ಮಗ್ಗಿ ಹೇಳುವಾಗ
ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ನನ್ನ ತಂದೆಗೆ ದಾವಣಗೆರೆಯಿಂದ ಚಿಕ್ಕಜಾಜೂರಿಗೆ ವರ್ಗಾವಣೆಯಾಯಿತು. ಅವರು ಪೊಲೀಸು ಡಿಪಾರ್ಟ್ಮೆಂಟಿನಲ್ಲಿ ಇದ್ದುದರಿಂದ, ಅವರಿಗೆ ಕ್ವಾರ್ಟರ್ಸ್ಸು ಸಿಕ್ಕಿತ್ತು. ನನ್ನ ತಂದೆ ನಾವಿನ್ನೂ ದಾವಣಗೆರೆಯಲ್ಲಿ ಇದ್ದಾಗಲೇ ನಮ್ಮನ್ನೆಲ್ಲಾ ಮನೆ ನೋಡಲೆಂದು ಒಂದು ದಿನ ಚಿಕ್ಕಜಾಜೂರಿಗೆ ಕರೆದುಕೊಂಡು ಬಂದರು. ಅಲ್ಲಿನ ಪೊಲೀಸು ಕ್ವಾರ್ಟರ್ಸ್ಸುಗಳನ್ನು, ನಾಲ್ಕು ಮನೆಗಳು ಒಂದು ಸಾಲಿನಲ್ಲಿ ಇರುವಂತೆ ನಾಲ್ಕು ಸಾಲುಗಳಾಗಿ ಕಟ್ಟಿದ್ದರು. ಅದರಲ್ಲಿ ನಮ್ಮದು ಮೊದಲನೇ ಸಾಲಿನ ಎಡ-ಕೊನೆಯ ಮನೆ. ಮನೆಯ ಮುಂದೆ ದೊಡ್ಡ ಅಂಗಳ, ಅದರ ಮುಂದೆ ಚಿಕ್ಕದಾಗಿ ಕತ್ತರಿಸಿದ ಹುಲ್ಲುಹಾಸು, ಅದರ ಮದ್ಯೆದಲ್ಲಿ ಸಾಲಾಗಿ ನೆಟ್ಟಿದ್ದ ತೆಂಗಿನ ಮರಗಳು. ಮನೆಯ ಬಲಭಾಗಕ್ಕೆ ಅಂಟಿಕೊಂಡಂತೆ ಇನ್ನೊಂದು ಮನೆಯಿತ್ತು. ಅದರಲ್ಲಿ ಯಾರೋ ಆಗಲೇ ವಾಸವಾಗಿದ್ದರು. ಎಡಭಾಗದಲ್ಲಿ ಮತ್ತೆ ಹುಲ್ಲುಹಾಸು ಹಾಗು ಅದರಲ್ಲಿ ಅಲ್ಲಲ್ಲಿ ನೆಟ್ಟಿದ್ದ ಮೂರೂ ಪಪಾಯ ಮರಗಳು. ಆಗಲೇ ಆ ಮರಗಳು ದೊಡ್ಡವಾಗಿ ಅದರಲ್ಲಿ ಪಪಾಯ ಹಣ್ಣುಗಳು ಕಣ್ಣುಕುಕ್ಕುವಂತಿದ್ದವು. ಮನೆಯ ಹಿತ್ತಲು ಅಂಗಳದಷ್ಟೇ ದೊಡ್ಡದಾಗಿದ್ದು ಅಲ್ಲೊಂದು ಸಣ್ಣ ನೀರಿನ ತೊಟ್ಟಿ ಮತ್ತು ಅದರ ಪಕ್ಕದಲ್ಲೇ ಮುನಿಸಿಪಾಲಿಟಿ ನೀರಿನ ನಲ್ಲಿ ಇದ್ದವು. ಇಡೀ ಪೊಲೀಸು ಕ್ವಾರ್ಟರ್ಸ್ಸಿಗೆ ಬೇಲಿ ಹಾಕಿದಂತೆ ಎಕ್ಕೆ ಗಿಡಗಳು ಅಂಟಿಕೊಂಡು ಬೆಳೆದಿದ್ದವು. ಅದೊಂದು ಪುಟ್ಟ ಸುಂದರ ಪ್ರಪಂಚವೇ ಆಗಿತ್ತು.
ನಾವು ಚಿಕ್ಕಜಾಜೂರಿಗೆ ಬಂದ ಮೇಲೆ ನನ್ನನ್ನು ಅಪ್ಪ ಅಲ್ಲೇ ಹತ್ತಿರವಿದ್ದ ಸರ್ಕಾರಿ ಶಾಲೆಗೆ ಸೇರಿಸಿದ್ದರು. ನಾನು ಶೈಕ್ಷಣಿಕ ವರ್ಷದ ಮದ್ಯದಲ್ಲಿ ಶಾಲೆ ಬದಲಾಯಿಸಿದ್ದರಿಂದ ಅಲ್ಲಿದ್ದ ಕಾನ್ವೆಂಟ್ ಶಾಲೆಗಳು ನನ್ನನ್ನು ಸೇರಿಸಿಕೊಳ್ಳಲು ನಿರಾಕರಿಸಿದ್ದವು. ಅದೃಷ್ಟಕ್ಕೆ ಎಂಬಂತೆ ಸರ್ಕಾರಿ ಶಾಲೆ ಮನೆಗೆ ತುಂಬಾ ಹತ್ತಿರವಿದ್ದು ನನಗೆ ಹೋಗಿಬರಲು ತುಂಬಾ ಅನುಕೂಲವಾಗಿತ್ತು. ಸಾಲದ್ದಕ್ಕೆ ನನ್ನ ಪಕ್ಕದ ಮನೆಯ ಹುಡುಗಿಯೂ ಅದೇ ಶಾಲೆಯಲ್ಲಿ ನನ್ನದೇ ತರಗತಿಯಲ್ಲಿ ಓದಿತ್ತಿದ್ದುದರಿಂದ ನನಗೆ ಜೊತೆಗಾರರೊಬ್ಬರು ಸಿಕ್ಕಿದಂತಾಗಿತ್ತು. ಅವಳ ಹೆಸರು ವೀಣಾ. ತುಂಬಾನೇ ಒಳ್ಳೆಯ ಹುಡುಗಿ. ಅಷ್ಟೇ ಚೆನ್ನಾಗಿ ಓದುತ್ತಿದ್ದಳು ಕೂಡ. ಹಾಗಾಗಿ ನಮ್ಮಪ್ಪ ನನಗೆ ಪ್ರತಿ ಸಂಜೆ ಅವಳ ಜೊತೆಯೇ ಓದಲು ಕೂಡಿಸುತ್ತಿದ್ದರು. ನಾವಿಬ್ಬರೂ ನಮ್ಮ ಮನೆಯ ಅಂಗಳದಲ್ಲಿ ಚಾಪೆ ಹಾಸಿ ಕುಳಿತು ಓದಿಕೊಳ್ಳುತ್ತಿದ್ದೆವು. ಕೆಲವು ದಿನ ನಾನು ಜೋರಾಗಿ ಓದಿ ಅವಳಿಗೆ ಹೇಳಿಕೊಡುತ್ತಿದ್ದೆ, ಮತ್ತಲವು ದಿನ ಅವಳು ಜೋರಾಗಿ ಓದಿ ನನಗೆ ಹೇಳಿಕೊಡುತ್ತಿದ್ದಳು. ಹೀಗೇ ನಾವಿಬ್ಬರೂ ಬೇಗನೇ ಒಳ್ಳೆಯ ಗೆಳೆಯರಾದೆವು.
ನಾವಿಬ್ಬರೂ ಒಳ್ಳೆಯ ಗೆಳೆಯರಾಗಲು ಮತ್ತೊಂದು ಬಲವಾದ ಕಾರಣವೂ ಇತ್ತು. ಅದೆಂದರೆ, ನಮಗಿಬ್ಬರಿಗೂ ಕನ್ನಡ ವರ್ಣಮಾಲೆಯ ಒಂದೊಂದು ಅಕ್ಷರ ಹೇಳಲು ಬರುತ್ತಿರಲಿಲ್ಲ. ನಾನು ‘ಳ’ ಕಾರವನ್ನು ‘ಲ’ ಕಾರ ಮಾಡಿ ಹೇಳುತ್ತಿದ್ದೆ. ಅವಳು ‘ಕ’ ಕಾರವನ್ನು ‘ತ’ ಕಾರ ಮಾಡಿ ಹೇಳುತ್ತಿದ್ದಳು. ಉದಾಹರಣೆಗೆ, ನಾನು ಕಳ್ಳ ಹೇಳುವ ಬದಲು ಕಲ್ಲ ಎಂದು ಹೇಳುತ್ತಿದ್ದೆ, ಅವಳು ಕಾಗೆ ಹೇಳುವ ಬದಲು ತಾಗೆ ಎಂದು ಹೇಳುತ್ತಿದ್ದಳು! ಇದರಿಂದ ನಾವು ಮತ್ತೊಬ್ಬರು ಓದಿ ಪಾಠ ಹೇಳುವಾಗ ಅವರನ್ನು ರೇಗಿಸಿಕೊಂಡು ನಗೋದು ಸಾಮಾನ್ಯವಾಗಿತ್ತು. ನಾನು ಮೊದಲಿನಿಂದಲೂ ರೇಗಿಸುವುದರಲ್ಲಿ ನಿಸ್ಸಿಮನಾಗಿದ್ದುದರಿಂದ, ಸಾಮಾನ್ಯವಾಗಿ ನಾನೇ ಗೆಲ್ಲುತ್ತಿದ್ದೆ. ಆದರೆ, ಅವಳ ‘ಕ' ಕಾರದ ತಪ್ಪುಗಳಿಗಿಂತ ನನ್ನ ‘ಳ’ ಕಾರದ ತಪ್ಪುಗಳೇ ಹೆಚ್ಚು ಭಯಂಕರವಾಗಿರುತ್ತಿದ್ದುದರಿಂದ ಹೆಚ್ಚಿಗೆ ಕಸಿವಿಸಿಯಾಗುತ್ತಿದ್ದುದು ನನಗೇ.
ನಾವು ದಾವಣಗೆರೆಯಲ್ಲಿ ಇದ್ದಾಗ ನನ್ನ ಅತ್ತೆಯ ಮನೆಯೂ ಅಲ್ಲೇ ಇತ್ತು. ಪ್ರತೀ ಭಾನುವಾರ ನಾವೆಲ್ಲರೂ ಅವರ ಮನೆಗೆ ಹೋಗೋದು ಪ್ರತೀತಿ. ಒಮ್ಮೆ ಅಪ್ಪ ನನಗೆ ಹೊಸ ಚಪ್ಪಲಿ ಕೊಡಿಸಿದ್ದರು. ಈಗಿನ ಕಾಲದ ಮಕ್ಕಳು ಹಾಕುವಂತದ್ದಲ್ಲ, ಪ್ಯಾರಗಾನ್ ಹವಾಯಿ ಚಪ್ಪಲಿಗಳು. ಹೊಸತಿದ್ದುದರಿಂದ ಅವು ಬೆಳ್ಳಗೆ ಹೊಳೆಯುತ್ತಿದ್ದವು. ನಾವೊಮ್ಮೆ ಅತ್ತೆ ಮನೆಗೆ ಹೋಗಿದ್ದಾಗೆ ನನ್ನ ಅತ್ತೆ ಮಗ ಆ ಚಪ್ಪಲಿಗಳನ್ನು ಹಾಕಿಕೊಂಡು ಆಡಲಿಕ್ಕೆಂದು ಹೋಗಿಬಿಟ್ಟಿದ್ದ. ಮಣ್ಣಿನಲ್ಲಿ ಆಡಿದ್ದರಿಂದ ಅವು ಧೂಳಾಗಿ ಬಣ್ಣವೇ ಬದಲಾಯಿಸಿದ್ದಂತೆ ಕಂಡವು. ನನಗೇ ಕೋಪ ದುಃಖ ಎರೆಡೂ ಬಂದು ಜೋರಾಗಿ ಅಮ್ಮನಿಗೆ ಕೇಳುವಂತೆ “ಅಮ್ಮ, ರಾಜ ನನ್ನ ಚಪ್ಪಲಿ ಕೊಲೆ ಮಾಡಿಬಿಟ್ಟ..”ಎಂದು ವದರಿಗೆ. ನಾನು ಚಪ್ಪಲಿ ‘ಕೊಳೆ’ಯಾದುದನ್ನು ‘ಕೊಲೆ’ಯಾದುದಾಗಿ ಹೇಳಿದರಿಂದ, ಮನೆಯಲ್ಲಿದ್ದವರಿಗೆ ಯಾರು ಯಾರನ್ನು ಕೊಲೆ ಮಾಡಿದರೋ ಎಂದು ಹೌಹಾರಿ “ಏನಾಯ್ತೋ ಶಿವೂ” ಎಂದು ಓಡೋಡಿ ಬಂದರು. ನಾನು ನನ್ನ ಅತ್ತೆ ಮಗ ರಾಜನ ಕಡೆ ಕೈ ಮಾಡಿ,“ರಾಜ ನನ್ನ ಚಪ್ಪಲಿ ಕೊಲೆ ಮಾಡಿಬಿಟ್ಟ” ಎಂದು ದುಃಖದಲ್ಲೇ ಹೇಳಿದೆ. ಕೊನೆಗೆ ಅವರಿಗೆಲ್ಲ ನನ್ನ ತೊದಲುವಿಕೆಯ ಪ್ರಮಾಣ ಅರಿವಾಗಿ ಸದ್ಯ ಯಾರೂ ಸಾಯಲಿಲ್ಲವಲ್ಲ ಎಂದು ಸಮಾಧಾನಪಟ್ಟುಕೊಂಡರು. ನನ್ನ ಅಮ್ಮ ಆ ಚಪ್ಪಲಿಗಳನ್ನ ಚೆನ್ನಾಗಿ ತೊಳೆದು ಮತ್ತೆ ಹೊಸತಂತೆ ಕಾಣುವವರೆಗೂ ನಾನು ಅವನ್ನು ಹಾಕಿಕೊಳ್ಳಲಿಲ್ಲ.
ಮಕ್ಕಳಿಗೆ ಚಿಕ್ಕವರಿದ್ದಾಗ ಜಾತಿಭೇದಗಳಾವು ಹೆಚ್ಚಾಗಿ ಗೊತ್ತಿರುವುದಿಲ್ಲ. ಆದರೆ ನನಗೆ ವೀಣಾ ಬ್ರಾಹ್ಮಣಳೆಂದು ಗೊತ್ತಾಗಲು ನಮ್ಮ ಪಠ್ಯಪುಸ್ತಕದಲ್ಲೇ ಹಲವಾರು ಸಂಗತಿಗಳು ಸಹಾಯ ಮಾಡಿದವು. ಉದಾಹರಣೆಗೆ, ನಾವು ಆರೋಗ್ಯವಾಗಿರಲು ಎಂತೆಂತಹ ಆಹಾರ ತಿನ್ನಬೇಕೆಂದು ತಿಳಿಸಲು ಒಂದು ಪಾಠವೇ ಇತ್ತು. ಅದರಲ್ಲಿ ಮೀನು, ಮಾಂಸ, ಮೊಟ್ಟೆ ಇತ್ಯಾದಿ ಪದಾರ್ಥಗಳು ಅತ್ಯಂತ ಆರೋಗ್ಯಕರ ಎಂದು ಹೇಳಿದ್ದರು. ನಮ್ಮ ಮನೆಯವರೆಲ್ಲರೂ ಮಾಂಸಾಹಾರಿಗಳಾದುದರಿಂದ ನನಗೇನು ಅದು ವಿಭಿನ್ನವೆನಿಸಲಿಲ್ಲ. ಆದರೆ ಕಟ್ಟಾ ಬ್ರಾಹ್ಮಣಳಾದ ವೀಣಾಗೆ ಅದನ್ನು ಓದುವುದೇ ಕಷ್ಟವಾಗಿಬಿಡುತ್ತಿತ್ತು. ಅಂತಹದ್ದೇನಾದರೂ ಪುಸ್ತಕದಲ್ಲಿ ಇದ್ದರೆ ಆ ಪಾಠವನ್ನು ಓದಲು ಅವಳು ಮೊದಲೇ ನನಗೆ ಹೇಳಿಬಿಡುತ್ತಿದ್ದಳು. ಕೊನೆಗೊಂದು ದಿನ ನಾನು ಅವಳು ಯಾಕೆ ಹಾಗೆ ಮಾಡುತ್ತಾಳೆ ಎಂದು ಕೇಳಿದೆ.
“ಅಯ್ಯೋ, ನಾವದೆಲ್ಲಾ ತಿನ್ನಲ್ಲ” ಎಂದು ಮುಖ ಸಿಂಡರಿಸಿಕೊಂಡು ಹೇಳಿದಳು.
ಅವಳು ಯಾವುದೆಲ್ಲಾ ತಿನ್ನಲ್ಲ ಎಂದು ನನಗೆ ಬೇಗನೇ ಅರ್ಥವಾಗಲಿಲ್ಲ. “ಅದೆಲ್ಲ ಅಂದ್ರೆ?”
“ಅದೇ, ಕೊಟ್ಟಿದಾರಲ್ಲ ಆ ಪುಸ್ತಕದಲ್ಲಿ, ಅದನ್ನೇ."
ಪುಸ್ತಕದಲ್ಲಿ ತುಂಬಾನೇ ಪದಾರ್ಥಗಳನ್ನು ಪಟ್ಟಿ ಮಾಡಿದ್ದರು. ಹಾಗಾಗಿ ಅವಳು 'ಅದೆಲ್ಲಾ' ಎಂದು ಹೇಳಿದ್ದು ನನಗೆ ಇನ್ನೂ ಅರ್ಥವಾಗಲಿಲ್ಲ. ಅದೃಷ್ಟಕ್ಕೆ ಪುಸ್ತಕದಲ್ಲಿ ಪದಾರ್ಥಗಳ ಜೊತೆಗೆ ಅವುಗಳ ಚಿತ್ರಗಳನ್ನೂ ಕೊಟ್ಟಿದ್ದರಿಂದ ನಾನು ಅದರಲ್ಲಿ ಮೊದಲನೇ ಚಿತ್ರ, ಮೊಟ್ಟೆಯದ್ದು, ತೋರಿಸಿ, “ಇದಾ?” ಎಂದೇ.
ಅವಳು ಅದನ್ನು ಅಸಹ್ಯದ ಮುಖ ಮಾಡಿ “ಆ ಪಟ್ಟಿಯಲ್ಲಿದ್ದುದೆಲ್ಲಾ” ಎಂದಳು.
ಆ ಪಟ್ಟಿಯಲ್ಲಿ ಬರೀ ಮಾಂಸಾಹಾರಿಗಳು ತಿನ್ನುವ ಪದಾರ್ಥಗಳೇ ಇದ್ದುದರಿಂದ ನನಗೆ ಅವಳು ಇದನ್ನೆಲ್ಲವೂ ತಿನ್ನೋದಿಲ್ಲವೇ ಎಂದು ಆಶ್ಚರ್ಯವಾಯಿತು. “ಮತ್ತೇನು ತಿಂತೀರಿ ನೀವು?” ಎಂದು ಬಹಳ ಮುಗ್ದನಾಗೇ ಕೇಳಿದೆ.
ಅವಳು ಆಶ್ಚರ್ಯದ ಮುಖ ಮಾಡಿ “ಅಯ್ಯೋ, ಇದೇನು ಹೀಗೇ ಕೇಳ್ತಿಯಾ? ನಿಮ್ಮನೆಯಲ್ಲಿ ಯಾವಾಗ್ಲೂ ಬರೀ ಅದನ್ನೇ ಮಾಡ್ತಾರಾ? ಬೇಳೆ ಸಾರು, ಸೊಪ್ಪು ಸಾರು ಮಾಡೋದಿಲ್ವ?” ಎಂದಳು.
ನಮ್ಮನೆಯಲ್ಲಿ ಅವಳು ಹೇಳಿದಂತೆ ಬೇಕಾದಷ್ಟು ಸಸ್ಯಾಹಾರಿ ಪದಾರ್ಥಗಳನ್ನು ಮಾಡುತ್ತಿದ್ದರು ಸರಿ. ಆದರೆ ನನಗೆ ಆ ವಯಸ್ಸಿನಲ್ಲಿ ಬ್ರಾಹ್ಮಣರು ಮಟನ್ ತಿನ್ನೋದಿಲ್ಲ ಎಂದು ಗೊತ್ತಿರಲಿಲ್ಲ ಅಷ್ಟೇ. ಆಗ ಅವಳು ನನಗೆ ಮತ್ಯಾರ್ಯಾರು ಮೀನು ಮಾಂಸಗಳನ್ನು ತಿನ್ನೋದಿಲ್ಲ ಎಂದು ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟಳು. ನನಗೆ ಅದೇ ಮೊದಲು ಜಾತಿಮತಗಳ ನಿಜ ಪರಿಚಯವಾದದ್ದು. ಆದರೇನಂತೆ, ಮೊದಲೇ ಹುಡುಗ ಬುದ್ದಿ, ನಾನು ಅದನ್ನೇ ವಿಷಯವನ್ನಾಗಿಸಿಕೊಂಡು ಅವಳಿಗೆ ಬಹಳ ದಿನಗಳವರೆಗೂ ಮೊಟ್ಟೆ ವೀಣಾ ಎಂದೇ ಕರೆಯುತ್ತಿದ್ದೆ. ಅದು ಅವಳಿಗೆ ಸುತರಾಂ ಇಷ್ಟವಾಗುತ್ತಿರಲಿಲ್ಲ. ಎಷ್ಟೋ ಬಾರಿ ಅವಳು ಅಳುವವರೆಗೂ ರೇಗಿಸಿದ್ದುಂಟು. ಈಗ ಅದನ್ನೆಲ್ಲಾ ನೆನಸಿಕೊಂಡರೆ ನಾನು ಅದನ್ನೆಲ್ಲಾ ಮಾಡಬಾರದಿತ್ತು ಎನಿಸುತ್ತದೆ. ಆದರೆ ಎಳೆಯ ಮಕ್ಕಳ ಮನಸ್ಸಿಗೆ ಅದೆಲ್ಲಾ ಬರೀ ಆಟವಷ್ಟೇ.
ನಾನು ಮೊದಲೇ ಹೇಳಿದ ಹಾಗೆ ನಮ್ಮ ಮನೆಯ ಮುಂದೆ ಒಂದು ದೊಡ್ಡ ಮೈದಾನವಿತ್ತಲ್ಲ, ಅಲ್ಲಿಗೆ ನಾನು ದಿನವೂ ತಪ್ಪದೆ ಶಾಲೆ ಮುಗಿದ ತಕ್ಷಣವೇ ಹೋಗಿಬಿಡುತ್ತಿದ್ದೆ. ನಾನು ಒಮ್ಮೆ ಅಲ್ಲಿಗೆ ಹೋದೆನೆಂದರೆ ಮತ್ತೆ ಕತ್ತಲಾಗುವವರೆಗೂ ವಾಪಸ್ಸು ಬರುತ್ತಲೇ ಇರಲಿಲ್ಲ. ಹೀಗಾಗಿ ನನ್ನ ಮಾರ್ಕುಗಳು ವೀಣಾಳ ಮಾರ್ಕುಗಳಿಗಿಂತ ಕಡಿಮೆಯಾಗಲು ಶುರುವಾದವು. ನಾನು ತಾನೇ ಏನು ಮಾಡಬೇಕಿತ್ತು? ಮನೆಯ ಮುಂದೆಯೇ ಆಟದ ಮೈದಾನವಿದ್ದರೆ ಆಡಲು ಹೋಗದಿರಲು ಸಾಧ್ಯವೇ? ನಾನು ಅಲ್ಲಿ ನನ್ನಂತಹದೇ ವಿಚಾರಧಾರೆಯ ಹಲವಾರು ಹುಡುಗರ ಸಂಘ ಕಟ್ಟಿಕೊಂಡು ದಿನಕ್ಕೊಂದು ಆಟ ಶುರುಮಾಡಿದ್ದೆ. ಹೀಗಾಗಿ ನನ್ನ ಮಾರ್ಕುಗಳು ಪೂರ್ತಿಯಾಗೇ ತಳ ಹಿಡಿದವು. ವೀಣಾ ೨೫ ಕ್ಕೆ ೨೪ ತಗೆದರೆನಾನು ನಾಲ್ಕೋ ಐದೋ ತಗೆಯುತ್ತಿದ್ದೆ. ಇದು ನನ್ನ ಅಮ್ಮನಿಗೆ ಸರಿ ಕಾಣಲಿಲ್ಲ. ಅವರು ನಾನೆಲ್ಲಿ ಹೀಗೇ ಮಾಡಿ ಹಾಳಾಗುತ್ತೇನೋ ಎಂದು ಅಪ್ಪನಿಗೆ ನನ್ನನ್ನು ಯಾವುದಾದರೂ ಟ್ಯೂಷನ್ನಿಗೆ ಸೇರಿಸುವಂತೆ ದೂರು ಕೊಟ್ಟರು. ಅಪ್ಪನಿಗೂ ಅದು ಸರಿಕಂಡುದರಿಂದ, ಹಿಂದೆ ಮುಂದೆ ನೋಡದೆ ನನ್ನನ್ನು ಮನೆಯಿಂದ ಸುಮಾರು ದೂರವಿದ್ದ ಒಂದು ಟ್ಯೂಷನ್ನಿಗೆ ಹಾಕಿಬಿಟ್ಟರು.
ಮೊದಲೆರೆಡು ದಿನ ನನ್ನನ್ನು ಅಪ್ಪನೇ ಟ್ಯೂಷನ್ನಿಗೆ ಬಿಟ್ಟುಬಂದರು. ಮೂರನೇ ದಿನದಿದ ನನ್ನನ್ನು ಒಬ್ಬನೇ ಹೋಗು ಎಂದು ಹೇಳಿದರು.ನಾನು ನೋಡೇಬಿಡೋಣ ಎಂದು ಒಬ್ಬನೇ ಹೊರಟೆ. ನಮ್ಮ ಮನೆಯಿಂದ ಟ್ಯೂಷನ್ನು ಸುಮಾರು ಮೂರೂ ಕಿಲೋಮೀಟರು ದೂರವಿತ್ತು. ಕೇಳುವುದಕ್ಕೆ ಅಷ್ಟೇನಾ ಎನ್ನಿಸಿದರೂ, ಆ ವಯಸ್ಸಿನಲ್ಲಿ ನನಗದು ದೊಡ್ಡ ಗುಡ್ಡವನ್ನೇ ದಾಟಿದಂತ ಸಾಹಸಕಾರ್ಯ. ಮನೆಯಿಂದ ಹೊರಟು ನಾನು ಸುಮಾರು ಹೊತ್ತು ಅಲೆದೂ ಅಲೆದೂ ಎಲ್ಲಿ ಸತ್ತಿತು ಈ ಟ್ಯೂಷನ್ನು ಎಂದು ಹುಡುಕಿದ್ದೇ ಹುಡುಕಿದ್ದು. ಇಲ್ಲೇ ಎಲ್ಲೋ ಇರಬೇಕೆಂದು ಅಲ್ಲೇ ಇನ್ನೊಂದೆರೆಡು ಗಲ್ಲಿ ಸುತ್ತಿ ನೋಡಿದೆ. ಅಲ್ಲೂ ಇರಲಿಲ್ಲ. ಇದೆಂತಹ ಗ್ರಹಚಾರ ಬಂತಪ್ಪ ಎಂದುಕೊಂಡು, ಹಾಳದರಾಗಲಿ ವಾಪಸ್ಸು ಮನೆಗೆ ಹೋಗೋಣ ಎಂದುಕೊಂಡು ತಿರುಗಿದರೆ ಅದರ ದಾರಿಯೂ ತಪ್ಪಿತು. ನಾನೇನು ಕಾಡಿನಲ್ಲಿ ಕಳೆದುಹೋಗಿರಲಿಲ್ಲ, ಆದರೂ ಸ್ವಲ್ಪ ಭಯ, ದುಗುಡ. ನನಗೆ ನಾನೆ ಧೈರ್ಯ ತುಂಬಿಕೊಂಡು ಇನ್ನು ಸ್ವಲ್ಪ ಮುಂದೆ ಹೋಗಿ ನೋಡೋಣ ಎಂದುಕೊಂಡು ಮತ್ತಷ್ಟು ನಡೆದೇ. ಊಹುಂ...ಏನು ಪ್ರಯೋಜನವಾಗಲಿಲ್ಲ. ಮತ್ತಷ್ಟು ಕಳೆದುಹೋದೆನೆನೋ ಅನ್ನಿಸಿತು. ಈಬಾರಿ ನಿಜವಾಗಿಯೂ ಅಳು ಬಂತು. ಆದರೆ ಅಪ್ಪ ನನಗೆ ಹೀಗೇನಾದರೂ ಆದರೆ ಏನು ಮಾಡಬೇಕೆಂದು ಮೊದಲೇ ಹೇಳಿಕೊಟ್ಟಿದ್ದರು. ಅದರ ಪ್ರಕಾರವೇ ಅಲ್ಲಿಯೇ ಹತ್ತಿರದ ಮನೆಯ ಬಾಗಿಲು ಬಡೆದೆ. ಬಾಗಿಲು ತೆರೆದಾಗ ಕಂಡದ್ದು ನನ್ನ ಟ್ಯೂಷನ್ನು ಮಾಸ್ತರು. ನಾನು ಆವಾಕ್ಕಾಗಿ ತಲೆಯೆತ್ತಿ ನೋಡಿದರೆ ಇಷ್ಟು ಹೊತ್ತು ಹುಡುಕುತ್ತಿದ್ದ ಟ್ಯೂಷನ್ನಿನ ಮನೆ ನನ್ನ ಮುಂದೆಯೇ ದೆವ್ವದಂತೆ ನಿಂತಿದೆ. ನಾನು ದಾರಿಕೇಳಲು ಅದೇ ಮನೆಯ ಬಾಗಿಲು ಬಡಿದಿದ್ದೆ!!
ನಾನು ಏನಾದರು ಹೇಳುವ ಮೊದಲೇ ಒಳಗಿನಿಂದ “ಶಿವೂ..?” ಎಂದು ಅಪ್ಪನ ಧ್ವನಿ ಕೇಳಿತು. ಬಗ್ಗಿ ನೋಡಿದರೆ ನಿಜವಾಗಿಯೂ ಅಪ್ಪನೇ!! ನಾನು ಕಳೆದುಹೋದದ್ದು, ದಾರಿ ಕೇಳಲಿಕ್ಕೆ ಅದೇ ಮನೆಗೆ ಬಂದದ್ದು, ಒಳಗೆ ಅಪ್ಪ ಬೇರೆ?!! ಮುಂದೇನು ಯಮರಾಜನೂ ಪ್ರತ್ಯಕ್ಷನಾಗ್ತನೇನೋ ಎಂದು ಭಯವಾಯ್ತು. ಅಷ್ಟೋತ್ತರಲ್ಲಿ ಅಪ್ಪ ಕುಳಿತಿದ್ದ ಸೋಫಾದಿಂದ ಒದ್ದಾಡಿಕೊಂಡು ಎದ್ದು ಬಂದು “ಎಲ್ಲಿಗೋ ಹೋಗಿದ್ದೆ ಇಷ್ಟು ಹೊತ್ತು?” ಎಂದು ಗದರಿದರು. ನಾನು ಕಳೆದುಹೋಗಿರಬಹುದೆಂಬ ಒಂದು ಸಣ್ಣ ಯೋಚನೆಯು ಅವರಿಗೆ ಬಂದಿರಲಿಲ್ಲ. ನಾನಲ್ಲಿ ದಾರಿತಪ್ಪಿ ಅಲೆಯುತ್ತಿದ್ದರೆ, ನನ್ನ ಅಪ್ಪ ನಾನು ಎಲ್ಲೋ ಅಂಡಲೆಯಲು ಹೋಗಿದ್ದೆ ಅಂದುಕೊಂಡಿದ್ದುದು ನಿಜವಾಗಿಯೂ ವಿಪರ್ಯಾಸ! ಆದರೆ ಮಾಸ್ಟ್ರು ಮದ್ಯ ಬಾಯಿ ಹಾಕಿ,“ಛೆ ಛೆ, ಹಾಗೆಲ್ಲಾ ಗದರಬೇಡಿ. ಪಾಪ, ಮೊದ್ಲೇ ಹೆದರಿದ ಹಾಗೆ ಕಾಣ್ತಾನೆ. ಎಲ್ಲೋ ದಾರಿ ತಪ್ಪಿರಬೇಕು ಅಷ್ಟೇ” ಎಂದು ಅಪ್ಪನನ್ನು ಸಮಾಧಾನ ಮಾಡಿದರು. ನಾನು ನಡೆದುದನ್ನೆಲ್ಲ ಅಪ್ಪನಿಗೂ ಮತ್ತು ಮಾಸ್ಟರಿಗೂ ಟಿಪ್ಪಣಿ ಒಪ್ಪಿಸಿದ ಮೇಲೆಯೇ ಅಪ್ಪನಿಗೆ ಆದುದರ ಅರಿವಾದದ್ದು.“ಸರಿ ನಿನ್ನನ್ನು ಕರ್ಕೊಂಡು ಹೋಗ್ಲಿಕ್ಕೆ ನಾನೆ ಬರ್ತೇನೆ” ಎಂದು ನನಗೆ ಹೇಳಿ ಮನೆಗೆ ಹೊರಟರು. ಮೇಸ್ಟ್ರು ನನ್ನನ್ನು ಹತ್ತಿರ ಕರೆದು “ಹೀಗೆಲ್ಲ ಆಗೋದು ಸಹಜ. ಆದ್ರೆ ಇದಕ್ಕೆಲ್ಲ ಹೆದರಿಬಾರ್ದು ಆಯ್ತಾ..” ಎಂದು ಧೈರ್ಯ ತುಂಬಿದರು. ನಾನು ಆಯಿತು ಎಂಬಂತೆ ತಲೆಯಲ್ಲಾಡಿಸಿ ಒಂದು ಮೂಲೆಯಲ್ಲಿ ಕುಳಿತುಕೊಂಡೆ.
ನಾನು ಮನೆ ಸೇರಿದ ಮೇಲೆ ನನಗೆ ಅಪ್ಪನಿಂದ ಒಂದೆರೆಡು ಬೀಳಬಹುದು ಎಂದುಕೊಂಡು ಆದಷ್ಟು ಸೈಲೆಂಟಾಗಿ ಇದ್ದೆ. ಆದರೆ ಆದದ್ದೇ ಬೇರೆ. ನಾನು ದಾರಿ ತಪ್ಪಿದ್ದಕ್ಕೆ ಶಿಕ್ಷೆ ಸಿಕ್ಕಿದ್ದು ಮಾತ್ರ ವೀಣಾಗೆ. ನಾನು ಮತ್ತೊಮ್ಮೆ ಎಲ್ಲಿ ಮುಠ್ಠಾಳನ ತರಹ ಕಳೆದುಹೋದೇನೋ ಎಂದು ಅಪ್ಪ ವೀಣಾಳ ತಂದೆಯ ಹತ್ತಿರ ಮಾತಾಡಿ, ಅವರನ್ನು ಹೇಗೋ ಪುಸಲಾಯಿಸಿ, ಅವಳನ್ನೂ ಅದೇ ಟ್ಯೂಶನ್ನಿಗೆ ಸಿರಿಸಿಬಿಟ್ಟಿದ್ದರು. ನಾನು ಅಂದುಕೊಂಡೆ “ಒಬ್ಬನೇ ಕಳೆದುಹೋಗುವುದಕ್ಕಿಂತ, ಇನ್ನೊಬ್ಬರ ಜೊತೆ ಕಳೆದುಹೋಗೋದೆ ಒಳ್ಳೆಯದು!”. ಅಂದಿನಿಂದ ನಾನು ಮತ್ತು ವೀಣಾ ಜೊತೆಗೆ ಟ್ಯೂಶನ್ನಿಗೆ ಹೋಗೋದು ಬರೋದು ಶುರುವಾಯ್ತು. ನಾನು ಮತ್ಯಾವತ್ತೂ ದಾರಿತಪ್ಪಲಿಲ್ಲ. ಆದರೆ ಅಪ್ಪ, ಅದಕ್ಕೆ ವೀಣಾ ನನ್ನ ಜೊತೆ ಇದ್ದುದೇ ಕಾರಣವೆಂಬಂತೆ ಅಮ್ಮನ ಮುಂದೆ ನನ್ನನ್ನು ಶತದಡ್ಡ ಎನ್ನುವಂತೆ ಮಾತಾಡಿದ್ದು ನನಗಿಷ್ಟವಾಗಲಿಲ್ಲ.
ನಾನು ಮತ್ತು ವೀಣಾ ಹೇಗೋ ಟ್ಯೂಷನ್ನಿಗೆ ಚೆನ್ನಾಗೆ ಹೊಂದಿಕೊಂಡೆವು. ಅಲ್ಲಿ ನಮ್ಮ ತರಹವೇ ಹಲವಾರು ಹುಡುಗರು ಬರುತ್ತಿದ್ದರು. ಏನಿಲ್ಲವೆಂದರೂ ೫೦ ಜನರಿರಬೇಕು. ಎಲ್ಲಾ ತರಗತಿಯ ಮಕ್ಕಳೂ ಇದ್ದರು. ಅಷ್ಟೂ ಜನರಿಗೆ ಪಾಠ ಹೇಳಿಕೊಡುವುದು ಸುಲಭದ ಮಾತೇನಲ್ಲ. ಹಾಗಾಗಿ ನಮ್ಮ ಮೇಸ್ಟ್ರು ನಮಗೆ ಓದಲು ಹೇಳಿಬಿಡುತ್ತಿದ್ದರು. ಮದ್ಯೆ ಮದ್ಯೆ ನಮ್ಮನ್ನೆಲ್ಲಾ ಕರೆದು ಏನು ಓದಿದಿರೆಂದು ಪ್ರಶ್ನೆ ಮಾಡುತ್ತಿದ್ದರು. ಸರಿಯಾಗಿ ಉತ್ತರ ಕೊಡದಿದ್ದವರಿಗೆ ಸಣ್ಣ ಬೆತ್ತದಿಂದ ಹೊಡೆತಗಳೂ ಬೀಳುತ್ತಿದ್ದವು. ಅದನ್ನು ತಪ್ಪಿಸಿಕೊಳ್ಳಲೆಂದೇ ನಾವು ಅವರು ಹೇಳಿದ್ದನ್ನು ಚೆನ್ನಾಗಿ ಓದಿಬಿಡುತ್ತಿದ್ದೆವು. ಇದರಿಂದಾಗಿಯೋ ಎಂಬಂತೆ ನನ್ನ ಮಾರ್ಕುಗಳೂ ಸ್ವಲ್ಪ ಸುಧಾರಸಿದವು. ನಮ್ಮ ಮನೆಯವರೆಲ್ಲ ಮೇಸ್ಟರ ಗುಣಗಾನ ಮಾಡಿದರು. ಅವರಿಲ್ಲದಿದ್ದರೆ ನಾನೇನೋ ಫೇಲಾಗಿ ಆತ್ಮಹತ್ಯೆ ಮಾಡಿಕೊಳ್ಳುವವನ ತರಹ!!
ಒಂದು ದಿನ ನಾನು ಮತ್ತು ವೀಣಾ ಎಂದಿನಂತೆ ಟ್ಯೂಷನ್ನಿಗೆ ಹೋದಾಗ ಯಾಕೋ ಮಾಸ್ತರ ಮೂಡು ಚೆನ್ನಾಗಿರಲಿಲ್ಲ. ಎಲ್ಲದಕ್ಕೂ ಗುರ್ ಗುರ್ ಎನ್ನುತ್ತಿದ್ದರು. ಆರನೇ ಕ್ಲಾಸಿನ ಮಕ್ಕಳಿಗೆ ಏನೇನೋ ಪ್ರಶ್ನೆ ಕೇಳಿ ಉರುಳಾಡಿಸಿಕೊಂಡು ಹೊಡೆದರು. ನನಗೆ ಒಳಗೇ ಯಾಕೋ ನನ್ನ ಟೈಮು ಇವತ್ತು ಸರಿಯಾಗಿಲ್ಲ ಅನ್ನಿಸಿತು. ಸ್ವಲ್ಪ ಹೊತ್ತಿನಲ್ಲೇ ಐದನೇ ಕ್ಲಾಸಿನ ಮಕ್ಕಳಿಗೂ ಅದೂ ಇದೂ ಪ್ರಶ್ನೆ ಮಾಡಿ ಬೆಂಡೆತ್ತಿದರು. ಇನ್ನು ನಾಲ್ಕನೇ ಕ್ಲಾಸಿನ ಮಕ್ಕಳ ಸರದಿ. ನಮಗೇನು ಕಾದಿದೆಯೋ ಎಂಬಂತೆ ನಾನು ಮತ್ತು ವೀಣಾ ಮುಖ ನೋಡಿಕೊಂಡೆವು.
ಮೇಸ್ಟ್ರು ನಮ್ಮನ್ನೆಲ್ಲಾ ಸಾಲಾಗಿ ನಿಲ್ಲಿಸಿ,“ಒಂದು ಕಡೆಯಿಂದ ಮಗ್ಗಿ ಹೇಳಲು ಶುರುಮಾಡಿ” ಎಂದರು. ಮೊದಲನೆಯವನು ಸಿಕ್ಕಿದ್ದೇ ಚಾನ್ಸು ಎಂಬಂತೆ ಒಂದನೇ ಮಗ್ಗಿಯನ್ನು ಜೋರಾಗಿ ವದರಿ ವದರಿ ಮುಗಿಸಿಬಿಟ್ಟ. ಎರಡನೆಯವನು ಮೊದಲನೆಯವನ ಹಾಗೆಯೇ ಮಾಡಿದ. ಮೂರನೆಯವನು ಸ್ವಲ್ಪ ಮಗ್ಗಿ ಹೇಳುವುದರಲ್ಲಿ ಎಡವಟ್ಟು ಮಾಡಿಕೊಂಡು ಎರೆಡು ವದೆ ತಿಂದ. ನಾಲ್ಕನೆಯ ಮಗ್ಗಿ ವೀಣಾ ಹೇಳಬೇಕಿತ್ತು.
ಸರಿ, ಅವಳು ಶುರು ಮಾಡಿದಳು...
ನಾಲ್ತೊಂದ್ಲ್ ನಾಲ್ತು...
ನಾಲ್ಥೆರಡ್ಳೆ ಎಂಟು...
ನಾಲ್ಥಮೂರ್ಲೆ...
ಅಷ್ಟೇ, ಇಡೀ ಟ್ಯೂಷನ್ನು ಮಕ್ಕಳೆಲ್ಲಾ ಅವಳ ತೊದಲು ಮಗ್ಗಿ ಕೇಳಿ ಬಿದ್ದೂ ಬಿದ್ದೂ ನಗಲು ಶುರುಮಾಡಿದರು. ಮೇಸ್ತ್ರಿಗೂ ನಗು ತಡಿಯಲಾಗಲಿಲ್ಲ. ನನ್ನನ್ನಂತೂ ಕೇಳಲೇ ಬೇಡಿ. ಮೊದಲೇ ಅವಳನ್ನು ಯಾವಾಗಲು ರೇಗಿಸುತ್ತಾ ಕಾಲ ಕಳೆಯುತ್ತಿದ್ದ ನಾನು, ಇನ್ನು ಅವಳನ್ನು ಜೀವನವಿಡೀ ರೇಗಿಸಬಹುದು ಎಂದು ಒಳಗೊಳಗೇ ಖುಷಿ ಪಟ್ಟೆ.
ಅಷ್ಟೂ ಹೊತ್ತು ಎಲ್ಲರ ಬೆಂಡೆತ್ತುತ್ತಿದ್ದ ಮೇಸ್ಟ್ರು ಒಮ್ಮೆಲೇ ಸರಿಹೋದವರಂತೆ, ಅವಳನ್ನು ಹತ್ತಿರ ಕರೆದು “ಅದು ನಾಲ್ತು ಅಲ್ಲಮ್ಮ, ನಾಲ್ಕು. ಹೇಳು ನೋಡೋಣ?”
ವೀಣಾ ಅತ್ಯಂತ ವಿನಮ್ರತೆಯಿದ “ನಾಲ್ತು” ಎಂದಳು.
ಮೇಸ್ಟರಿಗೆ ಇನ್ನೂ ನಗು ಬಂತು. ಅದರ ಜೊತೆ ಉಳಿದ ಮಕ್ಕಳೆಲ್ಲ ಮತ್ತೊಮ್ಮೆ ಜೋರಾಗಿ “ನಾಲ್ತಲ್ಲ…ನಾಲ್ಕು” ಎಂದರು. ಮಾಸ್ಟ್ರು ಎಲ್ಲರಿಗೂ ಗದರಿಸಿ, ಮತ್ತೊಮ್ಮೆ ವೀಣಾಳಿಗೆ “ಹಾಗಲ್ಲಮ್ಮಾ, ನಾಲ್ಕು ಅನ್ಬೇಕು” ಎಂದರು.
ವೀಣಾಗೆ ಎಲ್ಲರೂ ಅವಳನ್ನು ನೋಡಿ ನಕ್ಕಿದ್ದಕ್ಕೆ ನಾಚಿಕೆಯಾಗಿ, ತುಂಬಾ ಮೆಲುಧ್ವನಿಯಲ್ಲೇ “ನಾಲ್ತು” ಅಂದಳು. ಮೇಸ್ಟ್ರು ಇನ್ನೂ ಒಂದೆರಡು ಸಾರಿ ಹೇಳಿಕೊಟ್ಟರೂ, ವೀಣಾಳ ನಾಲಿಗೆಯಿಂದ ಬಂದದ್ದು ಮಾತ್ರ ‘ನಾಲ್ತು’ ಅನ್ನೋದು. ಮೇಸ್ತ್ರಿಗೆ ಇವತ್ತೇನೂ ಇವಳ ತೊದಲು ಸರಿ ಹೋಗಲ್ಲ ಅಂತ ಗೊತ್ತಾಯ್ತು. “ಹೋಗಲಿ ಬಿಡು, ನೀನು ಐದರ ಮಗ್ಗಿ ಹೇಳು” ಎಂದು ಅವಳಿಂದ ಐದರ ಮಗ್ಗಿ ಹೇಳಿಸಿದರು. ವೀಣಾ ಐದರ ಮಗ್ಗಿಯನ್ನು ತುಂಬಾ ಅಚ್ಚುಕಟ್ಟಾಗಿ ಹೇಳಿದರೂ, ಮಕ್ಕಳು ಅವಳೆಲ್ಲಾದರೂ ತಪ್ಪು ಮಾಡುತ್ತಾಳೆ ಎಂದು ಕಾಯುತ್ತಲೇ ಇದ್ದರು. ಅದೃಷ್ಟಕ್ಕೆ ಅವಳು ಎಲ್ಲೂ ತಪ್ಪು ಮಾಡದೇ ಹೇಳಿ ಮುಗಿಸಿದಳು.
ವೀಣಾಳ ಮಗ್ಗಿ ಮುಗಿದರೂ, ಎಲ್ಲಾ ಮಕ್ಕಳೂ ಅವಳ ಕಡೆ ನೋಡಿ ಏನೇನೋ ಪಿಸಿ-ಪಿಸು ಮಾತನಾಡಿಕೊಂಡು ನಕ್ಕಿದ್ದೆ ನಕ್ಕಿದ್ದು. ನಾನು ಒಳಗೊಳಗೇ, ಅವಳಿಗೆ ನಾಳೆ ಹೇಗೆ ರೇಗಿಸಬೇಕು, ನಾಡಿದ್ದು ಹೇಗೆ ರೇಗಿಸಬೇಕು ಎಂದು ಲೆಕ್ಕ ಹಾಕುತ್ತಲೇ ಇದ್ದೆ. ಅಷ್ಟರಲ್ಲಿ ನನ್ನ ಪಕ್ಕದವನು ಆರನೇ ಮಗ್ಗಿ ಶುರುಮಾಡಿದ. ಆವಾಗಲೇ ನನಗೆ ನನ್ನ ಮುಂದಿನ ಪರಿಸ್ಥಿತಿ ಅರಿವಾದದ್ದು. ನಾನು ಏಳನೇ ಮಗ್ಗಿ ಹೇಳಬೇಕಾಗಿತ್ತು. ಆದರೆ ನನಗೆ ‘ಳ’ ಕಾರವೇ ಬರುತ್ತಿರಲಿಲ್ಲ. ನನ್ನ ಕಾಲುಗಳು ಒಮ್ಮೆ ನಡುಗಿ ನಿಂತಿದ್ದ ನೆಲವೇ ಬಾಯಿಬಿಟ್ಟಂತಾಗಿ,ಕಣ್ಣುಗಳು ಮಂಜಾಗಿ ಹೋದವು.“ದೇವರೇ, ಇನ್ನು ಯಾಕೆ ನನ್ನನ್ನು ಬದುಕಿಸಿದ್ದೀಯಪ್ಪ??”ಎಂದು ಮನದಲ್ಲೇ ಕೇಳಿಕೊಂಡೆ. ವೀಣಾ ಹೇಳಿದ ನಾಲ್ಕರ ಮಗ್ಗಿಗೇ ಅಷ್ಟೆಲ್ಲಾ ನಕ್ಕ ಮಕ್ಕಳು ನನ್ನ ಏಳರ ಮಗ್ಗಿ ಕೇಳಿದರೆ ಇನ್ನು ಹೇಗೇಗೆ ನಗುತ್ತಾರೋ ಎಂದುಕೊಳ್ಳುತ್ತಲೇ ತಲೆ ತಿರುಗಿದಂತಾಯ್ತು. ನನ್ನ ಇನ್ನೊಂದು ಮಗ್ಗುಲಲ್ಲಿದ್ದವನು, ಎಂಟರ ಮಗ್ಗಿ ಹೇಳಬೇಕಿದ್ದವನಿಗೆ ಮೆಲುಧ್ವನಿಯಲ್ಲೇ “ಲೋ, ನಾನು ಎಂಟರ ಮಗ್ಗಿ ಹೇಳ್ತಿನಿ. ನೀನು ಏಳರ ಮಗ್ಗಿ ಹೇಳ್ತಿಯ?” ಎಂದೇ. ಅವನು ನನ್ನ ಮುಖವನ್ನೊಮ್ಮೆ ದುರುಗುಟ್ಟಿಕೊಂಡು ನೋಡಿ ಇಲ್ಲ ಎನ್ನುವವನಂತೆ ತಲೆಯಲ್ಲಾಡಿಸಿದ. “ನಿನ್ನ ಕಾಲಿಗೆ ಬೀಳ್ತೀನಿ ಕಣೋ, ದಯವಿಟ್ಟು ಈ ಕಡೆ ಬಾರೋ” ಎಂದೆ. ಅವನು ಇನ್ನೊಂದು ಕಡೆ ಮುಖ ಮಾಡಿಕೊಂಡು ನಿಂತ. ಇನ್ನೇನು ನಾನು ನಿಜವಾಗಿಯೂ ಅವನ ಕಾಲಿಗೆ ಬೀಳಬೇಕು ಅನ್ನುವಷ್ಟರಲ್ಲಿ ಆರನೇ ಮಗ್ಗಿ ಮುಗಿದಿತ್ತು.
ಮಾಸ್ತರು ನನಗೆ ಶುರುಮಾಡು ಎನ್ನುವವರಂತೆ ನೋಡಿದರು. ನನಗೋ, ಇಲ್ಲಿ ಧ್ವನಿಯೇ ಹೊರಡುತ್ತಿಲ್ಲ. ಅವರು ಜೋರಾಗಿಯೇ, “ಹೂಂ ಶುರುಮಾಡು” ಎಂದು ಗದರಿದರು. ನಾನು ಪ್ಯಾಂಟಿನಲ್ಲಿ ಸುಸು ಮಾಡಿಕೊಂಡವನಂತೆ ಸಣ್ಣಗೆ ಮುಖ ಮಾಡಿಕೊಂಡು ಅವರನ್ನೇ ನೋಡುತ್ತಿದ್ದೆ. ಅವರಿಗೆ ನನ್ನ ಮೌನ ಅರ್ಥವಾಗಲಿಲ್ಲ. ನನಗೆ ಆ ಮಗ್ಗಿ ಬರುವುದಿಲ್ಲ ಎಂದುಕೊಂಡರು ಮೇಸ್ಟ್ರು. “ಯಾಕೋ? ಶುರು ಮಾಡ್ತೀಯೋ ಅಥವಾ..” ಎಂದು ಕೈಯಲ್ಲಿದ್ದ ಬೆತ್ತ ಎತ್ತುತ್ತಲೇ ನನ್ನ ನಾಲಿಗೆ ತಾನಾಗಿಯೇ ತಿರುಗಿತು.
“ಹೇಲೊಂದ್ಲೇ ಹೇಲು …"
ಅಷ್ಟೇ, ನಾನು ಹೇಳಿದ್ದು. ಒಂದೇ ಸಾಲು. ಮಕ್ಕಳು ಬಿಡಿ, ಮೇಸ್ಟರು ಕೂಡ ಕುರ್ಚಿಯಿಂದ ನೆಗೆದು ನಿಂತು ನಗಲು ಶುರುಮಾಡಿದರು. ಮಕ್ಕಳಂತೂ ನಗುವ ಭರದಲ್ಲಿ ಕೈಯ್ಯಲ್ಲಿದ್ದ ಪುಸ್ತಕಗಳನ್ನೆಲ್ಲಾ ಎಲ್ಲೆಲ್ಲೋ ಎಸೆದು ಬಿಟ್ಟರು. ಅವರೆಲ್ಲ ನಗುವ ಭರ ಎಷ್ಟಿತ್ತೆಂದರೆ, ಒಳಗಿಂದ ಮೇಸ್ಟರ ಹೆಂಡತಿ ಬಂದು ಏನಾಯಿತೆಂದು ಕೇಳುವಂತಾಯ್ತು. ಆದರೆ ಅವರಿಗೆ ಏನಾಯಿತೆಂದು ಹೇಳುವಷ್ಟು ಪುರುಸೊತ್ತೇ ಯಾರಿಗೂ ಇರಲಿಲ್ಲ. ಎಲ್ಲರೂ ಇನ್ನು ಹೊರಳಾಡಿಕೊಂಡು ನಗುತ್ತಲೇ ಇದ್ದರು.
ಮೇಸ್ಟರು ವೀಣಾಳಿಗೆ ಹೇಳಿಕೊಟ್ಟ ಹಾಗೆ ನನಗೆ ಹೇಳಿಕೊಡುವ ವಿಚಾರಕ್ಕೇ ಹೋಗಲಿಲ್ಲ. ನಾನೇನಾದರೂ ಮತ್ತೆ ಬಾಯಿಬಿಟ್ಟರೆ ಮಕ್ಕಳು ಮನೆಯ ಹೆಂಚೇ ಹಾರಿಹೋಗುವ ಹಾಗೆ ನಕ್ಕಾರು ಎಂಬ ಚಿಂತೆ ಇತ್ತು ಅನ್ನಿಸುತ್ತೆ. ಏನಿಲ್ಲವೆಂದರೂ ಸರಿಯಾಗಿ ಎರೆಡು ಮೂರೂ ನಿಮಿಷ ಎಲ್ಲರೂ ತಮ್ಮ ಹೊಟ್ಟೆ ಹಿಡಿದುಕೊಂಡು ನಕ್ಕಿದ್ದೆ ನಕ್ಕಿದ್ದು. ಎಲ್ಲರಿಗಿಂತ ಜಾಸ್ತಿ ಮೇಷ್ಟರೇ ನಕ್ಕು ನಕ್ಕು ಕೆಮ್ಮು ಬರೆಸಿಕೊಂಡರು. ನಾನಲ್ಲಿಂದ ಎಲ್ಲಿಗಾದರೂ ಓಡಿಹೋಗಿಬಿಡಲೇ ಎನ್ನುವಷ್ಟು ಅವಮಾನ. ಎಲ್ಲಿಗೆ ಹೋದರೂ ನನಗೆ ನಾಳೆಯಿಂದ ಮಕ್ಕಳು ಏನಂತ ಕರೀಬಹುದು ಎಂದು ನೆನಪಿಸಿಕೊಂಡೇ ಕಂಪಿಸಿದೆ. ಅಲ್ಲಿದ್ದವರೆಲ್ಲ ಎಷ್ಟು ನಕ್ಕಿದ್ದರೆಂದರೆ, ಮಾಸ್ತರು ಇನ್ನು ಪಾಠ ಮಾಡಿ ಪ್ರಯೋಜನವಿಲ್ಲ ಎಂದು ಅವತ್ತಿಗೆ ಟ್ಯೂಷನ್ನನ್ನು ಬರಖಾಸ್ತು ಮಾಡಿಬಿಟ್ಟರು. ನಾನು ಬದುಕಿದೆಯಾ ಬಡಜೀವವೇ ಎನ್ನುವಂತೆ ವೀಣಾಳಿಗೂ ಸಿಗದಂತೆ ಅಲ್ಲಿಂದ ಓಡಿಬಿಟ್ಟೆ.
ನಾನು ಆ ಟ್ಯೂಷನ್ನಿಗೆ ಹೋಗಿದ್ದು ಅದೇ ಕೊನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ