ಈ ಕಥೆಯಲ್ಲಿನ ಪ್ರಸಂಗ ನಡೆದದ್ದು 2008 ರಲ್ಲಿ. ನಾನಾಗ ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಕೆಲಸಮಾಡಿಕೊಂಡಿದ್ದೆ. ಪ್ರತಿದಿನ ಬೆಳಗ್ಗೆ 7 ಗಂಟೆಗೆ ನನ್ನ ಕಂಪನಿ ಬಸ್ಸು ಮನೆಯ ಹತ್ತಿರವೇ ಬರುತ್ತಿತ್ತು. ಅಲ್ಲಿಂದ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಒಂದೂವರೆ ಗಂಟೆ ಪ್ರಯಾಣ ಮಾಡಿದರೆ ಆಫೀಸು. ಮತ್ತದೇ ಬಸ್ಸು ನಮ್ಮನ್ನು ಸಂಜೆ 6 ಗಂಟೆಗೆ ಮನೆಗೆ ತಂದು ಬಿಡುತ್ತಿತ್ತು. ಇದು ನನ್ನ ಸರಾಸರಿ ದೈನಂದಿನ ಜೀವನ. ಬಸ್ಸಿನಲ್ಲಿ ಒಂದೂವರೆ ಗಂಟೆ ಕಾಲ ಕಳೆಯಲಿಕ್ಕೆ ನಮ್ಮಲ್ಲಿ ಹಲವಾರು ದಾರಿಗಳಿದ್ದವು. ಹೆಚ್ಚಿನವರು ಎಫ್ ಎಂ ಕೇಳಿಕೊಂಡು ಕಾಲಕಳೆದರೆ ಉಳಿದವರು ಅಕ್ಕಪಕ್ಕದವರ ಜೊತೆ ಮಾತಾಡುತ್ತ ಕುಳಿತಿರುತ್ತಿದ್ದರು. ಮುಂದಿನ ಸೀಟುಗಳಲ್ಲಿ ಹೆಚ್ಚಾಗಿ ಸೀನಿಯರ್ಸ್ ಕುಳಿತರೆ ಹಿಂದಿನ ಸೀಟುಗಳಲ್ಲಿ ಜ್ಯೂನಿಯರ್ಸ್ಗಳೇ ಇರುತ್ತಿದ್ದರು. ಅವರೆಲ್ಲಾ ಜೋರಾಗಿ ಮಾತಾಡುತ್ತಾ, ಹರಟುತ್ತಾ ಮತ್ತೂ ಕೆಲವೊಮ್ಮೆ ಯಾರಾದರೂ ಒಳ್ಳೇ ಜೋಕ್ ಮಾಡಿದರೆ ಜೋರಾಗಿ ನಗುತ್ತ ಕಾಲಕಳೆಯುತ್ತಿದ್ದರು. ನಾನು ಯಾವಾಗಲು ಸೀನಿಯರುಗಳ ಜೊತೆಯೇ ಇದ್ದು ಆದಷ್ಟು ನಿಶಬ್ದವಾಗಿರುತ್ತಿದ್ದೆ. ಎಫ್ ಎಂ ಇಲ್ಲದಿದ್ದರೆ ಮೊಬೈಲಿನಲ್ಲಿ ಹಾಡು, ಅಷ್ಟೇ ನನ್ನ ಕೆಲಸವಾಗಿರುತ್ತಿತ್ತು. ನನ್ನ ಜೊತೆ ಬಸ್ಸಿನಲ್ಲಿ ಹೆಚ್ಚಾಗಿ ಮಾತಾಡುವವರಲ್ಲಿ ರವಿ ಒಬ್ಬ. ನನ್ನ ಜೊತೆಗೇ ಅವನೂ ಕೆಲಸಕ್ಕೆ ಸೇರಿದ್ದರಿಂದ ಬೇಗ ಪರಿಚಯವಾಗಿತ್ತು. ಕೆಲಸಕ್ಕೆ ಸೇರಿದ ಹೊಸತರಲ್ಲಿ ನಾವಿಬ್ಬರೂ ಬಸ್ಸಿನಲ್ಲಿ ಆಫೀಸ್ ಬರುವವರೆಗೂ ಹರಟುತ್ತಿದ್ದೆವು. ಕಾಲಕ್ರಮೇಣ, ನಮ್ಮಲ್ಲಿ ಮಾತಾಡಲಿಕ್ಕೆ ಹೆಚ್ಚೇನೂ ಉಳಿಯದಿದ್ದಾಗ ನಾವೂ ಹಾಡು ಕೇಳಿಕೊಂಡು ಕುಳಿತುಬಿಡುತ್ತಿದ್ದೆವು. ನಮ್ಮ ಬಸ್ಸಿನ ಕಾರ್ಯಕ್ರಮ ಹೀಗೇ ಸಾಗಿತ್ತು.
ಒಂದು ಸೋಮವಾರ ಬಸ್ಸು ಸ್ವಲ್ಪ ತಡವಾಗಿ ಬಂತು. ನಾನು ಹತ್ತಿ ಮೊದಲೇ ಹತ್ತಿದ್ದವರೊಂದಿಗೆ ನಗು ಬದಲಾಯಿಸಿ, ಖಾಲಿ ಸೀಟು ಹುಡುಕಿ ಕುಳಿತುಕೊಂಡೆ. ನನ್ನ ಸ್ಟಾಪಿನಿಂದ ಹತ್ತು ನಿಮಿಷದಲ್ಲಿ ರವಿಯ ಸ್ಟಾಪು. ಅಲ್ಲಿ ಅವನೂ ಹತ್ತಿಕೊಂಡ. ಸೋಮವಾರವಾದ್ದರಿಂದ, ಅವನ ಜೊತೆ ಮಾತಾಡಲಿಕ್ಕೆ ಬೇಕಾದಷ್ಟಿತ್ತು. ವೀಕೆಂಡ್ ಹೇಗಿತ್ತು? ಏನು ಮಾಡಿದೆ? ಎಲ್ಲಿಗೆ ಹೋಗಿದ್ದೆ ಇತ್ಯಾದಿ ಪ್ರಶ್ನೆಗಳನ್ನು ಇಬ್ಬರೂ ಕೇಳಿಕೊಂಡೆವು. ನಾನು ನನ್ನ ಊರಿಗೆ ಹೋಗಿದ್ದಾಗಿಯೂ, ಅವನು ಅವನ ಸಂಬಂದಿಕರ ಮನೆಯಲ್ಲೆಲ್ಲೋ ಗಡದ್ದಾಗಿ ನಾನ್ವೆಜ್ ತಿಂದಿದ್ದಾಗಿಯೂ ಹೇಳಿದ. ಅದಾದಮೇಲೆ ನಾವಿಬ್ಬರೂ ಹಾಡು ಕೇಳಿಕೊಂಡು ಕೂತೆವು.
ಅಂದು ಎಂದಿಗಿಂತ ಸ್ವಲ್ಪ ಹೆಚ್ಚಿಗೆಯೇ ಟ್ರಾಫಿಕ್ ಇದ್ದು, ಒಂದು ಗಂಟೆಯಾದರೂ ನಾವೂ ಅರ್ಧ ದಾರಿಯನ್ನೂ ಸವೆಸಿರಲಿಲ್ಲ. ಹೀಗೆ ಆದರೆ ನಾವೆಲ್ಲ ವಾಪಸ್ಸು ಬರುವುದು ಲೇಟ್ ಆಗಬಹುದು ಎಂದುಕೊಂಡೆ. ಒಂದು ಕಡೆ ಬಸ್ಸು ಟ್ರಾಫಿಕ್ ನಲ್ಲಿ ನಿಂತೇಬಿಟ್ಟಿತು. ಬಹಳ ಹೊತ್ತಾದರೂ ಟ್ರಾಫಿಕ್ ಕದಲಲೇ ಇಲ್ಲ. ನಾನು ಇದೇನಾಯ್ತಪ್ಪ ಎಂದು ಕಿವಿಯಿಂದ ಇಯರ್ಫೋನ್ ತೆಗೆದು ಕುಳಿತೆ. ಆಶ್ಚರಕ್ಕೆ ಹಿಂದಿನ ಸೀಟಿನವರೆಲ್ಲ ಪೂರ್ತಿ ಮೌನವಾಗಿದ್ದರು. ನಾನು, ಎಂದೂ ಇರದ ಮೌನ ಇಂದೇಕೆ ಹಿಂದುರಿಗಿ ಪರಿಚಯವಿದ್ದ ಹುಡುಗಿಯ ಕಡೆಗೆ ನೋಡಿ ಕಿರುನಗೆ ಕೊಟ್ಟೆ. ಅವಳೂ ಚಿಕ್ಕದಾಗಿ ನಕ್ಕಳು.
"ಏನಾಯ್ತು?? ಯಾಕಿವತ್ತು ಇಷ್ಟೊಂದು ಸೈಲೆಂಟಾಗಿ ಬಿಟ್ಟಿದ್ದೀರಿ?" ಎಂದೆ.
ಅದಕ್ಕವಳು ಮುಂದೆ ತೋರಿಸಿ ಕಿರುದನಿಯಲ್ಲಿ "ಇವತ್ತು ಮ್ಯಾನೇಜರ್ ಬಂದಿದಾರೆ ಸಾರ್ ಬಸ್ಸಿಗೆ" ಎಂದಳು.
ಕಂಪನಿ ಮ್ಯಾನೇಜರಿಗೆ ಬಸ್ಸಿನಲ್ಲಿ ಬರುವಂತದ್ದೇನಾಯ್ತು ಎಂದು "ಎಲ್ಲಿ?" ಎಂದೆ.
ಅವಳು ಮುಂದಿನ ಸೀಟಿನ ಕಡೆ ಕೈಮಾಡಿ ತೋರಿಸಿದಳು. ನನಗೆ ಕಾಣಲಿಲ್ಲ. ಹಾಗಾಗಿ ಎದ್ದು ನಿಂತು ಎಲ್ಲಿ ಕುಳಿತಿದ್ದಾರೆ ಎಂದು ಹುಡುಕಾಡಿದೆ. ಅದೇ ಸಮಯಕ್ಕೆ ಅವರೂ ನನ್ನ ಕಡೆಗೆ ತಿರುಗಿ ನೋಡಿದರು. ನಾನು ಸ್ವಲ್ಪ ಅಳುಕಿದರೂ ತೋರಿಸಿಕೊಳ್ಳದೆ ನಗು ಬದಲಾಯಿಸಿ "ಹಲೋ ಸರ್" ಎಂದೆ. ಅದಕ್ಕೆ ಅವರೂ ‘ಹಲೋ..’ ಎಂದರು.
ನಾನು ಕಂಪನಿ ಸೇರಿದ ಮೂರು ವರ್ಷದಲ್ಲಿ ಇದೆ ಮೊದಲು ಅವರನ್ನು ಬಸ್ಸಿನಲ್ಲಿ ಕಂಡದ್ದು. ಎಲ್ಲೋ ಕಾರು ಕೆಟ್ಟುಹೋಗಿರಬೇಕು ಎಂದುಕೊಂಡು ಸುಮ್ಮನಾದೆ. ಆಗೆಲ್ಲ ಈಗಿರುವಂತೆ ಓಲಾ ಮತ್ತು ಊಬರ್ ಗಳಿರಲಿಲ್ಲ. ಟ್ಯಾಕ್ಸಿ ತೆಗೆದುಕೊಳ್ಳಬೇಕಿತ್ತು. ಏನಾದರಾಗಲಿ, ಅವರು ಅವತ್ತು ಬಂದುದರಿಂದ ಇಡೀ ಬಸ್ಸೇ ಸ್ಮಶಾನಮೌನದಲ್ಲಿ ಮುಳುಗಿಹೋಗಿತ್ತು. ನಾನು ಪಕ್ಕದಲ್ಲಿದ್ದ ರವಿಯ ಕಡೆಗೆ ನೋಡಿದೆ, ಅವನಿನ್ನೂ ಹಾಡು ಕೇಳುತ್ತಲೇ ಇದ್ದ. ಟ್ರಾಫಿಕ್ ಜಾಸ್ತಿಯಾಗಿ ಧೂಳೆಲ್ಲಾ ಬಸ್ಸಿನೊಳಗೆ ಬರಲು ಶುರುವಾಗಿದ್ದರಿಂದ ಎಲ್ಲರೂ ಬೇಗಬೇಗನೆ ಕಿಟಕಿ ಹಾಕಿಬಿಟ್ಟರು.
ಇದ್ದಕ್ಕಿದ್ದಂತೆ ರವಿಯ ಕಡೆಯಿಂದ ಪುರ್ ಎಂದು ಶಬ್ದ ಬಂತು. ನನಗೆ ಏನಾಯಿತೆಂದು ಗೊತ್ತಾದರೂ ಗೊತ್ತಿಲ್ಲದವನಂತೆ ಕಿಟಕಿ ಹೊರಗೆ ಕಣ್ಣಾಯಿಸುತ್ತಿದ್ದೆ. ಕಿವಿಯಲ್ಲಿ ಇಯರ್ಫೋನ್ ಇದ್ದುದರಿಂದ ರವಿಗೆ ತಾನು ಮಾಡಿದ ಕೆಲಸ ಗೊತ್ತಾಗಿರಲಿಕ್ಕಿಲ್ಲ. ಹಾಗಾಗಿ ಅವನೂ ಯಾರಿಗೂ ಗೊತ್ತಾಗಲಿಲ್ಲವೆಂದು ನಿಟ್ಟುಸಿರು ಬಿಟ್ಟ. ಅವನಿಗೆ ಗೊತ್ತಾಗದಂತೆ ಬಸ್ಸಿನ ಹಲವಾರು ಜನ ಒಳಗೊಳಗೇ ನಕ್ಕು ಸುಮ್ಮನಾದರು. ಅಂದು ಮೆನೇಜರ್ ಏನಾದರು ಇರದಿದ್ದರೆ ಎಲ್ಲರು ಜೋರಾಗಿ ನಕ್ಕುಬಿಡುತ್ತಿದ್ದರು. ಕೆಲವರು ನಿಧಾನವಾಗಿ ಗುಸುಗುಸು ಮಾತಾಡಿ ಕಿಸಕ್ಕೆಂದರು. ಆದರೆ ರವಿ ಇನ್ನೂ ಕಿವಿಯಲ್ಲಿ ಇಯರ್ಫೋನು ಸಿಕ್ಕಿಸಿಕೊಂಡದ್ದರಿಂದ ಅದು ಅವನಿಗೆ ಕೇಳಿರಲಿಕ್ಕಿಲ್ಲ.
ವಿಷಯ ಅಲ್ಲಿಗೆ ನಿಂತುಹೋಯಿತೆನ್ನುವಷ್ಟರಲ್ಲಿ ಮತ್ತೊಮ್ಮೆ ಆ ಮಹಾನುಭಾವ ಹಿಂದಿನದಕ್ಕಿಂತಲೂ ಜೋರಾಗಿ ಮತ್ತೊಮ್ಮೆ ಪುರ್ರ್ರ್ ಮಾಡಿದ. ಅಲ್ಲಿಯವರೆಗೂ ತಡೆದುಕೊಂಡಿದ್ದವರೆಲ್ಲರೂ ಒಮ್ಮೆಲೇ ಜೋರಾಗಿ ನಗಲು ಶುರುಮಾಡಿದರು. ಹಿಂದಿನ ಸೀಟಿನ ಹುಡುಗಿ ನಿಧಾನವಾಗಿ ಕಿಟಕಿ ತೆಗೆದಳು. ಆಗ ನಾನೂ ಜೋರಾಗಿ ನಕ್ಕುಬಿಟ್ಟೆ. ಆವಾಗಲೇ ರವಿಗೆ ತಾನು ಮಾಡಿದ ರಾದ್ಧಾಂತದ ಅರಿವಾದದ್ದು. ಮುಂದಿನಿಂದ ಮೆನೇಜರ್ ಕೂಡ ನಗು ತಡೆಯಲಾಗದೆ ಹಿಂತಿರುಗಿ ನೋಡಿದರು. ತಕ್ಷಣವೇ ನಾವೆಲ್ಲರೂ ಒಗ್ಗಟ್ಟಾಗಿ ರವಿಯ ಕಡೆ ತಿರುಗಿನೋಡಿ ಅವರಿಗೆ ಅರ್ಥವಾಗುವಂತೆ ಮಾಡಿದೆವು. ಅವರು ಒಮ್ಮೆ ತಲೆಯಲ್ಲಾಡಿಸಿ ಮತ್ತೆ ಮುಂತಿರುಗಿ ಕೂತರು. ಪಾಪ ರವಿ ತನ್ನ ಸೀಟಿನಲ್ಲಿಯೇ ಕರಗಿ ಹೋದ. ಇದ್ದಲ್ಲಿಯೇ ಚಡಪಡಿಸಿ, ತಲೆಯನ್ನು ಎತ್ತದೆ ಅಕ್ಷರಶಃ ಮೌನಿಯಾದ. ನಮಗೆಲ್ಲ ಅಂದು ಆಫೀಸಿನಲ್ಲಿ ಮಾತನಾಡಿಕೊಳ್ಳಲು ಒಳ್ಳೇ ಸಂಗತಿ ಸಿಕ್ಕಿತ್ತು. ಸಂಜೆಯೊಳಗೆ ಇಡೀ ಕಂಪನಿಯೇ ರವಿ ಎಂದರೆ ಯಾರೆಂದು ಹುಡುಕುವಂತಹ ಕೆಲಸ ಮಾಡಿಕೊಂಡಿದ್ದ.
ಸಂಜೆ ಮತ್ತೆಲ್ಲರೂ ಕೆಲಸ ಮುಗಿಸಿ ಬಸ್ಸಿಗೆ ಬರುವಾಗ ಒಬ್ಬರನ್ನೊಬ್ಬರು ನೋಡಿ ನಕ್ಕಿದ್ದೆ ನಕ್ಕಿದ್ದು. ರವಿ ಇನ್ನು ಬಂದಿರಲಿಲ್ಲವಾದ್ದರಿಂದ, ನಮಗೆ ಇನ್ನೂ ಖುಷಿಯಾಯ್ತು. ಬೆಳಗ್ಗೆ ಮೆನೇಜರ್ ಇದ್ದುದರಿಂದ ಆದಷ್ಟು ಎಲ್ಲರು ಸುಮ್ಮನಿದ್ದು ಆಫೀಸಿಗೆ ಬಸ್ಸಿನಿಂದಿಳಿದು ಆಫೀಸಿಗೆ ಹೋಗಿದ್ದೆವು. ಸಂಜೆ ಅವರು ಬರಲ್ಲಿಲ್ಲದ್ದು ಎಲ್ಲರಿಗೂ ಬಾಯಿಕೊಟ್ಟಂತಾಗಿತ್ತು. ಎಲ್ಲರು ಬಂದರೂ ರವಿ ಇನ್ನು ಬರಲಿಲ್ಲ, ಪಾಪ ನಾಚಿಕೆಯಿಂದ ಅವನು ಎಲ್ಲಿ ಹೋದನೋ ಎನಿಸಿತು. ಮತ್ತಷ್ಟು ಹೊತ್ತು ನಾವೆಲ್ಲ ಕಾದು ಅವನ ಬಗ್ಗೆಯೇ ಮಾತಾಡಿ ಇನ್ನಷ್ಟು ನಕ್ಕೆವು. ಎಷ್ಟು ಹೊತ್ತಾದರೂ ಅವನು ಬರದಿದ್ದುದಕ್ಕೆ ಸೀನಿಯರುಗಳು ನನ್ನನ್ನು "ಎಲ್ರಿ ಅವರು?" ಎಂದು ಕೇಳಿದರು. ನನಗೂ ಗೊತ್ತಿರಲಿಲ್ಲ. ನಾನವನಿಗೆ ಫೋನ್ ಮಾಡಿ "ಎಲ್ಲಿದ್ದೀಯಪ್ಪ?? ನಾವೆಲ್ಲ ಬಸ್ಸಿನಲ್ಲಿ ನಿನಗೋಸ್ಕರ ಕಾಯ್ತಾಯಿದ್ದೀವಿ" ಎಂದೆ. ಅದಕ್ಕವನು "ಅಯ್ಯೋ ಸಾರ್, ನಾನು ಸಿಟಿ ಬಸ್ನಲ್ಲೇ ಹೋಗ್ತಿದೀನಿ ಸಾರ್. ಏನೋ ಅರ್ಜೆಂಟ್ ಕೆಲಸ ಇತ್ತು ಅದಕ್ಕೆ ಬಂದ್ಬಿಟ್ಟೆ" ಎಂದ. ಅವನು ಸುಳ್ಳು ಹೇಳುತ್ತಿದ್ದನೆಂದು ನನಗೂ ಗೊತ್ತು, ಆದರೆ ಅವನಿಗೆ ಅದು ಗೊತ್ತಾಗಬಾರದೆಂದು "ಆಯ್ತಯ್ತು, ಸರಿ ಬಿಡು" ಎಂದು ಫೋನಿಟ್ಟೆ. ನಾನದನ್ನು ಬಸ್ಸಿನವರಿಗೆ ಹೇಳಿದಾಗ ಅವರಿಗೂ ನಿಜಾಂಶ ಗೊತ್ತಾಗಿ ಮತ್ತೊಮ್ಮೆ ಎಲ್ಲರು ಜೋರಾಗಿ ನಕ್ಕರು.
ಅಂದಿನಿಂದ ರವಿ ಒಂದು ವಾರ ಬಸ್ಸಿನಲ್ಲಿ ಬರಲೇ ಇಲ್ಲ. ಏನೇನೋ ಸಬೂಬು ಹೇಳಿಕೊಂಡು ತಪ್ಪಿಸಿಕೊಂಡುಬಿಡುತ್ತಿದ್ದ. ಮೊದಲೇ ಸ್ವಲ್ಪ ನಾಚಿಕೆ ಸ್ವಭಾವದವ, ಅದರಲ್ಲೂ ಇಂತಹದ್ದೊಂದು ರಾದ್ಧಾಂತದಲ್ಲಿ ಸಿಲುಕಿ ಕಣ್ಣಿಗೇ ಕಾಣದಂತಾದ. ಅವನು ಬರದಿದ್ದರೂ, ಅವನ ರಾದ್ದಂತ ಬಸ್ಸಿನಲ್ಲಿ ಒಂದು ವಾರದವರೆಗೂ ಚರ್ಚೆಯಾಯ್ತು. ಕೊನೆಗೆ ಅವನು ದಿನಾ ಬೈಕಿನಲ್ಲಿ ಆಫೀಸಿಗೆ ಬರುವ ವಿಷಯ ತಿಳಿದು ಯಾರೋ "ಯಾಕಂತೆ? ಬೈಕಿನಲ್ಲಿ ಬಿಟ್ರೆ ಗೊತ್ತಾಗಲ್ಲ ಅಂತಾನಾ? ಟ್ರಾಫಿಕ್ ಸಿಗ್ನಲ್ಲಿನಲ್ಲೇನಾದರೂ ಅವರು ಹಾಗೆ ಮಾಡಿದ್ರೆ ಇಡೀ ಊರೇ ನಗುತ್ತೆಕಣ್ರೀ" ಅಂದ್ರು. ಅದಕ್ಕೂ ಜನ ಗೊಳ್ಳೆಂದು ನಕ್ಕರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ