಮಗೆ ಊಟಕ್ಕೆ ಕರೆಬಂತು. ನಾನು ಅದಕ್ಕೆಂದೇ ಕಾದು ಕುಳಿತಿದ್ದೆ. ನಾವೆಲ್ಲ ಎದ್ದು ಕೈತೊಳೆದು ನೆಲದಮೇಲೆ ಊಟಕ್ಕೆ ಕುಳಿತೆವು. ನನಗೊಂದು ಅಗಲವಾದ ತಟ್ಟೆ ಕೊಟ್ಟರು. ಅದನ್ನು ತಟ್ಟೆ ಎನ್ನುವುದಕ್ಕಿಂತ ಅರಿವಾಣ ಎಂದರೇ ಒಳ್ಳೆಯದು, ಅಷ್ಟು ದೊಡ್ಡದಿತ್ತು. ಅದರ ಹಿಂದೆಯೇ ನಾಲ್ಕೈದು ದೊಡ್ಡ ದೊಡ್ಡ ಬಟ್ಟಲುಗಳಲ್ಲಿ ಉರಿದದ್ದು ಕರಿದದ್ದು ಎಲ್ಲಾ ತಂದಿಟ್ಟರು. ನಾನು ಅರುಣನ ಮನೆಯವರನ್ನು ನಮ್ಮ ಜೊತೆಗೆ ಊಟಕ್ಕೆ ಕುಳಿತುಕೊಳ್ಳಿ ಎಂದೇ, ಅದಕ್ಕವರು "ಇಲ್ಲ ಇಲ್ಲ, ನಿಮ್ಮದು ಆಗ್ಲಿ" ಎಂದರು. ಸರಿ, ಇನ್ನೇಕೆ ತಡ ಎಂದು ನಾವು ಮೂವರು ಶುರು ಮಾಡಿದೆವು. ನಾನು ಮೊದಲ ತುತ್ತನ್ನು ಬಾಯಿಗಿಟ್ಟಿದ್ದೇ ತಡ, ನನ್ನ ನಾಲಿಗೆಲ್ಲಿದ್ದಷ್ಟೂ ರುಚಿ ಮೊಗ್ಗುಗಳು ಹಕ್ಕಿಯಂತೆ ಹಾರಿ ಬಿರಿಯಾನಿ ಎಂಬ ಮಾಯಾಲೋಕದಲ್ಲಿ ತೇಲಾಡಿ ಬಿಟ್ಟವು. ನನ್ನ ದೇಹ ಸಟ್ಟನೇ ನೆಟ್ಟಗಾಗಿ, ಕಣ್ಣುಗಳು ತಾನಾಗಿಯೇ ಮುಚ್ಚಿಕೊಂಡು ಪರಮಾನಂದದಿಂದ "ಆಹಾ.. " ಎಂದೇ. ಅರುಣನ ತಾಯಿ ನಿಜವಾಗಿಯೂ ಬಿರಿಯಾನಿ ಮಾಡುವಲ್ಲಿ ತಜ್ಞೆಯೇ ಸರಿ. ಅವರಿಗೊಂದು ಮೆಡಲ್ ಕೊಡಲೇ ಬೇಕು. ಮುಂದಿನ ೪೫ ನಿಮಿಷಗಳು ಹೇಗೆ ಕಳೆದೆವೆಂಬುದೇ ಗೊತ್ತಾಗಲಿಲ್ಲ. ಅಂದು ನಾನೊಬ್ಬ ಜಾದೂಗಾರನಂತೆ ತಟ್ಟೆಯಲ್ಲಿದ್ದ ಪದಾರ್ಥಗಳನ್ನು ಕ್ಷಣಮಾತ್ರದಲ್ಲಿ ಮಾಯಮಾಡಿಬಿಡುತ್ತಿದ್ದೆ. ಅರುಣನ ತಾಯಿ ತಂದು ಬಡಿಸುವುದರಲ್ಲೇ ಇದ್ದರು, ಆದರೆ ನಮ್ಮ ಊಟವಂತೂ ಮುಗಿಯಲೇ ಇಲ್ಲ.
ನನ್ನ ಮೈಮೇಲೆ ಬಕಾಸುರನೇ ಬಂದಂತೆ ನಾನು ಗಾಡಿಗಟ್ಟಲೆ ತಿಂದುಬಿಟ್ಟೆ. ಪಕ್ಕದಲ್ಲಿದ್ದ ಸುನಿಲ ತಾನೇನು ಕಡಿಮೆಯಿಲ್ಲ ಎನ್ನುವವನಂತೆ ಮೂಳೆ ಕಡಿಯುತ್ತಿದ್ದ. ನಮ್ಮನ್ನು ನೋಡಿ ಅರುಣನ ಮನೆಯವರಿಗೆ ಇವು ನಿಜವಾಗಿಯೂ ಇಂಜಿನೀರುಗಳೋ ಎಂದು ಅನುಮಾನ ಬಂದಿರಲಿಕ್ಕೂ ಸಾಕು. ಅರುಣನ ತಾಯಿ ನಾಲ್ಕನೇ ಬಾರಿ "ಇನ್ನೊಂದುಸ್ವಲ್ಪ ತಗೋಳಿಪ್ಪ" ಅಂತ ಬಂದಾಗ ನಾನು "ಘಡ್ರಕ್" ಅಂತ ಜೋರಾಗಿ ತೇಗಿಬಿಟ್ಟೆ. ಇನ್ನು ಒಳಗಡೆ ಜಾಗ ಇಲ್ಲ ಅಂತ ಗೊತ್ತಾಗಿ, "ಬೇಡ ಬೇಡ ಆಂಟಿ, ಸಾಕಾಯ್ತು" ಎಂದೇ. ಅಷ್ಟೆಲ್ಲಾ ತಿಂದು ತೇಗಿದ ನಾವು ಒಮ್ಮೆಯಾದರೂ ಇನ್ನೂ ಬೇರೆಯವರು ಊಟ ಮಾಡಲಿಕ್ಕಿದೆ ಎಂದು ಯೋಚಿಸುವ ಗೊಡವೆಗೇ ಹೋಗಲಿಲ್ಲ. ಅದೃಷ್ಟಕ್ಕೆ ಇನ್ನೂ ಬೇಕಾದಷ್ಟು ಮಿಕ್ಕಿತ್ತು ಎಂದು ಅರುಣ ಹೇಳಿದಾಗ ಸಮಾಧಾನವಾಯ್ತು. ನಾವು ಮೂವರೇ ಇಡೀ ಅರ್ಧ ಕುರಿಯಷ್ಟು ಮಟನ್ನನ್ನು ತಿಂದು ತೇಗುವುದು ಎಂದರೆ ಸುಮ್ಮನೆಯೇ, ಅದಕ್ಕೆ ಸ್ವತಃ ಬಕಾಸುರನೇ ಬರಬೇಕಷ್ಟೆ. ನಾನು ಅವನನ್ನು ಉಳಿದವರಿಗೂ ಇದೆಯಾ ಅಂತ ಕೇಳಿದ್ದು ಇನ್ನು ನಮ್ಮ ಮಾನ ಉಳಿದಿದೆಯೋ ಅಥವಾ ಹೋಗಿಯಾಯ್ತೋ ಅಂತ ತಿಳುಕೊಳ್ಳೋಕೆ ಅಷ್ಟೇ. ಅಷ್ಟೆಲ್ಲಾ ತಿಂದಮೇಲೆ ನಿದ್ರೆ ಮಾಡದೇ ಇರಲು ಆಗುತ್ತದೆಯೇ? ಆದರೂ ನಾವು ತಿಂದ ತಕ್ಷಣವೇ ಮಲಗಬಾರದು ಎಂದು, ಕಾಟಾಚಾರದ ವಾಕಿಂಗ್ ಮಾಡಿ ಬಂದೆವು. ಬಂದಮೇಲೆ ನನಗೆ ಚಾಪೆಯ ಮೇಲೆ ಮಲಗಿದ್ದೊಂದೇ ನೆನಪು.
ಒಂದು ಹೊತ್ತಲ್ಲಿ ನನಗೆ ಎಚ್ಚರವಾದಾಗ ಆಗಲೇ ಕತ್ತಲಾವರಿಸಿದಂತಿತ್ತು. ನನ್ನ ಪಕ್ಕ ಸುನಿಲ ಇನ್ನೂ ಗೊರಕೆ ಹೊಡೆದುಕೊಂಡು ಬಿದ್ದಿದ್ದ. ಅವನ ಪಕ್ಕ ಅರುಣನೂ ಅದೇ ಕೆಲಸದಲ್ಲಿದ್ದ. ನಾನೊಮ್ಮೆ ನನ್ನ ವಾಚ್ ನೋಡಿಕೊಂಡೆ. ಆಗಲೇ ಗಂಟೆ 6:50 ಆಗಿತ್ತು. ನಾವು ವಾಪಸ್ಸು ಹೋಗಲು ಇದ್ದ ಒಂದೇ ಬಸ್ಸು ಆಗಲೇ ಹೋಗಿಯಾಗಿತ್ತು. ಇದೇನು ಹೀಗಾಯಿತು ಎಂದು ಅರುಣನನ್ನು ಎಬ್ಬಿಸಿದೆ, ಅವನೂ ನನ್ನಂತೆಯೇ ಟೈಮ್ ನೋಡಿ ಬೆಚ್ಚಿಬಿದ್ದ. ಇನ್ನು ಸುನಿಲನ ಸರದಿ. ಎಲ್ಲರೂ ನಾಳೆಯ ಆಫಿಸಿನ ಬಗ್ಗೆಯೇ ಯೋಚಿಸಹತ್ತಿದೆವು. ನಾವು ಮೂವರು ಒಂದೇ ಟೀಮಿನಲ್ಲಿ ಇದ್ದುದರಿಂದ, ಮೂರೂ ಜನ ಹೋಗದಿರುವುದು ಖಂಡಿತವಾಗಿಯೂ ನಮ್ಮ ಟೀಮ್ ಲೀಡರ್ನನ್ನು ಕೋಪ ಗೊಳಿಸುವ ಸಾಧ್ಯತೆ ಇತ್ತು. ಏನು ಮಾಡುವುದೆಂದು ನಾವೆಲ್ಲ ಯೋಚಿಸುತ್ತ ಕುಳಿತಿರುವಾಗ, ಅರುಣನ ತಾಯಿ ಹೊರಗಿನಿಂದ ಬಂದು "ಟೀ ಮಾಡ್ಲಪ್ಪ?” ಎಂದರು. ನಾವು ಒಕ್ಕೊರಲಿನಿಂದ ಹೂಗುಟ್ಟಿ ಮುಖ ತೊಳೆಯಲು ಎದ್ದೆವು.
ನಾನು ಟೀ ಹೀರುತ್ತಾ, ನನ್ನ ಟೀಮ್ ಲೀಡರಿಗೆ ಫೋನ್ ಮಾಡಲು ನೋಡಿದೆ. ಆದರೆ ನೆಟ್ವರ್ಕ್ ಇರಲಿಲ್ಲ. ಸರಿ ಸುನಿಲನ ಫೋನಿನಿಂದ ಮಾಡೋಣವೆಂದರೆ ಅದರಲ್ಲೂ ಇರಲಿಲ್ಲ. ನಮ್ಮ ಮೂವರದೂ ಒಂದೇ ಕಂಪನಿಯ ಸಿಮ್ ಆದ್ದರಿಂದ, ಅರುಣನ ಫೋನಿನ ಕಥೆಯು ಅದೇ ಇರಬೇಕು ಎಂದು ಸುಮ್ಮನಾದೆ. ಸರಿ, ಬೇಗನೆ ಟೀ ಮುಗಿಸಿ, ಮನೆಯ ಹೊರಗಡೆಯೆಲ್ಲಾದರೂ ನೆಟ್ವರ್ಕ್ ಸಿಗಬಹುದೇ ಎಂದು ಹೊರಬಂದೆ. ಏನು ಉಪಯೋಗವಾಗಲಿಲ್ಲ. ಕೊನೆಗೆ, ಅರುಣ ಅವನ ತಾಯಿಯ ಫೋನನ್ನೇ ತಂದು ಕೊಟ್ಟ. ಸರಿ ಎಂದು ಅದರಲ್ಲೇ ಫೋನ್ ಮಾಡಿದೆ. ನಮ್ಮ ಟೀಮ್ ಲೀಡರಿಗೆ ನಾವೇಕೆ ನಾಳೆ ಬರುವುದಿಲ್ಲ ಎಂದು ಅರ್ಥ ಮಾಡಿಸುವುದು ಸ್ವಲ್ಪ ಕಷ್ಟವಾಯ್ತು. ನನಗೆ ನಾವು ಮಲಗಿ ಬಸ್ಸು ಮಿಸ್ ಮಾಡಿಕೊಂಡಿದ್ದೇವೆ ಎಂದು ಹೇಳಲು ಇಷ್ಟವಿರಲಿಲ್ಲ. ಹಾಗಾಗಿ ಅರುಣನ ಮೆನೆಯಲ್ಲಿ ಏನೋ ಸೀರಿಯಸ್ ಎಂದು ಹೇಳಿಬಿಟ್ಟೆ. ಅರುಣ ಪಕ್ಕದಲ್ಲೇ ನಿಂತು ನನ್ನನ್ನು ನಾಯಿಯಂತೆ ಗುರುಗುಟ್ಟುತ್ತಾ ನೋಡಿದ.
ರಾತ್ರಿ ಗಂಟೆ ಎಂಟಾದರೂ ಕರೆಂಟ್ ಬರಲೇ ಇಲ್ಲ. ನಾವು ಏನೂ ಕೆಲಸವಿಲ್ಲದೆ ಒಂದೆರೆಡು ಗಂಟೆ ಮತ್ತೊಮ್ಮೆ ತಿರುಗಾಡಿಕೊಂಡು ಬಂದೆವು. ಅರುಣ ತನ್ನ ತೋಟದ ಬಗ್ಗೆ ನನಗೆ ಬಹಳ ಹೇಳಿದ್ದ. ನಾವು ಬೆಂಗಳೂರಿನಿಂದ ಹೊರಡುವಾಗ ಅದನ್ನೆಲ್ಲಾ ನೋಡಿಕೊಂಡು ಬರುವ ಪ್ಲಾನ್ ಇರಲೇಇಲ್ಲ. ಆದರೆ ಈಗ ನಾವು ಬಸ್ಸು ಮಿಸ್ ಮಾಡಿದ್ದು, ಅದನ್ನೂ ನೋಡಿಕೊಂಡು ಹೋಗಲಿಕ್ಕೊಂದು ಅವಕಾಶ ಮಾಡಿಕೊಟ್ಟಿತ್ತು. ಆದರೆ ನಮಗೆ ಕೆಲವು ಬೇರೆಯ ವಿಷಯಗಳು ತಲೆಕೆಡಿಸಿದ್ದುವು. ಮೊದಲನೆಯದಾಗಿ, ಅರುಣನ ಮನೆಯಲ್ಲಿ ಬಾತ್ರೂಮ್ ಇರಲಿಲ್ಲ. ನಾವು ಬೆಳಗಿನಿಂದ ಸುಸು ಮಾಡಲು ಸಹಾ ಪ್ರತಿ ಬಾರಿ ಮನೆಯ ಹಿಂದಕ್ಕೆ ಹೋಗಬೇಕಿತ್ತು. ನಾವೋ, ಮಧ್ಯರಾತ್ರಿಯಲ್ಲೂ ಎದ್ದು ಹೋಗುವ ಅಭ್ಯಾಸ ಇದ್ದವರು. ಆಗೇನು ಮಾಡುವುದು! ಮತ್ತೆ, ಸಂಜೆಯಾಗುವವರೆಗೆ ಸೊಳ್ಳೆಗಳ ಕಾಟ ಶುರುವಾಗುತ್ತದೆಂದು ಎಲ್ಲರಿಗೂ ಗೊತ್ತು. ಮೊದಲೇ ಕರೆಂಟ್ ಬೇರೆ ಇಲ್ಲ. ಅವತ್ತು ಮದ್ಯಾನ್ಹ ನಾವು ಮಟನ್ ಅನ್ನು ಕಚ್ಚಿ ಕಚ್ಚಿ ತಿಂದಂತೆ ಅಂದು ರಾತ್ರಿ ನಮ್ಮನ್ನು ಸೊಳ್ಳೆಗಳು ಕಚ್ಚಿ ಕಚ್ಚಿ ತಿನ್ನುವುದು ಗ್ಯಾರಂಟಿ ಎಂದುಕೊಂಡೆ.
ಅಂದು ರಾತ್ರಿ ನಾವಂದುಕೊಂಡದ್ದಕ್ಕಿಂತಲೂ ಹೆಚ್ಚಿಗೆಯೇ ಕಷ್ಟವಾಯ್ತು. ಒಂದೆಡೆ ಸೊಳ್ಳೆಗಳು ನಮ್ಮ ರಕ್ತವನ್ನು ಗಟಗಟನೆ ರಕ್ತಪಿಪಾಸುಗಳಂತೆ ಕುಡಿಯುತ್ತಿದ್ದರೆ, ಇನ್ನೊಂದು ಕಡೆ ಸಣ್ಣ ಸಣ್ಣ ಹುಳುಗಳು ಎಲ್ಲೆಂದರಲ್ಲಿಂದ ಹಾರಿಬಂದು ನಮ್ಮ ಮೇಲೆಯೇ ಕುಳಿತುಬಿಡುತ್ತಿದ್ದವು. ಮೊದಲೇ ಕರೆಂಟ್ ಬೇರೆ ಇಲ್ಲದ್ದರಿಂದ, ಅದೇನು ಚಿಕ್ಕ ಹುಳವೋ, ಇಲ್ಲ ದೊಡ್ಡದೇನಾದರೂ ಹಾರಿಬಂತೋ ಗೊತ್ತೇ ಆಗುತ್ತಿರಲಿಲ್ಲ. ನಮ್ಮ ಕಷ್ಟ ನೋಡಲಿಕ್ಕಾಗದೆ ಅರುಣನ ತಾಯಿ ಒಂದು ಸೀಮೆಎಣ್ಣೆ ಬುಡ್ಡಿ ಹಚ್ಚಿ ಇಟ್ಟರು. ಅದರಿಂದೇನೂ ಹೆಚ್ಚಿಗೆ ಉಪಯೋಗವಾಗಲಿಲ್ಲ. ನಾನು ಯಾವಾಗ ಮಲಗಿದೇನೋ ಗೊತ್ತಿಲ್ಲ, ಬೆಳಗ್ಗೆ ಎದ್ದಾಗ ಆಗಲೇ ಸೂರ್ಯ ನೆತ್ತಿಯ ಮೇಲೆ ಇದ್ದಂತಿತ್ತು. ಮಗದೊಮ್ಮೆ ಮಲಗಿದ್ದಲ್ಲಿಗೇ ಟೀ ಬಂತು. ಅದನ್ನು ಕುಡಿದು ರೆಡಿ ಆಗಲಿಕ್ಕೆ ಹೊರಟೆ.
ಅರುಣನ ಮನೆಯಲ್ಲಿ ಬಾತ್ರೂಮ್ ಇಲ್ಲದ್ದು ದೊಡ್ಡ ತಲೆನೋವೇ ಆಯಿತು. ಕೊನೆಗೆ ದಾರಿಕಾಣದೆ, ನಾವೂ ಕೂಡ ಎಲ್ಲರಂತೆ ಒಂದೊಂದು ಪ್ಲಾಸ್ಟಿಕ್ ಚಂಬುಗಳನ್ನು ಹಿಡಿದು ಊರಿಂದ ಹೊರಗೆ ನಡೆದೆವು. ನಾವು ನಿನ್ನೆಯೇ ವಾಪಾಸ್ ಹೋಗುವ ಇರಾದೆಯಿಂದ ಬಂದದ್ದರಿಂದ, ನಮ್ಮಲ್ಲಿ ಹಾಕಿಕೊಳ್ಳಲು ಬೇರೆ ಬಟ್ಟೆಗಳೇನು ಇರಲಿಲ್ಲ. ಹಾಗಾಗಿ ಜೀನ್ಸ್ ಪ್ಯಾಂಟನ್ನೇ ಹಾಕಿಕೊಂಡು ಹೊರಟೆವು. ನಾವು ಆ ರೀತಿ ಜೀನ್ಸ್ ಪ್ಯಾಂಟ್ ಹಾಕಿಕೊಂಡು, ಕೈಯಲ್ಲಿ ಚಂಬು ಹಿಡಿದುಕೊಂಡು ಹೋಗುವುದನ್ನು ನೋಡಿದ ಅನೇಕರು, ಒಳಗೊಳಗೇ ನಕ್ಕರು. ಜೀನ್ಸ್ ಪ್ಯಾಂಟು ಯಾಕೆ ಹಳ್ಳಿಗಳಲ್ಲಿ ಅಷ್ಟೊಂದು ರೂಢಿಯಲ್ಲಿಲ್ಲ ಎಂದು ನನಗೆ ವಾಪಸ್ಸು ಬರುವಷ್ಟರಲ್ಲಿ ಅರ್ಥವಾಯ್ತು. ವಾಪಸ್ಸು ಬಂದವರೇ ಮೊದಲು ಮಾಡಿದ ಕೆಲಸವೆಂದರೆ ಅರುಣನ ಹಳೆ ಪಂಚೆಗಳನ್ನೆಲ್ಲಾ ಅಗೆದು ತೆಗೆದು ಸುತ್ತಿಕೊಂಡದ್ದು. ನನಗೂ ಮತ್ತು ಸುನಿಲನಿಗೂ ಪಂಚೆ ತುಂಬಾ ಹೊಸದು. ಅರುಣ ನಮಗೆ ಅದನ್ನು ಬಹಳವಾಗಿ ಕಲಿಸಲೆತ್ನಿಸಿದ. ಆದರೆ ನಮಗೆ ಅವನು ಹೇಳಿದ ರೀತಿಯಲ್ಲಿ ಪಂಚೆ ಉಟ್ಟುಕೊಂಡರೆ ಎಲ್ಲಾದರೂ ಉದುರೀತು ಎಂದು ಕೇಳಲಿಲ್ಲ. ಇಬ್ಬರು ಪಂಚೆಯನ್ನು ಸೊಂಟದ ಸುತ್ತ ಗರಗರ ನಾಲ್ಕು ಸುತ್ತು ಸುತ್ತಿ ಕಗ್ಗಂಟಾಕಿಬಿಟ್ಟೆವು. ಇನ್ನದನ್ನು ಬಿಚ್ಚಲಿಕ್ಕೆ ಆ ಬ್ರಹ್ಮನೇ ಬರಬೇಕಿತ್ತು.
ಬೇಗಬೇಗನೆ ತಿಂಡಿ ತಿಂದು, ನಾವೆಲ್ಲ ಅರುಣನ ತೋಟ ನೋಡಲು ಅಣಿಯಾದೆವು. ಅದೇನು ಹೆಚ್ಚು ದೂರವಿರಲಿಲ್ಲ. ಮನೆಯಿಂದ 2 ಕಿಲೋಮೀಟರುಗಳು ಅಷ್ಟೇ. ನಮಗೆ ಅದೆಲ್ಲ ಚಿಲ್ಲರೆ ದೂರ. ಅದರ ಎರೆಡರಷ್ಟನ್ನು ನಾವು ದಿನ ಬೆಂಗಳೂರಿನ ಬೀದಿಗಳಲ್ಲಿ ಸುತ್ತುತ್ತೇವೆ. ಅಷ್ಟರಲ್ಲಿ ಅರುಣನ ತಂದೆ ಬಂದು ಬರುವಾಗ ತೋಟದಮನೆಯಲ್ಲಿದ್ದ ಯಾವುದೊ ಚೀಲಗಳನ್ನು ಹಾಕಿಕೊಂಡು ಬರುವಂತೆ ಸೂಚಿಸಿದರು. ಹಾಗಾಗಿ ಅರುಣ ಎತ್ತಿನ ಗಾಡಿ ರೆಡಿ ಮಾಡಿದ. ನಾವು ಮೂರು ಜನ ಎತ್ತಿನಗಾಡಿಯಲ್ಲಿ ಕುಳಿತು, ಮಹಾರಾಜರಂತೆ ಆ ಊರಿನ ಬೀದಿಗಳಲ್ಲಿ ಹೊರಟೆವು. ಊರಿನಿಂದಿನ್ನೂ 1 ಕಿಲೋಮೀಟರು ಬಂದಿರಲಿಲ್ಲ, ಎತ್ತಿನಗಾಡಿ ಗಮ್ಮತ್ತೆಲ್ಲ ಹೋಗಿ, ಆ ಬಿಸಿಲಿಗೆ ಮೈಯೆಲ್ಲಾ ಸುಡಲಾರಂಭಿಸಿತು. ಮತ್ತೊಂದು ಕಷ್ಟ ಎದುರಾದುದೆಂದರೆ ರಸ್ತೆಯದು. ಅಲ್ಲಿ ರಸ್ತೆಯೇ ಇರಲಿಲ್ಲ. ಅದರ ಜಾಗದಲ್ಲಿ ದೆವ್ವದಂಥ ಗುಂಡಿಗಳಿದ್ದವು. ಪ್ರತಿ ಗುಂಡಿಯಲ್ಲಿ ಗಾಡಿಯ ಚಕ್ರ ಹೋದಾಗಲೂ, ಜೋರಾಗಿ ಎತ್ತಿಹಾಕಿದಂತೆ ನೆಗೆದು ಬಿಳುತ್ತಿದ್ದೆವು. ತೋಟ ಬಂದ ತಕ್ಷಣವೇ ನಾನು ಗಾಡಿಯಿಂದ ನೆಗೆದು, ಒಮ್ಮೆ ಜೋರಾಗಿ ಮೈಮುರಿದು ನನ್ನ ಯಾವದಾದರೂ ಬಾಡಿಪಾರ್ಟು ಬಿದ್ದೆನಾದರೂ ಹೊಯ್ತೆ ಎಂದು ನೋಡಿಕೊಂಡೆ. ಸದ್ಯ, ಎಲ್ಲ ಅಲ್ಲಲ್ಲಿಯೇ ಇತ್ತು. ನಮ್ಮ ಕಥೆ ನೋಡಿ ಅರುಣ ಇಬ್ಬರಿಗೂ ಎರೆಡೆರೆಡು ಎಳನೀರು ಕುಡಿಸಿದ. ಅದನ್ನು ಕುಡಿದ ಮೇಲೆ ಒಂದಿಷ್ಟು ಜೀವ ಬಂತು.
ಸ್ವಲ್ಪ ತೋಟದಲ್ಲೆಲ್ಲಾ ಓಡಾಡಿ ಒಂದು ಮೂಲೆಯಲ್ಲಿದ್ದ ಹಲಸಿನ ಮರದ ಕೆಳಗೆ ಹಾಗೇ ಮೈಚೆಲ್ಲಿದೆ. ಮರದಲ್ಲಿ ಘಟಾನುಘಟಿ ಗಾತ್ರದಲ್ಲಿದ್ದ ಹಲಸಿನಹಣ್ಣುಗಳು ನನ್ನನ್ನು ಕೆಕ್ಕರಿಸಿ ನೋಡಿದವು. ಹಲಸಿನ ಹಣ್ಣು ತಿಂದು ತುಂಬಾ ದಿನವಾಯ್ತಲ್ಲವೇ ಎಂದುಕೊಂಡೆ. ತೋಟದಮನೆಯಲ್ಲಿ ಏನೋ ಮಾಡುತ್ತಿದ್ದ ಅರುಣನನ್ನು ಕೂಗಿ ಕರೆದು ನನ್ನ ಇಂಗಿತ ಹೇಳಿಕೊಂಡೆ. ಅವನು ಅದೇನು ಮಹಾ ಎನ್ನುವಂತೆ ಸರಸರನೆ ಮರಹತ್ತಿ ಒಂದು ಹಣ್ಣು ಕಿತ್ತು ಕೆಳಗೆ ಎಸೆದ. ಸರಿ ಅದನ್ನು ಬಿಡಿಸೋಣವೆಂದರೆ ನಮ್ಮಲ್ಲಿ ಚಾಕುವಾಗಲಿ ಇನ್ನೊಂದಾಗಲಿ ಇರಲಿಲ್ಲ. ಅರುಣ ಆ ಹಣ್ಣನ್ನು ಒಂದು ದೊಡ್ಡ ಕಲ್ಲಿಗೆ ಜಜ್ಜಿ ಸೀಳುಬಿಡುವಂತೆ ಮಾಡಿದ. ಆದರೆ ಅದು ಪೂರ್ತಿ ಹೋಳಾಗಲಿಲ್ಲ. ಅದನ್ನು ಅರುಣ ಹೇಗೆಯೋ ಅರ್ಧಮಾಡುತ್ತೇನೆ ಎಂದು ನನ್ನನ್ನು ನೆಲದಮೇಲೆ ಒಂದು ಕಡೆ ಕುಳಿತುಕೊಳ್ಳಲು ಹೇಳಿ, ನನ್ನ ವಿರುದ್ಧ ದಿಕ್ಕಿಗೆ ಅವನು ಕುಳಿತ. ಮದ್ಯದಲ್ಲಿ ಹಲಸಿನಹಣ್ಣನ್ನು ಅದು ಸೀಳಿರುವ ಜಾಗದಲ್ಲಿ ಇಬ್ಬರೂ ಹಿಡಿದು ಎಳೆಯಬೇಕೆಂದ.
ಸರಿ, ನಾನು ಅವನ ಮಾತನ್ನು ಪಾಲಿಸಿ ಎಳೆಯಲು ಶುರು ಮಾಡಿದೆ. ನಾನು ಮತ್ತು ಅರುಣನು ಅನಾಮತ್ತು ಹತ್ತು ನಿಮಿಷ ಹಾಗೆ ಕುಳಿತು ನಮ್ಮ ಶಕ್ತಿಯನ್ನೆಲ್ಲಾ ಬಿಟ್ಟು ಎಳೆದರೂ ಹಲಸಿನ ಹಣ್ಣು ಜಗ್ಗಲಿಲ್ಲ. ಮತ್ತೆ ಸುನೀಲನೂ ನನ್ನ ಜಾಗದಲ್ಲಿ ಕುಳಿತು ಅದನ್ನೇ ಮಾಡಿದ. ಹಲಸಿನ ಹಣ್ಣು ಇನ್ನು ಹಾಗೆ ಇತ್ತು. ನನಗೆ ತಡೆಯಲಾಗದೆ, ಪಕ್ಕದಲ್ಲಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿ ತಂದು ಅದರ ಮೇಲೆ ಹಾಕಿಬಿಟ್ಟೆ. ಅಷ್ಟೇ, ಅದು ಒಡೆದುದಷ್ಟೇ ಅಲ್ಲದೆ, ಅದರ ಒಂದು ಭಾಗ ಜಜ್ಜಿ ಚಟ್ನಿಯಾಯ್ತು. ನಂತರ ಎಲ್ಲರೂ ಅದನ್ನು ತಿನ್ನಲಿಕ್ಕೆ ಶುರು ಮಾಡಿದೆವು. ನಾನು ಮೊದಲೇ ಪಂಚೆ ಹಾಕಿದ್ದರಿಂದ, ಮತ್ತು ಅದನ್ನು ಬ್ರಹ್ಮಗಂಟು ಹಾಕಿ ಕಟ್ಟಿದ್ದರಿಂದ, ಕುಳಿತುಕೊಂಡು ತಿನ್ನಲಿಕ್ಕೆ ಸ್ವಲ್ಪ ಕಷ್ಟವಾಗುತ್ತಿತ್ತು. ಹಾಗಾಗಿ ಇಡೀ ಹಲಸಿನಹಣ್ಣನ್ನು ನನ್ನ ಪಂಚೆಯ ಮೇಲೆಯೇ ಇಟ್ಟುಕೊಂಡುಬಿಟ್ಟೆ. ಮೊದಲೇ ಹಳೆಯ ಪಂಚೆ, ಅದನ್ನು ಹೇಗಿದ್ದರೂ ಅರುಣ ಉಡುತ್ತಿರಲಿಲ್ಲ. ಹಾಗಾಗಿ ಅವನು ಏನೂ ಹೇಳದೆ ತಿನ್ನುವುದರಲ್ಲೇ ತಲ್ಲೀನನಾದ. ಮುಂದಿನ ಒಂದೇ ಗಂಟೆ ನಾವು ಆ ಹಣ್ಣನ್ನು ಕಿತ್ತೂ ಕಿತ್ತೂ ತಿಂದೆವು. ಅದು ಮುಗಿದಮೆಲೇ ನನಗೆ ಅರಿವಾದದ್ದು, ಅದರ ರಸವೆಲ್ಲ ನನ್ನ ಪಂಚೆಯ ಮೇಲೆಯೇ ಸೋರಿಬಿಟ್ಟಿದೆ ಎಂದು. ಇನ್ನು ಆ ಪಂಚೆಯನ್ನು ಬಿಸಾಕುವುದೊಂದೇ ಬಾಕಿ. ಆದರೆ ನಾನು ನನ್ನ ಚಡ್ಡಿಯಲ್ಲಿ ವಾಪಸು ಹೋಗಲಾದೀತೇ? ಹಾಗಾಗಿ ಅದನ್ನು ಮನೆಗೆ ಹೋಗುವವರೆಗೂ ಉಟ್ಟುಕೊಳ್ಳಲೇ ಬೇಕಿತ್ತು.
ನಂತರ ನಮ್ಮ ಕೆಲಸಗಳನ್ನೆಲ್ಲ ಮುಗಿಸಿ ಮನೆಯ ಕಡೆಗೆ ಹೊರಟೆವು. ನನ್ನ ಪಂಚೆಯಿಂದ ಹಲಸಿನಹಣ್ಣಿನ ಸುವಾಸನೆ ಜೋರಾಗಿಯೇ ಬರಲಾರಂಭಿಸಿತ್ತು. ನನ್ನನ್ನು ನೋಡಿ ಸುನಿಲ "ಏನೋ ಇದು, ಘಮ್ ಅಂತೀಯ" ಎಂದ. ಮತ್ತೊಮ್ಮೆ ಉರಿಬಿಸಿಲಿನ ನಡುವೆಯೇ ನಾವು ಗಾಡಿ ಹೊಡೆದುಕೊಂಡು ಮನೆ ಕಡೆಗೆ ಮಂದಗತಿಯಲ್ಲಿ ಹೊರಟೆವು. ಎತ್ತುಗಳಿಗೂ ಬಿಸಿಲಿನ ಬೇಗೆ ತಾಕಿರಬೇಕು, ಅವೂ ಇಷ್ಟವಿಲ್ಲದಂತೆ ಹೆಜ್ಜೆ ಹಾಕುತ್ತಿದ್ದವು. ನಾವು ಬರುವ ದಾರಿಯಲ್ಲೆಲ್ಲ ನನ್ನ ಪಂಚೆಯಿಂದ ಹಲಸಿನಹಣ್ಣಿನ ಸುವಾಸನೆ ಹರಡಿತ್ತು. ಅದರ ಕರಡು ಎಷ್ಟಿತ್ತೆಂದರೆ, ದೂರದಲ್ಲೆಲ್ಲೋ ಅಲೆಯುತ್ತಿದ್ದ ಕರಡಿಯ ಮೂಗಿಗೂ ಹೊಡಿತಿತ್ತು. ಅದು ಹಲಸಿನ ಹಣ್ಣಿನ ವಾಸನೆ ಹಿಡಿದು ನಮ್ಮ ಗಾಡಿಯ ಕಡೆಗೆ ಬರುತ್ತಿರುವುದು ನಮಗೆ ಗೊತ್ತೇ ಆಗಲಿಲ್ಲ. ಅದು 'ಗ್ವಾಯ್ ಗ್ವಾಯ್' ಎಂದು ನಮ್ಮ ಕಡೆಗೆ ಬರುತ್ತಿರುವುದನ್ನು ನಾನೆ ಮೊದಲು ನೋಡಿದ್ದು. ಅದೃಷ್ಟಕ್ಕೆ ಅದು ನಮ್ಮ ಹಿಂದಿನಿಂದ ಬರುತ್ತಿತ್ತು. ಹಾಗಾಗಿ ಎತ್ತುಗಳು ಇನ್ನೂ ಅದನ್ನು ನೋಡಿರಲಿಲ್ಲ. ಅರುಣ ಅದನ್ನು ನೋಡಿದವನೇ, ಎತ್ತುಗಳಿಗೆ 'ಹುರ್ರಾ ಹುರ್ರಾ' ಎಂದು ಓಡಲು ಹುರಿದುಂಬಿಸಿದ. ಪಾಪ, ಮೊದಲೇ ಬಿಸಿಲಿನಲ್ಲಿ ದಣಿದಿದ್ದ ಅವಕ್ಕೆ ಅರ್ಥವಾಗಲಿಲ್ಲ ಎಂದು ಕಾಣುತ್ತೆ. ಅರುಣ ಎತ್ತುಗಳನ್ನು ಮತ್ತೆ ಮತ್ತೆ ಓಡಲು ಹುರಿದುಂಬಿಸುತ್ತಲೇ ಇರುವಾಗ ಕರಡಿ ನಮಗೆ ಹತ್ತಿರಾಗುತ್ತಿತ್ತು. ನಾನು ಟೆನ್ಶನ್ ತಾಳಲಾಗದೆ ಎದ್ದುನಿಂತೆ. ಅದು ಹತ್ತಿರ ಬರುವವರೆಗೂ ಅರುಣ ಎತ್ತುಗಳನ್ನು ಹುರಿದುಂಬಿಸುತ್ತಲೇ ಇದ್ದ. ಯಾವಾಗ ಎತ್ತುಗಳು ಇವನ ಮಾತನ್ನು ಕೇಳಲಿಲ್ಲವೋ, ಇದ್ದಕ್ಕಿದ್ದಂತೆ ಗಡಿಯಿಂದ ನೆಗೆದು "ಒಡ್ರೋ ಒಡ್ರೋ.." ಎಂದು ನಮ್ಮನ್ನು ಬಿಟ್ಟು ಓಟಕಿತ್ತ.
ಹಳ್ಳಿಯವನಾದ ಅರುಣನೇ ನಮಗೆ ಕೈಕೊಟ್ಟಮೇಲೆ ನಮ್ಮ ಪಾಲೇನು?? ನಮಗಂತೂ ಗಾಡಿಯಿಂದ ಇಳಿಯುವುದೇ ದೊಡ್ಡ ತಪ್ಪೆಂದು ಅಲ್ಲಿಯೇ ನಿಂತುಬಿಟ್ಟೆವು. ಅರುಣ ಮಾತ್ರ ನಿಲ್ಲದೆ ಕಣ್ಣಿಂದ ಮರೆಯಾಗುವವರೆಗೂ ಓಡುತ್ತಲೇ ಇದ್ದ. ಇತ್ತ ಕರಡಿ ಗಾಡಿಯ ಸಮೀಪ ಬಂದಾಗಿತ್ತು. ಎತ್ತುಗಳು ಅದರ ಇರುವನ್ನು ತಿಳಿಯುತ್ತಲೇ, ನೊಗ ಕಿತ್ತವಂತೆ ಎಲ್ಲೆಂದರಲ್ಲಿ ಗಾಡಿಯನ್ನು ಎಳೆದಾಡಿದವು. ಗಾಡಿಯ ಮೇಲೆ ನಾನೂ ಸುನೀಲನೂ ನಮ್ಮ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದೆವು. ಅಷ್ಟರಲ್ಲಿ ಎತ್ತುಗಳಿಗೆ ತಮ್ಮ ತಪ್ಪಿನ ಅರಿವಾಗಿರಬೇಕು, ಅವು ತಮ್ಮ ಶಕ್ತಿಯನ್ನೆಲ್ಲಾ ಕೂಡಿಸಿ ಒಂದೇ ದಿಕ್ಕಿನಲ್ಲಿ ಓಟಕಿತ್ತವು. ಗಾಡಿ ಒಮ್ಮೆಲೇ ಮುಂದಕ್ಕೆ ಹೋದದ್ದರಿಂದ ಸುನಿಲನ ಹಿಡಿತ ತಪ್ಪಿ ಅವನು ಉರುಳಿ ಕೆಳಗೆ ಬಿಟ್ಟುಬಿಟ್ಟ. ಕರಡಿ ಅವನಿಂದ ಎರೆಡೇ ಗೇಣು ದೂರ ಇತ್ತು. ಅವನು ಬಿದ್ದ ತಕ್ಷಣವೇ, ಅವನ ಹತ್ತಿರ ಬಂದು ಅವನನ್ನು ಮೂಸಹತ್ತಿತ್ತು. ಸುನಿಲನಿಗೆ ಹೇತುಕೊಳ್ಳುವಷ್ಟು ಹೆದರಿಕೆಯಾಗಿರಬೇಕು, ಬಿದ್ದವನು ಎದ್ದೇಳಲೂ ಇಲ್ಲ. ಅಲ್ಲಿಯೇ, ಬಂಡಿ ಹುಳದಂತೆ ಸುರುಳಿ ಸುತ್ತಿ ಮಲಗಿಬಿಟ್ಟ. ಕರಡಿ ಅವನನ್ನು ಸುತ್ತಿ ಸುತ್ತಿ ಮೂಸುತ್ತಿತ್ತು. ಇತ್ತ ಗಾಡಿ ಅವನಿಂದ ದೂರಾಗುತ್ತಿದ್ದರೆ, ನನಗೆ ಕರಡಿ ಅವನನ್ನು ಹಿಡಿದೇ ಬಿಟ್ಟಿತು ಎನ್ನಿಸಿತು. “ಅಯ್ಯೋ ಬಿರಿಯಾನಿ ತಿನ್ನೋಕೆ ಬಂದಿದ್ದವನು ಕರಡಿ ಕಯ್ಯಿಗೆ ಸಿಕ್ಕಿ ಸತ್ತೇಹೋಗ್ತಾನಲ್ಲ” ಅಂತ ಅವನನ್ನು ಕಾಪಾಡಲು ಗಾಡಿಯಿಂದ ನೆಗೆದುಬಿಟ್ಟೆ. ಓಡುತ್ತಿರುವ ಗಾಡಿಯಿಂದ ನೆಗೆದಿದ್ದರಿಂದ ಮುಗ್ಗರಿಸಿದಂತೆ ಬಿದ್ದು ಕೈಕಾಲೆಲ್ಲ ತರಚಿಹೋದವು. ಆದರೂ ಧೃತಿಗೆಡದೆ ಸುನಿಲನ ಕಡೆಗೆ ಓಡಹತ್ತಿದೆ.
ಆದರೆ ನಾನಂದುಕೊಂಡಂತೆ ಕರಡಿಯೇನು ಅವನನ್ನು ಹಿಡಿದಿರಲಿಲ್ಲ. ಅವನನ್ನು ಮೂಸಿ ನೋಡಿತ್ತಷ್ಟೆ. ನಾನು ಗಾಡಿಯಿಂದ ನೆಗೆದಾಕ್ಷಣ ಅದು ತಲೆಯೆತ್ತಿ ನನ್ನನ್ನು ನೋಡಿತು. ನಾನು ಸಿನಿಮಾ ಹೀರೊ ತರ ಅವನನ್ನು ರಕ್ಷಿಸಲು ಓಡುತ್ತಿದ್ದೆ. ತಕ್ಷಣವೇ ಕರಡಿ ಸುನೀಲನನ್ನು ಬಿಟ್ಟು ನನ್ನ ಕಡೆಗೇ ಓಡಿಬರಲಾರಂಭಿಸಿತು. ನನ್ನ ಕಾಲುಗಳು ಕರಡಿಯ ಪ್ರತಿಕ್ರಿಯೆ ನೋಡಿ ಚಕ್ಕನೆ ಬ್ರೇಕ್ ಹಾಕಿಕೊಂಡವು. ನಾನು ಹಿಂದೆ ತಿರುಗಿ ಈಗ ಗಾಡಿಯ ಕಡೆ ಓಡಲಾರಂಭಿಸಿದೆ. ಆದರೆ ಪಂಚೆ ಹಾಕಿಕೊಂಡು ಓಡುವುದು ನನಗೆ ಅಸಾಧ್ಯದ ಕೆಲಸವಾಯ್ತು. ಅದು ಕಾಲುಕಾಲಿಗೆ ಅಡ್ಡಬಂದು ನನ್ನ ವೇಗಕ್ಕೆ ಕಡಿವಾಣ ಹಾಕುತ್ತಿತ್ತು. ನಾನು ಹಿಂದೂ ಮುಂದು ನೋಡದೆ ನನ್ನ ಪಂಚೆಯನ್ನು ಎತ್ತಿ ಎರೆಡೂ ಕೈಯಲ್ಲಿಡಿದು ಓಡಿದೆ. ಅಷ್ಟರಲ್ಲಿ ಕರಡಿ ನನ್ನ ಕಾಲಿಗೆ ಕಯ್ಯಿ ಅಡ್ಡಮಾಡಿ ಬೀಳಿಸಿಬಿಟ್ಟಿತು. ಮೊದಲೇ ಅಷ್ಟು ಜೋರಾಗಿ ಓಡುತ್ತಿದ್ದ ನಾನು, ಬಿದ್ದ ರಭಸಕ್ಕೆ ಒಂದು ಕ್ಷಣ ಕಣ್ಣು ಮಂಜಾಯ್ತು. ಕರಡಿ ನನ್ನನು ಸುತ್ತುವರಿದು ನನ್ನ ಪಂಚೆಗೆ ಬಾಯಿಹಾಕಿ ಏನೋ ನೆಕ್ಕಹತ್ತಿತು. ಆವಾಗಲೇ ನನಗೆ ಗೊತ್ತಾದದ್ದು ಇದು ಹಲಸಿನಹಳ್ಳಿನ ವಾಸನೆ ಹಿಡಿದು ಬಂದಿದೆ ಅಂತ. ಅದು ಪಂಚೆಯಲ್ಲಿ ಹಲಸಿನ ಹಣ್ಣು ಕಾಣದೆ ನನ್ನ ಕಾಲುಗಳನ್ನೆಲ್ಲ ಪರಚಾಡಿತು. ಅದರ ಉದ್ದನೆಯ ಉಗುರುಗಳು ನನ್ನ ಕಾಲಿನ ಮಾಂಸಖಂಡವನ್ನೆಲ್ಲ ಕಿತ್ತಂತಾಗಿ ನಾನು ಜೋರಾಗಿ ಕತ್ತೆಕಿರುಬನಂತೆ ಕಿರುಚಲು ಶುರುಮಾಡಿದೆ. ನಾನು ಕಿರುಚಿದ ಶಬ್ದಕ್ಕೆ ಕರಡಿಯೂ ನೆಟ್ಟುಬಿದ್ದು ಎರೆಡು ಹೆಜ್ಜೆ ಹಿಂದಕ್ಕೆ ಹೋಯ್ತು.
ಅದೇ ನನ್ನ ಜೀವನದ ಕೊನೆಯ ಅವಕಾಶ ಎನ್ನುವಂತೆ ನಾನು ಅಲ್ಲಿಂದ ಎದ್ದು ಓಡಬೇಕು ಎನ್ನುವಷ್ಟರಲ್ಲಿ ಕರಡಿ ಮತ್ತೆ ನನ್ನ ಪಂಚೆ ಹಿಡಿದುಬಿಟ್ಟಿತ್ತು. ನಾನು ಎಷ್ಟೇ ಎಳೆದರೂ ಅದು ಪಂಚೆ ಬಿಡುತ್ತಿರಲಿಲ್ಲ, ಹಾಗು ಅದರ ಎಳೆತದ ರಭಸಕ್ಕೆ ನಾನು ಮುಂದೆ ಮುಂದೆ ಹೋಗುತ್ತಿದ್ದೆ. ಅದಕ್ಕೆ ಪಂಚೆ ತಾನೇ ಬೇಕು ಎಂದು ಪಂಚೆ ಬಿಚ್ಚಲು ನೋಡಿದೆ, ಆದರೆ ಪಂಚೆ ಎಲ್ಲೂ ಉದುರಬಾರದೆಂದು ಹಾಕಿದ್ದ ಕಗ್ಗಂಟು ನನಗೆ ಉರುಳಾಯಿತು. ಇತ್ತ ಕರಡಿ ಪಂಚೆಯನ್ನು ಎಳೆಯುತ್ತ ಎಳೆಯುತ್ತ ಪಂಚೆ ಕೆಲವು ಕಡೆ ಹರಿದೇ ಹೋಯ್ತು. ಸರಿ, ನಾನು ಕರಡಿಯ ಜೊತೆ ಸೇರಿ, ಆದಷ್ಟು ಬೇಗ ಪಂಚೆಯನ್ನು ಹರಿದುಹಾಕಲು ಶುರುಮಾಡಿದೆ. ನಾನೂ ಮತ್ತು ಕರಡಿಯೂ, ಹಗ್ಗ ಜಗ್ಗಾಟದ ಹಾಗೆ ಪಂಚೆ ಜಗ್ಗಾಟ ಆಡುತ್ತಿದ್ದುದು ಯಾರಾದರೂ ನೋಡಿದ್ದರೆ ಏನನ್ನುತ್ತಿದ್ದರೋ. ಬೆಕ್ಕಿಗೆ ಆಟವಾದರೆ ಇಲಿಗೆ ಪ್ರಾಣಸಂಕಟವಂತೆ. ನನ್ನ ಪರಿಸ್ಥಿತಿಯೂ ಹಾಗೆಯೆ ಆಗಿತ್ತು. ಕೊನೆಗೊಮ್ಮೆ, ನಮ್ಮಿಬ್ಬರ ಜಗ್ಗಾಟಕ್ಕೆ ಮಣಿದ ಪಂಚೆಯು, ಪೂರ್ತಿಯಾಗಿ ಕಿತ್ತೇಹೋಯಿತು. ಅದು ಕಿತ್ತುಹೋದ ರೀತಿಗೆ, ಅದನ್ನು ಎರಡೂಕಡೆಯಿಂದ ಹಿಡಿದು ಎಳೆಯುತ್ತಿದ್ದ ನಾನೂ ಮತ್ತು ಕರಡಿಯೂ ಧೊಪ್ಪನೆ ಹಿಂದಕ್ಕೆ ಬಿದ್ದೆವು. ಪ್ರಾಣ ಉಳಿಯಿತು ಎಂದು ನಾನು ಎದ್ದವನೇ ಓಟಕಿತ್ತೆ. ಪಂಚೆ ಸಿಕ್ಕ ತಕ್ಷಣ ಕರಡಿಯೂ ಮತ್ತೊಂದು ದಿಕ್ಕಿಗೆ ಓಟಕಿತ್ತಿತು. ನಾನು ಹಿಂದಕ್ಕೆ ತಿರುಗಿ ನೋಡಿದಾಗ ಕರಡಿ ಬಹಳ ದೂರ ಓಡಿಹೋಗಿತ್ತು. ಅದು ಮತ್ತೆ ವಾಪಾಸ್ ಬರುವುದಿಲ್ಲವೆಂದು ಖಚಿತಪಡಿಸಿಕೊಳ್ಳಲು ಬಹಳ ಹೊತ್ತು ಅದು ಹೋದ ದಿಕ್ಕಿನ ಕಡೆಗೇ ನೋಡುತ್ತಿದ್ದೆ. ಯಾವಾಗ ಸಮಾಧಾನವಾಯಿತೋ, ಆಗ ಅಲ್ಲೇ ನೆಲದಮೇಲೆ ಕುಳಿತು ಸುಧಾರಿಸಿಕೊಂಡೆ.
ನಿಧಾನವಾಗಿ ಎದ್ದು ಸುನಿಲನ ಕಡೆಗೆ ನಡೆದು ಹೋದಾಗ ಅವನಿನ್ನೂ ಅದೇ ಜಾಗದಲ್ಲೇ ಅರೆನಗ್ನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು, ‘ಸದ್ಯ ಇವನು ನನ್ನ ಅವಸ್ಥೆ ನೋಡಲಿಲ್ಲವಲ್ಲ’ ಎಂದುಕೊಂಡೆ. ಅವನನ್ನು ಜೋರಾಗಿ ಅಲ್ಲಾಡಿಸಿ ಎಬ್ಬಿಸಿ ಕೂರಿಸಿದೆ. ಅವನಿನ್ನೂ ಸಂಪೂರ್ಣವಾಗಿ ಹೆದರಿಯೇ ಇದ್ದ. ಅವನಿಗೆ ಕರಡಿ ಹೋಯಿತು ಎಂದು ಅರ್ಥಮಾಡಿಸಲೇ ನನಗೆ ಹತ್ತು ನಿಮಿಷಗಳು ಬೇಕಾದವು. ಅವನು ಒಂದು ಮಟ್ಟಿಗೆ ಪ್ರಜ್ಞಾವಂತ ಸ್ಥಿತಿಗೆ ಬಂದಮೇಲೆ, ಅವನನ್ನು ಎದ್ದೇಳಿಸಿ ಊರ ಕಡೆಗೆ ನಡೆದೆ. ಸುನಿಲ ಅಷ್ಟುಹೊತ್ತು ಮತ್ತೇನಾದರೂ ಕರಡಿ ಬರಬಹುದೇ ಎಂದು ಅತ್ತಿತ್ತ ನೋಡುತ್ತಲೇ ಇದ್ದ. ನಾವು ತುಂಬಾ ದೂರ ಬಂದಮೇಲೆ, ಅವನಿಗೆ ಇನ್ನು ಕರಡಿ ಬರುವುದಿಲ್ಲ ಅಂದು ಗ್ಯಾರಂಟಿಯಾದಮೇಲೆ ಸ್ವಲ್ಪ ತಣ್ಣಗಾದ.
ಅವನಿಗೆ ಆಗಲೇ ನಾನು ಪಂಚೆಯೆಲ್ಲಾ ಹರಿದುಕೊಂಡು ಚಡ್ಡಿಯಲ್ಲೇ ಬರುತ್ತಿರುವುದು ಕಂಡದ್ದು. “ಏನೋ ಇದು ನಿನ್ನ ಅವಸ್ಥೆ? ಪಂಚೆ ಎಲ್ಲೋ?” ಎಂದ. ನಾನವನಿಗೆ ನನ್ನ ಮತ್ತು ಕರಡಿಯ ಜಂಗೀ ಕುಸ್ತಿಯ ಸಂಕ್ಷಿಪ್ತ ವರದಿ ನೀಡಿದೆ. ಕರಡಿ ಹಲಸಿನಹಣ್ಣಿನ ಜಾಡು ಹಿಡಿದು ಬಂದದ್ದು ಎಂದು ಕೇಳಿ ಅವನಿಗೂ ಸಮಾಧಾನವಾಯ್ತು. ಸುನಿಲ ಮತ್ತೇನೋ ನೆನಸಿಕೊಂಡವನಂತೆ "ಲೇ, ಅರುಣ ಎಲ್ಲೋ?” ಎಂದ. ನನಗೆ ಅರುಣನ ಹೆಸರು ಕೇಳಿದ ತಕ್ಷಣವೇ ಆ ಪರಿಸ್ಥಿತಿಯಲ್ಲೂ, ಮೈಯೆಲ್ಲಾ ಉರಿದು ಹೋಗುವಷ್ಟು ಕೋಪ ಬಂತು. ನಾನವನಿಗೆ ಅವನು ಹೇಗೆ ನಮ್ಮನ್ನು ಕರಡಿ ಬಾಯಿಗೆ ದಬ್ಬಿ ಓಡಿಹೋದ ಎಂದು ನೆನಪಿಸಿದೆ. ಸುನೀಲನಿಗೆ ತುಂಬಾ ಕೋಪ ಬಂದು "ಹರಾಮಿ ನನ್ನ ಮಗ, ಹಲಸಿನ ಹಣ್ಣು ತಿನ್ನಿಸಿ ಕರಡಿ ಬಾಯಿಗೆ ದಬ್ಬಿದ. ಇದೆ ಅವನಿಗೆ ಇವತ್ತು” ಎಂದ. ನಾನು ಅವನಿಗೆ ಸಪೋರ್ಟ್ ಮಾಡಿ "ಹೌದು ಮಗ, ಇವತ್ತು ನನ್ನ ಚಡ್ಡಿಲಿ ಊರೊಳಗೆ ಬರೋ ತರ ಮಾಡಿದಾನೆ. ಅವನನ್ನ ಎಲ್ಲಿದ್ರೂ ಹುಡುಕಿ ಅವನ ಚಡ್ಡಿ ಹರಿಯೋ ತರ ಹೊಡಿಲಿಲ್ಲ ಅಂದ್ರೆ ನಂಗೆ ಇನ್ನೂ ಸಾಯೋ ತನ್ಕಾನು ನಿದ್ರೇನೇ ಬರಲ್ಲ" ಎಂದೆ. ಇಬ್ಬರೂ ಹೆಚ್ಚುಕಮ್ಮಿ ಅರೆನಗ್ನ ಸ್ಥಿತಿಯಲ್ಲಿಯೇ ಹಳ್ಳಿ ಪ್ರವೇಶಿಸಿದೆವು.
ನಾವು ಹಳ್ಳಿ ಪ್ರವೇಶಿಸುವುದಕ್ಕೂ, ಅರುಣ ಊರಿನ ಎಲ್ಲಾ ಜನರನ್ನೂ ಕರೆದುಕೊಂಡು ನಮ್ಮನ್ನು ಎದುರಾಗುವುದಕ್ಕೂ ಸರಿ ಹೋಯ್ತು. ಮೊದಲೇ ಬಟ್ಟೆಯೆಲ್ಲಾ ಹರಿದುಕೊಂಡು ಭಿಕಾರಿಗಳಂತೆ ಕಾಣುತ್ತಿದ್ದ ನಮ್ಮನ್ನು ಇಡೀ ಊರಿನ ಮುಂದೆ ಅರುಣ ಪ್ರದರ್ಶನಕ್ಕಿಟ್ಟಂತಿತ್ತು ನಮ್ಮ ಸ್ಥಿತಿ. ನಮ್ಮನ್ನು ನೋಡಿ ಹಲವರು "ಅಯ್ಯೋ ಪಾಪ" ಎಂದರೆ ಮತ್ತಲವರು ಕಿಸಕ್ಕನೆ ನಕ್ಕರು. ಅವರು ನಕ್ಕಿದ್ದರಲ್ಲಿ ತಪ್ಪೇನು ಇಲ್ಲ ಬಿಡಿ. ನಮ್ಮ ಪರಿಸ್ಥಿತಿಯೇ ಹಾಗಿತ್ತು. ಅದರಲ್ಲೂ ಹಲವಾರು ಹೆಂಗಸರು ನನ್ನ ಚಡ್ಡಿಯಲ್ಲಿನ ಅವತಾರ ನೋಡಿ ಸೀರೆಯ ಸೆರಗು ಮುಚ್ಚಿಕೊಂಡು ಕಿಸಕಿಸನೇ ಕಿಸಿದದ್ದು ನೋಡಿ ನನಗೆ ಕರುಳು ಕಿವುಚಿ ಬಂದಂತಾಯ್ತು. ಅಷ್ಟರಲ್ಲಿ ಯಾರೋ ಹತ್ತಿರದ ಮನೆಯ ಪುಣ್ಯಾತ್ಮ ನಮಗೆ ಹಾಕಿಕೊಳ್ಳಲು ಪಂಚೆ ತಂದುಕೊಟ್ಟ. ಅದನ್ನು ಉಟ್ಟುಕೊಂಡು ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿದೆವು.
ಅಂದು ಸಂಜೆ ನಾವು ಕೊಟ್ಟಕೊನೆಯದಾಗಿ ಆ ಊರನ್ನು ಬಿಟ್ಟೆವು. ಬಿರಿಯಾನಿ ತಿನ್ನುವ ಆಸೆಯಿಂದ ಇದ್ದ ಬದ್ದ ಸ್ವಲ್ಪ ಮರ್ಯಾದೆಯನ್ನೂ ಕಳೆದುಕೊಂಡುದರ ಬಗ್ಗೆ ನನಗೆ ಬಹಳ ಬೇಸರವಿದೆ.
ತುಂಬಾ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ