ನನ್ನ ಬ್ಲಾಗ್ ಪಟ್ಟಿ

ಭಾನುವಾರ, ನವೆಂಬರ್ 11, 2018

ಗಣಪತಿ ಬಂದ



ರಾಮಗಿರಿಯ ಆನೆಕಲ್ಲು ಬೀದಿ ಗಣಪತಿ ಹಬ್ಬ ಬಂದ್ರೆ ಜಗಮಗಿಸ್ತಾ ಇರತ್ತೆ. ಅದೇ ಬೀದಿಯ ಹುಡುಗರೆಲ್ಲ ಸೇರಿಕೊಂಡು ಕಳೆದ ಐದು ವರ್ಷಗಳಿಂದ ಗಣಪತಿ ಕೂರಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ. ಅವರು ಅದನ್ನು ಬಹಳ ನಿಷ್ಟೆಯಿಂದ ಪಾಲಿಸುತ್ತಾರೆ ಕೂಡಾ. ಅದರ ಮಧ್ಯದಲ್ಲೆ ಅವರವರಲ್ಲೇ ಬೀದಿ ಜಗಳಗಳೂ ಆಗುತ್ತವೆ. ಆದರೆ ಅವ್ಯಾವೂ ದೊಡ್ಡ ಜಗಳಗಳಲ್ಲ. ಕಂಠ ಪೂರ್ತೀ ಕುಡಿದು ಮಾಡೋ ಜಗಳಗಳು. ಅವುಗಳನ್ನು ನಿಲ್ಲಿಸಲು ಹಿರಿಯರನ್ನೂ ನೇಮಿಸಿದ್ದಾಯ್ತು. ಹಿರಿಯರರನ್ನು ನೇಮಿಸುವ ಅವಶ್ಯಕತೆ ಇಲ್ಲದಿದ್ದರೂ, ದುಡ್ಡು ಎತ್ತುವಾಗ ಒಬ್ಬರು ಹಿರಿಯರು ಮುಂದಿದ್ದರೆ ಒಳ್ಳೆಯದಲ್ಲವೆ, ಅದಕ್ಕಗಿಯೇ ಪ್ರತೀ ವರ್ಷ ಒಂಕಾರಪ್ಪನನ್ನು ಸಂಘದ ಹಿರಿಯನನ್ನಾಗಿ ನೇಮಿಸಲಾಗುತ್ತದೆ. ಚಂದಾ ಎತ್ತಿದ ಮೇಲೆ ಒಂಕಾರಪ್ಪನಿಗೆ ಏನೂ ಕೆಲಸವಿಲ್ಲ. ಅವರು ಪೂರ್ಣ ಸ್ವತಂತ್ರ.

  ಪ್ರತೀ ವರ್ಷದಂತೆಯೇ, ವರ್ಷವೂ ಪೂಜೆಯ ಜವಾಬ್ದಾರಿ ಅಣ್ಣನಿಗೇ ಬಂದಿತ್ತು. ಇಂತಹ ವಿಷಯಗಳಲ್ಲಿ ಅಣ್ಣ ಮಹಾ ಸಾಧಕ. ಎಂದಿಗೂ ಪೂಜೆಗೆ ತಡಮಾಡಿದವನಲ್ಲ. ನಿಜ ಹೆಳಬೇಕೆಂದರೆ, ಅವನು ಪೂಜೆ ಮಾಡುವ ರೀತಿಯೆ ಕುತೂಹಲವಾಗಿತ್ತು. ಗಣಪತಿಯನ್ನು ಅತ್ಯದ್ಬುತವಾಗಿ ಅಲಂಕರಿಸಿ, ಮಂತ್ರ-ಘೋಷಗಳ ನಡುವೆ ಮಾಡುವ ಪೂಜೆಯನ್ನು ನೋಡುವುದೇ ಭಾಗ್ಯವೆಂದು ಎಷ್ಟೊ ಹಿರಿಯರು ಮೊದಲೇ ಬಂದು ನಿಲ್ಲುತ್ತಿದ್ದರು. ಅಣ್ಣ ಜನರಿಂದ ಸೈ-ಸೈ ಅನಿಸಿಕೊಂಡಿದ್ದು ಅವನ ಜೀವನದಲ್ಲಿಯೇ ಇದೊಂದು ವಿಷಯಕ್ಕೆ ಮಾತ್ರ.

ಆದರೆ ವರ್ಷ ಮಾತ್ರ ಅವನಿಗೆ ಪೂಜೆಯ ಜವಾಬ್ದಾರಿ ನೀಡಲು ರಂಗ ಮತ್ತವನ ಗ್ಯಾಂಗ್ ಅಡ್ಡಬಂತು. ಇವನು ಹೋಗಿ ಕೇಳಿದ್ದಕ್ಕೆ ಯಾವ ಸರಿಯಾದ ಜವಾಬೂ ಬರಲಿಲ್ಲ. ಗಣಪತಿ ತರಲಿಕ್ಕೆ ಎಲ್ಲಾ ರೀತಿಯ ತಯಾರಿಯೂ ನಡೆದಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಇದ್ಯಾವುದೋ ವಿಘ್ನ ಬಂದು ಕುಳಿತಿತ್ತು. ಅಣ್ಣನಿಗೆ ಪೂಜೆಯ ಜವಾಬ್ದಾರಿ ಕೊಡಬೇಕೆಂದು ಅರ್ದ ಗುಂಪು ಅಣ್ಣನ ಪರವಾಗಿ ನಿಂತಿತು. ಆದರೆ ರಂಗ ಮತ್ತವನ ಗ್ಯಾಂಗ್ ಅದಕ್ಕೆ ಒಪ್ಪುತ್ತಿರಲಿಲ್ಲ. ಗುಂಪು ಯಾವಾಗ ಇಭ್ಭಾಗವಾಯ್ತೊ, ಜಗಳದ ಸುವಾಸನೆ ಎಲ್ಲೆಲ್ಲಿಯೂ ಪಸರಿಸಿತು. ಪಂಚೆಗಳನ್ನೆಲ್ಲಾ ಮೇಲಕ್ಕೆತ್ತಿ ಕಟ್ಟಿ ಜಗಳಕ್ಕೆ ಸಿದ್ದವಾಗಿದ್ದೂ ಆಯಿತು. ಇನ್ನೇನು ಕೈ-ಕೈ ಮಿಲಾಯಿಸಬೇಕು ಎನ್ನುವಷ್ಟರಲ್ಲಿ ಊರಿನ ಹಿರಿಯರೆಲ್ಲಾ ಬಂದು ಎಲ್ಲರನ್ನೂ ಮನೆಗೆ ಕಳುಹಿಸಿದರು.
     
ಆದರೆ ಬೆಂಕಿ ಅಷ್ಟಕ್ಕೇ ಆರಲಿಲ್ಲ. ಸಂಜೆಯ ಹೊತ್ತಿಗೆಲ್ಲಾ ಒಳಗೊಳಗೇ ಜಗಳದ ತಯಾರಿ ನಡೆದಿತ್ತು. ಎಂದಿನಂತೆ, ಸಂಜೆಯೂ ಹಳೇ ಸ್ಕೂಲಿನ ಮುಂಭಾಗ ಎರಡೂ ಗುಂಪಿನವರು ಬಂದು ಕ್ಯಾತೆ ತೆಗೆದರು. ಅಣ್ಣನ ಕಡೆಯವರು ನ್ಯಾಯವಾಗಿಯೇ ವಾದ ಮಾಡುತ್ತಿದ್ದರು. ಆದರೆ ಪರಿಸ್ಥಿತಿ ಕೈ ಮೀರಲು ಹತ್ತೇ ನಿಮಿಷ ಸಾಕಾಯ್ತು. ರಂಗ ಯಾವಾಗ ಅಣ್ಣನ ಕಾಲರ್ ಹಿಡಿದನೋ ಅಷ್ಟೇ, ಅಣ್ಣ ಅವನಿಗೆ ಹುಚ್ಚು ನಾಯಿಯ ಹಾಗೆ ಹೊಡೆಯಹತ್ತಿದ. ಇದ್ದಕ್ಕಿದ್ದಂತೆ ಇವರಿಬ್ಬರು ಜಗಳವಾಡುವುದನ್ನು ನೋಡಿ ಬಿಡಿಸಲು ಹೋದವರಿಗೂ ಸ್ವಲ್ಪ ಸರಿಯಾಗೇ ಬಿತ್ತು. ಸರಿ!! ಹೊಡೆಸಿಕೊಂಡು ಸುಮ್ನೆ ಇರ್ತಾರಾ..ಇವರೂ ಅವರ ಮೇಲೆ ಮುಗಿಬಿದ್ದರು. ಐದೇ ನಿಮಿಷಗಳಲ್ಲಿ ಎಲ್ಲ ಅಲ್ಲೊಲಕಲ್ಲೊಲವಾಗಿ ಹೋಯ್ತು. ಪ್ರತಿಯೊಬ್ಬರೂ ಮತ್ತೊಬ್ಬರ ಮೂತಿಗೆ ಗುರಿ ಇಡುತ್ತಿದ್ದರು.

ಅಣ್ಣ ರಂಗನಿಗಿಂತ ಕಟ್ಟುಮಸ್ತಾಗಿದ್ದರಿಂದ, ರಂಗನ ಸ್ಥಿತಿ ಸ್ವಲ್ಪ ಗಂಭೀರವಾಗಿತ್ತು. ಗುಂಪಿನಲ್ಲಿ ಜಗನ ಜೊಥೆ ನಿಂಗ ಗುದ್ದಾಡುತ್ತಿದ್ದ.

"ಕಾಲರ್ ಹಿಡಿತಿಯೇನೋ ಹಲ್ಕಟ್" ಎಂದು ನಿಂಗ ಜಗನಿಗೆ ಜಾಡಿಸಿ ಒದ್ದ.
"ಜಾಡಿಸಿ ಹೊಡಿತಿಯೇನೋ ಬೋಳಿಮಗನೆ" ಎಂದ ಜಗ ನಿಂಗನ ಪಾಯಿಂಟಿಗೆ ಸರಿಯಾಗಿ ಜಾಡಿಸಿ ಒದ್ದ. ಹೊಡೆತ ಎಷ್ಟು ಮಾರಕವಾಗಿತ್ತೆಂದರೆ, ನಿಂಗ ಬೀಜವೇ ಬಾಯಿಗೆ ಬಂದವನಂತೆ ಮುಖ ಊದಿಸಿಕೊಂಡು ದಡಾರನೆ ನೆಲಕ್ಕೆ ಬಿದ್ದ. ಮಾತನಾಡಲೂ ಆಗದೆ ಉಸಿರು ಕಟ್ಟಿಕೊಂಡು ಒದ್ದಾಡುತ್ತಿದ್ದ. ಜಗ ಏನೂ ಆಗದೇ ಇರದಂತೆ ಬೆರೆಯವನಿಗೆ ಥಳಿಸಲು ಹೊರಟ. ಎಲ್ಲಿ ನೋಡಿದರೂ ಬರೀ ಗೂಸಾಗಳೇ ಕಾಣುತ್ತಿತ್ತು.

"ತಗೋ ಮಗನೇ...ಸಾಯಿ ನನ್ಮಗನೆ..." ಧಡ್!!!

"ಕಣ್ಣಿಗೆ ಹೊಡಿತಿಯೇನೋ ಬೋಸುಡಿಕೆ?" ಧಡ್!!!

"ಪಂಚೆ ಹರಿತಿಯೇನೋ...ನಿಮ್ಮಪ್ಪ ತಂದುಕೊಡ್ತಾನೇನೋ ಈಗ...ನನ್ಮಗನೇ ತಗೋ ಇದು" ಧಡ್!!!

"ಪಂಚೆ ಬಿಡೋ...ಗಂಡಸಿನ ತರ ಹೋರಾಡೋ...ಪಂಚೆ ಹಿಡ್ಕೊಂಡು ಹೊಡಿಯೋಕೆ ನೀನೇನು ಷಂಡ ಏನೊ" ಧಡ್!!!

ಹೀಗೇ ಅವ್ಯಾಚ್ಯ ಪದಗಳ ಸುರಿಮಳೆಯೇ ಸುರಿದಿತ್ತು. ಅಣ್ಣನಂತೂ ರಂಗನನ್ನು ಸ್ಕೂಲ್ ಮೈದಾನದಲ್ಲೆಲ್ಲಾ ಅಡ್ಡಾಡಿಸಿಕೊಂಡು ಹೊಡೆದಿದ್ದ. ರಂಗನ ಮುಖವಂತೂ ಹೊಡೆಸಿಕೊಂಡು ಊರಗಲ ಆಗಿತ್ತು. ಎಷ್ಟೋ ಜನ ತಮ್ಮ ಹಲ್ಲುಗಳನ್ನೇ ಕಳೆದುಕೊಂಡಿದ್ದರು. ಮತ್ತೆಷ್ಟೋ ಜನ ಮೂತಿಯೇ ಗೊತ್ತಾಗದಂತೆ ಹೊಡೆಸಿಕೊಂಡಿದ್ದರು.

ಅಷ್ಟರಲ್ಲಿ ಯಾರೊ ಓಡಿಹೋಗಿ ಊರಿನವರಿಗೆ ಹೇಳಿದ್ದರಿಂದ, ಹಿರಿಯರೆಲ್ಲಾ ಓಡಿ ಬಂದು ಜಗಳ ನಿಲ್ಲಿಸಿದರು. ಜಗಳ ನಿಲ್ಲಿಸುವ ಭರದಲ್ಲಿ ಓಂಕಾರಪ್ಪನಿಗೂ ಒಂದು ಸರಿಯಾಗಿ ಬಿದ್ದಿತ್ತು. ಐದೇ ನಿಮಿಷದಲ್ಲಿ ಓಂಕಾರಪ್ಪನ ಮುಖ ಊದಿ ಊರಗಳವಯ್ತು. ಜಗಳ ಮುಗಿದ ನಂತರ ಎಲ್ಲರನ್ನೂ ಎದುರುಬದುರಾಗಿ ನಿಲ್ಲಿಸಲಾಯ್ತು. ಕೆಲವರ ಮುಖಗಳಂತೂ ಕುಂಬಳಕಾಯಿಯ ಹಾಗೆ ಊದಿಕೊಂಡಿತ್ತು. ಗೂಸಾ ತಿಂದ ಓಂಕಾರಪ್ಪ ಪಿತ್ತ ನೆತ್ತಿಗೇರಿದವರಂತೆ ಬೈಯ್ಯಹತ್ತಿದರು. ಆದರೆ ಅವರ ಮಾತು ತಮಗೆ ಕೆಳುತ್ತಲೇ ಇಲ್ಲವೇನೋ ಎಂಬಂತೆ ಇವರೆಲ್ಲಾ ತಮ್ಮ-ತಮ್ಮ ಹಲ್ಲು, ಉಗುರುಗಳು ಇವೆಯೋ ಇಲ್ಲವೋ ನೊಡಿಕೊಳ್ಲುತಿದ್ದರು. ಕೊನೆಗೆ ಊರಿನ ಹಿರಿಯರೆಲ್ಲ ಸೇರಿ ಪೂಜೆಯ ಜವಬ್ದಾರಿಯನ್ನು ಅಣ್ಣನಿಗೇ ಕೊಟ್ಟರು. ರಂಗನ ಸ್ಥಿತಿಯಂತೂ ಅಧೋಗತಿ ತಲುಪಿತ್ತು. ಅಣ್ನನಂತೂ ಅವನನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಹಾಕಿದ್ದ.
 
ನಿಂಗನ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಅವನಿಗೆ ಇನ್ನೂ ನಿಂತುಕೊಳ್ಳಲೂ ಆಗುತ್ತಿರಲಿಲ್ಲ. ಎಲ್ಲರ ಬಟ್ಟೆಗಳೂ ಹರೆದು, ಪಂಚೆಗಳು ತುಂಡಾಗಿದ್ದವು. ಜಗಳ ನಿಂತಮೇಲೆ ಎಲ್ಲರೂ ಚಡ್ಡಿಯಲ್ಲೇ ತಮ್ಮ ಪಂಚೆಗಳನ್ನು ಹುಡುಕಿದರು. ಕೊನೆಗೆ ಅಣ್ಣನನ್ನೇ ಗುಂಪಿನ ನಾಯಕನನ್ನಾಗಿ ಮಾಡಲಾಯಿತು. ಅಣ್ಣನಂತೂ ತುಂಬಾ ಖುಷಿಯಾದ. ಯಾರೂ ನೆಟ್ಟಗೆ ಮನೆಗೆ ಹೋಗಲಾರದಷ್ಟು ಹೊಡೆಸಿಕೊಂಡಿದ್ದರು. ಗ್ರಹಚಾರ ಚೆನ್ನಾಗಿಲ್ಲ ಎಂದುಕೊಂಡು ಕುಂಟುತ್ತಾ, ತೆವಳುತ್ತಾ ಮನೆಗೆ ಹೋದರು.


ಮರುದಿನ ಗಣಪತಿ ತರುವ ಕಾರ್ಯಕ್ರಮ. ಎಲ್ಲಾ ಸಿದ್ದತೆಗಳನ್ನು ಮಾಡಿಯಾಗಿತ್ತು. ಕಿವಿಯ ಪದರವೇ ಕಿತ್ತು ಹೋಗುವಂತೆ ಹಾಡನ್ನು ಹಾಕಲಾಗಿತ್ತು. ಚಪ್ಪರ ಕಟ್ಟಿಯಾಗಿತ್ತು. ಸಂಜೆ ಆರು ಘಂಟೆಗೆ ಸರಿಯಾಗಿ ಗಣಪತಿ ತಂದು ಕೂರಿಸಿದರು. ಇಡೀ ಬೀದಿಯ ಜನವೇ ಪೂಜೆಗೆ ಬಂದುನಿಂತಿತ್ತು. ಅಣ್ಣ ಎಂದಿನಂತೆ ಮತ್ತೊಮ್ಮೆ ಭರ್ಜರಿ ಪೂಜೆ ಮಾಡಿದ. ಎಲ್ಲರಿಗೂ ಪಾನಕ ಮತ್ತು ಪ್ರಸಾದದ ಸೇವೆಯಾಯ್ತು. ಮೂರು ಹಲ್ಲು ಕಳೆದುಕೊಂಡಿದ್ದ ರಂಗ ದೂರದಲ್ಲೇ ನಿಂತು ನೋಡುತ್ತಿದ್ದ. ಮನೆಯಿಂದಲೂ ಹೊರಬರಲಾಗದ ನಿಂಗ ಹೊಚ್ಕೊಂಡು ಮಲಗಿದ್ದ. ಆದರೆ ಅವರ ಮನೆಯವರು ಪೂಜೆಯ ಸಮಯಕ್ಕೆ ಬಂದು ಪ್ರಸಾದ ತೆಗೆದುಕೊಂಡು ಹೊಗಿದ್ದರು. ನಡೆಯಲಾಗದಿದ್ದರೇನಂತೆ?? ನಿಂಗ ಪ್ರಸಾದವನ್ನಂತೂ ನೆಕ್ಕುತ್ತಾ ತಿಂದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ತೋಟದ ಮನೆ : ಭಾಗ-2

ತೋಟದ ಮನೆ ಭಾಗ-೨ ಪ್ರೇತದ ಅಟ್ಟಹಾಸ ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದ...