ನನ್ನ ಬ್ಲಾಗ್ ಪಟ್ಟಿ

ಭಾನುವಾರ, ನವೆಂಬರ್ 11, 2018

ಅಘೋರಾತ್ರಿ ಸವಾರಿ

ನನಗೆ ಪೂಜೆ-ಪುನಸ್ಕಾರಗಳಲ್ಲಿ ಆಸಕ್ತಿಯೇ ಇಲ್ಲದಿದ್ದರೂ, ಅಮ್ಮನ ಒತ್ತಾಯದ ಮೇರೆಗೆ ರಾಮಗಿರಿಗೆ ಹೊರಡಬೇಕಾಯಿತು. ನಾನು ಚಿಕ್ಕಂದಿನಿಂದಲೂ ಹಾಸ್ಟೆಲಿನಲ್ಲಿ ಇದ್ದಿದ್ದರಿಂದಲೋ ಎನೊ, ನನಗೆ ಇವುಗಳೆಲ್ಲದರ ಮೇಲೆ ಆಸಕ್ತಿ ಕಡಿಮೆ. ನಾನೆನೂ ಪೂರ್ತಿ ಪ್ರಮಾಣದ ನಾಸ್ತಿಕನಲ್ಲ. ಆದರೆ ಮೂಡನಂಬಿಕೆಗಳನ್ನು ಶತಮಾನದಲ್ಲಿಯೂ ಶಿರಸಾವಹಿಸಿ ಪಾಲಿಸುವ ನಮ್ಮ ಮನೆತನದವರ ಜೊತೆ ಬೆರೆಯುವುದು ನನಗೆ ಮೈಪರಚಿಕೊಳ್ಳುವ ಕೆಲಸದಂತನ್ನಿಸುತ್ತಿತ್ತು. ನನ್ನನ್ನು ಆಸ್ತಿಕನನ್ನಾಗಿ ಮಾಡಲು ಅಮ್ಮ ಮಾಡದ ಪ್ರಯತ್ನಗಳಿಲ್ಲ. ನನ್ನನ್ನು ಎಷ್ಟೋ ದೆವಸ್ತಾನಗಳಿಗೆ ಕರೆದುಕೊಂಡು ಹೋದರೂ ನನ್ನ ವಿಚಾರಗಳು ಬದಲಾಗಲಿಲ್ಲ. ಕೊನೆಗೆ ಅವರೇ ನಾಯಿ ಬಾಲ ಡೊಂಕು ಎಂದು ಬಿಟ್ಟುಬಿಟ್ಟರು. ಅದರ ನಂತರ ನನಗೆ ಪೂಜೆಗಳಿಗೆ ಕರೆಯುವುದು ತುಂಬಾ ಕಡಿಮೆಯಾಯಿತು. ಇದರಿಂದ ನನಗೇನು ನಷ್ಟವಿರಲಿಲ್ಲ ಬಿಡಿ. ಆದರೆ ಬಾರಿ ಮಾತ್ರ  ನಾನೆಷ್ಟೇ ಬೇಡಿಕೊಂಡರೂ ಅಮ್ಮ ನನ್ನನ್ನು ಬಿಟ್ಟು ಹೋಗಲು ರೇಡಿಯೇ ಇರಲಿಲ್ಲ. ಕೊನೆಗೆ ನನ್ನ ಮುಂದೆ ಅತ್ತೂ ಕರೆಯುವ ನಾಟಕಗಳನ್ನೆಲ್ಲಾ ಮಾಡಿ ನನ್ನನ್ನು ಒಪ್ಪಿಸಿಬಿಟ್ಟರು. ಆದದ್ದಾಗಲಿ ಎಂದು ಬಸ್ಸು ಹತ್ತಿದೆ

ಚಿತ್ರದುರ್ಗದಿಂದ ರಾಮಗಿರಿಗೆ ೫೦ ನಿಮಿಷಗಳ ಪ್ರಯಾಣ. ಅಲ್ಲಿಗೆ ಹೋಗಲಿಕ್ಕೆ ಇದ್ದುದು ಪ್ರೈವೇಟ್ ಬಸ್ಸುಗಳು ಮಾತ್ರ. ಅವುಗಳಂತೂ ಪೂರ್ತಿಯಾಗಿ ತುಂಬುವವರೆಗೂ ಕದಲುತ್ತಲೇ ಇರಲಿಲ್ಲ. ಮೊದಲೇ ತಡವಾಗಿ ಬಂದ ಬಸ್ಸಿಗೆ ಜನ ಮುತ್ತಿಗೆ ಹಾಕಿಬಿಟ್ಟರು. ಬಸ್ಸಿಗೆ ಮುತ್ತಿದ ಜನಜಂಗುಳಿ ನೋಡಿ ನಾನು ಯಾವುದೋ ಜಗಳ ಪ್ರಾರಂಬವಾಯ್ತೆನೋ ಎಂದುಕೊಂಡೆ, ಆದರೆ ಅವರೆಲ್ಲ ನಮ್ಮಂತೆಯೇ ಪ್ರಯಾಣಿಕರು ಎಂದು ಗೊತ್ತಾದ ಮೇಲೆ ಬಹಳ ಬೇಸರವಾಯಿತು. ಅಪ್ಪ ತಮ್ಮ ಪೋಲಿಸ್ ಗತ್ತು ತೋರಿಸಿ ಮೊದಲೇ 4 ಸೀಟು ಕಾದಿರಿಸಿದ್ದರು. ಆದ್ದರಿಂದ ನಮಗೆ ಕುಳಿತುಕೊಳ್ಳಲು ಹೊಡೆದಾಡುವ ಪ್ರಮೇಯ ಬರಲಿಲ್ಲ. ಗಿಜಿ-ಗಿಜಿ ಎನ್ನುವಂತೆ ಜನ ತುಂಬಿದರೂ ಬಸ್ಸು ಹೊರಡಲಿಲ್ಲ. ಯಾಕೆಂದು ನಾನು ಅಪ್ಪನಿಗೆ ಕೇಳಿದಾಗೆ ಅವರು ನಕ್ಕು ಹೇಳಿದರು, “ಹೊರಡುವುದಕ್ಕೆ ಇನ್ನು ೩೦ ನಿಮಿಷ ಇದೆ ಎಂದು”. ನಾನು ಎಷ್ಟು ಬರುವುದಿಲ್ಲವೆಂದರೂ ಎಳೆದುಕೊಂಡು ಬಂದ ಅಮ್ಮನ ಮೇಲೆ ಅಗಾಡವಾದ ಕೋಪ ಬಂತು. ಆದರೆ ನಾನೇನಾದರೂ ಹೇಳಿದರೆ ಅವರ ಉತ್ತರ ರೆಡಿ ಇರುತ್ತಿತ್ತು - “ದೇವರ ಕಾರ್ಯಕ್ಕಾಗಿ ಹೋಗುವಾಗ ಸಮಾದಾನದಿಂದ ಹೋಗಬೇಕು. ಅವಸರ ಮಾಡಬಾರದು”. ಉತ್ತರ ಗೊತ್ತಿದ್ದ ಮೇಲೂ ಪ್ರಶ್ನೆ ಕೇಳುವಂತ ಮುಠ್ಠಾಳತನ ನಾನು ಮಾಡಲಿಲ್ಲ. ಇದ್ದ ಕೋಪವನ್ನೆಲ್ಲಾ ಡ್ರೈವರಿಗೆ  ಶಪಿಸುತ್ತಾ ತೀರಿಸಿಕೊಂಡು ಕುಳಿತೆ

ಚಿತ್ರದುರ್ಗ ಬರಪೀಡಿತ ಪ್ರದೇಶವಾದ್ದರಿಂದ ರಸ್ತೆಯ ಇಕ್ಕೆಲಗಳಲ್ಲಿ ಒಣಗಿದ ಪೊದೆಗಳನ್ನು ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಪೊದೆಗಳೂ ಸಹ ಮಾನವ ನಿರ್ಮಿತವಾದವು. ರೈತರು ತಮ್ಮ ಹೊಲಗಳಿಗೆ ಬದುವಾಗಿ ಪೊದೆಗಳನ್ನು ನೆಡುತ್ತಿದ್ದರು. ಹಾಗಾಗಿಯೇ ಇವುಗಳು ಎಲ್ಲೆಂದರಲ್ಲಿ ಬೆಳೆದು ನಿಂತಿದ್ದು. ಇನ್ನು ಹೊಲಗಳಲ್ಲಿ ಹಸಿರಿನ ಬಣ್ಣ ಕಂಡಿದ್ದೇ ಕಡಿಮೆ ಎನ್ನಬೇಕು. ಕಿಟಕಿಯ ಗಾಜು ಹಾಕಿದರೂ ಬಿಸಿಲು ಬೆಂಕಿಯ ಜ್ವಾಲೆಯಂತೆ ಮೈ ಸುಡುತ್ತಿತ್ತು. ಅದರಲ್ಲಿಯೂ ಬೀಡಿ ವಾಸನೆ, ಮಕ್ಕಳ ರೋದನೆ, ಮಾತೆಯರ ಬಿರುಮಾತುಗಳು ನನಗೆ ಬುದ್ದಿಬ್ರಮಣೆ ಮಾಡುವಂತೆ ಗೋಚರಿಸಿದವು. ಅಷ್ಟರಲ್ಲಿ ಯಾರೊ ಜೋರಾಗಿ ಮೊಬೈಲ್ನಲ್ಲಿ ಹಾಡು ಹಾಕಿದರು. ಅದರ ಸೌಂಡು ಎಷ್ಟಿತ್ತೆಂದರೆ ನನಗೆ ಅದು ನಿಜವಾಗಿಯೂ ಮೊಬೈಲೆಯಾ ಎನ್ನುವಷ್ಟಿತ್ತು. ಅದರ ನಂತರ ಮತ್ತೊಬ್ಬ ಅದನ್ನೇ ಮಾಡಿದ. ಮೊದಲಾದರೆ ಒಂದು ಹಾಡನ್ನಾದರೂ ಕೇಳಬಹುದಿತ್ತು. ಆದರೆ ಈಗ ಎರೆಡೆರೆಡು! ನಾವು ಬಸ್ಸಿನಿಂದ ಇಳಿಯುವವರೆಗೂ ಅವರಿಬ್ಬರ ಚಿತ್ರಮಂಜರಿ ಕಾರ್ಯಕ್ರಮ ಮುಗಿಯಲಿಲ್ಲ. ಆಶ್ಚರ್ಯವೆಂದರೆ ಯಾರೊಬ್ಬರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ತಮಗೇನೂ ಕೇಳಿಸುತ್ತಲೇ ಇಲ್ಲವೇನೊ ಎಂಬಂತೆ ಕುಳಿತಿದ್ದರು. ಹಾಗಾದರೇ ನನ್ನಲ್ಲಿಯೇ ಎನೊ ಎಡವಟ್ಟಿದೆ ಎಂದುಕೊಳ್ಳುವವರೆಗೂ ನನ್ನ ವಿಚಾರ ಲಹರಿ ಹರಿಯಿತು. ಬಸ್ಸಿನಿಂದ ಇಳಿದು ಮನೆಕಡೆ ಹೆಜ್ಜೆಹಾಕುವಷ್ಟರಲ್ಲಿ ನನ್ನ ಮುಖ ಬಾಡಿ ಹೋಗಿ ಇಂಗು ತಿಂದ ಮಂಗನಂತಾಗಿತ್ತು.

ನಾನು ಪೂಜೆ ಹಳ್ಳಿಯಲ್ಲಿಯೇ, ಅದರಲ್ಲಿಯೂ ನಮ್ಮ ಮನೆಯಲ್ಲಿಯೇ ಎಂದುಕೊಂಡಿದ್ದೆ. ಆದರೆ ಅಣ್ಣ ಹೇಳಿದ ನಂತರ ಪೂಜೆ ಹಳ್ಳಿಯಿಂದ ಕಿ.ಮೀ. ದೂರದಲ್ಲಿರುವ ನುಲೇನೂರಿನಲ್ಲಿ ಎಂದು ಗೊತ್ತಾಯ್ತು. ಸಂಜೆಯ ಹೊತ್ತಿಗೆ ಅಣ್ಣ ಯಾರದೋ ಬೈಕ್ ತೆಗೆದುಕೊಂಡು ಬಂದ. ಅದೊಂದು ಹಳೇಕಾಲದ ಬುಲೆಟ್ ಬೈಕಾಗಿತ್ತು. ೫೦೦ ಸಿ.ಸಿ. ಬೈಕ್ ಅದು. ಅದ್ರ ಮುಂದೆ ನನ್ನ ಪಲ್ಸರ್ ಬೈಕು ಚಿಲ್ಲರೆ ಬೈಕಿನಂತೆ ಕಂಡಿತು. ಬೈಕು ಏನಿಲ್ಲವಂದರೂ  ೨೩೦ ಕೇಜಿಗಿಂತ ಕಡಿಮೆಯಿರಲಾರದು. ದಾರಿ ಮದ್ಯದಲ್ಲೇನಾದರು ಅದು ಕೆಟ್ಟು ನಿಂತರೆ ಅದನ್ನು ಅಲ್ಲೇ ಬಿಟ್ಟು ಬರಬೇಕಾಗುತ್ತಿತ್ತು. ಹಳ್ಳಿಯ ರೋಡುಗಳಲ್ಲಿ ಅದನ್ನು ದೂಕಿಕೊಂಡು ಬರುವುದು ನನ್ನ ಪ್ರಕಾರ ಅಸಾದ್ಯವಾದ ಮಾತು.

ನಾನು ಮತ್ತು ಅಣ್ಣ ಎಲ್ಲರಿಗಿಂತ ಮೊದಲೇ ಬೈಕಿನಲ್ಲಿ ಹೋಗುವುದೆಂದು ಮತ್ತು ಅಲ್ಲಿ ದೇವಸ್ಥಾನದಾಲ್ಲಿ ಏನಾದರು ಕೆಲಸ ಬಾಕಿ ಉಳಿದಿದ್ದರೆ ಅದನ್ನು ಬೇರೆಯವರು ಬರುವ ಹೊತ್ತಿಗೆ ಮುಗಿಸಿರಬೇಕೆಂದು ಅಪ್ಪ ಹೇಳಿದರುನಾನು ಕೆಲಸ ಮಾಡುವುದು ಅಷ್ಟೇ ಇತ್ತು. ಇದ್ದುದನ್ನೆಲ್ಲಾ ಅಣ್ಣನೇ ಮಾಡುತ್ತಿದ್ದ. ನಾನು ಅಲ್ಲೇ ಉಳಿದು ನನ್ನ ಸಂಬಂದಿಕರ ಕೈಗೆ ಸಿಕ್ಕು ಸೊರಗುವುದಕ್ಕಿಂತ ಸುಮ್ಮನೆ ಅವನ ಜೊತೆ ಬೈಕಿನಲ್ಲಿ ಹೊರಡುವುದೇ ಒಳ್ಳೆಯದು ಎನ್ನಿಸಿತು. ಉಳಿದವರೆಲ್ಲಾ ಎತ್ತಿನ ಗಾಡಿಯಲ್ಲಿ ಬರುತ್ತಿದ್ದರು. ಬೈಕ್ ಸ್ಟಾರ್ಟ್ ಮಾಡಿದಾಗ ನಾನು ನನ್ನ ಕಿವಿಯೇ ಮುಚ್ಚಿಕೊಳ್ಳುವಷ್ಟು ಶಬ್ದ ಮಾಡಿತು. ಬಂದೂಕಿನಿಂದ ಗುಂಡು ಹೊಡೆದರೂ ಇಷ್ಟೊಂದು ಶಬ್ದ ಬರಲಿಕ್ಕಿಲ್ಲವೇನೋ ಎನ್ನುವಷ್ಟಿತ್ತು. ಅಕ್ಕಪಕ್ಕದ ಮನೆಯ ದನಕರುಗಳೆಲ್ಲಾ ಅದರ ಕರ್ಕಶ ಶಬ್ದಕ್ಕೆ ಬೆಚ್ಚಿ ಎದ್ದುನಿಂತವು. ಎಲ್ಲಿಂದಲೋ ನಾಲ್ಕೈದು ನಾಯಿಗಳು ಓಡಿಬಂದು ಇಂತಹ ಶಬ್ದ ಮಾಡಿದ ಪ್ರಾಣಿಯಾದರೂ ಯಾವುದು ಎಂಬಂತೆ ಹುಡುಕುತ್ತಿದ್ದವು. ಅಕ್ಕಪಕ್ಕದ ಮನೆಯವರೂ ಯಾವೋದು ಬಾಂಬು ಸಿಡಿಯಿತೆಂಬಂತೆ ಹೊರಬಂದು ನಿಂತು ಪಿಳಿಪಿಳಿ ಕಣ್ಣು ಬಿಟ್ಟರು. ಅಣ್ಣನಿಗೆ ಅವರೆಲ್ಲ ಅವನನ್ನು ನೋಡುತ್ತಿರುವುದು ಹೆಮ್ಮೆಯ ವಿಶಯಾಗಿ ಕಂಡಿದ್ದು ವಿಪರ್ಯಾಸ. ನನಗೆ ಅಷ್ಟೂ ಜನರ ಮುಂದೆ ಮಾನ ಹೊದಂತಾಯ್ತು.

ನಾವು ದೇವಸ್ತಾನಕ್ಕೆ ಬಂದು ತಲುಪಿದ ಮೂರು ಗಂಟೆಗಳ ನಂತರ ಎಲ್ಲಾ ಸಂಬಂದಿಕರು ಐದು ಎತ್ತಿನ ಗಾಡಿಗಳಲ್ಲಿ ಬಂದು ಇಳಿದರು. ಕೆಲವರು ನಡೆದೇ ಬಂದರು. ಏನಿಲ್ಲವೆಂದರೂ ಐವತ್ತು ಜನರಿರಬೇಕು. ಅಷ್ಟೂ ಜನರೂ ಮಾಂಸಹಾರಿಗಳೇ ಅದದ್ದರಿಂದ ಅವರಿಗಾಗಿ ದೇವರ ಹೆಸರಿನಲ್ಲಿ ಮೂರು ಕುರಿಗಳನ್ನು ಕಡಿಯುವುದೆಂದು ತೀರ್ಮಾನಿಸಲಾಗಿತ್ತು. ಕೂಬ್ಬಿದ ಕುರಿಗಳನ್ನು ನೋಡಿ ಎಷ್ಟೋ ಜನರು ತಾವು ಬಂದಿರುವ ಉದ್ದೇಶವೇ ಮರೆತುಹೋದರು. ಕೆಲವರ ಬಾಯಲ್ಲಾಗಲೇ ನೀರೂರಿತ್ತು. ಅವರು ಹಾಗೂ ಹೀಗೋ ಪೂಜೆ ಮುಗಿಯುವವರೆಗೂ ಕಾಲ ಹಾಕಿದರು. ಅವರ ಚಡಪಡಿಕೆ ಎಲ್ಲರಿಗೂ ಕಾಣುತ್ತಿತ್ತು. ಪೂಜೆ ಮುಗಿಯುವ ಹೊತ್ತಿಗೆ ರಾತ್ರಿಯಾಗಿತ್ತು. ಒಂದು ಕಡೆ ದೊಡ್ಡ ಒಲೆ ಹಚ್ಚಿ ಹಲವಾರು ಗಂಡಸರು ಸೇರಿಕೊಂಡು ಮಾಂಸದ ಸಾರಿಗೆ ಮಸಾಲೆ ಹಾಕುತ್ತಿದ್ದರು. ನಮ್ಮ ಮನೆತನದಲ್ಲಿ, ಹೀಗೆಲ್ಲ ದೊಡ್ಡ ಪ್ರಮಾಣದಲ್ಲಿ ಅಡಿಗೆ ಮಾಡುವಾಗ ಗಂಡಸರೇ ಮಡುತ್ತಿದ್ದುದು. ಹೆಣ್ಣು ಮಕ್ಕಳಿಗೆ ಯಾಕೆ ಅಡಿಗೆ ಮಾಡುವುದಕ್ಕೆ ಬಿಡುತ್ತಿರಲಿಲ್ಲವೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಅಡಿಗೆ ಕಾರ್ಯವಂತೂ ಜೋರಾಗೇ ನಡೆದಿತ್ತು. ಊಟಕ್ಕೆ ಎಲ್ಲರಿಗೂ ಕರೆಯುವ ಹೊತ್ತಿಗೆ ಅಲ್ಲಿದ್ದ ಅರ್ದದಷ್ಟು ಗಂಡಸರು ಕುಡಿದು ಓಲಾಡುತ್ತಿದ್ದರು

ನಾನು ಚಿಕ್ಕಂದಿನಿಂದಲೂ ಸಸ್ಯಹಾರಿಯಾಗಿಯೇ ಬೆಳೆದವನು. ಆದರೆ ಅದನ್ನು ನನ್ನ ಮಟನ್ ಆರಾಧಕ  ಸಂಬಂದಿಕರು ಒಪ್ಪಿಕೊಳ್ಳಲು ತಯಾರಿರಲಿಲ್ಲ. ತಮ್ಮಲ್ಲಿಯೇ ಒಬ್ಬ ಸಸ್ಯಹಾರಿ ಬದುಕುತ್ತಿರುವು ಅವರಿಗೆ ತಲೆಕೆಡಿಸಿರಬೇಕು, ಅದಕ್ಕಗಿಯೇ ಅವರು ನನಗೆ ಎಲ್ಲರಂತೆ ನಾನೂ ಮಾಂಸ ತಿನ್ನಬೇಕೆಂದು ಬಲವಂತ ಮಾಡುತ್ತಿದ್ದರು. ನಾನು ಒಪ್ಪುವುದಿಲ್ಲವೆಂದು ಎಲ್ಲರಿಗೂ ಗೊತ್ತಿದ್ದ ವಿಷಯವಾದರೂ, ಸಾರಿ ಯಾಕೊ ಎಲ್ಲರೂ ಹದ್ದುಮೀರಿ ಬಲವಂತ ಮಾಡುತ್ತಿದ್ದದ್ದರಿಂದ ನನಗೂ ಸಹನೆ ಮೀರಿತು. ಅವರನ್ನೆಲ್ಲ ಒಮ್ಮೆ ಸರಿಯಾಗಿ ಉಗಿದು ಝಾಡಿಸಬೇಕು ಎಂದು ಅನ್ನಿಸಿದರೂ ಎಲ್ಲರ ಮುಂದೆ ಹಾಗೆ ಮಾಡುವುದು ಸೂಕ್ತವಲ್ಲ ಎಂದು ಸುಮ್ಮನಾದೆ. ಆದರೆ ಅಲ್ಲಿರಲು ಮನಸ್ಸಾಗದೆ ಅಣ್ಣನಿಗೆ ನನ್ನನ್ನು ಮನೆಗೆ ಕರೆದುಕೊಂಡುಹೋಗುವಂತೆ ಕೇಳಿಕೊಂಡೆ. ಅಂದು ರಾತ್ರಿ ಕುಡುಕರೆಲ್ಲರ ಸಮಾವೇಶ ಬೇರೆ ಇದ್ದುದರಿಂದ ನನಗೆ ಅಲ್ಲಿಯೇ ಉಳಿದುಕೊಳ್ಳುವುದು ಸಮಂಜಸವೆನಿಸಲಿಲ್ಲ. ನನ್ನ ಕಷ್ಟ ಅರ್ಥ ಮಾಡಿಕೊಂಡವನಂತೆ ಅವನು ಒಪ್ಪಿಕೊಂಡ. ಅವನು ಊಟ ಮಾಡಿದ ನಂತರ ನಾವು ಬೈಕಿನಲ್ಲಿ ಮನೆಗೆ ಹೋಗುವುದೆಂದು ತೀರ್ಮಾನಿಸಿದೆವು. ಹಾಗೆ ನಾವು ಹೊರಟಿದ್ದು ಯಾರಿಗೂ ಇಷ್ಟವಾಗಲಿಲ್ಲ. ಅಲ್ಲಿದ್ದ ಹೆಣ್ಣುಮಕ್ಕಳನ್ನು ಬಿಟ್ಟರೆ ಉಳಿದವರಾರು ನಾವು ಹೋಗುತ್ತಿರುವುದನ್ನು ಕಂಡರೂ ಮಾತನಾಡದಷ್ಟು ಕುಡಿದಿದ್ದರು. ಅಮ್ಮ, ಚಿಕ್ಕಮ್ಮಂದಿರೆಲ್ಲ ಸೇರಿ ನನ್ನನ್ನು ತಡಿಯಲು ಬಹಳ ಪ್ರಯತ್ನ ಪಟ್ಟರು. ಆದರೆ ನಾನಾಗಲೇ ಮನಸು ಮಾಡಿಯಾಗಿತ್ತು. ಅಮ್ಮ ನನ್ನ ಮೇಲೆ ಕೋಪಮಾಡಿಕೊಂಡು ಏನಾದರೂ ಮಾಡಿಕೊ ಹೋಗು ಎಂದು ಬಿಟ್ಟುಬಿಟ್ಟರು.

ಎಲ್ಲಾ ಕೆಲಸಗಳನ್ನು ಮುಗಿಸಿ ನಾವು ಹೊರಡುವ ಹೊತ್ತಿಗೆ ರಾತ್ರಿ ಸುಮಾರು ೧೧:೩೦. ನಾನು ನನ್ನ ಹಟ ಬಿಡುವುವವನಲ್ಲ ಎಂದು ಗೊತ್ತಿದ್ದ ಅಪ್ಪನೂ ಕೂಡ ಸುಮ್ಮನಾಗಿಬಿಟ್ಟರು. ಮತ್ತು ನಾನಿದ್ದರೆ ಕುಡುಕರ ಸಮಾವೇಶಕ್ಕೆಲ್ಲಿ ಧಕ್ಕೆಯಾಗುವುದೋ ಎಂದೆನಿಸಿರಬೇಕು. ಒಂದೊಮ್ಮೆ ಬೇಡ ಎನ್ನುವಂತೆ ಮಾಡಿ ಹೊರಟುಹೋದರು. ಅಷ್ಟರಲ್ಲಾಗಲೇ ಕುಡುಕರ ಹಾಡುಗಳು ಶುರುವಾಗಿದ್ದು ನನಗೆ ಇಲ್ಲಿಂದ ಆದಷ್ಟು ಬೇಗ ಹೊರಟು ಮನೆ ಸೇರಿದರೆ ಸಾಕು ಎನ್ನಿಸಿಬಿಟ್ಟಿತ್ತು. ಕೊನೆಗೆ ಎಲ್ಲರೂ ತುಂಬಾ ಒಳ್ಳೆಯವರಂತೆ ವರ್ತಿಸಿ ನಾವು ಹೊರಟಾಗ ತಮ್ಮ ತಮ್ಮದೇ ರೀತಿಯಲ್ಲಿಹುಶಾರಾಗಿ ಹೋಗಿಬನ್ನಿ” ಎಂದರು. ಅವರನ್ನೆಲ್ಲಾ ಹಿಂದಿಕ್ಕಿ ನಮ್ಮ ಬೈಕು ಮುಂದೆ ಹೊರಟಿತು


ಬೈಕಿನಲ್ಲಿ ಮನೆ ಮುಟ್ಟಲಿಕ್ಕೆ ನನಗೆ ೧೦ ನಿಮಿಷಕ್ಕಿಂತ ಜಾಸ್ತಿ ಬೇಕಿರಲಿಲ್ಲ. ಆದರೆ ನನಗೆ ಒಂದೇ ಭಯವಿದ್ದುದೆಂದರೆ ಈ ಬೈಕ್ ಏನಾದರು ಮದ್ಯೆದಲ್ಲಿ ಕೆಟ್ಟು ನಿಂತರೆ ನಮ್ಮ ಕಥೆಯೇನು ಎಂದು. ಅಣ್ಣನಿಗೆ ಈ ರಸ್ತೆಯೇನು ಹೊಸದಲ್ಲ. ಇಲ್ಲಿಯೇ ದಿನಾ ಸೈಕಲ್ ಹೊಡಿಯೋ ಇವನನ್ನು ನಂಬಿಯೇ ನಾನು ನಡುರಾತ್ರಿಯಲ್ಲಿ ವಾಪಾಸ್ ಹೋಗೋ ಸಾಹಸಕ್ಕೆ ಕೈಹಾಕಿದ್ದು. ನಾವು ರಾಮಗಿರಿಯ ಬೆಟ್ಟವನ್ನು ಸುತ್ತಿ ಮನೆ ತಲುಪಬೇಕಿತ್ತು. ನನಗೇ ಸರಿಯಾಗಿ ತಿಳಿದ ಹಾಗೆ ರಾಮಗಿರಿಯ ಬೆಟ್ಟದಲ್ಲಿ ಒಂದು ಚಿರತೆ ಮತ್ತು ಎರಡು ಕರಡಿಗಳು ವಾಸವಾಗಿದ್ದವು. ಅವುಗಳನ್ನು ನಾನೇ ಕಣ್ಣಾರೆ ಕಂಡಿದ್ದೆ ಕೂಡಾ. ಆದ್ದರಿಂದ ನಾವು ಆದಷ್ಟು ಎಚ್ಚರಿಕೆಯಿಂದ ಇರಬೇಕಿತ್ತು. ಆದರೆ ನಮ್ಮ ಬೈಕಿನ ಶಬ್ದ ಎಷ್ಟಿತ್ತೆಂದರೆ, ಚಿರತೆ ನಮ್ಮ ಪಕ್ಕದಲ್ಲೇ ಘರ್ಜಿಸಿದರೂ ನಮಗೆ ಖಂಡಿತವಾಗಿಯೂ ಕೇಳಿಸುತ್ತಿರಲಿಲ್ಲ. ನನಗೆ ತಿಳಿದಿರುವ ಪ್ರಕಾರ ಬೈಕ್ ಶಬ್ದ ಕೇಳಿ ಅಲ್ಲಿನ ಕರಡಿ ಚಿರತೆಗಳು ಅಂದು ತಮ್ಮ ಗವಿಯಿಂದ ಹೊರಬರುವುದೇ ಅನುಮಾನ. ನಾವು ಕಾಡುಪ್ರಾಣಿಗಳಿಗೆ ಹೆದರದಿದ್ದರೂ ಕತ್ತಲೆಯ ಗವಿಯಂತಿದ್ದ ನಮ್ಮ ಸುತ್ತಮುತ್ತಲಿಗೆ ಹೆದರಬೇಕಿತ್ತು. ನಮ್ಮ ಪಾಲಿಗೆ ಸದ್ಯದ ಬೆಳಕೆಂದರೆ ಅದು ಬೈಕಿನ ಹೆಡ್ಲೈಟಿನಿಂದ ಬರುತ್ತಿದ್ದ ಬೆಳಕು ಮಾತ್ರ. ಅದೋ ಸಣ್ಣ ಬ್ಯಾಟರಿಗಿಂತಲೂ ಕಡೆಯಾಗಿತ್ತು. ನಮ್ಮ ಬಳಿ ಮೊಬೈಲುಗಳಿದ್ದರೂ, ಅವುಗಳ ಬೆಳಕು ಎಲ್ಲಿಗೂ ಸಾಕಾಗುತ್ತಿರಲಿಲ್ಲ

ಅದೇನು ಚಳಿಗಾಲದ ರಾತ್ರಿಯಾಗಿರಲಿಲ್ಲ. ಹಾಗಾಗಿ ನಾನು ಅಂತಹ ಗಾಳಿಯನ್ನೇನೂ ನಿರಿಕ್ಷಿಸಿರಲಿಲ್ಲ. ನಾವು ಸ್ವಲ್ಪ ದೂರ ಬಂದು ರಾಮಗಿರಿ ಬೆಟ್ಟದ ತಿರುವುಗೆ ಬರುವಷ್ಟರಲ್ಲಿ ಗಾಳಿ ವೇಗವಾಗಿ ಬೀಸಲು ಶುರುವಾಯ್ತು. ರಾತ್ರಿಯಾದ್ದರಿಂದ ಹುಳಗಳು ಗಾಳಿಯಲ್ಲಿ ಕಣ್ಣಿಗೆ ಬಡೆಯುತ್ತಿದ್ದವು. ಅಣ್ಣನ ಕಣ್ಣಿಗೆ ಎನೋ ಬಿದ್ದಿರಬೇಕು, ಅವನು ಕಣ್ಣು  ಉಜ್ಜಿಕೊಳ್ಳುತ್ತಾ  ಬೈಕ್ ನಿಧಾನ ಮಾಡಿದ. ಕೊನೆಗೆ ಒಂದು ಕಡೆ ಬೈಕ್ ನಿಲ್ಲಿಸಿಬಿಟ್ಟ. ಆಗ ನನಗೆ ಒಂದು ವಿಚಿತ್ರವಾದ ಯೋಚನೆ ಬಂತು. ಗಾಳಿ ಬೆಟ್ಟದ ಕಡೆಯಿಂದಲೇ ಬೀಸುತ್ತಿತ್ತು. ಬೆಟ್ಟದ ಮೇಲೆ ಮರಗಳಿರಲಿಲ್ಲ, ಇದ್ದುದೆಲ್ಲ ಸಣ್ಣ ಪೊದೆಗಳಷ್ಟೇ. ಆದರೂ ಇಷ್ಟೊಂದು ಗಾಳಿ ಬೀಸುತ್ತಿದ್ದುದಾದರೂ ಹೇಗೆ ಎಂದು ನಾನು ಯೋಚನೆಯಲ್ಲಿ ಮುಳುಗಿದೆ. ಚಂದ್ರನ ಬೆಳಕೂ ಇರಲಿಲ್ಲ. ಇದ್ದಕ್ಕಿದ್ದಂತ ಎಲ್ಲಿಂದಲೋ ಓಡಿಬಂದಂತೆ ಮೋಡಗಳು ಬಂದುದರಿಂದ ಕತ್ತಲು ಹೆಚ್ಚಾಯ್ತು. ನಾನಿನ್ನೂ ಸುತ್ತಮುತ್ತಲಲ್ಲಿ ನಡೆಯುತ್ತಿರುವ ವಿಚಿತ್ರ ಘಟನಾವಳಿಗಳ ಯೋಚನೆಯಲ್ಲೇ ಮುಳುಗಿರುವಾಗ ನಮ್ಮ ಬೈಕೆ ಧುಪ್-ಧುಪ್ ಎಂದು ಶಬ್ದ ಮಾಡುತ್ತಾ ನಿಂತುಹೊಯ್ತು. ಎಂತಹ ಕಗ್ಗತ್ತಲೆಂದರೆ ನನ್ನೆದುರೇ ಕುಳಿತಿದ್ದ ಅಣ್ಣನೇ ಕಾಣಲಿಲ್ಲ!!! ಅವನು ಅಲ್ಲಿಯೇ ಇದ್ದಾನೆಯೋ ಇಲ್ಲವೋ ಎಂದು ತಿಳಿಯಲು ಅವನನ್ನು ಮುಟ್ಟಿ ನೊಡಬೇಕಾಯ್ತು. ಇಷ್ಟು ಹೊತ್ತು ನಾವು ಎಂತಹ ಕತ್ತಲ ಸಾಮ್ರಾಜ್ಯದಲ್ಲಿದ್ದೆವು ಎಂಬುದು ನಮಗೆ ಅರಿವಾದದ್ದು ಆಗಲೇ. ಅಣ್ಣ ತಕ್ಷಣವೇ ಕಣ್ಣು ಉಜ್ಜಿಕೊಳ್ಳುವುದನ್ನು ಬಿಟ್ಟು ಬೈಕ್ ಸ್ಟಾರ್ಟ್ ಮಾಡಲು ಶುರುಮಾಡಿದ. ಅವನು ಬೈಕ್ ಸ್ಟಾರ್ಟ್ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಒಂದೆರಡು ಸಾರಿ ಧುಪ್-ಧುಪ್ ಎಂದು ಸುಮ್ಮನಾಗಿಬಿಡುತ್ತಿತ್ತು. ನಾನು ನನ್ನ ಮೊಬೈಲ್ ಹೊರತಗೆದು ಸ್ವಲ್ಪ ಮಟ್ಟಿಗಾದರೂ ಬೆಳಕು ಮಾಡಿದೆ. ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡಮೇಲೆ ಸ್ವಲ್ಪ ಮನಸ್ಸಿಗೆ ಸಮಧಾನವಾಯ್ತು

ನಡುರಾತ್ರಿಯಲ್ಲಿ ಬೈಕ್ ಕೈಕೊಟ್ಟಿದ್ದು ನಮಗೆ ಕಳವಳಕಾರಿಯಾಗಿತ್ತು. ನಾವೇನು ತುಂಬಾ ದೂರ ಬಂದಿರಲಿಲ್ಲ. ಒಂದು ಕಿಲೋಮೀಟರು ಹಿಂದೆ ನಡೆದರೆ ಮತ್ತದೇ ಪೂಜೆ ಜಾಗ ಸೇರುತ್ತಿದ್ದೆವು. ಎರಡು ಕಿಲೋಮೀಟರು ಮುಂದೆ ಹೋದರೆ ನಮ್ಮ ಊರಿತ್ತು.  ಆದರೆ ದೆವ್ವ ಭೂತಗಳಲ್ಲಿ ಅಪಾರ ನಂಬಿಕೆಯುಳ್ಳ ಅಣ್ಣ ಹೆದರಿದಂತಿದ್ದ. ಬೈಕ್ ಸ್ಟಾರ್ಟ್ ಆಗಲೆಂದು ನಾನು ಬೈಕಿನಿಂದ ಕೆಳಗಿಳಿದು ನಿಂತೆ. ಅಣ್ಣ ಬೈಕ್ ಸ್ಟಾರ್ಟ್ ಮಾಡುತ್ತಿರುವ ಶಬ್ದ ಬಿಟ್ಟರೆ ಬೇರೊಂದು ಕ್ರಿಮಿ-ಕೀಟದ ಸುಳಿವಿಲ್ಲ.  ಅವನೇನಾದರೂ ಬೈಕ್ ಸ್ಟಾರ್ಟ್ ಮಾಡುವುದನ್ನು ನಿಲ್ಲಿಸಿಬಿಟ್ಟರೆ ಅವನಿದ್ದಾನೆ ಎಂದು ಹೇಳುವುದು ಅಸಾಧ್ಯವಾಗುತ್ತಿತ್ತು. ನನ್ನ ಸಮಾಧಾನಕ್ಕೋ ಎಂಬಂತೆ ಅವನೂ ಅದೂ ಇದೂ ಶಬ್ದ ಮಾಡುತ್ತಿದ್ದ .

ಯಾವಾಗ ಬೈಕ್ ಎಷ್ಟು ಕಿಕ್ ಹೊಡೆದರೂ ಸ್ಟಾರ್ಟ್ ಅಗಲಿಲ್ಲವೋ, ಅಣ್ಣನ ಚಡಪಡಿಕೆ ನಿದಾನವಾಗಿ ಗೋಚರಿಸಲಾರಂಭಿಸಿತು. ಭಯಕ್ಕೋ
ಏನೋ ಎಂಬಂತೆ ತುಂಬಾ ಅವಸರ ಮಾಡುತ್ತಿದ್ದ. ಅವನನ್ನು ಸುಧಾರಿಸಲೆಂಬಂತೆ  ಅವನಿಂದ ಬೈಕೆ ತೆಗೆದುಕೊಂಡು ಅದನ್ನು ನಾನೇ ಸ್ಟಾರ್ಟ್ ಮಾಡಲು ಮುಂದಾದೆ. ನಾನು ಹೊಡೆದ ಮೊದಲನೆಯ ಕಿಕ್ಕಿಗೇ ಬೈಕ್ ಜೋರಾಗಿ ಮುಂದೆಬಂತು. ಬೈಕ್ ಗೇರಿನಲ್ಲೇ ಇರಬೇಕು ಎಂದುಕೊಂಡು ಅದನ್ನು ನ್ಯೂಟ್ರಲ್ಲಿಗೆ ಹಾಕಲು ನೋಡಿದಾಗ ಅದು ಸರಿಯಾಗಿ ನ್ಯುಟ್ರಲ್ಲಿನಲ್ಲಿಯೇ ಇದ್ದುದು ತಿಳಿದು ಬಂತು. ನಾನು ಮತ್ತೊಂದು ಕಿಕ್ ಹೊಡೆಯಲು ಇನ್ನೂ ಕಾಲು ಎತ್ತಿದ್ದೆ ಅಷ್ಟೆ, ಯಾರೋ ತಳ್ಳಿದಂತೆ ಬೈಕ್ ಮುಂದೆಬಂತು. ನಾನು ಬೈಕನ್ನು ಬೀಳದಂತೆ ಹಿಡಿದು ನಿಲ್ಲಿಸಿ ಕೆಳಗಿಳಿದುಬಿಟ್ಟೆ. ರಭಸಕ್ಕೆ ನಾನು ಬೀಳದಿದ್ದುದೇ ದೊಡ್ಡದು. ನಾನು ಅಣ್ಣನೇ ಬೈಕ್ ಹಾಗೆ ದಬ್ಬಿರಬೇಕು ಎಂದುಕೊಂಡು ಅವನಿಗೆ ಬಯ್ಯುವುದರಲ್ಲಿದ್ದೆನಾನುಯಾಕೋ ಹಾಗೆ ದಬ್ಬುತಾ ಇದ್ದೀಯ? ಹೇಳಿಯಾದ್ರು ಮಾಡುಎಂದು ಹೇಳುವುದಕ್ಕೂ ಅವನು  “ನ್ಯೂಟ್ರಲ್ ಮಾಡು ನ್ಯೂಟ್ರಲ್ ಮಾಡುಅಂತ ಕಿವಿಯ ಪಕ್ಕದಲ್ಲಿಯೇ ನಿಂತು ಹೇಳುವುದಕ್ಕೂ ಸರಿ ಹೊಯ್ತು. ನಾನು ಏನೂ ಹೆಚ್ಚಿಗೆ ಯೋಚನೆ ಮಾಡದೇ ಮೊಬೈಲ್ ಲೈಟ್ ಆನ್ ಮಾಡಿ ನೋಡಿದರೆ ನಾನು ಅವನಿಗಿಂತ ಅಂದಾಜು ೧೦ ಗಜ ಮುಂದೆ ನಿಂತಿದ್ದೆ. ಮೊದಲೇ ಹೆದರುವಂತಿದ್ದ ಸನ್ನಿವೇಶಕ್ಕೂ ಬೈಕ್ ಅನಾಮತ್ತಾಗಿ ಅಷ್ಟು ಮುಂದೆ ಬಂದದ್ದಕ್ಕೂ, ನನ್ನ ಮನಸ್ಸು ಎಲ್ಲಾ ತರ್ಕಗಳನ್ನು ಮರೆತು ಮನುಷ್ಯ ಸಹಜ ಗುಣಗಳಾದ ಭಯ ಮತ್ತು ಅಂಜಿಕೆಗಳಲ್ಲಿ ಮುಳುಗಿ ಹೋಯಿತು.

ಇಬ್ಬರೂ
ಮೊಬೈಲ್ ಬೆಳಕಿನಲ್ಲಿಯೇ ಒಬ್ಬರನ್ನೊಬ್ಬರು ನೋಡುತ್ತಾ ನಿಂತುಬಿಟ್ಟೆವು. ಆಗಿನ ಕ್ಷಣದ ನಮ್ಮ ಆಲೋಚನೆಗಳನ್ನು ಪದಗಳಲ್ಲಿ ವರ್ಣಿಸುವು ಅಸಾದ್ಯ. ಅಣ್ಣನ ಕಣ್ಣುಗಳಲ್ಲಿ ಭಯ ರುದ್ರತಾಂಡವವಾಡುತ್ತಿತ್ತು. ಬೈಕ್ ಹಾಗೆ ಮುಂದೆ ಹೋಗುವಂತೆ ತಳ್ಳಲು ಅಣ್ಣನಿಗೆ ಸಾಧ್ಯವೇ ಇರಲಿಲ್ಲ. ಅವನು ತಳ್ಳಿದ್ದಾನೆ ಎಂದು ನನಗೆ ಅನ್ನಿಸಲೂ ಇಲ್ಲ. ಹಾಗಾದರೆ ನಡೆದ್ದದ್ದೆನು? ಬೈಕ್ ಯಾಕೆ ಹಾಗೆ ಮುಂದೆ ಹೋಯಿತು? ನನ್ನ ತಲೆಯಲ್ಲಿ ಪ್ರಶ್ನೆಗಳು ತಲೆಯೆತ್ತಿದವು. ಇದೇನಾದರೂ ದೆವ್ವ ಭೂತಗಳ ಕೆಲಸವೇ ಎಂದು ಅನಿಸಿದ್ದು ಉಂಟು. ಅದೇನಾದರೂ ಇದ್ದುದೇ ಆದರೂ ಅದನ್ನು ಅಣ್ಣನ ಮುಂದೆ ಹೇಳುವಂತಿರಲಿಲ್ಲ. ಹಾಗೇನಾದರೂ ನಾನು ಹೇಳಿದ್ದೇ ಆದರೆ, ಅಣ್ಣ ನನ್ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗುವ ಎಲ್ಲಾ ಸಾಧ್ಯತೆಗಳೂ ಇದ್ದವು. ಮೊಬೈಲ್ ಬೆಳಕಿನಲ್ಲಿ ನಾನು ಅವನ ಮುಂದೆ ನಿಂತು ಇಷ್ಟೆಲ್ಲಾ ಯೋಚಿಸುತ್ತಿರುವಾಗ ಅವನು ನನ್ನ ಮುಖವನ್ನೆ ದಿಟ್ಟಿಸುತ್ತಾ ನೋಡುತ್ತಿದ್ದ. ಒಂದು ಕ್ಷಣ ನನಗೆ ಇವನಿಗೇನಾದರೂ ದೆವ್ವ ಮೆಟ್ಟುಕೊಂಡಿತೇ ಎಂಬ ಯೋಚನೆಯೋ ಬಂತು. ಆದರೆ ನಾನು ಎಷ್ಟೇ ಕಷ್ಟವಾದರೂ  ನನ್ನ ಹೆದರಿಕೆಯನ್ನು ತೋರಿಸುವುದಿಲ್ಲ ಎಂದು ಮನಸ್ಸಿನಲ್ಲಿಯೇ ತೀರ್ಮಾನ ಮಾಡಿಕೊಂಡೆ

  ಏನು ನಡೆದೇಯಿಲ್ಲವೇನೋ ಎಂಬಂತೆ ಛೇ...ಎಂತಹ ಧರಿದ್ರ ಬೈಕಿದು. ಈಗ ಇದನ್ನು ಮನೆಯವರೆಗೂ ದಬ್ಬಿಕೊಂಡು ಹೋಗಬೇಕಾದಂತಹ ಕರ್ಮ ಬಂತಲ್ಲ. ಅಣ್ಣಾ, ಮುಂದಿನ ಬಾರಿ ಒಳ್ಳೆಯ ಬೈಕಿದ್ದರೆ ಮಾತ್ರ ತಗೊಂಡು ಬಾ.” ಎಂದೆ. ಸುತ್ತಲಿನ ಮೌನ ಮುರಿದಂತಾಗಿ ನಾನು ಹೇಳಿದ್ದು ಕತ್ತಲಲ್ಲಿ ಕರ್ಕಶವಾಗಿ ಕೇಳಿತುಅದಕ್ಕವನು ಹೂ ಎನ್ನಲಿನ್ನ ಎನ್ನಲಿಲ್ಲ. ನನಗೆ ಅವನ ಮೌನ ಅಂತಹ ಸಮಯದಲ್ಲೂ ಹಾಸ್ಯಾಸ್ಪದವಾಗಿ ಕಂಡಿತು. ಖಂಡಿತವಾಗಿಯೂ ಬಹಳ ಹೆದರಿದ್ದಾನೆ ಎಂದು ಗೊತ್ತಾಯ್ತು. ಇನ್ನು ನಾನೂ ಹೆದರಿದ್ದೇನೆ ಎಂದು ಅವನಿಗೆ ಗೊತ್ತಾದರೆ ಕೆಲಸ ಕೆಡುತ್ತದೆ ಎಂದರಿತು ಮತ್ತೆ ಬೈಕ್ ಸ್ಟಾರ್ಟ್ ಮಾಡಲು ಮುಂದಾದೆ. ಬಾರಿ ಬೈಕ್ ಅಲ್ಲಿಯೇ ಇದ್ದು ಒಮ್ಮೆ ಧುಪ್ ಎಂದು ಮತ್ತೆ ಆಫ್ ಆಯಿತು. ನನಗೆ ಮನದೊಳಗೆ ಸಮಾಧಾನವಾಯ್ತು. ಸುಮ್ಮಸುಮ್ಮನೆ ಏನೆಲ್ಲಾ ಯೋಚಿಸಿಬಿಟ್ಟೆ ಎಂದು ನನ್ನ ಬಗ್ಗೆ ನಾನೇ ಮನದಲ್ಲಿ ನಕ್ಕೆ. ಕತ್ತಲಲ್ಲಿ ಅಣ್ಣನಿಗೆ ಇದು ಗೊತ್ತಾಗಿರಲಿಕ್ಕಿಲ್ಲ. ಅವನಿನ್ನೂ ಮೊಬೈಲ್ ಆನ್ ಮಾಡಿಟ್ಟುಕೊಂಡು ದೆವ್ವದಂತೆ ನಿಂತೇ ಇದ್ದ. ನಾನು ಮತ್ತೆಷ್ಟು ಪ್ರಯತ್ನಿಸಿದರೂ ಬೈಕ್ ಕ್ಯಾರೇ ಎನ್ನಲಿಲ್ಲ. ಕೊನೆಗೆ ನನಗೆ ಕಾಲು ನೋವೇ ಬಂತು. ಸರಿ, ಇನ್ನು ಇದನ್ನು ಸ್ಟಾರ್ಟ್ ಮಾಡುವುದು ಆಗದ ಮಾತು ಎಂದರಿತು, ಅಪ್ಪನಿಗೆ ಫೋನ್ ಮಾಡುವುದಕ್ಕೆ ಮೊಬೈಲ್ ತೆಗೆದೆ. ಆದರೆ ಸಿಗ್ನಲ್ ಇರಲಿಲ್ಲ

ನಾನು ಕೊನೆಯಬಾರಿಯೆನೆಂಬಂತೆ
ಮತ್ತೆರೆಡು ಬಾರಿ ಬೈಕ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದೆ. ಉಹೂಂಏನು ಉಪಯೋಗವಿಲ್ಲ. ನಾನು ಅದರಲ್ಲಿ ಪೆಟ್ರೋಲ್ ಇದೆಯೊ ಎಂದು ತಿಳಿಯಲು ಜೋರಾಗಿ ಅಲ್ಲಾಡಿಸಿ ನೋಡಿದೆ. ಅದರಲ್ಲಿನ ಪೆಟ್ರೋಲ್ ಜೋರಾಗಿ ಕುಲುಕಿದಂತೆ ಶಬ್ದಮಾಡಿತು. ನಾನು ಮತ್ತೊಮ್ಮೆ ಪ್ರಯತ್ನ ಮಾಡಲು ರೆಡಿಯಾಗುತ್ತಿದ್ದೆಯಷ್ಟೆ, ಅಷ್ಟರಲ್ಲಿ ದೂರದಲ್ಲೆಲ್ಲೋ ಯಾರೊ ಕಿಟಾರನೆ ಕಿರುಚಿದಂತಾಯ್ತು. ನನಗಂತೂ ಮೈ ಒಮ್ಮೆ ಜುಂ ಎಂದಿತು. ನಾವಿಬ್ಬರು ಎಲ್ಲವನ್ನೂ ಮರೆತು, ಶಬ್ದ ಬಂದ ಕಡೆಗೆ ಭಯದ ಕಂಗಳಿಂದ ನೋಡಿದೆವು. ಕಗ್ಗತ್ತಲ ಕಾನನದಲ್ಲಿ ಏನೂ ಕಾಣಲಿಲ್ಲ. ಶಬ್ದ ಬಂದ ಕಡೆಗೆ ನಾವಿಬ್ಬರೂ ತಿರುಗಿನೋಡುವಷ್ಟರಲ್ಲಿ ಇನ್ನೊಂದು ಕಡೆಯಿಂದ ಸ್ವಲ್ಪ ಹತ್ತಿರದಲ್ಲಿಯೇ ಯಾರೋ ಮತ್ತದೇ ಕಂಠದಿಂದ ಕೂಗಿದಂತಾಯ್ತು. ನಮಗಿನ್ನೂ ಏನಾಯಿತು ಎಂದು ತಿಳಿಯುವಷ್ಟರಲ್ಲಿ ಮತ್ತೊಮ್ಮೆ ಜೋರಾಗಿ ಯಾರೋ ಬೈಕಿನ ಮುಂದಿನ ದಿಕ್ಕಿನಲ್ಲಿ ತುಂಬಾ ಹತ್ತಿರದಿಂದಲೇ ಕಿರುಚಿದಂತಾಯ್ತು. ನಮ್ಮ ಜಂಘಾಬಲವೆಲ್ಲ ಅಲ್ಲಿಗೆ ಛಿದ್ರವಾಗಿ ನಾವಿಬ್ಬರು ಒಂದು ಕ್ಷಣ ಶಿಲೆಗಳಾಗಿಬಿಟ್ಟೆವು. ಅಷ್ಟು ಕರಾಳವಾದ ರಾತ್ರಿಯಲ್ಲಿ ಅದರಲ್ಲೂ ಊರಿನಿಂದ ಅಷ್ಟು ದೂರದಲ್ಲಿ ಯಾರೋ ಕಿರುಚುವುದಾರೆ ಏನಾಗಬೇಡ ಮನುಷ್ಯ ಮಾತ್ರ ಪ್ರಾಣಿಗೆ ! ಅದೂ ಒಮ್ಮೆ ಹಿಂದಿನಿಂದ, ಮತ್ತೊಮ್ಮೆ ಮುಂದಿನಿಂದ. ಅಘೋರಾತ್ರಿಯಲ್ಲಿ, ಕಗ್ಗತ್ತಲ ಕಾನನದಲ್ಲಿ ನಡೆದ ಈ ಸಂಗತಿಗಳು ನನಗೆ ಮನುಷ್ಯ ಮಾತೃನಿಂದ ಆದದ್ದು ಅನ್ನಿಸಲೇ ಇಲ್ಲ. ನಾನು ರಾಮಗಿರಿ ಬೆಟ್ಟದ ಭೂತದ ಕಥೆಗಳನ್ನು ತುಂಬಾ ಕೇಳಿದ್ದೆ. ಆದರೆ ಅವುಗಳೆಲ್ಲಾ ಕಟ್ಟುಕಥೆಗಳೆಂದು ನಿರ್ಲಕ್ಷೆ ಮಾಡಿದ್ದೆ. ನನ್ನ ಈಗಿನ ಪರಿಸ್ತಿತಿಯನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾದ ಯಾವ ಸಿದ್ಧಾಂತವನ್ನು ತಾಳೆಹಾಕಿ ನೋಡಬೇಕೋ ತಿಳಿಯದಂತಾಯ್ತು.
ಇನ್ನೂ ಏನೂ ಆಗಿಯೇ ಇಲ್ಲದವನಂತೆ ಇರುವುದು ಅಸಾದ್ಯವಾಗಿತ್ತು. ನಾನು ಬೈಕಿನಿಂದ ಇಳಿದು ಅಣ್ಣನನ್ನೊಮ್ಮೆ ದಿಟ್ಟಿಸಿದೆ. ಅವನು ನನ್ನನ್ನೇ ಕಣ್ಣು ದೊಡ್ಡದಾಗಿ ಮಾಡಿಕೊಂಡು ನೋಡುತಿದ್ದೆ. ನಿಜ ಹೇಳಬೇಕೆಂದರೆ ನನಗೀಗ ದೂರದ ದೆವ್ವಕ್ಕಿಂತ ಪಕ್ಕದಲ್ಲಿರುವ ಅಣ್ಣನನ್ನು ನೋಡಿಯೇ ಜಾಸ್ತಿ ಭಯವಾಗುತ್ತಿತ್ತು. ಇದೆಲ್ಲದರ ನಡುವೆ ನಾನು ಮತ್ತೊಂದು ವಿಚಿತ್ರವನ್ನು ಗಮನಿಸಿದೆ. ನಮ್ಮ ಸುತ್ತಲೂ ಅಸಾದ್ಯವಾದ ಕತ್ತಲಿದ್ದುದು ಸರಿಯೇ ಆಗಿತ್ತು. ಆದರೆ ಕತ್ತಲಿನಲ್ಲಿನ ಅಸಾದ್ಯ ಮೌನ ನನ್ನನ್ನು ಕಂಗಾಲಾಗಿಸಿತು. ರಾತ್ರಿಯಲ್ಲಿ ಹಲವಾರು ಕೀಟಗಳು ಶಬ್ದ ಮಾಡುತ್ತವೆ, ಕಪ್ಪೆಗಳು ಉಟುರುತ್ತವೆ, ಬಾವಲಿಗಳು ಚೀರುತ್ತವೆ. ಆದರೆ ಅಲ್ಲಿ ಮಾತ್ರ ಅದ್ಯಾವುದೂ ಇರಲಿಲ್ಲ. ಇಲ್ಲಿ ಯಾವುದೇ ಕೀಟಗಳೂ ಇಲ್ಲವೇ? ಇದು ಹೇಗೆ ಸಾದ್ಯ??!! ಆಲೋಚನೆಗಳು ನನ್ನನ್ನು ಪೂರ್ತಿಯಾಗಿ ಆವರಿಸಲು ನಾನು ಬಿಡಬಾರದು ಎಂದುಕೊಂಡು ಬೈಕನ್ನು ಸ್ಟಾರ್ಟ್ ಮಾಡುವುದರ ಬಗ್ಗೆ ಯೋಚನೆ ಮಾಡತೊಡಗಿದೆ. ಪರಿಸ್ಥಿತಿ ಕೈಮೀರುವುದಕ್ಕೆ ನನಗೆ ಇನ್ನು ಕೆಲವೇ ನಿಮಿಷಗಳು ಉಳಿದಿವೆ ಎಂದು ಗೊತ್ತಾಯ್ತು. ಇಂತಹ ಸಮಯದಲ್ಲಿ ಮೈಮರೆತರೆ ಕಥೆ ಮುಗಿದಂತೆಯೇ ಎಂದು ಅಣ್ಣನ ಕೈಹಿಡಿದು ಅವನನ್ನು ಹತ್ತಿರ ಎಳೆದುಕೊಂಡೆ. ಅವನು ಓಡಿಹೋಗಬಾರದೆಂದು! ಅವನು ಥರಥರನೇ ನಡುಗುತ್ತಿರುವುದು ಅವನ ಕೈ ಹಿಡಿದಾಗ ಗೊತ್ತಾಯ್ತು. ಮಹಾನ್ ದೈವಭಕ್ತನೇ ಹೀಗಾದರೆ ನನ್ನ ಕಥೆಯೇನು! ನಾನು ಹಲವಾರು ಬಾರಿ ಬುಲ್ಲೆಟ್ ಬೈಕನ್ನು ಜನರು ದಬ್ಬಿ ಸ್ಟಾರ್ಟ್ ಮಾಡಿರುವುದನ್ನು ನೋಡಿದ್ದೆ. ಅದನ್ನೂ ಒಮ್ಮೆ ಮಾಡಿನೋಡಿಬಿಡೋಣವೆಂದು ಅಣ್ಣನಿಗೆ ದಬ್ಬಲು ಹೇಳಿದೆ. ಅದೃಷ್ಟಕ್ಕೆ ಅವನು ಏನೂ ಮಾತನಾಡದೆ ಬಂದು ಬೈಕ್ ದಬ್ಬಲು ಶುರು ಮಾಡಿದ. ಅವನೇನಾದರೂ ನಾನು ಹೇಳಿದ್ದನ್ನು ಕೇಳದೆ ಹಾಗೇ ನನ್ನು ನೋಡುತ್ತಾ ನಿಂತಿದ್ದಾ ಎಂದರೆ ಖಂಡಿತವಾಗಿಯೂ ಅವನ ಮೇಲೆಯೇ ಬೈಕ್ ದೂಡಿ ಓಡಿಹೋಗುತ್ತಿದ್ದೆ. ನಮ್ಮ ಅದೃಷ್ಟ ಮರಳಿ ನಮ್ಮ ಬಳಿಯೇ ಬಂದಂತೆ ಬೈಕು ಜೋರಾಗಿ ಶಬ್ದ ಮಾಡುತ್ತಾ ಸ್ಟಾರ್ಟ್ ಅಯಿತು. ದೇವರ ದಯೆ ಎಂದುಕೊಂಡು ಮತ್ತೆ ಹಿಂದಕ್ಕೆ ನೋಡದೆ ಬೈಕನ್ನು ಊರ ಕಡೆ ದೌಡಾಯಿಸಿದೆ.

ನಾನು ಬೈಕ್ ಒಡಿಸುವಾಗ ಎಲ್ಲಿಲ್ಲದ ಎಚ್ಚರವಿತ್ತು. ನನ್ನ ಸಮಾಧಾನಕ್ಕಾಗಿ ಅಣ್ಣನಿಗೆ ನನ್ನ ಭುಜದ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತೆ ಹೇಳಿದೆ. ಅದರಿಂದ ಇಬ್ಬರಿಗೂ ಸಮಾಧಾನವಾಗುವುದು ಎಂದು ನನ್ನ ಅನಿಸಿಕೆಯಾಗಿತ್ತು. ನಾವು ಊರಿನಿಂದ ಕೇವಲ ಕಿ.ಮೀ ದೂರವಿದ್ದೆವು ಅಷ್ಟೇ ಆಗ ಮತ್ತೊಮ್ಮೆ ಯಾರೋ ಕಿರುಚುವುದು ಕೇಳಿಸಿತು. ನಾನು ಬೈಕಿನ ವೇಗ ಹೆಚ್ಚಿಸಿದೆ. ಬರಬರುತ್ತಾ ಶಬ್ದ ಜೋರಾಯ್ತು. ನಾನು ಬೈಕ್ ಓಡಿಸಬೇಕೋ ಅಥವಾ ಶಬ್ದ ಬಂದ ಕಡೆ ತಿರುಗಿ ನೋಡಬೇಕೋ ಎಂದೂ ತಿಳಿಯದಷ್ಟು ಭಯ ಆವರಿಸಿಬಿಟ್ಟಿತ್ತು. ನನ್ನ ಕೈಗಳು ಮರಗಟ್ಟಿದಂತೆ ಬೈಕ್ ಹಿಡಿದುಬಿಟ್ಟಿದ್ದೆ. ಅಣ್ಣ ನನ್ನ ಕಿವಿಯ ಹತ್ತಿರ ಬಂದು ಉಸುರಿದಯಾವುದೇ ಕಾರಣಕ್ಕೂ ಬೈಕ್ ನಿಲ್ಲಿಸಬೇಡ”. ನಿಜ ಹೇಳಬೇಕೆಂದರೆ, ಅವನು ನಿಲ್ಲಿಸು ಎಂದರೂ ನಿಲ್ಲಿಸುವ ಸ್ತಿತಿಯಲ್ಲಿ ನಾನಿರಲಿಲ್ಲ. ನನ್ನ ಇಡೀ ದೇಹ ಬೈಕಿನ ಒಂದು ಭಾಗವೆಂಬತ್ತಾಗಿತ್ತು. ಇದ್ದಕ್ಕಿದ್ದಂತೆ ಕಿರುಚುವ ಶಬ್ದ  ನಿಂತು ಹೋಗಿ ಅಸಾಧ್ಯ ಮೌನ ಆವರಿಸಿತು. ಶಬ್ದ ನಿಂತಿದ್ದರಿಂದ ನಾನು ವಿಚಲಿತನಾಗಿ ಅಣ್ಣನ ಕಡೆ ನೋಡಬೇಕೆಂದು ಹಿಂದಿರುಗಿದಾಗ ಅವನೂ ನನ್ನಷ್ಟೇ ವಿಚಲಿತನಾಗಿರುವುದು ಅರಿತು ಸುಮ್ಮನಾದೆ. ನಾವು ಊರು ಸಮೀಪಿಸಿದೆವು ಎಂದು ಮುಖದಲ್ಲಿ ಮಂದಹಾಸವಿನ್ನೂ ಮೂಡುತ್ತಿತ್ತು, ಅದರೆ ದಾರಿಯಲ್ಲಿ ಎನನ್ನೋ ನೋಡಿ ಎದೆಯೊಡೆದಂತಾಗಿ ಜೋರಾಗಿ ಬ್ರೇಕ್ ಹಾಕುತ್ತಾ ಬೈಕ್ ನಿಲ್ಲಿಸಿಬಿಟ್ಟೆ. ಅಣ್ಣ ಎನಾಯಿತು ಎಂದು ಸಾವರಿಸಿಕೊಳ್ಳುತ್ತಾ ಕೇಳಿದಾಗ ನಾನವನಿಗೆ ಮುಂದಿನ ರಸ್ತೆಯ ಕಡೆ ಕೈ ಮಾಡಿ ತೋರಿಸಿದೆ. ನಾವಿಬ್ಬರೂ ಮತ್ತೇನನ್ನೂ ಮಾತನಾಡಲೇ ಇಲ್ಲ.

ರಸ್ತೆಯಲ್ಲಿ ಯಾರೋ ಹೆಂಗಸು ಶವದಂತೆ ಮಲಗಿದ್ದುದು ಕಂಡು ಇಬ್ಬರಿಗೂ ಉಸಿರು ನಿಂತು ಹೊಯ್ತು. ಬಿಳೀ ಸೀರೆಯುಟ್ಟು, ಕೂದಲನ್ನು ಕಟ್ಟದೆ ಹಾಗೆಯೆ ಬಿಟ್ಟ ಹೆಂಗಸೊಬ್ಬಳು ನಮ್ಮ ಕಡೆ ಬೆನ್ನು ಮಾಡಿ ರಸ್ತೆಯಲ್ಲಿ ಮಲಗಿದ್ದಳು. ಕ್ಷಣದಲ್ಲಿ ನನಗೆಷ್ಟು ಭಯವಾಗಿತ್ತೆಂದರೆ ಬೈಕನ್ನು ಬಿಟ್ಟು ಓಡಿಯಾದರೂ ಊರು ಮುಟ್ಟಬೇಕೆಂದೆನಿಸಿತು. ಆದರೆ ನನ್ನ ಕೈ-ಕಾಲುಗಳನ್ನು ಅಲ್ಲಾಡಿಸಲೂ ನನ್ನಲ್ಲಿ ಶಕ್ತಿಯಿರಲಿಲ್ಲ. ನಾನೆಷ್ಟು ಹೆದರಿದ್ದೆ ಎಂದರೆ, ಬೇರೆಡೆಗೆ ಕಣ್ಣು ತಿರುಗಿಸಲೂ ಧೈರ್ಯ ಬರಲಿಲ್ಲ. ಅಣ್ಣನ ಕೈ ಇನ್ನೂ ನನ್ನ ಭುಜದ ಮೇಲಿದ್ದುದರಿಂದ ನಾನು ಇಲ್ಲಿ ಒಬ್ಬನೇ ಇಲ್ಲ ಎಂದು ಸಮಾಧಾನವಾಯ್ತು. ಅಣ್ಣ ನನ್ನ ಭುಜವನ್ನು ಗಟ್ಟಿಯಾಗಿ ಹಿಡಿದುಪಕ್ಕದಲ್ಲಿಂದ ನಡಿ. ನಿಲ್ಲಿಸಬೇಡ" ಎಂದ. ಅದರಿಂದ ನನಗೆಷ್ಟೋ ಧೈರ್ಯ ಬಂದಂತಾಯ್ತು. ನಾನು ಬೈಕನ್ನು ಗೇರಿಗೆ ಹಾಕಿ ಎಡಕ್ಕೆ ತಿರುಗಿಸಿದ್ದೆನಷ್ಟೆ, ಬೈಕಿನ ಮುಂದಿನ ಚಕ್ರ ಇದ್ದಕ್ಕಿದ್ದಂತೆ ಮೇಲೆದ್ದುಬಿಟ್ಟಿತು. ಏನಾಗುತ್ತಿದೆ ಎನ್ನುವಷ್ಟರಲ್ಲಿ ಇಬ್ಬರು ನೆಲಕ್ಕೆ ಬಿದ್ದೆವು. ನಮ್ಮ ಹಿಂದೆಯೇ ಜೋರಾಗಿ ಶಬ್ದ ಮಾಡುತ್ತಾ ಬೈಕು ನೆಲಕ್ಕೆ ಬಿದ್ದು ಆಫ್ ಆಯಿತು. ಅಣ್ಣನಿಗೆ ಏನನ್ನಿಸಿತೋ ಎನೋ, ನನ್ನ ಕೈ ಹಿಡಿದುಓಡು...ಇದು ಯಾಕೋ ಸರಿಯಿಲ್ಲ” ಎಂದು ಎಳೆಯತೊಡಗಿದ. ನನಗರಿವಿಲ್ಲದಂತೆಯೇ ನನ್ನ ಕಾಲುಗಳು ಅಣ್ಣನೊಂದಿಗೆ ಊರಿನ ಕಡೆಗೆ  ಓಡಿದವು. ಕತ್ತಲಲ್ಲಿ ನಾವು ಓಡುವುದು ಅಸಾದ್ಯವಾದುದು ಎಂದು ಇಬ್ಬರಿಗೂ ಗೊತ್ತಿತ್ತು. ಆದರೆ ಬೇರೆ ವಿದಿಯಿರಲಿಲ್ಲ. ನಾವು ಸ್ವಲ್ಪ ಮಾತ್ರವೇ ಮುಂದೆ ಬಂದಿದ್ದೆವು, ಹಿಂದಿನಿಂದ ನಮ್ಮ ಬೈಕ್ ಸ್ಟಾರ್ಟ್ ಆದ ಶಬ್ದ ಕೇಳಿತು. ನಾನು ಹೆದರಿಕೆಯಿಂದ ಮೂರ್ಚೆ ಹೋಗುವುದೊಂದೇ ಬಾಕಿ. ಆಫ್ ಆಗಿದ್ದ ಬೈಕ್ ತಾನಾಗಿಯೇ ಸ್ಟಾರ್ಟ್ ಆಗುವುದೆಂದರೇನು! ಬೈಕಿನ ಹೆಡ್ಲೈಟ್ ಬೆಳಕು ನಮ್ಮ ಕಡೆಗೇ ಬಿದ್ದಿದ್ದರಿಂದ ನಾನು ತಡೆಯಲಾಗದೆ ಅದರ ಕಡೆಗೆ ತಿರುಗಿ ನೋಡಿದೆ, ಆಗ ಕಂಡ ದೃಶ್ಯ ನನ್ನಲ್ಲಿನ ಶಕ್ತಿಯನ್ನೆಲ್ಲಾ ಹೀರಿಕೊಂಡುಬಿಟ್ಟಿತು. ಹೆಂಗಸು ನಮ್ಮ ಕಡೆಗೇ, ನೆಲದಿಂದ ಮೂರಡಿ ಮೇಲೆ ಗಾಳಿಯಲ್ಲಿ  ತೇಲಿ ಬರುತ್ತಿದ್ದಳು. ಅಣ್ಣ ನನ್ನ ಕೈಯನ್ನು ಜೋರಾಗಿ ಎಳೆಯುತ್ತಾ ಓಡು ಎಂದು ಪದೇ ಪದೇ ಹೇಳುತ್ತಲೇ ಇದ್ದ . ನನ್ನನ್ನು ರಾತ್ರಿಯಲ್ಲಿ ಕೈಬಿಡದ ನನ್ನ ಅಣ್ಣ ಮತ್ತು ನನ್ನ ಕಾಲುಗಳ ಬಗ್ಗೆ ನನಗೆ ಅಪಾರವಾದ ಕೃತಜ್ಞತೆಯಿದೆ ಇದೆನಾವು ಅಲ್ಲಿಂದ ಕಗ್ಗತ್ತಲೆಯ ಕಾಂಡದಲ್ಲಿ ಹೇಗೆ ಓಡಿದೆವೋ ಗೊತ್ತಿಲ್ಲ. ಎರಡೇ ನಿಮಿಷಗಳಲ್ಲಿ ಕಣ್ಣುಗಳು ಕತ್ತಲೆಗೆ ಹೊಂದಿಕೊಂಡುಬಿಟ್ಟವು. ಇನ್ನೂ ಬೈಕಿನ ಶಬ್ದ ನಮಗೆ ಕೇಳಿಸುತ್ತಲೇ ಇತ್ತು, ಆದರೆ ನನಗೆ ಮತ್ತೊಮ್ಮೆ ಹಿಂದುರುಗಿ ನೋಡುವ ಧೈರ್ಯ ಬರಲಿಲ್ಲ.

ಒಡುತ್ತಿರಬೇಕಾದರೆ ಇದ್ದಕ್ಕಿದ್ದಂದೆ ಅಣ್ಣ ನಿಂತುಬಿಟ್ಟ. ಅವನು ನನ್ನ ಕೈಯನ್ನು ಹಿಡಿದುಕೊಂಡಿದ್ದರಿಂದ ನಾನೂ ಇದ್ದಕ್ಕಿದ್ದಂತೆ ನಿಲ್ಲ್ಬೇಕಾದ ಪರಿಸ್ತಿತಿ ಬಂತು. ಏನಾಯಿತು ಎಂದು ಕೇಳುವಷ್ಟರಲ್ಲಿ ನನ್ನನ್ನು ಹಿಂದಕ್ಕೆ ಎಳೆಯಲು ಶುರುಮಾಡಿದ. ನಾನು ಎನಾಯ್ತು ಎಂದು ಕೇಳಿದೆ. ಆದರವನು ಜೋರಾಗಿ ಕಿರುಚಲು ಶುರುಮಾಡಿಬಿಟ್ಟ. ಅವನು ಕಿರುಚಿದ ರಭಸಕ್ಕೆ ನನ್ನ ಪ್ರಾಣಪಕ್ಷಿ ಹಾರಿಹೋಗದಿದ್ದುದೇ ಪುಣ್ಯ. ಅವನ್ಯಾಕೆ ಹಾಗೆ ಮಾಡುತ್ತಿದ್ದನೋ ನನಗೆ ಅರ್ಥವಾಗಲಿಲ್ಲ. ಒಬ್ಬರ ಮುಖ ಒಬ್ಬರಿಗೆ ಕಾಣದಂತಹ ಕತ್ತಲಲ್ಲಿ ಅವನು ಏನು ಕಂಡನೋ ಎಂದು ಭಯವಾಯ್ತು. ಅವನಿಗೆ ಹೆದರಬೇಡ ಎಂದು ಹೇಳಬೇಕೆಂಡುಕೊಳ್ಳುವಷ್ಟರಲ್ಲಿ ನನ್ನ ಭುಜದ ಮೇಲೆ ಯಾರೋ ಕೈ ಇಟ್ಟಂತಾಯ್ತು. ನಾನು ಏನಾಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ ಕೈ ನನ್ನನ್ನು ಎತ್ತಿ ದೂರ ಬಿಸಾಕಿತು. ನಾನು ಕತ್ತಲಲ್ಲಿ ಎಷ್ಟು ದೂರ ಗಾಳಿಯಲ್ಲಿ ಹಾರಿಬಿದ್ದೆನೋ ಗೊತ್ತಿಲ್ಲ. ಆದರೆ ನಾನು ಬಿದ್ದ ರಭಸದಿಂದ ಹೇಳುವುದಾದರೆ ಏನಿಲ್ಲವೆಂದರೂ ಹತ್ತು ಮಾರು ದೂರ ಬಂದು ಬಿದ್ದಿರಬೇಕು. ಬಿದ್ದವನಿಗೆ ಅನಿಸಿದ್ದು ಒಂದೇ, ನನ್ನನ್ನು ರೀತಿ ಎತ್ತಿ ಬಿಸಾಕುವಂತಹ ಶಕ್ತಿ ಮನುಷ್ಯರಿಗಂತೂ ಖಂಡಿತಾ ಇರುವುದಿಲ್ಲ. ಇದು ಯಾವುದೋ ಅತಿಮಾನುಷ ಶಕ್ತಿಯೇ ಇರಬೇಕು

ನಾನು ಎದ್ದು ನಿಲ್ಲುವುದಕ್ಕೂ ಅಣ್ಣ ಕೂಗುವುದನ್ನು ನಿಲ್ಲಿಸುವುದಕ್ಕೂ ಸರಿಹೋಯ್ತು. ನನಗೆ ಕ್ಷಣಮಾತ್ರ ಏನು ಮಾಡಬೇಕೆಂಬುದೇ ತೋಚಲಿಲ್ಲ. "ಅಣ್ಣ, ಅಣ್ಣ” ಎಂದು ಕೂಗಿದೆ. ಯಾವುದೇ ಶಬ್ದ ಬರದೇ ನಾನು ಹೇಳಿದ್ದು ನನಗೆ ಮರುಧ್ವನಿಯಾಗಿ ಕೇಳಿತು. ಮತ್ತೊಮ್ಮೆ ಜೋರಾಗಿ “ಅಣ್ಣ, ಅಣ್ಣ ಎಲ್ಲಿದ್ದೀಯ” ಅಂದು ಕಿರುಚಿದೆ. ಏನೂ ಉತ್ತರವಿಲ್ಲ. ನನ್ನ ಕಾಲನ್ನು ಮುಂದಕ್ಕೆ ಎತ್ತಿಹಿಡಲು ಆಗದಂತೆ ಹೆದರಿಬಿಟ್ಟಿದ್ದೆ. ಏನು
ಮಾಡಬೇಕೆಂದು ಯೋಚಿಸುವಷ್ಟು ಪ್ರಜ್ಞೆಯಿರಲಿಲ್ಲ. “ಅಣ್ಣ…" ಎಂದು ಜೋರಾಗಿ ಕೂಗಿ ಧೈರ್ಯ ಮಾಡಿ ನಾಲ್ಕು ಹೆಜ್ಜೆ ಮುಂದೆ ಹೋದೆ. ಕಾಲಿಗೆ ಕಲ್ಲು, ಕುರುಚಲು ಗಿಡಗಳು ಸಿಕ್ಕಿದ್ದು ಬಿಟ್ಟರೆ ಮತ್ತೇನು ಗೊತ್ತಾಗಲಿಲ್ಲ. ಜೋರಾಗಿ ಅಳು ಬಂದು ಮತ್ತೆರೆಡು ಬಾರಿಅಣ್ಣ, ಅಣ್ಣಎಂದು ದುಃಖಿಸಿದೆ. ಮತ್ತದೇ ಮೌನ. ಅಷ್ಟರಲ್ಲಿ ಮತ್ತೆ ಜೋರಾಗಿ ಯಾವುದೊ ಹೆಂಗಸು ಕಿರುಚಿದಂತಾಯ್ತು. ನನ್ನ ಧೈರ್ಯ ನನ್ನನ್ನಾಗಲೇ ಕೈಬಿಟ್ಟು ಹೋಗಿತ್ತು. ಹೆದರಿ, ದಿಕ್ಕು ತಪ್ಪಿದಂತೆ ಓಡಿದೆ, ಯಾವ ಕಡೆಗೇ ಓಡುತ್ತಿದ್ದೆನೋ ನನಗೆ ತಿಳಿದಿಲ್ಲ, ಆದರೆ ನಿಲ್ಲುವುದಕ್ಕೆ ಧೈರ್ಯ ಬರಲಿಲ್ಲ. ಬದುಕಬೇಕೆಂದಿದ್ದರೆ ಇಲ್ಲಿಂದ ಓಡಬೇಕು, ಅಷ್ಟೇ ಅನಿಸಿದ್ದು

ಎಷ್ಟು ದೂರ ಹಾಗೆ ಓಡಿದೆನೋ, ಯಾವ ಕಡೆಗೇ ಓಡಿದೆನೋ ನನಗೆ ಗೊತ್ತಿಲ್ಲ. ಸ್ವಲ್ಪ ಸಮಯದಲ್ಲೇ ಯಾವುದೊ ಊರಿನ ಬೀದಿ ದೀಪಗಳು ಕಂಡವು. 
ನನ್ನ ಶಕ್ತಿ ಇಮ್ಮಡಿಸಿದಂತಾಗಿ ನನ್ನ ಬಲವನ್ನೆಲ್ಲಾ ಬಿಟ್ಟು ಓಡಿದೆ. ಅಂತಹ ಅಖಂಡ ಕತ್ತಲಿನಲ್ಲಿ ನಾನು ಹೇಗೆ ಓಡಿದೆನೋ ನನಗೆ ಈಗಲೂ ಅರ್ಥವಾಗಿಲ್ಲನಾನು ನನ್ನ ಶಕ್ತಿಯನ್ನೆಲ್ಲಾ ಬಿಟ್ಟು ಓಡುತ್ತಿದ್ದೆ. ಕ್ಷಣಗಳೇ ದಿನಗಳಂತೆ ಉರುಳಿ ನಾನು ಊರಿಗೆ ಸಮೀಪಿಸಿದಾಗ ನನ್ನನ್ನು ನೋಡಿ ಹಲವಾರು ನಾಯಿಗಳು ಬೊಗಳಲು ಶುರು ಮಾಡಿದವು. ಓಡಿ ಓಡಿ ನನಗೆ ಉಸಿರು ನಿಂತುಹೋಗುವಂತನ್ನಿಸಿದರೂ ಓಡುವುದನ್ನು ಮಾತ್ರ ನಿಲ್ಲಿಸಲಿಲ್ಲ

 ಅಷ್ಟರಲ್ಲಿ ಎಲ್ಲಿಂದಲೋ ನಮ್ಮ ನಾಯಿಯೂ ನನ್ನನ್ನು ನೋಡಿ ಓಡಿ ಬಂತು. ನನಗೆ ಅರಿವಿಲ್ಲದಂತೆ ನಾನು ನಮ್ಮ ಊರಿಗೇ ಬಂದು ಸೇರಿದ್ದೇ. ನನ್ನ ಹಿಂದಿರುವ ನಾಲ್ಕೈದು ನಾಯಿಗಳು ನಮ್ಮ ನಾಯಿಯ ಇರುವನ್ನು ನೋಡಿ ಸ್ವಲ್ಪ ನಿಧಾನವಾದವು. ನಾನು ಮನೆಯ ಮುಂದೆ ಬರುವಷ್ಟರಲ್ಲಿ ನಾನು ನನ್ನ ಕಾಲುಗಳ ಮೇಲೆ ನಿಯಂತ್ರಣ ಕಳೆದುಕೊಂಡುಬಿಟ್ಟಿದ್ದೆ. ನಾನು ಬಂದು ಮನೆಯ ಜಗುಲಿಯ ಮೇಲೆ ಕುಳಿತು ಉಸಿರಾಡಲೂ ಆಗದ ಸ್ತಿತಿಯಲ್ಲಿ   ಬಿದ್ದೇ ಹೋದೆ. ನನಗೆ ಸರಿಯಾಗಿ ಉಸಿರಾಡಲು ಅನಾಮತ್ತು ಹತ್ತು ನಿಮಿಷಗಳೇ ಹಿಡಿಯಿತು. ನಾನು ನನ್ನ ವಾಚ್ ನೋಡಿಕೊಂಡಾಗ ಆಗಲೇ ಬೆಳಗಿನ ಜಾವ ೪ ಗಂಟೆಯಾಗಿತ್ತು. ಅದು ಹೇಗೆ ನಾನು  ಗಂಟೆಗಳನ್ನು ಕತ್ತಲೆಯಲ್ಲಿ ಕಳೆದೆನೋ ನನಗೆ ಇಂದಿಗೂ ಗೊತ್ತಿಲ್ಲ.  ತಕ್ಷಣವೇ ನನಗೆ ಅಣ್ಣನ ನೆನಪಾಯ್ತು. ಅವನನ್ನು ನೆನೆಸಿಕೊಂಡು ಜೋರಾಗಿ ಅಳು ಬಂತು. ನಮ್ಮ ಮನೆಯ ನಾಯಿಗೆ ಏನನ್ನಿಸಿತೋ ಗೊತ್ತಿಲ್ಲ, ಅದು ನನಗೆ ಸುತ್ತು ಹಾಕುತ್ತಾ ಜೊರಾಗಿ ಬೊಗುಳಲು ಶುರುಮಾಡಿತು. ಅಷ್ಟರಲ್ಲಿ ಒಳಗಿನಿಂದ ಚಿಕ್ಕಮ್ಮ ಬಾಗಿಲು ತೆರೆದರು. ನನ್ನ ಸ್ತಿತಿ ನೋಡಿ ಅವರು ಜೋರಾಗಿ ಕಿರುಚಿಕೊಂಡುಬಿಟ್ಟರು. ಅವರು ಏನಾಯಿತು ಎಂದು ತುಂಬಾ ಬಾರಿ ಕೇಳಿದರೂ ನನಗೆ ಮಾತನಾಡಲು ದ್ವನಿಯೇ ಬರಲಿಲ್ಲ. ನಾನು ಮತ್ತು ಚಿಕ್ಕಮ್ಮ ಹಾಗೆ ಜೋರಾಗಿ ಅಳುತ್ತಿರುವುದನ್ನು ಕೇಳಿ ಪಕ್ಕದಮನೆಯಲ್ಲಿಯೇ ಮಲಗಿದ್ದ ದೊಡ್ಡಪ್ಪ ಎದ್ದು ಬಂದರು.


ನಾನು ದೊಡ್ಡಪ್ಪನಿಗೆ  ಆದುದರ ಬಗ್ಗೆ ಹೇಳಿ ಅಣ್ಣನ ಬಗ್ಗೆ ತಿಳಿಸಿದೆ. ಅವರು ತಕ್ಷಣವೆ ಊರಿನ ಮತ್ತಲವರನ್ನು ಎಬ್ಬಿಸಿ ಬೈಕ್ ನಲ್ಲಿ ಅಣ್ಣನಿಗಾಗಿ ಹೊರಟರು. ಅವರೊಂದಿಗೆ ನಾನೂ ಹೊರಟೆ. ನಾವು ಊರಿನಿಂದ ಇನ್ನೂ ಹೊರಬಂದಿರಲಿಲ್ಲ ಅಷ್ಟರಲ್ಲಿ ಅಣ್ಣನೇ ಎದುರಿಗೆ ಬಂದ. ಮೈಯೆಲ್ಲಾ ಮಣ್ಣಾಗಿ, ಅಲ್ಲಲ್ಲಿ ಕೈಕಾಲು ತರಚಿಕೊಂಡು ತುಂಬಾ ಸುಸ್ತಾಗಿದ್ದವನಂತೆ ಕಂಡುಬಂದ. ಅವನನ್ನು ನೋಡಿದವರಿಗೆ ಏನಾಗಿರಬಹುದೆಂದು ಊಹಿಸುವುದ ಕಷ್ಟವಾಗಿರಬೇಕು. ನನ್ನಂತೆಯೇ ಅವನೂ ತುಂಬಾ ಹೊತ್ತು ಎಷ್ಟು ಮಾತನಾಡಿಸಿದರು ಮಾತಾಡಲಿಲ್ಲ. ನನಗಂತೂ ಅವನನ್ನು ನೋಡಿ ಎಷ್ಟು ಖುಶಿಯಾಯಿತೆಂದರೆ, ಅವನನ್ನು ತಬ್ಬಿ ಮನಸ್ಸಿಗೆ ನೆಮ್ಮದಿಯಾಗುವವರೆಗೆ ಅತ್ತು ಬಿಟ್ಟೆ. ಜನರೆಲ್ಲಾ ಸೇರಿ ನಮ್ಮನ್ನು ಮನೆ ಸೇರಿಸಿದರು. ಇಬ್ಬರಿಗೂ ಆದ ಘಟನೆಗಳಿಂದ ಚಳಿಜ್ವರ ಬರುವಹಾಗಾಗಿತ್ತು. ದೇಹಕ್ಕೂ ಮನಸ್ಸಿಗೂ ಬಹಳ ದಣಿವಾಗಿ, ನಿದ್ರಾದೇವತೆಯ ಮಡಿಲು ಸೇರಿಬಿಟ್ಟೆ. ಮರುದಿನ ಎದ್ದಾಗ ಮದ್ಯಾಹ್ನ ಎರಡಾಗಿತ್ತು. ಅಪ್ಪ-ಅಮ್ಮ ಮತ್ತೆಲ್ಲರೂ ಸುತ್ತಲೂ ಕೂಳಿತಿದ್ದರು. ಅಮ್ಮನ ಕಣ್ಣಲ್ಲಿ ನೀರಿತ್ತು. ತುಂಬಾ ಹೊತ್ತಿನಿಂದ ಅತ್ತಿರಬೇಕು, ಕಣ್ಣಗಳು ಕೆಂಪಾಗಿದ್ದುವು. ಮಲಗಿದ್ದಾಗಅಣ್ಣ ಅಣ್ಣಎಂದು ಕನವರಿಸುತ್ತಿದ್ದೆ ಅಂದು ಅಮ್ಮ ಹೇಳಿದಳು. ಏನೂ ಮಾತನಾಡುವ ಮನಸ್ಸಿರಲಿಲ್ಲ ಆಗ. ಕುಳಿತಲ್ಲಿಯೇ ಒಂದು ದೊಡ್ಡ ಲೋಟದಲ್ಲಿ ಟೀ ಬಂತು. ಅದನ್ನೆಲ್ಲ ಗಟಗಟನೆ ಹೀರಿ, ಎಲ್ಲರಿಗೂ ನಂತರ ಮಾತನಾಡುತ್ತೇನೆ ಎಂದು ಹೇಳಿ ಮುಖ ತೊಳೆದು ಹೊರಗೆ ಬಂದವನಿಗೆ ಕಂಡಿದ್ದು ಮತ್ತದೇ ಬೈಕ್. ಅದಕ್ಕೆ ಹಪಾಹಪಿ ಶಪಿಸುತ್ತಾ ಅಣ್ಣನನ್ನು ಮಾತನಾಡಿಸಲು ಅವನನ್ನು ಹುಡುಕುತ್ತಾ ಹೊರಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ತೋಟದ ಮನೆ : ಭಾಗ-2

ತೋಟದ ಮನೆ ಭಾಗ-೨ ಪ್ರೇತದ ಅಟ್ಟಹಾಸ ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದ...