ನನ್ನ ಬ್ಲಾಗ್ ಪಟ್ಟಿ

ಸೋಮವಾರ, ಫೆಬ್ರವರಿ 3, 2020

ಅಣ್ಣನ ಪ್ರೇಮ ಪ್ರಸಂಗ - ಭಾಗ ೨

ಬೆಟ್ಟದ ಮೇಲಿನ ದೇವರ ದಯೆಗೋ, ಅಥವಾ ನನ್ನ ಪೂರ್ವಜನ್ಮದ ಪುಣ್ಯಕ್ಕೋ, ಅವತ್ತು ಚಿಕ್ಕಮ್ಮನ ಹೋಳಿಗೆ ಪ್ರೋಗ್ರಾಮು ಯಾವುದೇ ಅಡಚಣೆಯಿಲ್ಲದೆ ನಡೆಯಿತು. ಒಂದೇ ಒಂದು ಬೇಜಾರಿನ ಸಂಗತಿಯೆಂದರೆ, ಚಿಕ್ಕಮ್ಮ ಹೋಳಿಗೆಗೆ ಬೇಳೆ ಹಾಕುವಾಗ ಮನೆಯಲ್ಲಿ ಮೂವರೇ ಇದ್ದಿದ್ದರಿಂದ ಸ್ವಲ್ಪ ಕಡಿಮೆಯೇ ಹಾಕಿದ್ದರು. ಅದು ಹೆಚ್ಚುಕಮ್ಮಿ ನನಗೊಬ್ಬನಿಗೇ ಆಗುವಷ್ಟಿತ್ತು. ಅಂತದ್ದರಲ್ಲಿ ಅಣ್ಣ ಮತ್ತು ಕಾವ್ಯ ಬಂದದ್ದು ನನಗೂ ಮತ್ತು ಚಿಕ್ಕಪ್ಪನಿಗೂ ಒಳಗೊಳಗೇ ಹೋಳಿಗೆ ವಿಷಯದಲ್ಲಿ ಬೇಜಾರಾದದ್ದು ನಿಜ. ಅದನ್ನೊಂದು ಬಿಟ್ಟರೆ ನಾನಂದುಕೊಂಡಂತೆ ಮನೆಯಲ್ಲಿ ಯಾವುದೇ ಅಚಾತುರ್ಯಗಳಾಗಲಿಲ್ಲ. ಕಾವ್ಯ ಮನೆಗೆ ಬಂದದ್ದಕ್ಕೆ ಎಲ್ಲಿ  ಚಿಕ್ಕಪ್ಪ ಚಿಕ್ಕಮ್ಮ ಮನೆಯಲ್ಲಿ ದೊಡ್ಡ ಆವಾಂತರವೇ ಸೃಷ್ಟಿಸಿಬಿಡುತ್ತಾರೆ ಎಂದು ಹೆದರಿದ್ದೆ, ಆದರೆ ಅಂತಹದ್ದೇನು ಆಗಲಿಲ್ಲ. ಕಾವ್ಯ ಬಹಳ ಬುದ್ದಿವಂತ ಹುಡುಗಿ. ಮಾತಿನಲ್ಲಿಯೇ ಇಬ್ಬರಿಗೂ ಮೋಡಿ ಮಾಡಿ ಬಿಟ್ಟಳು. ಚಿಕ್ಕಮ್ಮ ಕೋಪ ಮಾಡಿಕೊಂಡು ಒಳಗೆ ಹೋದ ನಂತರ ಸ್ವಲ್ಪ ಹೊತ್ತು ನಾವು ನಾಲ್ಕೂ ಜನ ಏನು ಮಾಡುವುದೆಂದು ತಿಳಿಯದೆ ಒಬ್ಬೊಬ್ಬರು ಒಂದೊಂದು ಮೂಲೆ ನೋಡಿಕೊಂಡು ಕೂತಿದ್ದೆವು. ಆಗ ಕಾವ್ಯಾಳೇ ಚಿಕ್ಕಪ್ಪನ ಜೊತೆ ಮಾತು ಆರಂಭಿಸಿ ಅವರ ಹೊಲ, ವ್ಯವಸಾಯ, ಬೆಳೆ ಬಗ್ಗೆ ವಿಚಾರಿಸಲು ಶುರುಮಾಡಿದಳು. ಮೊದಮೊದಲು ಚಿಕ್ಕಪ್ಪ ಅಸಡ್ಡೆಯಿದಲೇ ಉತ್ತರಿಸಿದರೂ ಕಾವ್ಯ ಸ್ವಲ್ಪವೂ ಬೇಸರ ತೋರಿಸದೆ ಮತ್ತೂ ಆಸಕ್ತಿಯಿಂದ ಮುಂದಿನ ಪ್ರಶ್ನೆ ಕೇಳಿ ಚಿಕ್ಕಪ್ಪನಿಗೆ ಅವಳ ಪ್ರಶ್ನೆಗಳಿಗೆಲ್ಲಾ ದೊಡ್ಡ ದೊಡ್ಡ ಟಿಪ್ಪಣಿಗಳನ್ನೇ ಕೊಡುವಂತೆ ಮಾಡಿದಳು. ಒಂದು ಗಂಟೆಯ ಒಳಗೆ ಅವರಿಬ್ಬರೂ ವ್ಯವಸಾಯದ ಬಗ್ಗೆ ಹೆಚ್ಚುಕಮ್ಮಿ ಚರ್ಚೆಯೇ ಮಾಡಿಬಿಬಿಟ್ಟಿದ್ದರು. ಅಷ್ಟೂ ಹೊತ್ತು ನಾನು ಮತ್ತು ಅಣ್ಣ ಏನಾಗುತ್ತಿದೆಯೆಂದು ಬಾಯಿ ಬಿಟ್ಟುಕೊಂಡು ನೋಡುತ್ತಲೇ ಇದ್ದೆವು. ಚಿಕ್ಕಪ್ಪನನ್ನು ಕಾವ್ಯ ಸಮ್ಮೋಹನ ಮಾಡಿಬಿಟ್ಟಳೇನೋ ಎಂದು ನನಗೆ ಮನದಲ್ಲೇ ಅನುಮಾನ ಶುರುವಾಯಿತು.

ಚಿಕ್ಕಪ್ಪನದ್ದೇನೂ ಆಯಿತು, ಇನ್ನು ಚಿಕ್ಕಮ್ಮನಿಗೆ ಹೇಗೆ ಮೋಡಿ ಮಾಡುತ್ತಾಳೆ ಎಂದು ನೋಡುವ ಕುತೂಹಲ. ಚಿಕ್ಕಪ್ಪನ ಜೊತೆ ಚರ್ಚೆ ಮುಗಿದ ಮೇಲೆ ಕಾವ್ಯ ಸ್ವಲ್ಪ ಕೆಮ್ಮಿದ ಹಾಗೆ ಮಾಡಿ ಅಣ್ಣನ ಕಡೆ ತಿರುಗಿ "ಸ್ವಲ್ಪ ನೀರು ಬೇಕಿತ್ತು" ಎಂದಳು. ಅಣ್ಣ ಇನ್ನೇನು ಎದ್ದು ಅಡಿಗೆಮನೆ ಹೊರಡಬೇಕು ಎನ್ನುವಷ್ಟರಲ್ಲಿ ಚಿಕ್ಕಪ್ಪ ಚಿಕ್ಕಮ್ಮನಿಗೆ "ಲೇ ಇವಳೇ, ಮಗೂಗೆ ಸ್ವಲ್ಪ ಕುಡಿಯೋಕೆ ನೀರು ಕೊಡೆ" ಎಂದರು. ನಾನು ಕರೆಂಟೇ ಹೊಡೆದವನಂತೆ ನಿಟ್ಟುಬಿದ್ದೆ. ಅಣ್ಣ ನಿಂತಿದ್ದವನು ಹಾಗೇ ಸ್ಲೋ ಮೋಷನ್ನಿನಲ್ಲಿ ವಾಪಸ್ಸು ಕುಳಿತುಕೊಂಡ. ಚಿಕ್ಕಪ್ಪನೇನೋ ತಣ್ಣಗಾಗಿದ್ದರೂ ಚಿಕ್ಕಮ್ಮ ಇನ್ನು ಒಳಗೊಳಗೇ ಕುದಿಯುತ್ತಿದ್ದರು. ಅವರು ಎದ್ದು ಬರಲೇ ಇಲ್ಲ. ಚಿಕ್ಕಪ್ಪನಿಗೂ ಸ್ವಲ್ಪ ಕಸಿವಿಸಿಯಾಯ್ತು. ಅವರು ಇನ್ನೊಮ್ಮೆ ಚಿಕ್ಕಮ್ಮನಿಗೆ ಹೇಳುವಷ್ಟರಲ್ಲಿ ಕಾವ್ಯಾಳೇ ಎದ್ದುಪಾಪ ಅವ್ರು ಬ್ಯುಸಿ ಇದಾರೆ ಅನ್ಸುತ್ತೆ, ನಾನೆ ತಗೋತೀನಿ ಬಿಡಿಎಂದು ಯಾರಪ್ಪನ ಪರ್ಮಿಶನ್ನಿಗೂ ಕಾಯದೆ ಅಡಿಗೆ ಮನೆ ಹೊಕ್ಕಳು. ನಂತರ ಅಲ್ಲಿಂದಅಮ್ಮ... ಇದ್ರಲ್ಲಿ ಕುಡಿಯೋ ನೀರು ಯಾವ್ದು?” ಎಂದು ಕೇಳಿದ್ದು ನಮಗೆಲ್ಲ ಕೇಳಿಸಿತು. ಆದರೆ ಚಿಕ್ಕಮ್ಮನಿಗೆ ಅವಳುಅಮ್ಮ’ ಅಂದಿದ್ದು ಮಾತ್ರ ಕೇಳಿಸಿತು. ಅವರು ಅಲ್ಲಿಗೇ ಕರಿಗಿ ನೀರಾಗಿ ಅಕ್ಷರಶಃ ಕಾವೇರಿ ನದಿಯಂತೆಯೇ ಹರಿದುಹೋದರು.. ಅವರ ತಾಯಿಹೃದಯ ಕರಗಿ, ಕರುಳು ಚುರುಕ್ ಎಂದು, ‘ನನ್ನನ್ನು ಅಮ್ಮ ಎಂದು ಕರೆದುಬಿಟ್ಟಳಲ್ಲಾಎಂದು ಅಲ್ಲಿಂದ ಎದ್ದು ಓಡೋಡಿ ಬಂದು ಅವಳ ಕೈಯಲ್ಲಿದ್ದ ನೀರಿನ ಲೋಟ ಬರಕ್ಕನೇ ಕಸಿದುಕೊಂಡು ಅಲ್ಲೇ ಪಕ್ಕದಲ್ಲೇ ಇದ್ದ ಕುಡಿಯುವ ನೀರಿನ ಅಂಡೆಯಿಂದ ನೀರು ತಗೆದು ಕೊಟ್ಟರು. ಅವರೇ ಕುಡಿಸಿಬಿಟ್ಟರೂ ನನಗೆ ಆಶ್ಚರ್ಯವಾಗುತ್ತಿರಲಿಲ್ಲ ಬಿಡಿ. ಚಿಕ್ಕಪ್ಪನಿಗೆ ಮೋಡಿ ಹಾಕಲು ಒಂದು ಗಂಟೆ ತೆಗೆದುಕೊಂಡ ಕಾವ್ಯ, ಚಿಕ್ಕಮ್ಮನನ್ನು ಒಂದೇ ಪದದಲ್ಲಿ ಅಡ್ಡಡ್ಡ ಮಲಗಿಸಿಬಿಟ್ಟಳು. ಇನ್ನು ಅಣ್ಣನನ್ನು ಹೇಗೆ ಆಡಿಸುತ್ತಾಳೋ ನನಗೆ ತಿಳಿಯದು. ನಾನು ಯಾವುದಕ್ಕೂ ಇನ್ನು ಮುಂದೆ ಹುಷಾರಾಗಿರಬೇಕು ಎಂದುಕೊಂಡೆ.

* * * * *

ಒಂದು ದಿನ ಅಣ್ಣ ಕಾವ್ಯಳ ಪ್ರೀತಿಯಲ್ಲಿ ಎಷ್ಟು ಮುಳುಗಿಹೋಗಿದ್ದ ಎಂದು ಗೊತ್ತಾಗುವ ಸಂದರ್ಭವೊಂದು ಎದುರಾಯ್ತು. ರಾಮಗಿರಿಯಲ್ಲಿ ಆಗ ಮನೆಗಳಲ್ಲಿ ಪಾಯಿಖಾನೆಗಳು ಅತಿ ವಿರಳ. ಏನೋ ದೊಡ್ಡ ದೊಡ್ಡ ಶ್ರೀಮಂತರ ಮನೆಗಳಲ್ಲಷ್ಟೇ ಇದ್ದು, ಅವೂ ಕೂಡ ಒಂದು ತರಹದ ಶ್ರೀಮಂತಿಕೆಯ ಸಂಕೇತಗಳಾಗಿದ್ದುದು ವಿಪರ್ಯಾಸ. ಹಾಗಾಗಿ ಅಲ್ಲಿಯ ಬಹುತೇಕ ಜನರು ಬೆಳಗಿನ ಜಾವಾ ಮತ್ತು ಸಂಜೆ ಸೂರ್ಯ ಮುಳುಗುವ  ಹೊತ್ತಿಗೆ ಸರಿಯಾಗಿ ಪ್ಲಾಸ್ಟಿಕಿನ ಚಂಬು ಹಿಡಿದುಕೊಂಡು ಬೆಟ್ಟದ ಕಡೆ ನಡೆದುಬಿಡುತ್ತಿದ್ದರು. ನಾನು ಅಲ್ಲಿ ಇದ್ದಷ್ಟು ದಿನವೂ ನನ್ನದೂ ಅದೇ ಕಥೆಯಿರುತ್ತಿತ್ತು. ನನಗೇನೂ ಅದು ಹೊಸತಲ್ಲದಿದ್ದರೂ, ಪಟ್ಟಣ ಸೇರಿದ ಮೇಲೆ ಹಾಗೆಲ್ಲ ಚಂಬು ಹಿಡಿದುಕೊಂಡು ಹೋಗುವುದು ಸ್ವಲ್ಪ ಮುಜುಗುರವಾಗುತ್ತಿತ್ತು. ಆದರೆ ವರ್ಷಕ್ಕೊಮ್ಮೆ ಬರುವ ನಾನು ಚಿಕ್ಕಪ್ಪನಿಗೆ ಪಾಯಿಖಾನೆ ಕಟ್ಟಿಸಿ ಎಂದು ತಾಕೀತು ಮಾಡುವುದು ಸರಿಯಲ್ಲವೇನೋ ಅನ್ನಿಸಿ ಸುಮ್ಮನಾಗಿಬಿಡುತ್ತಿದ್ದೆ. ಅದೂ ಅಲ್ಲದೆ, ಚಿಕ್ಕಪ್ಪ ಹಾಗೆಲ್ಲಾ ಹೊರಗೆ ಚಂಬು ಹಿಡಿದುಕೊಂಡು ಹೋಗುವುದೇ ಚಂದವೆಂದು ಅದೇನೋ ಘನತೆವೆತ್ತ ಕಾರ್ಯವೆಂಬಂತೆ ಹಾಡಿ ಹೊಗಳುತ್ತಿದ್ದರು. ನಮ್ಮ ಮನೆಯಲ್ಲೆಲ್ಲಾ ಇದ್ದ ಫಾರಿನ್ ರೀತಿಯ ಪಾಯಿಖಾನೆಗಳನ್ನು ನೋಡಿ ಅವರು ಬಿದ್ದೂ ಬಿದ್ದೂ ನಕ್ಕು "ಇದ್ಯಾವ ಟೇಪಿನ ಕುರ್ಚಿ?" ಎಂದು ನಮ್ಮನ್ನೆಲ್ಲ ರೇಗಿಸುತ್ತಿದ್ದರು ಕೂಡ.

ಅದೊಂದು ದಿನ ಸಂಜೆ ನಾನು ಮತ್ತು ಅಣ್ಣ ಪ್ಲಾಸ್ಟಿಕಿನ ಚಂಬು ಹಿಡಿದುಕೊಂಡು ಮನೆಯಿಂದ ಎರೆಡು ಫರ್ಲಾಂಗಿನಷ್ಟು ದೂರ ಬಂದಿದ್ದೆವು. ಮನೆಯಲ್ಲಿ ಬಕಾಸುರನಂತೆ ತಿಂದದ್ದಕ್ಕೋ ಏನೋ ನನಗೆ ಸ್ವಲ್ಪ ಅರ್ಜೆಂಟು ಇತ್ತು. ಅಣ್ಣನಿಗೆ ಅದನ್ನು ಮನವರಿಕೆ ಮಾಡಲಿಕ್ಕೆಂದೇ "ಬೇಗ ಬೇಗ ನಡಿಯೋ..." ಎಂದು ಆಗಾಗ ಹೇಳುತ್ತಲೇ ಇದ್ದೆ. ಮೊದಲೇ ಹಳ್ಳಿಯಾದ್ದರಿಂದ ಆದಷ್ಟು ಬೇಗ ಊರು ಬಿಟ್ಟು ಹೊರಗೆ ಬೇಕಾದ ಅವಶ್ಯಕತೆಯಿತ್ತು. ಅಣ್ಣನೂ ಅರ್ಥಮಾಡಿಕೊಂಡವನಂತೆ ನನ್ನ ಸಮನಾಗೆ ಕಾಲು ಹಾಕುತ್ತಿದ್ದ. ಅಷ್ಟರಲ್ಲಿ, ಅದೆಲ್ಲಿಂದಲೋ ಪ್ರತ್ಯಕ್ಷವಾದಂತೆ ಕಾವ್ಯ ಎದುರು ಬಂದು ಬಿಟ್ಟಳು. ಅವಳನ್ನು ಕಂಡೊಡನೆ ಅಣ್ಣ ನಿಂತಲ್ಲಿಯೇ ಕಮರಿ ಕರಗಿಹೋದ. ನನಗೆ ಮುಂದಾಗುವ ಸಂದರ್ಭಗಳನ್ನು ನೆನೆಪಿಸಿಕೊಂಡು ಹಾಗೆ ಕಾಲು ನಡುಗಿದವು. ' ಮನೆಹಾಳ ಅವಳ ಜೊತೆ ಇಲ್ಲಿಯೇ ಮಾತಾಡಿಕೊಂಡು ನಿಂತರೆ ನನ್ನ ಗತಿಯೇನು?' ಮನಸ್ಸಿನಲ್ಲೇ ಅಂದುಕೊಂಡೆ. ಇವನನ್ನು ಆದಷ್ಟು ಬೇಗ ಇಲ್ಲಿಂದ ಅಪೇಸು ಮಾಡಿಸದಿದ್ದರೆ ನನ್ನ ವಿಸರ್ಜನಾಂಗವ್ಯೂಹ ನನಗೆ ಕೈ ಕೊಡುವುದರಲ್ಲಿ ಅನುಮಾನವೇ ಇರಲಿಲ್ಲ.

ಆದರೆ ನಾವು ಹೊರಟಿರುವ ಅತೀ ಮುಖ್ಯ ಕಾರ್ಯವೊಂದನ್ನು ನಾವು ಹೊರಟೆ ಇಲ್ಲವೇನೋ ಎಂಬಂತೆ ಅಣ್ಣ ಕಾವ್ಯಳ ಜೊತೆ ಪಟ್ಟಾಂಗ ಹೊಡೆಯುತ್ತ ನಿಂತಿದ್ದನ್ನು ನೋಡಿ ನನಗೆ ಸಿಟ್ಟು ನೆತ್ತಿಗೇರಿತು. ಆದರೂ ಅದನ್ನೇನೂ ತೋರಿಸಿಕೊಳ್ಳದೆ ಕಷ್ಟಪಟ್ಟು ನಗುಮುಖ ಮಾಡಿಕೊಂಡೆ ನಿಂತಿದ್ದೆ. ಅವರಿಬ್ಬರೂ ತುಂಬಾ ಹೊತ್ತು ಮಾತನಾಡಿದ ಮೇಲೆ ಕಾವ್ಯಳಿಗೆ ನಾನ್ಯಾಕೆ ಅಷ್ಟು ಸುಮ್ಮನೆ ನಿಂತಿದ್ದೇನೆ ಎಂದು ಸಂಶಯ ಬಂದಿರಬೇಕು, 'ಯಾಕೆ ಶಿವು? ಅಷ್ಟು ಹೊತ್ತಿಂದಾ ಸುಮ್ಮನೆ ನಿಂತಿದ್ದೀರಿ?' ಎಂದಳು. ನನಗೆ ಏನೆನ್ನಬೇಕೋ ತಿಳಿಯದೆ ಅಲ್ಲಿಯೇ ಕಲ್ಲಾಗಿ ನಿಂತು ಮತ್ತೆ ಹಲ್ಲು ಕಿಸಿದೆ. ಅದರವಳಿಗೆ ನನ್ನ ನಗುಮುಖದಿಂದ ಏನೂ ತಿಳಿದಿರಲಿಕ್ಕಿಲ್ಲ, ಅವಳು ಮತ್ತೊಮ್ಮೆ ನನ್ನನ್ನುದ್ದೇಶಿಸಿ ಏನೋ ಹೇಳಬೇಕೆಂದವಳು ನನ್ನ ಕೈಯಲ್ಲಿದ್ದ ಪ್ಲಾಸ್ಟಿಕಿನ ಚೊಂಬು ನೋಡಿ ಒಮ್ಮೆ ಕಣ್ಣರಳಿಸಿ ನನ್ನ ಮುಖವನ್ನೇ ನೋಡಿದಳು. ನಾನು ಏನೂ ಗೊತ್ತಿಲ್ಲದವನಂತೆ ಮತ್ತೊಮ್ಮೆ ಹಲ್ಲು ಕಿರಿದೆ. ಈಗಲಾದರೂ ನಮ್ಮನ್ನು ಕಳುಹಿಸಿಕೊಡಬಹುದೆಂದು ನಾನು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅವಳು ' ಹಾ...' ಎಂದು ಜೋರಾಗಿ ನಗಲು ಶುರುಮಾಡಿದಳು. ನನಗೆ ಇದ್ದ ಮಾನವೆಲ್ಲ ಹೋದಂತಾಗಿ ಯಾಕಾದರೂ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆನೋ ಎಂದು ನನ್ನನ್ನೇ ಶಪಿಸಿಕೊಂಡು ಅಣ್ಣನ ಕಡೆ ನೋಡಿದೆ. ಮುಟ್ಟಾಳ ಇನ್ನೂ ಕಾವ್ಯಳನ್ನು ನೋಡಿಕೊಂಡು ಕಿಸಿಯುತ್ತಾ ನಿಂತಿದ್ದ. ಇನ್ನೂ ತಡ ಮಾಡಿದರೆ ಮಾನದ ಜೊತೆ ಇನ್ನೂ ಉಳಿದಿದ್ದೆಲ್ಲವೂ ಹೋದೀತೆಂದೆನಿಸಿತುನಾನು ಅಣ್ಣನ ಕೈ ಹಿಡಿದು ಅವನನ್ನು ಎಳೆದುಕೊಂಡೇ ಕಾಲು ಹಾಕಲು ಶುರು ಮಾಡಿದೆ. ಅವನು ಅಷ್ಟಾದರೂ ಅವಳ ಕಡೆಯೇ ನೋಡುತ್ತಾ 'ಆಮೇಲೆ ಸಿಗ್ತೀನಿ...' ಎಂದು ಕಿರುಚಿದ. ಅವನಿಗೆ ನಾನು ಎಂತಹ ಅಪಾಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೆ ಅಂದು ಮನವರಿಕೆ ಮಾಡುವುದು ಸ್ವಲ್ಪ ಕಷ್ಟವೇ ಆಯಿತು. ಮುಠ್ಠಾಳ ನನ್ನ ಮಾತು ಕೇಳಿಸಿಕೊಂಡನೋ ಅನ್ನುವುದೂ ನನಗೆ ಅನುಮಾನ. ನಾವು ವಾಪಸ್ಸು ಮನೆಗೆ ಬರುವವರೆಗೂ ಕೈಯ್ಯಲ್ಲೊಂದು ಕಡ್ಡಿ ಹಿಡಿದುಕೊಂಡು ಅದನ್ನ ನೆಲಕ್ಕೆ ಗಿರುತ್ತಾ ಏನೇನೋ ನೆನಸಿಕೊಂಡು ನಗುತ್ತಿದ್ದ.

ಅವತ್ತು ರಾತ್ರಿ ನಾನು ಮತ್ತು ಚಿಕ್ಕಪ್ಪ ಹೀಗೇ ಹೊರಗೆ ಕುಳಿತು ಮಾತಾಡುತ್ತಿದ್ದೆವು. ನಾನು ಇಲ್ಲಿಗೆ ಬಂದು ಅರ್ಧ ತಿಂಗಳೇ ಆಗಿಹೋಗಿತ್ತು. ಇಲ್ಲಿ ಸುತ್ತಾಡುತ್ತಾ ನನ್ನ ಕೆಲಸದ ಬಗ್ಗೆ ಮರೆತೇ ಹೋಗಿತ್ತು. ಕೆಲಸದ ಬಗ್ಗೆ ಯೋಚನೆ ಮಾಡುತ್ತಲೇ ಒಳಗೆ ಇಟ್ಟಿದ್ದ ನನ್ನ ಫೋನು ಟ್ರಿಣ್ ಟ್ರಿಣ್ ಎಂದು ಶಬ್ದ ಮಾಡಿತು. ಕರೆಂಟು ಬೇರೆ ಇರದಿದ್ದ ಕಾರಣ ಚಿಕ್ಕಮ್ಮನೇ ಅದನ್ನು ಹುಡುಕಿ ತಂದು ಕೊಟ್ಟರು. ನೋಡಿದರೆ ನನ್ನ ಬಾಸಿನ ಫೋನು. ಇದೆಲ್ಲಿಂದ ಗ್ರಹಚಾರ ವಕ್ಕರಿಸಿತು ಎಂದುಕೊಂಡೆ ಫೋನು ರಿಸೀವ್ ಮಾಡಿದೆ. ನಂತರ ನಡೆದ ಮಾತುಕತೆ ಕಥೆಗೆ ಅಷ್ಟೊಂದು ಮುಖ್ಯವಲ್ಲವಾದ್ದರಿಂದ, ಅದರ ಸಾರ ಹೇಳಿಬಿಡುತ್ತೇನೆ: ನಾನು ಮರುದಿನವೇ ನನ್ನ ಕೆಲಸಕ್ಕೆ ಹಾಜರಾಗಬೆಂದು ಕಟ್ಟಾಜ್ಞೆ ಬಂದಿತ್ತು. ನನಗೆ ಇಷ್ಟು ಬೇಗ ವಾಪಸ್ಸು ಹೋಗಲು ಮನಸ್ಸಿಲ್ಲದಿದ್ದರೂ, ನನ್ನ ರೋಜಿ ರೋಟಿಯ ಸವಾಲಾದ್ದುದರಿಂದ ಹೋಗಲೇ ಬೇಕಾಗಿತ್ತು. ಚಿಕ್ಕಪ್ಪ ಚಿಕ್ಕಮ್ಮನಿಗೆ ಇದನ್ನೆಲ್ಲಾ ಹೇಳಿ ಅವರಿಗೆ ಬೆಳಗ್ಗೆ ಆದಷ್ಟು ಬೇಗ ನನ್ನನ್ನು ಏಳಿಸಬೇಕೆಂದು ತಿಳಿಸಿ ಮಲಗಿಬಿಟ್ಟೆ.

ಮರುದಿನ ಬೆಳಗ್ಗೆ ಬೇಗನೆ ಎದ್ದು ನನ್ನ ಬಟ್ಟೆ-ಬರೆಗಳನ್ನೆಲ್ಲ ಬ್ಯಾಗಿಗೆ ತುರುಕಿಕೊಂಡು ತುಂಬಿದ ಕಣ್ಣಿನಿಂದಲೇ ಚಿಕ್ಕಪ್ಪ ಚಿಕ್ಕಮ್ಮನಿಗೆ ಬರುತ್ತೇನೆಂದು ಹೇಳಿ ಅಣ್ಣನ ಜೊತೆ ಬಸ್ ಸ್ಟ್ಯಾಂಡಿಗೆ ಹೊರೆಟೆ. ಚಿಕ್ಕಮ್ಮ ಕಣ್ಣನ್ನೆಲ್ಲ ತೇವ ಮಾಡಿಕೊಂಡು ಮನೆಯೊಳಗೆ ಹೋದರು. ಚಿಕ್ಕಪ್ಪನಿಗೂ ನಾನು ಹೊರಟಿದ್ದು ತುಂಬಾ ಬೇಜಾರಾಗಿತ್ತು. ಆದರೆ ಅವರು ಅದನ್ನು ತೋರಿಸಿಕೊಳ್ಳದೆ ಸುಮ್ಮನೆ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡರು. ಅಣ್ಣ ನನ್ನನ್ನು ಬಸ್ ಸ್ಟ್ಯಾಂಡಿನಲ್ಲಿ ಬಸ್ಸು ಹತ್ತಿಸಿ ಬಸ್ಸು ಹೊರಡುವವರೆಗೂ ಅಲ್ಲಿಯೇ ಇದ್ದು ಕೈ ಬಿಸಿದ. ನಾನು ತಲೆ ಹೊರಗೆ ಹಾಕಿ ಕಾವ್ಯಳಿಗೆ ಹೇಳಿಬಿಡು ಅರ್ಜೆಂಟಾಗಿ ಹೋಗಬೇಕಾಯ್ತು ಅಂತ' ಎಂದೆ. ಅವನು ಆಯಿತೆಂಬಂತೆ ತಲೆಯಾಡಿಸಿದ.

ಕೆಲಸಕ್ಕೆ ಹಾಜರಾದ ದಿನದಿಂದಲೇ ನನಗೆ ಬೆಟ್ಟದಷ್ಟು ಕೆಲಸ ಸಿಕ್ಕಿ ರಾಮಗಿರಿಯಲ್ಲಿ ಕಳೆದ ದಿನಗಳೆಲ್ಲವೂ ಮರೆತೇ ಹೊಯ್ತು. ಕೆಲವೊಮ್ಮೆ ಕೆಲಸ ಮುಗಿಸಿ ಮನೆಗೆ ಬರುವಾಗ ರಾತ್ರಿ ೧೧ ಗಂಟೆಯೇ ಆಗಿರುತ್ತಿತ್ತು. ಅಣ್ಣನಿಗೆ ಫೋನು ಮಾಡಬೇಕೆಂದು ಅನಿಸಿದರೂ ಅಷ್ಟು ರಾತ್ರಿ ಮಾಡುವುದು ಬೇಡ ಎಂದು ಸುಮ್ಮನಾಗಿಬಿಡುತ್ತಿದ್ದೆ. ಯಾಕೋ ಚಿಕ್ಕಮ್ಮ ತುಂಬಾ ನೆನಪಾಗುತ್ತಿದ್ದರು. ನನಗೆ ಚಿಕ್ಕಪ್ಪ ಚಿಕ್ಕಮ್ಮ ತೋರುವ ಪ್ರೀತಿ ನೋಡಿದರೆ ಅಣ್ಣನಿಗೂ ಅವರು ಅಷ್ಟು ಪ್ರೀತಿ ತೋರುವರೋ ಎಂಬ ಸಂಶಯ. ಹೀಗೆಯೇ ಫೋನು ಮಾಡುವ ಕಾರ್ಯಕ್ರಮ ಮುಂದೆ ಹೋಗಿ ಹೋಗಿ ಎರೆಡು ತಿಂಗಳುಗಳೇ ಕಳೆದವು. ಕೊನೆಗೊಮ್ಮೆ ಮದ್ಯಾನ್ಹ ಊಟ ಮಾಡುವಾಗ ಯಾಕೋ ಚಿಕ್ಕಮ್ಮನ ನೆನೆಪು ತುಂಬಾ ಕಾಡಿದ್ದರಿಂದ ಅವರಿಗೆ ಫೋನು ಮಾಡಿದೆ. ಅವರು ಅತ್ಯಂತ ಖುಷಿಯಿಂದ ಮಾತನಾಡಿದರು. ಚಿಕ್ಕಪ್ಪ ಮನೆಯಲ್ಲಿ ಇರಲಿಲ್ಲ. ತೋಟಕ್ಕೆ ಹೋಗಿದ್ದರು. ಆದರೆ ಅಣ್ಣ ಮನೆಯಲ್ಲಿಯೇ ಇದ್ದ. ಇಂತಹ ಮದ್ಯಾಹ್ನದ ಹೊತ್ತಿನಲ್ಲಿ ಕಾವ್ಯಳ ಜೊತೆ ಇರಬೇಕಾಗಿದ್ದ ಆಸಾಮಿ ಮನೆಯಲ್ಲಿ ಏನು ಮಾಡುತ್ತಿದ್ದಾನೆ ಎಂದು ಸಂಶಯ ಬಂತು. ಚಿಕ್ಕಮ್ಮನಿಗೆ ಅಣ್ಣನಿಗೆ ಫೋನು ಕೊಡಲು ಹೇಳಿದೆ.

'ಯಾಕೋ ಅಣ್ಣ, ಮನೇಲಿದಿಯ?' ಎಂದೆ.

ಕಡೆಯಿಂದ ಅವನು ಏನು ಹೇಳಲಿಲ್ಲ. ನನಗೆ ಏನಾಗಿರಬಹುದೆಂದು ಊಹಿಸಲು ಕಷ್ಟವಾಯಿತು.

'ಏನಾಯ್ತೋ? ಯಾಕೆ ಸುಮ್ಮನೆ ಇದ್ದೀಯ?' ಎಂದೆ.

'ಏನು ಇಲ್ಲ ಶಿವು. ಸುಮ್ಮನೆ ಮನೇಲಿದೀನಿ ಅಷ್ಟೇ.' ಎಂದು ತುಂಬಾ ಬೇಸರದಿಂದ ನುಡಿದ. ನನಗ್ಯಾಕೋ ಅವನು ಏನೋ ಮುಚ್ಚಿಡುತ್ತಿದ್ದಾನೆ ಎಂದೆನಿಸಿ, 'ಏನಾಯ್ತು ಅಣ್ಣ? ಕಾವ್ಯಳ  ಜೊತೆಯೇನಾದರೂ ಜಗಳ ಮಾಡಿಕೊಂಡೆನು?' ಎಂದೆ.

'ಅವಳ ಜೊತೆ ಯಾಕೆ ಜಗಳ ಮಾಡಲಿ ಶಿವು! ನನ್ನ ನಸೀಬೇ ಚೆನ್ನಾಗಿಲ್ಲ ಬಿಡು' ಎಂದ.

ಇವನ್ಯಾಕೆ ಭಗ್ನ ಪ್ರೇಮಿಯ ಹಾಗೆ ಮಾತನಾಡುತ್ತಿದ್ದನೆಂದು ಬೇಗನೆ ಹೊಳೆಯಲಿಲ್ಲ. ಆದರೆ ಅವರಿಬ್ಬರ ಮದ್ಯೆ ಏನೋ ಆಗಿರಬೇಕೆಂದು ಸಂಶಯ ಹೆಚ್ಚಾಯ್ತು.

'ಹೋಗಲಿ, ಕಾವ್ಯ ಹೇಗಿದ್ದಾಳೆ? ನನ್ನನ್ನೇನಾದರೂ ನೆನಸಿಕೊಳ್ತಳಾ?' ಎಂದೆ.

ಅವನು ಭಾರದ ಮನಸ್ಸಿನಿಂದ 'ಹ್ಞೂ..ನಿನ್ನನ್ನು ತುಂಬಾ ಕೇಳ್ತಾ ಇದ್ಲು. ಹೋಗೋ ಮುಂಚೆ ಒಮ್ಮೆ ನಿನ್ನನ್ನು ನೋಡಬೇಕು ಅಂತಿದ್ಲು' ಎಂದ.

'ಹೋಗೋ ಮುಂಚೆ ಅಂದ್ರೆ?' ಎಂದೆ. ಅವಳೆಲ್ಲಿಗೆ ಹೋಗ್ತಾಳೆ ಎಂದು ನನಗೆ ಗೊತ್ತಾಗಲಿಲ್ಲ.

'ಅವಳ ಅಪ್ಪನ ಕೆಲಸ ಮುಗಿಯಿತು. ಇನ್ನು ಅವರು ವಾಪಸ್ಸು ಹೋಗ್ತಾರಂತೆ.' ಎಂದು ಬಹಳ ದುಃಖದಲ್ಲೇ ಹೇಳಿದ.

ನನಗೆ ಪರಿಸ್ಥಿತಿಯ ಅರಿವಾಗಲು ಇನ್ನೇನು ಬೇಕಿರಲಿಲ್ಲ. ಅವರ ತಂದೆ ರಾಮಗಿರಿಯಲ್ಲಿ ಗಾಳಿಯ ಫ್ಯಾನುಗಳನ್ನು ಅಳವಡಿಸಲು ಬಂದಿದ್ದರಷ್ಟೇ. ಅವರ ಕೆಲಸ ಮುಗಿದಿದ್ದರಿಂದ ಅವರು ವಾಪಸ್ಸು ಹೋಗುತ್ತಿದ್ದಾರೆನ್ನುವುದು ಊಹಿಸಿಕೊಂಡೆ.

ಸ್ವಲ್ಪ ಹೊತ್ತು ಇಬ್ಬರ ನಡುವೆ ಏನೂ ಮಾತುಕತೆ ನಡೆಯಲಿಲ್ಲ. ಅವನಿಗೆ ಹೇಗೆ ಸಮಾಧಾನ ಮಾಡಬೇಕೆಂದು ನನಗೆ ಗೊತ್ತಿರಲಿಲ್ಲ. ಕಯ್ಯಲ್ಲಿನ ವಾಚು ನೋಡಿಕೊಂಡಾಗ ಅಂದು ಗುರುವಾರ ಎಂದು ಗೊತ್ತಾಯ್ತು. ಅಣ್ಣನಿಗೆ 'ಆಯಿತು ನಾನು ಬರ್ತೀನಿ ಬಿಡು ಅಲ್ಲಿಗೆ' ಎಂದು ಹೇಳಿ ಫೋನಿಟ್ಟೆ.

ತಕ್ಷಣವೇ ನನ್ನ ಬಾಸಿಗೆ ನನಗೇನೋ ಅರ್ಜೆಂಟು ಕೆಲಸ ಬಂದಿದೆ ಎಂದು ಹೇಳಿ, ಸೋಮವಾರದವರೆಗೂ ರಜೆ ಹಾಕಿ ಮನೆ ಕಡೆ ಹೊರಟೆ. ಮನೆಯಲ್ಲಿ ಅಪ್ಪನಿಗೆ ನಾನು ರಾಮಗಿರಿಗೆ ಹೋಗುತ್ತಿದ್ದೇನೆಂದು ಹೇಳಿದಾಗ ಅವರು ಹೆಚ್ಚೇನೂ ಪ್ರಶ್ನೆ ಕೇಳದೆ ಸುಮ್ಮನಾದರು. ಅವರೇ ನನ್ನನ್ನು ಸಂಜೆ ನಾಲ್ಕರ ಬಸ್ಸಿಗೆ ಬಸ್ ಸ್ಟ್ಯಾಂಡಿನ ವರೆಗೂ ಬಿಟ್ಟುಕೊಟ್ಟರು. ನಾನು ಆರೂವರೆ ಸುಮಾರಿಗೆ ಚಿಕ್ಕಪ್ಪನ ಮನೆಯಲ್ಲಿದ್ದೆ.

ಅಣ್ಣ ಮನೆಯಲ್ಲಿರಲಿಲ್ಲ. ಚಿಕ್ಕಪ್ಪ ಒಬ್ಬರೇ ಮನೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದರು. ಅವರ ಜೊತೆ ಕುಶಲೋಪಚಾರದ ನಂತರ ಅಣ್ಣನ ಬಗ್ಗೆ ಕೇಳಿದೆ. ಅವರು ಏನು ಆಗಿಯೇ ಇಲ್ಲವೇನೋ ಎಂಬಂತೆ ''ಇನ್ನೆಲ್ಲಿ ಇರ್ತಾನೆ ಶಿವೂ, ಅದೇ ಹುಡುಗಿ ಜೊತೆ ಎಲ್ಲೋ ಸುತ್ತುತಾ ಇರ್ತನೆ ಅಷ್ಟೇ."

"ಕಾವ್ಯಳ  ಅಪ್ಪಂಗೆ ಟ್ರಾನ್ಸ್ಫರ್ ಅಯ್ತಂತೆ?"

"ಪಾಪ, ಒಳ್ಳೆ ಹುಡುಗಿ ಇದ್ಲು....ಮನೆಗೆ ಬಂದು ನಮ್ಮನ್ನೆಲ್ಲ ಮಾತಾಡಿಸ್ಕೊಂಡು ಹೋದ್ಲು."

''ಇವನೇನು ತುಂಬಾ ಬೇಜಾರಾಗಿದಾನ?''

''ನೋಡು ಶಿವೂ, ನಂಗು ವಯಸ್ಸಾಯ್ತು... ಇನ್ನೂ ನಂಗೆ ಹೊಲ ಮನೆ ಅಂತ ಕೆಲಸ ಮಾಡಕ್ಕಾಗಲ್ಲ...ಇರೋನೊಬ್ಬ ಮಗ ಸಹಾಯ ಆಗ್ತಾನೆ ಅಂದ್ರೆ ಇವ್ನು ಊರು ತಿರುಗೋಕೆ ನಿಂತ...ಮನಸ್ಸಿಗೆ ಬೇಜಾರಾಯ್ತು... ಆದ್ರೂ ಮಗನಿಗೆ ಬೇಜಾರಾಗಬಾರ್ದು, ಒಳ್ಳೆ ಹುಡ್ಗನ್ನ ಬೈಬಾರ್ದು ಅಂತ ಸುಮ್ನೆನೆ ಇದ್ದೆ. ಇವಗ್ಲಾದ್ರೂ ಇವ್ನಿಗೆ ಬುದ್ದಿ ಬಂದು ನಂಗೆ ಸ್ವಲ್ಪ ಆಸರೆ ಆದ್ರೆ ವಯಸ್ನಲ್ಲಿ ಸ್ವಲ್ಪ ಆರೋಗ್ಯನಾದ್ರು ಕಾಪಾಡ್ಕ್ಯಾಬೋದು''

ಚಿಕ್ಕಪ್ಪ ಹೇಳೋ ಮಾತಿನಲ್ಲೂ ನಿಜ ಇತ್ತು. ಆದ್ರೆ ಅಣ್ಣನೆನೂ ಅಂತ ಅಯೋಗ್ಯನೇನಲ್ಲ. ಹುಡುಗಿ ಸಿಕ್ಕಮೇಲಷ್ಟೇ ಇವನು ಸ್ವಲ್ಪ ಹೀಗಾದದ್ದು. ಮೊದಲೆಲ್ಲಾ ಊರಿನವರೆಲ್ಲ ಸೈ ಸೈ ಎನ್ನುವ ಹಾಗಿದ್ದ. ನಾನು ಚಿಕ್ಕಪ್ಪನಿಗೆ ಇದನ್ನೆಲ್ಲಾ ಈಗ ಹೇಳಿ ಉಪಯೋಗವಿಲ್ಲವೆಂದು ಸುಮ್ಮನಾದೆ. ಅವತ್ತು ಸಂಜೆಯೇ ಅವರಿಬ್ಬರನ್ನೂ ಹುಡುಕಿ ಮಾತನಾಡಿಸೋಣವೆಂದುಕೊಂಡರೂ, ಅಂದು ರಾಮಗಿರಿಯಲ್ಲಿ ಕಾವ್ಯಳ  ಕೊನೆಯ ಸಂಜೆಯಾದ್ದರಿಂದ ಅವರಿಬ್ಬರ ಮದ್ಯೆ ಹೋಗೋದು ಬೇಡವೆನ್ನಿಸಿ ಸುಮ್ಮನಾದೆ. ಸಂಜೆ ಚಿಕ್ಕಮ್ಮ ನನಗೋಸ್ಕರ ಚಪಾತಿ ಮಾಡಿದ್ದರು. ತರಕಾರಿಗೇನು ಬರವಿರಲಿಲ್ಲ. ಅಣ್ಣ ಮನೆಗೆ ಬೇಗ ಬರುವನೇನೋ ಎಂದು ಕಾದೆ. ರಾತ್ರಿ ಹನ್ನೊಂದಾದರೂ ಅವನ ಸುಳಿವೇ ಇರಲಿಲ್ಲ.

ಮೊದಲ ಪ್ರೇಮದ ಮತ್ತೆ ಹಾಗೆ. ಮರೆತೇನೆಂದರೂ ಮರೆಯದ ಹಾಗೆ. ಅಣ್ಣನ ಮನಸ್ಸಿನ ಭಾವನೆಗಳನ್ನು ನಾನೀಗ ಇಲ್ಲಿ ಅಭಿವ್ಯಕ್ತಿಸುವುದು ಕಷ್ಟವೇ ಸರಿ. ನಾಳೆ ಅವನು ಪ್ರೀತಿಸೋ ಹುಡುಗಿ ಇನ್ನೊಂದು ಊರಿಗೆ ಹೋಗ್ತಾಳೆ ಅನ್ನೋದೇ ಒಂದು ತರನಾದ ಖೇದ ಭಾವ ಉಂಟುಮಾಡಿತ್ತು. ಅಣ್ಣನ ಪ್ರೀತಿಯ ಗುಂಗಿನಲ್ಲಿ ನಾನು ನನ್ನದೇ ಹಳೆಯ ನೆನಪುಗಳನ್ನು ಕೆದಕಿಕೊಂಡೆ. ಹಿಂದೊಮ್ಮೆ ಪಿ.ಯು.ಸಿ. ಮಾಡುವಾಗ ಪಕ್ಕದ ಕ್ಲಾಸಿನ ಹುಡುಗಿಯೊಬ್ಬಳು ಬಹಳವೇ ಇಷ್ಟವಾಗಿಬಿಟ್ಟಿದ್ದಳು. ಆದರೆ ಆಗ ನನಗೆ ಜೀವನದಲ್ಲಿ ಏನಾದರು ಸಾದಿಸಲೇಬೇಕು ಎನ್ನುವ ಛಲವೊಂದು ಆವರಿಸಿಬಿಟ್ಟಿತ್ತು. ಹಾಗಾಗಿ ನಾನವಳನ್ನು ಎರೆಡು ವರ್ಷವೂ ಬರಿ ನೋಡಿ ಮನದಲ್ಲೇ ನಸುನಕ್ಕಿದ್ದೆ ಆಯಿತೇ ಹೊರತು ಮತ್ತೇನು ಆಗಲಿಲ್ಲ. ಕೊನೆಗೆ ನಮ್ಮ ಎಕ್ಸಾಮುಗಳೆಲ್ಲಾ ಮುಗಿದ ಮೇಲೆ ಡಿಸ್ಟಿಂಕ್ಷನ್ ಬಂದವರಿಗೆಲ್ಲ ಕಾಲೇಜಿನಲ್ಲಿ ಸಣ್ಣದಾಗಿ ಒಂದು ಚಹಾ ಕೂಟ ಏರ್ಪಡಿಸಿದ್ದರು. ಆಗ ಅವಳೂ ಅಲ್ಲಿ ಬಂದಿದ್ದಳು.

ಅವಳನ್ನು ಅಂದಾದರೂ ಮಾತನಾಡಿಸಬೇಕೆಂದು ಬಹಳ ಧೈರ್ಯ ಮಾಡಿ  ಅವಳ ಹತ್ತಿರ ಹೋಗಿ 'ಹಾಯ್' ಹೇಳಿದ್ದೆ. ಅವಳೂ ಚಡಪಡಿಕೆಯಿಂದಲೇ 'ಹಾಯ್' ಎಂದಿದ್ದಳು. ಕೆಲವು ಕ್ಷಣ ಅದೂ ಇದೂ ಹೇಳಿ, ಇದ್ದಕ್ಕಿದ್ದಂತೆನಿಮಗೆ ಗೊತ್ತಿರಲಿಕ್ಕಿಲ್ಲ, ಆದರೆ ನಾನು ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ!” ಎಂದುಬಿಟ್ಟಿದ್ದೆ.

ಅವಳೊಮ್ಮೆ ನನ್ನ ಕಡೆಗೆ ವಿಸ್ಮಯದ ನೋಟ ಬೀರಿ, “ಗೊತ್ತುಎಂದಳು.

ನಾನು ಮೂರ್ಖನಂತೆ ಒಂದೆರಡು ಕ್ಷಣ ಹಾಗೆ ನಿಂತು, “ನಿಮಗ್ಯಾರು ಹೇಳಿದರು?” ಎಂದೆ.

“ಯಾರೂ ಹೇಳಲಿಲ್ಲ... ನೀವು ಯಾವಾಗಲೂ ನನ್ನನ್ನೇ ನೋಡಿತ್ತಿದ್ದುದು ನೋಡಿ, ಹಾಗೆ ಅಂದುಕೊಂಡಿದ್ದೆಎಂದಳು.

ನನ್ನ ಮೂರ್ಖತನಕ್ಕೆ ಏನನ್ನಬೇಕೋ ಗೊತ್ತಿಲ್ಲ!! ನಾನು ಸ್ವಲ್ಪ ಮೊದಲೇ ಇಂದಿನಂತೆ ಧೈರ್ಯ ತಂದುಕೊಂಡಿದ್ದರೆ ನಾವಿಬ್ಬರು ಮೊದಲ ಬಾರಿಗೆ ಹೀಗೆ ಮಾತನಾಡುವುದು ತಪ್ಪುತ್ತಿತ್ತೇನೋ. ಅವತ್ತು ಅವಳು ತನ್ನ ನೆನಪಿಗಾಗಿ ನನಗೊಂದು ಕೀ ಚೈನು ಕೊಟ್ಟಿದ್ದಳು. ಅದು ನನ್ನ ಹತ್ತಿರ ಇಂದಿಗೂ ಹಾಗೇ ಇದೆ. ಅವಳ ನೆನಪಿಗಾಗಿ.

ಅಣ್ಣ ಮನೆಗೆ ವಾಪಸ್ಸು ಬಂದಾಗ ರಾತ್ರಿ ೧೧.೩೦. ಅವನಿಗೆ ಯಾರೊಡನೆಯೂ ಮಾತನಾಡುವ ಮನಸ್ಸಿದ್ದ ಹಾಗೆ ಕಾಣಲಿಲ್ಲ. ನಾನೆ ಅವನನ್ನು ಬಲವಂತದಿಂದ ಮಾತನಾಡಿಸಿದೆ. ನಾಳೆ ಬೆಳಗ್ಗೆ .೩೦ ಟ್ರೈನಿಗೆ ಕಾವ್ಯ ಚೆನ್ನೈಗೆ ಹೋಗುತ್ತಿದ್ದಾಳೆ ಎಂದು ಗೊತ್ತಾಯ್ತು. ಸರಿ ನಾನು ಅವನೊಡನೆ ಬೆಳಗ್ಗೆ ರೈಲ್ವೆ ಸ್ಟೇಷನ್ನಿಗೆ ಹೋಗುವುದೆಂದು ತೀರ್ಮಾನಿಸಿ ಮಲಗಿದೆ. ಅಣ್ಣ ಅವತ್ತು ಮಲಗಿರಲಿಕ್ಕಿಲ್ಲ.

ಬೆಳ್ಳಂಬೆಳಗ್ಗೆ ಅಣ್ಣನೇ ನನ್ನನ್ನು ಎಬ್ಬಿಸಿದ. ನಾನು ಕಣ್ಣು ಬಿಡುವ ಮೊದಲೇ ಅವನು ರೆಡಿಯಾಗಿಯಾಗಿತ್ತು. ನನಗೆ ಬೆಳಗ್ಗೆ ಹೊತ್ತು ಬೇಗನೆ ಎದ್ದು ಅಭ್ಯಾಸವೇ ಇಲ್ಲ. ಇಷ್ಟವೂ ಇಲ್ಲ. ನಾನಿನ್ನು ನಿದ್ದೆಗಣ್ಣಲ್ಲೇ ಇರುವಾಗ ''ನಾನು ಕಾವ್ಯಳ  ಮನೆ ಹತ್ತಿರ ಹೋಗ್ತೀನಿ. ನೀನು ಡೈರೆಕ್ಟಾಗಿ ರೈಲ್ವೆ ಸ್ಟೇಷನ್ನಿಗೆ ಬಂದು ಬಿಡು'' ಎಂದು ಹೇಳಿ ನನ್ನ ಉತ್ತರಕ್ಕೂ ಕಾಯದೆ ಹೊರಟ.

ನಾನು ಎರೆಡು ನಿಮಿಷ ಕುಂತಲ್ಲಿಯೆ ತೂಕಡಿಸಿ, ಮನಸ್ಸಿಲ್ಲದೆ ಹಾಸಿಗೆಯಿಂದ ಎದ್ದು ರೆಡಿಯಾಗಲು ಹೊರಟೆ. ನನಗೆ ಅಂತವೇ ಅಣ್ಣ ಬಿಸಿನೀರು ಕಾಯಿಸಿಟ್ಟು ಹೋಗಿದ್ದ. ಅವನಿಗೆ ಪುಣ್ಯ ಬರಲಿ ಎಂದುಕೊಂಡು ಬೇಗಬೇಗನೆ ರೆಡಿಯಾದೆ.

ನಾನು ಮನೆಯಿಂದ ಹೊರಬಿದ್ದಾಗ ರಾಮಗಿರಿಯ ಜನಗಳಾಗಲೇ ಎದ್ದು ಕೆಲಸ ಶುರು ಮಾಡಿದ್ದರು. ಬೀದಿನಾಯಿಗಳಿನ್ನೂ ಮಣ್ಣಲ್ಲಿ ಮುದುಡಿಕೊಂಡು ಮಲಗಿದ್ದವು. ಕೆಲವರು ಮುದುಕರು  ಮನೆಯ ಮುಂದೆ ಕುಳಿತು ಎಲೆ-ಅಡಿಕೆ ಕುಟ್ಟುತ್ತಿದ್ದರು. ಎಲ್ಲರ ಮನೆಯ ಮುಂದೆಯೂ ಆಗಲೇ ರಂಗೋಲಿ ಬಿದ್ದಿದ್ದವು. ಅದೊಂದು ವಿಭಿನ್ನ ವಿಸ್ಮಯ ಪ್ರಪಂಚ.

ನಾನು ರೈಲ್ವೆ ಸ್ಟೇಷನ್ನಿಗೆ ಬಂದಾಗ ಆಗಲೇ ಕಾವ್ಯ ಮತ್ತು ಅಣ್ಣ ಬಂದಾಗಿತ್ತು. ನನ್ನನ್ನು ನೋಡಿ ಕಾವ್ಯಳ  ಕಣ್ಣರಳಿದವು.

ನಾನೇ ಮಾತು ಶುರುಮಾಡಿದೆ "ಏನು ನಮಗೆ ಹೇಳದೆ ಹೊರಡೋ ಪ್ಲಾನೇನು?"

"ಛೆ ಛೆ, ಹಾಗೇನು ಇಲ್ಲ. ಎಲ್ಲ ಇದ್ದಕ್ಕಿದ್ದಂತೆ ಆಗಿದ್ದರಿಂದ ನನಗೆ ಏನಂತ ಹೇಳಬೇಕು ಅನ್ನೋದೇ ಗೊತ್ತಾಗ್ಲಿಲ್ಲ."

''ಹೋಗ್ಲಿ ಬಿಡಿ. ಕೆಲವೊಮ್ಮೆ ಹಾಗಾಗ್ತದೆ."

"ನೀವು ಯಾವಾಗ ಬಂದ್ರಿ?"

"ನಿನ್ನೆ ಸಂಜೆನೇ ಬಂದೆ."

"ಮತ್ಯಾಕೆ ಬರ್ಲಿಲ್ಲ ನಮ್ಮನ್ನ ನೋಡೋಕೆ?"

"ನೀವು ಇವತ್ತು ಊರಿಗೆ ಹೋಗ್ತಾ ಇದಿರಲ್ವ. ಹಾಗಾಗಿ ಯಾಕೆ ಶಿವಪೂಜೇಲಿ ಕರಡಿ ತರ ಬರ್ಲಿ ಅಂತ ಸುಮ್ನಾದೆ"

ನಾನು ಬೇಕಂತಲೇ 'ಶಿವಪೂಜೇಲಿ ಕರಡಿಗೆ' ಅನ್ನುವ ಬದಲು 'ಶಿವಪೂಜೇಲಿ ಕರಡಿ' ಅಂದಿದ್ದೆ. ಅಣ್ಣನ ಮೂಡು ಹೇಗಿದೆ ಎಂದು ನೋಡಬೇಕಿತ್ತು. ಅವನು ಸರಿಯಾಗಿದ್ದರೆ ತಕ್ಷಣವೇ ನನ್ನನ್ನು ಸರಿಮಾಡಿ ''ಅದು ಕರಡಿಗೆ" ಎನ್ನುತ್ತಾನೆ. ಇಲ್ಲದಿದ್ದರೆ ಕಾವ್ಯ ಹೋದಮೇಲೆ ನನಗೆ ಖಂಡಿತವಾಗಿಯೂ ಬಹಳವೇ ದೊಡ್ಡ ಕೆಲಸ ಹೊತ್ತುಕೊಳ್ಳಬೇಕಾಗುತ್ತದೆ. ಅಣ್ಣ ಏನನ್ನೂ ಹೇಳದೆ ಎವೆಯಿಕ್ಕದೆ ದಿಗಂತದ ಕಡೆಗೆ ನೋಡುತ್ತಿದ್ದ. ಇವನು ಸಾಯೋ-ಗಿಯೋ ಪ್ರೋಗ್ರಾಮ್ ಏನಾದ್ರು ಇಟ್ಟುಕೊಂಡಿದ್ದಾನೋ ಎಂಬ ಸಣ್ಣ ಆಲೋಚನೆಯೊಂದು ಹಾಗೇ ಮನದಲ್ಲಿ ಸುಳಿದು ಹೋಯಿತು. ದಿವ್ಯಳೂ  ಕೂಡ ಅದನ್ನೇ ಯೋಚನೆ ಮಾಡುತ್ತಿದ್ದಳೇನೋ ಎಂಬ ಸಂಶಯ ನನಗೆ.

ಅದನ್ನು ಮುರಿಯಲೆಂದೇ ಕಾವ್ಯ ಮಾತು ಆರಂಭಿಸಿದಳು "Your brother will be very upset when I leave. Please take care of him." (ನಿಮ್ಮಣ್ಣ ತುಂಬಾ ಬೇಜಾರು ಮಾಡ್ಕೋತಾರೆ ನಾನು ಹೋದ್ಮೇಲೆ. ದಯವಿಟ್ಟು ಅವರನ್ನ ಚೆನ್ನಾಗಿ ನೋಡ್ಕೊಳಿ).

“Don’t worry, I will be there. But its his first love. I'm pretty sure it’ll take long time for him to recover” (ಚಿಂತೆ ಮಾಡ್ಬೇಡಿ, ನಾನಿರ್ತೇನೆ. ಆದ್ರೆ ಇದು ಅವನ ಮೊದಲ ಪ್ರೇಮ. ಖಂಡಿತವಾಗಿಯೂ ಅವನು ಸುಧಾರಿಸಿಕೊಳ್ಳೋಕೆ ತುಂಬಾ ಟೈಮ್ ಬೇಕಾಗಬಹುದು.)

“I am sorry I have to leave like this. But I don’t have an option. All this is happening so fast, I couldn’t express my feelings towards him. I never told him how much I love him.” (ನಾನು ರೀತಿಯಲ್ಲಿ ನಿಮ್ಮನ್ನೆಲ್ಲ ಬಿಟ್ಟು ಹೋಗ್ತಾಇರೋದಕ್ಕೆ ದಯವಿಟ್ಟು ನನ್ನ ಕ್ಷಮಿಸಿಬಿಡಿ. ಆದ್ರೆ ನಂಗೆ ಬೇರೆ ದಾರಿ ಆದ್ರೂ ಏನಿದೆ! ಇದೆಲ್ಲ ಎಷ್ಟು ದಿಡೀರನೆ ಆಗೋಯ್ತು ಅಂದ್ರೆ, ನಂಗೆ ನಿಮ್ಮಣ್ಣನಿಗೆ ನನ್ನ ಭಾವನೆಗಳನ್ನ ಹೇಳ್ಕೊಳೋಕು ಸಾಧ್ಯ ಆಗ್ಲಿಲ್ಲ. ನಾನ್ಯಾವತ್ತೂ ಅವರಿಗೆ ನಾನು ಅವರನ್ನ ಎಷ್ಟು ಪ್ರೀತಿಸ್ತೀನಿ ಅಂತ ಹೇಳಲೇ ಇಲ್ಲ.) ಇಷ್ಟು ಹೇಳುವಷ್ಟರಲ್ಲಿ ಕಾವ್ಯಳ ಕಣ್ಣಾಲಿಗಳು ತುಂಬಿ, ಧ್ವನಿ ಗದ್ಗದಿಸಿ, ಮಾತು ಅಲ್ಲಿಯೇ ನಿಂತುಬಿಟ್ಟಿತು.

ನನಗೆ ಅಣ್ಣನ ಕಡೆಗೆ ನೋಡುವಷ್ಟು ಧೈರ್ಯ ಬರಲಿಲ್ಲ. ಅವನ ಕಣ್ಣಾಲಿಗಳೂ ತುಂಬಿದ್ದವು ಎನ್ನುವುದರಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ.

ನಾವು ಹಾಗೆ ಅಣ್ಣನಿಗೆ ಗೊತ್ತಿಲ್ಲದ ಭಾಷೆಯಲ್ಲಿ ಮಾತನಾಡೋದು ಹೆಚ್ಚು ಸರಿಯಲ್ಲ ಅನ್ನಿಸಿತು. "ನಾವೆಲ್ಲಾ ಮತ್ತೆ ಹೀಗೇ ಭೇಟಿಯಾಗೋದು ಯಾವಾಗ?" ಎಂದು ಕಾವ್ಯಳಿಗೆ ಕೇಳಿದೆ.

ಅವಳು ಅಣ್ಣನ ಕಡೆ ನೋಡಿದಳು. ಅಣ್ಣ ಇನ್ನೂ ದಿಗಂತದ ಕಡೆಗೆ ನೋಡುತ್ತಿದ್ದ. ಅವನ ನೋಟ ಸ್ವಲ್ಪವೂ ಸಡಿಲಿಸಲಿಲ್ಲ. ಮನದಲ್ಲಿ ಎಷ್ಟು ನೋವಿತ್ತೋ?? ಆದರೆ ಕಣ್ಣಲ್ಲಿ ಇನ್ನೂ ನೀರಿತ್ತು.

ಅದೇನಾಯಿತೋ ಕಾವ್ಯಳಿಗೆ, ಅವನನ್ನು ಹಾಗೆ ನೋಡಿದವಳೇ ಅವನನ್ನು ಬಿಗಿದಪ್ಪಿ ಜೋರಾಗಿ ಬಿಕ್ಕಳಿಸಿ ಅಳಲು ಶುರುಮಾಡಿದಳು. ಅವರನ್ನು ಹಾಗೆ ನೋಡಿ ಯಾಕೋ ನನಗೂ ಕಣ್ಣಂಚಿನಲ್ಲಿ ನೀರು. ಅಣ್ಣ ಮಾತ್ರ ಇನ್ನೂ ಕಲ್ಲಿನಂತೆ ಹಾಗೇ ದಿಗಂತದ ಕಡೆಗೆ ನೋಡುತ್ತಲೇ ಇದ್ದ. ಅವನಿಗೆ ಕಾವ್ಯಳನ್ನು ಆ ಪರಿಸ್ಥಿತಿಯಲ್ಲಿ ನೋಡುವಷ್ಟು ಶಕ್ತಿಯಿರಲಿಲ್ಲ ಎಂದು ನನಗೆ ಆಗಲೇ ಗೊತ್ತಾದದ್ದು.

ಕಾವ್ಯಳಿಗೆ ಸಮಾಧಾನವಾದಾಗ ತನ್ನನ್ನು ತಾನೇ ಸಂಭಾಳಿಸಿಕೊಂಡು ದೂರ ನಿಂತಳು. ಆದರೆ ಕಣ್ಣೀರು ನಿಲ್ಲಲಿಲ್ಲ.

ಸ್ವಲ್ಪ ಹೊತ್ತು ರೈಲ್ವೆ ಸ್ಟೇಷನ್ನಿನಲ್ಲಿ ಸ್ಮಶಾನ ಮೌನ ಆವರಿಸಿದ ಭಾವನೆ. ಏನೂ ಮಾತನಾಡಲು ಇಲ್ಲವೇ ಏನೋ ಎನ್ನುವಂತಹ ಸನ್ನಿವೇಶ. ಸುಂದರ ಪ್ರೀತಿಯೊಂದು ಕೊನೆಗೊಳ್ಳುವ ಕಾಲ.

ರೈಲ್ವೆ ಸ್ಟೇಷನ್ನಿನಲ್ಲಿ ಮೂರನೇ ಬಾರಿ ಗಂಟೆ ಬಾರಿಸಿ ಇನ್ನೇನು ರೈಲು ಬರುವುದಕ್ಕೆ ಕೆಲವೇ ಕ್ಷಣಗಳಿವೆ ಎಂದು ಸೂಚನೆ ಬಂತು. ಕಾವ್ಯ ಅತ್ತಿತ್ತ ತನ್ನ ಅಪ್ಪನಿಗಾಗಿ ಹುಡುಕಾಡಿದಳು. ಅವಳ ಅಪ್ಪ ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತು ತಮ್ಮ ಸಾಮಾನುಗಳನ್ನು ಎತ್ತಿಕೊಳ್ಳುತ್ತಿದ್ದರು. ನಾನು ಇವರಿಬ್ಬರನ್ನು ಇಲ್ಲಿಯೇ ಬಿಟ್ಟು, ಅವರ ಕಡೆಗೆ ನಡೆದೆ. ನನ್ನನ್ನು ಕಾವ್ಯಳ  ಸ್ನೇಹಿತ ಎಂದು ಪರಿಚಯಿಸಿಕೊಂಡು ಅವರ ಸಾಮಾನು ಎತ್ತಿಕೊಳ್ಳಲು ಸಹಾಯ ಮಾಡಿದೆ. ಅವರೂ ಸಣ್ಣದೊಂದು ನಗೆ ಬೀರಿದರು. ಅವರ ಹತ್ತಿರ ಏನೂ ಹೆಚ್ಚಿಗೆ ಮಾತನಾಡಲು ಇರಲಿಲ್ಲ. ನಾನು ನನ್ನ ಹೆಸರು ಹೇಳುವಷ್ಟರಲ್ಲಿ ದೂರದಲ್ಲಿ ರೈಲು ಜೋರಾಗಿ ಹಾರ್ನ್ ಹಾಕುತ್ತಾ ಕಂಡಿತು. ನಾನು ಕಾವ್ಯಳ  ತಂದೆಗೆ ಸಾಮಾನು ರೈಲಿನೊಳಗೆ ಇಟ್ಟುಕೊಡಲು ಒಂದೆರೆಡು ಸೂಟ್ಕೇಸ್ ಎತ್ತಿಕೊಂಡೆ. ರೈಲು ನಿಧಾನವಾಗಿ ನಮ್ಮ ಮುಂದೆ ಬಂದು ನಿಂತಾಗ ಕಾವ್ಯಳ  ತಂದೆ "ಕಾವ್ಯ, ಬೇಗ ಬಾ" ಎಂದು ಕರೆದು ರೈಲು ಹತ್ತಿದರು. ನಾನು ಅವರ ಹಿಂದೆಯೇ ಸೂಟ್ಕೇಸ್ ಹಿಡಿದು ರೈಲು ಹತ್ತಿದೆ. ನಾವು ಲಗ್ಗೇಜನ್ನೆಲ್ಲಾ ಜೋಡಿಸಿ ಇಡುವಷ್ಟರಲ್ಲಿ ಕಾವ್ಯ ಬಂದಳು. ಬಂದವಳೇ ಕಿಟಕಿ ಹಿಡಿದು ಕುಂತದ್ದು ನೋಡಿ ಅಳುತ್ತಿದ್ದಾಳೆ ಎಂದು ಗೊತ್ತಾಯ್ತು. ನಾನು ನಿಂತಲ್ಲಿಂದಲೇ ಅವಳಿಗೆ "ಟೇಕ್ ಕೇರ್ ಕಾವ್ಯ" ಎಂದೆ. ಅವಳು ನನ್ನ ಕಡೆಗೆ ತಿರುಗಿ ಕೈ ಬಿಸಿ ಟಾಟಾ ಮಾಡಿದಳು. ಅವಳ ಗಂಟಲು ಹಿಡಿದಿತ್ತು. ಮಾತು ಹೊರಡುತ್ತಿರಲಿಲ್ಲ. ಕಣ್ಣಲ್ಲಿ ಇನ್ನೂ ನೀರು.

ರೈಲು ಮತ್ತೊಮ್ಮೆ ಜೋರಾಗಿ ಹಾರ್ನ್ ಹಾಕಿ ಹೊರಡುವ ಸೂಚನೆ ಕೊಟ್ಟೊಡನೆಯೇ ನಾನು ರೈಲಿನಿಂದ ಕೆಳಗಿಳಿದು ಅಣ್ಣನಿಗೆ ಹುಡುಕಿದೆ. ಅವನಿನ್ನೂ ನಿಂತಲ್ಲಿಯೇ ನಿಂತು ದಿಗಂತವನ್ನೇ ನೋಡುತ್ತಿದ್ದ. ಕಾವ್ಯ ಕುಳಿತಿದ್ದ ಕಿಟಕಿಯ ಕಡೆಗೆ ನಡೆದು "ಅವನಿನ್ನೂ ಅಲ್ಲೇ ನಿಂತಿದ್ದಾನೆ" ಎಂದೆ. ಅವಳು ಒಮ್ಮೆ ಬಗ್ಗಿ ಅವನೆಡೆಗೆ ನೋಡಿದಳು. ಆದರೆ ಅವಳಿಗೆ ಕಂಡಿರಲಿಕ್ಕಿಲ್ಲ. ಅಷ್ಟರಲ್ಲಿ ರೈಲು ಮತ್ತೊಮ್ಮೆ ಹಾರ್ನ್ ಹಾಕಿ ನಿಧಾನವಾಗಿ ಮುನುವರೆಯಲು ಶುರುಮಾಡಿತು. ನಾನು ಅಣ್ಣನ ಕಡೆ ತಿರುಗಿ "ಬಾರೋ ಇಲ್ಲಿಗೆ" ಎಂದು ಕೂಗಿದೆ. ಅವನು ತನ್ನ ನೋಟ ಇನ್ನೂ ಬದಲಿಸಲಿಲ್ಲ. ಕಾವ್ಯ ಮತ್ತೊಮ್ಮೆ ಅಣ್ಣನ ಕಡೆಗೆ ಬಗ್ಗಿ ನೋಡಿದಳು. ಆದರೆ ಆಗಲೇ ರೈಲು ಸ್ವಲ್ಪ ಮುಂದೆ ಬಂದಿದ್ದರಿಂದ ಅವಳಿಗೆ ಇನ್ನೂ ಕಂಡಿರಲಿಕ್ಕಿಲ್ಲ. ಸಣ್ಣ ಮಗುವಂತೆ ಮುಖವನ್ನೆಲ್ಲ ಸಣ್ಣ ಮಾಡಿಕೊಂಡು ಮತ್ತೊಮ್ಮೆ ಕೈ ಬಿಸಿ ಟಾಟಾ ಮಾಡಿದಳು. ನಾನು ಅವಳಿಗೆ ಕೈಬೀಸಿ ಮತ್ತೊಮ್ಮೆ ಟೇಕ್ ಕೇರ್ ಎಂದು ಕೂಗಿದೆ. ರೈಲು ತನ್ನ ವೇಗ ಹೆಚ್ಚಿಸಿಕೊಂಡಾಗ ನಾನು ಕೈಬೀಸುತ್ತಲೇ ಹಿಂದೆಸರಿದೆ. ರೈಲು ನನ್ನ ಕಣ್ಣಿಂದ ಮಾಯವಾಗುವವರೆಗೂ ಅಲ್ಲೇ ನಿಂತಿದ್ದು ಹಿಂದುರಿಗೆ ಅಣ್ಣನ ಕಡೆಗೆ ನೋಡಿದೆ. ಅಣ್ಣ ಇನ್ನೂ ಶಿಲೆಯಂತೆ ಅಲ್ಲಿಯೇ ನಿಂತು ದಿಗಂತವನ್ನೇ ನೋಡುತ್ತಿದ್ದ

             ರಾಮಗಿರಿಯ ರೈಲ್ವೆ ಸ್ಟೇಷನ್ನು ಹೀಗೊಂದು ಸುಂದರ ಪ್ರೀತಿಗೂ ಮತ್ತದರ ಕೊನೆಗೂ ಸಾಕ್ಷಿಯಾದುದು ವಿಪರ್ಯಾಸ.

2 ಕಾಮೆಂಟ್‌ಗಳು:

ತೋಟದ ಮನೆ : ಭಾಗ-2

ತೋಟದ ಮನೆ ಭಾಗ-೨ ಪ್ರೇತದ ಅಟ್ಟಹಾಸ ಶಾಂತಮ್ಮನ ಟಾರ್ಚಿನ ಬೆಳಕಿನಲ್ಲಿ ದೇವಪ್ಪನ ಕಣ್ಣುಗಳು ಕೆಂಪಗೆ ಹೊಳೆಯುತ್ತಿದ್ದವು. ಯಾರೋ ಅವರ ಎರೆಡೂ ಕೈಗಳನ್ನು ಒಂದೊಂದು ದ...